ಫೋಟೋವೆಂಬೋ ಇತಿಹಾಸ...

 
 
ಛಾಯಾಚಿತ್ರವದು ಇತಿಹಾಸದ ದಾಖಲೆಯಲ್ವೇ?
ನಮ್ಮೊಂದಿಗೆ ದಿನಪೂರ್ತಿ ಇರುವ ನಮಗೇ ಕಾಣದ
ಹಳೆ ಮುಖ, ತೋರ ಸಪೂರ, ಕೃಶ ದಢೂತಿಗಳ ನೆನಪಿಸುವ ಸಾಕ್ಷಿ
ಮರೆತು ಹೋದ ನಿನ್ನೆಗಳ ಹೆಕ್ಕಿ ತಂದು ಹರಡಿ
ಹಳೆ ನಿರಖು ಠೇವಣಿಯೊಂದನ್ನು ಬಿಡಿಸಿಟ್ಟ ಹಾಗೆ!

ನೆನಪಿನಾಳಕ್ಕೆ ಇಳಿದಿದ್ದ ಪ್ರವಾಸ, ಕಳೆದುಕೊಂಡ ಕಾಲೇಜು
ಹುಚ್ಚುಚ್ಚಾಗಿ ಕಂಡ ನಗು, ಬೆರಗಿನ, ಬೇಸರದ ನೋಟ
ಯಾರದ್ದೋ ಮದುವೆ, ಇನ್ಯಾರದ್ದೋ ಹುಟ್ಟಿದದಿನ
ಮತ್ತೆ ಗುಡ್ಡದ ತುದಿ, ಕಡಲಿನ ಅಲೆ ನಡುವೆ...
ಸವಾರಿ ಬಾರಿದಿದ್ದರೂ ಬೈಕು ಹತ್ತಿ ಒಂದು ಪೋಸು!


ಸೆಲ್ಫೀಯೇ ಇಲ್ಲದ ಕಾಲದಲ್ಲಿ ಯಾರೋ ಕ್ಲಿಕ್ಕಿಸಿದ ಚಿತ್ರಗಳು
ಕಂಪ್ಯೂಟರೇ ಇಲ್ಲದ ಮನೆಗಳಲ್ಲಿ ಆಲ್ಬಂ ಸೇರಿದ್ದ ಬಿಂಬಗಳು
ಸಾವಿರ ಪದಗಳ ಕಥೆಗಳಿಗೆ, ಘಳಿಗೆಗಳಿಗೆ ನೀರೆರೆದು
ಮತ್ತೊಂದು ಕಿರುಚಿತ್ರವ ಪ್ರಸ್ತುತಪಡಿಸಿ
ನಗಿಸಿ, ಅಳಿಸುವ ತಾಕತ್ತುಳ್ಳ ಫೋಟೊಗಳು

ಕ್ಷಣಾರ್ಧದ ಕಾಲಘಟ್ಟದಲ್ಲಿ ಚಿಮ್ಮಿದ ನಗು,
ಅದರಾಚೆಗಿನ ಚಿಂತೆಯ ರೇಖೆ, ಕಡುಕೋಪ
ಕ್ಯಾಮೆರಾ ಫ್ರೇಮಿಗೆ ಸಿಲುಕದ ವಿಷಾದ, ಇಣುಕದ ಭಾವಗಳು
ಕಂಡದ್ದಕ್ಕೂ, ಕಾಣದ್ದಕ್ಕೂ ಪ್ರತಿಬಿಂಬದ ಹಾಗೆ
ಎಂದೋ ತೆಗೆದು ಇಂದು ನೋಡುವ ಚಿತ್ರಗಳು...


ಹೀಗೊಂದು ಕಾಲವಿದ್ದದ್ದಕ್ಕೆ ಸಾಬೀತು
ಅಷ್ಟೊಂದು ಖುಷಿಗಳಿಗೆ ಒಂದು ಚೌಕಟ್ಟು ಕಟ್ಟಿಟ್ಟು
ಮತ್ತೆ ಮತ್ತೆ ನಮ್ಮನ್ನೇ ನಮಗೆ ತೋರಿಸಿ, ಅಚ್ಚರಿಪಡಿಸುವ
ಚೆಂದದ ಕ್ಷಣವನ್ನೇ ಫೋಟೋದಲ್ಲಿ ತೋರಿಸುವ
ಜೀವನ್ಮುಖಿ ಅಲಖಿತ ನಿಯಮಕ್ಕೊಂದು ನಮಸ್ಕಾರ!

ಪ್ರೊಫೈಲ್ ಚಿತ್ರವೇ ವ್ಯಕ್ತಿಯಲ್ಲ, ಅದೊಂದು ಕ್ಷಣದ ಸೆರೆಯಷ್ಟೇ
ಜನಪ್ರಿಯತೆ, ಉತ್ತಮಗಳ ಆಯ್ಕೆಗೊಂದು ನಿದರ್ಶನ
ಕುಸಿತ, ಹಿನ್ನಡೆಯನ್ನೂ ಮೀರಿ ಮುಖ ತುಂಬ ನಗುವರಳಿಸಿ
ಚೌಕಟ್ಟಿನಲ್ಲಿ ಪ್ರತಿಬಿಂಬ ಪಡೆದು ಮತ್ತೆ ಮತ್ತೆ
ಬದುಕ ಕಡೆಗೆ ದೂಡುವುದು ಸುಳ್ಳಲ್ಲ


ಖುಷಿಗಳನ್ನೇ ಫ್ರೇಮಿನಲ್ಲಿ ಹಿಡಿಯುವುಂತಾದರೆ?
ರುಚಿಗೆ ತಕ್ಕಷ್ಟೇ ಬೇಕಾದಾಗ ಪಡೆಯುವಂತಾದರೆ?
ಕೈಗೆ ಸಿಕ್ಕ ನಗುವನ್ನೆಲ್ಲಾ ಬಾಚಿ ಸೆರೆಹಿಡಿದು
ಅಗತ್ಯ ಬಿದ್ದಾಗ ಬಳಸಬಹುದಲ್ವೇ...
ಭೂತದ ಚಿತ್ರಕ್ಕೆ ವರ್ತಮಾನದಲ್ಲಿ ಜೀವ ತುಂಬಬಹುದಲ್ವೇ...?
-KM

No comments: