ಮುಡಿಪು ಗಣೇಶೋತ್ಸವಕ್ಕೆ 40ರ ಸಂಭ್ರಮ...



ಬಹುಶಹ ಎರಡು ತಲೆಮಾರಿನವರು ಕಂಡುಕೊಂಡು ಬಂದ ಚೌತಿ ಉತ್ಸವವಿದು. ಅದಕ್ಕೆ ಸಾರ್ವಜನಿಕ ಆಚರಣೆಯ ಮೆರುಗು. ಹೌದು. ಬಂಟ್ವಾಳ ತಾಲೂಕು ಕುರ್ನಾಡು ಮುಡಿಪಿನ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ 40ರ ಹರೆಯ. ಅದೇ ಪರಂಪರೆ, ಅದೇ ನಂಬಿಕೆ ಹಾಗೂ ಇನ್ನಷ್ಟು ಜನಸಂದೋಹ ಪಾಲ್ಗೊಳ್ಳುವ ವಾರ್ಷಿಕ ಜಾತ್ರೆ. ಟೆಲಿಗ್ರಾಂ ಕಳಿಸ್ತಾ ಇದ್ದ ಕಾಲದಲ್ಲಿ ಹುಟ್ಟಿಕೊಂಡ ಆಚರಣೆ ಇಂದು ವಾಟ್ಸಪ್ ಯುಗದಲ್ಲೂ ಅಷ್ಟೇ ಶ್ರದ್ಧೆ, ಸಂತಸದಿಂದ ಆಚರಣೆ ಕಾಣುತ್ತಿದೆ.


ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ನಡುವೆ ಸುಂದರ ಅಂಗಳ. ನಾಲ್ಕೂ ದಿಕ್ಕುಗಳಲ್ಲಿ ತರಗತಿಗಳ ಕೋಟೆ. ನಡುವೆ ಗಾಂಧಿ ಜನ್ಮಶತಾಬ್ಧಿ ಸ್ಮಾರಕ ರಂಗಮಂಟಪ. ಅಲ್ಲಿ ಗಣೇಶನ ಪ್ರತಿಷ್ಠಾಪನೆ. ಅದಕ್ಕೂ ಮೊದಲು ಪಕ್ಕದ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಗಣೇಶ ವಿಗ್ರಹವನ್ನು ಹೆಗಲಲ್ಲಿ ಹೊತ್ತು ತರುವ ಕಾರ್ಯಕರ್ತರು. ಗಣಪತಿ ಪ್ರತಿಷ್ಠೆ, ಭಕ್ತಿಗೀತೆ, ಸಂಗೀತಕುರ್ಚಿ ಸ್ಪರ್ಧೆಗಳು, ಗಣಹೋಮ, ಪೂಜಾದಿಗಳು, ಮಂಗಳಾರತಿ, ಪಂಚಕಜ್ಜಾಯ, ಅಷ್ಟದ್ರವ್ಯ ವಿತರಣೆ, ಮಧ್ಯಾಹ್ನ ಭಜನೆ, ಸಂಜೆ ಛದ್ಮವೇಷ, ಹೂಹಾರ ಸ್ಪರ್ಧೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಆಚರಣೆ, ಬಳಿಕ ಮಹಾಪೂಜೆ, ದಿಗ್ವಿಜಯೋತ್ಸವ. ಆಮಂತ್ರಣ ಪತ್ರಿಕೆ ಇಲ್ಲದಿದ್ದರೂ ಮುಡಿಪಿನ ಯಾವನೇ ಆಸ್ತಿಕ ಬಂಧು ಇಷ್ಟು ವಿಚಾರ ಹೇಳಿಯಾನು. ಅಷ್ಟರ ಮಟ್ಟಿಗೆ ಸಾರ್ವಜನಿಕ ಗಣೇಶೋತ್ಸವ ಜನಮಾನಸದಲ್ಲಿ ಅಚ್ಚಾಗಿದೆ.

ನಾವೇ ಕಲಿತ ಹೈಸ್ಕೂಲಿನಲ್ಲಾಗುವ ಹಬ್ಬವೆಂಬ ಹೆಮ್ಮೆಯೊಂದಾದರೆ, ಚಿಕ್ಕಂದಿನಿಂದಲೂ ಹೋಗ್ತಾ ಇರುವ ಉತ್ಸವ ಎಂಬ ಖುಷಿ ಮತ್ತೊಂದೆಡೆ. ಅದಕ್ಕೇ ತುಂಬ ಮಂದಿ ಪರವೂರಿನಲ್ಲಿ ಕೆಲಸದಲ್ಲಿರೋರು, ಮದುವೆಯಾಗಿ ಗಂಡನ ಮನೆಗೆ ಹೋದವರೂ ಚೌತಿ ದಿನ ಮತ್ತೊಮ್ಮೆ ಇಲ್ಲಿಗೆ ಬರ್ತಾರೆ. ಕಳೆದು ಹೋದ ಬಾಲ್ಯದ ದಿನಗಳನ್ನು, ಕಾರ್ಯಕರ್ತರಾಗಿ ಗಣೇಶೋತ್ಸವದಲ್ಲಿ ದುಡಿದದ್ದನ್ನು ಮೆಲುಕು ಹಾಕ್ತಾರೆ. ಮೊಬೈಲು, ವಾಟ್ಸಪ್ಪು ಮಣ್ಣುಮಸಿಗಳ ಜಂಜಾಡ ಮರೆತು ಸ್ವಲ್ಪ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮ ನೋಡಿ ಮೈಮರೀತಾರೆ. ಧೋ ಅಂತ ದಿಢೀರ್ ಮಳೆ ಬಂದರೆ ಮಾಡಿನಿಂದ ಧಾರೆಯಾಗಿ ಸುರಿವ ನೀರಿಗೆ ಅಂಗೈಯೊಡ್ಡಿ ಹೈಸ್ಕೂಲು ದಿನಗಳ ಮೆಲೆಕು ಹಾಕಿ ಮತ್ತೆ ಮನೆಗೆ ಮರಳುತ್ತಾರೆ.

ಗಣೇಶೋತ್ಸವ ಆರಂಭವಾಗುವಾಗ ಪುಟಾಣಿಗಳಾಗಿದ್ದವರು ಇಂದು ಯೌವ್ವನ ದಾಟಿದ್ದಾರೆ. ಯುವಕರಾಗಿದ್ದವರು ವಯಸ್ಕರಾಗಿದ್ದಾರೆ, ವಯಸ್ಕರಾಗಿದ್ದ ಹಲವರು ವೃದ್ಧರಾಗಿದ್ದಾರೆ, ಕೆಲವರು ಅಗಲಿದ್ದಾರೆ. ಆದರೆ ಆ ಆಚರಣೆಯ ಸೊಬಗು ಮಾತ್ರ ಅಬಾಧಿತ ಹಾಗೂ ಅವಿಚ್ಛಿನ್ನ. ಅದಕ್ಕೇ ಅಲ್ಲವೇ ಹೇಳುವುದು ಸಂಘಟನೆಯ ಶಕ್ತಿ ಅಂತ. ಯಾರೋ ಶುರು ಮಾಡಿರುತ್ತಾರೆ, ಇನ್ಯಾರೋ ನಡೆಸಿಕೊಂಡು ಹೋಗುತ್ತಾರೆ, ಯಾರೋ ಕೊಡುಗೆ ನೀಡುತ್ತಾರೆ, ಇನ್ಯಾರೋ ಕಾರ್ಯಕರ್ತರಾಗುತ್ತಾರೆ, ಮತ್ಯಾರೋ ಅತಿಥಿಗಳಾಗಿ ಭಾಗವಹಿಸುತ್ತಾರೆ, ಮತ್ತೊಂದಿಷ್ಟು ಮಂದಿ ಕಾರ್ಯಕ್ರಮ ನೋಡಲೆಂದು ಬಂದಿರುತ್ತಾರೆ. ಇಷ್ಟೆಲ್ಲಾ ಮಂದಿ ಸೇರಿದಾಗಲೇ ಅದಕ್ಕೊಂದು ಸಾರ್ವಜನಿನಕ ಆಚರಣೆಯ ಸೊಬಗು ಆವರಿಸುವುದು. ಅಂದು ಮಕ್ಕಳಾಗಿದ್ದವರೆಲ್ಲಾ ಇಂದು ತಮ್ಮ ಮಕ್ಕಳನ್ನು ಚೌತಿಗೆ ಕರೆ ತರುತ್ತಾರೆ. ಅಂದು ದೇವ ದುರ್ಲಭವಾಗಿದ್ದ ಫೋಟೊಗ್ರಾಫರ್, ವಿಡಿಯೋಗ್ರಾಫರ್ ಚಿತ್ರಗಳನ್ನು ಸೆರೆ ಹಿಡಿಯುವದನ್ನು ಕೌತುಕದಿಂದ ನೋಡುತ್ತಿದ್ದವರೆಲ್ಲಾ ಇಂದು ತಮ್ಮ ತಮ್ಮ ಮೊಬೈಲುಗಳಲ್ಲಿ ಗಣೇಶನ ಜೊತೆ ಸೆಲ್ಫೀ ತೆಗೆದುಕೊಂಡು ಖುಷಿ ಪಡುತ್ತಾರೆ.
ಇದೇ ಗಣೇಶೋತ್ಸವದ ಕ್ರೀಡಾಕೂಟದಲ್ಲಿ ಓಡಿ ಬಹುಮಾನ ಪಡೆದವರು, ಹಾಡಲು ಕಲಿತವರು, ಮಾತನಾಡಿದವರು, ಸಂಘಟನೆಗೆ ಹೆಸರಾದವರು, ಮನೆ ಮನೆಗೆ ಓಡಾಡಿ ಚಂದಾ ಎತ್ತಿದವರು, ಡಯಲಾಗ್ ಕಲಿತು ನಾಟಕ ಕಲಿತವರೆಲ್ಲ ಎಷ್ಟೊಂದು ಮಂದಿ ಇದ್ದಾರು...



ಉತ್ಸವ ದೇವರ ಆರಾಧನೆಗೆ ಸೀಮಿತವಲ್ಲ. ಅಷ್ಟೊಂದು ಮಂದಿ ಭೇದಗಳನ್ನು ಮರೆತು ಸೇರುವ ಜಾಗ. ಪ್ರಸಾದ ಸ್ವೀಕಾರದೊಂದಿಗೆ ಎಂದೋ ಭೇಟಿಯಾಗಿ ಮರೆಯಾದ ಸ್ನೇಹಿತರನ್ನು ವರ್ಷಕ್ಕೊಮ್ಮೆಯಾದರೂ ಪುರುಸೊತ್ತಿನಲ್ಲಿ ಭೇಟಿಯಾಗಲು ಸಿಗುವ ಸಂದರ್ಭ. ಚರ್ವಿತಚರ್ವಣದ ಬದುಕಿನಲ್ಲಿ ಕೇಳಿದ್ದನ್ನೇ ಕೇಳಿ, ನೋಡಿದ್ದನ್ನೇ ನೋಡಿ ಜಿಗುಪ್ಸೆ ಪಟ್ಟುಕೊಳ್ಳುವ ಹಂತದಲ್ಲಿ ಒಂದು ಧಾರ್ಮಿಕ ಭಾಷಣಕ್ಕೆ ಕಿವಿಯಾಗಿ, ಒಂದು ನಾಟಕ ಕಂಡು ಮನಸಾರೆ ನಕ್ಕು ಒಂದಷ್ಟು ತಾಜಾ ನೆನಪುಗಳೊಂದಿಗೆ ನಿಜ ಜೀವನಕ್ಕೆ ಮತ್ತೆ ಮರಳಲು ಅವಕಾಶ ಕಲ್ಪಿಸುವಂಥದ್ದು. ಇದರ ನಡುವೆ ಮುಡಿಪಿನ ಗೋಪಾಲಕೃಷ್ಣ ದೇವಸ್ಥಾನ (ಅಲ್ಲಿ ಗಣಪತಿ ಮೂರ್ತಿ ತಿಂಗಳ ಮೊದಲೇ ರಚನೆ ಆರಂಭವಾದಾಗ, ಶಾಲೆಗೆ ಹೋಗುವಾಗ ಕಿಟಕಿಯಲ್ಲಿ ಇಣುಕಿ ಮೂರ್ತಿ ಎಷ್ಟು ದೊಡ್ಡದಾಗ್ತಾ ಇದೆ ಅಂತ ಇಣುಕಿ ಪುಳಕಿತರಾಗುತ್ತಿದ್ದ ನೆನಪು), ರಾಜಬೀದಿಯಲ್ಲಿ ಮೆರವಣಿಗೆ, ಟ್ಯಾಬ್ಲೊ, ಮುಡಿಪು ಗುಡ್ಡದ ಬುಡದ ಭವ್ಯ ಕಟ್ಟಡದಲ್ಲಿ ಮೌನವಾಗಿ ನಿಂತಿರುವ ಗಂಭೀರ ಪ.ಪೂ.ಕಾಲೇಜು ಕಟ್ಟಡ, ಮುಡಿಪು ಕಟ್ಟೆ, ಮಧ್ಯಾಹ್ನದ ಮಹಾಪೂಜೆಗೆ ಬಾರಿಸುವ ಬ್ಯಾಂಡು, ನಾಸಿಕ್ ಬ್ಯಾಂಡ್, ಸಂಜೆ ಸಭಾ ಕಾರ್ಯಕ್ರಮದ ಮೊದಲೋ, ನಂತರವೋ ಬರುವ ಧಾರಾಕಾರ ಮಳೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆಗೆ ಕಾಲಿಡಲು ಜಾಗವಿಲ್ಲದಷ್ಟು ಸಂಖ್ಯೆಯಲ್ಲಿ ಸೇರುವ ಜನಸಂದಣಿ.... ಈ ಚೌತಿಗೆ ಈ ವರ್ಷ 40ರ ಸಂಭ್ರಮ... ಬರ್ತೀರಲ್ವ ನೀವೂ....







No comments: