ವರ್ತಮಾನದ ಕವನ...

ಕವನ ಬರೆಯುವುದೋ
ಹುಟ್ಟುವುದೋ, ರಚಿಸುವುದೋ,
ಹೇಳುವುದೋ?

ಆವರಿಸಿದ ಭಾವಗಳ
ಕಾಡಿದ ಸಾಲುಗಳಿಗೆ
ಪದಗಳ ಜೋಳಿಗೆ ಹಿಡಿವ ಪ್ರಕ್ರಿಯೆ


ಕವಿಯು ಕಾಯುವುದಿಲ್ಲ
ಕವನಗಳು ಸಾಯುವುದಿಲ್ಲ
ಭಾವದಲ್ಲಷ್ಟೇ ಬದಲಾವಣೆ

ಕವಿ ಬರೆದಿದ್ದನ್ನು
ಓದುಗ ಕಾಣುತ್ತಾನೆ
ಪದಗಳೊಳಗೆ ತನ್ನನ್ನು ಹುಡುಕುತ್ತಾನೆ


ಓದಿದಾತನ ಭಾವಕ್ಕೆ ಕವಿ
ಕಿವಿಯಾಗಿ ದನಿಯಾಗಿ
ಅಕ್ಷರವಾಗಿ ಪ್ರಕಟವಾಗುತ್ತಾನೆ

ಕವನದ ಜನ್ಮರಹಸ್ಯಕ್ಕೆ
ಸ್ಪಷ್ಟೀಕರಣ ಅನಗತ್ಯ
ವಿವರಣೆ, ಷರಾಗಳು ಸಹಿತ


ಸಾಲುಗಳು, ನಿಖರ
ಭಾವಗಳು ಹಲವು
ಅವರವ ಭಾವಕ್ಕೆ ಭುಕುತಿಗೆ ಬಿಟ್ಟದ್ದು

ಇಂದಿನ ಸಾಲುಗಳು
ಇನ್ನೆಂದಿಗೋ ಪ್ರಸ್ತುತವಾದರೆ
ಮರುಕಳಿಸಿದ ಇತಿಹಾಸಕ್ಕೆ ಕವನವೇ ಸಾಕ್ಷಿ


ಮೂರ್ತ, ಅಮೂರ್ತದ ನಡುವೆ
ಪ್ರಾಸಕ್ಕೂ ತ್ರಾಸಕ್ಕೂ ಮದುವೆ
ಕಾಲಮಿತಿಯ ಸಾಹಿತ್ಯ ಗೀಳು

ಮಾತಿಗೂ, ಭಾವಕ್ಕೂ ಆಚೆಯ
ಪದಗಳ, ಸಾಲುಗಳ ಲೋಕದ
ಗೀಚಿದ ದಾಖಲೆಯ ವರ್ತಮಾನ.
-KM

No comments: