ಅರ್ಥ ಕೋಶ




ಅರ್ಥವಾಗಿಯೂ ಆಗದ್ದು
ಗೊತ್ತಾಗಿಯೂ ಮನಸು ಸ್ವೀಕರಿಸದ್ದು
ಕ್ಷಣ ಕಾಲ ವರ್ತಮಾನದ ಆಚೆಗೆ ಕರೆದೊಯ್ದು
ಅರ್ಥ ತಿಳಿಸಿದ ವಾಸ್ತವದ ಕಡೆ ಬೆರಗಾಗಿ ನೋಡಿದ್ದು!

ಅರ್ಥದ ವಿಮರ್ಶೆಗೆ ಬೆದರಿ
ವಿಶ್ಲೇಷಣೆಯ ಬದಿಗೆ ಸರಿಸಿ, ಬೇಕೆಂದೇ ಕಿವುಡಾಗಿ
ಕಟುಸತ್ಯವನು ಅರಗಿಸುವ ದಾರಿಯಲ್ಲಿ
ಮಾತು ಮೂಕ, ಭಾವ ಕಠಿಣ

ತಿಳಿದೂ ತಿಳಿದೂ ಅರ್ಥವಾಗದ ಕಟು ಮನಸುಗಳು
ಅರ್ಥದ ಮೌಲ್ಯಕ್ಕೂ ಮಿಗಿಲಾದ
ವಾತ್ಸಲ್ಯ, ಸಾಂತ್ವನ, ನಿಸ್ವಾರ್ಥ ಭಾವದ ಸಂಪತ್ತು
ಋಣ ಉಳಿಸಿ, ಮಾತು ಮರೆಸುವ ಜೀವಗಳು

ಕೆಲವನ್ನು ಹೇಳಬಹುದು, ಕೆಲವನ್ನು ಕೇಳಬಹುದು
ತಿಳಿದೂ ಹೇಳಲಾಗದ, ಕೇಳಲಾಗದ...
ಮಾತಿಗೂ ಮೀರಿದ, ಪ್ರಶ್ನೆಗೂ ನಿಲುಕದ,
ಅರ್ಥವಾದರೂ ವಿವರಿಸಲಾಗದ  ಸಾಲುಗಳು

ಅಪಾರ್ಥ, ಪ್ರಶ್ನಾರ್ಥಕ, ನಿರರ್ಥಕಗಳ
ಗೊಂದಲದಲ್ಲಿ, ಶಬ್ದಾರ್ಥಕ್ಕೂ ವಾಸ್ತವಕ್ಕೂ
ತಾಳೆ ಹಾಕುವ ಪ್ರಯತ್ನದಲ್ಲಿ, ಈಗಕ್ಕೊಂದು
ನಾಳೆಗೊಂದು ಅರ್ಥ ವ್ಯತ್ಯಾಸಗಳಿವೆ ಯಾಕೆ?

ಮನಸು ಒಪ್ಪದ ಮಾತ್ರಕ್ಕೆ ಸತ್ಯ ಸುಳ್ಳಾಗುವುದೇ?
ವಾಸ್ತವ ಬದಲಾಗುವುದೆ, ಕದಲುವುದೇ?
ಮಾತಿಗೂ ಮೌನಕ್ಕೂ ನಡುವಿನ ಕೋಶಕ್ಕೆ
ಸ್ವೀಕರಿಸಲಾಗದ ಅರ್ಥಗಳ ತಾಕಲಾಟ
-KM

No comments: