ಅಡವಿಟ್ಟ ಕನಸುಗಳು...(ಕವನ)

ಅಡವಿಟ್ಟ ಕನಸುಗಳು...

...

ಅಡವಿಟ್ಟ ಕನಸುಗಳಿಗೆ ಧೂಳು ಹಿಡಿದಿದೆ..
ಕೊಡವಿದರೆ ಅಲರ್ಜಿ
ವರ್ಷಗಳಿಂದ ಬಳಸದೆ ಫಂಗಸ್ ತಗಲಿದೆ...
ಬಿಡಿಸಲು ಕಾಲ ಬಂದಿಲ್ಲ
ಮೌಲ್ಯದ ಮೊತ್ತ ಧನರಾಶಿ ಕೂಡಿಲ್ಲ, ನೋಡಿಲ್ಲ

ಸುಲಭದಲ್ಲಿ ಕಾಣಿಸದ ಕನಸು
ತನ್ನಷ್ಟಕ್ಕೆ ಬಿಡಿಸಿದ ಮನಸು
ಕೈಗೆಟುಕದೆ ದುಬಾರಿಯಾಗಿ
ಪರಭಾರೆಯಾಗದೆ
ತುಕ್ಕು ಹಿಡಿದು
ತುರ್ತು ಪರಿಸ್ಥಿತಿಯ ಸಾಲಕ್ಕೆ ಅಡವಿಡಬೇಕಾಯ್ತು!

ಬಿಡಿಸ ಹೊರಟರೆ ತಗಲುವ ಜೇಡನ ಬಲೆಗಳು!
ಹೇಗೋ ನಡೀತದೆ ಎಂಬಂಥೆ ಕಟ್ಟಿದ ಭವಿಷ್ಯದ ನನಸಿನ ಸಾಕಾರದ ಪ್ರತಿರೂಪ...
ಕೈಗೆಟಕುತ್ತಿಲ್ಲ, ಲೋನು ತೀರುತ್ತಿಲ್ಲ...
ಮರಳಿ ಸಿಕ್ಕರೂ ಈಗ ಪ್ರಯೋಜನಕ್ಕೆ ಬಾರದಲ್ಲ!

ಭೂತ ಕಾಲದಲ್ಲೇ ಜ್ನಾನೋದಯವಾಗಿಲ್ಲ ಯಾಕೆ?
ಕನಸು ಕಟ್ಟುವ ಕಾಲಕ್ಕೆ ಬುದ್ಧಿ ಓಡಲಿಲ್ಲ ಏಕೆ?
ವರ್ತಮಾನದಲ್ಲಿ ಗತದ ಶವಪರೀಕ್ಷೆ
ಮೂರ್ಖ ನಿರ್ಧಾರಗಳಿಗೆ ಕಾಲಕ್ಕೆ ಸುಮ್ಮನೆ ಬೈಗಳು!
ಕಳೆದುಕೊಂಡ ಮೇಲೆ ಸ್ವಅನುಕಂಪಕ್ಕೊಂದು ನೆಪವಷ್ಟೇ...

ಆಗಿದ್ದಾಗಲಿ ಮಾರಾಯ, ತಾಜಾ ಕನಸ ಕಟ್ಟಿನೋಡು...
ಆಗೋದಿಲ್ಲ,
ಹಳೆ ಸಾಲ ತೀರದೆ ಕಾಸು ಪಡೆಯೋದ್ಹೆಂಗೆ?
ನಿರಾಕ್ಷೇಪಣೆಯಿಲ್ಲದೆ ಕನಸ ಹೊಸೆಯೋದೆಂತು?
ಇತಿಹಾಸ ಮರುಕಳಿಸದಿರಲಿ, ಮತ್ತೊಂದು ನಿರೀಕ್ಷೆ
ಗೋರಿ ಸೇರದಿರಲಿ...
ಸಾಲ ಕಾಡದಿರಲಿ

ಉತ್ತರ ಇದ್ದರೂ ಹೇಳಲಾಗದ ಸಂದಿಗ್ಧ
ಸಲಹೆಗಳ ಕೇಳಿದರೂ ಪಾಲಿಸಲಾಗದ ಮುಗ್ಧ
ಪರಿಸ್ಥಿತಿಗೇನು ಗೊತ್ತು ಕನಸಿನ ಭಾರದ ಹೊರೆ?
ಕಳಚಿಡಲಾಗದೆ, ಬಿಡಿಸಿ ನೋಡಲಾಗದೆ
ಲಾಕರಿನಲ್ಲೇ ಕೊಳತು ಕ್ಷಯಿಸುವ ನನಸು...
-KM.

No comments: