ತೋಚಿದ್ದು... ಗೀಚಿದ್ದು 3

ಯಕ್ಷಪ್ರಶ್ನೆಗಳು...
-----

ಆಸೆಯೇ ದುಖಕ್ಕೆ ಮೂಲವಂತೆ,
ನಿರೀಕ್ಷೆಗಳೇ ನಿರಾಸೆಗಳಿಗೆ ಕಾರಣವಂತೆ
ದುಖಗಳಿಗೆಲ್ಲ ಆಸೆಯೇ ಕಾರಣವೇ?
ನಿರಾಸೆಯಾಗಬಾರದೆಂಬ ನಿರೀಕ್ಷೆಗೇನೆಂದು ಹೆಸರು?

ಕೈಕೆಸರಾದರೆ ಬಾಯಿ ಮೊಸರೆನ್ನುವರು
ತೊಳೆದ ಬಳಿಕವೂ ಕೊಳೆ ಕಳೆಯದ ಕೈಗಳು
ಮೊಸರು ತಿನ್ನುವುದು ಹೇಗೆ?
ಕೊಸರಿದರೂ ಕೆಸರು ಆರದಿದ್ದರೆ!

ತಾಳಿದವನು ಬಾಳಿಯಾನು ಎನ್ನುವರು...
ತಾಳುವಿಕೆಯಲ್ಲೇ ಬಾಳು ಕಳೆದರೆ
ಅದರಾಚಿಗಿನ ಲೋಕವನ್ನು
ಕಾಣುವುದೆಂದು ಎಂದು ಕೇಳಬಾರದೆ?


ತಪ್ಪುಗಳು, ಹಿನ್ನಡೆಗಳು ಬದುಕ ಶಿಕ್ಷಣ ನೀಡುವುದಂತೆ...
ಪುಸ್ತಕದೊಳಗೆ ತಪ್ಪುಗಳೇ ತುಂಬಿ
ಸರಿಯ ಕಾಣಲಾಗದಿದ್ದರೆ ಮಾಡುವುದೇನು?
ಸರಿಯ ಬೆಲೆ ಅರಿವುಯುದೆಂತು?

ಅನುಭವಗಳೇ ಜೀವನದ ಪಾಠಶಾಲೆ...
ಎಡವಿದ್ದು, ಸೋತದ್ದು ಅಧ್ಯಾಯಗಳು...
ದುಡುಕಿದ್ದು, ಕುಸಿದದ್ದು ಟ್ಯೂಷನ್ನುಗಳು
ಆದರೆ...ತೆರುವ ಬೆಲೆ ದುಬಾರಿಯಲ್ಲವೇ?

ಮಾತು ಬಲ್ಲರೆ ಮಗ ಬದುಕಿಯಾನು
ನಿಜ... ಸೂಕ್ತಿ, ನಾಣ್ನುಡಿ, ಬದುಕಲು ಕಲಿಸುವ ಪುಸ್ತಕಗಳು
ಮೋಡಿ ಮಾಡಬಲ್ಲ ವಾಕ್ಚಾತುರ್ಯದಾಚಿನ
ಅನುಭವವ ಬರೆಯಲಾಗುವುದೇ?

ಕಾಸಿಲ್ಲದೇ ಕಾಣುವ ಕನಸು, ಗುರಿಯಿಲ್ಲದ ಮನಸು
ಮಿತಿಗಳು, ಗತಿಗಳ ಬೇಲಿಗೆ ಸಿಲುಕಿದ ಮೇಲೆ
ಗಾದೆಗೂ ಬೋಧೆಗೂ ತಣಿಯುವುದೇ?
ಹೊಸದೊಂದು ಹಿತನುಡಿಯ ಬರೆಯುವುದೇ?

-KM

No comments: