ಅವನ ನಿಯಮ ಮೀರಿ ಇಲ್ಲಿ ಏನು ಸಾಗದು, ನಾವು ನೆನಸಿದಂತೆ ಬಾಳಲೇನು ನಡೆಯದು, ವಿಷಾದವಾಗಲಿ ವಿನೋದವಾಗಲಿ...ಅದೇನೆ ಆಗಲಿ ಅವನೆ ಕಾರಣ!
ನಾವು ಬಸ್ಸಿನಲ್ಲೋ, ರೈಲಿನಲ್ಲೋ ಒಂದು ಸುದೀರ್ಘ ಪ್ರಯಾಣ
ಮಾಡಿರುತ್ತೇವೆ. ಆ ಸೀಟು, ಆ ವಾತಾವರಣ, ಕಿಟಕಿ ಪಕ್ಕದ ಪ್ರಯಾಣದ ಅನುಭೂತಿ, ಅಲ್ಲಿನ ಸಿಬ್ಬಂದಿ
ನಡವಳಿಕೆ ಎಲ್ಲ ತುಂಬ ಇಷ್ಟವಾಗಿರುತ್ತದೆ. ನಾಲ್ಕಾರು ಸಲ ಮಧ್ಯಂತರದಲ್ಲಿ ಬಸ್ಸಿನಿಂದ ಇಳಿದು
ಮತ್ತೆ ಹತ್ತಿದಾಗಲೂ “ನನ್ನ ಸೀಟು” ಅಂತ ಹೆಮ್ಮೆಯಿಂದ ಕೂರುತ್ತೇವೆ. ಅದೇನಿದ್ದರೂ ನಮ್ಮ
ಸ್ಟಾಪು ಬರುವ ವರೆಗೆ ಮಾತ್ರ. ಎಲ್ಲಿಗೆ ಟಿಕೆಟ್ ಬುಕ್ ಆಗಿರುತ್ತದೋ ಅಲ್ಲಿಗೆ ತಲುಪಿದಾಗ ನಾವು
ಇಳಿದು ಹೋಗುತ್ತಲೇ ಇರಬೇಕು. ಮತ್ತೆ ಅದು ನನ್ನ ಸೀಟು ಅಂತ ಹೇಳುವ ಹಾಗಿಲ್ಲ. ಮರುದಿನ ಅದೇ
ಸಮಯಕ್ಕೆ ಅದೇ ಸೀಟಿನಲ್ಲಿ ಇನ್ನೊಬ್ಬ ಪ್ರಯಾಣಿಕ ಬಂದು ಕೂತಿರುತ್ತಾನೆ. ಇಡೀ ರಾತ್ರಿ ನಾವು
ಮಲಗಿಯೋ, ಕೂತೋ ಬಂದ ಸೀಟನ್ನು ಬೆಳಗ್ಗೆ ಬಿಟ್ಟು ಇಳಿಯುವಾಗ ಅಲ್ಲಿ ಯಾರೂ ನಮ್ಮನ್ನು
ಬೀಳ್ಕೊಡುವುದಿಲ್ಲ, ಯಾರು ಮತ್ತೊಮ್ಮೆ ಬಾ ಎಂದೂ ಹೇಳುವುದಿಲ್ಲ. ಅಸಲಿಗೆ ಟಿಕೆಟ್ ಬುಕ್
ಮಾಡುವಾಗಲೇ ಗೊತ್ತಿರುತ್ತದೆ, ಇಂತ ಕಡೆ ನಾನು ಇಳಿಯಲೇಬೇಕು ಅಂತ. ಆದರೂ ಈ ನಡುವೆ ಹುಟ್ಟಿಕೊಂಡ
ಪುಟ್ಟದೊಂದು ಅಟಾಚ್ಮೆಂಟಿನಿಂದ ಬಸ್ಸಿಳಿದು ಹೋಗುವಾಗ ಒಂದಿಷ್ಟು ಹೃದಯ ವಿಚಲಿತ
ಆಗುವುದಿಲ್ಲವಾ...? ಆದರೂ ಹೋಗಬೇಕಾದಲ್ಲಿ ಇಳಿದು ಹೋಗುತ್ತಲೇ ಇರಬೇಕು... ಅದು ವ್ಯವಸ್ಥೆ
ಮತ್ತು ವಿಧಿ ಅಷ್ಟೇ....
...................
ಮಧ್ಯರಾತ್ರಿ ನಿರ್ಮಾನುಷ ರಸ್ತೆಯಲ್ಲಿ ಬರುತ್ತಿರುವಾಗ
ಎಲ್ಲಿಂದಲೋ ಒಂದು ಪುಟ್ಟ ಪರಿಮಳ ಮೂಗಿಗೆ ಅಡರುತ್ತದೆ. ಗಾಢವಾದ ಸಂಪಿಗೆಯಂತಹ, ಸುರಗಿ ಹೂವಿನಂತಹ
ಮತ್ತು ಬರಿಸುವ ಪರಿಮಳ, ಮತ್ತೆಲ್ಲೋ ದೂರದಲ್ಲಿ ಜಾತ್ರೆಯ ಸುಡುಮದ್ದು ಪ್ರದರ್ಶನದ ಚಿತ್ತಾರ
ಬಾನಂಗಳದಲ್ಲಿ ಮೂಡಿರುವುದು ನೀವು ಹೋಗುವ ರಸ್ತೆಯಲ್ಲೇ ಕಾಣಿಸುತ್ತದೆ. ನೇತ್ರಾವತಿಯ ನದಿ
ಕಾರಿರುಳಲ್ಲಿ ಮಂದ ತಿಂಗಳು ಬೆಳಕಿನ ಛಾಯೆಗೆ ಕಪ್ಪಾಗಿ ಪದರ ಪದರವಾಗಿ ಹರಿಯುವುದು ಕಾಣುತ್ತದೆ,
ಚಂದ್ರನ ಪ್ರತಿಬಿಂಬ ಸಹ, ದೂರದಲ್ಲೊಂದು ಬೋಟಿನ ಕೆಂಪು ಮಿಣ ಮಿಣ ಬಳಕು ನಿಧಾನವಾಗಿ ಸಾಗುವುದು
ಸೂಕ್ಷ್ಮವಾಗಿ ಗಮನಿಸಿದರೆ ವೇದ್ಯವಾಗುತ್ತದೆ. ಸರಕ್ಕನೆ ರಸ್ತೆ ದಾಟುವ ಮೊಲ, ಫುಟ್ಬಾತ್ ಮೇಲೆ
ಇರುಳು ಉದುರಿ ಪವಡಿಸಿದ ಹಳದಿ ಹೂವಿನ ಚಾದರ, ಮತ್ತಲ್ಲಿ ಸೇತುವೆಯ ಡಿವೈಡರ್ ನ್ನು ತೋಯಿಸಿದ
ಮಂಜಿನ ಸಾಲು... ಹೀಗೆ ಕಾಳರಾತ್ರಿಯ ಹತ್ತಾರು ದೃಶ್ಯಗಳು, ಅನುಭೂತಿಗಳು ಮಾತಿಗೆ, ಬರಹದ ಬೊಗಸೆಗೆ
ದಕ್ಕುವುದಿಲ್ಲ. ಕೆಲವನ್ನು ಕಾಣಬೇಕು, ಮನಸ್ಸಿನಲ್ಲಿ ತುಂಬಿಕೊಳ್ಳಬೇಕು. ಯಾರೂ ಇಲ್ಲದ ಆ
ದಾರಿಯಲ್ಲಿ ಕಂಡದ್ದನ್ನೆಲ್ಲ ವಿವರಿಸಿ ಹಂಚಲು ಹೊರಟರೆ ಬೆರಳುಗಳೆಡೆಯಲ್ಲಿ ಸೋರಿ ಹೋದೀತು...
ಬದುಕೇ ಹಾಗೆಯೇ ಕೆಲವು ತಲ್ಲಣ, ಕೆಲವು ಅನಿರೀಕ್ಷಿತ ಖುಷಿ, ಕೆಲವು ವಿಷಾದ, ಕೆಲವು ವಿದಾಯ,
ಕೆಲವು ಸೋಲು, ಕೆಲವು ನಿರ್ಗಮನಗಳನ್ನು ಮಾತಿನಲ್ಲಿ ಕಟ್ಟಿಕೊಡಲಾಗುವುದಿಲ್ಲ. ಹೇಳಿದ್ದನ್ನೇ ಅರ್ಥ
ಮಾಡಿಕೊಳ್ಳಲಾರದವರಿಗೆ ಹೇಳದ್ದು ಅರ್ಥವಾದೀತು ಎಂಬುದು ಭ್ರಮೆ ಅಷ್ಟೇ... ಕೆಲವೊಂದು ಸಂಗತಿಗಳು
ಹೇಳುವುದಕ್ಕೂ, ಕೇಳುವುದಕ್ಕೂ ಲಾಯಕ್ಕಾಗಿರುವುದಿಲ್ಲ... ಅಷ್ಟೇ...
............
ಸರಿದು ಹೋಗುವ ಘಳಿಗೆಗಳು ಮೊದಲು ಪ್ರಿವ್ಯೂ ರೂಪದಲ್ಲಿ
ಕಾಣುವುದಿಲ್ಲ, ಪ್ರೋಮೋ ಬಿಡುಗಡೆ ಆಗುವುದಿಲ್ಲ, ಜಿಂಗಲ್ ಬರುವುದಿಲ್ಲ... ಆಗಲಿಕ್ಕೆ ಇರುವುದು
ಆದಾಗಲೇ ಗೊತ್ತಾಗುತ್ತದೆ. ಆದರೂ ಕೆಲವು ನಿರ್ಗಮನ, ಕೆಲವು ವಿದಾಯ ಮತ್ತೆ ಕೆಲವು ತೊರೆದು ಹೋಗುವ
ಸೂಚನೆಗಳು ಮುಂಚಿತವಾಗಿ ಗೋಚರಿಸಲು ಶುರುವಾಗುತ್ತದೆ. ಇನ್ನು ಇರುವುದಿಲ್ಲ ಎಂಬ ವಿಷಾದ ಮತ್ತಷ್ಟು
ಗಾಢವಾಗಿ ಕಾಡುವುದು ಇನ್ನು ಇಲ್ಲದೇ ಆದಾಗ ಮಾತ್ರ. ಇಲ್ಲವಾಗುತ್ತದೆ ಎಂಬ ಬಗ್ಗೆ ಗಂಟೆಗಟ್ಟಲೆ
ಮಾತನಾಡಬಹುದು. ಪುಟಗಟ್ಟಲೆ ಮಣ್ಣಾಂಗಟ್ಟಿ ಉದ್ದುದ್ದ ಲೇಖನ ಬರೆಯಬಹುದು, ಇನ್ನಿಲ್ಲದಾಗುವ ಬಗ್ಗೆ
ಮುಂಚಿತ ವಿಷಾದ, ಸಂತಾಪಗಳನ್ನೂ ಸೂಚಿಸಬಹುದು. ಆದರೆ ಇನ್ನಿಲ್ಲದಾಗುವುದು ಇಲ್ಲವಾದ ಬಳಿಕವೇ
ಅನುಭವಕ್ಕೆ ಬರುವುದು, ಏನಾದೀತು ಎಂಬುದು ಅಂದಾಜಾಗುವುದು ಎಂಬು ಇನ್ನಿಲ್ಲದಾಗುವ ಸೂಚನೆ
ಸಿಕ್ಕಿದಾಗಲೇ ಮನದಟ್ಟಾದರೆ ನಿರ್ಗಮನಗಳೂ ನಿರ್ಲಿಪ್ತವಾಗಿಯೇ ನಡೆಯಬಹುದೋ ಏನೋ...!
…………….
ಬದುಕಿಗೋಸ್ಕರ ದುಡಿಮೆಯೋ,
ದುಡಿಮಗೋಸ್ಕರ ಬದುಕೋ ಎಂಬ ಜಿಜ್ಞಾಸೆ. ಗಳಿಕೆಗೋಸ್ಕರ ದುಡಿಮೆ, ದುಡಿಮೆಗೋಸ್ಕರ ಸಮಯದ ವಿನಿಯೋಗ,
ಆಸಕ್ತಿ, ಕುತೂಹಲ, ವೈಯಕ್ತಿಕ ಸಮಯ, ಮನರಂಜನೆ, ಸಂಶೋಧನೆ, ಹವ್ಯಾಸ ಇವೆಲ್ಲ ವಿನಿಯೋಗವಾಗಿ ಮುಗಿದ
ಸಮಯದ ಖಾತೆಯೊಳಗೆ ಸೇರಿ ದುಡಿಮೆಯ ಬ್ಯಾಲೆನ್ಸ್ ಶೀಟಿನಲ್ಲಿ ಟ್ಯಾಲಿ ಆಗದ ಸಸ್ಪೆನ್ಸ್ ಅಮೌಂಟ್ ಆಗಿ ಕಾಡುತ್ತಿರುತ್ತದೆ.
ಎಂದಿಗೂ ಮುಗಿಯದ ದುಡಿಮೆ ಮತ್ತು ಎಂದೆಗೂ ಕೈಗೊಳ್ಳಲಾಗದ ನಿರ್ಧಾರಗಳು ಸಂದರ್ಭ ಬಂದಾಗಲಷ್ಟೇ
ಮತ್ತೊಂದಿಷ್ಟು ಗಂಭೀರವಾಗಿ ಯೋಚಿಸುವಂತೆ ಮಾಡುತ್ತವೆ. ಪ್ರತಿ ದುಡಿಮೆಗೂ, ಪ್ರತಿ ಬದುಕಿಗೂ ಒಂದು
ಪರಿಸ್ಥಿತಿ ಮತ್ತು ಮನಃಸ್ಥಿತಿ ಅಂತ ಇರ್ತವೆ. ಕೆಲವು ಹೊರಗೆ ಕಾಣಿಸುತ್ತವೆ, ಕೆಲವು ಹೇಳಿದಷ್ಟು
ಅರ್ಥವಾಗುತ್ತವೆ, ಕೆಲವು ಹೇಳಿದರೂ ಅರ್ಥವಾಗದಷ್ಟು ಸಂಕೀರ್ಣವಾಗಿರುತ್ತವೆ. ಆದರೂ ನಾವು
ಇವನ್ನೆಲ್ಲ ಅರ್ಥ ಮಾಡಿಕೊಂಡು ಸಂಭಾಳಿಸುವಲ್ಲಿ ಎಡವುತ್ತಲೇ ಇರುತ್ತೇವೆ...!
………………………
ಯಾರನ್ನೂ ಆಕರ್ಷಿಸುವಂತೆ
ಮಾತನಾಡುವುದು, ಹತ್ತಾರು ಜನರ ಗಮನ ಸೆಳೆಯುವುದೂ ಒಂದು ಕಲೆ. ನಾಲ್ಕು ಜನ ನೋಡುವಂತೆ ಬದುಕುವುದು
ಸಹ ಒಂದು ತಾಕತ್ತು. ಉದ್ದುದ್ದ ಬರೆದು “ಶಹಬ್ಬಾಸ್” ಗಿಟ್ಟಿಸಿದವನೂ ಈಜು ಬಾರದ ಪಂಡಿತನ ಹಾಗೆ ಮುಳುಗುವ ಹೊತ್ತಿಗೆ
ಈಜಲು ಗೊತ್ತಿಲ್ಲದಿದ್ದರೆ ಸತ್ತೇ ಹೋಗುತ್ತಾನೆ. ಆತನ ಪಾಂಡಿತ್ಯ, ವ್ಯಾಕರಣ ಜ್ಞಾನ, ಸ್ವರಭಾರ, ನೇರ
ನಡೆ ನುಡಿ ಯಾವುದೂ ಪಂಡಿತನನ್ನು ಬದುಕಿಸುವುದಿಲ್ಲ. “ಈಜು ಬರುತ್ತದೋ, ಇಲ್ಲವೋ?” ಎಂಬುದು ಸಾಯುವ ಕಾಲಕ್ಕೆ ದೊಡ್ಡ ವಿಷಯ ಆಗಿರುತ್ತದೆ.
ಸತ್ತ ಮೇಲೆ “ದೊಡ್ಡ ಪಂಡಿತನ ಸಾವು ತುಂಬಲಾರದ ನಷ್ಟ” ಅಂತ ಜನ ಮಾತನಾಡಿಕೊಳ್ಳಬಹುದು. ಆದರೆ ಸಾವಿಗೆ ಆತನಿಗೆ
ಈಜು ಬಾರದೇ ಇದ್ದದ್ದೇ ಕಾರಣ ಎಂಬುದು ಎಷ್ಟು ಮಂದಿಗೆ ಗೊತ್ತಾಗುತ್ತದೋ ಹೇಳಲಾಗದು. ಈಜಲು ಬಾರದೇ ಇದ್ದದ್ದೇ ಪಂಡಿತನ ಪಾಲಿಗೆ ವೈಯಕ್ತಿಕ ದೊಡ್ಡ ನಷ್ಟ ಎಂಬುದು ಆ ಹೊತ್ತಿಗೆ ಅಲ್ಲಿದ್ದವರಿಗೆ ಮಾತ್ರ
ಗೊತ್ತಾದೀತು! ವೈಚಾರಿಕವಾಗಿ ಯೋಚಿಸುವುದಕ್ಕಿಂತಲೂ, ಮಾತನಾಡುವುದಕ್ಕಿಂತಲೂ,
ಉದ್ದುದ್ದ ಬರೆಯುವುದಕ್ಕಿಂತಲೂ ಪ್ರಾಕ್ಟಿಕಲ್ ಆಗಿ ಸದ್ದಿಲ್ಲದೇ, ವಸ್ತುಸ್ಥಿತಿ ಅರಿತುಕೊಂಡು
ಕಾಲಕ್ಕೆ ತಕ್ಕಂತೆ ಬದುಕಲು ಸಾಧ್ಯವಾಗುವುದೇ ಈ ಕಾಲದ ತಾಕತ್ತು.... ಅಷ್ಟೇ...!
-ಕೃಷ್ಣಮೋಹನ ತಲೆಂಗಳ
(15.02.2025)
No comments:
Post a Comment