ಕತೆಯೆಂದರೆ ಕಣ್ಣಿಗೆ ಕಂಡಷ್ಟು...!

ಪ್ರತಿ ವ್ಯಕ್ತಿತ್ವದ್ದೂ ಒಂದೊಂದು ಕತೆಯೇ...
ಕೆಲವು ಕೆಲವು ಕತೆಗಳು ಪ್ರಕಟವಾಗಿ ಜಗಾಜ್ಜಾಹೀರಾಗಿದ್ದರೆ, ಇನ್ನು ಕೆಲವು ಕತೆಗಳು ಅಪ್ರಕಟಿತ ಹಸ್ತಪ್ರತಿಗಳಂತೆ ಉಳಿದಿರುತ್ತವೆ ಬದುಕಿನ ಕೊನೆಯ ವರೆಗೂ. ಅಥವಾ ಕೆಲವು ಕತೆಗಳನ್ನು ಪ್ರಸ್ತುತಪಡಿಸುವ ಅಥವಾ ವಿವರಿಸುವ ಅಥವಾ ಕಂಡುಕೊಳ್ಳುವ ತಾಳ್ಮೆ, ಪುರುಸೊತ್ತು, ಅವಕಾಶವೂ ಇರುವುದಿಲ್ಲ ಬಿಡಿ.
ಕತೆಗಳನ್ನು ಪ್ಯಾರಾದಿಂದ ಪ್ಯಾರಾಗೆ ಹಾರಿಸಿಕೊಂಡು ಅಲ್ಲಿಲ್ಲಿ ಅಷ್ಟಿಷ್ಟು ಓದಿದರೆ ಇಡೀ ಕತೆಯನ್ನು ಹಾಗ್ಹಾಗೆ ಅರ್ಥ ಮಾಡಿಕೊಳ್ಳಲು ಕಷ್ಟ. ಅರ್ಥವಾಗಿದ್ದರಲ್ಲೂ ಒಂದಿಷ್ಟು ಅಪಾರ್ಥಗಳಿರಬಹುದು. ಯಾಕೆಂದರೆ ಕತೆಯ ಮಧ್ಯದ ಯಾವುದೋ ಒಂದು ಪ್ಯಾರಾದಲ್ಲಿ ಕಣ್ತಪ್ಪಿ ಹೋಗುವ ಸುಳಿವು ಇರಲೂ ಬಹುದು. ಅಥವಾ ಇಡೀ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ನೆರವಾಗುವ ಒಂದು ಪ್ರಕರಣವಿರಬಹುದು.

ಎಷ್ಟೋ ಬಾರಿ ಒಂದು ಕತೆಗೂ ಇನ್ನೊಂದು ಕತೆಗೂ ಹೋಲಿಕೆಯಿರುತ್ತದೆ. ಆದರೆ ಆರಂಭವೋ, ಅಂತ್ಯವೋ ಒಂದೇ ಥರ ಇರಬೇಕಿಲ್ಲ. ಹೋಲಿಕೆ ಯಾಕಿರುತ್ತದೆ ಎಂದರೆ ಎಲ್ಲರೂ ಬದುಕುವುದು ಇದೇ ಜಗತ್ತಿನಲ್ಲಿ. ಬದುಕಿಗೋಸ್ಕರ ಎಲ್ಲರೂ ಬಳಸುವ ಕಚ್ಛಾ ವಸ್ತುಗಳು ಒಂದೇ ಆಗಿರುವಾಗ ಪರಿಸ್ಥಿತಿಗಳೂ ಕೆಲವೊಮ್ಮೆ ಒಂದೇ ಥರ ಇರಬೇಕು ತಾನೆ...ಹಾಗೆಂದು ಆಯಾ ಕತೆಗೆ ತನ್ನದೇ ಆದ ಸೊಬಗು, ತಿರುವು, ಸುಲಭದಲ್ಲಿ ಕಾಣಿಸದ ವಿಷಾದ, ವಿವರವಾಗಿ ಹೇಳಿಕೊಳ್ಳಲಾಗದ ಅಸಹಾಯಕತೆ ಹಾಗೂ ಏಕಾಏಕಿ ಮುಗಿಯಿತೇನೋ ಎಂದು ನಿರಾಸೆ ಹುಟ್ಟಿಸುವಂತಹ ಅಸ್ಪಷ್ಟ ಅಂತ್ಯಗಳೂ ಇರುತ್ತವೆ. ಅಯ್ಯೋ ಇನ್ನಷ್ಟು ಓದಲು ಸಿಗಬೇಕಿತ್ತು ಎಂಬಷ್ಟರಲ್ಲಿ ಕತೆಯಾಗಿರುವ ವ್ಯಕ್ತಿ ಎಲ್ಲವನನ್ನೂ ಹೇಳಿ ಮಾಯವಾಗಿಬಿಟ್ಟಿರುತ್ತಾನೆ. ಅಂತ್ಯವಾದ ಬಳಿಕ ಎಂತ ಮಾಡಿದರೂ ಆ ಕತೆಯನ್ನು ಇನ್ನೊಬ್ಬ ಮುಂದುವರಿಸಲು ಆಗುವುದಿಲ್ಲ. ಬಹುಷಹ ಪ್ರತಿ ಕತೆಗೂ ತನ್ನದೇ ಅಂತ್ಯವಿರುತ್ತದೆ. ಅದನ್ನು ಹಠದಿಂದಲೋ, ವಿನೋದಕ್ಕೆಂದೋ ಬದಲಿಸುವ ಹಕ್ಕು ಬರೆಯುವವನಿಗೂ ಇರುವುದಿಲ್ಲವೋ ಏನೋ...

ಕಾಣುವ ಹಸನ್ಮುಖಿಯ ಹಿಂದೆ ಆಗೀಗ ಪ್ರಕಟವಾಗುವ ಸಿಡುಕು, ಪರಮ ತಾಳ್ಮೆಯವನೂ ಹಿಂದಿನಿಂದ ತೋರಿಸುವ ಕೂಗಾಟ, ಅತಿ ಕರುಣಾಮಯಿಯೂ ಅಗತ್ಯ ಸಂದರ್ಭಗಳಲ್ಲಿ ನಿಷ್ಠುರವಾಗಿ ವಿಶ್ವರೂಪ ದರ್ಶನ ನೀಡುವುದು, ಪರಮ ದುಷ್ಟನ ಹಾಗೆ, ಒರಟನ ಹಾಗೆ ಕಾಣುವವನು ಆಪತ್ಕಾಲದಲ್ಲಿ ನೀಡಿರಬಹುದಾದ ನೆರವು, ಮೃದು ಮನಸ್ಸಿನ ದರ್ಶನ... ಇವೆಲ್ಲಾ ಕತೆಗಳಲ್ಲಿ ಕಾಣುವ ವೈರುಧ್ಯಗಳು. ಕತೆಯ ಗಾತ್ರವನ್ನೂ, ಶೀರ್ಷಿಕೆಯನ್ನೂ ಮಾತ್ರ ನೋಡಿದರೆ ಇವೆಲ್ಲ ಅರ್ಥವಾಗದು.

ಮತ್ತಷ್ಟು ಕತೆಗಳು ಮೇಲ್ನೋಟಕ್ಕೆ ಓದಿಸಿಕೊಂಡು ಹೋಗುವುದೇ ಇಲ್ಲ. ಅಲ್ಲಲ್ಲಿ ಊಟದಲ್ಲಿ ಕಲ್ಲು ಸಿಕ್ಕಿದ ಹಾಗೆ ಏನೇನೋ ತಿರುವುಗಳು. ಸುಲಭದಲ್ಲಿ ಅರ್ಥವಾಗುವುದೂ ಇಲ್ಲ. ಅಥವಾ ಈ ಕಥೆಯಲ್ಲಿ ಇನ್ನೂ ಹೇಳಲು ಏನೋ ಬಾಕಿ ಇದೆ ಎಂದು ಭಾಸವಾಗಬಹುದು. ಅಥವಾ ಹೇಳಿದಷ್ಟು ನಿಜವೋ, ಸುಳ್ಳೋ ಎಂದೂ ಅರ್ಥವಾಗುವುದಿಲ್ಲ. ವ್ಯಕ್ತಿಯೊಬ್ಬನ ವ್ಯಕ್ತಿತ್ವ ಅದರ ಹಿಂದಿನ ಆತನ ಹೇಳಿಕೆಗಳಲ್ಲಿರುವ ಪ್ರಾಮಾಣಿಕತೆ, ಸತ್ಯವನ್ನೇ ಹೇಳುವ ಸ್ವಭಾವ, ಪರಿಸ್ಥಿತಿಯನ್ನು ಅರ್ಥ ಮಾಡಿಸಬಲ್ಲ ಚಾಕಚಕ್ಯತೆಗಳು ಇತ್ಯಾದಿಗಳ ಮೇಲೆ ನಿರ್ಧಾರವಾಗುತ್ತದೆ. ಹಾಗಾಗಿ ಆತ ಎಲ್ಲವನ್ನೂ ಹೇಳಿಕೊಂಡಿರಬೇಕಾಗಿಲ್ಲ ಕತೆಯಲ್ಲಿ. ಬದುಕೇ ಕತೆಯೆಂದಾದ ಮೇಲೆ ಹೇಳಿದ್ದು ಸ್ವಲ್ಪವೇ ಆದರೂ ಅದೂ ಕತೆಯೇ ಆಗಿರುತ್ತದೆ. ಬಹುಷಹ ಕತೆಯ ಕೆಲವು ಅಧ್ಯಾಯಗಳೆಂದುಕೊಳ್ಳಬಹುದು.


ವಾಟ್ಸಪ್ಪು, ಫೇಸುಬುಕ್ಕಿನಲ್ಲಿ ನೀವು ನೋಡಿರಬಹುದು ಯಾವುದೇ ಪೋಸ್ಟು ಅಥವಾ ಡಿಸ್ ಪ್ಲೇ ಪಿಕ್ಚರನ್ನು ಹಂಚಿಕೊಳ್ಳುವ ಮೊದಲು ನಿಮ್ಮಲ್ಲಿ ಕೇಳಲಾಗುತ್ತದೆ ಎಲ್ಲರಿಗೂ ಇದು ಕಾಣಿಸಿಕೊಳ್ಳಬೇಕ, ನಿಮ್ಮ ಸ್ನೇಹಿತರಿಗೆ ಮಾತ್ರ ಕಾಣಿಸಿಕೊಳ್ಳಬೇಕಾ ಅಥವಾ ಯಾರೂ ಬೇಕಾದರೂ ಇವನ್ನೆಲ್ಲ ನೋಡಬಹುದಾ ಅಂತ. ಬದುಕೆಂಬೋ ಕತೆಯೂ ಹಾಗೆ ಎಲ್ಲರ ಬದುಕಿನ ಎಲ್ಲ ಅಧ್ಯಾಯಗಳೂ ಎಲ್ಲರಿಗೂ ಕಾಣಿಸುವುದಿಲ್ಲ. ಕೆಲವೊಮ್ಮೆ ಯಾರಿಗೂ ಕಾಣಿಸುವುದಿಲ್ಲ. ಕೆಲವೊಮ್ಮೆ ಕಾಣಿಸಿಕೊಂಡರೂ ಅದು ಅರ್ಥವಾಗುವುದಿಲ್ಲ. ಎಂತೆಂಥ ಮಹನೀಯರು ದಪ್ಪ ದಪ್ಪ ಗಾತ್ರದ ಜೀವನ ಚರಿತ್ರೆಯನ್ನೇ ಬರೆದುಕೊಂಡರೂ ಅದರಲ್ಲೂ ಉಲ್ಲೇಖವಾಗದ ಹಗರಗಣಗಳು, ಗುಟ್ಟುಗಳು, ನಮೂದಾಗದ ಘಟನೆಗಳು ಸಾಕಷ್ಟಿರುತ್ತವೆ. ಇನ್ನು ಜನಸಾಮಾನ್ಯನ ಪಾಡೇನು.
ಕತೆ ಬರೆಯುವುದೋ, ಕತೆ ಹುಟ್ಟುವುದೋ, ಕತೆಯಾಗುವುದೋ ಏನೇ ಹೆಸರಿಟ್ಟರೂ ಕತೆ ಕತೆಯೇ.


ಕತೆ ಕ್ಲಿಷ್ಟವಾಯಿತು ಎಂದೊಡನೆ ತುಂಬ ಮಂದಿ ಅದನ್ನು ಓದುವ ಪ್ರಯತ್ನವನ್ನೇ ಬಿಡುತ್ತಾರೆ. ಏರು ಹಾದಿಯ ಚಾರಣದ ದಾರಿಯನ್ನು ಅರ್ಧದಲ್ಲಿ ಕೈಬಿಟ್ಟ ಹಾಗೆ. ಪೂರ್ತಿ ಮೇಲೆರಿ ನೋಡಿದರೆ ಮಾತ್ರ ಗುಡ್ಡದ ತುದಿಯ ಸೌಂದರ್ಯ ಕಾಣಿಸುವುದು ಅಲ್ಲವೇ... ಹಾಗೆಯೇ ಕ್ಲಿಷ್ಟವೆನಿಸಿದರೂ ಹಠಪಟ್ಟು ಕತೆಯನ್ನು ಓದುವ ಪ್ರಯತ್ನ ಮಾಡಿದರೆ ಅರ್ಥವಾದೀತು, ಅರ್ಥವಾಗದ ಭಾಗವನ್ನು ಅರ್ಥ ಮಾಡಿಕೊಳ್ಳಲು ಓದಿದ ಭಾಗ ರೆಫರೆನ್ಸ್ ಆದೀತೇನೋ. ಕತೆಯ ಶೀರ್ಷಿಕೆ ಮಾತ್ರ ನೋಡಿ, ಕತೆಗೆ ಪೂರಕವಾಗಿ ಹಾಕಲಾದ ಚಿತ್ರವನ್ನು ಮಾತ್ರ ನೋಡಿ, ಕತೆ ಬರೆದವನ ಹೆಸರು ಮಾತ್ರ ನೋಡಿ ಕತೆಗೆ ಮಾರ್ಕು ಹಾಕುವ ದುಸ್ಸಾಹಸ ಬೇಡ. ಕತೆಯನ್ನು ಓದಿದರೆ, ಅರ್ಥವಾದರೆ ಮಾತ್ರ ಷರಾ ಬರೆಯುವುದು ಲೇಸು. ಅಲ್ವ....


ಆಗಲೇ ಹೇಳಿದ ಹಾಗೆ.. ಇಲ್ಲಿ ಕತೆಯೆಂದರೆ ಬದುಕು.

No comments: