ಕಾಣದ ಕಾರಣಕ್ಕೇ ಕಾಡುವ ಕಾಳರಾತ್ರಿಗಳು...!

ಕತ್ತಲೆಯನ್ನು ಬೆಂಕಿಗೆ ಹೋಲಿಸಲು ಕಷ್ಟ. ಯಾಕೆಂದರೆ ಬೆಂಕಿಗೆ ಏನನ್ನೇ ಹಾಕಿದರೂ ಅದು ಆಪೋಶನ ತೆಗೆದುಕೊಳ್ಳುತ್ತದೆ, ಭಸ್ಮವಾಗುತ್ತದೆ. ಎಷ್ಟೇ ಬೆಲೆಬಾಳುವ, ದೊಡ್ಡ ಗಾತ್ರದ ಏನೇ ಆದರೂ ಸಣ್ಣದೊಂದು ಅವಶೇಷ ಉಳಿಸೀತೇ ವಿನಃ ಮತ್ತೆಲ್ಲವನ್ನೂ ಅಗ್ನಿ ನಿಷ್ಕರುಣಿಯಾಗಿ ಲಯಗೊಳಿಸುತ್ತದೆ.




ಆದರೆ, ಕತ್ತಲು ಹಾಗಲ್ಲ. ಕತ್ತಲಿನೊಳಗೆ ಎಲ್ಲವೂ ಬಂಧಿಯಾಗಿದ್ದರೂ ಅದು ನಾಶವಾಗಿರುವುದಿಲ್ಲ. ಕಾಣಿಸುವುದಿಲ್ಲ ಅಷ್ಟೇ. ಬೆಳಕು ಬಿದ್ದಾಗ ಪುನರಪಿ ಕಾಣಬಹುದು. ಕಾಡುವ ಕತ್ತಲಿನ ಹಿಂದಿನ ಸಂಗ್ರಹ, ವ್ಯಾಪ್ತಿ, ಆಳ, ವಿಸ್ತಾರ ಎಂಥದ್ದೂ ನಮಗೆ ಗೋಚರಿಸುವುದಿಲ್ಲ. ಕತ್ತಲಿಗೆ ದೂಡಿ ಬಿಟ್ಟರೆ ಒಂದಷ್ಟು ಹೊತ್ತು ಅದು ದೃಷ್ಟಿಯ ಮಟ್ಟಿಗೆ ಇಲ್ಲವಾಗುತ್ತದೆ.
ಹಾಗಂತ ನಾಶವಾಗಿರುವುದಿಲ್ಲ. ಸೋಫಾದ ಅಡಿಗೆ ಗುಡಿಸಿ ನೂಕಿದ ಕಸದ ಹಾಗೆ! ಆದರೆ, ಬೆಳಕು ಬಿದ್ದಾಗ, ಕತ್ತಲು ತಾನಾಗಿ ಸರಿದಾಗ, ಕತ್ತಲನ್ನು ಸೃಷ್ಟಿಸಿದ ತಡೆ ತೆಗೆದಾಗ ಕಾಣದ್ದೂ ಕಂಡು ಬಿಡುತ್ತದೆ.

 

ಕತ್ತಲು ಕಾಡುವುದಕ್ಕೆ ಕಾರಣವೇ ನಿಗೂಢತೆ.

ಕಲ್ಪನೆಗಳಿಗೆ, ಕುತೂಹಲಗಳಿಗೆ, ಆತಂಕಗಳಿಗೆ ಕತ್ತಲು ಆಹ್ವಾನ ನೀಡುತ್ತದೆ. ಕಾಣುವುದು ಸ್ವಲ್ಪ ಮಾತ್ರ, ಕಾಣದಿರುವುದೇ ಅಪಾರ ಎಂಬುದೇ ಕತ್ತಲು ಸಂಶಯಾಸ್ಪದವಾಗಿಯೂ, ನಿಗೂಢವಾಗಿಯೂ ಗೋಚರಿಸಲು ಕಾರಣ. ವಾಹನದ ಹೆಡ್ ಲೈಟ್ ಬಿದ್ದ ಜಾಗವಷ್ಟೇ ಪ್ರಖರವಾಗಿ, ದೃಢವಾಗಿ ಕಾಣುತ್ತದೆ. ಹಾಗಂತೆ ಹೆಡ್ ಲೈಡ್ ಬಿದ್ದ ಜಾಗವನ್ನೇ ಉದಾಹರಣೆಯಾಗಿ ತೆಗೆದುಕೊಂಡು ಲೈಟ್ ಆರಿಸಿ ಅದೇ ರಸ್ತೆಯಲ್ಲಿ ಮುಂದೆ ಹೋದರೆ, ಯಾರಿಗೆ ಗೊತ್ತು? ಮುಂದೆ ಸೇತುವೆಯೇ ತುಂಡಾಗಿರಬಹುದು. ಚಕ್ರ ಹೂತುಹೋಗುವಂಥ ಗುಂಡಿ ಇರಬಹುದು, ಓರೆಕೋರೆಗಳು ಹೆಚ್ಚಾಗಿ ಸಂಚಾರ ಕಷ್ಟವಾಗಬಹುದು. ಅವೆಲ್ಲ ಕತ್ತಲ ಗರ್ಭದಲ್ಲಿ ಅಡಗಿದ್ದು, ಸಮೀಪ ದರ್ಶನದಿಂದ ಮಾತ್ರ ವೇದ್ಯವಾಗುವಂಥದ್ದು, ಅರ್ಥವಾಗದ ಮನಸುಗಳ ಹಾಗೆ!

 

ಕೆಲವು ಕ್ರೀಡೆ, ಬಯಲಾಟ, ಜಾತ್ರೆ, ನೇಮಗಳೆಲ್ಲ ರಾತ್ರಿ ನಡೆದರೇ ಚಂದ. ಯಾಕೆಂದರೆ ರಾತ್ರಿ ಒದಗಿಸುವ ಕಪ್ಪಗಿನ ನೇಪಥ್ಯ, ರಾತ್ರಿಯ ತಂಪು, ರಾತ್ರಿಯ ನಿಶ್ಯಬ್ಧ, ರಾತ್ರಿಯ ಅವಧಿಯ ಮಂಪರು, ಓರೆಕೋರೆಗಳನ್ನು, ಏರುತಗ್ಗುಗಳನ್ನು ಬಚ್ಚಿಡಲು ರಾತ್ರಿಗಿರುವ ಸಾಮರ್ಥ್ಯ ಇವೆಲ್ಲ ರಾತ್ರಿಯಲ್ಲಿ ಕಾರ್ಯಕ್ರಮಗಳು ಮೆರೆಯುವಂತೆ ಮಾಡುತ್ತವೆ. ರಸ್ತೆಯ ಬದಿಯ ದಿಣ್ಣೆಯಂಥ ಜಾಗದಲ್ಲಿ ರಾತ್ರಿ ಪೆಂಡಾಲ್ ಹಾಕಿ, ವಠಾರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿ, ನೆಲಹಾಸು ಹೊದೆಸಿ ಯಕ್ಷಗಾನ ಆಡಿಸುವುದಕ್ಕೂ ಅದೇ ಹಳ್ಳದ ಪಕ್ಕ ಹಗಲು ಯಕ್ಷಗಾನ ಆಡುವುದಕ್ಕೂ ಭಯಂಕರ ವ್ಯತ್ಯಾಸ ಇದೆ. ರಾತ್ರಿ ನಮಗೆ ಕಾಣುವುದು ಝಗಮಗಿಸುವ ರಂಗಸ್ಥಳ ಮತ್ತು ಟ್ಯೂಬುಲೈಟುಗಳು ಮಾತ್ರ. ಸಮೀಪದ ಚರಂಡಿಯ ವಾಸನೆ ಬಂದೀತು, ಸೊಳ್ಳೆ ಕಚ್ಚೀತು, ಆದರೆ ಬಾಕಿ ಅನಗತ್ಯಗಳು ಏನೂ ಕಾಣಿಸುವುದಿಲ್ಲ, ಹಾಗಾಗಿ ಕಾಣಿಸದಿರುವುದು ತುಂಬ ಕಾಡುವುದೂ ಇಲ್ಲ. ಹಗಲು ಹಾಗಲ್ಲ. ಅನಗತ್ಯದ್ದು ಕಂಡ ಮೇಲೆ ಆಟ ನೋಡಲು ಮನಸ್ಸೂ ಬರುವುದಿಲ್ಲ! ಬಚ್ಚಿಡಲು ಕತ್ತಲಿಗಿರುವ ಈ ಸಾಮರ್ಥ್ಯದಿಂದಲೇ ಕೆಲವೊಮ್ಮೆ ಕತ್ತಲು ಕಾಯುವಂತೆ ಮಾಡುತ್ತದೆ.

ಬೆಳಕು ವಿಜೃಂಭಿಸಲು, ನಾವು ಶೂನ್ಯರಾಗಿ ಬೆಳಕನ್ನು ಮಾತ್ರ ಸವಿಯಲು ಸಾಧ್ಯವಾಗಲು, ಕತ್ತಲಿನಲ್ಲಿ ನಮ್ಮನ್ನು ನಾವು ಕಳೆದುಕೊಂಡು ಇನ್ಯಾವುದರಲ್ಲೋ ತಲ್ಲೀನರಾಗಲು ಸಾಧ್ಯವಾಗುವುದು ರಾತ್ರಿ ಮಾತ್ರ. ಅದಕ್ಕೇ ಉತ್ಸವ, ಆಟಗಳಿಗೆ ರಾತ್ರಿಯೇ ಪ್ರಶಸ್ತ ಅನ್ನಿಸುವುದು.

ಎಲ್ಲ ಗೊತ್ತಿದ್ದರೆ ಒಳ್ಳೆಯದು ಹೌದು. ಆದರೆ, ಕೆಲವೊಂದು ಸಲ ಕೆಲವೆಲ್ಲ ಗೊತ್ತಿಲ್ಲದಿದ್ದರೇ ಒಳ್ಳೆಯದಿತ್ತು ಅಂತ ಅನ್ನಿಸುವುದಿದೆ. ಅದಕ್ಕೇ ಕತ್ತಲು ನಿದರ್ಶನವಾಗುತ್ತದೆ. ಕತ್ತಲು ಬಚ್ಚಿಟ್ಟ ಕೆಲವು ಸಂಗತಿಗಳನ್ನು ನೀವು ಟಾರ್ಚು ಹಾಕಿ ಹೋಗಿ ಹುಡುಕಿ ಕಂಡ ಮೇಲೆ ಅಲ್ವ ಮನಸು ತಳಮಳಗೊಳ್ಳುವುದು? ಅದು ಗೊತ್ತಾದರೆ ಮಾತ್ರ ಅಲ್ವ ಭಯ ಆವರಿಸುವುದು? ಕತ್ತಲನ್ನು ಸೀಳಿ ಶೋಧನೆಗೆ ಇಳಿದಾಗಲಲ್ವ ಮನಸ್ಸು ಚಡಪಡಿಸುವುದು? ಅದು ಗೊತ್ತಾಗದೇ ಇದ್ದರೆ, ಎಂಥದ್ದೂ ಆಗುವುದಿಲ್ಲ, ಮನಸು ಸಹಜವಾಗಿಯೇ ಇರುತ್ತದೆ.

ಉದಾಹರಹಣೆಗೆ: ನೀವು ಚಾರಣ ಹೋಗಿ ಬೆಟ್ಟದ ತುದಿಯಲ್ಲಿ ಕ್ಯಾಂಪ್ ಹಾಕಿರುತ್ತೀರಿ ಅಂತ ಇಟ್ಟುಕೊಳ್ಳಿ. ಪಕ್ಕದ ಗುಡ್ಡದಲ್ಲಿ ಏನೋ ಸದ್ದಾಗುತ್ತದೆ. ಏನೋ ಪ್ರಾಣಿ ಇರಬಹುದು ಅಂತ ಹೆಚ್ಚು ತಲೆಕೆಡಿಸದೆ ಕ್ಯಾಂಪ್ ಫೈರ್ ಸುತ್ತ ಮಲಗಿ ನಿದ್ರಿಸಿದರೆ ಏನೂ ಆಗುವುದಿಲ್ಲ. ಅದರ ಬದಲು ಹೆಚ್ಚು ಕುತೂಹಲದಿಂದ ಟಾರ್ಚು ಹಾಕಿದಾಗ ದೂರದ ಮಸುಕಿನಲ್ಲಿ ಹುಲಿಯ ಬಾಲದ ಹಾಗೆ, ಆನೆಯ ಸೊಂಡಿಲಿನ ಹಾಗೆ ಏನಾದರೂ ಮಯ ಮಯ ಕಾಣಿಸಿದರೂ ಸಾಕು... ಅಲ್ಲಿಗೆ ನಿಮ್ಮ ಮನಃಶಾಂತಿಗೆ ಬಾಂಬ್ ಹಾಕಿದ ಹಾಗೆ! ಅಷ್ಟೇ... ಅದೇ ಯೋಚನೆಯಲ್ಲಿ ಬೆಳಗ್ಗಿನ ವರೆಗೆ ನಿದ್ರೆಯೇ ಬರಲಿಕ್ಕಿಲ್ಲ. ಯಾಕೆ? ಹಾಗೊಂದು ಸಾಧ್ಯತೆ ಗೊತ್ತಾದ ಕಾರಣ ಮನಸ್ಸಿಗೆ ಆತಂಕ. ಇಲ್ಲವಾದರೆ, ನಿಮ್ಮ ಪಕ್ಕದಲ್ಲೇ ಕತ್ತಲಿನಲ್ಲಿ ಹುಲಿ ಮಲಗಿದ್ದರೂ ಆದು ನಿಮಗೆ ಗೊತ್ತಾಗುವ ವರೆಗೆ ಮನಸ್ಸಿಗೆ ಯಾವ ಆತಂಕವೂ ಇರುವುದಿಲ್ಲ....

ಮನಸ್ಸಿಗೂ, ಕತ್ತಲಿಗೂ ಇರುವುದು ಇದೇ ತಾತ್ವಿಕ ಸಂಬಂಧ. ತಿಳಿಯುವ ವರೆಗೆ ಪ್ರಶಾಂತವಾಗಿದ್ದ ಮನಸ್ಸು, ಕಂಡ ಬಳಿಕ, ತಿಳಿದ ಬಳಿಕ ಬದಲಾಗುವುದು, ತಳಮಳಗೊಳ್ಳುವುದು, ದೃಷ್ಟಿಕೋನ ಬದಲಿಸುವುದು ಸಹಜ ಅಲ್ವ? ಎಲ್ಲವೂ ತಿಳಿದಿದ್ದರೂ ತಿಳಿಯಂತೇ ಇರುವವರು, ಗೊತ್ತಿದ್ದರೂ ಗೊತ್ತಿಲ್ಲದಂತೆ ವರ್ತಿಸುವವರು, ಬದುಕಿನಲ್ಲಿ ಕಾಡುವ ಯಾವುದನ್ನು ಎಲ್ಲಿಯೂ ಬಿಚ್ಚಿಡದೆ ಪರಮ ಸುಖಿಗಳಂತೆ ತೋರಿಸಿಕೊಳ್ಳುತ್ತಾ ಇತರರಲ್ಲಿ ಹೊಟ್ಟೆಕಿಚ್ಚು ಹುಟ್ಟಿಸುವವರು, ತನ್ನ ದೌರ್ಬಲ್ಯ, ತನ್ನ ಕೊರತೆಗಳು, ತನ್ನನ್ನು ಕಾಡುವ ಸಮಸ್ಯೆಗಳು, ತನ್ನಿಂದಾದ ತಪ್ಪುಗಳು ಯಾವುದನ್ನೂ ಬೆಳಕಿಗೆ ತಾರದೆ, ನಗು ನಗುತ್ತಾ ಆತ್ಮವಿಶ್ವಾಸದಿಂದ ಓಡಾಡುತ್ತಾ ಬೆಳಕಿನಲ್ಲೂ ಉತ್ತರಕ್ಕೆ ಸಿಲುಕದೆ ಬದುಕುವವರು, ಕಾಡುವ ಸಮಸ್ಯೆಗಳಿಗೆ ಹೇಳಲಾಗದೆ, ಪರಿಹಾರ ಕಾಣದೆ, ಅಥವಾ ಪರಿಹಾರ ಇದ್ದರೂ ಅದನ್ನು ಜಾರಿಗೊಳಿಸಲಾಗದೆ, ಅಥವಾ ಹೇಳುವುದಕ್ಕೇ ಸೂಕ್ತವಾಗದ, ಹೇಳಿದರೂ ಪ್ರಯೋಜನ ಇಲ್ಲದಂಥ ಗೊಂದಲಗಳಿದ್ದು ಅಷ್ಟಿಷ್ಟು ಒಗಟಾಗಿಯೇ ಸುತ್ತಮುತ್ತ ಓಡಾಡುವ, ಉತ್ತರಗಳಿಗೆ ಪ್ರಶ್ನೆಗಳಾಗಿಯೇ ಕಾಡುವ ಮನಸುಗಳೆಲ್ಲ ಕಡು ಬೆಳಕಿನಲ್ಲೂ ಕಾಣದ ಕತ್ತಲಾಗಿ ಭ್ರಮೆ ಸೃಷ್ಟಿಸುತ್ತಿರುತ್ತಾರೆ. ನಮಗದು ಗೊತ್ತಾಗುವುದಿಲ್ಲ, ಅಥವಾ ತಡವಾಗಿ ಗೊತ್ತಾಗುತ್ತದೆ. ಬಹಳಷ್ಟು ಸಲ ಅಂತಹ ಕುತೂಹಲಗಳಿಗೆ ಉತ್ತರ ಸಿಗುವುದು ಅಗತ್ಯವೇ ಆಗಿರುವುದಿಲ್ಲ. ಉತ್ತರ ಸಿಕ್ಕಾಗ ಯಾಕಾದರೂ ಪ್ರಶ್ನೆ ಹುಟ್ಟಿತೋ ಎಂಬಷ್ಟು ನಿರಾಸೆ ಕಾಡುವ ಅಪಾಯವಿದೆ. ಕೆಲವೊಂದನ್ನು ಬಗೆಯಬಾರದಿತ್ತು, ತಿಳಿಯಬಾರದಿತ್ತು, ಉತ್ತರ ಹುಡುಕಬಾರದಿತ್ತು, ಶೋಧನೆ ಅನಗತ್ಯವಾಗಿತ್ತು ಅಂತ ಗೊತ್ತಾಗುವುದು ಭಯಂಕರ ತಿಳಿದುಕೊಳ್ಳುವ ಅಧಿಕಪ್ರಸಂಗ ಮಾಡಿದ ನಂತರ. ಅಂತಹ ಶೋಧನೆಗಳ ಬಳಿಕ ಗೊತ್ತಾಗುತ್ತದೆ, ದೂರದಿಂದ ಕಾಣುವಾಗ ಇದ್ದ ಕಲ್ಪನೆಗಳಿಗೂ, ಸಮೀಪ ಹೋದ ಮೇಲೆ, ಪರಿಶೀಲಿಸಿದ ಮೇಲೆ, ಮಾತನಾಡಿದ ಮೇಲೆ, ಕಂಡುಕೊಂಡ ಮೇಲೆ ಇರುವುದಕ್ಕೂ ವ್ಯತ್ಯಾಸ ಇದೆ ಅಂತ...

ಇದುವೇ ಕತ್ತಲಿಗೂ, ಕಾಣದ, ಕಾಣಲಾಗದ, ಕಂಡುಕೊಂಡೆವು ಅಂದುಕೊಂಡರೂ ಕಂಡಿರದೆ ಕಾಡುವ ಮನಸುಗಳ, ವ್ಯವಸ್ಥೆಗಳ, ರಚನೆಗಳ ನಡುವೆ ಇರುವ ಸಾಮ್ಯತೆ. ಅಲ್ವ? ಎಲ್ಲದಕ್ಕೂ ನಮಗೆ ಉತ್ತರ ಬೇಕಾಗಿರುವುದಿಲ್ಲ. ಎಲ್ಲವನ್ನೂ ನಾವು ಕಾಣಲೇ ಬೇಕಾಗುವುದಿಲ್ಲ, ಎಲ್ಲವನ್ನೂ ತುಂಬ ಹತ್ತಿರದಿಂದಲೇ ನೋಡಲೇಬೇಕಾಗಿರುವುದಿಲ್ಲ. ಆದರೂ ಅವುಗಳೆಲ್ಲ ಆಗಿ ಹೋದರೆ ಮತ್ತದು ಕಾಡುತ್ತದೆ, ಅಥವಾ ಕಾಣಿಸುತ್ತಲೇ ಇರುತ್ತದೆ ಮತ್ತು ಗೋಚರಿಸಿದ ನಂತರದ ಆಯಾಮದ, ಗ್ರಹಿಕೆಯ ಕೋನವೇ ಬದಲಾಗಿರುತ್ತದೆ!

ಹೈವೇಯಲ್ಲಿ ಹೋಗುವಾಗ ರಸ್ತೆ ಮೇಲೆ ಹೆಡ್ ಲೈಟ್ ಬಿದ್ದರೆ ಸಾಕು, ಅದಕ್ಕೊಂದು ವ್ಯಾಪ್ತಿ, ಅದಕ್ಕೊಂದು ವಿಸ್ತಾರ ಇದೆ. ಆದರಾಚೆಯದ್ದೆಲ್ಲ ಕಾಣಲೇ ಬೇಕೆಂದಿಲ್ಲ. ಕೆಲವೊಮ್ಮೆ ಆ ಕುತೂಹಲ ಉಳಿದಿದ್ದರೇ ಚಂದ. ನೀವೊಂದು ದೊಡ್ಡ ತೂಗು ಸೇತುವೆಯಲ್ಲಿ ನಡೆಯುವಾಗ ಕೆಳಗಿನ ಆಳ ತಿಳಿಯದಿದ್ದರೆ ನೀವು ನಿರ್ಭೀತಿಯಿಂದ ಸರಾಗ ನಡೆಯಬಹುದು. ಅದೇ, ಹಗಲು ನದಿಯಲ್ಲಿ ಹರಿಯುವ ಪ್ರವಾಹವನ್ನು ನೋಡ್ತಾ ಹೋದರೆ ತಲೆ ತಿರುಗಿದಂತಾಗಿ ನಡಿಗೆ ಅಸಾಧ್ಯವಾಗಬಹುದು. ಇದು ಮನಸಿಗೆ ಸಂಬಂಧಪಟ್ಟದ್ದು. ಕತ್ತಲು ಕೂಡಾ ಹಾಗೆಯೇ ಕೆಲವೊಮ್ಮೆ ಬಚ್ಚಿಡುವುದು, ತೋರಿಸದಿರುವುದು, ಕುತೂಹಲವನ್ನು ಕಾಪಿಟ್ಟುಕೊಳ್ಳುವುದು ಕೂಡಾ ಒಳ್ಳೆಯದೇ. ಅರ್ಧಂಬರ್ಧ ಬೆಳಕು ತೋರಿಸುವ ವಿಚಿತ್ರ ಆಕಾರದ ಮರಗಳು, ಏನೋ ಹಾದು ಹೋದ ಹಾಗೆ, ನಿಂತ ಹಾಗೆ, ಅಲ್ಲಾಡಿದ ಹಾಗೆ ಕತ್ತಲು ಮೂಡಿಸುವ ಭ್ರಮೆಗಳು, ದೂರದಿಂದ ಕೇಳಿಸುವ ಸದ್ದು ಎಲ್ಲ ರಾತ್ರಿ ಪ್ರಯಾಣದ ನಿತ್ಯ ಅನುಭವಗಳು. ಹಾಗಂತ ಪ್ರತಿಯೊಂದು ಕಡೆಯೂ ನಿಂತು ಮನಸ್ಸಿಗೆ ಭ್ರಮೆ ಹುಟ್ಟಿಸಿದ್ದನ್ನೆಲ್ಲ ಶೋಧಿಸುತ್ತಾ ಹೋದರೆ ಪ್ರಯಾಣ ಮೊಟಕಾಗುತ್ತದೆ, ಗಮ್ಯ ದೂರವಾಗುತ್ತದೆ.!

ಕೆಲವೊಮ್ಮೆ ಕತ್ತಲು ಹುಟ್ಟಿಸುವ ಕುತೂಹಲ, ಕತ್ತಲಿನಾಚೆಯ ಕಾಡುವ ಕ್ಷಿತಿಜ, ಅಗಾಧ ಆಕಾಶದ ಹಾಗೆ ಅಪರಿಮಿತವಾಗಿ ಕಾಡುವ ಅದಮ್ಯ ಕತ್ತಲಿನ ಸಾಮ್ರಾಜ್ಯ ಮೂಡಿಸುವ ಕಲ್ಪನೆಗಳೇ ಮನಸ್ಸಿಗೆ ಹಿತವಾಗುತ್ತವೆ. ದೊಡ್ಡ ಸಮುದ್ರದೆದುರು ಕತ್ತಲಿನಲ್ಲಿ ನಿಂತು ಕಿವಿಗೊಟ್ಟರೆ ಅಲೆಗಳು ಬಡಿಯುವ ಸದ್ದು ಕೇಳುತ್ತದೆ ವಿನಃ ಅದರ ಭೀಕರತೆ ಅಂದಾಜಾಗುವುದಿಲ್ಲ, ಮನಸಿಗೆ ಸಾಕಷ್ಟು ಕಲ್ಪನೆಗಳು ಬರುತ್ತವೆ, ಸಮುದ್ರ ಹೀಗಿರಬಹುದು ಅಂತ. ಅಥವಾ ಅರೆಬರೆ ತಿಂಗಳ ಬೆಳಕಿಗೆ ಬೆಟ್ಟದ ತುತ್ತತುದಿಯ ಗಿಡ ಮರಗಳ ಹೊರರೇಖೆಗಳು ಚೆಂದ ಚೆಂದದ ವಿನ್ಯಾಸಗಳನ್ನು ತೋರಿಸುತ್ತವೆ ಬಿಟ್ಟರೆ ಅದರ ಎತ್ತರ, ಅಗಲ ಅಂದಾಜಾಗುವುದಿಲ್ಲ. ಮಧ್ಯಾಹ್ನದ ಸುಡುಬಿಡಿಸಿಲಿಗೆ, ಧೂಳಿಗೆ, ಸೆಕೆಗೆ, ಪ್ರಖರ ಬೆಳಕಿಗೆ ಸಿಕ್ಕದ ಅನುಭೂತಿ ಅದೇ ಜಾಗದಲ್ಲಿ, ಅದೇ ವ್ಯಾಪ್ತಿಯಲ್ಲಿ ಕಡು ಕತ್ತಲಿನಲ್ಲಿ, ಅಥವಾ ಹುಣ್ಣಿಮೆಯ ತಿಳಿ ಬೆಳಕಿನಲ್ಲಿ ಸಿಗುತ್ತದೆ ಎಂದು ಹೇಳಲು ಕವಿಗಳೋ, ಸಾಹಿತಿಗಳೋ ಆಗಬೇಕಾಗಿಲ್ಲ. ನಿಶ್ಯಬ್ಧವಾಗಿ ಪರಿಸ್ಥಿತಿಯನ್ನು ಅರಿತುಕೊಳ್ಳುವ ಸಹನೆ ಇದ್ದರೆ ಸಾಕು.

ಚೆಂದಕೆ ಮಾತನಾಡುವವರೆಲ್ಲ ಬುದ್ಧಿವಂತರೇ ಆಗಬೇಕಾಗಿಲ್ಲ, ಪರಿಣಾಮಕಾರಿಯಾಗಿ ಬರೆಯುವ ಎಲ್ಲರೂ ಚತುರಮತಿಗಳೇ ಹೌದು ಅಂತಲೋ, ಬರೆದಂತೆಯೇ ಬದುಕುತ್ತಾರೆ ಅಂತಲೂ ಆಗಬೇಕಾಗಿಲ್ಲ. ನಗು ನಗುತ್ತಾ ಅಭಿನಯಿಸುವವರು ಕರುಣಾಮಯಿಗಳು, ಪರೋಪಕಾರಿಗಳು, ಚಂದದ ಶ್ರೋತೃಗಳು ಅಂತಲೂ ಅರ್ಥ ಅಲ್ಲವೇ ಅಲ್ಲ. ಮಾತಿನಲ್ಲಿ, ಬರಹದಲ್ಲಿ, ಅಭಿನಯದಲ್ಲಿ ಅವರು ನುರಿತವರು ಅಂತ ಮಾತ್ರ ಆ ಹೊತ್ತಿಗೆ ವೇದ್ಯವಾಗುವ ಸತ್ಯ. ಕತ್ತಲಿನ ನೇಪಥ್ಯದ ಎದುರು ಕಾಣುವ ಬೆಳಕು ತೋರಿಸುವುದೂ ಅದನ್ನೇ. ಲಭ್ಯ ಬೆಳಕಿನಲ್ಲಿ ಸೆರೆಯಾದ ಫೋಟೋದ ಹಾಗೆ. ನಮಗೆ ಆ ಹೊತ್ತಿಗೆ, ಆ ಬೆಳಕಿಗೆ, ಆ ಮನಸ್ಥಿಗೆ ಹಾಗೆ ಕಂಡಿದೆ ಅಂತ ಮಾತ್ರ ಅರ್ಥ. ಹಾಗಂತ ನಮಗೆ ಕಾಣದೇ ಹೋದದ್ದು, ಕಾಣಲಾಗದೇ ಇದ್ದದ್ದು, ಕಂಡು ಗ್ರಹಿಸಲಾಗದೇ ಉಳಿದದ್ದು, ತಾನಾಗಿ ತೋರಿಸಿಕೊಳ್ಳದೇ ಬಾಕಿಯಾಗಿದ್ದು ಅವೆಲ್ಲ ಸುಳ್ಳು ಅಂತ ಅರ್ಥ ಅಲ್ಲ. ನಮಗೆ ನಿಲುಕಲಿಲ್ಲ, ಕಾಣಲಿಲ್ಲ, ಗೊತ್ತಾಗಲಿಲ್ಲ ಅಂತ ಮಾತ್ರ ಅರ್ಥ. ಬಹುವಾಗಿ ಕಾಣದೆ ಇದ್ದದ್ದಕ್ಕೆ ಸ್ವಲ್ಪ ಮಾತ್ರ ಕಂಡದ್ದನ್ನು ತಾಳೆ ಹಾಕಿ ಕಾಣದ್ದೆಲ್ಲ ಕಂಡದ್ದಕ್ಕೆ ಸಮ ಅಂತ ಅರ್ಥ ಮಾಡಿಕೊಂಡರೆ ಅದು ತಪ್ಪಾದೀತು...

ಒಂದಷ್ಟು ಕಲ್ಪನೆ, ಒಂದಷ್ಟು ಕುತೂಹಲ, ಒಂದಷ್ಟು ನಿರೀಕ್ಷೆಗಳ ಅನುಭೂತಿ ಕಟ್ಟಿಕೊಡುವ ಕತ್ತಲಿನ ಪರಿಧಿ ಬೆಳಕಿಗಿಂತಲೂ ಅಪಾರ. ಕಂಡದ್ದಕ್ಕಿಂತಲೂ ಕಾಣದ್ದೇ ಕಾಡುವುದು ಜಾಸ್ತಿ ಅನ್ನುವುದಕ್ಕೆ ಕತ್ತಲೆಯೇ ಉತ್ತರ ನೀಡುವ ರಾಯಭಾರಿ!

-ಕೃಷ್ಣಮೋಹನ ತಲೆಂಗಳ.

18.01.2022.

1 comment:

. said...

ಸೂಪರ್..
ಒಳ್ಳೆಯ ಬರಹ. ಕತ್ತಲಲ್ಲಿ ನಡೆದ ಅನೇಕ ಘಟನೆಗಳ ಮೇಲೆ ಬೆಳಕು ಬೀಳದೆ ಸಮಾಧಿ ಆದದ್ದೂ ಇದೆ.