ಪ್ರಶಸ್ತಿ, ಫಲಕ, ಪ್ರಚಾರ ಕಂಡಾಗ ಮಾತ್ರ ಪ್ರಕಟವಾಗುವ ಗೌರವ!

 ನಮ್ಮಷ್ಟಕ್ಕೇ ನಮಗೆ ಜ್ಞಾನೋದಯ ಆಗುವುದೇ ಇಲ್ಲ ಯಾಕೆ?



ಹಲವು ವರ್ಷಗಳ ಚಾಲನೆಯ ಅನುಭವ ಇದ್ದರೂ ಒಬ್ಬ ಚಾಲಕ ಅಥವಾ ಸವಾರನಿಗೆ ಆ ದಾರಿ ಅಪಾಯಕಾರಿ ಅಂತ ಅರಿವಿಗೆ ಬರುವುದು, ದಿಢೀರ್ ಜ್ಞಾನೋದಯ ಆಗುವುದು ಅಪಘಾತದ ವಲಯ, ನಿಧಾನವಾಗಿ ಚಲಿಸಿ ಎಂಬ ಬೋರ್ಡ್ ಕಂಡ ಮೇಲೆಯೇ!

ಇನ್ನೊಂದು ರೀತಿಯ ಉದಾಹರಣೆ ತಕ್ಕೊಳ್ಳಿ...:
ನಮ್ಮದೇ ಊರಿನಲ್ಲಿ ಎಲ್ಲರಿಗಿಂತ ಭಿನ್ನವಾಗಿ ಎಂತದ್ದೋ ಸಾಧನೆ ಮಾಡಿ, ಅವರಿವರಿಂದ ನಗೆಪಾಟಲಿಗೀಡಾಗಿ ಬದುಕಿದರೂ, ಯಾರತ್ರವೂ ಏನನ್ನೂ ಹೇಳದೆ ಇತರರಿಗೆ ಸ್ಪಷ್ಟವಾಗಿ ಕಾಣುವಂತೆ ವಿಶೇಷ ಕೆಲಸ ಮಾಡ್ತಾ ಇದ್ರೂ ಅವರು ದೊಡ್ಡ ಜನ ಅಂತ ನಮಗೆ ಗೊತ್ತಾಗುವುದು, ಅವರ ಜೊತೆ ಸೆಲ್ಫೀ ತೆಗೆಯಬೇಕು ಅಂತ ಅನ್ನಿಸುವುದು ಅವರಿಗೆ ಪ್ರಶಸ್ತಿ ಬಂದ ಮೇಲೆ, ಅವರ ಬಗ್ಗೆ ಟಿ.ವಿ.. ಪೇಪರುಗಳಲ್ಲಿ ಲೇಖನ, ವರದಿ ಬಂದ ಮೇಲೆಯೇ...!
ಸಾಧಾರಣವಾಗಿ ಒಂದು ವಿಶೇಷತೆ, ಒಂದು ಸಾತ್ವಿಕತೆ, ಒಂದು ಸ್ನೇಹಪರತೆ, ಸದ್ದಿಲ್ಲದೆ ಸಿಕ್ಕ ಉಪಕಾರ, ಪ್ರೋತ್ಸಾಹ  ಇವೆಲ್ಲ ನಮಗೆ ದೊಡ್ಡ ಸಂಗತಿಯೇ ಅಲ್ಲ ಅಂತ ಅನ್ನಿಸುವುದೇ ಜಾಸ್ತಿ. ನಮ್ಮ ಪಕ್ಕದಲ್ಲೇ ಇರುವವರನ್ನು ದೂರದ ಯಾರೋ ಗುರುತಿಸಿದಾಗ, ಯಾರೋ ವೇದಿಕೆಗೆ ಕರೆದಾಗ, ಯಾರೋ ಪ್ರಶಸ್ತಿ ಕೊಟ್ಟಾಗ, ಯಾರೋ ಹೊಗಳಿದಾಗ, ತಕ್ಷಣ ನಮ್ಮೊಳಗಿನ ಅಭಿಮಾನ ಪ್ರಜ್ಞೆ ಜಾಗೃತವಾಗುತ್ತದೆ... ಅಲ್ವ?

ಅದರ ಬದಲು ಒಂದು ಹುಳುಕು, ಒಂದು ತಪ್ಪು ಕಲ್ಪನೆ, ಒಂದು ಅಪಾರ್ಥ, ಒಂದು ಅಸಹಜತೆ ಕಂಡಾಗ ತುಂಬ ಬೇಗ ಅದು ಅರಿವಿಗೆ ಬರ್ತದೆ, ತುಂಬ ವೇಗವಾಗಿ ಅದಕ್ಕೆ ಪ್ರಚಾರ ಸಿಗ್ತದೆ, ತುಂಬ ಬೇಗ ನಾವು ಆಕ್ಷೇಪಿಸಲು, ಟೀಕಿಸಲು, ಖಂಡಿಸಲು ತೊಡಗುತ್ತೇವೆ. ಸದ್ದಿಲ್ಲದ ವಿಚಾರಗಳು ಸುದ್ದಿಯೂ ಆಗುವುದಿಲ್ಲ, ನಮ್ಮ ಮಂಡೆಗೆ ಅದರ ಮಹತ್ವ ತಾನಾಗಿಯೇ ಹೋಗುವುದೂ ಇಲ್ಲ.! ಖಂಡಿಸಲು, ಟೀಕಿಸಲು, ತಪ್ಪು ಹುಡುಕಲು ಹೊರಟಾಗ ನಮಗೆ ಅವರೊಳಗಿರುವ ಸಾತ್ವಿಕತೆಯೋ, ಸಾಧನೆಯೋ, ಅಸಾಮಾನ್ಯ ಪ್ರತಿಭೆಯೋ ಯಾವುದೂ ದೊಡ್ಡ ಸಂಗತಿ ಅಂತ ಅನ್ನಿಸುವುದಿಲ್ಲ. ಹಾಗನ್ನಿಸಬೇಕಾದರೆ ಅದಕ್ಕೆ ಮತ್ತೊಬ್ಬರ ಸರ್ಟಿಫಿಕೇಟ್ ಬೇಕು.

ಮದುವೆ ಸಮಾರಂಭದ ಹಿಂದಿನ ದಿನ ತರಕಾರಿ ಹೆಚ್ಚಲು ನೆರೆಹೊರೆಯವರು ಸೇರುವುದು ನಮ್ಮ ಕಡೆ ವಾಡಿಕೆ. ಬಂಧುಗಳು, ಅಕ್ಕಪಕ್ಕದವರೆಲ್ಲ ಸೇರಿ ಛತ್ರದಲ್ಲಿ ಕುಳಿತು ಮರುದಿನದ ಭೋಜನಕ್ಕಿರುವ ತರಕಾರಿಯನ್ನು ಹೆಚ್ಚುವ ಪದ್ಧತಿ ಈಗಲೂ ಇದೆ. ಆತಿಥೇಯರಿಗೆ ನೆರವಾದ ಹಾಗೂ ಆಯಿತು, ಆ ನೆಪದಲ್ಲಿ ಎಲ್ಲರೂ ಸೇರಿ ಒಂದು ಊಟ ಮಾಡಿ ಬಂದ ಹಾಗೂ ಆಯಿತು.
ಹಾಗೆ ತರಕಾರಿ ಹೆಚ್ಚಲು ಹೋದಾಗ ಕೆಲವರು ತಾವೇ ಮನೆಯಿಂದ ತರಕಾರಿ ಹೆಚ್ಚಲು ಬೇಕಾದ ಚೂರಿ ತರುತ್ತಾರೆ, ಕೆಲವೊಮ್ಮೆ ಆತಿಥೇಯರೇ ಬಂದವರಿಗೆ ತರಕಾರಿ ತುಂಡರಿಸಲು ಚೂರಿ ನೀಡುತ್ತಾರೆ. ಇತ್ತೀಚೆಗೆ ಒಂದು ಕಡೆ ನಾನು ತರಕಾರಿ ಹೆಚ್ಚಲು ಕುಳಿತಾಗ, ಪಕ್ಕದಲ್ಲಿ ಕುಳಿತವರು ತಾವು ಜೊತೆಗೆ ತಂದಿದ್ದ ಚೀಲದಿಂದ ಒಂದು ಚೂರಿ ಹಾಗೂ ಸಣ್ಣ ಮರದ ತುಂಡು (ತರಕಾರಿ ಹೆಚ್ಚಲು ಬಳಕೆಯಾಗುತ್ತದೆ) ತೆಗೆದು ನನಗೆ ಕೊಟ್ಟರು. ವಿಚಾರಿಸಿದಾಗ ಅವರು ಅಂತಹ 10-15 ಚೂರಿ ಹಾಗೂ ಮರದ ತುಂಡುಗಳನ್ನು ಇಂತಹ ಸಮಾರಂಭಕ್ಕೆ ತೆಗೆದುಕೊಂಡು ಹೋಗುತ್ತಾರಂತೆ, ತರಕಾರಿ ಹೆಚ್ಚಿದ ಬಳಿಕ ತಾವೇ ಅದನ್ನು ಸಂಗ್ರಹಿಸಿ ಮತ್ತೆ ಮನೆಹೆ ಕೊಂಡು ಹೋಗುತ್ತಾರಂತೆ. ಎಂತಹ ಸದ್ದಿಲ್ಲದ ಸೇವೆ ನೋಡಿ. ಆತಿಥೇಯರ ಹೊರೆ ಇದರಿಂದ ಎಷ್ಟು ಕಡಿಮೆಯಾಗುತ್ತದೆ ಅಲ್ಲವೇ... ಅವರು ಎಷ್ಟೋ ವರ್ಷದಿಂದ ಸದ್ದಿಲ್ಲದೆ ಇಂತಹ ಕಾರ್ಯ ಮಾಡುತ್ತಾ ಬಂದಿದ್ದಾರೆ.

 

ಅವರು ಮಾತ್ರವಲ್ಲ, ಅವರ ಹಾಗೆ ಇನ್ನೂ ಕೆಲವರೂ ಈ ಥರ ಸದ್ದಿಲ್ಲದೆ ಮಾಡುವ ಉಪಕಾರವನ್ನು ಗಮನಿಸುತ್ತಲೇ ಬಂದಿದ್ದೇನೆ. ಇದನ್ನು ಅವರು ಎಲ್ಲಿಯೂ, ಯಾರ ಬಳಿಯೂ ಹೇಳುವುದಿಲ್ಲ, ಫೇಸ್ ಬುಕ್ಕಿನಲ್ಲಿ ಬರೆದು ಹಾಕುವುದಿಲ್ಲ, ಸೆಲ್ಫೀ ತೆಗೆದು ಸ್ಟೇಟಸ್ಸಿಗೂ ಹಾಕುವುದಿಲ್ಲ. ಅವರು ಇಂತಹ ಸೇವೆ ಮಾಡಿದರು ಅಂತ ಅವರನ್ನು ಯಾರೂ ಕರೆದು ವೇದಿಕೆಯಲ್ಲಿ ಕೂರಿಸಿ ಹಾರ ಹಾಕಿ ನಾಲ್ಕು ಮಾತನ್ನೂ ಆಡುವುದಿಲ್ಲ....ಅವರ ಕೆಲಸ ಅಸಲಿಗೆ ಎಲ್ಲಿಯೂ ವೈರಲ್ಲೂ ಆಗುವುದಿಲ್ಲ! ಅವರಿಗೆ ಆ ನಿರೀಕ್ಷೆಯೂ ಇಲ್ಲ... ಹಾಗಾಗಿ ಅವರಿಗಿದು ನೋ ಲಾಸ್, ನೋ ಗೈನ್...


ಇದೊಂದು ಪುಟ್ಟ ಉದಾಹರಣೆ ಅಷ್ಟೇ... ಪರಾವಲಂಬಿಯಾಗಳಾಗಿಯೇ ಬೆಳೆಯುವ ನಾವು ಬದುಕಿನಲ್ಲಿ ಇಂತಹ ಎಷ್ಟೋ ಉಪಕಾರಗಳಿಗೆ ಋಣಿಗಳಾಗಿರುತ್ತೇವೆ. ಆದರೆ, ತುಂಬ ಮಂದಿಯ ಪ್ರೋತ್ಸಾಹ, ಆಧಾರ, ಆಸರೆಯನ್ನು ಕನಿಷ್ಠ ಸ್ಮರಿಸುವ ಸಂದರ್ಭವೂ ನಮಗೆ ಸಿಗುವುದಿಲ್ಲ. ಪ್ರತಿಯೊಂದನ್ನೂ ದಾಖಲೀಕರಣ ಮಾಡಿ, ಉಲ್ಲೇಖಿಸಿ, ಗುರುತಿಸಿ, ಬೆಲೆ ಕಟ್ಟಿ, ಸನ್ಮಾನಿಸುವುದಕ್ಕೂ ಬರುವುದಿಲ್ಲ.
ಅಷ್ಟು ಮಾತ್ರವಲ್ಲ, ತುಂಬ ಸಲ ತಾವಾಗಿ ನೀಡುವ ಸಲಹೆ, ಪುಕ್ಕಟೆಯಾಗಿ ಕೊಡುವ ನೆರವು, ಮಾರ್ಗದರ್ಶನ, ಪ್ರೋತ್ಸಾಹಗಳಿಗೆ ಬೆಲೆಯೇ ಇರುವುದಿಲ್ಲ ಬಿಡಿ. ಅಂಥವರು ಅವಹೇಳನ, ಸಂಶಯ, ತಿರಸ್ಕಾರ, ಕಡೆಗಣನೆಗೆ ಪಾತ್ರರಾಗುವುದನ್ನೂ ನೋಡುತ್ತೇವೆ. ಪುಕ್ಕಟೆಯಾಗಿ ಸಿಕ್ಕುವುದು TAKEN FOR GRANTED  ಇದ್ದ ಹಾಗೆ. ಸಲುಗೆ, ಉಡಾಫೆ, ಬೆಲೆ ಅರಿಯದೆ ಮಾಡುವ ಅಪಮಾನಗಳು ಇಂತಹ ಸಂದರ್ಭಗಳಿಗೆ ಸಾಕ್ಷಿಗಳಾಗುತ್ತವೆ.... ಆದರೂ ನಿರೀಕ್ಷೆಯೇ ಇಲ್ಲದೆ ಉಪಕಾರ ಮಾಡುವವರು ತಮ್ಮ ಕಾಯಕಕ್ಕೆ ಕಡೆಗಣನೆಯ ಬೇಸರದಿಂದ ತಿಲಾಂಜಲಿ ಇಡುವುದಿಲ್ಲ ಎಂಬುದು ಬೇರೆ ವಿಚಾರ.

ಹಾಜಬ್ಬ, ನಾಯ್ಕರ ಜೊತೆ ಸೆಲ್ಫೀ ತೆಗೆಯೋದು ಇವಾಗ ಅಲ್ವ
?!


ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಹರೇಕಳ ಹಾಜಬ್ಬ ಮತ್ತು ಪ್ರಶಸ್ತಿಗೆ ಪಾತ್ರರಾಗಲಿರುವ ಮಹಾಲಿಂಗ ನಾಯ್ಕ ಅವರನ್ನೇ ಉದಾಹರಣೆಯಾಗಿ ತಕೊಳ್ಳಿ. ಇವರು ಆರಂಭದಲ್ಲಿ ತಮ್ಮ ಕಾಯಕ ಶುರು ಮಾಡಿದಾಗ ಎಷ್ಟು ಮಂದಿ ಇವರಿಗೆ ಪ್ರೋತ್ಸಾಹ ನೀಡಿರಬಹುದು? ಎಷ್ಟು ಮಂದಿ ಇವರಿಗೆ ಹಣಕಾಸು ನೆರವು ಕೊಟ್ಟಿರಬಹುದು? ಎಷ್ಟು ಮಂದಿ ಕರೆದು ಬೆನ್ನು ತಟ್ಟಿರಬಹುದು?
ಅದೇ ದೊಡ್ಡ ದೊಡ್ಡ ಪ್ರಶಸ್ತಿಗಳು ಘೋಷಣೆಯಾದಾಗ ಅವರ ಜೊತೆ ಸೆಲ್ಫೀ ತೆಗೆಯುವುದೇನು, ಊರಿಡೀ ಅವರನ್ನು ಅಭಿನಂದಿಸಿ ಬ್ಯಾನರ್ ಹಾಕುವುದೇನು...? ನಮ್ಮೂರಿನ ಹೆಮ್ಮೆ ಅಂತ ಕರೆದುಕೊಳ್ಳುವುದೇನು?

ಸಂತೋಷ, ಸಂಭ್ರಮ, ಅವರ ಸಾಧನೆ ಜೊತೆಗೆ ನಮ್ಮೂರಿನವರೆಂಬ ಅಭಿಮಾನದ ನುಡಿಗಳು ತಪ್ಪಲ್ಲ, ಅದು ಇರಬೇಕಾದ್ದೆ. ಆದರೆ ನನ್ನನ್ನು ಕಾಡುವ ಪ್ರಶ್ನೆ ನಮ್ಮ ಪಕ್ಕದಲ್ಲೇ ಓಡಾಡುವ ವ್ಯಕ್ತಿ ಸಾಧಕನೆಂದೋ, ಅವರ ವ್ಯಕ್ತಿತ್ವ ವಿರಳಾತೀತ ವಿರಳವೆಂದೋ, ಅವರು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಬೇಕಾದವರೋ ಎಂದೋ ನಮಗೇ ಅರಿವಾಗಬೇಕಾದರೆ ಅವರಿಗೆ ಪ್ರಶಸ್ತಿಯೇ ಬಂದಾಗಬೇಕ?” ಮಾಧ್ಯಮಗಳಲ್ಲಿ ಅವರು ಕುರಿತು ವರದಿಗಳ ಬಂದಾಗಬೇಕ...? ದಿನಾ ಅವರನ್ನು ನೋಡುತ್ತಾ ಬಂದ ದಿನಗಳಲ್ಲಿ ನಾವ್ಯಾಕೆ ಅವರಿಗೆ ಪ್ರಚಾರ ಸಿಗುವ ಮೊದಲೇ ಅವರ ಹೆಗಲಿಗೆ ಕೈ ಹಾಕಿ ಸೆಲ್ಫೀ ತೆಗೆದು ಪ್ರಚಾರ ನೀಡಲಿಲ್ಲ? ಇಂಥವರು ನಮ್ಮೂರಿನ ಹೆಮ್ಮೆ ಅಂತ ಯಾಕೆ ಬ್ಯಾನರ್ ಬರೆಸಿ ಹಾಕಲಿಲ್ಲ...?!


ಯೋಚಿಸಿ ನೋಡಿ...ವಿಶೇಷತೆ, ಭಿನ್ನತೆಗಳು ಪ್ರಶಸ್ತಿ, ಪ್ರಚಾರ ಅಥವಾ ಫಲಕ ಕಾಣದೆ ತನ್ನಷ್ಟಕ್ಕೇ ನಮಗೆ ಗೊತ್ತಾಗುವುದಿಲ್ಲ ಯಾಕೆ? ಸಾಧನೆಗೆ, ಶ್ರೇಷ್ಠತೆಯನ್ನು ಅಳೆಯುವುದಕ್ಕೆ ಮಾನದಂಡ ಯಾವುದು


-ಕೃಷ್ಣಮೋಹನ ತಲೆಂಗಳ.

 

1 comment:

. said...

ನಿಜ, ಬಹುಪಾಲು ಸಾಧಕರನ್ನು ನಾವು ಗುರುತಿಸುವುದು ಅವರಿದ್ದುಗೆ ಪ್ರಶಸ್ತಿ ಬಂದ ನಂತರವೇ. ಆದರೆ ಹಾಜಬ್ಬರ ಬಗ್ಗೆ ಮೊದಲು, ಬಾಳೆ ಪುಣೆ ಅವರು ಹೊಸದಿಗಂತ ಪತ್ರಿಕೆಯಲ್ಲಿ ಬರೆದಿದ್ದರು. ಅವರಿಗೆ ಸಾಕಷ್ಟು ಪ್ರಚಾರ ಕೊಟ್ಟ ದ್ದು ಹೊಸದಿಗಂತ ಪತ್ರಿಕೆ.