ಚಪ್ಪಲಿ ಕಿತ್ಹೋಗಿ ತುಂಬ ದಿನ ಆದ್ರೂ ಗೊತ್ತಾಗುವುದಿಲ್ಲ ಯಾಕೆ?!

ಧರಿಸಿದ ಚಪ್ಪಲಿಯ ಉಂಗುಷ್ಟದ ಬದಿ ತುಂಡಾಗಿ ತುಂಬ ದಿನ ಕಳೆದಿದೆ. ರಿಪೇರಿಗೆ ಪುರುಸೊತ್ತಿಲ್ಲ, ಹಾಗಂತ ಚಪ್ಪಲಿ ಹಾಕುವುದಕ್ಕೇನೂ ಅಡ್ಡಿ ಇಲ್ಲ. ವಾರಗಳು ಕಳೆದು ಉಂಗುಷ್ಠ ಪೂರ್ತಿ ಕಿತ್ತೋಗಿ ಇನ್ನು ನಡೆಯಲು ಸಾಧ್ಯವೇ ಇಲ್ಲ ಅಂತಾದಾಗ, ಚಪ್ಪಲಿ ಬದಲಾಯಿಸಲು ಹೊರಡುತ್ತೇವೆ. ಉಂಗುಷ್ಠ ನಿರ್ದಿಷ್ಟವಾಗಿ ಯಾವಾಗ ತುಂಡಾಯ್ತು, ಯಾಕೆ ನಮಗದನ್ನು ರಿಪೇರಿ ಮಾಡಿಸಲು ಪುರುಸೊತ್ತಾಗಲಿಲ್ಲ ಅಂತ ಎಷ್ಟು ಯೋಚಿಸಿದರೂ ಕೆಲವೊಮ್ಮೆ ಕಾರಣ ಸಿಕ್ಕುವುದಿಲ್ಲ ಅಲ್ವ...? !!!

ವಾಹನದ ಹೆಡ್ ಲೈಟು ಗಾಡಿ ಖರೀದಿಸುವಾಗ ತುಂಬ ಚಂದವೇ ಇತ್ತು. ಹೋಗ್ತಾ ಹೋಗ್ತಾ ಮಳೆ ನೀರು, ಮಂಜು ಬಿದ್ದು ಬಿದ್ದು ಹೆಡ್ ಲೈಡ್ ಒಳಗೆಲ್ಲೋ ಮೂಲೆಯಲ್ಲಿ ಹಸಿರು ಬಣ್ಣದ ಹಾವಸೆಯ ಛಾಯೆ ಕಂಡಿತು. ಯಾವತ್ತೋ ಒಮ್ಮೆ ನೀವದನ್ನು ನೋಡಿರುತ್ತೀರಿ. ಆದರೆ ಅದೇನು ಮಹಾ ಅಂತ ಬಿಟ್ ಬಿಡ್ತೀರಿ. ಮತ್ತೂ ಒಂದಷ್ಟು ವಾರ ಕಳೆದ ಮೇಲೆ ಹೆಡ್ ಲೈಟ್ ಎದುರಿನ ಗಾಜಿನ ಅರ್ಧ ಭಾಗ ಹಸಿರು ಹಸಿರಾಗಿರುವುದು ಒಂದು ದಿನ ದಿಢೀರನೆ ನಿಮ್ಮ ಗಮನಕ್ಕೆ ಬರ್ತದೆ. ಮಾತ್ರವಲ್ಲ, ಮತ್ತೂ ಕೂಲಕಂಷವಾಗಿ ನೋಡಿದಾಗ ಅಲ್ಲಲ್ಲಿ ಬೋಲ್ಟುಗಳಿಗೆ ತುಕ್ಕು ಹಿಡಿದಿರುವುದು, ಚೈನ್ ಲೂಸಾಗಿರುವುದು, ಬಾಕ್ಸಿನ ಬದಿ ಸ್ಕ್ರಾಚ್ ಆಗಿರುವುದು, ನಂಬರ್ ಪ್ಲೇಟಿನ ಅಂಚು ನಜ್ಜುಗುಜ್ಜಾಗಿರುವುದೆಲ್ಲ ಕಾಣಿಸುತ್ತದೆ...! ಎಲ್ಲ ನೋಡುವಾಗ ಮಂಡೆ ಬಿಸಿಯಾಗ್ತದೆ. ಆದರೂ ನಾನು ದಿನಾ ಇದೇ ಗಾಡಿಯಲ್ಲಿ ಓಡಾಡ್ತಾ ಇದ್ದೆ, ದಿನಾ ನೋಡ್ತಾ ಇದ್ದೆ (ಹಾಗಂತ ಅಂದುಕೊಂಡಿದ್ದೇನೆ), ಆದರೂ ಯಾಕೆ ಇವೆಲ್ಲ ಕಾಣಲಿಲ್ಲ ಅಂತ ಪರದಾಡಿದರೆ ಅದಕ್ಕೆ ಇಂಥದ್ದೇ ಅಂತ ಉತ್ತರ ಇಲ್ಲ. ತುಂಬ ಸಲ ರಿಪೇರಿಗೆ ಗಾಡಿ ಕೊಂಡೋದಾಗ... ಬ್ರೇಕ್ ಕೇಬಲ್ ತುಂಡಾಯರ ನನ ಒಂತೇ ಇತ್ತಿನಿ... ಈರ್ ಇನಿ ಬತ್ತ್ ನೆಟ್ಟ ಆಂಡ್, ಇಜ್ಜಿಡ ಗಾಡಿ ಓಡೆಗಾಂಡ್ಲ ಪೋದು ಬೂರ್ದು... ಅಂತ ರಿಪೇರಿಯವ ಹೇಳಿದಾಗ ಸತ್ತು ಬದುಕಿದ ಅನುಭವ ಆಗಿರುವುದಿಲ್ಲ.... ನೆನಪು ಮಾಡಿಕೊಳ್ಳಿಯಂತೆ!

...

ಸದ್ದಿಲ್ಲದೆ ಆವರಿಸುವ ರೋಗಗಳು, ನಿಧಾ.....ನವಾಗಿ ಕುಂದುವ ಕಣ್ಣಿನ ದೃಷ್ಟಿ, ಎದುರೆದುರಿಗೇ ಬಿಳಿಯಾ.....ಗ್ತಾ ಬರುವ ತಲೆ ಕೂದಲು, ಅರಿವೇ ಇಲ್ಲದೆ ಬೆಳೆಯುವ ಹೊಟ್ಟೆಯ ಗಾತ್ರ... ಹೀಗೆ ಜೊತೆ ಜೊತೆಗೇ ಇದ್ದು, ಬದಲಾಗುವ ಕೆಲವೊಂದು, ದಿನಾ ನೋಡ್ತೇವೆ ಅಂದ್ಕೊಂಡ್ರು ಗಮನಕ್ಕೆ ಬರುವುದೇ ಇಲ್ಲ. ನಮ್ಮ ಬುದ್ಧಿವಂತಿಕೆಗೆ, ನಮ್ಮ ಅತಿ ಆತ್ಮವಿಶ್ವಾಸಕ್ಕೆ ಸವಾಲು ಹಾಕುವಂಥ ವಿಚಾರಗಳಿಗೆ ದಿನಾ ನೋಡ್ತೇವೆ ಎಂಬ ಕ್ಷಮೆ  ಇರುವುದಿಲ್ಲ. ಮತ್ತು, ಅಂತಹ ಬೆಳವಣಿಗೆಗಳು ತಡವಾಗಿ ನಮ್ಮ ಜ್ಞಾನೋದಯಕ್ಕೆ ಕಾರಣವಾಗಲು ನಮ್ಮ ಕಡೆಗಣನೆಯೇ ಕಾರಣ ಎಂಬ ಭಯಂಕರ ಸತ್ಯವನ್ನೂ ನಾವು ಒಪ್ಪಲು ತಯಾರಿರುವುದಿಲ್ಲ...

ಒಂದು ರಾತ್ರಿ ಬೆಳಗಾಗುವದರೊಳಗೆ ಯಾರ ಗಡ್ಡವೂ ಬಿಳಿ ಆಗುವುದಿಲ್ಲ, ಬೆಳಗ್ಗೆಯಿಂದ ಸಂಜೆಯೊಳಗೆ ನಿಮ್ಮ ಹೊಟ್ಟೆ ದಿಢೀರನೆ ಮುಂದೆ ಬರಲಾರದು, ವಾರದ ಅಂತರದಲ್ಲಿ ನಿಮ್ಮ ದೃಷ್ಟಿ ಮಂದ ಆಗುವುದಿಲ್ಲ, ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲು, ಬಿಪಿ, ಶುಗರ್ ಯಾವುದೂ ಕೂಡಾ ಇಂದು, ನಾಳೆಯ ಅಂತರದಲ್ಲಿ, ಗಂಟೆಗಳ ಲೆಕ್ಕದಲ್ಲಿ ನಿನ್ನೆ, ಮೊನ್ನೆ ಆಕ್ರಮಣವಾಗಿರುವ ಬದಲಾವಣೆಗಳಲ್ಲ. ಅವು ತಮ್ಮ ಪಾಡಿಗೆ ನಿಧಾ......ನವಾಗಿ ಬೆಳೆಯುತ್ತಾ ಬಂದಿರುತ್ತವೆ, ನಮಗೇ ಗೊತ್ತಿಲ್ಲದೆ ನಮ್ಮೊಳಗೆ ಆಕ್ರಮಣ ಮಾಡಿರುತ್ತವೆ... ನಮ್ಮ ಅರಿವಿಗೆ ಬಂದಿರುವುದಿಲ್ಲ ಎಂಬುದು ಮಾತ್ರ ಸತ್ಯ. ಅದಕ್ಕೇ ಅಲ್ವ... ಇಂತಹ ರೋಗ ಇಂತಹ ಸ್ಟೇಜಿಗೆ ಬಂದಿದೆ, ಮೊದಲೇ ಬಂದಿದ್ದರೆ ಏನಾದರೂ ಮಾಡಬಹುದಿತ್ತು ಎಂಬ ಷರಾ ಸಿಕ್ಕುವುದು ಹಾಗೂ ರೋಗಿಯ ಕಡೆಯವರು ಪರಿತಪಿಸುವುದು... ಮನುಷ್ಯ ಅಷ್ಟೂ ಜಾಗೃತ, ಮುಂದಾಲೋಚನೆಯ, ಅಚ್ಚುಕಟ್ಟಿನ ಜೀವಿ ಎಂದಾಗಿದ್ದರೆ ಬಹಳಷ್ಟು ರೋಗಗಳು, ಬಹಳಷ್ಟು ಅಸಂಬದ್ಧಗಳು, ಬಹಳಷ್ಟು ನಷ್ಟಗಳು, ಲೋಪಗಳು ಸಂಭವಿಸುತ್ತಲೇ ಇರಲ್ಲಿಲ್ಲವೇನೋ...

ಕಾಲಬುಡಕ್ಕೆ ಬರುವ ವರೆಗೂ ಕೆಲವೊಂದನ್ನು ಗಂಭೀರವಾಗಿ ತಕ್ಕೊಳ್ಳದೇ ಇರುವುದು, ಕೆಲವೊಂದನ್ನು ಕಡೆಗಣಿಸುತ್ತಲೇ ಬರುವುದು, ಕೆಲವೊಂದರ ತೀವ್ರತೆಯ ಅಂದಾಜು ಮಾಡಲಾಗದೇ ಹೋಗುವುದು, ಕೆಲವು ಬದಲಾವಣೆಗಳು ದಿನೇ ದಿನೇ ಆಗ್ತಾ ಹೋದರೂ ಅದು ಬದಲಾವಣೆ ಅಂತಲೇ ಗ್ರಹಿಸಲಾಗದೋ ಹೋಗುವುದು ನಮ್ಮದೇ ನ್ಯೂನತೆ, ದೌರ್ಬಲ್ಯ ಅಥವಾ ಮಿತಿ ಅಂತಲೂ ಕರೆಯಬಹುದು.

....

ವಯಸ್ಸಾಗ್ತಾ ಬಂದ ಹಾಗೆ ಆಗುವ ಬಹಳಷ್ಟು ಬದಲಾವಣೆಗಳು ವಯೋಸಹಜ ಅಂತ ಗೊತ್ತಿದ್ದರೂ ಮನಸ್ಸು ಅದನ್ನು ಸ್ವೀಕರಿಸಲು ರೆಡಿ ಇರುವುದಿಲ್ಲ. ಬಿಳಿಯಾಗುವ ಕೂದಲು, ಸುಕ್ಕುಕಟ್ಟುವ ಚರ್ಮ, ಆಕ್ರಮಿಸುವ ಕನ್ನಡಕ, ಬಿಪಿಗೆ ಮಾತ್ರೆ, ಕೈಕೊಡುವ ಕಾಲು, ಕುಂದುವ ನೆನಪು ಶಕ್ತಿ... ಹೀಗೆ ನಾವು ಮೊದಲಿನಂತಿಲ್ಲ ಅಂತ ಗೊತ್ತಾಗುವಾಗಲೇ ನಮಗೆ ಬಹಳಷ್ಟುವರ್ಷ ದಾಟಿರುತ್ತದೆ. ಕೆಲವನ್ನು ಪರಿಸ್ಥಿತಿ ಹಾಗೂ ಸಂದರ್ಭಗಳು ನೆನಪು ಮಾಡಿಕೊಟ್ಟರೆ, ಕೆಲವನ್ನು ಅನುಭವಗಳು ಕಟ್ಟಿಕೊಡುತ್ತವೆ... ಅಲ್ವ?

.....

 

ದಿನಾ ನೀವು ಹೋಗುವ ಬಸ್ಸನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ... ಅದರ ಕನ್ನಡಿಯಲ್ಲಿ ಅಕ್ಷರಗಳು ಮಾಸುತ್ತಾ ಬರುವುದು, ಸೀಟಿನ ಮೂಲೆಯಲ್ಲಿ ಹಿಡಿದ ಜಿಡ್ಡು ದಪ್ಪವಾಗ್ತಾ ಹೋಗುವುದು, ಕಿಟಕಿ ಪಕ್ಕದ ಕಂಬಿಯ ಬೋಲ್ಟು ಲೂಸಾಗಿ, ಮುಂದೊಂದು ದಿನ ಅದು ಕಳಚಿ ಕಂಬಿಯೇ ನೇತಾಡುವುದು, ಎಂಜಿನ್ ಬಾಕ್ಸ್ ಮೇಲಿನ ಕವರ್ ಹರಿಯುತ್ತಿರುವುದು... ಇವನ್ನೆಲ್ಲ ನೀವು ಪ್ರತಿ ದಿನ ಸೂಕ್ಷ್ಮವಾಗಿ ಗಮನಿಸ್ತಲೇ ಇರ್ತೀರ...ಇಲ್ವಲ್ಲ...? ಯಾವತ್ತೋ ಒಂದು ದಿನ ಸ್ವಲ್ಪ ಜಾಗೃತರಾಗಿ ನೋಡಿದಾಗ ಅವೆಲ್ಲ ಒಟ್ಟೊಟ್ಟಿಗೆ ಕಾಣಿಸಬಹುದೇನೋ.. ಯಾಕೆ ಅಂದರೆ ನಾವಿರುವುದೇ ಹಾಗೆ. ನಮಗೆ ಅತ್ಯಂತ ಅಗತ್ಯ ಇರುವುದನ್ನು, ಅನಿವಾರ್ಯವಾದ್ದನ್ನು ಮಾತ್ರ ಆ ಕ್ಷಣಕ್ಕೆ ಗಮನಿಸ್ತೇವೆ... ತುಂಬ ಸರಳ.

 

ಅಷ್ಟೇ ಯಾಕೆ, ನಿಮ್ಮದೇ ಅಂಗಿಯ ಬಟನ್ ಕಿತ್ತೋಗಿರುವುದು, ಪ್ಯಾಂಟಿನ ಬಣ್ಣ ಮಾಸುತ್ತಾ ಬಂದಿರುವುದು, ಪ್ಯಾಂಟಿನ ಸೊಂಟದ ಭಾಗ ಬಿಗಿಯಾಗುವುದು ಇವೆಲ್ಲ ದಿನಾ ದಿನಾ ಗೊತ್ತಾಗ್ತದ? ಎದೆಯಲ್ಲಿ ಏನೋ ಸಣ್ಣಕೆ ನೋವು, ಕಣ್ಣಿನಲ್ಲಿ ಉರಿ, ಎಷ್ಟು ಯೋಚಿಸಿದರೂ ಕೆಲವೊಂದು ವಿಚಾರ ನೆನಪಿಗೇ ಬಾರದಿರುವುದು, ಸ್ವಲ್ಪ ನಡೆದಾಗಲೇ ಮೊಣಕಾಲು ಎಳೆದಂತಾಗುವುದು... ಇವೆಲ್ಲದರ ಬಗ್ಗೆ ಈ ವ್ಯತ್ಸಾಗಳು ಆದ ಘಳಿಗೆಯಿಂದಲೇ ನೀವು ಜಾಗೃತರಾಗ್ತೀರ? ಡಾಕ್ಟ್ರ ಹತ್ರ ಓಡ್ತೀರ, ಹೊಸ ಪ್ಯಾಂಟ್ ತಕ್ಷಣ ತಗೊಳ್ತೀರ?  ಇಲ್ವಲ್ಲ... It will take its own time  ಅಲ್ವ?

 

ಮನೆಯ ಯಾವುದೋ ಭಾಗವನ್ನು ಸ್ವಚ್ಛ ಮಾಡಬೇಕು ಅಂದುಕೊಂಡಿರುವುದು, ಯಾವುದೋ ಸಿನಿಮಾಗೆ ಟಾಕೀಸಿಗೆ ಹೋಗಿ ನೋಡಬೇಕು ಅಂದುಕೊಳ್ಳುವುದು, ಒಂದಷ್ಟು ದಿನ ರಜಾ ಹಾಕಿ ಉತ್ತರ ಭಾರತಕ್ಕೆ ಪ್ರವಾಸ ಹೋಗಬೇಕು ಅಂತ ಪ್ಲಾನ್ ಮಾಡುವುದು, ಪೆಟ್ಟಿಗೆಯಲ್ಲಿರುವ ಹಳೆ ಪುಸ್ತಕಗಳನ್ನು ಒಮ್ಮೆ ಹೊರ ತೆಗೆದು ಚೆಂದಕೆ ಜೋಡಿಸಬೇಕು ಅಂದುಕೊಳ್ಳುವುದು, ಈ ತಿಂಗಳಿನಿಂದ ಎಲ್ಲ ಖರ್ಚು  ವೆಚ್ಚಗಳನ್ನು ನೀಟಾಗಿ ಬರೆದಿಡ್ತೇನೆ ಅಂದುಕೊಳ್ಳುವುದು, ಈ ಹೊಸ ವರ್ಷದಿಂದ ನಾನು ಭಯಂಕರ ಬದಲಾಗ್ತೇನೆ ಅಂತ ಕನಸು ಕಾಣುವುದು... ಈ ಪೈಕಿ ಎಷ್ಟು ನಿರ್ಧಾರಗಳನ್ನು ನೀವು ಕೈಗೊಂಡು ವರ್ಷಗಳೇ ಕಳೆದವು ಅಂತ ಯೋಚಿಸಿಯಂತೆ... ನಿಮಗೇ ಆಶ್ಚರ್ಯ ಆದೀತು. ಕೆಲವೊಂದಕ್ಕೆ ಮುಹೂರ್ತ ಬರುವುದೇ ಇಲ್ಲ. ಕೆಲವೊಂದನ್ನು ನಾವು ಗಂಭೀರವಾಗಿ ತೆಗೆದುಕೊಂಡಿರುವುದೇ ಇಲ್ಲ. ಇನ್ನು ಕೆಲವು ಆಯಾ ಅನಿವಾರ್ಯತೆಗೆ ಸಿಲುಕುವ ವರೆಗೆ ನಮಗೂ ಅದು ಮಹತ್ವದ್ದು ಅಂತ ಅನ್ನಿಸಿರುವುದೇ ಇಲ್ಲ...

ಪರಿಸ್ಥಿತಿ ಹಾಗೂ ಮನಃಸ್ಥಿತಿ ಎರಡೂ ಸಮ್ಮಿಳಿತವಾಗಿ ಸಾಗುವ ಬದುಕಿನಲ್ಲಿ ಕೆಲವು ನಿರ್ಧಾರ, ಕೆಲವು ಬದಲಾವಣೆ, ಕೆಲವು ವ್ಯತ್ಯಾಸ ಇವುಗಳಿಗೆ ತಕ್ಷಣಕ್ಕೆ ಒಗ್ಗಿಕೊಳ್ಳಲು, ಸಮಯ ನೀಡಲು ಅಥವಾ ಸ್ವೀಕರಿಸಲು ಆಗುವುದೇ ಇಲ್ಲ. ಭಯಂಕರ ಶಿಸ್ತು, ಭಯಂಕರ ಇಚ್ಛಾಶಕ್ತಿ ಅಥವಾ ಭಯಂಕರ ದೃಢನಿಶ್ಚಯ ಇರುವ ವ್ಯಕ್ತಿಗಳು ಹಾಗೆ ಮಾಡಬಹುದೇನೋ... ಅಂತಹ ದಿನಚರಿಯಂತಹ ಬದುಕು ಇದ್ದು ಎಲ್ಲವೂ ಆಯಾ ಕಾಲಕ್ಕೆ ತಕ್ಕ ಹಾಗೆ ಸ್ವೀಕರಿಸಲ್ಪಟ್ಟು, ಬದಲಾವಣೆಗಳಾದರೂ ಅದೊಂಥರ ಚೌಕಟ್ಟಿನ ಬದುಕಾಗಿ ಬಿಟ್ಟೀತೇನೋ ಎನ್ನುವ ಸಂಶಯವೂ ಇದೆ.

ಕೆಲವೊಂದು ಅಸಹಜತೆಗಳು, ಕೆಲವೊಂದು ಅಜ್ಡಸ್ಟ್ ಮೆಂಟುಗಳು, ಕೆಲವೊಂದು ಕಳೆದುಕೊಳ್ಳುವುದು, ಕೆಲವನ್ನು ಪಡೆಯದೇ ಇರುವುದು, ಕೆಲವನ್ನು ನೋಡದೇ ಇರಲಿಕ್ಕಾಗುವುದು, ಕೆಲವನ್ನು ಮರೆತುಬಿಡಬೇಕಾಗುವುದು, ಕೆಲವನ್ನು ನಿರೀಕ್ಷಿಸದೇ ಇರಲು ಸಾಧ್ಯವಾಗುವುದು, ನಿರೀಕ್ಷಿಸಿದರೂ ಅದರ ಮಿತಿಗಳ ಅರಿವು ಇರುವುದು, ಇರಿಸಲು ಸಾಧ್ಯಾವಾಗುವುದೇ ಸಾಮಾನ್ಯ ವ್ಯಕ್ತಿಯ ಬದುಕು. ಟಿಪಿಕಲ್ ಜೀವನ ಅಂದರೆ ಇದುವೇ. ಇದರಾಚಿನ ಶಿಸ್ತಿನ ಅಥವಾ ಬರೆದಿಟ್ಟಂಥ ಬದುಕು ಅದು ಮಾದರಿ ಬದುಕಾದೀತೇ ಹೊರತು ಅದರಲ್ಲಿ ಬದಲಾವಣೆಗಳೇ ಇರಲಿಕ್ಕಿಲ್ಲ.... ಊಹಿಸಿ, ಬರೆದಿಟ್ಟು ಅಥವಾ ಪ್ರತಿಜ್ಞೆ ಸ್ವೀಕರಿಸಿ ನಡೆಸುವ ಬದುಕಿನಲ್ಲಿ ಅಚ್ಚರಿಗಳು, ವ್ಯತ್ಯಾಸಗಳು, ಬೆಳವಣಿಗಗಳೇ ಇಲ್ಲದಂತಾಗಿ ಬದುಕು ನೀರಸವಾದೀತು. ಆದರ್ಶಗಳನ್ನೇ ಪಾಲಿಸುತ್ತಾ ಬದುಕುವುದೇ ಎಲ್ಲರ ಗುರಿಯಾಗಿದ್ದರೆ ಸುತ್ತಮುತ್ತ ಇಷ್ಟೊಂದು ವೈವಿಧ್ಯಮಯ ಮನುಷ್ಯರನ್ನೇ ನೋಡಲು ಸಾಧ್ಯವಾಗ್ತಾ ಇರಲಿಲ್ಲ ಅಲ್ವ? ಎಲ್ಲರೂ ಗೌತಮ ಬುದ್ಧ, ಸಾಮ್ರಾಟ್ ಅಶೋಕ, ಗಾಂಧೀಜಿಯವರಂತೆಯೇ ಬದುಕಲು ಸಾಧ್ಯವಾಗಿದ್ದರೆ ಜಗತ್ತು ಬೇರಯದೇ ಥರ ಇರ್ತಾ ಇತ್ತು.

ಒಂದಷ್ಟು ಮರೆವು, ಒಂದಷ್ಟು ನಿರ್ಲಕ್ಷ್ಯ, ಒಂದಷ್ಟು ಕಳೆದುಕೊಳ್ಳುವಿಕೆ, ಒಂದಷ್ಟು ಹೊಂದಾಣಿಕೆ ಬೇಕೆಂದೋ, ಬೇಕಾಗಿಲ್ಲದೆಯೋ ಇರುವುದೇ ಬದುಕು. ಅದು ಆಯಾಚಿತವಲ್ಲ, ಉದ್ದೇಶಪೂರ್ವಕವೂ ಅಲ್ಲ. ಅದನ್ನು ವಿಮರ್ಶೆ ಮಾಡಲು ಹೊರಟರೆ ಮಾತ್ರ ಹಾಗನ್ನಿಸುವುದು ಹೊರತು.... ಸ್ವಭಾವಗಳನ್ನು ತಮ್ಮಷ್ಟಕೇ ಇರಲು ಬಿಟ್ಟರೆ ಅವು ದೊಡ್ಡ ಲೋಪವಾಗಿ ನಮಗೆ ಕಾಣುವುದಿಲ್ಲ....

ಹೋಲಿಸಲು ಹೊರಟಾಗ, ವಿಮರ್ಶೆಗೆ ಇಳಿದಾಗ, ಭಯಂಕರ ಗಂಭೀರವಾಗಿ ನಮ್ಮನ್ನು ನಾವು ತಿದ್ದಲು ಹೊರಟಾಗ ನಾವು ಮೂರ್ಖರೆಂದೋ, ಕಳೆದುಕೊಂಡವರೆಂದೋ, ಅಪ್ರಸ್ತುತರೆಂದೋ, ಅಸಮಕಾಲೀನರೆಂದೋ, ದುರ್ಬಲರೆಂದೋ ಬೇರೆಯವರ ಜೊತೆ ಹೋಲಿಸಿದಾಗ ನಮಗೆ ಜ್ಞಾನೋದಯವಾಗುವುದು ಅಷ್ಟೇ. ನಮ್ಮಷ್ಟಕ್ಕೇ ನಾವಿದ್ದರೆ ಅಂತಹ ತೀರ್ಪುಗಳು ಸಿಕ್ಕುವುದಿಲ್ಲ. ಹಾಗಂತ ಪ್ರಾಪಂಚಿಕ ಜ್ಞಾನ ಇರಬಾರದೆಂದೋ, ವ್ಯವಸ್ಥೆಯಿಂದ ಒಳ್ಳೆಯದನ್ನು ಕಲಿಯಬಾರದೆಂದೋ, ನಮ್ಮ ದೌರ್ಬಲ್ಯಗಳನ್ನು ಸರಿಪಡಿಸಿ ಬದುಕಬಾರದೆಂದೋ ಅರ್ಥ ಅಲ್ಲ...

ಸಿಕ್ಕಿದ್ದರ ಜೊತೆಗೆ ದಕ್ಕಿದ್ದರ ನಡುವಿನ ಬದುಕಿನಲ್ಲಿ ಕಂಡೂ ಕಂಡೂ ಅರಿವಿಗೆ ಬಾರದೇ ಹೋಗುವ ಬದಲಾವಣೆಗಳು, ಅವುಗಳು ಏಕಾಏಕಿ ದೃಷ್ಟಿಗೋಚರವಾದಾಗ ಅಥವಾ ಬ್ಲಡ್ ಟೆಸ್ಟ್ ರಿಪೋರ್ಟಿನ ಹಾಗೆ ಸ್ಪಷ್ಟವಾಗಿ ಕಂಡುಬಂದಾಗ, ಯಾಕ್ಹೀಗಾಯ್ತು ಅಂತ ಕಾರಣಗಳನ್ನು ಹುಡುಕುತ್ತಾ ಹೋಗ್ತೇವಲ್ವ...? ಇಂತಹ ಬಹುತೇಕ ತಡವಾದ ಜ್ಞಾನೋದಯಗಳಿಗೆ ನಾವೇ ಕಾರಣರು ಎಂಬುದು ನಮಗೆ ತಡವಾಗಿ ಗೊತ್ತಾದರೂ, ಮತ್ತೊಬ್ಬನ ಬದುಕಿನಲ್ಲಿ ಅಂತಹ ಜ್ಞಾನೋದಯವಾಗುವುದೂ ಸ್ವತಃ ಅವನಿಗೂ ಅಂಥದ್ದೇ ಅನುಭವ ಆದ ಬಳಿಕ ಹೊರತು ಕಂಡು, ನೋಡಿ ಕಲಿತು ಲೋಕ ಉದ್ಧಾರವಾಗುವುದು ಅಷ್ಟರಲ್ಲೇ ಇದೆ. ಬಹಳಷ್ಟು ಸಲ ಅದು ಅಸಾಧ್ಯ ಕೂಡಾ!

-ಕೃಷ್ಣಮೋಹನ ತಲೆಂಗಳ.

No comments: