ಹಾಜಬ್ಬರ ಮೇಲಿನ ಅಭಿಮಾನ ಅವರ ಬದುಕಿಗೂ ನೆರವಾಗಲಿ...!

 


ಇತ್ತೀಚೆಗಷ್ಟೇ ದೇಶದ ನಾಲ್ಕನೇ ಸರ್ವೋತೃಷ್ಟ ಗೌರವ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದವರು ಅಕ್ಷರ ಸಂತ ಹರೇಕಳ ಹಾಜಬ್ಬ ಅವರು. ಮಂಗಳೂರು ಹೊರವಲಯದ ಹರೇಕಳ ಎಂಬ ಪುಟ್ಟ ಊರಿನಲ್ಲಿ, ಕಿತ್ತಳೆ ಮಾರಿ ಸರ್ಕಾರಿ ಶಾಲೆ ಶುರು ಮಾಡಿ, ಇಂದಿಗೂ ಶಾಲೆಯನ್ನು ವಿಸ್ತರಿಸಿ, ಪೋಷಿಸುತ್ತಿರುವ ಹಾಜಬ್ಬರ ನಿಸ್ವಾರ್ಥ ಸೇವೆ, ಮುಗ್ಧ ಮನಸು ಹಾಗೂ ಸಮರ್ಪಣಾ ಭಾವಕ್ಕೆ ಸಂದ ಅರ್ಹ ಹಾಗೂ ಸಕಾಲಿಕ ಗೌರವ ಇದು. ನಮ್ಮೂರಿನ ಹೆಮ್ಮೆಯ ಹೆಗ್ಗುರುತು ಅವರು.

ಹಾಜಬ್ಬರಿಗೆ ಪ್ರಶಸ್ತಿ ಬಂದಾಗಿನಿಂದಲೂ ಸುಮಾರು ಎರಡು ತಿಂಗಳಿನಿಂದ ಅವರಿಗೆ ಪ್ರತಿದಿನ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆ ಸಹಿತ ರಾಜ್ಯದ ನಾನಾ ಭಾಗಗಳಲ್ಲಿ 2-3 ಸನ್ಮಾನಗಳು ಸರಾಸರಿ ಆಗುತ್ತಲೇ ಇವೆ. ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಲೇ ಇವೆ. ಜನರ ಪ್ರೀತಿಗೆ ತಲೆಬಾಗಿ ಅವರೂ ಸಮಾಯಾವಕಾಶ ಹೊಂದಿಸಿ ಸನ್ಮಾನ ಸ್ವೀಕರಿಸುತ್ತಿದ್ದಾರೆ. ಆದರೆ, ಬಹುತೇಕ ಸಂದರ್ಭ ನಾವು ಅವರನ್ನು ಸನ್ಮಾನಿಸುವಾಗ ಹಾರ, ತುರಾಯಿ, ಶಾಲು, ಹಣ್ಣು, ಮಾನಪತ್ರ ನೀಡಿ ಗೌರವಿಸುತ್ತೇವೆ. ಅದು ನಮ್ಮ ಪರಂಪರೆ, ಗೌರವದ ದ್ಯೋತಕವೂ ಹೌದು. ಅದಕ್ಕೆ ಆಕ್ಷೇಪ ಅಲ್ಲ.

ಆದರೆ, ನಾನು ಹೇಳಹೊರಟಿರುವುದು ಏನೆಂದರೆ, ಎಲ್ಲರಿಗೂ ಗೊತ್ತಿರುವ ಹಾಗೆ ಹರೇಕಳ ಹಾಜಬ್ಬರು ಹೃದಯ ಶ್ರೀಮಂತಿಕೆ ಉಳ್ಳವರು. ಆರ್ಥಿಕವಾಗಿ ಅವರೇನು ಸಬಲರಲ್ಲ. ತಾವು ದೇಣಿಗೆಯಾಗಿ, ಪ್ರಶಸ್ತಿ ರೂಪದಲ್ಲಿ ಬಂದ ದುಡ್ಡನ್ನೂ ತಾವು ಕಟ್ಟಿದ ಶಾಲೆಗೇ ಸುರಿದು ತಮ್ಮ ಬಡತನದ ನೋವನ್ನೂ ಯಾರಲ್ಲೂ ಹೇಳಿಕೊಳ್ಳದೆ ಬದುಕಿದವರು. ನಿಜ ಹೇಳಬೇಕಂದರೆ ಪ್ರತಿದಿನ ಎಂಬಂತೆ ಅವರಿಗೆ ಸಿಗುತ್ತಿರುವ ರಾಶಿ ರಾಶಿ ಹಾರ, ತುರಾಯಿ, ಶಾಲು, ಪೇಟಗಳನ್ನು ಸಾಲಾಗಿ ಇರಿಸಲೂ ಅವರ ಪುಟ್ಟ ಮನೆಯಲ್ಲಿ ಸರಿಯಾದ ಜಾಗ ಇರಲಿಕ್ಕಿಲ್ಲ. ಅವರಿಗೆ ಅದರಲ್ಲಿ ಆಸಕ್ತಿಯೂ ಇಲ್ಲ. ಅವರೊಂಥರಾ ಇವುಗಳನ್ನು ತಲೆಗೆ ಹಚ್ಚಿಕೊಳ್ಳದಂಥ ನಿರಾಸಕ್ತ ಸಂತನ ಹಾಗೆ.

ಹಾಗಾಗಿ ಇನ್ನು ಮುಂದೆ ಹಾಜಬ್ಬರಿಗೆ ಸನ್ಮಾನ ಮಾಡುವವರು ಒಣಗಿ ಹೋಗುವ ಹಾರ, ತಿಂದು ಮುಗಿಯುವ ಹಣ್ಣು, ಪೆಟ್ಟಿಗೆ ಸೇರುವ ಶಾಲುಗಳ ಬದಲಿಗೆ ಅವರಿಗೆ ಬದುಕಿಯಲ್ಲಿ, ಮನೆಯಲ್ಲಿ ಪ್ರಯೋಜನಕ್ಕೆ ಬರುವಂಥ ವಸ್ತುಗಳನ್ನು ನೀಡಿದರೆ ಅಥವಾ, ಫ್ಲಕ್ಸ್, ಹಾರ, ತುರಾಯಿಗೆ ಸುರಿಯುವ ದುಡ್ಡನ್ನೇ ನಗದು ರೂಪದಲ್ಲಿ ಹಾಜಬ್ಬರಿಗೆ ನೀಡಿದರೆ ಅವರನ್ನು ಸನ್ಮಾನಿಸಿದ ಹಾಗೂ ಆಯಿತು, ಅವರ ಬದುಕಿಗೆ ನೆರವಾದ ಹಾಗೆಯೂ ಆಯಿತು. ಏನಂತಿರೀ? ಹಾಜಬ್ಬರು ಸ್ವಾಭಿಮಾನಿ. ಯಾರಲ್ಲೂ ತನ್ನ ವೈಯಕ್ತಿಕ ಬದುಕಿಗಾಗಿ ಕೈಚಾಚುವವರಲ್ಲ. ಹಾಗಾಗಿ ಅವರಿಂದ ಪಡೆದ ಉಪಕಾರದ ಸ್ಮರಣಾರ್ಥ ಸಮಾಜವೂ ಅವರ ಬದುಕಿಗೆ ನೆರವಾಗುವ ಮೂಲಕ ಸನ್ಮಾನಿಸಿದರೆ ಈ ಸನ್ಮಾನಗಳು ಹೆಚ್ಚು ಅರ್ಥಪೂರ್ಣ ಆದೀತು ಅಂತ ನನಗೆ ಅನ್ನಿಸುತ್ತದೆ.

ಕಳೆದ ನವೆಂಬರಿನಲ್ಲಿ ನಾವು ಮಂಗಳೂರು ವಿ.ವಿ. ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ (MAAM) ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಹಾಜಬ್ಬರಿಗೆ ಅವರ ಇಷ್ಟದ ಉಡುಪು, ಅವರ ಪತ್ನಿಗೊಂದು ಸೀರೆ ಮತ್ತಿತರ ಪುಟ್ಟ ಪುಟ್ಟ ವಸ್ತುಗಳನ್ನು ನೀಡುವ ಮೂಲಕ ಸನ್ಮಾನಿಸಿದೆವು. ಹಾಜಬ್ಬರೂ ಅದನ್ನು ಇಷ್ಟಪಟ್ಟರು. ನಾವು ಕೊಟ್ಟದ್ದಕ್ಕೆ ಪ್ರಚಾರ ಪಡೆಯುವುದು ಹೀಗೆ ಹೇಳುತ್ತಿರುವುದರ ಉದ್ದೇಶ ಅಲ್ಲ. ಯಾರಾದರೂ ಹಾಜಬ್ಬರ ಬದುಕಿಗೆ ನೆರವಾಗುವ ಉದ್ದೇಶ ಹೊಂದಿದ್ದರೆ ಅವರಿಗೊಂದು ಪ್ರೇರಣೆ ಸಿಕ್ಕಲಿ ಅನ್ನುವುದಷ್ಟೇ ನನ್ನ ಉದ್ದೇಶ.

ಸನ್ಮಾನ ಸಂದರ್ಭ ಹಾಜಬ್ಬರು, ಈ ಹಿಂದೆ ಅವರ ಮನೆಗೆ ನೆರವಾದವರನ್ನೂ ಸ್ಮರಿಸಿದರು. ಅವರು ಎಲ್ಲ ನೆರವನ್ನು ನೆನಪಿಟ್ಟುಕೊಳ್ಳುತ್ತಾರೆ ಎಂಬುದೇ ವಿಶೇಷ. ಈ ಮೂಲಕ ಅವರ ನಿತ್ಯ ಬದುಕಿಗೆ ಒಂದಷ್ಟು ನೆರವಾಗುವ ಪ್ರಯತ್ನ ಮಾಡಿದೆವು. ಎರಡು ವಾರಗಳ ಹಿಂದೆ ಮಂಗಳೂರಿನ ಸಂಸ್ಥೆಯೊಂದು ಅವರಿಗೆ 10 ಲಕ್ಷ ರು.ಗಳ ನೆರವು ನೀಡಿದ್ದು, ಈ ದುಡ್ಡನ್ನು ಶಾಲೆಗೆ ಬಳಸಬೇಡಿ, ನಿಮ್ಮ ವೈಯಕ್ತಿಕ ಖರ್ಚುಗಳಿಗೆ ಬಳಸಿ ಅಂತ ಒತ್ತಿ ಹೇಳಿದ್ದು ಸುದ್ದಿಯಾಗಿತ್ತು. (ಯಾಕೆಂದರೆ ಅವರಿಗೆ ನಗದು ನೀಡಿದರೆ ಅವರದನ್ನು ಶಾಲೆಯ ಖರ್ಚಿಗೆ ಬಳಸುತ್ತಾರೆ) ಇದು ಸ್ತುತ್ಯಾರ್ಹ ಕಾರ್ಯ. ಈ ಥರ ಹಲವು ಸಂಘಟನೆಗಳು ಅವರಿಗೆ ನೆರವಾಗಿವೆ. ಸಮಾಜ ಇನ್ನಷ್ಟು ಹಾಜಬ್ಬರಂಥವರಿಗೆ ನೆರವಾಗಬೇಕಿದೆ.

ಹೇಗೂ ಸನ್ಮಾನಕ್ಕೆ ಒಂದಷ್ಟು ಖರ್ಚು ಮಾಡುತ್ತೇವೆ. ಅದರ ಮೊತ್ತವನ್ನೇ ಅವರಿಗೆ ನೀಡಬಹುದು, ಅಥವಾ ಅವರ ಶಾಲೆಗೂ ನೀಡಬಹುದು, ಅಥವಾ ಅದೇ ದುಡ್ಡಿನಲ್ಲಿ ಅವರಿಗೆ ವೈಯಕ್ತಿಕವಾಗಿ ಉಪಯೋಗವಾಗುವಂಥ ವಸ್ತುಗಳನ್ನು ನೀಡಿದರೆ, ಅವರ ಶಾಲೆಯ ಜೊತೆಗೆ ಅವರ ಬದುಕೂ ಹಸನಾದೀತು... ಏನಂತೀರಿ...? (ಹಾಜಬ್ಬರನ್ನು ಸನ್ಮಾನಿಸಿದ ಅಥವಾ ಸನ್ಮಾನಿಸಲಿರುವ ಯಾರ ಕುರಿತಾಗಿಯೂ ನಾನು ಟೀಕೆ ಮಾಡಿದ್ದಲ್ಲ, ಸನ್ಮಾನ ಇನ್ನಷ್ಟು ಅರ್ಥಪೂರ್ಣ ಆಗಲಿ ಎಂಬ ಹಿನ್ನೆಲೆಯಲ್ಲಿ ನನ್ನ ಪುಟ್ಟ ಸಲಹೆ ಅಷ್ಟೇ...)

-ಕೃಷ್ಣಮೋಹನ ತಲೆಂಗಳ.

No comments: