Sunday, July 2, 2017

ತಡರಾತ್ರಿ ಚಾವಣಿಯಿಂದ ತೊಟ್ಟಿಕ್ಕಿದ ಹನಿಯ ಆಧ್ಯಾತ್ಮ

ಬಿಟ್ಟೂ ಬಿಡದೇ ಕಾಡುವ ಮಳೆಯಲ್ಲೊಂದು ಮೌನ ಧ್ಯಾ
-------
ಮಳೆಗಾಲದ
ಚೆಂಡೆಮದ್ದಳೆ ಸದ್ದು
ಶುರುವಾಗಿದೆ.
ಪ್ರಕೃತಿಯ ಈ
ಬಯಲಾಟದಲ್ಲಿ
ಎಷ್ಟೊಂದು ಪಾತ್ರ
ಗಳು, ಚಿತ್ರಗಳು!
ಒಮ್ಮೆ ಧ್ಯಾನಸ್ಥರಾ
ಗೋಣ, ಪ್ರಕೃತಿಯ
ರಂಗಮಂಚಕ್ಕೆ ಕಣ್ಣು

ನೆಟ್ಟು ಕೂರೋಣ .
------------

ಪ್ರಕೃತಿಯೆದುರು ಅತಿ ಹೆಚ್ಚು ಸದ್ದು ಮಾಡುವ ಜೀವಿ ಬಹುಷಃ ಮನುಷ್ಯ. ತಾವೇ ಸೃಷ್ಟಿಸಿದ ಸದ್ದು, ಕಲರವಕ್ಕೆ ಬೇಸತ್ತು ಮನಃಶಾಂತಿಗೋಸ್ಕರ ಮತ್ತೆ ಪ್ರಕೃತಿ ಮಡಿಲನ್ನು ಪ್ರೀತಿಸುವವರೆಷ್ಟು ಮಂದಿ ಇಲ್ಲ ಹೇಳಿ. ಮಾನವ ನಿರ್ಮಿತ ಸದ್ದಿನಷ್ಟು ಕರ್ಕಶವಲ್ಲದ, ಪ್ರಕೃತಿ ಸಹಜ ಸದ್ದುಗಳಲ್ಲೊಂದು ಸಾಂತ್ವನವಿದೆ, ಶೃತಿಯಿದೆ, ಲಾಲಿ ಜೋಗುಳ ಹಾಡಿ ಮಲಗಿಸುವಂತಹ ಮಮತೆ ಇದೆ. ಸಮುದ್ರದ ಅಲೆಯೊಂದು ದಡಕ್ಕೆ ಅಪ್ಪಳಿಸಿದಾಗ ಕೊಡುವ ಖುಷಿಯ ಹಾಗೆ.

ವರ್ಷದ ನಾಲ್ಕು ತಿಂಗಳ ಕಾಲ ಬಿಟ್ಟೂ ಬಿಡದೆ ಕಾಡುವ ಮಳೆಯಲ್ಲೊಂದು ಅಂತಹ ಧ್ಯಾನಸ್ಥ ಸ್ಥಿತಿಗೆ ಕರೆದೊಯ್ಯಬಲ್ಲ ಝೇಂಕಾರ ಕೇಳಿಸುವುದಿಲ್ಲವೇ? ಭೋರ್ಗರೆಯುವ ಗಾಳಿ ಮಳೆಯಲ್ಲೊಂದು ತೀವ್ರ ಸೆಳೆತ ಇರುತ್ತದೆ, ಗಾಳಿಯೇ ಮುಸಲಧಾರೆಯನ್ನು ಅಕ್ಕಪಕ್ಕ ಜೋಗುಳ ತೂಗಿದಂತೆ ಕಾಣಿಸುವ ದೃಶ್ಯಕಾವ್ಯ, ತೊನೆದಾಡುವ ಉದ್ದುದ್ದದ ಮರಗಳ ತಿಕ್ಕಾಟ, ಗುಡುಗಿನ ಆರ್ಭಟ, ಸಂಗೀತ ಕುರ್ಚಿಯ ಆಟದಂತೆ ಯಾವಾಗ ಗುಡುಗುತ್ತದೋ ಎಂಬ ಸೂಚನೆಯೇ ಸಿಗದಂತೆ ಎದೆ ನಡುಗಿಸುವ ಅಬ್ಬರದ ತಾಳವದು. ಆ ಮಳೆಯಲ್ಲಿ ಏನು ಹೇಳಿದರೂ ಕೇಳಿಸದು, ಬೊಬ್ಬಿರಿದರೂ ಅದು ಕರಗಿ ಹೋಗುತ್ತದೆ. ಅಸಲಿಗೆ ನಮ್ಮ ಧ್ವನಿಯೇ ನಮಗೆ ಕೇಳಿಸದಷ್ಟು ತೀವ್ರಥರ ಮೊರೆತ.

ಒಂದೆಡೆ ಗಾಳಿ, ಮತ್ತೊಂದೆಡೆ ಚಳಿಯ ಅನುಭೂತಿ, ಮನೆಯೊಳಗೂ ತೂರಿ ಬರುವ ಹನಿಗಳ ಸಿಂಚನ, ಒಂದಷ್ಟು ದೂರ ಮಂಜಿನಂಥೆ ಕಾಣುವ ಮುಸ್ಸಂಜೆ ಶೈಲಿಯ ಬೆಳಕು ಮತ್ತೆ ಅದರಿಂದಾಚೆಗೆ ಶೂನ್ಯ, ಏನೂ ಕಾಣಲ್ಲೊಲ್ಲದು. ಅಂಥದ್ದೊಂದು ಏಕಾಂತ ಕಟ್ಟಿಕೊಡಲು ಮಳೆಗೆ ಮಾತ್ರ ಸಾಧ್ಯ! ನಡು ಪೇಟೆಯಲ್ಲೂ ಇಂತಹ ಮಳೆ ಬಂದರೆ ಅಲ್ಲೊಂದು ಏಕಾಂತದ ವಲಯ ಸೃಷ್ಟಿಯಾಗುತ್ತದೆ. ದೊಡ್ಡ ದೊಡ್ಡ ಸದ್ದುಗಳನ್ನೂ ಮೆಟ್ಟಿ ನಿಂತು ಕೆಲ ಕಾಲ ಐಂದ್ರಜಾಲಿಕವಾಗಿ ಸುತ್ತುವರಿಯುವ ಗಾಢ ಮಳೆ.

ಅದೇ ಮಳೆ ನಿಂತು ಹೋದ ಮೇಲೆ ತಡರಾತ್ರಿ ಮಾಡಿನಿಂದ ತೊಟ್ಟಿಕ್ಕುವ ಹನಿ, ತೆಂಗಿನಮರದಿಂದ ಅಂಗಳದ ತರಗೆಲೆ ಮೇಲೆ ಬೊಟ್ಟು ಬೊಟ್ಟಾಗಿ ಬೀಳುವ ಹನಿಯ ಟಪ್ ಟಪ್ ಸದ್ದು ಕೂಡಾ ಸರಿದು ಹೋದ ಮಳೆಯ ನೆನಪು ಕಟ್ಟಿಕೊಡುತ್ತದೆ. ಆ ತೊಟ್ಟಿಕ್ಕುವ ಕ್ರಿಯೆಯಲ್ಲೂ ಒಂದು ತಾಳವಿಲ್ಲವೇ? ಮಳೆ ಮುಗಿದರೂ ಬಿಡದೆ ಸುಳಿಯುವ ತಂಗಾಳಿ, ಹಾಯೆನಿಸುವ ಮಸುಕು ಬೆಳಕು ಕೂಡಾ ಮಳೆಯ ಪುಳಕವನ್ನು ಉಳಿಸುವುದು ಮಾತ್ರವಲ್ಲ, ಮತ್ತೊಂದು ಮಳೆಯ ಬರುವ ನಡುವಿನ ಸಂಪರ್ಕ ಸೇತುವೂ ಆಗಬಹುದು.

ಹಳ್ಳಿ ಮನೆಗಳ ಚಾವಡಿಯಲ್ಲಿ ಕುಳಿತು ನೋಡಿ... ದೊಡ್ಡದೊಂದು ಮಳೆ ತೋಟದಾಚೆಯಂದ ಬರುವ ಮೊದಲು ಸುಮಾರು ಒಂದು ಕಿ.ಮೀ. ದೂರದಿಂದಲೇ ತೋಟದ ಅಡಕೆ ಮರಗಳ ಮೇಲೆ ಸಾಮೂಹಿಕ ಹನಿ ಮಳೆಯಾಗಿ ಬೀಳುವ ವಿಶಿಷ್ಟ ಸದ್ದೊಂದಿದೆ. ಆ ಸದ್ದು ಕೇಳಿಯೇ... ಇಂತಿಷ್ಟು ನಿಮಿಷದೊಳಗೆ ಅಂಗಳಕ್ಕೆ ಮಳೆ ತಲಪುತ್ತದೆ ಎಂಬ ಸೂಚನೆ ಸಿಗುತ್ತದೆ. ಹೀಗೆ ಬಂದು ಹಾಗೋ ಹೋಗುವ ಮಳೆ ಮುಂದಿನ ತೋಟದಿಂದಾಚೆ ಸರಿಯುತ್ತಾ ಹೋಗಿ ಕೊನೆ ಕೊನೆಗೆ ಕ್ಷೀಣವಾಗುವ ಸದ್ದು ಕೂಡಾ ಹಿಂಬಾಲಿಸುತ್ತಾ ಹೋಗಲು ಚೆಂದವಲ್ಲವೇ?

ಮಳೆಗಾಲದ ರಾತ್ರಿಯಲ್ಲೂ ವಟಗುಟ್ಟುವ ಕಪ್ಪೆಗಳು, ಜೀರುಂಡೆ ಸದ್ದು ಕೂಡಾ ಎಂತಹ ಕುರುಡನಿಗೂ ರಾತ್ರಿಯ ಕತೆಯನ್ನು ಸಾರಿ ಹೇಳುತ್ತದೆ. ಗಾಳಿಗೂ, ಸುರಿಯುವ ಮಳೆಗೂ, ಆಲಂಗಿಸುವ ಚಳಿಗೂ ನಡುವಿನ ಸದ್ದು, ನಿಶ್ಯಬ್ದದ ಅನುಭೂತಿಯನ್ನು ಪಾವತಿಸಿ ಅನುಭವಿಸಲು, ಅದನ್ನು ಸೃಷ್ಟಿಸಲೂ ಸಾಧ್ಯವಿಲ್ಲ. ಅದು ಮಳೆಯೆಂಬೋ ಮಳೆಗೆ ಮಾತ್ರ ಕೊಡಲು ಸಾಧ್ಯ!

-ಕೃಷ್ಣಮೋಹನ ತಲೆಂಗಳ.

No comments: