ಹೇಳುವುದಕ್ಕೆ ಸಮಯ, ಸಂದರ್ಭ ಮುಖ್ಯ... ಕೇಳುವವರ ಬಳಿಯೇ ಹೇಳಿ ನಿರಾಳರಾಗಿ!
ತುಂಬ ಸಲ ನಮಗೆ
ಹೇಳ್ಕೊಳ್ಳಬೇಕೆಂದಿರುವ ಸಂಗತಿಗಳನ್ನು ಕೇಳಲು ಕಿವಿಗಳೇ ಬೇಕು ಅಂತ ಇಲ್ಲ. ಮನಸು ಹಗುರಾಗಲೂ
ಹೇಳಿಕೊಳ್ಳಬಹುದು. ನಮ್ಮಷ್ಟಕೇ... ಈಗ ಜಾಲ ತಾಣ ಬಂದ ಮೇಲೆ ಕೇಳುವವರಿಗಿಂತ ಹೇಳುವವರ ಸಂಖ್ಯೆ
ಜಾಸ್ತಿ ಆಗಿದೆ ಮತ್ತು “ನಾನು ಕೇಳದಿದ್ದರೂ, ನನ್ನನ್ನು ಇಡೀ
ಜಗತ್ತೇ ಕೇಳುತ್ತಾ ಇರುತ್ತದೆ” ಎಂಬ ಕೆಟ್ಟ ಭ್ರಮೆ ಕೂಡಾ
ಇರುವುದು ಸುಳ್ಳಲ್ಲ. ಇದೇ ಕಾರಣಕ್ಕೆ ಯಾರೂ
ಕೇಳದೇ ಇದ್ದರೂ ನನ್ನನ್ನು ಎಲ್ಲರೂ ಕೇಳುತ್ತಾರೆಂಬ ಹುಚ್ಚಿನಲ್ಲ ವಾಸ್ತವ ಮರೆತು ಏನೇನೋ ಹೇಳಹೊರಟು
ನಾವು ಹಾಸ್ಯಾಸ್ಪದರಾಗಿ ಬಿಡುತ್ತೇವೆ.
ಜಾಲತಾಣ ವೇದಿಕೆಗಳು
ಸೃಷ್ಟಿಯಾದ ಬಳಿಕ ಸಾಕಷ್ಟು ಸಂಗತಿಗಳನ್ನು ಫಿಲ್ಟರ್ ಇಲ್ಲದೇ ನೇರಾನೇರ ಹೇಳಿಕೊಳ್ಳಲು ಅಥವಾ
ಸ್ಟೇಟಸ್ಸುಗಳಲ್ಲಿ ಹಂಚಿಕೊಂಡು ಅಷ್ಟಿಷ್ಟು ಸಮಾಧಾನ ಪಟ್ಟುಕೊಳ್ಳಲೂ ಆಗುತ್ತದೆ ಎಂಬುದು ಒಂದು
ವಿಚಾರ...
ಆದರೆ...
ನಮಗೇ ಹೇಳಲೇಬೇಕಾದ ಕೆಲವು
ಸಂಗತಿಗಳಿರುತ್ತವೆ. ಎಲ್ಲೂ ಹೇಳಿಕೊಳ್ಳಲಾಗದ್ದು, ಅದುಮಿಟ್ಟುಕೊಳ್ಳಲಾರದ್ದು, ಹೇಳದೇ ಒಳಗೊಳಗೆ
ಅನುಭವಿಸುವುದಕ್ಕೆ ಹಿಂಸೆ ಉಂಟಾಗುವಂಥದ್ದು, ಒಂದು ಸಂಗತಿ ಬಗ್ಗೆ ನನ್ನ ಗ್ರಹಿಕೆ, ನನ್ನ
ನಿರ್ಧಾರ ಸರಿಯಾ, ತಪ್ಪಾ ಎಂಬ ತಲ್ಲಣ, ಜೊತೆಗೆ ನನ್ನ ಎಲ್ಲ ತಳಮಳಗಳಿಗೊಂದು ಸೆಕೆಂಡ್ ಒಪಿನಿಯನ್
ಬೇಕಲ್ವ ಎಂಬ ನಿರೀಕ್ಷೆ ಮನುಷ್ಯ ಸಹಜ. ಆದರೆ, ಯಾರತ್ರ ಹೇಳ್ಬೇಕು, ಯಾವಾಗ ಹೇಳ್ಬೇಕು, ಯಾರತ್ರ
ಎಷ್ಟು ಹೇಳಿಕೊಳ್ಳಬಹುದು, ನಮಗೆ ಕಿವಿಯಾಗುವವರಲ್ಲಿ ನಾವು ಸಿಕ್ಕಾಪಟ್ಟೆ ಹೇಳಿ ಅವರ ತಲೆ
ತಿನ್ನುತ್ತಿದ್ದೇವೆಯಾ, ಅವರು ದಾಕ್ಷಿಣ್ಯಕ್ಕೆ ನಮ್ಮ ಮಾತು ಕೇಳುತ್ತಾರಾ, ಅಥವಾ ಆಸಕ್ತಿ ಇಟ್ಟು
ಕೇಳುತ್ತಾರ, ನಾನು ಅವರ ಸಮಯದ ಜೊತೆಗೆ ತಲೆಯನ್ನೂ ತಿನ್ನುತ್ತಿದ್ದೇನೆಯಾ, ಹೇಳಿಕೊಂಡ ಬಳಿಕ ಅವರು
ನನ್ನ ಬಗ್ಗೆ ಏನಂದುಕೊಂಡಾರು ಎಂಬಿತ್ಯಾದಿ ಸಂಕಟ ರೂಪದ ಮುಜುಗರ ಹೇಳಿಕೊಳ್ಳುವವರಿಗೆ ಇದ್ದೇ
ಇರುತ್ತದೆ. ದಾಕ್ಷಿಣ್ಯ ಸ್ವಭಾವದವರಿಗಂತೂ, ಭಯಂಕರ ಸೂಕ್ಷ್ಮ ಸ್ವಭಾವದವರಿಗಂತೂ ಹೇಳಿಕೊಳ್ಳುವ
ಸಂಗತಿಗಳಿಗಿಂತ ಹೇಳಿಕೊಳ್ಳುವ ಪ್ರಕ್ರಿಯೆಯೇ ಮಣಭಾರದ ಸಂಗತಿಯಾಗಿ ಬಿಟ್ಟೀತು... ಮತ್ತೊಂದು
ಸಂಗತಿ, ಕೆಲವೊಂದನ್ನು ಕೇಳಿಸಿಕೊಳ್ಳಬಾರದವರ ಬಳಿ ಹೇಳಿ ವಿನಾ ಕಾರಣ ಸಮಸ್ಯ
ಸೃಷ್ಟಿಸಿಕೊಳ್ಳುವುದು, ತಪ್ಪು ಕಲ್ಪನೆಗಳಿಗೆ ಕಾರಣವಾಗುವುದೂ ಇದೆ.
ಹೌದು...
ಒಂದು ವಿಚಾರವನ್ನು
ಹೇಳಿಕೊಂಡು ಹಗುರವಾಗಬೇಕಾದರೆ, ಸಣ್ಣ ಸಣ್ಣ ತಲ್ಲಣಗಳಿಗೆ ಸಣ್ಣ ಸಣ್ಣ ಪರಿಹಾರ ಕಂಡುಕೊಂಡು
ದೊಡ್ಡದೊಂದು ನಿರಾಳತೆ ಹೊಂದಬೇಕಾದರೆ, ತಲ್ಲಣಗಳಿಗೆ ಕಿವಿ ಆಗುವವರು ಬೇಕೇ ಬೇಕು... ಫೇಸ್ಬುಕ್ಕು
ಗೋಡೆಯಲ್ಲಿ ನಮ್ಮ ವೈಯಕ್ತಿಕ ತಳಮಳ, ಅಸಹಾಯಕತೆ, ಸೋಲು, ನಿರಾಸೆ, ಹತಾಶೆಗಳನ್ನೆಲ್ಲ ನೇರವಾಗಿಯೋ,
ಕವನ ರೂಪದಲ್ಲೋ, ಕ್ವೋಟ್ಸ್ ರೂಪದಲ್ಲೋ ಹಂಚಿಕೊಂಡರೆ ಅದಕ್ಕೆ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದು
(ಅದರಲ್ಲೂ ಫಿಮೇಲ್ ಖಾತೆ ಆದರೆ ಕೇಳುವುದೇ ಬೇಡ) ನಿಮ್ಮ ಪೋಸ್ಟ್ ವೈರಲ್ ಆದೀತು... ಆದರೆ,
ನೀವೊಂದು ಚರ್ಚಾ ವಸ್ತು ಆಗ್ತೀರಿ, ಒಂದಷ್ಟು ಸ್ವಯಂಘೋಷಿತ ವಿಮರ್ಶಕರು ವಿಮರ್ಶೆ ಮಾಡ್ತಾರೆ,
ಪುಕ್ಕಟೆ ಸಲಹೆ ಕೊಡ್ತಾರೆ... ಮತ್ತೆಂತ ಇಲ್ಲ. ನಾಲ್ಕು ಮಾರ್ಗ ಸೇರುವ ಕೈಕಂಬದಲ್ಲಿ ಬೆತ್ತಲೆ
ನಿಂತು ಬೊಬ್ಬಿಟ್ಟರೆ ಹತ್ತಾರು ಮಂದಿ ತಮಗೆ ತೋಚಿದಂತೆ ಮಾತಾಡಿ ಹೋಗಿಯಾರು, ಮತ್ತಷ್ಟು ಮಂದಿ ಚಂದ
ನೋಡಿಯಾರು ಬಿಟ್ರೆ ಯಾರಿಗೂ ನಿಮ್ಮ ಸಮಸ್ಯೆ ಪರಿಹಾರ ಮಾಡಿ ಆಗಬೇಕಾದ್ದು ಏನೂ ಇಲ್ಲ... ಎಲ್ರೂ
ಅವರವ ಸಮಸ್ಯೆಗಳಲ್ಲಿ ಬಿಝಿ. ನಿಂತು ಕೇಳಿ ಹೋಗುವ ಪುರುಸೊತ್ತು ಇಲ್ಲಿ ಯಾರಿಗೂ ಇರುವುದಿಲ್ಲ...
ಅವರಿವರು ಒಂದಷ್ಟು ದಾಕ್ಷಿಣ್ಯಕ್ಕೆ ಕೇಳಿದಂತೆ ನಟಿಸಿಯಾರು ಹೊರತು ಅವರು ನಿಮ್ಮ ತಲ್ಲಣಗಳಿಗೆ “ಕಿವಿ”ಗಳಾಗಲೂ ಸಾಧ್ಯವಿಲ್ಲ.
ಯಾರ ಬಳಿ ಹೇಳಿಕೊಂಡಾಗ, ನಿಮ್ಮ ಸಮಸ್ಯೆಗೆ ಪರಿಹಾರ ಆ
ಕ್ಷಣಕ್ಕೆ ಸಿಗದಿದ್ದರೂ ನಿಮಗೊಂದು ನಿರಾಳ ಭಾವ ಆವರಿಸಿಕೊಳ್ಳುತ್ತದೆಯೋ... ಅವರೇ ನಿಮ್ಮ
ಭಾವನಗಳಿಗೆ ಕಿವಿಗಳು ಎಂಬುದನ್ನು ನಿರ್ಧಾರ ಮಾಡಲು ಯಾವುದೇ ಥರ್ಡ್ ಅಂಪೇರ್ ಆಗತ್ಯ ಇಲ್ಲ!
ಹಾಗಾಗಿ, ನಾವೆಲ್ಲಿ
ಹೇಳಿಕೊಳ್ತೇವೆ, ಯಾರಲ್ಲಿ ಹೇಳಿಕೊಳ್ತೇವೆ, ಕೇಳುವ ಕಿವಿಗಳೆಂತವು ಎಂಬುದೂ ಮುಖ್ಯವಾಗ್ತವೆ.
ಹೌದು ತುಂಬ ಸಲ ನಮಗೆ ಅನ್ನಿಸ್ತದೆ. ನನಗೆ ಸಿಕ್ಕಿದ ಅವಕಾಶದಲ್ಲಿ ಸಿಕ್ಕಾಪಟ್ಟೆ ಮಾತನಾಡ್ತಾ
ಇದ್ದೇನ? ಯಾರದ್ದಾದರೂ ಪಾಲಿಗೆ
ಅನಾಸಿನ್ ಆಗಿ ಬಿಡ್ತಾ ಇದ್ದೇನ? ಮೂರರಲ್ಲಿ
ಹೇಳಬಹುದಾದ್ದನ್ನು ವಿಜೃಂಭಿಸಿ ಆರರಲ್ಲಿ, ಕೆಲವೊಮ್ಮೆ ಭಾವೋದ್ವೇಗದಿಂದ ಒಂಭತ್ತರ ರೇಂಜಿನಲ್ಲಿ
ಹೇಳಿಕೊಳ್ತಾ ಇದ್ದೇನ? ಅವರು ಇದು ಕೇಳಿ ನನ್ನ ಬಗ್ಗೆ
ಏನಂದುಕೊಂಡಾರು? ಅಂತ.... ಆದರೂ ಕೇಳುವ ಕಿವಿಯ ನಿಮ್ಮ
ಆಯ್ಕೆ ನಿಮಗೆ ಸಮಾಧಾನಕರ ಎಂದು ನಿಮಗೇ ಮನವರಿಕೆ ಆಗಿದ್ದರೆ ಖಂಡಿತಾ ನಿಮ್ಮ ಮಾತುಗಳು ವ್ಯರ್ಥವೋ,
ಅತಿರೇಕವೋ, ತಲೆನೋವೋ ಆಗಿರುವುದಿಲ್ಲ.
ಯಾಕೆಂದರೆ...
ನಮ್ಮನ್ನು ಬಿಟ್ಟು ಇಡೀ
ಜಗತ್ತೇ ಸುಖವಾಗಿದೆ, ಆರಾಮವಾಗಿದೆ ಎಂಬ ಭ್ರಮೆಯೇ ಸುಳ್ಳು... ಎಲ್ಲರೂ ಸುಖಮಯ ಬದುಕಿನ
ತೋರಿಕೆಯಿಂದ ಓಡಾಡುತ್ತಿದ್ದಾರೆ ವಿನಃ ಮಾತನಾಡಹೊರಟರೇ ಪ್ರತಿ ವ್ಯಕ್ತಿತ್ವದ ಹಿಂದೆಯೂ ತಲ್ಲಣ,
ಅಸಮಾಧಾನ, ಅಸಹಾಯಕತೆ, ಸೋಲು, ನಿರಾಸೆ, ಅತೃಪ್ತಿ ಇದ್ದೇ ಇರುತ್ತದೆ... ಅವನ್ನೆಲ್ಲ ಅವರು ಬೋರ್ಡ್
ಬರೆಸಿ ಕಟ್ಟಿಕೊಂಡು ಓಡಾಡುವುದಿಲ್ಲ ಅಷ್ಟೇ...
ಹಾಗಾಗಿ ನಾವು
ತಲ್ಲಣಗಳನ್ನು ಸರಿಯಾದವರಲ್ಲಿ ಹಂಚಿಕೊಳ್ಳುವುದರಿಂದ ಬದುಕಿನಲ್ಲಿ ಇರಬಹುದಾದ ಅಥವಾ ಸೋರಿ
ಹೋಗಬಹುದಾದ ಉತ್ಸಾಹವನ್ನು ಜಾರದಂತೆ ಕಾಪಿಟ್ಟುಕೊಳ್ಳಬಹುದು. ಖಿನ್ನತೆಯಿಂದ, ನಿರಾಸೆಯಿಂದ,
ಸೋಲಿನ ಪರಾಕಾಷ್ಠೆಯಲ್ಲಿರುವ ಭ್ರಮೆಯಿಂದ ದುರಂತಗಳನ್ನು ಮಾಡಿಕೊಳ್ಳುವ ನಿರ್ಧಾರದಿಂದ ಆಚೆ
ಬರಬಹುದು. ಸಣ್ಣ ಸಣ್ಣ ದುಡುಕು ಸಹ ಬದುಕಿನಲ್ಲಿ ದೊಡ್ಡ ದೊಡ್ಡ ಕಂದಕಗಳನ್ನು ಸೃಷ್ಟಿ
ಮಾಡಿಕೊಡಬಹುದು... ಹೇಳಲೇಬೇಕಾದ್ದನ್ನು ಯಾರಲ್ಲೂ ಹೇಳದೇ ಉಳಿದರೆ, ಹೇಳದೇ ಉಳಿದ ಸಂಗತಿಗಳ
ಭಾರವನ್ನು ನಮ್ಮ ಹೃದಯಕ್ಕೆ ತಾಳಿಕೊಳ್ಳಲು ಆಗದಿದ್ದರೆ, ಅದೊಂದು ದೊಡ್ಡ ಸ್ಟ್ರೆಸ್ ಆಗಿ, ಹೊರಗೆ
ಯಾವುದೋ ರೂಪದಲ್ಲಿ ಪುಟಿದೆದ್ದೇ ಏಳುತ್ತದೆ... ಅದರ ಬದಲು ವಿವೇಚನೆಯಿಂದ ಕೇಳುವ ಮನಸುಗಳ ಜೊತೆ
ಹೇಳಬಹುದಾದ್ದನ್ನು ಹೇಳುವಂತೆ, ಹೇಳುವಲ್ಲಿ ಹೇಳಿಕೊಂಡರೆ ಬಹಳಷ್ಟು ಸಲ ನಮ್ಮ ಬಹುತೇಕ ಆತಂಕಗಳು
ಕ್ಷುಲ್ಲಕವಾಗಿರುತ್ತವೆ, ಜಗತ್ತಿನಲ್ಲಿ ನಮಗಿಂತ ಕೆಟ್ಟ ಪರಿಸ್ಥಿತಿಯಲ್ಲಿ ದಿನದೂಡುವವರೂ
ಇರ್ತಾರೆ ಎಂಬಿತ್ಯಾದಿ ಸಂಗತಿಗಳು ವೇದ್ಯವಾಗುತ್ತವೆ... ಆದರೆ ನಮಗದನ್ನು ಮನವರಿಕೆ ಮಾಡುವ
ಜವಾಬ್ದಾರಿಯುತ ಕಿವಿಗಳು ಮತ್ತು ಬಾಯಿಗಳು ಬೇಕು ಅಷ್ಟೇ...
ಇಂದು ಹೇಳಬೇಕಾದ್ದನ್ನು
ಹೇಳುವುದು, ಬರೆಯುವುದು, ಕುಣಿಯುವುದು, ನುಡಿಸುವುದು ಮತ್ತು ಇವನ್ನೆಲ್ಲ ಜಾಲತಾಣದ ಮೂಲದ
ಫಿಲ್ಟರೇ ಇಲ್ಲದೆ ಕ್ಷಣಾರ್ಧದಲ್ಲಿ ಇಡೀ ಜಗತ್ತಿಗೇ ರವಾನಿಸುವುದು ಸುಲಭ. ಆದರೆ ಹೇಳಬೇಕಾದ್ದನ್ನು
ಹೇಳುವ ರೀತಿಯಲ್ಲಿ ಕೇಳುವವರ ಜೊತೆ ಹೇಳಿ ನಮ್ಮ ಅನಿಸಿಕೆಗಳಿಗೊಂದು ರೂಪ ಕೊಟ್ಟು
ಕಾಣಿಸಿಕೊಳ್ಳುವುದಕ್ಕೂ, ನನಗೆ ಕಂಡದ್ದೇ, ನನ್ನ ಗ್ರಹಿಕೆಗೆ ನಿಲುಕಿದ್ದೇ ಸತ್ಯ, ವಾಸ್ತವ,
ಅಂತಿಮ ಎಂಬ ಭ್ರಮೆಯಲ್ಲಿ ನಮ್ಮ ಬೊಗಸೆಯ ಬೆರಳುಗಳೆಡೆ ಜಾರಿ ಹೋಗಿ ಉಳಿದ ಅನುಭವವೇ ಶ್ರೇಷ್ಠ ಅಂತ
ಬರಿದೇ ಹಪಹಪಿಸಿ ಸಮಸ್ಯೆಯನ್ನು “ಜಾಗತೀಕರಣ”ಗೊಳಿಸುವುದರಿಂದ ನಮ್ಮೊಳಗಿನ ನಮ್ಮ ಬದಲಿಗೆ ನಾವು ಇನ್ಯಾರೋ ಆಗಿ
ಬಿಡುತ್ತೇವೆ. ಅದುಮಿಟ್ಟ ಭಾವನೆಗಳು ಒಟ್ರಾಸಿ ಹೊರ ಬಂದು ರೂಪು, ರೇಖೆ, ಚೌಕಟ್ಟಿಲ್ಲದೆ ಬೆಳೆದ
ಬೇಲಿಯ ಪೊದೆಯ ಹಾಗೆ!
-ಕೃಷ್ಣಮೋಹನ ತಲೆಂಗಳ (15.08.2025)
No comments:
Post a Comment