ಎತ್ತಣದ ಮಾಮರವೋ...ಎತ್ತಣದ ಕೋಗಿಲೆಯೋ...


ಹೈಸ್ಕೂಲು, ಕಾಲೇಜಿಗೆ ಹೋಗುವ ದಿನಗಳಲ್ಲಿ ನಿದ್ರೆ ಬರಬೇಕಾದರೆ ಪ್ರತಿ ದಿನ ಕೈಯ್ಯಲೊಂದು ಪುಸ್ತಕ, ರಾತ್ರಿ ಚಾಪೆ ಪಕ್ಕ ಶಿರೋಭಾಗದಲ್ಲಿ ಒಂದು ಲಾಟೀನು, ಜೊತೆಗೆ ಸಣ್ಣ ಧ್ವನಿಯಲ್ಲಿ ಹಿಂದಿ ಚಿತ್ರಗೀತೆ ಬಿತ್ತರಿಸುತ್ತಿದ್ದ ರೇಡಿಯೊ ಇರಲೇಬೇಕಿತ್ತು!
ಬೆಳಗ್ಗೆ ವಂದನದಿಂದ ಹಿಡಿದು ರಾತ್ರಿ ೯ ಗಂಟೆಗೆ ದಿಸ್ ಈಸ್ ಆಲ್ ಇಂಡಿಯಾ ರೇಡಿಯೊ, ದಿ ನ್ಯೂಸ್ ರೆಡ್ ಬೈ... ಅನ್ನುವ ತನಕ ಒಂದಲ್ಲ ಒಂದು ಕಾರ್ಯಕ್ರಮ ಕೇಳುತ್ತಲೇ ಇದ್ದೆ. ಬುಧವಾರ ಯಕ್ಷಗಾನ ಇದ್ದರೆ, ತೂಕಡಿಸುತ್ತಲಾದರೂ ೧೦.೩೦ರ ವರೆಗೆ ಕೇಳುವುದಿತ್ತು. ರೇಡಿಯೊ ಬಿಟ್ಟು ಮತ್ತೊಂದು ಮನರಂಜನೆಯ ಮಾಹಿತಿ ಇನ್ನೊಂದು ಇರಲಿಲ್ಲ (ಸುಮಾರು ೧೫.೨೦ ವರ್ಷ ಹಿಂದೆ). ಮೊಬೈಲ್, ಕಂಪ್ಯೂಟರ್ ಬಿಡಿ, ಟಿ.ವಿ. ನೋಡಲು ಕರೆಂಟೂ ಇರಲಿಲ್ಲ, ದೂರದರ್ಶನ ಬಿಟ್ಟು ಮತ್ತೊಂದು ಚಾನೆಲ್ ಕಾಣುತ್ತಲೂ ಇರಲಿಲ್ಲ. ರಾಮಾಯಣ, ಮಹಾಭಾರತ, ಕ್ರಿಕೆಟ್ ಮ್ಯಾಚ್ ನೋಡಲು ಪಕ್ಕದ ಮನೆಯವರ ಕಿಟಕಿಯಲ್ಲಿ ಇಣುಕುತ್ತಿದ್ದ ಕಾಲವದು!!! (ಈಗಿನ ಮಕ್ಕಳು ಕಟ್ಟುಕತೆ ಅಂದುಕೊಂಡಾರು).
ಅದೇ ಕಾರಣಕ್ಕೆ ಎಳೆಯ ಮನಸ್ಸಿನಲ್ಲಿ ರೇಡಿಯೊ ಮೂಡಿಸಿದ ನೆವರ್ ಫೈಲಿಂಗ್ ಫ್ರೆಂಡ್ ಅನ್ನೋ ಗಾಢ ಭಾವ ಯಾವತ್ತೂ ಅಳಿದು ಹೋಗಲಾರದು. ಅದೇ ಕಾರಣಕ್ಕೆ ಅಂದು ರೇಡಿಯೊದಲ್ಲಿ ಕೇಳಿ ಬರುತ್ತಿದ್ದ (ಎಳವೆಯಿಂದಲೇ) ಶಕುಂತಳಾ ಕಿಣಿ, ನಾರಾಯಣಿ ದಾಮೋದರ್, ಮುದ್ದು ಮೂಡುಬೆಳ್ಳೆ, ಸೂರ್ಯನಾರಾಯಣ ಭಟ್, ಅಬ್ದುಲ್ ರಷೀದ್, ಮಾಲತಿ ಆರ್.ಭಟ್...ಇವರೆಲ್ಲ ಥಟ್ಟನೆ ಎದುರು ಸಿಕ್ಕಿದರೂ ಅಂದಿನಿಂದಲೂ ನಮ್ಮೊಡನಿದ್ದ ಆತ್ಮೀಯರು ಎಂಬ ಭಾವ ಮೂಡುತ್ತದೆ. ರೇಡಿಯೊ ನಿರೂಪಕರು-ಕೇಳುಗರ ನಡುವಿನ ಭಾವ ಸಂಬಂಧವೇ ಅಂತಹದ್ದು. ಪ್ರತ್ಯಕ್ಷವಾಗಿ ಕಾಣದಿದ್ದರೂ ಧ್ವನಿಯಿಂದಲೇ ಒಂದು ನವಿರು ಸ್ನೇಹ ಅಲ್ಲಿ ಹುಟ್ಟಿಕೊಂಡಿರುತ್ತದೆ. ಆಗೆಲ್ಲಾ ನೆನಪಾಗುವುದು...ಮಾಮರವೆಲ್ಲೋ...ಕೋಗಿಲೆ ಎಲ್ಲೋ... ಏನೀ ಸ್ನೇಹ..ಸಂಬಂಧ... ಹಾಡು, ಹೌದಲ್ವ?
ರೇಡಿಯೊ ಜೊತೆಗೆ ಜೊತೆಗೆ ಬಾಲ್ಯ ಕಳೆದ ಕಾರಣವೋ ಏನೋ ಎಸ್ಪಿ ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್, ಕುಮಾರ್ ಶಾನು, ಬಿ.ಆರ್‌ಛಾಯಾ ಮೊದಲಾದವರೆಲ್ಲಾ ಪಕ್ಕದ ಮನೆಯ ಗಾಯಕರೋ ಎಂಬಷ್ಟು ಮಟ್ಟಿಗೆ ನನ್ನೊಳಗೆ ಹಾಸು ಹೊಕ್ಕಾಗಿದ್ದಾರೆ.
ಆಗೊಂದು ಹುಚ್ಚು -ಹಿಂದಿ ಚಿತ್ರಗೀತೆ ಕೇಳುವುದು. ಮಂಗಳೂರು ಆಕಾಶವಾಣಿಯಲ್ಲಿ ಅಲ್ಪ ಸ್ವಲ್ಪ ಹಳೆ ಹಿಂದಿ ಚಿತ್ರಗೀತೆ ಬರುತ್ತಿತ್ತು. ಅದು ಸಾಕಾಗುತ್ತಿರಲಿಲ್ಲ. ಹೊಸ ಹಿಂದಿ ಚಿತ್ರಗೀತೆ ಕೇಳಬೇಕಾದರೆ ವಿವಿಧ ಭಾರತಿ ಸ್ಟೇಷನ್ ಕೇಳಬೇಕು. ಅದು ಸಿಗುತ್ತಿದ್ದುದು ಶಾರ್ಟ್‌ವೇವ್ ಬ್ಯಾಂಡ್‌ನಲ್ಲಿ ಅದೂ ಸ್ಪಷ್ಟವಾಗಿ ಕೇಳಬೇಕಾದರೆ ಛಾವಣಿಗೆ ಒಂದು ತಂತಿ ಕಟ್ಟಿ, ಅದರ ತುದಿಯನನ್ನು ರೇಡಿಯೊದ ಆಂಟೆನಾಗೆ ಕಟ್ಟಬೇಕು! ಅಷ್ಟೆಲ್ಲಾ ಮಾಡಿ ರೇಡಿಯೊದಲ್ಲಿ ಕುಮಾರ್ ಶಾನು, ಉದಿತ್ ನಾರಾಯಣ್ ಹಾಡು ಕೇಳುವಾಗ ಪರಮಾನಂದ!
ಮಂಗಳೂರು ಆಕಾಶವಾಣಿಯೂ ಮೀಡಿಯಂ ವೇವ್ ಬ್ಯಾಂಡ್‌ನಲ್ಲಿ ಕೇಳುತ್ತಿದ್ದುದು, ಎಫ್‌ಎಂ ಆಗ ಬಂದಿರಲಿಲ್ಲ. ಗುಡುಗು, ಸಿಡಿಲು ಬಂದರೆ ರೇಡಿಯೊ ಬಂದ್. ಮತ್ತೆ ಮಂಗಳೂರು ಇರುವ ದಿಕ್ಕಿಗೆ ರೇಡಿಯೊದ ಬೆನ್ನು ತಿರುಗಿಸಿದರೆ ಮಾತ್ರ ರೇಡಿಯೊ ಕೇಳುತ್ತಿತ್ತು!! ಅಂತೂ ಏನೇ ಸರ್ಕಸ್ ಮಾಡಿದರೂ ಮನೆಯಲ್ಲಿ ನಮ್ಮ ಕೆಲಸ ಮಾಡುತ್ತಾ, ಊಟ ಮಾಡುತ್ತಾ ರೇಡಿಯೊ ಕೇಳುತ್ತಲೇ ಇರುವ ಸುಖದಿಂದ ಇಂದಿನವರು ವಂಚಿತರಾಗಿರುವುದು ಸತ್ಯ.
ಈಗಿನವರು ಹೇಳಿದರೆ ನಂಬಲಿಕ್ಕಿಲ್ಲ. ಆಗ ರೇಡಿಯೊದಲ್ಲಿ ಬರುತ್ತಿದ್ದ ಕೆಂಚನ ಕುರ್ಲರಿ, ಮಾತುಕತೆ, ಯಕ್ಷಗಾನದ ಹಾಡುಗಳ ಬಗ್ಗೆ ನಾಲ್ಕೈದು ಮಂದಿ ಸೇರಿದಲ್ಲಿ ಚರ್ಚೆಗಳೂ ಆಗುತ್ತಿತ್ತು(ಈಗ ಮೆಗಾ ಧಾರಾವಾಹಿಗಳ ಬಗ್ಗೆ ಆಗುವ ಹಾಗೆ). ಮನೆ ಮಂದಿ ಕಾದು ಕುಳಿತು ಮಾತುಕತೆ (ಕೌಟುಂಬಿಕ ಸಂಭಾಷಣೆ), ಯಕ್ಷಗಾನ ತಾಳಮದ್ದಳೆ (ವಾರಕ್ಕೊಮ್ಮೆ), ಯಕ್ಷಗಾನದ ಹಾಡುಗಳು (ವಾರಕ್ಕೊಮ್ಮೆ) ಕೇಳುತ್ತಿದ್ದೆವು. ಬ್ಯಾಟರಿ ಚಾಲಿತ ರೇಡಿಯೊ ಆದ ಕಾರಣ ಕರೆಂಟ್ ಹೋಗುವ ಭಯ ಇರಲಿಲ್ಲ. ಯಕ್ಷಗಾನ ಹಾಡು ಬರುವಾಗ ವೇಷ ಹಾಕಿ (ಲಭ್ಯ ಪರಿಕರ) ಕುಣಿಯುವುದೂ ಇತ್ತು! ಅಷ್ಟೊಂದು ತಲ್ಲೀನರಾಗುತ್ತಿದ್ದೆವು.
ಕೋರಿಕೆ ಕಾರ್ಯಕ್ರಮ ವಾರಕ್ಕೆ ಎರಡು-ಮೂರು ಬಾರಿ ಪ್ರಸಾರವಾಗುತ್ತಿದ್ದ ನೆನಪು. ಅದರಲ್ಲಿ ಹೆಸರು ಹೇಳುವುದನ್ನು ಕೇಳುವುದು, ಹೊಸ ಹಾಡು ಬರುತ್ತದಾ ಅಂತ ಕಾಯುವ ಸುಖವೇ ಬೇರೆ. ಈಗಿನ ಟಿ.ವಿ. ಬಾಗೆ ಮಧ್ಯ ಮಧ್ಯ ಜಾಹೀರಾತು ಕಿರಿಕಿರಿಯೂ ಇರಲಿಲ್ಲ. ಮತ್ತೆ ಬುಧವಾರ ರಾತ್ರಿ ೯.೧೬ಕ್ಕೆ ಪ್ರಸಾರವಾಗುತ್ತಿದ್ದ ಪತ್ರೋತ್ತರ ಕಾರ್ಯಕ್ರಮವೂ ಫೇವರಿಟ್. ತುಂಬಾ ಇಷ್ಟವಾಗುತ್ತಿತ್ತು ಪತ್ರ ಓದುತ್ತಿದ್ದ ಶೈಲಿ. ಅದಕ್ಕೆ ಕಾರ್ಡ್ (೧೫ ಪೈಸೆ ದರ ಇದ್ದಿರಬೇಕು, ಆಗ) ಹಾಕಿ ಅದು ಪ್ರಸಾರವಾಗುತ್ತದಾ ಅಂತ ಕಾಯುತ್ತಿದ್ದೆವು. ಕನಿಷ್ಠ ಹೆಸರು ಹೇಳಿದರೂ ಸಾಕಿತ್ತು ತುಂಬಾ ಥ್ರಿಲ್ ಕೊಡುತ್ತಿತ್ತು. ಬಾರದಿದ್ದರೇ ಓದುವವರಿಗೆ ಹಿಡಿ ಶಾಪ ಹಾಕುತ್ತಿದ್ದೆವು.
ಹೈಸ್ಕೂಲ್, ಕಾಲೇಜು ಮೆಟ್ಟಿಲು ಏರಿದಾಗಲೂ ರೇಡಿಯೊ ನಂಟು ಬಿಡಲಿಲ್ಲ. ಆಗಲೂ ಮನೆಗೆ ಕರೆಂಟು ಬಂದಿರಲಿಲ್ಲ ಅನ್ನಿ. ಆಗ ಬ್ಯಾಂಡ್ ಚೇಂಜ್ ಮಾಡಿ ಹೊಸ ಹೊಸ ಸ್ಟೇಷನ್ ಹುಡುಕುವ ಹುಚ್ಚು ಇತ್ತು. ಬೆಂಗಳೂರು ಕೇಂದ್ರದಿಂದ ಪ್ರತಿ ಭಾನುವಾರ ಮಧ್ಯಾಹ್ನ ೨.೩೦ಕ್ಕೆ ಕನ್ನಡ ಚಲನಚಿತ್ರ ಧ್ವನಿವಾಹಿನಿ ಪ್ರಸಾರವಾಗುತ್ತಿತ್ತು. ಅದನ್ನು ಕೇಳುತ್ತಿದ್ದೆವು. ಮತ್ತೆ ಮೈಯ್ಯೆಲ್ಲ ಕಿವಿಯಾಗಿ ಕೇಳುತ್ತಿದ್ದುದು ರಾತ್ರಿ ೮ ಗಂಟೆಗೆ ಪ್ರಸಾರವಾಗುತ್ತಿದ್ದ ಯುವವಾಣಿ ಕಾರ್ಯಕ್ರಮ. ಅದರಲ್ಲೂ ಭಾನುವಾರ ಪ್ರಸಾರವಾಗುತ್ತಿದ್ದ ಕಲಾಸಂಜೆ (ಕಾಲೇಜ್ ವಿದ್ಯಾರ್ಥಿಗಳ ಕಾರ್ಯಕ್ರಮ ವೈವಿಧ್ಯ) ತುಂಬಾ ಇಷ್ಟವಾಗುತ್ತಿತ್ತು.
ಯುವವಾಣಿಯ ‘ನನ್ನೂರು ನನ್ನ ಕನಸು’ ಮಾಲಿಕೆಗೆ ನಮ್ಮ ಊರಿನ ಬಗ್ಗೆ ನಾಲ್ಕು ಪುಟಗಳ ಲೇಖನ ಕಳುಹಿಸಿ ಅದನ್ನು ಓದುತ್ತಾರ ಅಂತ ನಾಲ್ಕು  ತಿಂಗಳು ಕಾಲ ಪ್ರತಿದಿನ ರೇಡಿಯೊ ಕೇಳುತ್ತಿದ್ದ ನೆನಪು ಇನ್ನೂ ಮಾಸಿಲ್ಲ. ಕೊನೆಗೂ ನನ್ನ ಪತ್ರ ಆ ಕಾರ್ಯಕ್ರಮಕ್ಕೆ ಆಯ್ಕೆ ಆಗಲೇ ಇಲ್ಲ:(.
ಪ್ರತಿ ಭಾನುವಾರದ ಮುಂಜಾನೆ ಪ್ರಸಾರವಾಗುತ್ತಿದ್ದ ಮುನ್ನೋಟ (ವಾರದ ಕಾರ್ಯಕ್ರಮಗಳ ಪಕ್ಷಿನೋಟ) ತುಂಬಾ ಇಷ್ಟ. ಅದರ ಕೊನೆಗೆ ಬುಧವಾರ ಪ್ರಸಾರವಾಗುವ ಯಕ್ಷಗಾನದ ತುಣುಕು ಕೆಲವೊಮ್ಮೆ ಕೇಳಿಸುತ್ತಿದ್ದರು. ಅದಕ್ಕೆ ಕಾಯುತ್ತಿದ್ದೆವು. ಬೆಳಗ್ಗಿನ ಚಿಂತನ, ರೈತರಿಗೆ ಸಲಹೆ, ಪ್ರದೇಶ ಸಮಾಚಾರ, ಗೀತಲಹರಿ, ನಂತರ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ ಸ್ವರ ಮಾಧುರ್ಯ, ಸಂಜೆ ಕೃಷಿರಂಗ, ಯುವವಾಣಿ, ೯.೩೦ಕ್ಕೆ ರಾಷ್ಟ್ರೀಯ ನಾಟಕ, ಪ್ರಹಸನ, ಯಕ್ಷಗಾನ.... ಹೀಗೆ ದಿನಪೂರ್ತಿ ಕಾರ್ಯಕ್ರಮ ಕೊಡುತ್ತಿದ್ದ (ಈಗಲೂ ಹಾಗೆಯೇ ಕೊಡುತ್ತಿದೆ) ಆಕಾಶವಾಣಿಗೆ ಯಾವದೇ ಎಫ್‌ಎಂ ಚಾನೆಲ್ ಸಾಟಿಯಾಗಲು ಕಷ್ಟ. ಅಷ್ಟೊಂದ ವಿಚಾರವೈವಿಧ್ಯದ ಪ್ಯಾಕೇಜ್ ಅದರಲ್ಲಿದೆ.
ಮತ್ತೆ ಕ್ರಿಕೆಟ್ ಮ್ಯಾಚ್ ನಡೆದಾಗ, ಚುನಾವಣೆ ಫಲಿತಾಂಶ ಬರುವಾಗ ದಿನವಿಡೀ ರೇಡಿಯೊದ್ದೆ ದ್ಯಾನ.
ರೇಡಿಯೊ ಕೇಳಲು ದೊಡ್ಡ ಇನ್‌ವೆಸ್ಟ್‌ಮೆಂಟ್ ಬೇಡ, ದೊಡ್ಡ ವಿದ್ಯಾವಂತನಾಗಬೇಕೆಂದೂ ಇಲ್ಲ, ನಿಮ್ಮ ಸಮಯ ತಿನ್ನುವುದಿಲ್ಲ, ಕೆಲಸ ಮಾಡ್ಕೊಂಡೇ ರೇಡಿಯೊ ಕೇಳಬಹುದು. ಕಿವಿ ಬಳಿ ಪಿಸುಗುಟ್ಟುವ ತೆರದ ವೈಯಕ್ತಿಕ ಗೆಳೆಯನಂತೆಯೂ ರೇಡಿಯೊ ಜೊತೆಗೇ ಇರುತ್ತಾನೆ. ಆಗೆಲ್ಲಾ ಇಂತಹ ಕಾರ್ಯಕ್ರಮ ಕೇಳಬೇಕು ಎಂದು ರೇಡಿಯೊಗಾಗಿ ಮನೆ ಮಂದಿಯಲ್ಲಿ ಜಗಳವೂ ಆಗುತ್ತಿತ್ತು ಎಂಬುದು ಇಂದಿನವರಿಗೆ ಚೋದ್ಯವಾಗಬಹುದು.
ರೇಡಿಯೊ ಒಂದು ಅದ್ಭುತ ಗೆಳೆಯ ಮಾತ್ರವಲ್ಲ, ಬಾಲ್ಯದಲ್ಲಿ ಅದೊಂದು ಕಾಲ್ಪನಿಕ ಜಗತ್ತು. ಅಲ್ಲಿ ಕೆಲಸ ಮಾಡುವವರ ಧ್ವನಿ ಕೇಳಿಯೇ ಅವರು ಹೇಗಿರಬಹುದೆಂಬ ಕಲ್ಪನೆ... ಅವರೆಲ್ಲ ತುಂಬಾ ಆತ್ಮೀಯರು, ಸುಂದರರು, ಮೃತುಭಾಷಿಗಳೆಂಬ ಕಲ್ಪನೆ ಇರುತ್ತಿತ್ತು. ಅವರನ್ನು ನೋಡಬೇಕು, ಮಾತನಾಡಬೇಕು ಎಂಬ ಹಂಬಲ... ರೇಡಿಯೊ ಸ್ಟೇಷನ್ ಹೇಗಿರುತ್ತದೋ ಎಂಬ ಕುತೂಹಲ ಇರುತ್ತಿತ್ತು.... ದೊಡ್ಡವರಾಗುತ್ತಾ ಬಂದ ಹಾಗೆ ಅದು ಯಾಂತ್ರಿಕ ಅನಿಸಿದರೂ ಆ ಸೆಳೆತ ಬಿಟ್ಟಿಲ್ಲ.
ಮತ್ತೆ ಮಂಗಳೂರು ಆಕಾಶವಾಣಿ ಎಫ್‌ಎಂ ಆಯ್ತು (ಈಗ ಡಿಜಿಟಲ್ ಸ್ಟೀರಿಯೋ ಪ್ರಸಾರ ಶುರುವಾಗಿದೆ), ಫೋನ್ ಇನ್ ಕಾರ್ಯಕ್ರಮಗಳು ಬಂದವು, ಹೊಸ ಹೊಸ ನಿರೂಪಕರು ಬಂದರು, ಹಳೆ ಸ್ವರಗಳು ಒಂದೊಂದಾಗೆ ನಿವೃತ್ತರಾಗುತ್ತಾ ಬಂದವು... ಕಾರ್ಯಕ್ರಮಗಳ ಹೆಸರೂ ಬದಲಾಯಿತು. ಆದರೆ, ಬೇಸಿಕಲಿ ಆಕಾಶವಾಣಿ ಹಾಗೆಯೇ ಇದೆ. ವಾರ್ತೆ, ಪ್ರದೇಶಸಮಾಚಾರ, ಸಂಸ್ಕೃತ ವಾರ್ತಾಹ ಶ್ರುಯಂತಾಂ ಎಂಬ ಉದ್ಗಾರ, ಕೃಷಿರಂಗ, ಯುವವಾಣಿಯ ಸಿಗ್ನೇಚರ್ ಟ್ಯೂನ್ ಯಾವುದೂ ಬದಲಾಗಿಲ್ಲ. ಬಾಲ್ಯದಿಂದ ಕೇಳುತ್ತಾ ಬಂದಿದ್ದ ಧ್ವನಿಗಳ ಒಡೆಯ-ಒಡತಿಯರನ್ನು ಕಂಡು ಅವರನ್ನು ಮಾತನಾಡಿಸುವ ಅವಕಾಶ ಬಂದಾಗ ತುಂಬಾನೆ ಖುಷಿಯಾಗಿದೆ... ಮಲಗಿಯೊ, ನಿಂತುಕೊಂಡೋ, ಉಣ್ಣುತ್ತಲೋ ರೇಡಿಯೊ ಕೇಳುತ್ತಿದ್ದ ನೆನಪಿನ ಕಣಜ ಬರಿದಾಗಿಲ್ಲ.
ಇಂದು ಡಿಟಿಎಚ್ ಟಿವಿ ಸೆಟ್‌ಗಳಲ್ಲಿ ರೇಡಿಯೊ ಸಿಗುತ್ತದೆ, ಎಲ್ಲಾ ಮೊಬೈಲ್‌ಗಳಲ್ಲಿ ರೇಡಿಯೊ ಇದೆ, ೨೪ ಗಂಟೆ ಚಿತ್ರಗೀತೆಗಳನ್ನೇ ಹಾಕುವ ಖಾಸಗಿ ಎಫ್‌ಎಂ ಚಾನೆಲ್‌ಗಳು ಬಂದಿವೆ... ಆದರೆ, ಹಿಂದಿನಂತೆ ತಾಳ್ಮೆಯಿಂದ ಕುಳಿತು ರೇಡಿಯೊ ಕೇಳಲು ಪುರುಸೊತ್ತಿಲ್ಲ, ಅಥವಾ ಮನಸ್ಸಿಲ್ಲವೋ... ಗೊತ್ತಾಗ್ತಾ ಇಲ್ಲ. ಆದರೂ ಯಾರಾದರೂ ಆಕಾಶವಾಣಿ ಬಗ್ಗೆ ಹಗುರವಾಗಿ ಮಾತನಾಡಿದರೆ ಸಿಟ್ಟು ಬರುವುದ ಸುಳ್ಳಲ್ಲ, ನಮ್ಮ ಸ್ವಾಭಿಮಾನದ ಪ್ರತೀಕವದು ಎಂಬ ಹಾಗೆ... ಮನೆ ಮೊದಲ ಪಾಠ ಶಾಲೆಯಾದರೆ ಆಗ ರೇಡಿಯೊ ಎರಡನೇ ಪಾಠ ಶಾಲೆಯಂತಿತ್ತು. ಒಂದು ಒಂಟಿತನಕ್ಕೆ, ನೊಂದ ಮನಸ್ಸಿಗೆ, ವಯೋವೃದ್ಧರಿಗೆ, ಮನಯೊಳಗೆ ಬಾಕಿಯಾಗಿ ದುಡಿಯುವ ಹೆಮ್ಮಕ್ಕಳಿಗೆ (ಅಡುಗೆ ಮನೆಯ ಕಪಾಟಿನಲ್ಲಿ), ತೊಟ್ಟಿಲಲ್ಲ ಮಲಗಿದ ಕಂದನಿಗೆ... ಹೀಗೆ ಆಬಾಲ ವೃದ್ಧರಿಗೆ ರೇಡಿಯೊ ನೀಡುವ ಕಂಪನಿ ಇದೆಯಲ್ಲಾ, ವರ್ಣನಾತೀತ. ಅದರ ಸುಖ ಆಲಿಸಿದವನೇ ಬಲ್ಲ....ಮತ್ತದೇ ಉದ್ಗಾರ, ಎತ್ತರದ ಮಾಮರವೋ....ಎತ್ತಣದ ಕೋಗಿಲೆಯೋ...