ಮಧ್ಯರಾತ್ರಿಲಿ...ಹೆದ್ದಾರಿ ನಡುವೇಲಿ....ಒಂಟಿ ಬೈಕಲ್ಲಿ....


internet pic...


ಹಗಲು ಧಗೆಯಲ್ಲಿ ಬೆಂದು ರಕ್ಕಸ ಗಾತ್ರ ವಾಹನಗಳ ಕೆಳಗೆ ಮೈಚಾಚಿ ಧೂಳು, ಹೊಗೆಗೆ ನಲುಗಿ, ಟ್ರಾಫಿಕ್ ಜಾಂ ಗೆ ಕಂಗಾಲಾಗಿ ಬಸವಳಿದ ಹೆದ್ದಾರಿಯುದ್ದಕ್ಕೂ ತಡ ರಾತ್ರಿಯಾದಂತೆ ಎಷ್ಟೊಂದು ಪ್ರಶಾಂತತೆ...
ಆಗೊಂದು ಈಗೊಂದು ಭರ್ರನೆ ಸಾಗುವ ವಾಹನ, ದೂರದಲ್ಲಿ ಮಿಣುಕುವ ಅಸ್ಪಷ್ಟ ದೀಪಗಳು...
ಕಣ್ಣು ಹಾಯಿಸಿದಷ್ಟೂ ಉದ್ದಕ್ಕೆ ಹೆಬ್ಬಾವಿನಂತೆ ಚಾಚಿಕೊಂಡ ಡಾಂಬರು ಮಾರ್ಗ...
ಭರ್ರನೆ ಬೈಕಿನಲ್ಲಿ ಹೋಗುತ್ತಿದ್ದರೆ ಮೇಲೆ ತಿಂಗಳು ಬೆಳಕಿನ ನಡುವೆ ಮಿಣುಕುವ ನಕ್ಷತ್ರಗಳು...ಕೆಳಗೆ ಮಿಣುಕು ಬೆಳಕಿಗೆ, ಹೈವೇನಲ್ಲಿ ಹೊಂಡ, ಹಂಪು ಯಾವುದೂ ಕಾಣದೆ ಎಲ್ಲ ಸುಂದರ, ನೇರ, ನೈಸ್ ರಸ್ತೆಯೆಂಬ ಭಾವ...ಜೊತೆಗೆ ಹಿತವಾಗಿ ಮುಖಕ್ಕೆ ರಾಚುವ ತಂಪು ಗಾಳಿ ಬೇರೆ...
ಟ್ರಾಫಿಕ್, ಓವರ್ ಟೇಕ್ ತಂಟೆಯಿಲ್ಲ... ತಲೆ ಬಿಸಿ ಮಾಡುವ ಬಿಸಿಲಿಲ್ಲ...ಸಡನ್ ಬ್ರೇಕ್ ಹಾಕಿ ತಬ್ಬಿಬ್ಬು ಮಾಡುವ ಬಸ್ಸು, ಆಟೋ ಕಿರಿಕಿರಿಯಿಲ್ಲ... ಮುಖ ಮುಚ್ಚಿಸುವ ಧೂಳು ಇದ್ದರೂ ಗೊತ್ತಾಗೋದಿಲ್ಲ....
ಕಪ್ಪು ಕಪ್ಪು ಕಾಣುವ ನಿಶ್ಯಬ್ಧ ಪಿಶಾಚಿಗಳಂತೆ ಭಾಸವಾಗುವ ರಸ್ತೆ ಪಕ್ಕದ ಮರಗಳ ಹಿಂದಿಕ್ಕಿ ಹೋಗುವಾಗ ನಿರ್ವಿಕಾರ ವ್ಯಕ್ತಿತ್ವಗಳ ಕಂಡಂತೆ ಭಾಸ!...
ಎಷ್ಟೇ ಕರ್ಕಶ ಹಾರ್ನ್ ಹಾಕುತ್ತಾ ಕ್ಯಾರೇ ಮಾಡದೆ ಧ್ಯಾನಾಸಕ್ತರಂತೆ ಅಲ್ಲಲ್ಲಿ ಮಲಗಿರುವ ಬೀಡಾಡಿ ದನಗಳು, ಮುಖಕ್ಕೆ ಟಾರ್ಚ್ ಲೈಟ್ ಬಿಟ್ಡು ನಿಲ್ಲಿಸಿ, ಎಲ್ಲಿಗೆ ಹೋಗ್ತಿರೋದು ಅಂತ ಕುಡುಕನನ್ನು ಮಾತಾಡಿಸಿದ ಹಾಗೆ ವಿಚಾರಿಸುವ ಯಾಂತ್ರಿಕ ಪೊಲೀಸರು... ಆರಾಮವಾಗಿ ಹಳದಿ ಬೆಳಕನ್ಮುಮಿನುಗಿಸಿತ್ತಿರಿವ ಸಿಗ್ನಲ್ ಲೈಟುಗಳು...ದೂರದಲ್ಲೆಲ್ಲೋ ಬಿಟ್ಟು ಬಿಟ್ಟು ಕೇಳುವ ಯಕ್ಷಗಾನದ ಚೆಂಡೆ ಸದ್ದು...
ರಾತ್ರಿ ಡ್ಯೂಟಿ ಮುಗಿಸಿ ಹಾ...ಗೆ ಬೈಕಿನಲ್ಲಿ ಹೋಗ್ತಾ ಇದ್ರೆ ಏನೋ ವಿಶಿಷ್ಟ ಅನುಭೂತಿ...:)

No comments: