“ಬಾವ ಬಂದರೋ” ಹಾಡಿಗೆ ಪುಟಾಣಿಗಳಿಗೆ ಕುಡುಕರ ವೇಷ ಹಾಕಿಸಿ ಕುಣಿಸುವ ಅಗತ್ಯ ಇದೆಯಾ...?
ನಿನ್ನೆಯಿಂದ ಫೇಸ್ಬುಕ್
ಮತ್ತು ಇನ್ ಸ್ಟಾಗ್ರಾಂನಲ್ಲಿ ಒಂದು ಹೊಸ ರೀಲ್ಸ್ ಟ್ರೆಂಡ್ ಗಮನಿಸ್ತಾ ಇದ್ದೇನೆ.
ಜನಪ್ರಿಯವಾಗಿರುವ ಕನ್ನಡ ಸಿನಿಮಾ “ಸುಫ್ರಂಸೋದ” ವೈರಲ್ ಆಗಿರುವ ಹಾಡು “ಬಂದರೋ ಬಂದರೋ ಬಾವ ಬಂದರೋ” ಹಾಡಿಗೆ ಈಗ ತಾನೆ ನಡೆಯಲು
ಕಲಿಯುತ್ತಿರುವ ಪುಟ್ಟ ಕಂದಮ್ಮಗಳ ವೀಡಿಯೋ ಎಡಿಟ್ ಮಾಡಿ ಶೇರ್ ಮಾಡಲಾಗುತ್ತಿದೆ. ಇವತ್ತು
ಬೆಳಗ್ಗೆ ನೋಡುತ್ತೇನೆ, ಒಂದು ಪುಟ್ಟ ಮಗುವಿಗೆ (ಅಂಬೆಗಾಲು ಇಡುವ ವಯಸ್ಸು) ಲುಂಗಿ ಸುತ್ತಿಸಿ,
ತಲೆಗೆ ಮುಂಡಾಸು ಕಟ್ಟಿ, ಮೀಸೆ ಹಚ್ಚಿ ಅದರ ಕೈಯ್ಯಲ್ಲಿ ಬಾಟಲು ಕೊಟ್ಟಿದ್ದಾರೆ. ಸಹಜವಾಗಿ ಮಗು
ನಡೆಯಲು ಕಲಿಯುವಾಗ ವಾಲುತ್ತದೆ, ಕುಡುಕರೂ ವಾಲುತ್ತಾರೆ. ಈ ದೃಶ್ಯಕ್ಕೆ “ಬಂದರೋ ಬಂದರೋ...” ಹಾಡಿನ ಹಿಮ್ಮೇಳ... ತುಂಬ ಆಶ್ಚರ್ಯ
ಆಯ್ತು... ಈ ಲೆವೆಲಿಗೆ ಇಳಿದು ನಾವು ರೀಚ್ ಆಗಬೇಕಾದ ಅನಿವಾರ್ಯತೆ ಇದೆಯಾ ಅಂತ.
ನಾವ್ಯಾಕೆ ಇಷ್ಟು
ಸೂಕ್ಷ್ಮರಹಿತರಾಗಿ ವರ್ತಿಸುತ್ತಿದ್ದೇವೆ? ಕಾಂತಾರ ಸಿನಿಮಾ ಬಂದಾಗಲೂ
ಇದೇ ಆದದ್ದು. ಯಾವುದನ್ನು ಅರ್ಥ ಮಾಡಿಕೊಳ್ಳಬೇಕೋ, ಯಾವುದಕ್ಕೆ ಮಹತ್ವ ಕೊಡಬೇಕೋ ಗೊತ್ತಿಲ್ಲ.
ಎಲ್ಲ ಕಡೆ ದೈವಗಳ ಅನುಕರಣೆ ಶುರುವಾಯ್ತು. ಈಗ ಸುಫ್ರಂಸೋ ಸರದಿ. ಸಿನಿಮಾದ ಪ್ರಥಮ 15 ನಿಮಿಷಗಳ
ಕಾಲ ಕುಡಿಯುವ ದೃಶ್ಯಗಳಿರುವುದು ಹೌದು. ಹಾಗಂತ ಅಲ್ಲಿ, ಕುಡಿತವೇ ಇರುವುದಲ್ಲ, ಸಿನಿಮಾದ ಥೀಂ ಸಹ
ಕುಡಿತ ಅಲ್ಲವೇ ಅಲ್ಲ. ಕುಡಿತ ಸಮಾಜದಿಂದ ಹೊರತಾಗಿಲ್ಲ ಎಂಬುದು ಅಷ್ಟೇ ಸತ್ಯ. ಅದನ್ನೇ
ತೋರಿಸಿದ್ದಾರೆ (ಕುಡಿತ ಸಮರ್ಥನೀಯವೂ ಅಲ್ಲ). ಆದರೆ, ಅದರಾಚೆ ಸಾಕಷ್ಟು ಸಂಗತಿಗಳಿವೆ. ಅದ್ಯಾಕೆ
ನಮಗೆ ಕಾಣಿಸುತ್ತಿಲ್ಲ.
ನಾವೆಲ್ಲ ಗೆದ್ದೆತ್ತಿನ ಬಾಲ ಹಿಡಿಯುವವರು, ಸುಫ್ರಂಸೋ ಬರುವ ಮೊದಲು “ಬ್ಯಾಂಗಲ್ ಬಂಗಾರಿ.. ಬ್ಯಾಂಗಲ್ ಬಂಗಾರಿ” ಹಾಡಿಗೆ ರೀಲ್ಸ್ ಮಾಡಿ ಬಿಡ್ತಾ ಇದ್ರು. ಸುಫ್ರಂಸೋ ಕ್ಲಿಕ್ ಆಗಿ ನಾಲ್ಕೇ ದಿನದಲ್ಲಿ “ಬಂದರೋ ಬಂದರೋ” ಹಾಡಿಗೆ ರೀಲ್ಸ್ ಬರಲು ಶುರುವಾಯ್ತು. ಸುಲಭವಾಗಿ ಜನರನ್ನು ತಲುಪಬೇಕು ಅಷ್ಟೇ.... ಒಂದು ಪ್ರಯತ್ನ ಜನಪ್ರಿಯವಾದ ತಕ್ಷಣ ಅದರ ಬೆನ್ನು ಬಿದ್ದು ತಲೆ ಚಿಟ್ಟು ಹಿಡಿಸುವ ಮಟ್ಟಿಗೆ ನಾನಾ ರೀತಿಯ ಪ್ರಯೋಗ ಮಾಡುವುದು. ಮರುಕಳಿಸುವುದು. ಯಾವುದು ಬೇಗ ತಲಪುತ್ತದೆಯೋ, ಅದು ನೈತಿಕವಾಗಿ ಕೆಟ್ಟದಾಗಿದ್ದರೂ ಮೈಮರೆತವರಂತೆ ವರ್ತಿಸುವುದು. ಕೊನೆಗೆ ಯಾರು ಹೊಸ ಪ್ರಯೋಗ ಮಾಡಿದ್ದಾರೋ ಅವರಿಗೆ ನಾನ್ಯಾಕೆ ಹೀಗೆ ಮಾಡಿದೆನಪ್ಪ ಎಂಬಲ್ಲಿಗೆ ಇಂತಹ ಟ್ರೆಂಡ್ ತಲಪುತ್ತದೆ. ಮೂಲ ಪ್ರಯೋಗ ಮಾಡಿದವರ ಉದ್ದೇಶ ಬೇರೆಯೇ ಇರುತ್ತದೆ. ವಿಮರ್ಶಕರು, ಇಂತಹ ರೀಲ್ಸ್ ವೀರರು ಅವನ್ನು ಬೇರೆಯೇ ಲೆವೆಲಿಗೆ ತಲುಪಿಸುತ್ತಾರೆ.
ಈಗ ಪುಟ್ಟ ಪುಟ್ಟ ಪುಟಾಣಿಗಳು... ಸಹಜವಾಗಿ ಅಂಬೆಗಾಲಿಕ್ಕಿ ನಡೆಯುವುದನ್ನು ಕುಡುಕ
ನಡೆಯುವ ಶೈಲಿಗೆ ಹೋಲಿಸಿ ರೀಲ್ಸ್ ಮಾಡುತ್ತಿರುವುದು ನನ್ನ ಪ್ರಕಾರ ಅತಿರೇಕದ ಪರಮಾವಧಿ.
ಸುಲಭವಾಗಿ ವ್ಯೂಸ್ ಪಡೆಯಬೇಕು, ಜನಪ್ರಿಯರಾಗಬೇಕು ಎಂಬ ಹಂಬಲದಲ್ಲಿ ವಾಸ್ತವಿಕ ಪ್ರಜ್ಞೆ ಮರೆತು
ವರ್ತಿಸುವುದು ಖಂಡಿತ ಸರಿಯಲ್ಲ.
ಇವತ್ತು ನಾವು ಸಮಾಜದ
ನೈತಿಕತೆ ಹಾಳಾಗಿದೆ, ಮಾಧ್ಯಮಗಳ ನೈತಿಕತೆ ಹಾಳಾಗಿದೆ, TRPಗೋಸ್ಕರ ಟಿವಿ ವಾಹಿನಿಗಳು ಎಂಥದ್ದೂ
ಮಾಡುತ್ತವೆ ಅಂತ ಬೊಬ್ಬೆ ಹೊಡೆಯುತ್ತೇವೆ. ಸಮಾಜದಿಂದ, ಮಾಧ್ಯಮದಿಂದ, ಸಿನಿಮಾದಿಂದ ನೈತಿಕತೆ
ನಿರೀಕ್ಷಿಸುವ ನಾವು ವೈಯಕ್ತಿಕವಾಗಿ ಎಷ್ಟು ಸುಭಗರಾಗಿದ್ದೇವೆ? ನಮ್ಮಲ್ಲೆಷ್ಟು ಸಾಮಾಜಿಕ ಪ್ರಜ್ಞೆ ಇದೆ? ಅಂತ ಯೋಚಿಸಬೇಕಾಗಿದೆ.
ಪುಟ್ಟ ಪುಟ್ಟ ಮಕ್ಕಳಿಗೆ
ಕುಡುಕನ ವೇಷ ಹಾಕಿಸಿ ರೀಲ್ಸ್ ಮಾಡುವುದು ಖಂಡಿತಾ ಉತ್ತಮ ಅಭಿರುಚಿ ಅಲ್ಲ. ಕೆಟ್ಟ ಮನಃಸ್ಥಿತಿಯ
ವಿಜೃಂಭಣೆ ಅಷ್ಟೆ... ಇಂತಹ ವರ್ತನೆಯಿಂದ ಒಂದು ಹಂತದಲ್ಲಿ ಈ ಸಿನಿಮಾವನ್ನು ಹಣಿಯಲೆಂದೇ
ಕಾಯುತ್ತಿರುವವರೂ ಸೇರಿ ಈ ಸಿನಿಮಾವೇ “ಕುಡಿತದ ವಿಜೃಂಭಣೆ” ಅಂತ ಬಿಂಬಿಸಿದರೂ ಆಶ್ಚರ್ಯವಿಲ್ಲ...
ಯಾವುದೇ ಬರಹ, ಸಿನಿಮಾ, ನಾಟಕ, ಕಲಾಪ್ರಕಾರ ಇಷ್ಟ ಆಗುವುದು ಅವರವ ಅಭಿರುಚಿ, ಮನಃಸ್ಥಿತಿ,
ಗ್ರಹಿಕೆಯಿಂದ. ಎಲ್ಲವೂ ಎಲ್ಲರಿಗೂ ಇಷ್ಟ ಆಗಲೇಬೇಕಾಗಿಲ್ಲ. ಹಾಗಂತ ಯಾವುದರಿಂದ ಏನು ಪಡೆಯಬೇಕು
ಎಂಬ ಸ್ಪಷ್ಟ ಅರಿವು ನಮಗಿರಬೇಕು. ಸಿನಿಮಾ ಅಂದರೆ ಸಮಾಜಸೇವೆ ಅಲ್ಲ, ಅದೂ ಸಹ ಉದ್ಯಮವೇ. ಸಹಜವಾಗಿ
ಅದರಲ್ಲಿ ಕಮರ್ಷಿಯಲ್ ಅಂಶಗಳು ಇದ್ದೇ ಇರ್ತವೆ. ಅದನ್ನು ಹೆಕ್ಕಿ ತೆಗೆಯುವಷ್ಟಾದರೂ ನಮ್ಮಲ್ಲಿ
ತಿಳಿವಳಿಕೆ ಬೇಕಲ್ವ?
ಅವರಿವರಿಂದ ನೈತಿಕತೆ
ನಿರೀಕ್ಷಿಸುವ ನಮಗೆ ಸಾಮಾಜಿಕವಾಗಿ ಸಿಗುವ ಮನರಂಜನೆ, ಸುದ್ದಿ, ಮಾಹಿತಿಗಳನ್ನು ಹೇಗೆ
ಸ್ವೀಕರಿಸಬೇಕು, ಅವುಗಳಲ್ಲಿ ಯಾವುದನ್ನು ಹೇಗೆ ಗ್ರಹಿಸಬೇಕು, ಮತ್ತು ಎಷ್ಟರ ಮಟ್ಟಿಗೆ ಅವುಗಳ
ಪುನರ್ ಬಳಕೆ ಮಾಡಬೇಕು ಎಂದು ಚಿಂತಿಸುವ ಸಹನೆಯೇ ಇಲ್ಲ...
ನಮ್ಮ ತಲುಪುವಿಕೆಯ
ಹಪಹಪಿಕೆ ಇಷ್ಟು ಕೆಳಮಟ್ಟಕ್ಕೆ ಹೋಗಬಾರದಿತ್ತು... ಛೆ
-ಕೃಷ್ಣಮೋಹನ ತಲೆಂಗಳ
(4.08.2025)
No comments:
Post a Comment