ಬೆಟ್ಟದಷ್ಟು ಕನಸು, ಹುಟ್ಟಿದಲ್ಲೇ ಕಮರುವ ನನಸು... ಮತ್ತೆ ಪುಟಿದೇಳುವ ಮನಸ್ಸು... ಒಂದು ಚಂದದ ಸಿನಿಮಾ 3ಬಿಎಚ್ ಕೆ

 



ಇದು ಮಧ್ಯಮ ವರ್ಗದವರೆಲ್ಲ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಅನುವಿಸಿರುವ ಕತೆಯೇ ಹೌದು. ನಮ್ಮ ನಿಮ್ಮ ಬದುಕಿನ ಕತೆ ಎಂದರೂ ತಪ್ಪಾಗಲಾರದು. ಬೊಗಸೆಯಿಂದ ಕೈ ಜಾರಿ ಹೋಗುವ ಸಂಪಾದನೆ, ಬೆಟ್ಟದಷ್ಟು ಕನಸುಗಳು, ಕಾಲಿನತ್ತ ಎಳೆದರೆ ತಲೆ ಮುಚ್ಚುವುದಿಲ್ಲ ಎಂಬಂಥ ಗಿಡ್ಡದಾದ ಹೊದಿಕೆ ಹೊದ್ದಂತ ಬದುಕಿನ ಸುತ್ತ ಅನಾವರಣಗೊಳ್ಳುವ ಸಂಗತಿಗಳು.

 

ಬದುಕಿನ ಅನಿವಾರ್ಯತೆ, ಅವಶ್ಯಕತೆ ಮತ್ತು ದಿಢೀರನೆ ಇಕ್ಕಟ್ಟು ಸೃಷ್ಟಿಸುವ ಸಂಧಿಗ್ಧತೆಗಳು, ಕೈಕಟ್ಟಿ ಹಾಕುವ ಪರಿಸ್ಥಿತಿ, ಪದೇ ಪದೇ ಕಾಡುವ ಸೋಲು ಕಟ್ಟಿ ಹಾಕುವ ಮನಃಸ್ಥಿತಿ. ಎಂತ ಮಾಡಿದ್ರೂ ಅಷ್ಟೇ ಎಂಬಂಥ ಭಯಂಕರ ಅಸಹಾಯಕತೆ...

 

ಅಪ್ಪ-ಅಮ್ಮ, ಮಗ-ಮಗಳ ಕುಟುಂಬ ಮತ್ತೊಬ್ಬಳು ಆತ್ಮೀಯ ಗೆಳತಿ... ಇಷ್ಟು ಮಂದಿ ಶುರುವಿನಿಂದ ಕೊನೆಯ ವರೆಗೆ ಆವರಿಸಿಕೊಳ್ಳುವ ಒಂದು ಸರಳ ಮತ್ತು ಪರಿಣಾಮಕಾರಿ ಸಿನಿಮಾ 3BHK. ಇದು ತಮಿಳು ಸಿನಿಮಾ.. ಕತೆ ಮತ್ತು ನಿರ್ದೇಶನ ಗಣೇಶ್ ಅವರದ್ದು. ತ್ರೀಬಿಎಚ್ಕೆ ವೀಡು ಎಂಬ ಸಣ್ಣಕತೆ ಆಧರಿಸಿ ಮಾಡಿದ ಸಿನಿಮಾವಂತೆ. ತಾರಾಗಣದಲ್ಲಿ ಸಿದ್ಧಾರ್ಥ್, ಆರ್. ಶರತ್ ಕುಮಾರ್, ದೇವಯಾನಿ, ಮೀತಾ ರಘುನಾಥ್ ಮತ್ತು ಚೈತ್ರಾ ಜೆ. ಆಚಾರ್ ತಮ್ಮ ತಮ್ಮ ಪಾತ್ರಗಳಿಗೆ ಅದ್ಭುತ ನ್ಯಾಯ ಸಲ್ಲಿಸಿದ್ದಾರೆ. ಇದ್ದರೆ ಇಂತಹ ಮಗ, ಇಂತಹ ತಂಗಿ, ಇಂತಹ ಗೆಳತಿ ಮತ್ತು ಇಂತಹ ಆತ್ಮವಿಶ್ವಾಸ ಬದುಕಿನಲ್ಲಿ ಬೇಕು ಎಂಬುದನ್ನು ಆಗಾಗ ತೋರಿಸಿಕೊಡುವ ಸಿನಿಮಾ ಇದು. ಎದೆಗುಂದಿದಾಗ ಪರಸ್ಪರ ಆಸರೆಯಾಗುವಂಥಹ ಸನ್ನಿವೇಶಗಳು ತುಂಬ ಕಾಡುತ್ತವೆ... ಸಿನಿಮಾ ಸದ್ಯ AMAZON PRIME OTT ವೇದಿಕೆಯಲ್ಲಿ ಲಭ್ಯ.

 

-ಕೃಷ್ಣಮೋಹನ ತಲೆಂಗಳ (12.08.2025)

 


No comments:

Popular Posts