ಮೊಬೈಲ್ ಪರದೆಯ ಗೀರು ಹೃದಯವನ್ನೇ ಘಾಸಿ ಮಾಡುತ್ತದಾ? MOBILE SCREEN
ಕೆಲವೊಮ್ಮೆ ಸಣ್ಣ ಸಣ್ಣ ಗಾಯಗಳೂ ನಿಮ್ಮ ಮೂಡ್ ಹಾಳು
ಮಾಡ್ತವೆ ಅಲ್ವ? ಮೊನ್ನೆ ಮೊನ್ನೆ ತಕ್ಕೊಂಡ ಹೊಸ ಮೊಬೈಲಿನ
ಸ್ಕ್ರೀನ್ ಮೇಲೆ ಅಷ್ಟುದ್ದ ಗೆರೆ ಮೂಡಿದ್ದು ಅಥವಾ ಓ ಅಲ್ಲಿ ಕೈಯ್ಯಿಂದ ಪುಸಕ್ಕನೆ ಜಾರಿ ಬಿದ್ದ
ಮೊಬೈಲ್ ಪರದೆ ಮೇಲೆ ಜೇಡನ ಬಲೆ ಥರ ಒಂದು ಗೆರೆಗೆರೆಯ ಚಿತ್ತಾರ ಮೂಡಿದ್ದು, ಪಾರ್ಕ್ ಮಾಡಿದ್ದ ಕಾರಿನ
ಹಿಂದಿನ ಡೋರಿಗೆ ಯಾರೋ ಬೈಕಿನವ ಒರೆಸಿಕೊಂಡು (ಸವರಿಕೊಂಡು) ಹೋಗಿ ದೊಡ್ಡದೊಂಡು ಸ್ಕ್ರಾಚ್
ಮೂಡಿದ್ದು, ಅಥವಾ ಯಾರೋ ಕುಶಾಲಿಗೆ ಟೈಂಪಾಸಿಗೆ ಕೈಯ ಕೀಯಿಂದ ಕಾರಿನ ಡೋರಿನುದ್ದಕ್ಕೂ ಗಾಡಿ
ನಿಲ್ಲಿಸಿದ ಜಾಗದಲ್ಲೇ ವಕ್ರ ರೇಖೆ ಬಿಡಿಸಿ ಹೋದದ್ದು....
ಇಂಥದ್ದೆಲ್ಲ ಕೆಲವೊಮ್ಮೆ
ದಿನದ ಮಟ್ಟಿಗಾದರೂ ನೆಮ್ಮದಿ ಕಸಿದು ಬಿಡುತ್ತವೆ. ಅವೆಲ್ಲ ಯಂತ್ರಗಳು, ದೇಹದಂತಲ್ಲ. ಗಾಯವಾದರೆ
ರಿಪೇರಿ ಮಾಡಿಸಬಹುದು ಅಥವಾ ಬದಲಾಯಿಸಬಹುದು ಎಂಬುದು ಗೊತ್ತಿದ್ದರೂ ಅದರ ಮೇಲೂ ಇರಬಹುದಾದ ಅಕ್ಕರೆ
ಮತ್ತು ಕಟ್ಟಿಕೊಂಡ ಸಾಂಗತ್ಯದ ಗುಂಗು ಕರುಳಿಗೇ ಗಾಯವಾಯಿತೇ ಎಂಬಷ್ಟು ಘಾಸಿ ಮಾಡುವುದು ಸತ್ಯ.
ತುಂಬ ಸಲ ಅದು ರಿಪೇರಿಯಾಗಿ
ಅಥವಾ ಪಾಲಿಶ್ಡ್ ಆಗಿ ಮತ್ತೆ ಕೈಸೇರುವ ತನಕ ಮನಸ್ಸು ತಳಮಳಿಸುವುದು ಬಿಡುವುದಿಲ್ಲ. ಒಂದು ಅಸಹನೆ,
ಸಣ್ಣ ಆಕ್ರೋಶ, ಹೀಗಾಯ್ತಲ್ಲ ಅನ್ನುವ ನಿರಾಸೆ ಕಾಡುತ್ತಲೇ ಇರುತ್ತದೆ. ಇಂಥದ್ದೇ ಇನ್ನಷ್ಟು ಸಂಗತಿಗಳನ್ನು
ಪಟ್ಟಿ ಮಾಡಬಹುದು...
1) ಮನೆಯಿಂದ ಹೊರಡುವಾಗ ಕರ್ಚೀಫು ಮನೆಯಲ್ಲೇ
ಬಾಕಿ ಆದದ್ದು, ಬ್ಯಾಗಿನಲ್ಲಿ ಸಣ್ಣ ಬಟ್ಟೆಯ ಚೂರೂ ಇಲ್ಲದೆ ಇಡೀ ದಿನ ಕೈ, ಮುಖ ಒರೆಸಲು
ಸಿಕ್ಕಾಪಟ್ಟೆ ಕಷ್ಟಪಟ್ಟದ್ದು
2) ಮೊಬೈಲಿನಲ್ಲಿ ಕೇವಲ 10 ಪರ್ಸೆಂಟ್
ಜಾರ್ಚು ಇದ್ದದ್ದು, ರಾತ್ರಿ ಪ್ಲಗ್ಗಿಗೆ ಕನೆಕ್ಟ್ ಮಾಡಿ, ಸ್ವಿಚ್ ಆನ್ ಮಾಡಲು ಮರೆತು,
ಬೆಳಗ್ಗೆದ್ದು ನೋಡುವಾಗ ಇದ್ದಿದ್ದ 10 ಪರ್ಸೆಂಟು 5 ಪರ್ಸೆಟಿಂಗೆ ಇಳಿದು ನೋಟಿಫಿಕೇಶನ್ ಗಹಗಹಿಸಿ
ನಗುತ್ತಾ ಇದ್ದದ್ದು.
3) ಮನೆಯಲ್ಲೋ, ಆಫೀಸಿನಲ್ಲೋ ಕರೆಂಟು
ಕೈಕೊಟ್ಟು ವೈಫೈ ಹೊದ್ದು ಮಲಗಿದಾಗ ಮೊಬೈಲ್ ಡೇಟಾ ಕಡೆಯಿಂದ “ಇಂದಿನ ಹೈಸ್ಪೀಡ್ ಡೇಟಾದ
90 ಪರ್ಸೆಂಟ್ ಖಾಲಿ ಆಯ್ತು, ಖುಷಿಯಿಂದ ಡೇಟಾ ಖರೀದಿಸಿ” ಎಂಬ ನಯನಾನನಂದಕರ ಎಸ್ಸೆಮ್ಮೆಸ್
ಠಣ್ಣನೆ ಬರುವುದು.
4) ಎಲ್ಲಿಗೋ ಅಗತ್ಯದ
ಕೆಲಸಕ್ಕೆ ಹೊರಟಿರುತ್ತೀರಿ. ಆ ಕೆಲಸಕ್ಕೆ ಅರ್ಧ ಗಂಟೆ ಸಮಯ ನಿಗದಿಪಡಿಸಿರುತ್ತೀರಿ. ಡ್ರೆಸ್
ಮಾಡಿ ಹೊರಡುವಷ್ಟರಲ್ಲಿ ಯಾರೋ ತುಂಬ ತಲೆ ತಿನ್ನುವವ ಕರೆ ಮಾಡಿ, ಮುಕ್ಕಾಲು ಗಂಟೆ
ಅಲ್ಪವಿರಾಮವನ್ನೇ ಕೊಡದೆ ಮಾತನಾಡಿ, ಕೊನೆಗೆ 46ನೇ ನಿಮಿಷದಲ್ಲಿ ಅವನು ಹೇಳಬೇಕಾದ್ದನ್ನು
ಸಾವಕಾಶದಿಂದ ಹೇಳಿ ನಿಮ್ಮ ಅಷ್ಟೂ ಕೆಲಸವನ್ನು ಹಾಳು ಮಾಡಿ ಹಾಕಿದ್ದು...
5) ಒಂದು ಅಂಗಡಿಯಲ್ಲಿ ಟೀಶರ್ಟ್ ಗೆ 700
ರುಪಾಯಿ ದರ ಅಂದದ್ದನ್ನು ಕಂಡು ಚೊರೆ ಮಾಡಿ 500 ರುಪಾಯಿಗೆ ಇಳಿಸಿ, ಚೌಕಾಶಿಯ ಸಾಮರ್ಥ್ಯಕ್ಕೆ
ಹಿರಿ ಹಿರಿ ಹಿಗ್ಗುತ್ತಿದ್ದಾಗ, 100 ಮೀಟರ್ ಆಚೆಯ ಅಂಗಡಿಯಲ್ಲಿ ಅಂಥದ್ದೇ ಅಂಗಿ 500 ರುಪಾಯಿಗೆ
ಎರಡು ಎಂಬ ಬೋರ್ಡು ಕಾಣುವುದು!
6) ನಾಲ್ಕು ದಿನದ ಹಿಂದೆ 5000 ಸಾವಿರ
ಖರ್ಚಿನಲ್ಲಿ ಸರ್ವೀಸ್ ಮಾಡಿಸಿ ತಂಡ ವಾಹನ ಸ್ಟಾರ್ಟ್ ಮಾಡಿ 100 ಮೀಟರ್ ಹೋಗುವಷ್ಟರಲ್ಲಿ ಟಯರ್
ಪ್ಯಾಚ್ ಆಗಿದ್ದು ಗೊತ್ತಾಗುವುದು ಅಥವಾ ಎಂತ ಮಾಡಿದರೂ ಹಾರ್ನ್ ಆಗುವುದೇ ಇಲ್ಲ ಅಂತ ಕಡು
ಟ್ರಾಫಿಕ್ ರಸ್ತೆಯಲ್ಲಿ ವೇದ್ಯವಾಗುವ ಸುವರ್ಣ ಘಳಿಗೆ.
7) ಕಳೆದ ವಾರ ಆನ್ ಲೈನಿನಲ್ಲಿ ಹುಡುಕಿ....
ಹುಡುಕಿ... ಹುಡುಕಿ... 20 ಸಾವಿರ ರುಪಾಯಿ ಕೊಟ್ಟು ತಂದ ಮೊಬೈಲನ್ನು ಭಯಂಕರ ಸಾಧನೆ ಎಂಬಂತೆ ಫ್ರೆಂಡಿಗೆ
ತಂದು ತೋರಿಸಿದಾಗ, ಅವ ಮುಖ ಸಿಂಡರಿಸಿ ಇದಕ್ಕಿಂತ 5 ಸಾವಿರ ರುಪಾಯಿ ಕಡಿಮೆಗೆ ಓ ಆ ಅಂಗಡಿಯಲ್ಲಿ
5ಜಿ ಮೊಬೈಲೇ ಸಿಗ್ತದೆ... “ನೀನು ಮಂಗ ಆದೆ ಮಾರಾಯ” ಅಂತ ಇಡೀ ಉತ್ಸಾಹಕ್ಕೆ ತಣ್ಣೀರು
ಎರಚಿದ್ದು.
8) ತುಂಬ ಆಸಕ್ತಿಯಿಂದ ಎಷ್ಟೋ ದಿನ ಬಳಿಕ
ಇಡೀ ಸಮಾಜಕ್ಕೆ ಉಪಯೋಗವಾಗುತ್ತದೆ ಎಂಬ ಭ್ರಮೆಯಲ್ಲಿ ಬರೆದ ಲೇಖನಕ್ಕೆ ಫೇಸ್ಬುಕ್ಕಿನಲ್ಲಿ ಎರಡು
ಲೈಕ್ ಮತ್ತು ಮೂರು ಕಮೆಂಟ್ ಮಾತ್ರ ಬಂದದ್ದು, ಅದೇ ಬೆಚ್ಚದಲ್ಲಿ ಡಿಪಿ ಚೇಂಜ್ ಮಾಡಿದಾಗ ಅದಕ್ಕೆ
100 ಲೈಕ್, 20 ಕಮೆಂಟ್ ಮತ್ತು ನಾಲ್ಕು ಶೇರ್ ಬಂದದ್ದು!!!!
9) ಇನ್ನು ರೀಲ್ಸ್ ನೋಡುವುದಿಲ್ಲ... ಇದು
ಲಾಸ್ಟ್ ರೀಲ್ಸ್, ಮತ್ತೆ ಮೊಬೈಲ್ ಜಾರ್ಚಿಗೆ ಇಡುತ್ತೇನೆ ಅಂತ ಪ್ಲಗ್ಗಿಗೆ ಸಾಕೆಟ್ಟು
ಸಿಕ್ಕಿಸಿದವ ಕೊನೆಯದಾಗಿ ಒಂದು ರೀಲ್ಸ್ ನೋಡಲು ಹೊರಟವ ಅರ್ಧ ಗಂಟೆ ಕಳೆದರೂ ಪ್ಲಗ್ಗಿನ ಹತ್ರವೇ
ಬಾಕಿಯಾಗಿ ಯಾರದ್ದೋ ಕರೆ ಬಂದಾಗ ಇಹಲೋಕಕ್ಕೆ ಮರಳಿದ್ದು...
10) ಕರೆಂಟು ಬಿಲ್ಲು ಕಟ್ಟಲು ಹೋದಾಗ ಮೂರು
ಲೈನ್ ಕ್ಯೂ ಇತ್ತು... “ಓ ಆ ಕ್ಯೂ ಸಣ್ಣ ಇದೆ” ಅಂತ, ಅಲ್ಲಿ ಹೋಗಿ ನಿಂತಾಗ ಈಚೆ ಮೂಲೆಯ
ಕ್ಯೂ ರಪಕ್ಕ ಖಾಲಿಯಾಗಿ ನಾವಿನ್ನೂ ಅಲ್ಲೇ ಬಾಕಿಯಾಗಿ, ಕ್ಯೂ ಮುಂದೆಯೂ ಹೋಗದೆ, ಇತ್ತ ಕಡೆ ಬಾರಲೂ
ಆಗದೆ ಮೇಲೆ ಕೆಳಗೆ ನೋಡುತ್ತಾ ನಿಂತದ್ದು...
ಇಂಥದ್ದು ಸಾವಿರ ಸಂಗತಿಗಳು ಇರಬಹುದು ಸಣ್ಣ ಸಣ್ಣ ಸಂಗತಿಗಳಾದರೂ ತುಂಬ ಹೊತ್ತು ಕಾಡುವಂಥದ್ದು... ನೀವು ತುಂಬ ಪ್ರೀತಿಸುವ ಪೆನ್ನು
ಕಾಣೆಯಾದದ್ದು ಅಥವಾ ಯಾರೋ ತಕ್ಕೊಂಡು ವಾಪಸ್ ಕೊಡದೇ ಇದ್ದದ್ದು... ಇಂತ ಸಂಗತಿಗಳನ್ನು ತುಂಬ ಮಂದಿ ಕ್ಯಾರೇ ಮಾಡುವುದಿಲ್ಲ. “ಟೇಕ್ ಇಟಿ ಈಸಿ” ಅಂದುಕೊಂಡು ಮುಂದೆ ಹೋಗುತ್ತಾರೆ.
ಮತ್ತೊಂದಿಷ್ಟು ಮಂದಿ ಮಾತ್ರ ಇಂಥವನ್ನೇ ಮತ್ತೆ ಮತ್ತೆ ಯೋಚಿಸಿ ಇದ್ದ ನೆಮ್ಮದಿಯನ್ನೂ
ಕಳೆದುಕೊಳ್ಳುತ್ತಾರೆ, ಅಲ್ವ? ನಿಮ್ಮ ಬತ್ತಳಿಕೆಯಲ್ಲೂ ಇಂಥ ಸಂಗತಿಗಳು
ಇದ್ದರೆ, ಪುರುಸೊತ್ತಿದ್ದರೆ ಕಮೆಂಟಿಸಿ....
-ಕೃಷ್ಣಮೋಹನ ತಲೆಂಗಳ (10.06.2025)
No comments:
Post a Comment