ಗ್ರಾಮಗಳಲ್ಲೂ ಕಸ ವಿಲೇWORRY: ಕುರ್ನಾಡು ಗ್ರಾ.ಪಂ. ಸ್ಪಂದನೆ
ಮಳೆಗಾಲ ಕಳೆದ ಕೂಡಲೇ ಗ್ರಾಮಗಳಲ್ಲೂ ರಸ್ತೆ ಪಕ್ಕದ ಹುಲ್ಲು ಕತ್ತರಿಸಿದ ತಕ್ಷಣ ಅಲ್ಲಿ ಸಾರ್ವಜನಿಕರು ಎಸೆದ ತ್ಯಾಜ್ಯ, ಪ್ಲಾಸ್ಟಿಕ್, ಬಾಟಲಿಗಳು ಪ್ರತ್ಯಕ್ಷವಾಗುವುದು ಸಣ್ಣ ಸಮಸ್ಯೆ ಏನಲ್ಲ... ಉಳ್ಳಾಲ ತಾಕೂಕಿನ ಕುರ್ನಾಡು ಗ್ರಾ.ಪಂ.ನಲ್ಲೂ ಈ ಸಮಸ್ಯೆ ಭಯಂಕರವಾಗಿ ಕಾಣಿಸಿತ್ತು. ಗ್ರಾಮದ ನಾಗರಿಕನಾಗಿ ನಾನದನ್ನು ಚಿತ್ರ ಸಹಿತ ಬರೆದು ಜಾಲತಾಣಗಳಲ್ಲಿ ಹಂಚಿಕೊಂಡಿದ್ದೆ. ಬರಹದ ಕೊಂಡಿಯನ್ನು ಗ್ರಾ.ಪಂ. ಗ್ರೂಪಿನಲ್ಲೂ ಶೇರ್ ಮಾಡಿದ್ದೆ.
ಪಂಚಾಯತ್ ಆಡಳಿತ ತಕ್ಷಣ ಸ್ಪಂದಿಸಿತು! ಪಂಚಾಯತ್ ಉಪಾಧ್ಯಕ್ಷ, ಪೂರ್ವಾಶ್ರಮದಲ್ಲಿ ಪ್ರೈಮರಿ ಸಹಪಾಠಿಯೂ ಆಗಿದ್ದ ಅಶ್ರಫ್ ಕುರ್ನಾಡು ಕರೆ ಮಾಡಿ ಸಮಸ್ಯೆ ಕುರಿತ ಬರಹ ಓದಿದ್ದು ಸಮಸ್ಯೆ ಪರಿಹಾರಕ್ಕೆ ದಾರಿ ಹುಡುಕುವುದಾಗಿ ಭರವಸೆ ನೀಡಿದ್ದರು.
ಇದರ ಮೊದಲ ಹಂತವಾಗಿ
ರಸ್ತೆ ಪಕ್ಕದ ಕಸ ಸಮಸ್ಯೆ ವಿಲೇವಾರಿಗೆ ಡಿ.13ರಂದು ಮಂಗಳವಾರ ಒಂದು ಲೆವೆಲಿಗೆ ಮೇಲ್ನೋಟಕ್ಕೆ ಕಾಣುವ ತ್ಯಾಜ್ಯಗಳನ್ನು ಶ್ರಮದಾನ ಮೂಲಕ ಹೆಕ್ಕಲಾಯಿತು. ಕುರ್ನಾಡು ಗ್ರಾ.ಪಂ. ವ್ಯಾಪ್ತಿಯ ಮುಡಿಪಿನಿಂದ ತೆಕ್ಕುಂಜ, ಕೊಡಕ್ಕಲು ಸಂಪರ್ಕ ರಸ್ತೆಯ ಇಕ್ಕೆಲಗಳ ತ್ಯಾಜ್ಯಗಳನ್ನು ಜನಶಿಕ್ಷಣ ಟ್ರಸ್ಟ್, ಗ್ರಾ.ಪಂ. ಸಿಬ್ಬಂದಿ ಹಾಗೂ ಕರಾವಳಿ ಆಟೋ ರಿಕ್ಷಾ ಪಾರ್ಕ್ (ರಿ) ಮುಡಿಪು ಇದರ ರಿಕ್ಷಾ ಚಾಲಕರ ನೆರವಿನಿಂದ ಸ್ವಚ್ಛಗೊಳಿಸಲಾಯಿತು.
ದ.ಕ. ಸ್ವಚ್ಛತಾ ರಾಯಭಾರಿಗಳಾದ ಶ್ರೀ ಶೀನ ಶೆಟ್ಟಿ, ಕೃಷ್ಣ ಮೂಲ್ಯರು ಮಾರ್ಗದರ್ಶನ ನೀಡಿದರು. ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೋಲಾಕ್ಷಿ, ಉಪಾಧ್ಯಕ್ಷ ಅಶ್ರಫ್, ಸದಸ್ಯರು, ಪಿಡಿಒ ಕೇಶವ, ಇತರ ಸದಸ್ಯರು, ಪಂಚಾಯಿತಿ ಸಿಬ್ಬಂದಿ, ಕರಾವಳಿ ಆಟೋ ರಿಕ್ಷಾ ಪಾರ್ಕ್ ಅಧ್ಯಕ್ಷ ಪ್ರಸಾದ್ ತೆಕ್ಕುಂಜ ಹಾಗೂ ಇತರ ಪದಾಧಿಕಾರಿಗಳು ಪಾಲ್ಗೊಂಡರು.
ಇಲ್ಲಿದೆ ವಿಡಿಯೋ:
No comments:
Post a Comment