ಕೆಲವು ಮರಳಲಾಗದ ಘಳಿಗೆಗಳು ಬೊಗಸೆಯಿಂದ ಬೆರಳುಗಳೆಡೆಯಿಂದ ಸೋರಿ ಹೋಗುವ ನೀರಿನ ಹಾಗೆ...!

 



ಬದುಕಿನಲ್ಲಿ ಕಳೆದ ಯಾವ ಕ್ಷಣಗಳನ್ನು ಅತ್ತು ಕರೆದರೂ ಮರಳಿ ಪಡೆಯಲಾಗುವುದಿಲ್ಲ, ತಪಸ್ಸಾಚರಿಸಿದರೂ ದಾಟಿ ಬಂದ ದಿನಗಳಿಗೆ ಮತ್ತೊಮ್ಮೆ ಪಾದವಿರಿಸಿ ಬರಲು ಸಾಧ್ಯವಿಲ್ಲ. ಅದು ಬೊಗಸೆಯಲ್ಲಿ ಹಿಡಿದ ನೀರು ಬೆರಳೆಡೆಯಲ್ಲಿ ಸೋರಿ ಹೋದ ಹಾಗೆ. ಕೈ ಬರಿದಾಗುವುದನ್ನು ಬರಿದೇ ನಾವು ನೋಡುತ್ತಾ ಕೂರಬೇಕಷ್ಟೆ... ಅಂಗೈಯಲ್ಲಿ ಉಳಿದ ಚಮಚದಷ್ಟು ನೀರನ್ನೇ ನೆನಪುಗಳು ಅಂತ ಕರೆಯಬಹುದೋ ಏನೋ...

ವರ್ಷ ಎಷ್ಟೇ ಉರುಳಿದರೂ ಕೆಲವನ್ನು, ಕೆಲವರನ್ನು ಹಾಗೂ ಕೆಲವು ಕ್ಷಣಗಳನ್ನು ಮರೆಯಲು ಸಾಧ್ಯವಾಗುವುದಿಲ್ಲ ಅಲ್ವ... ಮರೆಯಲಾಗುವುದಿಲ್ಲ ಎನ್ನುವುದಕ್ಕಿಂತ ಕೆಲವೊಂದು ಮರೆತು ಹೋಗುವುದಿಲ್ಲ ಎಂದರೆ ಸರಿಯಾದೀತು. ಎಷ್ಟೇ ಸಣ್ಣವರಾಗಿದ್ದಾಗ ಘಟಿಸಿದ ವಿಚಾರವೇ ಆಗಿರಲಿ, ಎಲ್ಲೋ, ಯಾವಾಗಲೋ ಆಗಿ ಹೋದ ಸಂಗತಿ ಆಗಿರಲಿ ಬದುಕಿನುದ್ದಕ್ಕೂ ಅರಿವಿರುವ ತನಕ ನೆನಪಾಗಿ ಆಗೀಗ ಕಾಡುತ್ತಲೇ ಇರುತ್ತದೆ ಅಲ್ವ...

ಪ್ರೈಮರಿಯಲ್ಲಿ ಒಂದನೇ ಕ್ಲಾಸಿಗೆ ಅಡ್ಮಿಶನ್ ಆಗಿ ಕ್ಲಾಸಿಗೆ ಕರ್ಕೊಂಡೋದ ಕೂಡ್ಲೇ ಬೆಂಚಿನಲ್ಲಿ ಕೂರದೆ ಅಪ್ಪನ ಹಿಂದೆ ಕೂಗುತ್ತಾ ಹೊರಗೆ ಓಡಿದ್ದು, ನಾಲ್ಕನೇ ಕ್ಲಾಸಿನಲ್ಲಿ ಯಕ್ಷಗಾನದಲ್ಲಿ ವೇಷ ಹಾಕುವಂತೆ ಶಂಕರನಾರಾಯಣ ಮಾಷ್ಟ್ರು ಎಷ್ಟು ಒತ್ತಾಯ ಮಾಡಿದರೂ ಒಪ್ಪದೇ ಸಂಕೋಚದಿಂದ ತಪ್ಪಿಸಿಕೊಂಡದ್ದು, ಸ್ಕೂಲ್ಡೇ ದಿನ ನಾಟಕದಲ್ಲಿ ವೇಷ ಹಾಕಿ ಗ್ರೀನ್ ರೂಮಿನಲ್ಲೇ ಬಾಕಿಯಾಗಿ ಸ್ಟೇಜಿಯಲ್ಲಿ ಪ್ರೈಝಿಗೆ ಹೆಸರು ಕರೆಯುವಾಗ ಸ್ಟೇಜಿಗೆ ಹೋಗಲಾಗದೆ ಒಳಗೊಳಗೇ ಕೂಗಿದ್ದು, ಕಾಪಿ ಬರ್ದ ಪುಸ್ತಕ ಬ್ಯಾಗಿಗೆ ತುಂಬಿಸಲು ಬಾಕಿ ಆಗಿ ಮನೆಯಲ್ಲಿ ಉಳಿದು, ಟೀಚರ್ ಕೇಳಿದಾಗ ಸಡನ್ ನೆನಪಾಗಿ ಎದೆ ಬಡಿತ ಜೋರಾಗಿದ್ದು, ಯಾರದ್ದೋ ಮೇಲಿನ ಸಿಟ್ಟಲ್ಲಿ ಲೀಲಾ ಟೀಚರ್ ಒಂದು ದಿನ ಇಡೀ ಪೀರಿಯಡ್ ವಿನಾ ಕಾರಣ ಬೈದದ್ದು, ಜೋರು ಮಳೆ ಬರುವಾಗ ಕ್ಲಾಸಿಗೆ ಮಾಷ್ಟ್ರು ಬರುವ ಮೊದಲ ಓ..... ಅಂತ ಕಿರುಚಿದ್ದು...ಇವುಗಳೆಲ್ಲ ಸಣ್ಣ ಸಣ್ಣ ಸಂಗತಿಗಳೇ... ಬ್ರೇಕಿಂಗ್ ನ್ಯೂಸ್ ಮಾಡುವಂತಹ ವಿಚಾರಗಳಲ್ಲ. ಎಲ್ಲರ ಬದುಕಿನಲ್ಲೂ ಘಟಿಸಿರುವಂಥದ್ದು. ಆದರೂ ಆ ಫೈಲ್ ಓಪನ್ ಮಾಡಿದ್ರೆ ಈಗಷ್ಟೇ ನಡೆದ ಘಟನೆ ಥರ ರೀಲ್ ಓಡುತ್ತಲೇ ಇರುತ್ತದೆ. ಆ ಸದ್ದು, ಆಗಿನ ವಾತಾವರಣ, ಹತ್ರ ಕುಳಿತವರು ಎಲ್ಲ ಮಸುಕುಮಸುಕಾಗಿ ಬ್ಲಾಕ್ ಆಂಡ್ ವೈಟ್ ಟಿ.ವಿಯಲ್ಲಿ ನೋಡಿದ ಹಾಗೆ ಭಾಸವಾಗುತ್ತದೆ...

ಈ ಪೈಕಿ ಶಾಲೆಯಲ್ಲಿ, ಹೈಸ್ಕೂಲಿನಲ್ಲಿ, ಕಾಲೇಜಿನಲ್ಲಿ, ಮೊದಮೊದಲು ಕೆಲಸಕ್ಕೆ ಸೇರಿದ ಜಾಗದಲ್ಲಿ ಜೊತೆಯಾಗಿದ್ದವರು, ಕಿವಿಗಳಾಗಿ, ಕೈಗಳಾಗಿ, ಮಾತುಗಳಾಗಿ, ಹೆಗಲುಗಳಾಗಿ, ಆಕರ್ಷಣೆಯಾಗಿ, ದೂರದ ಬೆಟ್ಟಗಳಾಗಿ ಇದ್ದವರ ಪೈಕಿ ಎಷ್ಟೋ ಮಂದಿಯ ಸಂಪರ್ಕವೇ ತಪ್ಪಿರುತ್ತದೆ. ಮತ್ತೊಮ್ಮೆ ಸಿಕ್ಕಿದರೆ ಗುರ್ತ ಸಿಗದಷ್ಟು ಬದಲಾಗಿರ್ತಾರೆ. ಆದರೆ ಅಂದಿನ ಅವರು-ನಮ್ಮ ನಡುವಿನ ಸಂವಹನ, ಆಪ್ಯಾಯಮಾನ ಘಳಿಗೆಗಳು ಹಾಗೂ ಆಗಿನ ಪರಿಸ್ಥಿತಿಗಳು ಸೇರಿ ಸೃಷ್ಟಿಸಿದ್ದ ಕೆಮಿಸ್ಟ್ರಿಗೆ ಕಾಲದ ಹೊಡೆತದ ಪರಿಣಾಮ ಎಳ್ಳಷ್ಟೂ ಆಗಿರುವುದಿಲ್ಲ...

ಈಗ ನಾವಿರುವ ಪರಿಸ್ಥಿತಿಯೇ ಶಾಶ್ವತವೋ ಎಂಬಂಥ ಭಾವ ಆ ಹೊತ್ತಿಗೆ ಬದುಕಿನ ಎಲ್ಲ ಮಜಲುಗಳಲ್ಲೂ ಭಾಸವಾಗಿರುತ್ತದೆ... ಇಂದಿರುವುದೇ ನನ್ನ ಬದುಕು ಎಂಬ ಹಾಗೆ. ಆದರೆ ಇಂದು ನಾಳೆ... ಮತ್ತೆ ನಾಡಿದ್ದು, ಕಳೆದ ವಾರ, ಕಳೆದ ತಿಂಗಳು, ಕಳೆದ ವರ್ಷ, ಕಳೆದ ದಶಕ ಹೀಗೆ ಸರಿದು ಹೋಗುತ್ತಾ ಬಂದ ಹಾಗೆ... ಶಾಶ್ವತ ಅಂದುಕೊಂಡ ಅಂದಿನ ಆ ದಿನ ಮತ್ತೆಮ್ಮೆ ತಿರುಗಿದಾಗ ಇತಿಹಾಸ. ಅದು ಖುಷಿಯೋ, ವಿಷಾದವೋ, ಜಿಗುಪ್ಸೆಯೋ, ಆತಂಕವೋ, ಮರೆಯಲಾಗದ ನೋವೋ ಎಂಥದ್ದೂ ಇರಬಹುದು. ಈಗ ಇರುವುದೇ ಶಾಶ್ವತವಲ್ಲ. ಹಾಗಂತ ಈಗಕ್ಕೆ ಗೊತ್ತಾಗುವುದಿಲ್ಲ. ಈಗ ಹೋಗಿ ಆಗ ಅಂತ ಆದಾಗಲೇ ಮತ್ತಷ್ಟು ಈಗಗಳು ಬರುತ್ತವೆ ಎಂಬುದು ಮನುಷ್ಯಮಾತ್ರರಾದ ನಮ್ಮ ಅರಿವಿಗೆ ತಿಳಿಯುವುದು. ಹಾಗೆ ಈಗ ಕುಳಿತು ಆಗಗಳ ಬಗ್ಗೆ ಯೋಚಿಸುವಾಗ ನೆನಪಿನ ಕೋಶಗಳಲ್ಲಿ ಬೆರಳೆಡೆಯಿಂದ ಸೋರಿ ಹೋಗಿರದ ನೀರಿನ ಪಸೆಯ ಹಾಗಿರುವ ನೆನಪುಗಳು ಒಂದು ಬದುಕಿನ ವಿವಿಧ ಕೋನಗಳನ್ನು ಕಟ್ಟಿಕೊಟ್ಟು ಚದುರಿ ಹೋದ ಚಿತ್ರಗಳ ಭಾಗಗಳನ್ನು ಜೋಡಿಸಿದ ಹಾಗೆ ಕಾಡುತ್ತವೆ... ಏನಂತೀರಿ?

ಕೆಲವರು ನಮ್ಮ ಬದುಕಿನ ವೃತ್ತದೊಳಗೆ ಇಣುಕಿದಾಗ, ಹೆಜ್ಜೆ ಊರಿದಾಗ, ಮತ್ತೆ ಆಪ್ತರಾದಾಗ ಸುತಾರಾಂ ನಮಗೆ ಗೊತ್ತಿರುವುದಿಲ್ಲ... ಇವರು ಮತ್ತು ನನ್ನ ಸಾಂಗತ್ಯ ಎಷ್ಟು ದಿನದ್ದು, ಎಲ್ಲಿಯವರೆಗಿನದ್ದು ಅಂತ. ಹಾಗೊಂದು ಪ್ರೋಗ್ರಾಮಿಂಗ್ ಮಾಡಿಡಲು ನಾವು ಯಂತ್ರಗಳಲ್ಲ. ನಾವು ಯಕಶ್ಚಿತ್ ಮನುಷ್ಯರು. ಪರಿಸ್ಥಿತಿ ಹಾಗೂ ಮನಃಸ್ಥಿತಿಯ ಗೊಂಬೆಗಳು ನಾವು. ಹಾಗೆ ಇಣುಕಿ ದೀರ್ಘ ಕಾಲ ಸಂಪರ್ಕದಲ್ಲಿ ಇರುವವರು, ಇಣುಕಿ, ಮೈದಡವಿ ಹೋದ್ದು ಕೆಲವೇ ಹೊತ್ತಾದರೂ ಬದುಕಿನುದ್ದಕ್ಕೂ ನೆನಪಿನಲ್ಲಿರುವಷ್ಟು ಅನುಭವಗಳನ್ನು ಕೊಟ್ಟವರು, ಆಧರಿಸಿದವರು, ದಾರಿ ತೋರಿಸಿದವರು, ಎಂಥದ್ದೂ ಪ್ರತಿಫಲದ ಅಪೇಕ್ಷೆ ಇಲ್ಲದೆ ನಮ್ಮ ನಗುವಿನಲ್ಲಿ ತಾವು ಮಂದಹಾಸ ಸೇರಿಸಿದವರು... ಅಂಥವರನ್ನು ಮರೆಯಲು ಆಗುವುದೇ ಇಲ್ಲ... ಹಾಗಾಗಿ ಎಷ್ಟು ದೂರ ಯಾರ ಜೊತೆಗೆ ನಡೆದಿದ್ದೇವೆ ಎಂಬುದಕ್ಕಿಂತ ನಡೆದವರ ಹೆಜ್ಜೆ ಗುರುತು ನಮ್ಮ ಎದೆಯಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದರ ಆಧಾರದಲ್ಲೇ ಕ್ಷಣಗಳು ಹಾಗೂ ಜನಗಳು ನಮ್ಮ ನೆನಪಿನ ಕೋಶದಲ್ಲಿ ಡಿಲೀಟ್ ಆಗದೆ ಆಗಾಗ ನೆನಪಾಗಿ ಚಿತ್ತಭಿತ್ತಿಯಲ್ಲಿ ಓಡಾಡುತ್ತಲೇ ಇರುತ್ತಾರೆ...

ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದಾಗ ಗಣ್ಯರ ಸಂದರ್ಶನ ಮಾಡುವುದೂ ನಮಗಿದ್ದ ಒಂದು ಅಸೈನ್ ಮೆಂಟ್. ಆಗ ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ಅಬ್ದುಲ್ ರಷೀದ್ ಅವರ ರೇಡಿಯೋ ಅಭಿಮಾನಿ ನಾನು. ಸಹಜವಾಗಿ ಅವರ ಸಂದರ್ಶನಕ್ಕೆ ಅಪಾಯಿಂಟ್ ಮೆಂಟ್ ತಕ್ಕೊಂಡೇ ಹೋಗಿದ್ದೆ. ಅವರು ಯಾವುದೇ ಪ್ರಶ್ನೆಗಳಿಗೆ  ಸೀರಿಯಸ್ಸಾಗಿ ಉತ್ತರ ನೀಡುವುದಿಲ್ಲ. ಅವರು ಹಾಗಿರುವ ವ್ಯಕ್ತಿಯೇ ಅಲ್ಲ. ಅತ್ಯಂತ ಸಹಜವಾಗಿ ಇರುವವರು. ಮತ್ತೆ ಸಂದರ್ಶನ, ಪ್ರಶಸ್ತಿ, ಪ್ರಚಾರಗಳು ಅವುಗಳನ್ನು ಭಯಂಕರ ಸೀರಿಯಸ್ಸಾಗಿ ಅನುಸರಿಸಿ ಹೋಗುವ ಸಿದ್ಧಮಾದರಿ ವ್ಯಕ್ತಿಯೂ ಅಲ್ಲ. ಅವರಿಗೆ ನನ್ನದೊಂದು ಪ್ರಶ್ನೆ ಇತ್ತು... ನೀವು ಸಣ್ಣವರಾಗಿದ್ದಾಗ ಮುಂದೆ ಏನಾಗಬೇಕು ಅಂತ ಇದ್ರಿ ಅಂತ. ಅದಕ್ಕವರು ಹೇಳಿದ ಉತ್ತರ ಬಸ್ ಕಂಡಕ್ಟರ್ ಅಥವಾ ಕ್ಲೀನರ್ ಆಗಬೇಕು ಅಂತ ಆಸೆ ಇತ್ತು ಅಂತ. ನನಗೂ ಎಳವೆಯಲ್ಲಿ ಅದೇ ಆಸೆ ಇತ್ತು! ಹಾಗಂತ ಅವರ ಉತ್ತರವನ್ನು ಎಲ್ಲ ಅವರದ್ದೇ ಧಾಟಿಯಲ್ಲಿ ದಾಖಲಿಸುತ್ತ ಹೋದರೆ ನನ್ನ ಅಸೈನ್ ಮೆಂಟ್ ಗತಿ ಗೋವಿಂದ. ಕೊನೆಗೆ ಹೇಗೋ ಅವರನ್ನು ಮಾತನಾಡಿಸಿ ದಾಖಲಿಸಿದ್ದಾಯಿತು... ಆದರೆ ಅವರ ಬಿಗುಮಾನ ಇಲ್ಲದ ವ್ಯಕ್ತಿತ್ವ ತುಂಬ ಆಪ್ತ ಅನ್ನಿಸಿತು. ಅವತ್ತಿಗೂ, ಇವತ್ತಿಗೂ ನಾನವರ ಅಭಿಮಾನಿಯೇ...

ಈ ನಿದರ್ಶನ ಕೊಟ್ಟ ಉದ್ದೇಶ ಇಷ್ಟೇ... ನಮಗೆ ಯಾರದ್ದೋ ಮೇಲೆ ಅಭಿಮಾನ ಇರ್ತದೆ, ಅಕ್ಕರೆ ಇರ್ತದೆ, ನಿರೀಕ್ಷೆ ಇರ್ತದೆ. ಬಹಳಷ್ಟು ಸಲ ಅವರ ಬಗ್ಗೆ ಎಂತದ್ದೂ ಗೊತ್ತಿರುವುದಿಲ್ಲ. ಸಾಮಾಜಿಕವಾಗಿ ಜನಪ್ರಿಯರಾಗಿರುವವರು ವೈಯಕ್ತಿವಾಗಿ ಹೇಗಿರ್ತಾರೆ, ಅವರ ಸ್ವಭಾವ ಎಂತದ್ದು ಒಂದು ಗೊತ್ತಿರುವುದಿಲ್ಲ. ವೇದಿಕೆಗಳಲ್ಲಿ, ರೇಡಿಯೋ, ಟಿವಿಗಳಲ್ಲಿ, ಸಿನಿಮಾದಲ್ಲಿ ಈಗೀಗ ಫೇಸ್ಬುಕ್ಕು, ಇನ್ ಸ್ಟಾಗ್ರಾಮಿನಲ್ಲಿ ಅವರ ಓಡಾಟ ಕಂಡು ಆಕರ್ಷಿತರಾಗಿ ನಾವು ಅವರ ಅಭಿಮಾನಿಗಳಾಗಿರ್ತೇವೆ. ಅವರ ಧ್ವನಿ, ಅವರ ಬಾಹ್ಯ ವ್ಯಕ್ತಿತ್ವ, ಸೌಂದರ್ಯ, ಮಾತು, ಹಾಡು, ನಿರೂಪಣೆ, ಭಾಷಣ...ಹೀಗೆ ಹತ್ತಾರು ಕಾರಣಗಳಿರಬಹುದು. ಆದರೆ, ಬಹಳಷ್ಟು ಸಲ ನಾವು ಪ್ರತಿಭೆ ಮೇಲಿನ ಅಭಿಮಾನ ಮತ್ತು ವ್ಯಕ್ತಿಗಳ ಮೇಲಿನ ವ್ಯತ್ಯಾಸವನ್ನೇ ಕಂಡುಕೊಳ್ಳುವಲ್ಲಿ ವಿಫಲರಾಗುತ್ತೇವೆ. ನಾವು ಹೊರಗಿನಿಂದ ಕಂಡ ಹಾಗೆ ನಾವು ಅಭಿಮಾನಿಸುವ ವ್ಯಕ್ತಿಗಳು ಬದುಕಿನುದ್ದಕ್ಕೂ ಇರ್ತಾರೆ ಎಂಬ ಹುಚ್ಚು ಕಲ್ಪನೆ, ನಿರೀಕ್ಷೆ ಮತ್ತು ಆಗ್ರಹ ಬಹಳಷ್ಟು ಸಂದರ್ಭ ಅವರನ್ನು ಹತ್ತಿರದಿಂದ ಕಂಡಾಗ ಅವರ ಮೇಲಿನ ಅಭಿಮಾನ ತೊರೆಯುವ ಹಾಗೆ ಮಾಡುತ್ತದೆ... ಎಲ್ಲ ಸಂದರ್ಭ ಹೀಗೆಯೇ ಆಗುತ್ತದೆ ಅಂತ ಅಲ್ಲ...

ಬದುಕಿನಲ್ಲಿ ಮರೆಯಲಾಗದ ವ್ಯಕ್ತಿಗಳನ್ನು ಮೊದಲ ಸಲ ಕಂಡದ್ದು, ಮಾತನಾಡಿದ್ದು, ಅವರು ನಮಗೆ ಪ್ರತಿಕ್ರಿಯೆ ನೀಡಿದ್ದು ಮತ್ತೆ ಅವರನ್ನು ಹತ್ತಿರದಿಂದ ನೋಡಲು ಸಾಧ್ಯವಾಗಿದ್ದು, ಈಗಿಗ ಅವರ ಜೊತೆ ಸೆಲ್ಫೀ ತೆಗೆದದ್ದು ಸಹ ನೆನಪಿನ ಬುತ್ತಿಗೊಂದು ಸ್ವಾದಿಷ್ಟ ಆಹಾರ ಆಗ್ತದೆ...

ಟಿಕೆಟ್ ತೆಗೆದುಕೊಂಡು ತೊಡಗುವ ಪ್ರಯಾಣದ ಇತಿಮಿತಿ, ನಿಲ್ದಾಣ ಮತ್ತು ಅವಧಿ ಮೊದಲೇ ಗೊತ್ತಿರ್ತದೆ. ಟಿಕೆಟ್ ತಕ್ಕೊಳ್ಳದೆ ತೊಡಗುವ ಪ್ರಯಾಣದ ನಿಲ್ದಾಣಗಳು ಮತ್ತು ಗಮ್ಯ ನಮಗೆ ಖಂಡಿತಾ ಗೊತ್ತಿರುವುದಿಲ್ಲ. ಯಾರೋ ಬರೆದಿಟ್ಟ ಚಿತ್ರಕತೆ ಥರ ಅದರಷ್ಟಕ್ಕೆ ಹೋಗುತ್ತಾ ಇರುತ್ತದೆ. ಕೆಲವೊಮ್ಮೆ ನಾವದರ ವಿರುದ್ಧ ಈಜುವ ಕ್ರೀಡಾಪಟುಗಳ ಹಾಗೆ, ಹಲವು ಸಲ ನಮ್ಮದೆ ಆತ್ಮಕಥೆಯ ಸಿನಿಮಾದ ಓಟಕ್ಕೆ ನಾವೇ ಪ್ರೇಕ್ಷಕರಾಗಿದ್ದ ಹಾಗೆ ಮತ್ತೊಂದಿಷ್ಟು ಹೊತ್ತು ಆ ಸಿನಿಮಾಗೆ ಅಲ್ಪವಿರಾಮ ಕೊಡಲು ಹೋಗಿ ಜಾರಿ ಬಿದ್ದ ಜಾಣರ ಹಾಗೆ ಮೈಗೊಡವಿ ಎದ್ದು ಮತ್ತೆ ಪೂರ್ವನಿಗದಿತ ವೇಗದ ಮಿತಿಗೆ ಹೊಂದಿಕೊಂಡು ನಡೆಯುತ್ತಲೇ ಇರ್ತೇವೆ... ಹಾಗೆ ನಡೆಯುವಾಗ ಲಾಭ, ಪ್ರಚಾರ, ಸ್ವಾರ್ಥ, ನಿರೀಕ್ಷೆ ಎಂಥದ್ದೂ ಇಲ್ಲದೆ ನಿಷ್ಕಳಂಕವಾಗಿ ಸಿಕ್ಕಿದ ಘಳಿಗೆಗಳು, ಸಿಕ್ಕಿದ ವ್ಯಕ್ತಿಗಳು ಮತ್ತು ಅನುಭವಗಳು ಅಳಿಸಿ ಹಾಕಲಾಗದಷ್ಟು ಗಾಢವಾಗಿ ನೆನಪಿನ ಗೋಡೆಗಳಿಗೆ ಅಂಟಿಕೊಳ್ಳುವ ಫೈಲುಗಳಾಗಿ ಜೊತೆ ಜೊತೆಗೇ ಹೃದಯದ ಜೋಳಿಗೆಯಲ್ಲಿ ಅವಿತಿರುತ್ತವೆ... ಮತ್ತೆ ಬೇಕು ಅಂತ ಅಂದ್ರೂ ಏಕಮುಖ ಪ್ರಯಾಣದ ಈ ಗಾಡಿ ಮತ್ತೊಂದು ಸಲ ಬಿಲ್ಕುಲ್ ಅದೇ ನಿಲ್ದಾಣಕ್ಕೆ ಮರಳಿ ಹೋಗುವುದಿಲ್ಲ. ವೇಗವಾಗಿ ಹೋಗುವ ರೈಲಿನಿಂದ ಕ್ಲಿಕ್ಕಿಸಿದ ಗದ್ದೆಯ ಫೋಟೋದಲ್ಲಿ ಅಸ್ಪಷ್ಟವಾಗಿ ಸಿಕ್ಕಿದ ನವಿಲಿನ ಫೋಟೋವನ್ನು ಝೂಮ್ ಮಾಡಿದಾಗ ಎಷ್ಟು ಚಂದ ಕಾಣ್ತದೋ ಅಷ್ಟೇ ನಮ್ಮ ಪಾಲಿಗೆ ದಕ್ಕಿದ ಅದೃಷ್ಟ ಅಂತಹ ನೆನಪುಗಳನ್ನು ಕೊಟ್ಟವರ ಜೊತೆಗಿನ ಅನುಭೂತಿ ಹೊಂದಲು ಇದ್ದದ್ದು ಅಂತ ಅರ್ಥೈಸಿಕೊಳ್ಳಬೇಕಾದ್ದು ಅನಿವಾರ್ಯ!

-ಕೃಷ್ಣಮೋಹನ ತಲೆಂಗಳ (05.12.2023)

No comments: