ಕಸ ವಿಲೇworry: ಪರಿಸ್ಥಿತಿಗಿಂತ ಮೊದಲು ಮನಃಸ್ಥಿತಿ ಬದಲಾಗಬೇಕು!

 



ನಿಮ್ಮ ನಿಮ್ಮ ಮನೆಗಳ ಎದುರಿನ ರಸ್ತೆಗೆ ಈ ರೀತಿ ಕಸ ಎಸೆಯಲು ನಿಮ್ಮ ಮನೆಯವರು ಬಿಟ್ಟಾರ?! ಹೋಗಲಿ, ದಿನಗಟ್ಟಲೆ ನಿಮ್ಮ ಮನೆ ಅಂಗಳದಲ್ಲಿ ಈ ರೀತಿ ರಾಶಿ, ರಾಶಿ ವೈವಿಧ್ಯಮಯ ಕಸದ ಹಾಸಿಗೆ ಬಿಡಿಸಿದ್ದರೆ ನೀವದನ್ನು ಸ್ವಚ್ಛಗೊಳಿಸದೇ ಇರಲು ಸಾಧ್ಯವೇ... ಇದೊಂದು ಸಾಂಕೇತಿಕ ಫೋಟೋ ಅಷ್ಟೆ...

ಉಳ್ಳಾಲ ತಾಲೂಕು ಕುರ್ನಾಡು ಗ್ರಾಮದ ಮುಡಿಪುವಿನಿಂದ ತೆಕ್ಕುಂಜೆ-ಕೊಡಕ್ಕಲ್ಲು ಸಂಪರ್ಕದ ಬೈಪಾಸ್ ರಸ್ತೆ ಪಕ್ಕದ ಸುಂದರ ದೃಶ್ಯ ಇದು. ಮಳೆಗಾಲದಲ್ಲಿ ರಸ್ತೆ ಪಕ್ಕ ಆಳೆತ್ತರದ ಹುಲ್ಲು ಬೆಳೆದಿತ್ತು. ಈಗ ಎಲ್ಲೆಡೆ ಪಂಚಾಯತ್ ವತಿಯಿಂದ ಹುಲ್ಲು ಕತ್ತರಿಸುವ ಸೀಸನ್ ಕಾಣಿಸುತ್ತಿದೆ. ಈ ನಡುವೆ ಮಳೆಗಾಲದಲ್ಲಿ ಜನ ತಮಗೆ ಖುಷಿ ಬಂದಂತೆ ರಸ್ತೆ ಪಕ್ಕ ಮನೆಯ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ, ಅಷ್ಟೇ ಯಾಕೆ ಕುಡಿದ ಬಾಟಲುಗಳನ್ನೂ ಎಸೆದಿದ್ದರು. ಈಗ ಹುಲ್ಲು ಕತ್ತರಿಸುತ್ತಿದ್ದಂತೆ ಈ ತ್ಯಾಜ್ಯ ರಾಶಿ ಭಾರಿ ಚಂದಕೆ ಸಾಲು ಸಾಲಾಗಿ ಗೋಚರಿಸತೊಡಗಿದೆ.

ತುಂಬ ಚಂದದ ಹಸಿರು ಪರಿಸರ, ಗಿಡ ಮರಗಳಿರುವ ಪ್ರಕೃತಿಯ ನಡುವೆ ರಸ್ತೆ ಬದಿಯ ಈ ಕಸದ ಕೊಂಪೆ ಅಸಹ್ಯವಾಗಿ ಕಾಣಿಸುತ್ತಿದೆ. ಇಲ್ಲಿ ಮಾತ್ರವಲ್ಲ, ಗ್ರಾಮೀಣ ಭಾಗದ ಎಲ್ಲೆಲ್ಲಿ ರಸ್ತೆ ಪಕ್ಕ ಹುಲ್ಲು ಕತ್ತರಿಸಿದ್ದಾರೋ ಅಲ್ಲೆಲ್ಲ ಈ ದೃಶ್ಯ ಗೋಚರಿಸುತ್ತಿದೆ. ಇದಕ್ಕೆ ನಾನು ಸ್ಥಳೀಯಾಡಳಿತವನ್ನು ದೂರುವುದಿಲ್ಲ.  ಜನಸಾಮಾನ್ಯರಲ್ಲಿ ನನ್ನ ಪ್ರಶ್ನೆ...

1)      ನಮ್ಮ ಮನೆ ಕ್ಲೀನ್ ಇರ್ಬೇಕು ಎಂಬ ತುಡಿತ ನಮ್ಮಲ್ಲಿರ್ತದೆ. ಹಾಗಿರುವಾಗ ಮನೆಯ ಕಸ ಕೊಂಡು ಹೋಗಿ ರಸ್ತೆ ಪಕ್ಕ ಎಸೆದರೆ ಕೊಳಕು ಕಾಣುವುದು ಯಾರ ಊರು?

2)      ಜನರೆಲ್ಲ ಅಸಹಕಾರ ತೋರಿ ಕಸವನ್ನು ರಸ್ತೆಗೇ ಎಸೆದರೆ, ಇದನ್ನು ಕ್ಲೀನ್ ಮಾಡ್ತಾ ಇರಲು ಪಂಚಾಯಿತಿಯವರಿಗೆ ಬೇರೆ ಕೆಲಸ ಇಲ್ವ?

3)      ಬಹುತೇಕ ಎಲ್ಲ ಊರುಗಳಲ್ಲೂ ಕಸ ಎಸೆಯಲು ವ್ಯವಸ್ಥೆ, ಸ್ಥಳ ಅಂತ ಇರ್ತದೆ. ಆದರೂ ನಾವದನ್ನು ಪಾಲಿಸದೆ ರಸ್ತೆಗೆ, ತೋಡಿಗೆ, ಹೊಳೆಗೆ, ಚರಂಡಿಗೆ ಕಸ ಎಸೆಯುತ್ತೇವೆ.

4)      ಕುಡಿದ ಬಾಟಲಿಗಳನ್ನೂ ರಸ್ತೆ ಪಕ್ಕವೇ ಎಸೆಯುತ್ತೀರಲ್ಲ. ಯಾಕೆ ಅಷ್ಟು ಕಷ್ಟದಲ್ಲಿ ಕುಡಿಯಬೇಕು? ಅಷ್ಟೊಂದು ಉಡಾಫೆ ಯಾಕೆ...? 100 ಜನರಲ್ಲಿ 99 ಮಂದಿ ಸ್ವಚ್ಛತೆ ಪಾಲಿಸಿ ಒಬ್ಬ ಅಸಹಕಾರ, ಬೇಜವಾಬ್ದಾರಿ ತೋರಿದರೂ ಸಾಕು, ಸ್ವಚ್ಛತೆ ಕಲ್ಪನೆ ಹಾಳಾಗುತ್ತದೆ.

5)      ಸಾರ್ವಜನಿಕ ಶೌಚಾಲಯಗಳೂ ಅಷ್ಟೇ... ಸರ್ಕಾರ ಲಕ್ಷಗಟ್ಟಲೆ ಸುರಿದು ನಿರ್ಮಿಸುವ ಶೌಚಾಲಯಗಳು ಆರಂಭದಲ್ಲಿ ಚೆನ್ನಾಗಿಯೇ ಇರ್ತವೆ. ಅದಕ್ಕೆ ಸರಿಯಾಗಿ ಫ್ಲಶ್ ಮಾಡದೆ, ಕಂಡ ಕಂಡ ಬರಹ ಬರೆದು, ಬಾಗಿಲಿನ ಲಾಕ್ ಕಿತ್ತು... ಏನೆಲ್ಲ ಮಾಡಿ ಹಾಳು ಮಾಡುವವರೇ ನಾವು... ಕೊನೆಗೆ ಅದು ಯಾರ ಉಪಯೋಗಕ್ಕೂ ಸಿಕ್ಕದ ಹಾಗಾಗ್ತದೆ ಅಷ್ಟೆ...

6)      ನನ್ನ ಮನೆ ಚಂದ ಬೇಕು, ನನ್ನ ಅಂಗಳ ಕ್ಲೀನ್ ಇರ್ಬೇಕು... ನನ್ನ ಊರಿನ ವಠಾರ, ರಸ್ತೆ, ಮೈದಾನ, ಚರಂಡಿ, ಬಸ್ ಸ್ಟ್ಯಾಂಡ್ ಗಬ್ಬೆದ್ದರೆ ಅಷ್ಟೇ ಹೋಯಿತು... ಯಾರಪ್ಪನ ಆಸ್ತಿ ಎಂಬ ಉಡಾಫೆ ನಮ್ಮ ತಲೆಯಲ್ಲಿ ತುಂಬಿರುವ ವರೆಗೆ ಈ ಸಮಸ್ಯೆಗೆ ಪರಿಹಾರವೇ ಇಲ್ಲ. ಇದು ಕಾನೂನು ಸರಿ ಮಾಡಬೇಕಾದ ಸಮಸ್ಯೆ ಅಲ್ಲ. ಬದಲಾಗಬೇಕಾದ್ದು ನಮ್ಮ ಮನಃಸ್ಥಿತಿ....

-ಕೃಷ್ಣಮೋಹನ ತಲೆಂಗಳ (1.12.2023)

No comments:

Popular Posts