ನಿನ್ನೆ ಸತ್ತಿಹುದೀಗ, ನಾಳೆ ಹುಟ್ಟದೆ ಇರದು!

 



 

ನಿನ್ನೆ ಸತ್ತಿಹುದೀಗ, ನಾಳೆ ಹುಟ್ಟದೆ ಇರದು... ಇಂದು ಸೊಗವಿರಲು ಅಳುವುದು ಏಕೆ... ಖ್ಯಾತ ಕವಿಯ ಸಾಲುಗಳು ಪ್ರತಿ ವರ್ಷ ಡಿ.31ರಂದು ಮಾತ್ರ ಖಂಡಿತಾ ನೆನಪಾಗುತ್ತದೆ. ಕ್ಯಾಲೆಂಡರ್ ವರ್ಷದ ಕೊನೆಯ ದಿನ ಹಿಂತಿರುಗಿ ನೋಡಿ, ಮರುದಿನದ ಸೂರ್ಯಾಸ್ತದತ್ತ ದೃಷ್ಟಿ ನೆಟ್ಟು ಪ್ರತಿ ದಿನ ಹೊಸ ಸೂರ್ಯೋದಯ ಆಗುತ್ತದೆ, ಜ.1ರ ಸೂರ್ಯೋದಯ ನನ್ನ ಪಾಲಿಗೆ ಹೊಸತೇನೂ ಅಲ್ಲ. ಎಲ್ಲ ದಿನದ ಹಾಗೆ ಮತ್ತೊಂದು ದಿನ, ಬದಲಾವಣೆ ಆಗಬೇಕಾದ್ದು ಕ್ಯಾಲೆಂಡರಿನಲ್ಲಿ ಮಾತ್ರ ಅಲ್ಲ, ಮನಸ್ಸಿನಲ್ಲಿ ಅಲ್ವ ಅಂತ ಏನಾದರೂ ಹೇಳಿದರೆ, ಅದು ಋಣಾತ್ಮಕ ಹೇಳಿಕೆ ಎನ್ನಿಸುತ್ತದೆ. ನಕಾರಾತ್ಮಕ ಭಾವವಾಗಿ ಬಿಡುತ್ತದೆ.

ಅದೋ ಅದೋ ಹೊಸ ವರ್ಷ ಬಂದಿದೆ. ನಾಳೆ ಭಯಂಕರ ಬದಲಾವಣೆ ಆಗಲಿದೆ. ನನ್ನ ಬದುಕೇ ಜ.1ರಿಂದ ಬದಲಾಗಲಿದೆ, ನಾಳೆಯಿಂದ ನಾನು ಖಂಡಿತಾ ಬದಲಾಗ್ತೇನೆ. ಅದಕ್ಕೋಸ್ಕರ ಇಂದೇ ಸಂಕಲ್ಪಗಳನ್ನು ಕೈಗೊಳ್ತೇನೆ ಅಂತ ಹೇಳಿದಿರೋ ಇದು ಅಕ್ಷರಶಃ ಉತ್ಪ್ರೇಕ್ಷೆ ಆಗುತ್ತದೆ.

ಈ ಎರಡೂ ವಾದಗಳಿಗಿಂತ ಆಚೆ ನಿಂತು ನಾನು ಯೋಚಿಸುತ್ತಿರುವುದು. ಪ್ರತಿ ವರ್ಷ ಡಿ.31ರ ನಮ್ಮ ಹಾರಾಟ, ಜ.1ರ ಆವೇಶ, ಹೊಸತು ಹೊಸತರ ವಿಶ್ಲೇಷಣೆಗಳಲ್ಲಿ ತೋಯ್ದು ಜ.2,3,4 ಬಂದ ಹಾಗೆಲ್ಲ ಮತ್ತದೇ ನಾವಾಗಿ, ಯಾವ ಹೊಸದರ ಗೊಡವೆಯೂ ಇಲ್ಲದೆ, ನಾಲ್ಕು ದಿನ ಕಳೆದ ಬಳಿಕ 2024 ಕೂಡಾ ಬದುಕಿನ ಭಾಗವೆಂದು ಅನ್ನಿಸ ತೊಡಗಿದ ಬಳಿಕ ಯಥಾಪ್ರಕಾರ ಎಂಬುದೇ ಬದುಕು ಅನ್ನುವುದು ವೇದ್ಯವಾಗುತ್ತದೆ. ಡಿ.31ರ ಅಬ್ಬರದಲ್ಲಿ ಈ ಮಾತು ಹೇಳಿದಾಗ ಅದೊಂದು ಪ್ರತ್ಯೇಕತಾವಾದದ ಮಾತು, ಮೊಂಡುವಾದ, ನಿರಾಶಾವಾದಿಯ ಹಪಹಪಿಕೆಯ ಹಾಗೆ ಭಾಸವಾದೀತು. ಪರವಾಗಿಲ್ಲ. ಇದು ವೈಯಕ್ತಿಕ ಅನಿಸಿಕೆ. ಘೋಷಣೆ ಅಲ್ಲ!

ಪ್ರತಿ ವರ್ಷ ನಾವು ಡಿ.31ರಂದು ಕಳೆದ ಕ್ಯಾಲೆಂಡರ್ ವರ್ಷದ ಪುಟ ತಿರುವಿ ಮೆಲುಕು ಹಾಕುತ್ತೇವೆ. ನಡೆದದ್ದರ ಬಗ್ಗೆ ದೃಷ್ಟಿ ಹಾಯಿಸುತ್ತೇವೆ. ಆದರೆ ನಡೆದ ತಪ್ಪುಗಳಿಂದ ಯಾವುದೇ ಪಾಠ ಕಲಿಯುವುದಿಲ್ಲ! ಕಲಿತರೂ ಮುಂದಿನ ವರ್ಷ ಬದುಕಿನಲ್ಲಿ ಅಳವಡಿಸುವುದಿಲ್ಲ. ಜ.1ರಂದು ಭಯಂಕರ ಸಂಕಲ್ಪಗಳನ್ನು ಕೈಗೊಳ್ತೇವೆ. ಸ್ಟೇಟಸ್ಸುಗಳ ತುಂಬ ಹೊಸ ವರ್ಷದ ಭಯಂಕರ ಶುಭಾಶಯಗಳು ತುಂಬಿ ತುಳುಕುತ್ತವೆ. ಯಾವತ್ತೂ ವಾಟ್ಸಪ್ ಗ್ರೂಪುಗಳಲ್ಲಿ ಮಾತನಾಡದೇ ಇದ್ದವರೂ ಮೈಮೇಲೆ ದೆವ್ವ ಬಂದವರ ಹಾಗೆ ಎಚ್ಚೆತ್ತು ಕಂಡ ಕಂಡ ಗ್ರೂಪುಗಳಲ್ಲಿ ಯಥಾವತ್ ಹೊಸ ವರ್ಷದ ಶುಭಾಶಯಗಳನ್ನು ಯಥಾಶಕ್ತಿ ಹಂಚಿಕೊಂಡು ಕೃತಾರ್ಥರಾಗುತ್ತಾರೆ. ಎಷ್ಟು ಮಂದಿ ಕೈಗೊಂಡ ಸಂಕಲ್ಪದಂತೆ ಬದುಕುತ್ತೇವೆ. ಒಂದು ವೇಳೆ ಸಂಕಲ್ಪಗಳು ಈಡೇರಿದ್ದರೆ ಮತ್ತೊಂದು ಡಿ.31ರಂದು ಅದೇ ಸಂಕಲ್ಪಗಳನ್ನು ಪುನಃ ಕೈಗೊಳ್ಳುವುದು ಯಾಕೆ, ಅದೇ ಗುಂಡಿಯಲ್ಲಿ ವರ್ಷವೂ ವನಮಹೋತ್ಸವ ಆಚರಿಸುವ ಹಾಗೆ!

ನಿಜವಾಗಿ ನಡೆಯುವುದು ಏನೆಂದರೆ, ಹೊಸತರ ಕಲ್ಪನೆಯನ್ನು ನಾವು ವಿಜೃಂಭಿಸುತ್ತೇವೆ. ಹೊಸತರ ಗುಳ್ಳೆಗಳನ್ನು ತೇಲಿ ಬಿಡುತ್ತೇವೆ, ಹೊಸತೊಂದು ಘಟಿಸಲಿದೆ ಎಂಬ ಹಾಗೆ ಎಂಥದ್ದೋ ಬದಲಾವಣೆಗೆ ಕಾಯುತ್ತಿರುತ್ತೇವೆ. ವಾಸ್ತವದಲ್ಲಿ ನಮ್ಮ ಮನಸ್ಸು, ನಮ್ಮ ಮನಸ್ಥಿತಿ, ನಮ್ಮ ಯೋಚನಾ ರೀತಿ, ನಮ್ಮ ಹಣೆಬರಹ, ಅದೃಷ್ಟ, ನಿರ್ಧಾರಗಳು ಯಾವುದೂ ಜ.1 ಬಂದಾಕ್ಷಣ ಒಂದಿಂಚೂ ಬದಲಾಗಿರುವುದಿಲ್ಲ. ನಮ್ಮೊಳಗೇ ಬದಲಾಗದೇ ಇದ್ದದ್ದನ್ನು ಯಕಶ್ಚಿತ್ ಒಂದು ಕ್ಯಾಲೆಂಡರಿಗೆ ಬದಲಾಯಿಸಲು ಸಾಧ್ಯವೇ...

ಈ ಮಾತು ನಕಾರಾತ್ಮಕ ಅನ್ನಿಸಿದ್ದರೆ. ಈ ಲೇಖನವನ್ನು ಕೊನೆ ತನಕ ಓದಿದವರು ಯಾರಾದರೂ ಇದ್ದರೆ, ದಯವಿಟ್ಟು ಉತ್ತರ ಕೊಡಿ. ಹೊಸ ಕ್ಯಾಲೆಂಡರ್ ವರ್ಷವೊಂದು ಯಾರದ್ದಾದರೂ ಬದುಕನ್ನು ಬದಲಾಯಿಸಿದ್ದನ್ನು ನೀವು ನೋಡಿದ್ದೀರ? ಅಥವಾ ನಿಮ್ಮದೆ ಬದುಕಿನಲ್ಲಿ ಇಷ್ಟು ಆಯುಷ್ಯದಲ್ಲಿ ಡಿ.31 ಕಳೆದು ಜ.1 ಬಂದಾಗ ನಿಮ್ಮೊಳಗೆ ಏನಾದರೂ ಬದಲಾವಣೆ ಆಗಿದೆಯಾ..?”

ಕಾಲವನ್ನು ವಿಭಜಿಸಿತ್ತು ನಾವು ಮನುಷ್ಯರು. ಒಂದು ಕಾಲದ ಅವಧಿ, ಋತುಮಾನ, ಆಯುಷ್ಯ, ತಿಂಗಳುಗಳ ಲೆಕ್ಕಾಚಾರಕ್ಕೆ ಬೇಕಾಗಿ ಮಾಡಿಕೊಂಡದ್ದು. ಡಿ.31ಕ್ಕೆ ಕ್ಯಾಲೆಂಡರ್ ವರ್ಷ ಬದಲಾಗಿ ಜ.1ಕ್ಕೆ ಹೊಸ ಕ್ಯಾಲೆಂಡರ್ ವರ್ಷ ಬದಲಾಗ್ತದೆ. ಹೌದು. ಬದಲಾಗಲು ಇಷ್ಟ ಇರುವವರಿಗೆ ಜ.1 ಒಂದು ಉತ್ತಮ ಅವಕಾಶ ಖಂಡಿತಾ ಹೌದು. ಆದರೆ, ಜ.31ರ ಸೂರ್ಯಾಸ್ತವನ್ನು ವಿಭವೀಕರಿಸುವವರು, ರಾತ್ರಿ ಗುಂಡು ಹಾಕಿಯೇ ಹಳೆ ವರ್ಷಾಂತ್ಯವನ್ನು ಕಳುಹಿಸಿಕೊಡುವವರು, ಜ.1ರ ಸೂರ್ಯೋದಯವನ್ನು ಕಂಡು ಪುಳಕಿತರಾಗುವವರು ಪ್ರತಿ ದಿನವೂ ಹೊಸ ಹೊಸ ಸೂರ್ಯಾಸ್ತ, ಸೂರ್ಯೋದಯ ಆಗುವುದನ್ನು ಯಾಕೆ ಗಮನಿಸುವುದಿಲ್ಲ...?! ಗಮನಿಸಿದರೆ ಯಾಕದು ಹೊಸತು ಅನ್ನಿಸುವುದಿಲ್ಲ....

ಬರಹದ ಸಾರ ಇಷ್ಟೇ... ಹೊಸ ವರ್ಷದ ಬಗ್ಗೆ ನಿರೀಕ್ಷೆ, ಬದಲಾವಣೆಯ ಹಂಬಲ ಖಂಡಿತಾ ಒಳ್ಳೆಯದೇ. ಜ.1 ಎಂಬ ತಾರೀಕು ನಮ್ಮನ್ನು ಸುಧಾರಿಸಲು, ಬದಲಾಯಿಸಲು ಅವಕಾಶ ಕಲ್ಪಿಸುತ್ತದೆ ಎಂದಾದರೆ ಆ ಕುರಿತು ಯೋಚಿಸುವುದು ಅತ್ಯುತ್ತಮ. ಆದರೆ, ನಮ್ಮ ಮನಸ್ಥಿತಿ ಹಾಗೂ ನಮ್ಮೊಳಗಿನ ಲೋಪಗಳನ್ನು ಸ್ವತಃ ಬದಲಾಯಿಸಲು ಯಾವುದೇ ಪರ್ವದ ಅಗತ್ಯ ಇಲ್ಲ. ನಮಗೆ ಇಚ್ಛಾಶಕ್ತಿ, ಸಹನೆ ಇದ್ದರೆ ಯಾವಾಗಲೂ ನಾವು ಬದಲಾಗಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಮನಸ್ಸಿದ್ದರೆ ಮಾರ್ಗ ಎಂಬ ಹಾಗೆ ಬದಲಾವಣೆಗಳನ್ನು ನಾವು ಘೋಷಿಸುವ ಅಗತ್ಯ ಇಲ್ಲ, ಅದು ಕಾರ್ಯರೂಪಕ್ಕೆ ಬಂದರೆ ಸಾಕಷ್ಟಾಯಿತು... ಪ್ರತಿದಿನವೂ ಹೊಸ ದಿನವೇ..!

-ಕೃಷ್ಣಮೋಹನ ತಲೆಂಗಳ (31.12.2023)

No comments: