ಏನಿಲ್ಲಾ... ಏನಿಲ್ಲಾ... ಕರಿಮಣಿ ಮಾಲಿಕ ನೀನಲ್ಲ...! ನಾವು ಮೂರು ಹೊತ್ತೂ ಉಪ್ಪಿಟ್ಟೇ ತಿಂದರೂ ಅರಗಿಸಿಕೊಳ್ಳುವಷ್ಟು ನಿರ್ಲಿಪ್ತರಾಗಿ ಹೋದೆವಾ?!



ಕಳೆದ ಕೆಲವು ದಿನಗಳಿಂದ ನೀವು ಜಾಲತಾಣಗಳಲ್ಲಿ ಗಮನಿಸಿರಬಹುದು. ವಿಪರೀತವೇ ಅನ್ನಿಸುವಷ್ಟರ ಮಟ್ಟಿಗೆ "ಏನಿಲ್ಲಾ... ಏನಿಲ್ಲ... ಕರಿಮಣಿ ಮಾಲಿಕ ನೀನಲ್ಲ..." ಪದ್ಯಕ್ಕೆ ಜನ ಹುಚ್ಚೆದ್ದು ಕುಣಿಯುವುದು. ಎಲ್ಲಿ ನೋಡಿದರೂ ಅದೇ, ಯಾವಾಗ ನೋಡಿದರೂ ಅದೇ.. ಅದೇ ಹಾಡು, ಅದೇ ರಿಮಿಕ್ಸ್ ಸದ್ದು, ಅದೇ ಸ್ಟೆಪ್ಪು, ಒರಿಜಿನಲ್ ಡ್ಯಾನ್ಸ್ ಬೇರೆ, ಅಣಕಿಸುವ ಡ್ಯಾನ್ಸ್ ಬೇರೆ...

ಜನ ಮನೆಯಲ್ಲಿ ನಾಲ್ಕು ದಿನ ಉಪ್ಪಿಟ್ಟು, ಚಿತ್ರಾನ್ನ ಮಾಡಿದರೇ ಬೈತಾರೆ. ಜಾಲತಾಣದಲ್ಲಿ ಮಾತ್ರ ನೋಡಿದ್ದೇ ನೋಡಿದ್ರೂ, ನೋಡಿದ್ದೇ ನೋಡಿದ್ರೂ... ನೋಡ್ತಾ ನೋಡ್ತಾ ರೊಚ್ಚಿಗೆದ್ರೂ ಮತ್ತದನ್ನೇ ಶ್ರದ್ಧೆಯಿಂದ ನೋಡ್ತಾರೆ. ಅಥವಾ ಅದನ್ನು ಸದಾ ನೋಡಿಸಲಾಗ್ತಾ ಇದೆ. ಅರ್ಥವಾಗದ ಜಾಲತಾಣದ ಜಾಲ, ಕೃತಕ ಬುದ್ಧಿಮತ್ತೆಯ ಪವಾಡ ಮತ್ತು ನಮ್ಮ ನಿರ್ಲಿಪ್ತ ಪ್ರೇಕ್ಷಕ ಮನಸ್ಸು ಎಲ್ಲ ಸೇರಿ ಮೂರೂ ಹೊತ್ತು ಉಪ್ಪಿಟ್ಟೇ ಕೊಟ್ರು ಚಪ್ಪರಿಸಿ ತಿನ್ನುವ ಮಟ್ಟಕ್ಕೆ ಮುಟ್ಟಿದ್ದೇವೆ.

ನಮ್ಮೊಳಗೆ ಇಷ್ಟೊಂದು ಸಾಧ್ಯತೆಗಳಿವೆ, ಪ್ರತಿಯೊಬ್ಬರಲ್ಲೂ ಏನೇನೋ ಪ್ರತಿಭೆ ಇದೆ, ಶಕ್ತಿ ಇದೆ, ಸೃಜನಶೀಲತೆ ಇದೆ... ಎಲ್ಲವನ್ನೂ ಬಿಟ್ಟು, ಒಂದು ಹಾಡು ಕ್ಷುಲ್ಲಕ ಕಾರಣಕ್ಕೆ ವೈರಲ್ ಆದ ಮಾತ್ರಕ್ಕೆ ಎಲ್ರೂ ಅದಕ್ಕೇ ಸ್ಟೆಪ್ಪು ಹಾಕೋದು, ಹೇಗೆ ಕಾಣಿಸ್ತೇವೆ ಎಂಬ ಪ್ರಜ್ಞೆ ಇಲ್ಲದೆ ಕುಣಿಯೋದು... ನಾಲ್ಕು ಜನ ಮಾಡಿದ ಕೂಡ್ಲಾ ನಾಕು ನೂರು ಜನ ಅದೇ ಮಾಡುವುದು, ಸಾವಿರಾರು ಜನ ನೋಡುವುದು... ನಮ್ಮ ಬುದ್ಧಿಗೇನು ಮಂಕು ಕವಿದಿದೆ, ಅರ್ಥ ಆಗ್ತಾ ಇಲ್ಲ.

ಜಾಲತಾಣ ಜಗತ್ತಿನಲ್ಲಿ ಎಷ್ಟೊಂದು ವೈವಿಧ್ಯಮಯ ಆಯ್ಕೆಗಳು, ಸಾಧ್ಯತೆಗಳು, ಅವಕಾಶಗಳು, ಕ್ಷಿಪ್ರ ಮಾಹಿತಿ, ಮನರಂಜನೆ ಪಡೆಯುವ ತಂತ್ರಜ್ಞಾನಗಳಿವೆ ಆದರೂ ನಾವು ಸುತ್ತಿದ ಮರಕ್ಕೇ ಸುತ್ತು ಬರ್ತಾ ಇದ್ದೇವೆ. ಅದರಿಂದಾಚೆ ಯೋಚಿಸುವಷ್ಟೂ ಜಡ್ಡುಗಟ್ಟಿ ಹೋಗಿದ್ದೇವೆ ಅನ್ನಿಸ್ತಾ ಇದೆ.

ಓದುವುದು ಹಿಂದೆ ಸರಿದಿದೆ, ನೆಮ್ಮದಿಯಿಂದ ಕುಳಿತು ಮಾತನಾಡುವುದು ಮರೆಯಾಗ್ತಾ ಇದೆ, ನೆಂಟರು ಮನೆಗೆ ಬಂದರೆ ಕಿರಿಕಿರಿ ಅನ್ನಿಸ್ತದೆ, ಭಜನೆ ಮಾಡುವುದು, ಪೂಜೆ ನೋಡುವುದು, ಹರಿಕತೆ ಕೇಳುವುದು, ರೇಡಿಯೋದಲ್ಲಿ ಸ್ಟೇಷನ್ನುಗಳನ್ನು ಹುಡುಕುವುದು, ಗುಡ್ಡದಾಚೆ ಮುಳುಗುವ ಸೂರ್ಯನನ್ನು ನೋಡುವುದು ಎಲ್ಲವೂ ಹಿಂದೆ ಹಿಂದೆ ಸರಿಯುತ್ತದೆ. ಕೈಯಲ್ಲೊಂದು ಮೊಬೈಲಿದ್ದರೆ ಅದುವೇ ನಮ್ಮನ್ನು ಮುನ್ನಡೆಸುತ್ತಿದೆ ಎಂದು ಈಗ ಹೇಳಿದರೆ ಅತ್ಯಂತ ಕ್ಲೀಷೆಯ ವಾಕ್ಯವಾಗಿ ರೇಜಿಗೆ ಹುಟ್ಟಿಸೀತು. ಆದರೆ, ಬೇರೇನು ಹೇಳಲೂ ಪದಗಳು ಸಿಗ್ತಾ ಇಲ್ಲ....

 

ಇದಕ್ಕೆ ಹೋಲಿಕೆಯನ್ನು ಎಂದಿನ ಹಾಗೆ ನಮ್ಮ ಬಾಲ್ಯವನ್ನೇ ನಿದರ್ಶನವಾಗಿ ನೀಡಬೇಕಷ್ಟೇ...

ಶಾಲೆಗೆ ನಡೆದುಕೊಂಡು ಹೋಗುವಾಗ ಸಿಕ್ಕುವ ತೋಡಿಗೆ ಕಟ್ಟಿದ ಕಟ್ಟದ ಈಚೆಗೆ ನೀಲಿ ನೀರು ತುಂಬಿ ತುಳುಕುತ್ತಿತ್ತು. ಅದಕ್ಕೊಂದು ಎಲೆ ಉದುರಿದಾಗ ಸೃಷ್ಟಿಯಾಗುವ ವರ್ತುಲವನ್ನೇ ನೋಡುತ್ತಿರುವುದರಲ್ಲಿ ಖುಷಿ ಇತ್ತು, ದಾರಿಯಲ್ಲಿ ಸಿಕ್ಕುವ ಹೂವೊಂದರ ಮೊಗ್ಗನ್ನು ಅಮುಕಿ "ಟಿಕ್" ಅಂತ ಮಾಡುವುದರಲ್ಲಿ ಥ್ರಿಲ್ ಇರ್ತಾ ಇತ್ತು. ರೇಡಿಯೋ ಎದುರು ಕುಳಿತು ಇಡೀ "ಕೋರಿಕೆ" ಕಾರ್ಯಕ್ರಮ ಕೇಳುವುದರಲ್ಲಿ, ಕಾದು ಕುಳಿತು ಬುಧವಾರದ ಯಕ್ಷಗಾನದ ತಾಳಮದ್ದಳೇ ಕೇಳುವುದರಲ್ಲಿ, ಭಾನುವಾರ ಮಧ್ಯಾಹ್ನ ಸಿನಿಮಾವನ್ನೇ ಕಣ್ಣೆದುರು ತಂದಿಡುವ ಕನ್ನಡ ಚಲನಚಿತ್ರ ಧ್ವನಿವಾಹಿನಿಗೆ ಕಿವಿಕೊಡಲು ಕಾಯುವುದರಲ್ಲು ಸುಖ ಇರ್ತಾ ಇತ್ತು.

ಶಾಲೆಯಲ್ಲಿ ಟೀಚರ್ ರಜೆ ಇದ್ರೆ, ಚಿತ್ರ ಬಿಡಿಸಿ ಮಕ್ಕಳೇ ಅಂತ ಪಿಟಿ ಮಾಷ್ಟ್ರು ಹೇಳಿದಾಗ ನಮಗೆ ಖುಷಿ ಬಂದ ಚಿತ್ರ ಬಿಡಿಸಿ ಮಾಷ್ಟ್ರಿಗೆ ತೋರಿಸುವುದರಲ್ಲೂ ಉತ್ಸಾಹ ಇರ್ತಾ ಇತ್ತು. ಅಲ್ಲೆಲ್ಲ ಸೃಜನಶೀಲತೆಗೊಂದು ವೇದಿಕೆ, ಸಾಧ್ಯತೆ, ಅವಕಾಶ ಸಿಗ್ತಾ ಇತ್ತು.

ಅಲುಗಾಡದೆ ಕುಳಿತು ಸತ್ಯನಾರಾಯಣ ವ್ರತದ ಕತೆ ಕೇಳುವುದು, ಹಟ್ಟಿಯಿಂದ ಸೆಗಣಿ ತಂದು ಅಂಗಳ ಸಾರಿಸುವುದು, ದನಗಳನ್ನು ಗುಡ್ಡೆಗೆ ಕಳುಹಿಸಿ, ಸಂಜೆ ಎದುರುಗೊಳ್ಳುವುದು, ತೆಂಗಿನ ಮಡಲನ್ನು ಕೆರೆಯಲ್ಲಿ ನೆನೆಯಲು ಬಿಟ್ಟು ಮರುದಿನ ಅದನ್ನು ಹೆಣೆದು ಒಣಗಿಸುವುದು... ಹೀಗೆ ಉಲ್ಲೇಖಿಸುತ್ತಲೇ ಹೋಗಬಹುದು.... ಬದುಕಿನಲ್ಲಿ ಸಣ್ಣ ಸಣ್ಣ ಕ್ಷಣಗಳು ಕೊಡ್ತಾ ಇದ್ದ ಸಂತಸ, ಪುಟ್ಟದೊಂದು ಥ್ರಿಲ್ಲಿಂಗ್ ಘಳಿಗೆಗೆ ಕಾಯುವಾಗ ಇದ್ದ ಆವೇಗ, ಉದಾಸೀನ ಇಲ್ಲದೆ ಬೋರಿಂಗ್ ಅನ್ನಿಸದೆ ತುಂಬ ವಿಚಾರಗಳಿಗೆ ಕಣ್ಣಾಗಿ, ಕಿವಿಯಾಗಿ, ಒತ್ತಡ ಇಲ್ಲದೆ ಬದುಕುತ್ತಿದ್ದ ದಿನಗಳನ್ನು ಕಂಡೇ ದೊಡ್ಡವರಾದವರಿಗೆ, ಯಾವುದೋ ಕಾಲದಲ್ಲಿ ಜನಪ್ರಿಯವಾಗಿದ್ದ ಹಾಡನ್ನು ವೈರಲ್ ಮಾಡಿಸಿ, ಮತ್ತದಕ್ಕೆ ವೈವಿಧ್ಯತೆಯೇ ಇಲ್ಲದ ಸ್ಟೆಪ್ಪು ಹಾಕಿ ಕುಣಿಯುವುದನ್ನು ಒಂದೆರಡು ಸಲ ನೋಡಬಹುದಾದರೂ ನೋಡುತ್ತಲೇ ಇರುವಾಗ ಸಿಟ್ಟು ಬರುತ್ತದೆ ಎನ್ನಲು ಮುಜುಗರ ಏನೂ ಇಲ್ಲ.

ಸುಲಭವಾಗಿ ರೀಚ್ ಆಗಬೇಕು, ವೈರಲ್ ಆಗಬೇಕು, ಕಾಣಿಸಿಕೊಳ್ಳಬೇಕು, ಹೇಗಾದರೂ ಸರಿ ಏಕಕಾಲದಲ್ಲಿ ತುಂಬ ಮಂದಿಯನ್ನು ತಲುಪಬೇಕು, ಮತ್ತದು ಪರೋಕ್ಷವಾಗಿ ನಮಗೊಂದು VIEWSಸ್ ಗಳನ್ನು ಕಟ್ಟಕೊಡಬೇಕು. ಇಷ್ಟರೊಳಗೆ ಬದುಕು ಬುಗುರಿಯಂತೆ ತಿರುಗುತ್ತಾ ಇರ್ತದೆ. ದಿನದೂಡಲು, ಬದುಕಲು, ಮರ್ಯಾದೆಯಿಂದ ಜೀವನ ಸಾಗಿಸಲು ಸಾಲುವಷ್ಟು ಸಂಪನ್ಮೂಲ ಇದ್ದರೂ ಹೀಗೊಂದು ಹವ್ಯಾಸ, ಆ ಮೂಲಕ ಗಳಿಕೆಯ ಸಾಧ್ಯತೆ, ವ್ಯೂಸ್ ಪಡೆಯಲು ಸಿಕ್ಕಾಪಟ್ಟೆ ಸರ್ಕಸ್ಸು, ಎಷ್ಟು ಮಂದಿ ನನ್ನ ಪೋಸ್ಟು ನೋಡಿದರೆಂದು ಪದೇ ಪದೇ ಇಣುಕುತ್ತಲೇ ಇರುವ ಹುಚ್ಚು ಮನಸ್ಸು ಎಲ್ಲ ಸೇರಿ ಕೃತಕವಾದ ನಿರೀಕ್ಷೆಯನ್ನೂ ಮತ್ತೆ ಜನಪ್ರಿಯರಾಗುವ ದೊಡ್ಡದೊಂದು ಭ್ರಮೆಯನ್ನೂ ಗಾಳಿ ತುಂಬಿದ ಬಲೂನಿನಂತೆ ಬೆಳೆಸುತ್ತಲೇ ಹೋಗುತ್ತಿದೆ. ನಮಗೆ ಒಗ್ಗದ ವಿಚಾರಗಳಲ್ಲಿ, ನಮಗೆ ಹೊಂದಿಕೆಯಾಗದ ಶೈಲಿಯಲ್ಲಿ ಏನೇನೋ ಮಾಡಲು ಹೊರಟು ನಗೆ ಪಾಟಲಿಗೀಡಾಗುವುದೂ ನಮಗೆ ಬಹಳಷ್ಟು ಸಲ ಆ ಕ್ಷಣಕ್ಕೆ ತಿಳಿಯುವುದೇ ಇಲ್ಲ. ಅದರಿಂದ ಪಡೆದುಕೊಂಡದ್ದು ಏನು, ಕಳೆದುಕೊಳ್ಳುವುದು ಏನು ಅಂತ ಸಹ ಪ್ರಶ್ನಿಸಿಕೊಳ್ಳುವುದಿಲ್ಲ.

ಗೊತ್ತಿದ್ದೂ ಗೊತ್ತಿದ್ದೂ ಸುಶಿಕ್ಷಿತರೆಂದೇ ಹಣೆಪಟ್ಟಿ ಕಟ್ಟಿಸಿಕೊಂಡ ನಾವು ಮಂತ್ರ, ಮಾಟಾದಿಗಳಿಗೆ ಒಳಗಾದವರ ಹಾಗೆ ಬಾಟಿ ಬಿಟ್ಟು ಇವುಗಳ ಹಿಂದೆ ಹೋಗುತ್ತಲೇ ಇರುತ್ತೇವೆ....

ಇದು ಇನ್ನಷ್ಟು ಚಂದ ಅರ್ಥ ಆಗಲಿ ಎಂಬ ಕಾರಣಕ್ಕೆ ಬಾಲ್ಯದಲ್ಲಿ ಓದಿದ ಕತೆಯೊಂದಿಗೆ ಈ ಹಪಹಪಿಕೆಯನ್ನು ಮುಗಿಸುತ್ತಿದ್ದೇನೆ. ಯಾರಾದರೂ ಬಿಡುವಿದ್ದು ಕೊನೆಯ ತನಕ ಲೇಖನ ಓದಿದ್ದರೆ ಕಮೆಂಟು ಮಾಡಿದರೆ ಸಂತೋಷ...

ಒಂದೂರಿನಲ್ಲಿ ಒಬ್ಬ ಸರಳ ಬದುಕಿನಲ್ಲಿ ಖುಷಿ ಕಂಡು ವಾಸಿಸುತ್ತಾ ಇದ್ದನಂತೆ. ಅವನು ಪ್ರಾಮಾಣಿಕವಾಗಿ, ಸರಳವಾಗಿ ಜೀವಿಸುವ ಮೂಲಕ ನೆಮ್ಮದಿಯಿಂದ ಇದ್ದನಂತೆ. ಅವನನ್ನು ನೋಡಿದ, ಮರವೊಂದರಲ್ಲಿ ವಾಸಿಸುತ್ತಿದ್ದ ದೆವ್ವಕ್ಕೆ ಅಸೂಯೆ ಆಯಿತಂತೆ. ಏನಾದರೂ ಮಾಡಿ ಅವನ ನೆಮ್ಮದಿ ಕೆಡಿಸಬೇಕು ಅಂತ ಯೋಚಿಸಿತಂತೆ. ಅದು ವೇಷ ಮರೆಸಿ, ಮನುಷ್ಯನ ರೂಪ ತಾಳಿ ಅವನೆದುರು ಪ್ರತ್ಯಕ್ಷ ಆಯಿತಂತೆ. ಅವನೆದುರು ಮುಕ್ಕಾಲು ವಾಶಿ ಚಿನ್ನ, ಬೆಳ್ಳಿ, ಮುತ್ತು ರತ್ನಗಳಿಂದ ತುಂಬಿದ ಕೊಪ್ಪರಿಗೆ ಇರಿಸಿತಂತೆ. ಇರಿಸಿ ಹೇಳಿತಂತೆ. "ನೋಡಪ್ಪ, ಈ ಕೊಪ್ಪರಿಗೆ ಮುಕ್ಕಾಲು ವಾಶಿ ತುಂಬಿದೆ. ನಿನ್ನಲ್ಲಿರುವ ಸಂಪತ್ತನ್ನು ತಂದು ಈ ಕೊಪ್ಪರಿಗೆಯನ್ನು ನೀನು ಭರ್ತಿ ಮಾಡಿದರೆ ಪೂರ್ತಿ ಕೊಪ್ಪರಿಗೆ ನಿನ್ನದಾಗುತ್ತದೆ" ಅಂತ. ಸರಳ ಜೀವಿಯಲ್ಲೊಂದು ದುರಾಸೆ ಮೂಡಿತು. ಅವರು ಆ ಕ್ಷಣದಿಂದ ತನ್ನ ಕೆಲಸ ಬಿಟ್ಟು ಕೊಪ್ಪರಿಗೆ ತುಂಬಿಸಲು ಹೊರಟನಂತೆ. ಮನೆಯಲ್ಲಿದ್ದ ನಗ, ನಗದು ತಂದು ಸುರಿದ.. ಕೊಪ್ಪರಿಗೆ ತುಂಬಲಿಲ್ಲ. ಪತ್ನಿ ಮಕ್ಕಳ ಆಭರಣ ತಂದು ಸುರಿದ... ತುಂಬಲಿಲ್ಲ... ತನ್ನ ಆಸ್ತಿ ಮಾರಿದ... ತುಂಬಲಿಲ್ಲ.. ಕೊನೆಗೆ ಸಾಲ ಮಾಡಿ ನಗ, ನಗದು ತಂದು ತುಂಬಿದ ಕೊಪ್ಪರಿಗೆ ತುಂಬಲಿಲ್ಲ... ಈಗ ತುಂಬುತ್ತದೆ... ಈಗ ತುಂಬುತ್ತದೆ ಎಂಬ ಹಂಬಲದಿಂದ ಇದ್ದ ಬದ್ದ ಮನಃಶಾಂತಿಯನ್ನೂ ಕಳೆದುಕೊಂಡು ಎಲ್ಲವನ್ನೂ ಕಳೆದುಕೊಂಡ ಬಳಿಕ ತಾನು ಟ್ರಾಪ್ ಆಗಿದ್ದು ಅವನಿಗೆ ತಿಳಿಯಿತಂತೆ. ಅಷ್ಟು ಹೊತ್ತಿಗೆ ಆತ ತನ್ನದೆಲ್ಲವನ್ನೂ ಕಳೆದುಕೊಂಡು ಜೊತೆಗೆ ಸಾಲಗಾರನೂ ಆಗಿದ್ದು ಮಾತ್ರವಲ್ಲ, ಸುಲಭವಾಗಿ ಧನಿಕನಾಗುವ ಆಸೆಯಿಂದ ತನ್ನ ಆಸ್ತಿಯಾಗಿದ್ದ ನೆಮ್ಮದಿಯನ್ನೂ ಕಳೆದುಕೊಂಡು ಆಗಿತ್ತು...

ಲೈಕ್, ಕಮೆಂಟು, ಶೇರು ಆಗಬೇಕೆಂದು ನಾವು ಕೆಲವೊಮ್ಮೆ ಪಡಬಾರದ ಕಷ್ಟವನ್ನೆಲ್ಲ ಪಟ್ಟು, ನಮ್ಮತನವನ್ನೇ ಪಕ್ಕಕ್ಕಿಟ್ಟು ಹುಚ್ಚು ಕಟ್ಟುವುದು ಕಂಡಾಗ ನಮಗೂ, ಆ ಕೊಪ್ಪರಿಗೆ ಆಸೆಗೆ ಬಿದ್ದ ಸರಳ ಮನುಷ್ಯನಿಗೂ ಏನು ವ್ಯತ್ಯಾಸ ಇದೆ? ಅಂತ ತುಂಬ ಸಲ ಅನ್ನಿಸುವುದಿದೆ. ನನ್ನ ಅನಿಸಿಕೆ ತಪ್ಪಿದ್ದರೂ ಇರಬಹುದು...ಅವರವ ಭಾವಕ್ಕೆ, ಭಕುತಿಗೆ ತಕ್ಕ ಹಾಗೆ ಇರುವುದಕ್ಕೆ ಎಲ್ಲರೂ ಸರ್ವಸ್ವತಂತ್ರರು ಎಂಬುದು ನಿರ್ವಿವಾದ. ಆದರೆ ಪರಿಣಾಮಗಳ ಪ್ರಜ್ಞೆ ಇದ್ದರೆ ಉತ್ತಮ ಅಷ್ಟೇ.

-ಕೃಷ್ಣಮೋಹನ ತಲೆಂಗಳ (09.02.2024)

No comments:

Popular Posts