ಇರಿಸುಮುರಿಸು ಮಾಡುವ ದಿರಿಸು ಮತ್ತು ಕಾಡುವ ಶ್ರೇಷ್ಠತೆಯ ಅಹಂ! ಬದಲಾಗಲೇ ಇರುವುದು ನಮ್ಮ ದೃಷ್ಟಿಕೋನ, ಅಷ್ಟೇ...ಏನಂತೀರ?!
ಬೆಂಗಳೂರಿನಲ್ಲಿ ಇತ್ತೀಚೆಗೆ ಮೆಟ್ರೋ ರೈಲಿಗೆ ಓರ್ವ
ಕೊಳೆ ಬಟ್ಟೆ ಧರಿಸಿದ ವ್ಯಕ್ತಿಗೆ ಪ್ರವೇಶ ನಿರಾಕರಿಸಲಾಯಿತು. ಇದು ಜಾಲತಾಣದಲ್ಲಿ ಭಯಂಕರ
ಚರ್ಚೆಗೊಳಗಾಯಿತು. ಮಾಧ್ಯಮಗಳಲ್ಲೂ ವಿಷಯ ಪ್ರಸಾರ ಆಯಿತು. ಬಳಿಕ ಮೆಟ್ರೋ ಕ್ಷಮೆ ಯಾಚಿಸಿತು...
ಇನ್ನೊಂದು ಘಟನೆ... ಕೆಲ ಸಮಯದ ಹಿಂದೆ ಹಳ್ಳಿಯ
ರೈತನೋರ್ವ ನಗರದ ಕಾರು ಶೋರೂಮಿಗೆ ಸಾದಾ ಬಟ್ಟೆ ಧರಿಸಿ ಲಕ್ಷಾಂತರ ರು. ಬೆಲೆಬಾಳುವ ಕಾರು
ಕೊಳ್ಳಲು ಹೋದಾಗ ರೈತನನ್ನು ಅಪಮಾನಿಸಲಾಗಿತ್ತು. ಈ ವಿಷಯವೂ ಸಾಕಷ್ಟು ಸದ್ದು ಮಾಡಿತ್ತು.
ಇವತ್ತಿಗೂ ವ್ಯಕ್ತಿಯನ್ನು, ವ್ಯಕ್ತಿತ್ವವನ್ನು ತೊಡುವ ಉಡುಪು,
ಅಲಂಕಾರ, ತೋರಿಕೆಯ ಸಭ್ಯತೆ, ಅತಿವಿನಯ, ಠೀವಿ, ಠೇಂಕಾರ,
ದೊಡ್ಡಸ್ತಿಕೆಯ ಪ್ರದರ್ಶನ, ಸ್ವಯಂಘೋಷಿತ "ದೊಡ್ಡ ಮನುಷ್ಯ"ರೆಂಬ ಅಹಂಕಾರದ ಪ್ರದರ್ಶನದ ಆಧಾರದಲ್ಲಿ
ಅಳೆಯಲಾಗುತ್ತಿದೆ. ಹಳ್ಳಿಯಿಂದ ದಿಲ್ಲಿಯ ವರೆಗೂ ಇದೇ ಪರಿಸ್ಥಿತಿ ಇದೆ. ನಾವು ಇರುವುದಕ್ಕಿಂತಲೂ,
ಎಷ್ಟರ ಮಟ್ಟಿಗೆ ಸುಭಗರಂತೆ "ತೋರಿಸಿಕೊಂಡಿದ್ದೇವೆ" ಎಂಬುದರ ಆಧಾರದಲ್ಲೇ ನಮ್ಮ ವ್ಯಕ್ತಿತ್ವಕ್ಕೆ, ಮಾಡಿದ
ಕೆಲಸಕ್ಕೆ ಹಾಗೂ ಶ್ರಮಕ್ಕೆ ಬೆಲೆ ಕಟ್ಟಲಾಗುತ್ತದೆ. ನಾವೇನು ಮಾಡಿದ್ದೇವೆ, ಹೇಗಿದ್ದೇವೆ ಮತ್ತು ನಮ್ಮ ತೊಡಗಿಸಿಕೊಳ್ಳುವಿಕೆ, ವಿವೇಚನಾ
ಶಕ್ತಿ, ಸಹನೆ, ಸಾಮಾನ್ಯ ಜ್ಞಾನ ಯಾವುದೂ
ಮುಖ್ಯ ಆಗುವುದಿಲ್ಲ. ನಮಗೆ ಬೆಲೆ ಸಿಕ್ಕುವುದು, ಗೌರವಾನ್ವಿತರು
ಅನ್ನಿಸಿಕೊಳ್ಳುವುದು, ಜಂಟಲ್ ಮ್ಯಾನ್, ಸಭ್ಯ,
ನಾಗರಿಕ, ಸಾಧಕ, ಅಸಾಮಾನ್ಯ
ಅನ್ನುವುದು ನಾವು ಸಮಾಜಕ್ಕೆ ಕಾಣಿಸಿಕೊಳ್ಳುವ ರೀತಿಯಿಂದ ಹೊರತು ನಮ್ಮ ಬುದ್ಧಿಶಕ್ತಿ ಅಥವಾ
ವಿವೇಚನೆಯಿಂದ ಅಲ್ಲ ಅನ್ನುವುದು ಮುಕ್ತ ಸತ್ಯ.
ಹೌದು,
ಶರೀರ ಸ್ವಚ್ಛವಾಗಿರಬೇಕು. ಉಡುಪು ಅಚ್ಚುಕಟ್ಟಾಗಿರಬೇಕು,
ನಾಲ್ಕು ಮಂದಿಯ ಎದುರು ಕಾಣಿಸಿಕೊಳ್ಳುವಾಗಲಾದರೂ ಸಭ್ಯತೆ, ಸಾತ್ವಿಕತೆ ಇರಬೇಕು. ಇದು
ಸಂವಹನಕ್ಕೂ, ಸಾಮಾಜಿಕ ಸಂಬಂಧಗಳ ಸುಲಲಿತ ಹರಿವಿಗೂ ಮುಖ್ಯ. ಆದರೆ, ಈಗ ಹೇಳಿದ ಎಲ್ಲ ಲಕ್ಷಣಗಳು "ಕಾಣಿಸಿಕೊಂಡರೂ" ವಿವೇಚನೆ ಮರೆತಂತೆ
ವರ್ತಿಸುವವರು, ಸಾಮಾನ್ಯಜ್ಞಾನ ಇಲ್ಲದೆ ಮಾತನಾಡುವವರೂ ಇದ್ದಾರೆ. ದಿನಾ ನೋಡುತ್ತಲೇ ಇರುತ್ತೇವೆ.
ಕಾಣಿಸಿಕೊಳ್ಳುವುದಕ್ಕಿಂತಲೂ ಮೂಲಭೂತವಾಗಿ ಹೇಗಿದ್ದೇವೆ ಎಂಬುದೇ ಮುಖ್ಯವಲ್ಲವೇ ಎಂಬ ಪ್ರಶ್ನೆ
ಹುಟ್ಟಿಕೊಳ್ಳುವುದೇ ಆಗ.
ನಾವು ತಂತ್ರಜ್ಞಾನದಲ್ಲಿ ಇಷ್ಟೆಲ್ಲ ಸಾಧಿಸಿದ್ದೇವೆ
ಎನ್ನುತ್ತೇವೆ, ಜಾಗತಿಕ ಹಳ್ಳಿಯಲ್ಲಿದ್ದೇವೆ ಎಂದು ಬಡಬಡಿಸುತ್ತೇವೆ, 21ನೇ ಶತಮಾನಾ, 5ಜಿ
ಸಂಪರ್ಕ, ಬಾಹ್ಯಾಕಾಶ ವಿಕ್ರಮ, ಕೈಗಾರಿಕೀಕರಣ ಇತ್ಯಾದಿ ಇತ್ಯಾದಿ... ಏನೇನೋ ಸಾಧನೆಗಳನ್ನು
ಹೇಳುತ್ತೇವೆ, ವಿಮರ್ಶಿಸುತ್ತೇವೆ. ಆದರೆ ಇವತ್ತಿಗೂ ಆತ ತೋರ, ಈತ ಗಿಡ್ಡ, ಆತನ ಹಲ್ಲುಬ್ಬು,
ಆತನಿಗೆ ಕುರುಚಲು ಗಡ್ಡವಿದೆ, ಈತನ ತಲೆಕೂದಲು ಕೆದರಿದೆ, ಆತನಿಗೆ ಡ್ರೆಸ್ ಸೆನ್ಸ್ ಇಲ್ಲ, ಸವೆದ
ಚಪ್ಪಲಿ ಧರಿಸಿದ್ದಾನೆ, ಆಕೆ ಭಯಂಕರ ಉದ್ದ, ಇನ್ನೊಬ್ಬಾಕೆಯದ್ದು ಮೆಳ್ಳೆಗಣ್ಣು ಹೀಗೆ
ವಿಮರ್ಶಿಸುವ ಭ್ರಮೆಯಿಂದ ಆಚೆ ಬಂದಿಲ್ಲ...
ವಿವಾಹ ಸಂಬಂಧಗಳನ್ನು ಕುದುರಿಸುವಾಗ, ಒಬ್ಬರ
ವ್ಯಕ್ತಿತ್ವಕ್ಕೆ ಬೆಲೆ ಕಟ್ಟುವಾಗ, ಸನ್ಮಾನಕ್ಕೆ ಆರಿಸುವಾಗ, ವೇದಿಕೆಗೆ ಕರೆಯುವಾಗಲೆಲ್ಲ ಬಹುಶಃ
ಇಂತಹ ವಿಚಾರಗಳೂ ಎದ್ದು ಕಾಣಿಸುತ್ತವೆ ಅಂತ ಬಾವಿಸುತ್ತೇನೆ. ಉಬ್ಬು ಹಲ್ಲು, ಗಿಡ್ಡ ದೇಹ, ಕಪ್ಪು
ಬಣ್ಣ, ವಕ್ರ ಕಣ್ಣು, ದೊಡ್ಡ ಕಿವಿ, ಕೆದರಿದ ಕೂದಲು, ದಪ್ಪ ಶರೀರ, ಬಿಕ್ಕಳಿಕೆಯ ಮಾತುಗಳು, ಸಿರಿಬಾಯಿ,
ಉದ್ದ ಮೂಗು.... ಹೀಗೆ ಇವುಗಳಿಂದ ವ್ಯಕ್ತಿತ್ವಗಳನ್ನು ಅಳೆಯುವುದಾದರೆ ಒಬ್ಬ ಮನುಷ್ಯನಿಂದ ಸಹಾಯ
ಪಡೆಯುವಾಗ, ಅನಾರೋಗ್ಯದ ಸಂದರ್ಭ ರಕ್ತ ಬೇಕು ಅಂತ ಕೇಳುವಾಗ, ದೇಣಿಗೆ ಪಡೆಯುವಾಗ, ವ್ಯಾವಹಾರಿಕವಾಗಿ ಅವರ ಜೊತೆ
ಸಂಪರ್ಕ ಹೊಂದಬೇಕಾದಾಗ ಈ ರೀತಿಯ ಶಾರೀರಕ ವ್ಯತ್ಯಾಸಗಳನ್ನು ಭೂತಕನ್ನಡಿ ಹಿಡಿದು ನೋಡಿ ಮುಂದಡಿ
ಇಡುತ್ತೇವೆಯಾ? ಇಲ್ಲವಲ್ಲ.
ಮನುಷ್ಯನಿಗೆ ಕಾಯಿಲೆ ಕಾಡುವಾಗ, ಸಾವು ಬೆನ್ನಟ್ಟಿ
ಬರುವಾಗ ಸುಂದರ ದೇಹ, ಕುರೂಪ ದೇಹ, ಅಸ್ತವ್ಯಸ್ತ ಮನುಷ್ಯ, ಅಚ್ಚುಕಟ್ಟಾದ ವ್ಯಕ್ತಿತ್ವ ಹೀಗೆಲ್ಲ
ತಾರತಮ್ಯವಾಗಲೀ, ಆದ್ಯತೆಗಳಾಗಲಿ ಸಿಗುತ್ತದೆಯೇ...? ಇಲ್ಲವಲ್ಲ. ಕಷ್ಟಕಾಲದಲ್ಲಿ, ಧರ್ಮಸಂಕಟಕ್ಕಾಗುವಾಗ
ನಮಗೆ ಯಾರೂ ಆಗುತ್ತದೆ. ಅದರ ಹೊರತು ಒಬ್ಬರ ವ್ಯಕ್ತಿತ್ವ ತೂಗುವಾಗ, ವಿಮರ್ಶೆ ಮಾಡುವಾಗ, ಮಾಡಲು
ಬೇರೆ ಕೆಲಸ ಇಲ್ಲದೆ ಒಬ್ಬನ ತೇಜೋವಧೆ ಮಾಡುವ ಹೊತ್ತಿಗೆ ಇಂಥದ್ದೆಲ್ಲ ಅಸಂಬದ್ಧಗಳು ಭಯಂಕರ "ಮಾರ್ಕು " ಪಡೆಯುತ್ತವೆ!
ಸಾಮಾನ್ಯ ಜ್ಞಾನ, ವಿವೇಚನೆ, ಸಮಯಪ್ರಜ್ಞೆ,
ಸುತ್ತಮುತ್ತಲಿನವರ ತಾಕತ್ತು, ಸಾಧ್ಯತೆ, ಪ್ರತಿಭೆಗಳನ್ನು ಗುರುತಿಸುವ ಸಾಮರ್ಥ್ಯ, ಸಹನೆ, ಸಾತ್ವಿಕತೆ
ಇಲ್ಲದ ಹೊರತು ಎಂತಹ ಸೌಂದರ್ಯದ ದೇಹ ಹೊತ್ತರೂ ಅದು ನಿಷ್ಪ್ರಯೋಜಕ. ಅಷ್ಟಕ್ಕೂ ದೇಹ ಸೌಂದರ್ಯ
ಶಾಶ್ವತವೂ ಅಲ್ಲ. ನಮ್ಮ ಭಂಗಿ, ನಮ್ಮ ಉಡುಪು, ನಮ್ಮ ಓಡಾಟಗಳು ಇತರರರಿಗೆ ಅಸಹ್ಯ ಹುಟ್ಟಿಸಬಾರದು,
ತೊಂದರೆ ನೀಡಬಾರದು ಅಥವಾ ಅವರಿಗೆ ಮುಜುಗರ ತರಿಸಬಾರದು ಅನ್ನುವುದು ಬಿಟ್ಟರೆ ಕೆಲವು
ಮಾರ್ಕೆಟಿಂಗ್ ಕೆಲಸಗಳನ್ನು ಹೊರತುಪಡಿಸಿ ಇನ್ಯಾವುದೇ ವ್ಯವಹಾರದಲ್ಲಿ ಮನುಷ್ಯನಿಗೆ ತನಗೆ
ಇಷ್ಟವಾದಂತೆ ಇರುವ ಸ್ವಾತಂತ್ರ್ಯ ಇದೆ. ತನ್ನ ಇಷ್ಟಾನುಸಾರ ಬದುಕುವ ಹಕ್ಕೂ ಇದೆ.
ಇದೇ ಉಡುಪು ಅಂತಿಮ, ಕ್ಲೀನ್ ಶೇವ್ ಮಾಡಿದವರೇ
ಪ್ರಾಜ್ಞರು, ಇದೇ ರೀತಿಯ ಉಡುಪಿನ ವಿನ್ಯಾಸ ಹೊಂದಿದ್ದರೆ, ಶೂ ಧರಿಸಿದ್ದರೆ, ಬಿಳಿ ಅಂಗಿ, ಶಾಲು
ಧರಿಸಿದ್ದರೆ ಮಾತ್ರ ಅವರು ಶ್ರೇಷ್ಠರು ಇತ್ಯಾದಿ ಕಲ್ಪನೆಗಳನ್ನು ನಾವೇ ಮಾಡಿಕೊಂಡದ್ದು. ಹಾಗೂ
ನಾವೇ ಅದನ್ನು ಪೋಷಿಸುವುದು ಅಷ್ಟೇ... ಎಲ್ಲವೂ ಸಭ್ಯರಂತೆ, ಸುಭಗರಂತೆ ಕಾಣಿಸುವವರೂ ಮೃಗೀಯವಾಗಿ
ವರ್ತಿಸಿದ, ವರ್ತಿಸುತ್ತಿರುವ ಉದಾಹರಣೆಗಳು ಎಷ್ಟು ಬೇಕು ಹೇಳಿ.
ಇತ್ತೀಗೆಚೆ ವಾಟ್ಸಪ್ ನಲ್ಲಿ ಬಂದ ಯಕ್ಷಗಾನದ
ತುಣುಕೊಂದರಲ್ಲಿ ಹಾಸ್ಯಗಾರ ಹೇಳಿದ ಮಾತುಗಳು ಹಾಸ್ಯದ್ದಾದರೂ ಅದು ತುಂಬ ಮಾರ್ಮಿಕ ಅನ್ನಿಸಿತು.
"ಎಂಥದ್ದೇ ಬ್ರಹ್ಮಕಲಶೋತ್ಸವ ನಡೆಯಲಿ ಅಧ್ಯಕ್ಷರಾಗುವವರೇ ಅಧ್ಯಕ್ಷ ಆಗುತ್ತಾರೆ.
ಚಪ್ಪರಕ್ಕೆ ಕಂಬ ಹಾಕುವವ ಕಂಬ ಹಾಕಿಕೊಂಡೇ ಇರುತ್ತಾನೆ. ಬಿಳಿ ಪಂಚೆ ಧರಿಸಿ, ಶಾಲು ಹೊದ್ದು
ಬಂದವರಿಗೆ ತನ್ನಷ್ಟಕ್ಕೇ ಮರ್ಯಾದೆ, ವಿಶೇಷ ಗೌರವ ಸಿಕ್ಕುತ್ತದೆ. ಮತ್ತು ಜನ ಅವರನ್ನು
ದೊಡ್ಡವರೆಂದು ಒಪ್ಪಿಕೊಳ್ಳುತ್ತಾರೆ..." ಅಂತ. ಖಂಡಿತಾ ಈ ಮಾತು ಚಿಂತನಾರ್ಹ. ಯಾವ ಯೋಗ್ಯತೆಯೂ ಇಲ್ಲದೆ ಧನ ಹಾಗೂ ಅಧಿಕಾರ ಬಲದಿಂದ
ಸುತ್ತಮುತ್ತ ಜನ ಸೇರಿಸಿಕೊಂಡು "ದೊಡ್ಡ ಮನುಷ್ಯ"ರಾಗುವವರನ್ನು ಹಾಗೂ ಅವರಿಗೆ ಬಾಲ್ದಿ ಹಿಡಿದು ಬದುಕುವವರನ್ನು ಕಂಡಾಗ
ಖಂಡಿತಾ ಇದು ಸರಿ ಅನ್ನಿಸುತ್ತದೆ.
ನಾವು ಚಿಕ್ಕವಾಗಿದ್ದಾಗ, ಶಾಲೆಗೆ ಹೋಗುವಾಗ ಹರಿದ ಅಂಗಿ,
ಚಡ್ಡಿ ಧರಿಸಿ ಶಾಲೆಗೆ ಬರುವವರಿದ್ದರು. ಸಮವಸ್ತ್ರ ಕಡ್ಡಾಯ ಆಗಿರಲಿಲ್ಲ. ನಮ್ಮ ಅಣ್ಣ,
ಅಕ್ಕಂದಿರು, ದಾಯಾದಿಗಳು ಬಳಸಿದ ಹಳೆ ಬಟ್ಟೆಯ ಫಿಟ್ಟಿಂಗ್ಸ್ ಸರಿ ಹೊಂದಿಸಿ ಶಾಲೆಗೆ
ಹೋಗುತ್ತಿದ್ದದ್ದು ನೆನಪಿದೆ. ಹವಾಯ್ ಚಪ್ಪಲಿ ಹಿಂಭಾಗ ಸವೆದು ಕಾಲು ಮಣ್ಣಿಗೆ ತಾಗುವಷ್ಟು ಸವೆದ
ಬಳಿಕ, ತುಂಡಾದ ಚಪ್ಪಲಿಯ ಭಾರವನ್ನು ಮತ್ತೆ ಹೊಲಿದು ಶಾಲೆಗೆ ಹೋಗುತ್ತಿದ್ದ ಸ್ನೇಹಿತರನ್ನೂ
ಕಂಡಿದ್ದೇನೆ. ವರ್ಷ ವರ್ಷ ಹೊಸ ಚೀಲ, ಕೊಡೆ, ಚಪ್ಪಲಿ ತೆಗೆಯುವಷ್ಟು ಓರಗೆಯ ಯಾರೂ
ಶ್ರೀಮಂತರಾಗಿರಿಲ್ಲ. ಮಧ್ಯಾಹ್ನ ಬುತ್ತಿ ತರುವಷ್ಟೂ ಸಾಮರ್ಥ್ಯವಿಲ್ಲದೆ, ನೀರು ಕುಡಿದು ದಿನ
ದೂಡಿದ ಸಹಪಾಠಿಗಳನ್ನು ಕಂಡಿದ್ದೇನೆ...
ಆಗೆಲ್ಲ ಯಾರದ್ದೂ ಶಿಷ್ಟಾಚಾರ ಭಂಗವಾಗಲಿಲ್ಲ. ಯಾರದ್ದೂ
ಮರ್ಯಾದೆ ಹೋಗಲಿಲ್ಲ. ಕೆದರಿದ ಕೂದಲು, ಇಸ್ತ್ರಿ ಹೋದ ಅಂಗಿ, ಮ್ಯಾಚ್ ಆದ ಬಣ್ಣದ ಪ್ಯಾಂಟು
ಅಂತೆಲ್ಲ ಎದ್ದು ಕಾಣಲಿಲ್ಲ. ಯಾರೂ ತೊಟ್ಟ ಉಡುಪು, ಕಾಡುವ ಬಡತನದಿಂದಾಗಿ ಶಾಲೆಯಲ್ಲಿ ಅಕ್ಷರ
ಕಲಿಯರಾಗದೆ ಬಾಕಿ ಆಗಲಿಲ್ಲ.
ಸೆಗಣಿ ಸಾರಿಸಿದ ನೆಲ, ಕರೆಂಟೇ ಕಾಣದ ಮನೆ, ರಸ್ತೆಯೇ
ಆಗಿರದ ದಾರಿ, ಯಾವುದೋ ಸೈಝುಗಳ ಅಂಗಿ. ಚಡ್ಡಿ, ಇಸ್ತ್ರಿಯನ್ನೇ ಕಾಣದ ಉಡುಪುಗಳನ್ನು ತೊಟ್ಟು
ಶಾಲೆಗೆ ಹೋದ ನಮಗೆ ಬದುಕು ಭಯಂಕಾರ ಶಿಷ್ಟಾಚಾರಗಳಿಂದ ಕೂಡಾದ ಹಾಗೆ, ಘನತೆ ಉಡುಪಿನಿಂದ,
ತೋರಿಕೆಯಿಂದ ನಿರ್ಧಾರವಾದ ಹಾಗೆ ಅನ್ನಿಸುವುದು ಈಗ, "ಪ್ರೌಢರು" ಅನ್ನಿಸಿಕೊಂಡಾಗ!
ಸರಳ ಬದುಕು, ಕಡಿಮೆ ಸವಲತ್ತುಗಳಿಂದ ಕೂಡಿದ್ದ ಜೀವನ,
ನಿರೀಕ್ಷೆಗಳೇ ಇಲ್ಲದ ದಿನಗಳು ಬದುಕಿನ ಅತ್ಯಂತ ಸಂತೋಷದ ಯುಗಗಳಾಗಿರುತ್ತವೆ. ಇಂತಹ ಅಸಂಬದ್ಧ
ಶಿಷ್ಟಾಚಾರಗಳು, ತಲೆಬುಡ ಇಲ್ಲದ ಘನತೆಗಳು, ದೊಡ್ಡಸ್ತಿಕೆಗಳು, ನಾವೇ ಸೃಷ್ಟಿಸುವ ಶ್ರೇಷ್ಠತೆಯ
ವಲಯಗಳು, ಘನಗಂಭೀರ ಎಂದು ನಾವೇ ಬೆನ್ನು ತಟ್ಟಿಕೊಳ್ಳುವ ನಮ್ಮ ವಿಚಿತ್ರ ವರ್ತನಗಳು,
ಅಕ್ಕಪಕ್ಕದಲ್ಲಿ ಮನಬಿಚ್ಚಿ ಮಾತನಾಡಲಾರದಷ್ಟೂ ಕಾಡುವ ಅಹಂ ಮತ್ತು ಸ್ಟೇಟಸ್ಸಿನ ಹಮ್ಮು ಬಿಮ್ಮು
ನಮ್ಮೊಳಗೊಂದು ದೊಡ್ಡ ಗೋಡೆಯನ್ನು ಇಡೀ ಮನಸ್ಸಿಗೆ ದೊಡ್ಡ ಪೊರೆಯನ್ನು ಕಟ್ಟಿ ಕೊಡುತ್ತಿದೆ.
ಗುಂಪಿನಲ್ಲಿ ಗೋವಿಂದರಾಗಿ, ಲೊಟ್ಟೆ ಹೊಡೆಯುವವರ ಕೂಟದ
ಭಾಷಣ ವೀರರಾಗಿ, ಹೊಗಳುಭಟರಾಗಿ, ಯಾರದ್ದೋ ಕೃಪಾಕಟಾಕ್ಷಕ್ಕೆ ಪಾತ್ರರಾಗುವ ಭರದಲ್ಲಿ ಪ್ರಯತ್ನದಲ್ಲಿ
ಒಂದು ಮಾನವೀಯತೆಯ, ಸರಳತೆ ಸಜ್ಜನಿಕೆಯ ವರ್ತನೆಗಳನ್ನು ಗೊತ್ತಿದ್ದೂ ಗೊತ್ತಿದ್ದೇ ಕಡೆಗಣಿಸುತ್ತೇವೆ.
"ಬಳಸಿ ಬಿಸಾಡುವುದು" ಈಗ ಪೆನ್ನುಗಳನ್ನು ಮಾತ್ರವಲ್ಲ. ಈಗ ಸಾತ್ವಿಕತೆಯನ್ನು,
ಸರಳತೆಯನ್ನು, ಪುಕ್ಕಟೆಯಾಗಿ ಸಿಗುವ ಸಹಾಯ, ನಂಬಿಕೆ, ಪ್ರಾಮಾಣಿಕತೆಗಳನ್ನೂ ಬಳಸಿ ಬಿಸಾಡುವ
ಕಾಲಘಟ್ಟದಲ್ಲಿ ನಾವಿದ್ದೇವೆ... ಲೈಕು, ಶೇರು, ಕಮೆಂಟುಗಳು, ಪ್ರಚಾರ, ಸನ್ಮಾನಗಳಿಲ್ಲದೆ ಎಂತ
ಮಾಡುವುದಕ್ಕೂ ಮನಸ್ಸೇ ಬರುವುದಿಲ್ಲ. ಮತ್ತೆ ಇಷ್ಟುದ್ದ ಬರೆದದ್ದನ್ನು ಓದುವುದಕ್ಕೆ
ಪುರುಸೊತ್ತಾದರೂ ಎಲ್ಲಿಂದ ಬಂದೀತು? ಅಲ್ವ?
ಕಾಲ ಬದಲಾಗುವುದಲ್ಲ. ನಾವೆಲ್ಲ ಸೇರಿ ಬದಲಾಯಿಸುವುದು.
ಎಲ್ಲರೂ ಸೇರಿ ಕುದುರೆಯನ್ನು ಕತ್ತೆ ಎಂದು ಮಾಡಿದ ಹಾಗೆ... ಅದರಾಚೆ ನಿಂತು ಯೋಚಿಸಲು
ಸಾಧ್ಯವಾಗುವ ತನಕ ಕುದುರೆಗಳೂ ಕತ್ತೆಗಳ ಹಾಗೆಯೇ ಕಾಣಿಸುತ್ತಲೇ ಇರುತ್ತವೆ!!!
-ಕೃಷ್ಣಮೋಹನ ತಲೆಂಗಳ (28.02.2024)
No comments:
Post a Comment