ಮತ್ತಷ್ಟು “ಗಟ್ಟಿ”ಯಾಯಿತು ಅಭಿಮಾನ: ಬರೆದಂತೆಯೇ ನಡೆದು ತೆರಳಿದ ಲೇಖಕನ ನೆನಪು ಶಾಶ್ವತ

 


ನಾವು ಹಲವರು ಬೆಳಗ್ಗೆದ್ದ ಕೂಡಲೇ ವಾಟ್ಸಪ್ ಸ್ಟೇಟಸ್ಸಿನಲ್ಲಿ ಮಹಾತ್ಮರ, ಲೇಖಕರ, ಜ್ಞಾನಿಗಳ, ಯತಿಗಳ ಹಿತೋಕ್ತಿಗಳನ್ನು ಶೇರ್ ಮಾಡುತ್ತೇವೆ. ಉದ್ದೇಶ-ಲೋಕೋದ್ಧಾರ ಆಗಲಿ ಅಂತ. ನಾವು ಅದನ್ನು ಪಾಲಿಸುವುದು ಬಿಡಿ, ನಾವೇನು ಹಾಕಿದ್ದೇವೆ ಎಂತು ನಮಗೇ ಸ್ವಲ್ಪ ಹೊತ್ತಾದ ಮೇಲೆ ನೆನಪಿರುವುದಿಲ್ಲ. ಕಾರಣ, ಬಹುತೇಕ ಇಂತಹ ಕ್ವೋಟ್ಸ್ ಯಾವುದೋ ಗ್ರೂಪಿನಲ್ಲಿ ಬಂದದ್ದೋ ಅಥವಾ ಪಾರ್ವರ್ಡೆಡ್ ಆಗಿರುತ್ತವೆ. ಆದರೂ, ಜನ ಓದಲಿ, ಬದಲಾಗಲಿ, ಸುಧಾರಿಸಲು, ಮನಃಪರಿವರ್ತನೆ ಆಗಲಿ ಅಂತೆಲ್ಲ ಹಾಕುತ್ತಲೇ ಇರುತ್ತೇವೆ!.

ಯೋಚಿಸಿಂದಂತೇ ಬರೆಯುವವರು, ಬರೆದಂತೇ ಬದುಕುವವರು ಎಷ್ಟು ಮಂದಿ ಸಿಕ್ಕಾರು? ಸೆಲೆಬ್ರಿಟಿಗಳು ಅನ್ನಿಸಿಕೊಂಡವರ ಪೈಕಿ ತುಂಬ ಮಂದಿ ಮಾತನಾಡಿದಂತೆ, ಬರೆದಂತೆ, ನಟಿಸಿದಂತೆ ನಿಜ ಜೀವನದಲ್ಲಿ ಇರುವುದಿಲ್ಲ ಎಂಬುದು ವಾಸ್ತವ.

ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಲೇಖಕ, ಬರಹಗಾರ ಕೆ.ಟಿ.ಗಟ್ಟಿ ಅವರ ದೇಹವನ್ನು ಮರಣಾನಂತರ ದಾನ ಮಾಡಲಾಯಿತು. ಬದುಕಿನುದ್ದಕ್ಕೂ ಬರಹಗಳಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಪ್ರಜ್ಞೆಗಳನ್ನೇ ನಿರೂಪಿಸುತ್ತಾ ಬಂದ ಅವರ ದೇಹದಾನ ಇಡೀ ಬರಹಗಾರನ ಬದುಕಿಗೊಂದು ಅರ್ಥಪೂರ್ಣ ಪ್ರಮಾಣಪತ್ರ ಅಂತ ಅನ್ನಿಸಿತು ನನಗೆ.

ಹಿರಿಯರಾದ ಶಮಾ ನಂದಿಬೆಟ್ಟ ......................... ಅವರು ಇತ್ತೀಚೆಗೆ ಅವರ ಮರಣಾನಂತರ ಹಂಚಿಕೊಂಡ ಬರಹದಲ್ಲಿ ದೇಹದಾನದ ಬಗ್ಗೆ ಗಟ್ಟಿ ಸರ್ ಅವರಿಗೆ ಮಾಹಿತಿ ನೀಡಿದ್ದು, ಅದರ ಫಾರ್ಮ್ ತಂದುಕೊಟ್ಟದ್ದು, ಅದನ್ನು ಗಟ್ಟಿ ದಂಪತಿ ತುಂಬಿಸಿದ್ದು, ಮತ್ತು ತಮ್ಮ ನಿರ್ಧಾರದಂತೆ ಅವರ ದೇಹವನ್ನು ಕೆಎಂಸಿ ಆಸ್ಪತ್ರೆಗೆ ದಾನ ಮಾಡಿದ್ದು ಎಲ್ಲ ಓದಿ ತಿಳಿಯಿತು. ನಂತರ ಇವೆಲ್ಲ ತುಂಬ ಕಾಡುತ್ತಿತ್ತು. ಬೆಳಗ್ಗೆ ಹಾಕಿದ ಸ್ಟೇಟಸ್ಸನ್ನು ಮಧ್ಯಾಹ್ನ ಮರೆತು ಓಡಾಡುವ ನಾವು ಅಂದುಕೊಂಡಂತೇ ಮಾತನಾಡುವುದು, ಮಾತನಾಡಿದಂತೇ ಬರೆಯುವುದು, ಬರೆದಂತೇ ಬದುಕಲು ಸಾಧ್ಯವೇ ಎಂಬ ಜಿಜ್ಞಾಸೆ ಕಾಡುತ್ತಿದೆ.

ಈ ಹಿಂದೊಮ್ಮೆ ಹಂಚಿಕೊಂಡ ಹಾಗೆ ಹೈಸ್ಕೂಲು ದಿನಗಳಿಂದಲೇ ಕೆ.ಟಿ.ಗಟ್ಟಿ ಅವರ ಅಭಿಮಾನಿಯಾಗಿದ್ದೆ. ಕಾದಂಬರಿಗಳನ್ನು ಓದುವ ಹುಚ್ಚಿನ ಆರಂಭದ ದಿನಗಳಲ್ಲಿ ಯಂಡಮೂರಿ ವಿರೇಂದ್ರನಾಥ್ ಕಾದಂಬರಿಗಳನ್ನು ಹುಡುಕಿ ಹುಡುಕಿ ಓದುವ ನಡುವೆ ಕೆ.ಟಿ.ಗಟ್ಟಿ ಅವರ ಬಹಳಷ್ಟು ಕಾದಂಬರಿಗಳನ್ನು ಓದುತ್ತಿದ್ದದ್ದು ಚೆನ್ನಾಗಿ ನೆನಪಿದೆ. ಥ್ರಿಲ್ಲರ್, ನೈಜವಾಗಿ ಬರೆಯುವ ರೀತಿ, ತಿರುವುಗಳು ಮತ್ತು ಅದರಲ್ಲಿ ಸಿಕ್ಕುವ ಕ್ವೋಟ್ಸ್ (ಅದನ್ನು ಬರೆದಿಡುವ ಹುಚ್ಚು ಹವ್ಯಾಸ ಇತ್ತು ಮೊದಲು) ನನ್ನನ್ನು ಹಾಗೂ ಸಮಾನಮನಸ್ಕ ಗೆಳೆಯರನ್ನು ಕಟ್ಟಿ ಹಾಕಿಬಿಡುತ್ತಿತ್ತು. ಅಂದು ಅವರ ಬರಹಗಳನ್ನು ಓದುವಾಗ ಅವರ ಕುರಿತು ಯಾವ ಕಲ್ಪನೆಯೂ ಇರಲಿಲ್ಲ. ಮುಂದೊಮ್ಮೆ ಅವರ ಭೇಟಿಯಾಗುವ ಸಾಧ್ಯತೆ ಬಗ್ಗೆಯೂ ನಿರೀಕ್ಷೆಯಾಗಲಿ, ಕನಸಾಗಲಿ ಇರಲಿಲ್ಲ.

ಕನ್ನಡ ಭಾಷೆಯ ಸದ್ಬಳಕೆ ಬಗ್ಗೆ ಬಹುಶಃ ಸುಮಾರು 10-15 ವರ್ಷಗಳ ಹಿಂದೆ ಕನ್ನಡಪ್ರಭದ ಸಂಪಾದಕೀಯ ಪುಟದಲ್ಲಿ ಅವರು ಬರೆದ ಒಂದು ಲೇಖನವಂತೂ ತುಂಬ ತುಂಬ ಕಾಡಿತ್ತು. ಎಷ್ಟು ನೈಜವಾಗಿ ಬರೆಯುತ್ತಾರೆ ಅಂತ ಅನ್ನಿಸಿತು. ಸಾಕಷ್ಟು ಪತ್ರಿಕೆಗಳಲ್ಲಿ, ತರಂಗ, ಸುಧಾ ಸಹಿತ ಮ್ಯಾಗಝೀನುಗಳಲ್ಲಿ ಗಟ್ಟಿಯವರ ಬರಹ ಪ್ರಕಟವಾಗುತ್ತಲೇ ಇತ್ತು. ಆಗೆಲ್ಲ, ಇಷ್ಟು ದೊಡ್ಡ ಬರಹಗಾರರು ನಮ್ಮ ಎಟುಕಿಗೆ ಸಿಲುಕುವವರಲ್ಲ ಎಂಬ ಭಾವನೆ ಇತ್ತು. ಅವರು ನನ್ನ ಪಾಲಿಗೆ ಸೆಲೆಬ್ರಿಟಿ ಆಗಿದ್ದರು.

2010ರಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ತಾಳಮದ್ದಳೆ ಎಂಬ ಬಾನುಲಿ ಧಾರಾವಾಹಿ ಸರಣಿ ಧ್ವನಿಮುದ್ರಣ ಆಗುವುದಕ್ಕಿತ್ತು. ಅದಕ್ಕಿಂತಲೂ ಮೊದಲು ಕೆ.ಟಿ.ಗಟ್ಟಿ ಅವರು ಬರೆದ ಕಥೆ ಇನ್ನೂ ಇದೆ... ಹಾಗೂ ಅನುಭವದಡುಗೆಯ ಮಾಡಿ... ಎಂಬ ಎರಡು ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗಿ ಮನೆ ಮಾತಾಗಿದ್ದವು. ಬಳಿಕ ತಾಳಮದ್ದಳೆ ಧಾರಾವಾಹಿ ಧ್ವನಿಮುದ್ರಣ ಸಂದರ್ಭ ಕಾರ್ಯಕ್ರಮ ನಿರ್ವಾಹಕರು, ಈ ಧಾರಾವಾಹಿ ನಿರ್ದೇಶಕರು ಆಗಿದ್ದ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಅವರು ಧ್ವನಿಮುದ್ರಣಕ್ಕೆ ಕರೆದಿದ್ದರು, ಆ ಮೊದಲು ಯಾವುದೇ ಬಾನುಲಿ ನಾಟಕಗಳಲ್ಲಿ ಪಾತ್ರ ವಹಿಸದ ಅನುಭವ ಇರಲಿಲ್ಲ. ಅಲ್ಲಿ ಹೋದ ಮೇಲೆಯೇ ತಿಳಿದದ್ದು ನನಗೂ ಒಂದು ಪ್ರಮುಖ ಪಾತ್ರ ನೀಡಿದ್ದಾರೆ ಅಂತ. ಹಿರಿಯರಾದ ಲಕ್ಷ್ಮಣ್ ಕುಮಾರ್ ಮಲ್ಲೂರು, ಡಾ.ವಸಂತಕುಮಾರ್ ಪೆರ್ಲ, ವಿಜಯಲಕ್ಷ್ಮೀ ಶಾನುಭೋಗ್, ಅತ್ರಾಡಿ ಅಮೃತಾ ಶೆಟ್ಟಿ ಮತ್ತಿತರರ ಸಹಿತ ಹಲವರು ಪಾತ್ರ ನಿರ್ವಹಿಸಿದ್ದ ಧಾರಾವಾಹಿ ಅದು.

ಬಂಟ ಸಮುದಾಯ ಹಾಗೂ ಹವ್ಯಕ ಬ್ರಾಹ್ಮಣ ಕುಟುಂಬಗಳ ನಡುವಿನ ಕತೆ ಅದು. ವರದಕ್ಷಿಣೆ ವಿರೋಧಿ ಕಲ್ಪನೆ ಮತ್ತು ವೈಚಾರಿಕ ನಿಲುವುಗಳ ಸಾಕಷ್ಟು ಅಂಶಗಳಿದ್ದ ಕನ್ಯಾನ ಎಂಬ ಊರಿನ ಕತೆಯೂ ಹೌದು. ನನಗದರಲ್ಲಿ ಸೂರ್ಯ ಎಂಬ ಪಾತ್ರ ಸಿಕ್ಕಿತ್ತು. ಡಾ.ಸ್ವಾಮಿ ಸರ್ ನಿರ್ದೇಶನದಲ್ಲಿ ಧ್ವನಿಮುದ್ರಣ (ಒಂದೇ ಸಲ ರೆಕಾರ್ಡಿಂಗ್ ಮಾಡಿಡ್ತಾರೆ) ಆದ ಬಳಿಕ ಪ್ರಸಾರ ಶುರುವಾಯಿತು

ಆ ಧಾರಾವಾಹಿ ತುಂಬ ಜನಪ್ರಿಯವಾಯಿತು. ತುಳು, ಕನ್ನಡ, ಹವ್ಯಕ ಭಾಷೆಯ ಧಾರಾವಾಹಿ ಅದು. ಅಷ್ಟೂ ಸಂಭಾಷೆಗಳನ್ನೂ ಗಟ್ಟಿಯವರೇ ರೇಡಿಯೋಗಾಗಿಯೇ ಬರೆದಿದ್ದರು ಅನ್ನುವುದು ವಿಶೇಷ. ಇದಕ್ಕಿಂತ ಅಚ್ಚರಿ ನನಗೆ ಕೊನೆಗೆ ಕಾದಿತ್ತು. ಈ ಧಾರಾವಾಹಿ ಪ್ರಸಾರವನ್ನು ಗಟ್ಟಿ ಸರ್ ರೇಡಿಯೋದಲ್ಲಿ ಕೇಳುತ್ತಿದ್ದರು. ಸೂರ್ಯ ಅನ್ನುವ ನನ್ನ ಪಾತ್ರವನ್ನು ಕೇಳಿದ ಬಳಿಕ ನಿರ್ದೇಶಕ ಶರಭೇಂದ್ರ ಸ್ವಾಮಿ ಅವರ ಬಳಿ ನನ್ನ ನಂಬರ್ ಕೇಳಿ ನನಗೆ ಅವರೇ ಕಾಲ್ ಮಾಡಿದ್ದರು. (2010 ಅಥವಾ 11ರಲ್ಲಿ). ನನ್ನ ಪಾತ್ರ ಹೇಗಾಗಿದೆ ಎಂಬುದು ವಿಷಯ ಅಲ್ಲ. ಎಳವೆಯಿಂದ ಅಭಿಮಾನ ಪಡುತ್ತಿದ್ದ ಓರ್ವ ಲೇಖಕ ತಾವಾಗಿ ನಂಬರ್ ಕಲೆಕ್ಟ್ ಮಾಡಿ ಮಾತನಾಡುತ್ತಾರೆ ಅಂತಾದ್ರೆ ಅವರೆಷ್ಟು ನಿಗರ್ವಿ ಇರಬೇಕು ಅನ್ನಿಸಿತು. ಪಾತ್ರದ ಬಗ್ಗೆ, ಕೆಲಸದ ಬಗ್ಗೆ ತುಂಬ ಸೌಮ್ಯವಾಗಿ ಮಾತನಾಡಿದರು. ಆ ಅಚ್ಚರಿಯನ್ನೂ ಎಂದಿಗೂ ಮರೆಯಲು ಸಾಧ್ಯವಿಲ್ಲ.

ಸುಮಾರು ಐದಾರು ವರ್ಷಗಳ ಬಳಿಕ ಶರಭೇಂದ್ರ ಸ್ವಾಮಿ ಸರಿ ಗಟ್ಟಿಯವರ ಕಾದಂಬರಿ ಕೆಂಪು ಕಳವೆಯನ್ನು ಬಾನುಲಿ ನಾಟಕವಾಗಿ ಪರಿವರ್ತಿಸಿ ಸುದೀರ್ಘ 35 ಕಂತುಗಳಷ್ಟು ಬಾನುಲಿ ಧಾರಾವಾಹಿಯಾಗಿ ಪ್ರಸಾರ ಮಾಡಿದರು. ಮೂರು ದಿನಗಳ ಕಾಲ ಅದರ ಧ್ವನಿಮುದ್ರಣ ನಡೆಯಿತು. ಅಲ್ಲೂ ಅಷ್ಟೇ... ಧ್ವನಿಮುದ್ರಣಕ್ಕೆ ಸ್ವಾಮಿ ಸರ್ ಕರೆದಿದ್ದರು. ಅಲ್ಲಿ ಹೋದ ಬಳಿಕ ಗೊತ್ತಾದ್ದು, ಅದರಲ್ಲಿ ಮಾದ ಎಂಬ ಪಾತ್ರ ಮಾಡಬೇಕು ಅಂತ. ಆ ಮೊದಲು ಆ ಕಾದಂಬರಿ ಓದಿರಲಿಲ್ಲ. ಕತೆಯೂ ಗೊತ್ತಿರಲಿಲ್ಲ. ಸಿನಿಮಾ ಮಾದರಿಯಲ್ಲಿ ಒಂದೊಂದು ದೃಶ್ಯಗಳನ್ನು ಕಲಾವಿದರ ಲಭ್ಯತೆ ಆಧಾರದಲ್ಲಿ ಧ್ವನಿಮುದ್ರಿಸುತ್ತಾ ಹೋಗಲಾಯಿತು.

ಆಗ ಅದರ ಕತೆಯ ತಲೆಬುಡ ಅರ್ಥ ಆಗಿರಲಿಲ್ಲ. ಮಾದ ಅನ್ನುವ ವ್ಯಕ್ತಿ ಮತ್ತು ಆತನ ಅಮ್ಮ ಮಾನು ಎಂಬವರ ಬದುಕಿನ ಸುತ್ತ ಹೆಣೆದ ಕತೆ ಅದು. ಮಾದ ತನ್ನ ಬದುಕಿನ ಕತೆಯನ್ನು ಹೇಳುತ್ತಾ ಹೋಗುವಂತಿದ್ದ ಕಾದಂಬರಿಯನ್ನು ಡಾ.ಶರಭೇಂದ್ರ ಸ್ವಾಮಿ ಅವರು ನಾಟಕ ರೂಪಕ್ಕಿಳಿಸಿದರು. ಪಾತ್ರಧಾರಿಗಳಿಗೆ ಸಂಭಾಷಣೆ ಸಿದ್ಧವಾಯಿತು. ಕತೆಯ ಕೊಂಡಿ ಮುಂದುವರಿಯಲು ನಿರೂಪಕ ಹಾಗೂ ನಿರೂಪಕಿ ಮೂಲಕ ಕತೆಯ ಪ್ರಸ್ತುತವಾಗುತ್ತಾ ಹೋಯಿತು. ಇಡೀ ಕತೆಯನ್ನು ಹಿಡಿದಿಟ್ಟುಕೊಂಡದ್ದೇ ನಿರೂಪಕ ಹಾಗೂ ನಿರೂಪಕಿ ಅವರ ಪ್ರಸ್ತುತಿ (ಡಾ.ಶರಭೇಂದ್ರ ಸ್ವಾಮಿ ಹಾಗೂ ಉಷಲತಾ ಸರಪಾಡಿ) ಮತ್ತು ಮಾನು ಪಾತ್ರಧಾರಿ, ಹಿರಿಯ ನಟಿ ಬಿ.ಸರೋಜಿನಿ ಶೆಟ್ಟಿ ಅವರ ಮಾತುಗಳು. ಅವರ ಜೊತೆ ತುಂಬ ಮಂದಿ ಕಲಾವಿದರು, ಆಕಾಶವಾಣಿಯ ತಾತ್ಕಾಲಿಕ ನಿರೂಪಕರ ಶ್ರಮ ಇದೆ ಧಾರಾವಾಹಿ ಹಿಂದೆ.

ರೆಕಾರ್ಡಿಂಗ್ ಮುಗಿದು ಧಾರಾವಾಹಿ ಪ್ರಸಾರ ಆರಂಭವಾದ  ಸಂದರ್ಭದಲ್ಲೇ ಕೆಂಪು ಕಳವೆಬಹುಶಃ ಅಂಕಿತಾ ಪ್ರಕಾಶನದಿಂದ ಮರು ಮುದ್ರಣ ಕಂಡಿತು. ನನಗೂ ಒಂದು ಪ್ರತಿ ಓದಲು ಸಿಕ್ಕಿತು. ಧಾರಾವಾಹಿ ಕೇಳುವಾಗಲೇ ಗೊತ್ತಾದ್ದು, ಈ ಕಾದಂಬರಿಯಲ್ಲಿ ಎಷ್ಟು ಡೆಪ್ತ್ ಇದೆ ಅಂತ. ಅಂತೂ ಸಮಾರು 8-9 ತಿಂಗಳು ಪ್ರತಿ ಭಾನುವಾರ ಧಾರಾವಾಹಿ ಪ್ರಸಾರವಾಯಿತು. ಇದಕ್ಕೂ ಅತ್ಯಂತ ಉತ್ತಮ ಸ್ಪಂದನೆ ಸಿಕ್ಕಿತು. ಜಾಲತಾಣಗಳಲ್ಲೂ ಉತ್ತಮ ವಿಮರ್ಶೆಗಳು ಬರ್ತಾ ಇತ್ತು.

ಎಲ್ಲ ಕಂತುಗಳ ಪ್ರಸಾರದ ಬಳಿಕ ಕೇಳುಗರ ಪ್ರತಿಕ್ರೆಯ ಆಲಿಸಲು ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಲ್ಲಿ ನಾನು ಮೊದಲ ಬಾರಿಗೆ ಗಟ್ಟಿ ಸರ್ ಅವರನ್ನು ನೇರವಾಗಿ ಭೇಟಿಯಾದದ್ದು. ಅವರ ಜೊತೆ ಫೋಟೋ ತೆಗೆಯಲು ಸಾಧ್ಯವಾದದ್ದೂ ಆಗೇ. ಸುಮಾರು 50ರಷ್ಟು ಕಾದಂಬರಿಗಳು ಹಾಗೂ ಇತರ ನೂರಾರು ಬರಹಗಳ ಸರದಾರರೊಬ್ಬರು ಅಷ್ಟೊಂದು ಸಾತ್ವಿಕರಾಗಿ, ತಣ್ಣಗೆ ಇರ್ತಾರೆ, ಅಷ್ಟು ಸರಳವಾಗಿ ಇರ್ತಾರೆ, ಅಷ್ಟು ಚಂದಕೆ ಕಿರಿಯರನ್ನೂ ಕರೆದು ಮಾತನಾಡ್ತಾರೆ ಅಂತ ಅವರನ್ನು ಕಂಡಾಗ ಅಭಿಮಾನ ಹೆಚ್ಚಿತು.

ಆಗ ಅವರು ಹೇಳಿದ್ರು ಕೆಂಪು ಕಳವೆ ಅವರದ್ದೇ ಬದುಕಿನ ಕತೆ ಅಂತ! ಮಾದ ಪಾತ್ರಧಾರಿ ಅವರೊಳಗಿದ್ದ ಕತೆಗಾರ ಅಷ್ಟೆ. ಅಲ್ಲಿ ಬರುವ ಪಾತ್ರಗಳೆಲ್ಲವೂ ಅವರ ಊರಿನಲ್ಲಿ ಅವರು ಕಂಡು, ಅನುಭವಿಸಿದ ಸಂದರ್ಭಗಳ ಹಿಂದಿನ ವ್ಯಕ್ತಿಗಳೇ ಸ್ಫೂರ್ತಿಗಳಾಗಿದ್ದರು ಅಂತ ಆಗ ಗೊತ್ತಾದ್ದು. ಗಟ್ಟಿಯವರ ಚಿಂತನೆಗಳಿಗೆ ಒಂದು ಶಿಖರ ಪ್ರಾಯ ಕೆಂಪು ಕಳವೆ ಕಾದಂಬರಿ. ಇದು ಅವರ ಆತ್ಮಕತೆಯಲ್ಲ, ಆತ್ಮಕತೆ ಬೇರೆಯೇ ಇದೆ.

ಆ ಬಳಿಕ ಅವರು ಕರೆ ಮಾಡಿ ಅವರ ಮನೆಗೂ ಆಹ್ವಾನಿಸಿದ್ರು, ಅವರ ಆತಿಥ್ಯ ಸ್ವೀಕರಿಸಿದ್ದೂ ಆಯಿತು. ಕ್ರಮೇಣ ಅವರ ನೆನಪುಶಕ್ತಿ ಕುಂದುತ್ತಾ ಬಂತು. ಅವರು ಕೆಲವೊಮ್ಮೆ ಮಾಡುತ್ತಿದ್ದ ಕರೆಗಳೂ ಕಮ್ಮಿಯಾದವು. ಇತ್ತೀಚೆಗೆ ದಿಢೀರನೆ ಅವರು ಇನ್ನಿಲ್ಲವಾದ ಸುದ್ದಿ ಬಂತು.

ಈ ಬರಹದ ಶುರುವಿಗೇ ಹೇಳಿದ ಹಾಗೆ, ಅವರ ಬರಹಗಳಂತೇ ಅವರು ಬದುಕಿದ್ದರು ಎಂಬುದು ಓರ್ವ ಅಭಿಮಾನಿಯಾಗಿ ನನ್ನ ಅನಿಸಿಕೆ. ಕೆಂಪು ಕಳವೆ ಧಾರಾವಾಹಿಯನ್ನು ಆ ಬಳಿಕ ತುಂಬ ಸಲ ಕೇಳಿದ್ದೇನೆ. ತುಂಬ ಕಾಡುವ ಸರಣಿ ಅದು ನಿರೂಪಕ ಹಾಗೂ ನಿರೂಪಕಿಯರು ಕಾಸರ ಎಂಬ ಕಾಲ್ಪನಿಕ ಊರಿನ ಬಗ್ಗೆ, ಮಾರ ಎಂಬ ಜಾತಿಯ ಬಗ್ಗೆ, ಗೋಡೆ ಕಟ್ಟುವ ವೃತ್ತಿಯ ಬಗ್ಗೆ ಹೇಳುತ್ತಾ ಹೋಗುವಾಗ ಅಲ್ಲಿನ ಪೇತ್ರು, ಚಂದ್ರಕಾಂತ ಶರ್ಮ, ಗೌರಿ, ಐಡಾ, ಮಾನು, ಜೂಜ, ಬೂದ, ಹರಿ.... ಇವರೆಲ್ಲರ ಬಗ್ಗೆ ವರ್ಣಿಸುತ್ತಾ ಹೋಗುವಾಗ ಇಲ್ಲೇ ಎಲ್ಲ ಪಕ್ಕದ ಊರಿನ ಕತೆ ಎಂಬ ಹಾಗೆ ಭಾಸವಾಗುತ್ತದೆ. ಮನೆ ಕಟ್ಟುವುದು ಹೇಗೆ ಎಂಬಲ್ಲಿಂದ ಹಿಡಿದು, ಕೃಷಿ, ನೀರಾವರಿ, ಮನುಷ್ಯನ ಗರ್ವ, ಹಠ, ಅಸೂಯೆ, ಅಸ್ಪೃಶ್ಯತೆಯಿಂದ ತೊಡಗಿ ಸಾರಾಯಿ ಕಳ್ಳಭಟ್ಟಿ ತಯಾರಿಸುವ ವರೆಗೆ ಇಂಚಿಂಚೂ ಮಾಹಿತಿ ಆ ಕಾದಂಬರಿಯಲ್ಲಿದೆ.

ಬದುಕಿನ ಪಲ್ಲಟಗಳು, ದಾರಿದ್ರ್ಯ, ಸಾರ್ಥಕತೆ, ಬದುಕಿನ ನಗ್ನಸತ್ಯಗಳು, ಅಸಹಾಯಕತೆಗಳು, ಸಾಮಾಜಿಕ ಸ್ಥಾನಮಾನಗಳು, ಹಠ, ಶ್ರಮ, ಬದ್ಧತೆ ಮತ್ತು ಪ್ರಾಮಾಣಿಕತೆ, ಸಹನೆ ಇವೆಲ್ಲದರ ಪ್ರಯೋಗಗಳು ಮಾನು ಮತ್ತು ಆಕೆಯ ಕುಟುಂಬದವರಿಂದ ಸಾಕಾರಗೊಳ್ಳುವುದು ಎಲ್ಲವೂ ತುಂಬ ತುಂಬ ಅಚ್ಚುಕಟ್ಟಾಗಿ ನಿರೂಪಿತವಾಗಿದೆ. ಕತೆಯನ್ನು ಓದುತ್ತಾ ಅಥವಾ ಕೇಳುತ್ತಾ ಹೋದ ಹಾಗೆ ನಾವು ಆ ಪಾತ್ರಗಳ ನಡುವೆ ಒಂದಾಗಿ ಹೋಗುತ್ತೇವೆ. ಅಷ್ಟರ ಮಟ್ಟಿಗೆ ಕಾಡುತ್ತದೆ. ಮಾತಿನಷ್ಟೇ ಮೌನವೂ ಕಾಡುತ್ತದೆ ಎಂಬ ಚಿತ್ರಣ ಕಾದಂಬರಿಯ ಉದ್ದಕ್ಕೂ ಬಿಂಬಿತವಾಗಿದೆ.

ಹೊಸ ಮನೆ ಕಟ್ಟಿ ಕೊಠಡಿಗಳನ್ನು ರೂಪಿಸಿದ ಬಳಿಕ, ಹಳೆ ಮನೆಯ ಹಜಾರದ ಎಲ್ಲೆಂದರಲ್ಲಿ ಬಿದ್ದು ಮಲಗುತ್ತಿದ್ದಾಗ ಸಿಕ್ಕುವ ಖುಷಿ ಸಿಕ್ಕುವುದಿಲ್ಲ, ಸತ್ತ ಮೇಲೆ ಮಾಡುವ ಕ್ರಿಯೆಗಳಿಗಿಂತಲೂ ಬದುಕಿರುವಾಗ ಕೊಡುವ ಮರ್ಯಾದೆಯೇ ದೊಡ್ಡದು, ವಯಸ್ಸಾದರೂ ಬಿಡದ ಜಿದ್ದು ಹಣಕಾಸು ದ್ರೋಹಕ್ಕಿಂತಲೂ ದೊಡ್ಡದು ಎಂಬಿತ್ಯಾದಿ ಬಹಳಷ್ಟು ಸತ್ಯಗಳು ರೂಪಕಗಳಾಗಿ ಹಾದು ಹೋಗುತ್ತವೆ.

ಆ ಧಾರಾವಾಹಿಯ ಕೊನೆಯಲ್ಲಿ ಕಥಾಯನಾಯಕಿ ಮಾನು ತನ್ನ ಮಕ್ಕಳಲ್ಲಿ ತನ್ನ ವೃದ್ಧಾಪ್ಯ ಸಮೀಪಿಸುವಾಗ ಸತ್ತ ಮೇಲೆ ಚಿತೆಗೆ ಬೆಂಕಿ ಕೊಡುವುದೇ ಮುಖ್ಯ ಎನ್ನುವ ಮಾತು ಬಹಳಷ್ಟು ವಿವರಿಸಲಾಗದ ವಿಚಾರಗಳನ್ನು ಒಂದೇ ಸಾಲಿನಲ್ಲಿ ಹೇಳುತ್ತದೆ. ಸಾವು, ಸಾವಿನ ನಂತರದ ಕರ್ಮಗಳು, ಸಮಾಜದ ಪ್ರತಿಕ್ರಿಯೆ, ಆಚಾರ ವಿಚಾರ ಎಲ್ಲವನ್ನೂ ಕೊನೆಯ ಪುಟಗಳಲ್ಲಿ ಗಟ್ಟಿಯವರು ತುಂಬ ಮಾರ್ಮಿಕವಾಗಿ ಬರೆದಿದ್ದಾರೆ. ಆಚಾರಗಳಷ್ಟೇ ವಿಚಾರಗಳೂ ಮುಖ್ಯ ಎಂಬ ನಿಲುವು ಅವರೇ ಸ್ವತಃ ನಿಧನರಾದಾಗ ದೇಹದಾನದ ಮೂಲಕ ತಾವೇ ನಿದರ್ಶನವಾಗಿ ಅವರು ಹೊರಟು ಹೋದದ್ದು, ಅವರ ಕುರಿತಾಗಿ ಮೂಡಿದ ಅಭಿಮಾನ ಇನ್ನಷ್ಟು ಗಟ್ಟಿಯಾಗಲು ಪುಷ್ಟಿ ನೀಡಿತು.

ಬದುಕೆಂಬ ರಥ, ಅಲ್ಲಿ ಎದುರಾಗುವ ವ್ಯಕ್ತಿತ್ವಗಳು, ನಮ್ಮ ಅಹಂಗಳು, ಜಿದ್ದು, ಹಠ, ತುಷ್ಟೀಕರಣ, ಪಕ್ಷಪಾತ, ಬಿಡಲಾಗದ ಮೋಹಗಳು, ಎದುರಿಸಲಾಗದ ಪ್ರತಿರೋಧಗಳು, ಅಪವಾದಗಳು, ಅಪಮಾನಗಳು ಎಲ್ಲವನ್ನೂ ಒಂದು ಕಾದಂಬರಿ ಮತ್ತು ಅದರಿಂದ ಹೊರಬಂದ ಬಾನುಲಿ ಧಾರಾವಾಹಿ ತುಂಬ ಗಾಢವಾಗಿ ಆವರಿಸಿಕೊಳ್ಳುವಂತೆ ಮಾಡಿದೆ ಎಂಬುದು ಬರಹಗಾರ ಹಾಗೂ ನಾಟಕದ ನಿರ್ದೇಶಕರ ತಾಕತ್ತಿಗೆ ಉದಾಹರಣೆ ಎಂಬುದನ್ನು  ಸ್ಪಷ್ಟವಾಗಿ ಹೇಳಬಲ್ಲೆ.

ಕೆಂಪುಕಳವೆ ಫೋನಿನ್ ಕಾರ್ಯಕ್ರಮಕ್ಕೆ ಬಂದಾಗ ಲೋಕಾಭಿರಾಮವಾಗಿ ಮಾತನಾಡುತ್ತಾ ಗಟ್ಟಿಯವರು ಹೇಳಿದ್ದರು... ನಾವು ಓದುವುದಕ್ಕಿಂತಲೂ ಕಿವಿಯಲ್ಲಿ ಕೇಳುವುದು ಹೆಚ್ಚು ಅರ್ಥವಾಗುತ್ತದೆ ಮತ್ತು ತುಂಬ ಗಟ್ಟಿಯಾಗಿ ತಲೆಯೊಳಗೆ ಹೋಗುತ್ತದೆ ಎಂದು.... ಅದು ಸತ್ಯ ಅಂತ ನನಗೆ ಯಾವಾಗಲೂ ಅನ್ನಿಸುತ್ತಿರುತ್ತದೆ. ಗಟ್ಟಿಯವರು ಓರ್ವ ಶಿಕ್ಷಣ ತಜ್ಞ ಹಾಗೂ ಭಾಷಾ ತಜ್ಞರೂ ಆಗಿದ್ದರು ಎಂಬದನ್ನು ನಾವಿಲ್ಲಿ ನೆನಪಿಸಲೇ ಬೇಕು.

ಅವರನ್ನು ಇಷ್ಟಪಡದವರು, ಟೀಕಿಸುವವರು, ದೂರ ಇಟ್ಟವರು ತುಂಬ ಮಂದಿ ಇದ್ರು. ಆದರೆ ಅವರನ್ನು ಓದಿದಾಗ, ಅವರನ್ನು ಕಂಡಾಗ, ಮಾತನಾಡಿದಾಗ ನನಗೆ ಅವರಲ್ಲಿ ಇಷ್ಟ ಪಡದೇ ಇರುವಂಥದ್ದು ಏನೂ ಕಾಣಿಸಲಿಲ್ಲ.

ಬದುಕಿನಲ್ಲಿ ತುಂಬ ಮಂದಿ ನಮ್ಮ ಮೂಲಕ, ಅಥವಾ ನಮ್ಮ ಅಕ್ಕಪಕ್ಕ ಹಾದು ಹೋಗುತ್ತಾರೆ. ಯಾರ ಜೊತೆ ಎಷ್ಟು ಹೆಜ್ಜೆ ನಡೆದಿದ್ದೇವೆ ಎಂಬುದಕ್ಕಿಂತಲೂ ಯಾರ ಹೆಜ್ಜೆ ಗುರುತು ಎದೆಯಾಳದಲ್ಲಿ ಆಳವಾಗಿ ಮೂಡಿದೆ ಎಂಬುದು ಮುಖ್ಯ, ಅದರ ಆಧಾರದಲ್ಲೇ ಬಾಂಧವ್ಯ ಚಿರಕಾಲ ಉಳಿಯುತ್ತದೆ. ಓರ್ವ ದೊಡ್ಡ ಬರಹಗಾರನ ಅಭಿಯಾನಿಯಾಗಿ, ಓರ್ವ ಸಾಮಾನ್ಯ ಓದುಗನಾಗಿ ಅವರ ಜೊತೆ ಮಾತನಾಡಲು, ಅವರನ್ನು ಹತ್ತಿರದಿಂದ ಕಾಣಲು ಮತ್ತು ಅವರೇ ಬರೆದ ಕೃತಿಗಳ ನಾಟಕಗಳಲ್ಲಿ ಅಭಿನಯಿಸಲು ಸಿಕ್ಕಿದ್ದು ತುಂಬ ಖುಷಿ ಕೊಟ್ಟ ಕ್ಷಣಗಳು... ಅವರ ಚಿಂತನೆ ಮತ್ತು ಬರಹಗಳು ಚಿರಕಾಲ ಬಾಳಲಿ.

--

ಕೆಂಪು ಕಳವೆ-ಪ್ರಕಾಶನ ಇಸವಿ 2017

464 ಪುಟ

325 ರುಪಾಯಿ ದರ

ಪ್ರಕಾಶಕರು-ಅಂಕಿತಾ ಪ್ರಕಾಶನ

53, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004

ಸಂಪರ್ಕ ಸಂಖ್ಯೆ-08026617100/26617755

................

-ಕೃಷ್ಣಮೋಹನ ತಲೆಂಗಳ (05.03.2024)















No comments: