ಭಾಷೆ ಮೊದಲಾ... ಭಾವ ಮೊದಲಾ...? ನೀವು ತಪ್ಪಿಲ್ಲದೇ ಕಾಗದದಲ್ಲಿ ಬರೆಯದೇ ಎಷ್ಟು ದಿನಗಳಾದವು?!

 




ನಿಮ್ಮಲ್ಲಿ ಎಷ್ಟು ಮಂದಿಗೆ ಅಚ್ಚುಕಟ್ಟಾಗಿ ಕೈಯಲ್ಲಿ ವೇಗವಾಗಿ ಬರೆಯಲು ಇಂದಿಗೂ ಸಾಧ್ಯವಿದೆ? ಮೊಬೈಲ್ ಮತ್ತು ಕಂಪ್ಯೂಟರ್ ನಲ್ಲೇ ಕೆಲಸ ಮಾಡುತ್ತಿರುವವರು ಕಳೆದ 15 ವರ್ಷಗಳಲ್ಲಿ ಬರೆಯುವ ಅವಕಾಶಗಳನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿದ್ದೀರಿ? ಡಿಗ್ರೀಯಲ್ಲಿದ್ದಾಗ ಪುಟಗಟ್ಟಲೆ ಉತ್ತರಗಳನ್ನು ಸೈಡ್ ಹೆಡಿಂಗ್ ವಿಸ್ತರಿಸಿ ಬರೆದು ಪಾಸಾದವರು, ಇವತ್ತು ಪೋಸ್ಟಾಫೀಸಿನಲ್ಲಿ, ಬ್ಯಾಂಕಿನಲ್ಲಿ ಒಂದು ಚಲನ್ ತುಂಬಿಸುವಾಗ, ಮತ್ತೆಲ್ಲೋ ನಾಲ್ಕು ಸಾಲು ಅನಿಸಿಕೆ ಬರೆಯಲು ಹೊರಟಾಗ ಕೈಬರೆಹ ಎಷ್ಟು ಕೈಕೊಡುತ್ತದೆ ಎಂಬುದು ಭಯಂಕರ ವಿಷಾದವಾಗಿ ಕಾಡುತ್ತದೆ. ಸೊಟ್ಟುಸೊಟ್ಟಗಾಗಿರುವ ಅಕ್ಷರ ಆಕಾರ ಕಳೆದುಕೊಂಡು ಕೊನೆಗೆ ನಾವು ಬರದದ್ದು ನಮಗೇ ಓದಲು ಅಸಾಧ್ಯವಾದಾಗ ಭಯಂಕರ ನಿರಾಶಾವಾದ ಕಾಡಲೂ ಬಹುದು (ಭಾಷೆ ಬಗ್ಗೆ ಸೂಕ್ಷ್ಮಪ್ರಜ್ಞೆ ಉಳಿಸಿಕೊಂಡವರಿಗೆ)

ಕತ್ತಿ, ಡ್ರೈವಿಂಗ್, ಭಾಷೆ ಇವನ್ನೆಲ್ಲ ಬಳಸಿದರೆ ಮಾತ್ರ ಹರಿತವಾಗಿರುತ್ತದೆ, ಕಲೆ ಕರಗತವಾಗಿರುತ್ತದೆ. ಬಳಸದೇ ಇದ್ದರೆ ಅಥವಾ ತಪ್ಪಾಗಿ ಬಳಸಿದರೆ ಖಂಡಿತವಾಗಿ ಆ ಸಂಗತಿ ಅಳಿಯುತ್ತದೆ ಮಾತ್ರವಲ್ಲ, ಹರಿತ ಕಳೆದುಕೊಂಡು ಸ್ವರೂಪವೂ ಬದಲಾಗುತ್ತದೆ. ಎಲ್ಲಿಯ ವರೆಗೆ ಅಂದರೆ ಶಿಕ್ಷಣ ಕ್ಷೇತ್ರ (ಶಿಕ್ಷಕರು), ಮಾಧ್ಯಮ (ಪತ್ರಕರ್ತರು), ಕಲಾವಿದರು (ಸಿನಿಮಾ, ನಾಟಕ, ಯಕ್ಷಗಾನ ಇತ್ಯಾದಿ), ಸರ್ಕಾರ (ಸುತ್ತೋಲೆ, ಜಾಹೀರಾತು, ಆದೇಶಗಳು) ಜಾಲತಾಣಗಳ (ಜನಸಾಮಾನ್ಯರ ಮಮಾಧ್ಯಮ) ಲ್ಲೂ ಭಾಷೆಯನ್ನು ತಪ್ಪಾಗಿ ಬಳಸುವುದು, ಅಥವಾ ಉಡಾಫೆಯಿಂದ ಬಳಸುವುದು ಅಥವಾ ತಪ್ಪನ್ನು ಸಮರ್ಥಿಸುವುದು ಹಾಗೂ ತಪ್ಪು ಎಂಬುದು ತಪ್ಪು ಎಂಬುದನ್ನು ಗುರಿತಸಲಾಗದಷ್ಟು ಭಾಷಾ ಸೂಕ್ಷ್ಮತೆ ಕಳೆದುಕೊಳ್ಳುತ್ತಿರುವ ಪ್ರವೃತ್ತಿ ತುಂಬ ಗಾಢವಾಗಿ ಪ್ರತಿದಿನ ಕಾಣಸಿಗುತ್ತದೆ.

 

ಈ ಮೇಲಿನ ಪ್ಯಾರಾ ಈ ಹೊತ್ತಿಗೆ ಸ್ವಲ್ಪ ಉತ್ಪ್ರೇಕ್ಷೆಯಾಗಿ ಕಂಡೀತು. ಇನ್ನೊಂದು ಏಳೆಂಟು ವರ್ಷ ಹೋದರೆ, ಭಾಷೆಯ ಸರಿಯಾದ ಬಳಕೆಗಿಂತಲೂ ಅದರ ಭಾವ ಮುಖ್ಯ, ಜನರಿಗೆ ವಿಚಾರ ಅರ್ಥವಾಗುವುದು ಮಾತ್ರ ಪ್ರಧಾನ ಎಂಬ ವಾದ ಪ್ರಬಲವಾಗಿ ಮೂಡಿ ಬರುತ್ತದೆ ನೋಡಿ. ಯಾಕೆಂದರೆ ಶಿಕ್ಷಕ ತಪ್ಪುತಪ್ಪಾಗಿ ಕಲಿಸಿದರೆ ಅದು ತಪ್ಪು ಅಂತ ಕಂಡುಕೊಳ್ಳುವಲ್ಲಿ ಪೋಷಕರು, ಪತ್ರಿಕೆಯಲ್ಲಿ ವ್ಯಾಕರಣ, ಅಕ್ಷರ ದೋಷವಾದರೆ ತಪ್ಪು ಅಂತ ಗ್ರಹಿಸುವಲ್ಲಿ ಓದುಗರು, ರೇಡಿಯೋದಲ್ಲಿ, ಟಿವಿಯಲ್ಲಿ ತಪ್ಪಾಗಿ ಉಚ್ಚಾರ ಮೂಡಿಬಂದರೆ ಅದು ಸರಿಯಲ್ಲ ಎಂದು ಗುರುತಿಸುವಲ್ಲಿ ಪ್ರೇಕ್ಷಕರು, ಕೇಳುಗರು ಸೋಲುತ್ತಿದ್ದಾರೆ. ಕಾರಣ ಓದುವುದರಿಂದ ಬಹುತೇಕ ವಿಮುಖರಾಗಿ, ಜಾಲತಾಣವೇ ಜಗತ್ತಿನ ಸರ್ವಶ್ರೇಷ್ಠ ಪಾಠಶಾಲೆಯೆಂಬ ಭ್ರಮೆಯಲ್ಲಿರುವ ನಮಗೆ ವ್ಯಾಕರಣ, ಅಕ್ಷರದೋಷ, ಭಾಷೆಯ ಸೊಬಗು, ಸೊಗಸು, ಅರ್ಥವ್ಯತ್ಯಾಸ, ಕೇಳಿ ತಿಳಿದುಕೊಳ್ಳುವ ಸಹನೆ, ಸಮಯ ಎರಡೂ ಇಲ್ಲವಾಗಿದೆ.

 

ವೇದಿಕೆಗಳಲ್ಲಿ, ಸ್ಟೇಟಸ್ಸುಗಳಲ್ಲಿ, ಫೇಸ್ಬುಕ್ ಗೋಡೆಗಳಲ್ಲಿ ಭಾಷೆಯ ಬಗ್ಗೆ ಭಯಂಕರ ಮಾತನಾಡುತ್ತೇವೆ. ನಿಜ. ಆದರೆ ವೈಯಕ್ತಿಕವಾಗಿ ತಪ್ಪಿಲ್ಲದೆ ಭಾಷೆಯನ್ನು ಅನುಷ್ಠಾನಗೊಳಿಸುವಲ್ಲಿ ನಮ್ಮಲ್ಲಿ ಬಹುತೇಕರಿಗೆ ಆಸಕ್ತಿಯೇ ಇಲ್ಲ. ಇದೇ ಕಾರಣಕ್ಕೆ ಭವಿಷ್ಯದ ಪೋಷಕರು, ಓದುಗರು, ಪ್ರೇಕ್ಷಕರು, ಕೇಳುಗಳು ಭಾಷೆಯ ಬಳಕೆ ತಪ್ಪಾಗಿದ್ದರೂ ಅದನ್ನು ಗುರುತಿಸುವಲ್ಲಿ ಹಿಂದೆ ಬೀಳುತ್ತಾರೆ, ಅಥವಾ ತಪ್ಪನ್ನು ತಪ್ಪೆಂದು ಪ್ರಶ್ನಿಸುವಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಇದು ತಪ್ಪು ಎಂದು ತೋರಿಸುವವನಿಗೆ ಯಾವುದು ಸರಿ ಎಂದು ಹೇಳುವ ಸಾಮರ್ಥ್ಯ ಬೇಕಾಗುತ್ತದೆ. ಮುಂದಿನ ತಲೆಮಾರಿನ ಮಂದಿಯಲ್ಲಿ ಇದು ಇರುತ್ತದೆಯಾ ಎಂಬುದು ಪ್ರಶ್ನೆ. ಬರೆಯುವಾಗ, ಟೈಪು ಮಾಡುವಾಗ, ಓದುವಾಗ, ಮಾತನಾಡುವಾಗ ಗಡಿಬಿಡಿಗೆ ಅಕ್ಷರ, ವ್ಯಾಕರಣ ತಪ್ಪಾಗುವುದು ಸಹಜ. ಮನುಷ್ಯ ಸಹಜವಾದ ಪ್ರಮಾದಗಳು, ಅದು ಬೇಕಂತಲೇ ಮಾಡುವುದಲ್ಲ. ಸರಿ ಯಾವುದು ತಪ್ಪು ಯಾವುದು ಎಂಬ ತಿಳಿವಳಿಕೆಯೇ ಇಲ್ಲದೆ ಭಾಷಾ ಪ್ರಧಾನ ಕ್ಷೇತ್ರಗಳಲ್ಲಿ ತಪ್ಪುತಪ್ಪಾಗಿ ಕೆಲಸ ಮಾಡುತ್ತಾ ಹೋಗುವುದು, ಅದು ತಪ್ಪೆಂಬ ಪ್ರಜ್ಞೆಯೂ ಇಲ್ಲದಿರುವುದೂ ಭಾಷೆಯ ಕೊಲೆ ಮಾಡಿದಂತೆಯೇ ಸರಿ.

 

ಮುಂದಿನ ತಲೆಮಾರಿನವರು ಮಾತ್ರವಲ್ಲ, ನನ್ನ ತಲೆಮಾರಿನವರು, ನನಗಿಂತ 20 ವರ್ಷ ಹಿರಿಯರ ತಲೆಮಾರಿನವರು ಸಹ ಕಳೆದ ಸುಮಾರು 10 ವರ್ಷಗಳಿಂದ ಗಾಢವಾಗಿ ಮೊಬೈಲ್ ಗೆ ಜೋತುಬಿದ್ದ ಮೇಲೆ (ಅದು ಅನಿವಾರ್ಯವಾಗಿಸಿದ್ದು ನಾವೇ, ಹಾಗಾಗಿ ಅದನ್ನು ಚಟ, ದಾಸರು, ವ್ಯಾಮೋಹ ಅಂತೆಲ್ಲ ದೂಷಿಸುವುದು ಸರಿಯಲ್ಲ) ಓದುವುದು ಕಮ್ಮಿ ಮಾಡಿದ್ದಾರೆ. ಪುಸ್ತಕ ಓದುವುದು, ಪತ್ರಿಕೆ ಓದುವುದು, ಶಾಂತರಾಗಿ ಕುಳಿತು ಕೇಳುವುದು, ಭಾಷೆಯ ಬಗ್ಗೆ ಸಮಸ್ಯೆಬಂದಾಗ ಡಿಕ್ಶನರಿ ನೋಡುವುದು, ಬಲ್ಲವರಲ್ಲಿ ಕೇಳಿ ತಿಳಿದುಕೊಳ್ಳುವ ಪ್ರವೃತ್ತಿ ಖಂಡಿತಾ ಕಡಿಮೆಯಾಗಿದೆ. ಹೋಗ್ತಾ ಹೋಗ್ತಾ 2015ರ ನಂತರ ದಿನಗಳನ್ನು ಗಮನಿಸುತ್ತಾ ಬಂದರೆ ಇಷ್ಟನ್ನೆಲ್ಲ ಪಟ್ಟಿ ಮಾಡಿ ನಮ್ಮ ಓದು, ಬರೆಹ ಯಾಕೆ ಕಡಿಮೆಯಾಗಿದೆ ಅಂತ ಕಂಡುಕೊಳ್ಳಬಹುದು. ಇನ್ನೂ ಕಾರಣಗಳು ಇರಬಹುದು. ನನಗೆ ಅನ್ನಿಸಿದ್ದಿಷ್ಟು.

1)      ಕೆಲವೇ ಕೆಲವು ಇಲಾಖೆ, ವಿಭಾಗಗಳಲ್ಲಿ ಬಿಟ್ಟು ತುಂಬ ಕಚೇರಿಗಳಲ್ಲಿ, ವೃತ್ತಿಗಳಲ್ಲಿ ಬರೆಯಬೇಕಾದ ಸಂದರ್ಭಗಳೇ ಇಲ್ಲ. ಬಹುತೇಕ ಕಂಪ್ಯೂಟರುಗಳಲ್ಲಿ, ಮತ್ತುಳಿದ ಬರವಣಿಗೆ, ಓದುವಿಕೆ, ಆಲಿಸುವಿಕೆ ಮೊಬೈಲಿನಲ್ಲಿ ನಡೆಯುತ್ತದೆ. ನೇರವಾಗಿ ಮೊಬೈಲಿನಲ್ಲಿ ಟೈಪು ಮಾಡುವುದು, ಮತ್ತೆ ಬೇಕಾದ ರೂಪಕ್ಕೆ ಬದಲಿಸಿ ಬಳಸುವುದು ಇಷ್ಟೇ ಮಾಡುವುದು.

2)      ಹಿಂದೆ ಅಗತ್ಯ ಸಂಗತಿಗಳನ್ನು ಚೀಟಿಯಲ್ಲಿ ಬರೆದು ಪರ್ಸಿನಲ್ಲಿ ಇರಿಸುತ್ತಿದ್ದೆವು. ಇಂದು ಎಂತ ಇದ್ದರೂ ಮೊಬೈಲ್ ನಲ್ಲಿ ಯಾವುದೋ ಆಪ್ ನಲ್ಲಿ ದಾಖಲಿಸುತ್ತೇವೆ ಅಥವಾ ಮುಖ್ಯ ಸಂಗತಿಗಳ ಫೋಟೋ ತೆಗೆದಿಟ್ಟುಕೊಳ್ಳುತ್ತೇವೆ. ಅಥವಾ ವಾಟ್ಸಪ್ ನಲ್ಲೋ ಫೇಸ್ಬುಕ್ಕಿನಲ್ಲೋ, ಗೂಗಲ್ ಡ್ರೈವಿನಲ್ಲೋ ಶೇಖರಿಸಿ ಇಡುತ್ತೇವೆ. ಎಂಥದ್ದೂ ಬರೆಯುವುದಿಲ್ಲ. ಅಸಲಿಗೆ ತುಂಬ ಮಂದಿ ಡಿಜಿಟಲ್ ವ್ಯಾಲೆಟ್ ಹೊಂದಿರುತ್ತಾರೆ ವಿನಃ ಜೇಬಿನಲ್ಲಿ ಪರ್ಸು ಇಟ್ಟುಕೊಳ್ಳುವುದಿಲ್ಲ. ಮತ್ತೆ ಚೀಟಿ ಎಲ್ಲಿಡ್ತಾರೆ ಹೇಳಿ.

3)      ಹಿಂದೆ ಪ್ರತಿಯೊಬ್ಬರ ಕಿಸೆಯಲ್ಲೂ ಫೋನ್ ನಂಬರುಗಳ ಪುಟ್ಟ ನೋಟ್ ಪುಸ್ತಕ ಇರ್ತಾ ಇತ್ತು. ಇಂದು ಅದಿಲ್ಲ. ಮೊಬೈಲಿನಲ್ಲೇ ನಂಬರ್ ಸೇವ್ ಮಾಡುತ್ತೇವೆ. ತುಂಬ ಮಂದಿಗೆ ಅವರವರ ನಂಬರ್ ಸಹ ಬಾಯಿ ಪಾಠ ಬರುವುದಿಲ್ಲ. ಹಾಗಾಗಿ ಅಲ್ಲಿಯೂ ಬರೆಯುವ ಅಭ್ಯಾಸ ನಿಂತಿತು.

4)      ಹಿಂದೆ ಪತ್ರಕರ್ತರೂ ನೋಟ್ ಪ್ಯಾಡಿನಲ್ಲೋ, ಚೀಟಿಯಲ್ಲೋ ನೋಟ್ ಮಾಡಿಕೊಂಡು ನಂತರ ವರದಿ ಬರೆಯುತ್ತಿದ್ದರು”. ಇಂದೀಗ ಸಭೆ ಸಮಾರಂಭ, ಸುದ್ದಿಗೋಷ್ಠಿಯಲ್ಲಿ ವಿಚಾರಗಳನ್ನು ಒಂದೋ ರೆಕಾರ್ಡ್ ಮಾಡಿ ತರ್ತಾರೆ, ಅಥವಾ ಸ್ಥಳದಲ್ಲೇ ಮೊಬೈಲ್ ಅಥವಾ ಲ್ಯಾಪ್ ಟಾಪಿನಲ್ಲಿ ಟೈಪ್ ಮಾಡಿಡುತ್ತಾರೆ. ಸುಲಭವಾಗಿ ಅದನ್ನು ಸುದ್ದಿ ರೂಪಕ್ಕೆ ಇಳಿಸಲು ಸಾಧ್ಯ. ಇಲ್ಲಿಯೂ ಬರೆಯುವುದು ಕಮ್ಮಿಯಾಗಿದೆ.

5)      ಭಾಷೆಗೆ ಸಂಬಂಧಿಸಿ ನಾನಾ ರೀತಿಯ ಆಪ್ ಗಳು ಬಂದಿವೆ. ಬಾಯಲ್ಲಿ ಹೇಳಿದ್ದನ್ನು ಕೇಳಿ ಅಕ್ಷರ ರೂಪದಲ್ಲಿ ಟೈಪ್ ಮಾಡಿಕೊಡುವ ಆಪ್, ಬರೆದದ್ದನ್ನು ಭಾಷಾಂತರ ಮಾಡುವ ಆಪ್, ಬರೆದದ್ದನ್ನು ತಿದ್ದಿಕೊಡುವ ಆಪ್, ಬೇಕಾದ್ದನ್ನು ಬೇಕಾದ ಹಾಗೆ ಬರೆದು ಕೊಡುವ ಚಾಟ್ ಡಿಟಿಪಿ, ಮೆಟಾ ಎಐ ನಂತಹ ಕೃತಕ ಬುದ್ಧಿಮತ್ತೆ (ಎಐ) ಆಪ್ ಗಳು ಇಡೀ ಬರೆಯುವ ಪ್ರಕ್ರಿಯೆಯ ಬುಡಕ್ಕೇ ಕೊಡಲಿ ಏಟು ನೀಡಿದೆ.

6)      ದಿನನಿತ್ಯದ ಖರ್ಚು ಲೆಕ್ಕಾಚಾರ ಬರೆಯಲು, ಕತೆ, ಕವನ ಬರೆಯಲು, ಯಾರಲ್ಲೋ ಏನನ್ನಾದರೂ ಕೇಳಿ ಟಿಪ್ಪಣಿ ಬರೆಯಲು ಎಲ್ಲದಕ್ಕೂ ಮೊಬೈಲ್ ಮತ್ತು ಅದರಲ್ಲಿರುವ ಆಪ್ ನ್ನೇ ಬಳಸುತ್ತೇವೆ. ಎರಡೂ ಕೈಗಳಲ್ಲಿ ಟೈಪ್ ಮಾಡುವುದನ್ನು ಕಲಿತಿದ್ದೇವೆ. ಹಾಗಾಗಿ ಹುಡುಕಿದರೂ ಕೆಲವರ ವೃತ್ತಿಯಲ್ಲಿ ಪ್ರತಿದಿನ ಸೈನ್ ಹಾಕುವುದು ಬಿಟ್ಟರೆ ಒಂದೇ ಒಂದು ಕಡೆ ಬರೆಯುವ ಅವಕಾಶವೇ ಸಿಕ್ಕುವುದಿಲ್ಲ. ಕಚೇರಿಗಳು ಪೇಪರ್ ಲೆಸ್ ಆಗುತ್ತಾ ಬಂದ ಹಾಗೆ ಬರೆಯುವುದಕ್ಕಿಂತ ಡಿಜಿಟಲ್ ವ್ಯವಹಾರಕ್ಕೆ ಒತ್ತು ನೀಡಲಾಗುತ್ತಿದೆ. ಈಗ ಹಾಜರಾತಿಗೂ ಸಹಿ ಹಾಕಬೇಕಾದ ಅಗತ್ಯ ಇಲ್ಲ. ಥಂಬ್ ಇಂಬ್ರೆಶನ್ ಅಥವಾ ಸೈನ್ ಇನ್ ಆಪ್ ಗಳು ಬಂದ ಮೇಲೆ ಸಹಿ ಹಾಕುವುದು ಕೂಡಾ ಬೇಕಾಗಿರದ ಪಟ್ಟಿಗೆ ಸೇರಿದೆ.

7)      ಮೊದಲು ಪತ್ರಗಳನ್ನಾದರೂ ಬರೆಯುತ್ತಿದ್ದೆವು, ಸ್ವಲ್ಪ ಸಂಗತಿಯಾದರೆ ಪೋಸ್ಟು ಕಾರ್ಡ್, ಅದಕ್ಕಿಂತ ಜಾಸ್ತಿ ಇದ್ದರೆ ಇನ್ ಲ್ಯಾಂಡ್ ಲೆಟರ್, ಮತ್ತೂ ಜಾಸ್ತಿ ಇದ್ದರೆ ಕವರಿನಲ್ಲಿ ಕಾಗದ ಬರೆಯುತ್ತಿದ್ದೆವು. ಕಾಗದ ಬರೆಯುವ ಸಂಗತಿ ಬಹುತೇಕ 99 ಶೇಕಡಾ ನಿಂತೇ ಹೋಗಿದೆ ಅಂತ ಘಂಟೋಘೋಷವಾಗಿ ಹೇಳಬಹುದು. ಅಲ್ಲಿಯೂ ಬರೆಯುವುದಕ್ಕೆ ಕೊಕ್ಕೆ ಬಿತ್ತು.

8)      ಅಲ್ಲೋ ಇಲ್ಲೋ ಪದಬಂಧ ತುಂಬಿಸುವವರು, ಡೈರಿ ಬರೆಯುವವರು, ಕೈಬರೆಹದಲ್ಲೇ ಕತೆ, ಕವನ ಬರೆದಿಡುವವರು, ಬ್ಯಾಂಕ್ ಚಲನ್ ತುಂಬುವವರು, ಅಪ್ಲಿಕೇಶನ್ ತುಂಬಿಸುವವರು ಬರೆಯುತ್ತಾ ಇರಬಹುದೇ ವಿನಃ ಹಿರಿಯ ಕವಿಗಳು, ಸಾಹಿತ್ಯಗಳು ಸಹ ಈಗೀಗ ಮೊಬೈಲ್ ನಲ್ಲೇ ಟೈಪ್ ಮಾಡಿ ಸಾಹಿತ್ಯ ರಚಿಸ್ತಾರೆ ಎಂಬುದು ತಿಳಿದು ಅಚ್ಚರಿಪಟ್ಟಿದ್ದೇನೆ. ಕೈಬರೆಯದ ಬರೆಹಗಳನ್ನು ಪತ್ರಿಕಾ ಕಚೇರಿಗಳಲ್ಲಿ ಬೆರಳಚ್ಚಿಸುವ ವಿಭಾಗದ ಸಿಬ್ಬಂದಿಯ ಕೆಲಸ ಕಡಿಮೆಯಾಗುತ್ತಾ ಬಂದಿರುವುದರಿಂದ ಈಗ ಯಾವುದೇ ಸಾಹಿತ್ಯ, ಲೇಖನ, ಬರೆಹ ಇದ್ದರೂ ಬೆರಳಚ್ಚಿಸಿ ಬಂದರೆ ಅದು ಪ್ರಕಟಣೆಗೆ ಅನುಕೂಲವಾಗುತ್ತದೆ.

9)      ಈ ಕ್ಷಣಕ್ಕೂ ನಾವು ಬರೆಯಲು ಶುರು ಮಾಡಿದರೆ ಖಂಡಿತಾ ಅದು ನಮಗೆ ಒಲಿಯುತ್ತದೆ. ಆದರೆ ವರ್ಷಾನುಗಟ್ಟಲೆ ಬರೆಯದೇ ಇದ್ದರೆ ಕ್ರಮೇಣ ಬೆರಳುಗಳೂ ನಮಗೆ ಸಹಕರಿಸುವುದಿಲ್ಲ. ಎಷ್ಟೇ ದೊಡ್ಡ ಡ್ರೈವಿಂಗ್ ಸ್ಕೂಲಿನಲ್ಲಿ ನೀವು ಡ್ರೈವಿಂಗ್ ಕಲಿತರೂ ಸಹ, ವಾಹನವನ್ನು ರಸ್ತೆಗೇ ಇಳಿಸದೆ ವರ್ಷಾನುಗಟ್ಟಲೆ ಉಳಿದರೆ ನಿಮಗೆ ಮತ್ತೆ ಡ್ರೈವಿಂಗ್ ಮಾಡಲು ತುಂಬ ಕಷ್ಟವಾಗುತ್ತದೆ. ಭಾಷೆಯ ಬಳಕೆ, ಬರೆಹ ಸಹ ಅಷ್ಟೇ... ಬಳಸಬೇಕಾದ ಸಂದರ್ಭಗಳೆಲ್ಲ ಸಾಯುತ್ತಿರುವುದರಿಂದಲೇ ನಾವು 1970, 1980, 1990ರ ದಶಕದಲ್ಲಿ ಹುಟ್ಟಿದವರು ಸಹ ಓದು-ಬರೆಹಗಳನ್ನು ಮರೆತವರಾಗಿ ಡಿಜಿಟಲ್ ಪ್ರಾಣಿಗಳಾಗುತ್ತಿದ್ದೇವೆ.

10)   ಆಗಲೇ ಹೇಳಿದ ಹಾಗೆ ಭಾಷೆ ಸರಿಯಾಗಿ ಉಳಿಯಬೇಕಾದರೆ ಅದನ್ನು ಹೇಳುವವರು, ಓದುವವರು, ನೋಡುವವರು ಎಲ್ಲರಿಗೂ ಬಳಕೆ ಬಗ್ಗೆ ಸ್ಪಷ್ಟತೆ ಬೇಕು. ಇದು ಸರಿ, ಇದು ತಪ್ಪು, ಹೀಗಾಗಬೇಕಿತ್ತು ಎಂದು ಸೂಚಿಸುವ ಸಾಮರ್ಥ್ಯ ಬೇಕು. ಶಾಲೆಗಳು, ಪತ್ರಿಕಾ ಕಚೇರಿಗಳು, ಸುದ್ದಿ ವಾಹಿನಿಗಳು, ವೆಬ್ ತಾಣಗಳು, ಫ್ಲೆಕ್ಸ್ ಮಾಡುವವರು, ಡಿಟಿಪಿ ಮಾಡುವವರು, ಯಕ್ಷಗಾನ, ನಾಟಕ ಕಲಾವಿದರು... ಎಲ್ಲ ಕಡೆ ಹೊಸದಾಗಿ ಉದ್ಯೋಗಕ್ಕೆ ಸೇರುವವರಲ್ಲಿ ಭಾಷೆಯ ಅಧ್ಯಯನದ ಕೊರತೆ ಇದೆ. ಓದುವುದು ಕಡಿಮೆಯಾಗಿದೆ. ಯಾವುದು ಸರಿ, ಯಾವುದು ತಪ್ಪು ಎಂಬ ಖಚಿತತೆ ಇಲ್ಲ. ಈ ಹೊತ್ತಿಗೆ ತಪ್ಪನ್ನು ತಪ್ಪೆಂದು ಗುರುತಿಸಿ ಹೇಳುವವರಿದ್ದಾರೆ ಸರಿ. ಇನ್ನೂ ಹತ್ತು ವರ್ಷ ಕಳೆದರೆ ಬರೆದವನಿಗೆ ಮತ್ತು ಓದುವವನಿಗೆ ಇಬ್ಬರಿಗೂ ಯಾವುದು ತಪ್ಪು, ಯಾವುದು ಸರಿ ಎಂದು ಗುರುತಿಸಲು ಸಾಧ್ಯವಾಗದೇ ಇದ್ದಲ್ಲಿ ಭಾಷೆಯ ಭವಿಷ್ಯ ಏನಾದೀತು ಊಹಿಸಿ ನೋಡಿ!

ಪತ್ರಿಕಾ ಕಚೇರಿಗಳಲ್ಲೂ ಈಗ ಕರಡು ತಿದ್ದುವ ವಿಭಾಗ ಅಳಿಯುತ್ತಾ ಬಂದಿದೆ. ಹೊಸದಾಗಿ ಪತ್ರಿಕಾ ರಂಗಕ್ಕೆ ಬರುವ ಯುವ ಪ್ರತಿಭೆಗಳಲ್ಲಿ ವ್ಯಾಕರಣ, ಉಚ್ಚಾರ, ಭಾಷೆಯ ಸರಿ ತಪ್ಪುಗಳ ಜ್ಞಾನದ ಕೊರತೆ ವ್ಯಾಪಕವಾಗಿದೆ. ನಮ್ಮ ತಲೆಮಾರಿನವರಲ್ಲೂ ಓದುವ, ಅಧ್ಯಯನ ನಡೆಸುವ ಪ್ರವೃತ್ತಿ ಕಡಿಮೆಯಾಗುತ್ತಿರುವುದೇ ಈ ಎಲ್ಲ ಅಪಸವ್ಯಗಳಿಗೆ ದೊಡ್ಡ ಕಾರಣ. ಸುದ್ದಿ ವಾಹಿನಿಗಳಲ್ಲಂತೂ ಬ್ರೇಕಿಂಗ್ ಸುದ್ದಿಗಳನ್ನು ಪ್ರಸಾರ ಮಾಡುವಲ್ಲಿ ಸಾಕಷ್ಟು ಅಲ್ಪ, ಮಹಾ ಪ್ರಾಣಗಳ ತಪ್ಪುಗಳು ಘಟಿಸುತ್ತಲೇ ಇರುತ್ತವೆ. ಸಾವಿರ ಸಾವಿರ ಸಂಖ್ಯೆಗಳಲ್ಲಿರುವ ವೆಬ್ ಸುದ್ದಿ ತಾಣಗಳಲ್ಲಿ ಸುದ್ದಿಯ ವಿವರ ಬಿಡಿ ಹೆಡ್ಡಿಂಗು (ಶೀರ್ಷಿಕೆಗ)ಗಳಲ್ಲೇ ತಪ್ಪುಗಳು ಢಾಳಾಗಿ ರಾರಾಜಿಸುತ್ತಿರುತ್ತವೆ.

ಒಂದು ಕಾಲದಲ್ಲಿ ಆಕಾಶವಾಣಿ ಎಂದರೆ ತಪ್ಪಿಲ್ಲದೆ ಭಾಷೆ ಬಳಸುವ ಮಾಧ್ಯಮ ಎಂದು ಜನಜನಿತವಾಗಿತ್ತು. ಕಳೆದ ಕೆಲ ವರ್ಷಗಳಿಂದ ಆಕಾಶವಾಣಿ ಉದ್ಘೋಷಣೆ, ನಿರೂಪಣೆಗಳಲ್ಲೂ ತಪ್ಪುಗಳು ಸ್ಪಷ್ಟವಾಗಿ ಕೇಳಿಸುತ್ತಿವೆ. ಪ್ರದೇಶ ಸಮಾಚಾರ, ರಾಷ್ಟ್ರೀಯ ವಾರ್ತೆಗಳಲ್ಲೂ ವ್ಯಾಕರಣ ದೋಷ, ಉಚ್ಚಾರ ದೋಷಗಳು ಪ್ರತಿದಿನ ಎಂಬಂತೆ ಕೇಳಿಸುತ್ತಲೇ ಇರುತ್ತವೆ.

 

ಗೂಗಲ್ ಟ್ರಾನ್ಸ್ಲೇಶನ್ ಬಂದ ಮೇಲೆ ಸುಲಭವಾಗಿ ಎಲ್ಲವನ್ನೂ ಗೂಗಲ್ ಮೂಲಕ ಕನ್ನಡೀಕರಿಸುತ್ತೇವೆ. ಇದೇ ಕಾರಣಕ್ಕೆ ಎಷ್ಟೋ ಫಲಕಗಳು, ಸೂಚನೆಗಳು, ಜಾಹೀರಾತುಗಳು ಯಾಂತ್ರಿಕ ಭಾಷಾಂತರದ ಪರಿಣಾಮ ಹಾಸ್ಯಾಸ್ಪದವಾಗಿ ಗೋಚರಿಸುತ್ತವೆ. ಇದು ತಪ್ಪು ಅಂತ ತುಂಬ ಸಲ ನಮಗೆ ಅನ್ನಿಸುವುದೇ ಇಲ್ಲ. ಫೇಸ್ಬುಕ್ಕಿನಲ್ಲಿ ಇಂತಹ ಪೋಸ್ಟುಗಳು ಕಂಡಾಗ ನಕ್ಕು ಸುಮ್ಮನಾಗುತ್ತೇವೆ. ಅದರಿಂದಾಚೆಗೆ ನಮ್ಮ ಭಾಷೆ ಪ್ರೇಮ ವಿಸ್ತರಿಸುವುದಿಲ್ಲ. ನನಗ್ಯಾಕೆ ಉಸಾಬರಿ ಅಂತ ಸುಮ್ಮನುಳಿಯುತ್ತೇವೆ. ತಲೆ ಬಳಸದೆ, ಎಲ್ಲವನ್ನೂ ಗೂಗಲ್, ಕಂಪ್ಯೂಟರ್, ಮೊಬೈಲ್, ಎಐಗೆ ಯೋಚನೆಗಳನ್ನು ಧಾರೆ ಎರೆಯುತ್ತಿರುವುದೇ ಇಂತಹ ತಪ್ಪುಗಳು ಮತ್ತೆ ಮತ್ತೆ ಹೆಚ್ಚಾಗಿ ಕಾಣುತ್ತಿರುವುದಕ್ಕೆ ಒಂದು ಕಾರಣ.

ನಮ್ಮೂರಿನಲ್ಲಿ ಫೇಸ್ಬುಕ್ಕಿನಲ್ಲಿ ಜನಪ್ರಿಯವಾಗಿರುವ ಒಂದು ಸ್ಥಳೀಯ ವೆಬ್ ಸುದ್ದಿ ವಾಹಿನಿಯೊಂದರಲ್ಲಿ ಯುವ ನಿರೂಪಕಿಯೊಬ್ಬಳು ವಾರ್ತೆಯನ್ನು ಯಾವುದೇ ಮುಜುಗರ ಇಲ್ಲದೆ ತಪ್ಪು ತಪ್ಪು ಕನ್ನಡದೊಂದಿಗೆ ಪ್ರತಿದಿನ ಓದುತ್ತಲೇ ಇರುತ್ತಾಳೆ. ಆಕೆಯ ತಪ್ಪಿಲ್ಲ ಬಿಡಿ. ಆದರೆ, ಆ ಸುದ್ದಿ ಸಂಸ್ಥೆಯ ಮುಖ್ಯಸ್ಥರು, ವಾರ್ತೆಯ ವೀಕ್ಷಕರು ಹೇಗೆ ಈ ತಪ್ಪುಗಳನ್ನು ಗಮನಿಸಿಯೂ ತಣ್ಣಗಿರುತ್ತಾರೆ ಎಂಬುದು ಸೋಜಿಗ. ಆಕೆ ವಾರ್ತೆ ಓದುವಾಗ ಸಾಮಾನ್ಯವಾಗಿ ಮಾಡುವ ತಪ್ಪುಗಳ ಕೆಲವು ತುಣುಕುಗಳು: ಮಂಗಲೂರು (ಮಂಗಳೂರು), ನಿರ್ಮಾನ (ನಿರ್ಮಾಣ), ಹೈತಕರ (ಅಹಿತಕರ), ವಿಜ್ರಂಬನೆಯಿಂದ (ವಿಜೃಂಭಣೆಯಿಂದ), ಮಲೆ (ಮಳೆ), ಮಅತೋಬರ (ಮಹತೋಭಾರ).... ಇಂತಹ ಎಷ್ಟೋ ತಪ್ಪುಗಳನ್ನು ಪಟ್ಟಿ ಮಾಡಬಹುದು. ಇದೊಂದು ನಿದರ್ಶನ ಅಷ್ಟೇ. ಇಂತವನ್ನು ನೋಡುತ್ತಾ, ನೋಡುತ್ತಾ ಕೊನೆಗೆ ನಮ್ಮ ತಲೆಯಲ್ಲಿ ಉಳಿದಿರುವ ಅಳಿದುಳಿದ ಪದಗಳೂ ಕುಲಗೆಟ್ಟಿರುತ್ತವೆ. ಸರಿಯನ್ನು ಹುಡುಕುವುದೇ ತ್ರಾಸದಾಯಕವಾಗಿ ಬಿಡುತ್ತದೆ. ಬಹುತೇಕ ಎಲ್ಲ ಮಾಧ್ಯಮಗಳಲ್ಲೂ ತಪ್ಪುಗಳು ಅಕ್ರಮ ಸಕ್ರಮವಾಗಿ ಬಿಟ್ಟಿವೆ.

ಅದರಲ್ಲೂ ಸುದ್ದಿವಾಹಿನಿಗಳಲ್ಲಿ ವಾರ್ತೆಯನ್ನು ಓದುವ ಧಾಟಿ ಭಯಂಕರ ಸಮಕಾಲೀನವಾಗಿದ್ದರೆ ಸಾಕು. ಭಾಷೆಯ ಬಳಕೆ ದೊಡ್ಡ ವಿಚಾರವಿಲ್ಲ ಎಂಬ ಉಡಾಫೆ ಕಾಣಿಸುತ್ತಿದೆ. ಜಿಲ್ಲಾ, ತಾಲೂಕು ಮಟ್ಟದ ಸುದ್ದಿ ವಾಹಿನಿಯಲ್ಲೂ ರಾಷ್ಟ್ರೀಯ ಮಟ್ಟದ ವಾಹಿನಿ ಥರ ಏರು ಸ್ವರದಲ್ಲಿ ಓದುವುದು, ರಾಗ ಎಳೆಯುವುದಕ್ಕೆ ಇರುವ ಮಹತ್ವ. ತಪ್ಪಿಲ್ಲದೆ ವಾರ್ತೆ ಓದುವುದಕ್ಕಿಲ್ಲ ಎಂಬುದು ಕಾಣಿಸುವಾಗ ಅಚ್ಚರಿ ಆಗುತ್ತದೆ. ಅದರಲ್ಲೂ ವಾರ್ತಾ ವಾಚಕರು, ವಾಚಕಿಯರು ಹೋಗುತ್ತಾರೆ ಎಂಬುದುದನ್ನು ಹೋಗುತ್ತಾರ್ಯೇ.... ಅಂತ ಎಳೆಯುವುದು, ತಿಳಿಯಿತು ಎಂಬ ಪದವನ್ನು ತಿಳಿಯಿಥೋ... ಎಂದೆಲ್ಲ ಅಪಭ್ರಂಶಗೊಳಿಸಿ ಬಳಸುವುದರ ಔಚಿತ್ಯ ಏನು? ಮೂಲ ಸ್ವರೂಪದಲ್ಲೇ ಓದಿದರೆ ವೀಕ್ಷಕರು ತಿರಸ್ಕರಿಸುತ್ತಾರಾ ಎಂಬುದೇ 80ರ ದಶಕದವನಾದ ನನಗೆ ಕಗ್ಗಂಟಾಗಿ ಉಳಿದ ಸಂಗತಿ.

 

ಭಾಷೆ ಕೆಡಲು ನಾವೆಲ್ಲರೂ ಕಾರಣ. ಭಾಷೆಯ ಪ್ರೀತಿಯೆಂದರೆ ಭಾಷಣ, ಸ್ಟೇಟಸ್ಸು, ಹೋರಾಟ ಎಂಬ ಭ್ರಮೆಗೆ ನಮ್ಮ ಕಾಳಜಿ ಸೀಮಿತವಾಗಿದೆ ಎಂಬುದು ನನ್ನ ಅನಿಸಿಕೆ. ಸರಿಯಾಗಿ ಬಳಸಿದರೆ ಭಾಷೆ ಉಳಿಯುತದೆ ಎಂಬ ಕಾಳಜಿ ನಮಗಿಲ್ಲ. ತಪ್ಪುಗಳು ಸಾರ್ವಜನಿಕವಾಗಿ ಗೋಚರಿಸಿದಾಗ ಅದನ್ನು ಪ್ರಶ್ನಿಸುವ, ಕೇಳುವ, ತಿದ್ದುವ ಆಸಕ್ತಿ, ಸಹನೆ ನಮ್ಮಲ್ಲಿ ಇಲ್ಲದೇ ಇರುವುದು ಕೂಡಾ ಭಾಷೆ ಕೆಡುತ್ತಿರುವುದಕ್ಕೆ ದೊಡ್ಡ ಕಾರಣ....

ಮತ್ತೆ ಮತ್ತೆ ಅದೇ ಹೇಳ್ತೇನೆ. ಭಾಷೆ ಯಾವುದೇ ಇರಲಿ. ಅದನ್ನೂ ಪೂಜಿಸುವುದರಿಂದ, ಉತ್ಪ್ರೇಕ್ಷಿಸುವುದರಿಂದ ಉಳಿಯುವುದಲ್ಲ. ಅದರ ಮೂಲ ಸ್ವರೂಪದಲ್ಲಿ, ತಪ್ಪಿಲ್ಲದೆ ಬಳಸುವುದರಿಂದ ಮಾತ್ರ ಮೊದಲು ಉಳಿಯುವುದು ಮತ್ತೆ ಉಳಿದರೆ ಬೆಳೆಯುವುದು!!! ಸಿರಿಗನ್ನಡಂ ಗೆಲ್ಗೆ...

-ಕೃಷ್ಣಮೋಹನ ತಲೆಂಗಳ (16.05.2025)

No comments: