ರಂಗ ಸ್ಥಳದಲ್ಲಿ ಬಾಹುಬಲಿ 3

ರಾಜಮೌಳಿ ಬಾಹುಬಲಿ ಭಾಗ 3 ನಿರ್ದೇಶನ ಮಾಡುತ್ತಾರೋ ಗೊತ್ತಿಲ್ಲ. ಆದರೆ ಕರಾವಳಿ ಕಲೆ ಯಕ್ಷಗಾನದಲ್ಲಿ ಮಾತ್ರ ಬಾಹುಬಲಿ 2ರ ಮುಂದಿನ ಭಾಗವೂ ರಂಗಸ್ಥಳಕ್ಕೆ ಬರಲು ಸಿದ್ಧವಾಗಿದೆ. ಆ. 5 ಕ್ಕೆ ಪುರಭವನದಲ್ಲಿ ಸಾಲಿಗ್ರಾಮ ಮೇಳದಿಂದ ಪ್ರದರ್ಶನಗೊಳ್ಳಲಿದೆ. ಹೆಸರು ವಜ್ರಮಾನಸಿ 2. ಇದಕ್ಕೆ ಶಿವಗಾಮಿ ಪಾತ್ರಧಾರಿ ಶಶಿಕಾಂತ್‌ ಶೆಟ್ಟಿ ಕಾರ್ಕಳ ಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. 



2015ರಲ್ಲಿ ಬಾಹುಬಲಿ 1 ಸಿನಿಮಾ ಬಂದಿದ್ದೇ ಯಕ್ಷಗಾನದಲ್ಲೂ ಅದೇ ಕಥೆ ಇರುವ ಪ್ರಸಂಗ ಬಂತು. ಹೆಸರು ವಜ್ರಮಾನಸಿ. ಜನಪ್ರಿಯ ಯಕ್ಷಗಾನ ಪ್ರಸಂಗಕರ್ತ ದೇವದಾಸ ಈಶ್ವರ ಮಂಗಲ ಅವರ ಈ ಪ್ರಯೋಗ ಕೆಲವರ ವಿರೋಧದ ನಡುವೆಯಯೂ ಯಶಸ್ವಿಯಾಯಿತು. 140 ಪ್ರದರ್ಶನ ಕಾಣುವ ಮೂಲಕ ಸೂಪ್‌ ಹಿಟ್‌ ಆಯಿತು. ಇದೇ ಪ್ರಸಂಗ ಕರ್ತರು ಬಾಹುಬಲಿ 2 ಬರುವ ಮೊದಲೇ ವಜ್ರಮಾನಸಿ 1 ಪ್ರಸಂಗ ರಚಿಸಿದರು. ವಿಶೇಷ ಎಂದರೆ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂಬ ಪ್ರಶ್ನೆಗೂ ವಜ್ರಮಾನಸಿ ಪ್ರಸಂಗದಲ್ಲಿ ಉತ್ತರ ಕಂಡುಕೊಳ್ಳಲಾಗಿತ್ತು. ಪ್ರಸಂಗ ಕರ್ತರ ಕಲ್ಪನೆ ಬಾಹುಬಲಿ 2 ರಲ್ಲಿ ನಿಜವೂ ಆಗಿತ್ತು. ಬಾಹುಬಲಿ ಸಿನಿಮಾದಲ್ಲಿದ್ದ ಶಿವಗಾಮಿ, ಮಹೇಂದ್ರ ಬಾಹುಲಿ, ಕಟ್ಟಪ್ಪ ಮತ್ತಿತರ ಪಾತ್ರಗಳು ಅದೇ ಹೆಸರಿನಿಂದ ಯಕ್ಷಗಾನದಲ್ಲಿ ಕಾಣಿಸಿಕೊಳ್ಳುವುದು ಮತ್ತೊಂದು ವಿಶೇಷ. 


ತೀವ್ರ ವಿರೋಧ ಇತ್ತು 
ವಜ್ರಮಾನಸಿ ಸಿರೀಸನ್ನು ಪ್ರದರ್ಶಿಸಿದ್ದು ಬಡಗುತಿಟ್ಟಿನ ಪ್ರಸಿದ್ಧ ಡೇರೆ ಮೇಳೆ ಶ್ರೀ ಸಾಲಿಗ್ರಾಮ ಮೇಳದವರು. ಈ ಬಯಲಾಟಕ್ಕೆ ಆರಂಭದಲ್ಲಿ ಪ್ರೇಕ್ಷಕರಿಂದ ಯಕ್ಷಗಾನ ಪಂಡಿತರಿಂದ ಆಕ್ಷೇಪಗಳಿದ್ದವು. ಆದರೆ ಕಲಾವಿದರ ಸಂಘಟಿತ ಪ್ರಯತ್ನ, ದೃಶ್ಯ ನಿರೂಪಣೆ, ಹಾಡುಗಳು ಹಾಗೂ ಸಂಭಾಷಣೆಯಿಂದ ಕ್ರಮೇಣ ಜನಪ್ರಿಯವಾಗುತ್ತಾ ಹೋಯಿತು. 


ಬಾಹುಬಲಿ 3 ಕಥೆಯಲ್ಲೀಗ ವಜ್ರಮಾನಸಿ 2

ಅದೇ ಯಶಸ್ಸಿನಿಂದ ಅವರೀಗ ವಜ್ರಮಾನಸಿ ಭಾಗ 1ರ ಕೆಲ ದೃಶ್ಯಗಳನ್ನು ಉಳಿಸಿ, ಬಾಹುಬಲಿ 3ರ ಕಾಲ್ಪನಿಕ ಕತೆಯನ್ನು ವಜ್ರಮಾನಸಿ 2 ಆಗಿಸಿದ್ದಾರೆ. ವಜ್ರಮಾನಸಿ ಹಾಗೂ ವಜ್ರಮಾನಸಿ 1 ಇವೆರಡರ ಕತೆ ಸೇರಿಸಿ ತುಳುವಿನಲ್ಲಿ ಹಾಡುಗಳನ್ನು ಬಳಸಿ ತೆಂಕು ತಿಟ್ಟಿನಲ್ಲಿಯೂ ಆ. 5ರಂದು ಮಂಗಳೂರು ಪುರಭವನದಲ್ಲಿ ‘ಬಾಹುಬಲಿ’ ಹೆಸರಿನಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. 


ಈ ಹಿಂದೆಯೂ ಚಲನಚಿತ್ರ ಕಥೆ ಯಕ್ಷಗಾನವಾಗಿತ್ತು

ಈ ಹಿಂದೆ ಅಣ್ಣಯ್ಯ ಸಿನಿಮಾದ ರಿಮೇಕ್‌ ‘ಈಶ್ವರಿ ಪರಮೇಶ್ವರಿ’ ಬಾಲಿವುಡ್‌ನ ಬಾಝಿಗರ್‌ ಸಿನಿಮಾದ ರಿಮೇಕ್‌ ‘ಧೀಶಕ್ತಿ’, ಅನ್ನುವ ಪ್ರಸಂಗ ಸೇರಿದಂತೆ ಹಲವು ಯಕ್ಷಗಾನ ಪ್ರಸಂಗಗಳು ಬೆಳ್ಳಿತೆರೆಯಿಂದ ರಂಗಸ್ಥಳಕ್ಕೆ ಬಂದ ಉದಾಹರಣೆಗಳಿವೆ. 


ಶಿವಗಾಮಿ ಪಾತ್ರಧಾರಿಯ ಭಿನ್ನ ಹೇಳಿಕೆ 

‘ಸಿನಿಮಾ ಕತೆಗಳನ್ನು ಯಕ್ಷಗಾನ ಪ್ರಸಂಗವಾಗಿ ಬರೆಯುವವರಿಗೆ ಅದು ಸುಲಭ. ಪ್ರಸಂಗ ಕರ್ತರು ನಿರ್ದೇಶನ, ಕತೆ , ರಚನೆ ತಮ್ಮದೇ ಅಂತ ಹಾಕ್ತಾರೆ. ಆದರೆ ಪ್ರಸಂಗಕರ್ತರು ಕಲಾವಿದರಿಗೆ ನಿರ್ದೇಶನ ನೀಡುವುದಿಲ್ಲ. ವಜ್ರಮಾನಸಿ ಪ್ರಸಂಗ ಹಿಟ್‌ ಆಗಿದ್ದು ನಾವು ಕಲಾವಿದರ ಟೀಮ್‌ ವರ್ಕಿನಿಂದ’ –ಎನ್ನುತ್ತಾರೆ ಸಾಲಿಗ್ರಾಮ ಮೇಳದ ಪ್ರಸಿದ್ಧ ಸ್ತ್ರೀ ವೇಷಧಾರಿ , ಶಿವಗಾಮಿ ಪಾತ್ರ ನಿರ್ವಹಿಸಿದ ಶಶಿಕಾಂತ ಶೆಟ್ಟಿ ಕಾರ್ಕಳ. 

‘ಈ ಪರಸಂಗ ಯಕ್ಷಗಾನ ತಿರುಗಾಟ ಆರಂಭದಲ್ಲಿ ಈ ರೂಪದಲ್ಲಿ ಇರಲಿಲ್ಲ. ಬಳಿಕ ಕಲಾವಿದರೇ ಪರಸ್ಪರ ಚರ್ಚಿಸಿ ಪೂರಕ ಸಂಭಾಷಣೆಗಳನ್ನು ರೂಪಿಸಿದೆವು. ಅದು ಜನರಿಗೆ ಇಷ್ಟವಾಯಿತು. ಯಾವುದೇ ಕಲಾಪ್ರಕಾರ ರಂಜನೆ ಇದ್ದರೆ ಮಾತ್ರ ಯಶಸ್ವಿಯಾಗುವುದು. ಪೂರಕವಾಗಿ ಮಾರ್ಮಿಕ ದೃಶ್ಯಗಳು, ಮನಸ್ಸಿನಲ್ಲಿ ಉಳಿಯುವ ಹಾಡುಗಳು ಪ್ರೇಕ್ಷಕರಿಗೆ ಬೇಕು. ದೇವದಾಸ ಈಶ್ವರ ಮಂಗಲ ಕಥೆಯನ್ನು ಸಂಗ್ರಹ ಮಾಡಿದ್ದೇ ಹೊರತು ನಿರ್ದೇಶಕರಲ್ಲ. ಅವರು ತನ್ನನ್ನು ನಿರ್ದೇಶಕ ಎನ್ನುವುದಕ್ಕೆ ಆಕ್ಷೇಪವಿದೆ’ ಎನ್ನುತ್ತಾರೆ ಶಶಿಕಾಂತ ಶೆಟ್ಟಿ. 

*

ಅಭಿಪ್ರಾಯ: 

*

2015ರಲ್ಲಿ ನಾನು ಬಾಹುಬಲಿ ಸಿನಿಮಾವನ್ನು ಯಕ್ಷಗಾನಕ್ಕೆ ತಂದಾಗ ಏನೂ ಕೆಲಸ ಇಲ್ಲದವರು ಅದಕ್ಕೆ ಟೀಕೆ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿತ್ತೇ ವಿನಃ ನೇರವಾಗಿ ಯಾರೂ ನನ್ನಲ್ಲಿ ವಿರೋಧಿಸಿದವರಿಲ್ಲ. ಜನರ ಬೆಂಬಲ ಇದ್ದರೆ ಮಾತ್ರ  ಇಂತಹ ಪ್ರಯತ್ನಗಳು ಗೆಲ್ಲುತ್ತವೆ. ಯಕ್ಷಗಾನವೇ ಗೊತ್ತಿಲ್ಲದವರು ಈ ಪ್ರಯತ್ನದಿಂದ ಯಕ್ಷಗಾನ ನೋಡುವಂತಾಗಿದೆ. ಬೆಂಗಳೂರಿನಲ್ಲಿ ಯಕ್ಷಗಾನ ಗೊತ್ತಿಲ್ಲದ ಬಾಹುಬಲಿ ಪ್ರೇಮಿಗಳೂ ಬಂದು ಯಕ್ಷಗಾನ ನೋಡಿದ್ದಾರೆ. ಇದರಿಂದ ಯಕ್ಷಗಾನಕ್ಕೆ ಲಾಭ ಅಲ್ಲವೇ. 

 – ದೇವದಾಸ ಈಶ್ವರ ಮಂಗಲ , ಯಕ್ಷಗಾನ ಪ್ರಸಂಗ ಕರ್ತ 

*

ಪ್ರಸಂಗ ಕರ್ತರು ಸಿನಿಮಾದ ಕತೆಯನ್ನು ಬದಲಾವಣೆ ಮಾಡಿದ್ದರು. ವಜ್ರಮಾನಸಿ ಕಥೆ ವಿಭಿನ್ನವಾಗಿತ್ತು. ಕಲಾವಿದರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಎಲ್ಲ ಪಾತ್ರಗಳು ವಿಶಿಷ್ಟವಾಗಿ ಮೂಡಿ ಬಂದಿವೆ. ಸಿನಿಮೀಯತೆ ಬಂದಿಲ್ಲ. ಎಲ್ಲೂ ಬೋರ್‌ ಆಗುವುದಿಲ್ಲ. ಹಾಗಾಗಿ ಜನರಿಗೆ ಇಷ್ಟ ಆಯ್ತು. ಆದರೆ ದೀರ್ಘ ಕಾಲದಲ್ಲಿ ಇಂತಹ ಕತೆಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದು ಕಷ್ಟ. 

-ಕರುಣಾಕರ ಬಳ್ಕೂರು , ಯಕ್ಷಗಾನ ಪ್ರೇಮಿ, ಉಪನ್ಯಾಸಕರು. 

*

ಬಾಹುಬಲಿಯಂತಹ ಸಿನಿಮಾನವನ್ನು ಯಕ್ಷಗಾನಕ್ಕೆ ತರುವುದು ಟೆಂಟ್‌ ಮೇಳದ ಆಟಕ್ಕೆ ಮಾತ್ರ ಸೀಮಿತ ಆಗಿರಬೇಕು. ಯಾಕೆಂದರೆ ಯಕ್ಷಗಾನ ಮೇಳಗಳು ಉಳಿಯಬೇಕಾದರೆ ಇಂತಹ ಗಿಮಿಕ್‌ಗಳನ್ನು ಮಾಡಲೇಬೇಕು. ಸಿನಿಮಾದ್ದಾದರೂ ಯಕ್ಷಗಾನಕ್ಕೆ ಒಗ್ಗುವ ಕಲೆಯಾದರೆ ಸ್ವೀಕರಿಸಬೇಕು. 

-ಶಾಂತಾರಾಮ ಕುಡ್ವ, ಯಕ್ಷಗಾನ ಪ್ರೇಮಿ. 

*

ತಿರುಗಾಟದಲ್ಲಿ ಕತೆಯನ್ನು ಬಳಸುವ ಮೊದಲೇ ಮಳೆಗಾಲದಲ್ಲಿಯೇ ಬೆಂಗಳೂರಿನಲ್ಲಿ ಪ್ರಸಂಗಗಳನ್ನು ಬಿಡುಗಡೆ ಮಾಡುವ ಪ್ರವೃತ್ತಿ ಆರಂಭವಾಗಿದೆ. ಇದಕ್ಕೆ ವಿನಾ ಕಾರಣ ಪ್ರಚಾರ ಕೊಡಲಾಗುತ್ತಿದೆ. ಸಿನಿಮಾ ಕತೆಗಳಂತಹ ಸಾಮಾಜಿಕ ಪ್ರಸಂಗಗಳು ಮೇಳದ ತಿರುಗಾಟದಲ್ಲಿ ಹಲವು ಪ್ರದರ್ಶನಗಳನ್ನು ಕಂಡ ಬಳಿಕ ತಿದ್ದಿ ತೀಡಿ ಕಲಾವಿದರ ಪ್ರಯತ್ನದಿಂದ ಒಂದು ರೂಪಕ್ಕೆ ಬರುತ್ತವೆ. 

-ಶಶಿಕಾಂತ ಶೆಟ್ಟ , ಕಾರ್ಕಳ, ಯಕ್ಷಗಾನ ಸ್ತ್ರೀ ವೇಷಧಾರಿ 

*

ವಜ್ರಮಾನಸಿ ಪ್ರಸಂಗ ಹಿಟ್‌ ಆಗಿದೆ. ಪ್ರೇಕ್ಷಕರೆಲ್ಲ ಮೆಚ್ಚಿದ್ದಾರೆ. ಇದರಲ್ಲಿ ಕಲಾವಿದರ ಪ್ರಯತ್ನ ತುಂಬ ಇದೆ. ಆರಂಭದಲ್ಲಿ ಇಂತಹ ಕತೆಯನ್ನು ಯಕ್ಷಗಾನ ಮಾಡುವುದಕ್ಕೆ ಪ್ರೇಕ್ಷಕರ ವಿರೋಧ ಇತ್ತು. ಕೊನೆಗೆ ವಿರೋಧ ಮಾಡಿದವರೂ ಮೆಚ್ಚಿಕೊಂಡರು. 

– ಪ್ರಸನ್ನ ಶೆಟ್ಟಿಗಾರ್‌, ಸಾಲಿಗ್ರಾಮ ಮೇಳದ ಕಲಾವಿದರು. 

*

ವಜ್ರಮಾನಸಿ ಪ್ರಸಂಗ ಪ್ರದರ್ಶನದ ಆರಂಭದಲ್ಲಿ ಪ್ರೇಕ್ಷಕರಿಗೆ ಅಂತಹ ಅಭಿಪ್ರಾಯ ಇರಲಿಲ್ಲ. ಸಾಲಿಗ್ರಾಮ ಮೇಳದ ಕಲಾವಿದರ ಟೀಮ್‌ ವರ್ಕ್‌ನಿಂದ ಪ್ರಸಂಗ ಮೇಲೆ ಬಿತ್ತು. ಕೊನೆಗೆ ಜನಪ್ರಿಯವಾಯಿತು. ಆದರೆ ಪ್ರತಿವರ್ಷವೂ ದೇವದಾಸ್‌ ಈಶ್ವರ ಮಂಗಲ ಸಿನಿಮಾ ಕಥೆಗಳನ್ನೇ ಯಕ್ಷಗಾನ ಮಾಡ್ತಾರಲ್ಲ ಅಂತ ಜನ ಯೋಚಿಸುವಂತಾಯಿತು. ಆದರೆ ಯಾವುದೇ ಕತೆಯನ್ನು ಯಕ್ಷಗಾನೀಯವಾಗಿಸುವ ಕಲೆ ಅವರಲ್ಲಿದೆ. 

-ಎಂ.ಎಚ್‌. ಪ್ರಸಾದ್‌ ಕುಮಾರ್ ಮೊಗೆಬೆಟ್ಟು, ಯಕ್ಷಗಾನ ಭಾಗವತರು, ಪ್ರಸಂಗಕರ್ತ 

*

ಯಕ್ಷಗಾನ, ಸಿನಿಮಾ ಮತ್ತು ದೇವದಾಸ ಈಶ್ವರ ಮಂಗಲ 

1997ರಿಂದ ಯಕ್ಷಗಾನ ಪ್ರಸಂಗಗಳನ್ನು ರಚಿಸುತ್ತಿರುವ ದೇವದಾಸ ಈಶ್ವರ ಮಂಗಲ ಈ ತನಕ 62 ಕತೆಗಳನ್ನು ರಚಿಸಿದ್ದಾರೆ. ಈ ಪೈಕಿ ಸುಮಾರು 18ರಷ್ಟು ಕತೆಗಳು ಸಿನಿಮಾ ಆಧಾರಿತ. ಇವುಗಳಲ್ಲಿ ಬಹಳಷ್ಟು ಯಕ್ಷಗಾನಗಳು ಗಳಿಕೆ ದೃಷ್ಟಿಯಿಂದ ಯಶಸ್ವಿಯೂ ಆಗಿವೆ. ಪಡೆಯಪ್ಪ ಸಿನಿಮಾ ಕತೆಯ ‘ಶಿವರಂಜಿನಿ’, ಆಪ್ತ ಮಿತ್ರದ ಕತೆಯ ‘ನಾಗವಲ್ಲಿ’ ಇವೆರಡು ಸುಮಾರು 500–600ರಷ್ಟು ಪ್ರದರ್ಶನಗಳನ್ನು ಕಂಡಿರುವುದು ಈ ಪ್ರಯತ್ನ ಕೈ ಸೋತಿಲ್ಲ ಎಂಬುದಕ್ಕೆ ಸಾಕ್ಷಿ. ಸಿನಿಮಾ ಕತೆಯನ್ನು ಯಕ್ಷಗಾನೀಯ ಶೈಲಿಗೆ ತರುವಲ್ಲಿ ಪಳಗಿದವರಾದ ದೇವದಾಸ್‌, ಮುಂಗಾರುಮಳೆ, ರಾಣಿ ಮಹಾರಾಣಿ, ಸಗ್ಮ ಸೇರಿದಂತೆ ಹಲವು ಸಿನಿಮಾ ಕತೆಗಳನ್ನು ಯಕ್ಷಗಾನಕ್ಕೆ ತಂದಿದ್ದಾರೆ. 


-   ಕೃಷ್ಣಮೋಹನ ತಲೆಂಗಳ

No comments: