ಬದುಕಿಗೆ ಆರೋಗ್ಯದ ಗ್ಯಾರಂಟಿ ಕಮ್ಮಿ ಆಗಿದೆಯಾ?! (ಬೇಡ ಎಂದು ಬೇಡಿದರೂ ಬೇಡಗಳು ಕಾಡದೇ ಇರದು... ಬೇಡಗಳನ್ನು ನೋಡದೆಯೂ ಇರಲಾಗದು!)
ನಿನ್ನೆ ಎನ್ನುವುದು ಇತಿಹಾಸ. ಬದಲಿಸಲಾಗದ ಸತ್ಯಗಳ ಪುಟಗಳು. ಮತ್ತೊಮ್ಮೆ ಕಾಲಿಡಲಾಗದ ದಿನಗಳು ಹಾಗೂ ಬೇಡವೆಂದರೂ ಕೆಲವೊಮ್ಮೆ ಮರೆವಿಗೆ ಸಿಲುಕದ ಗಾಢ ನೆನಪುಗಳು... ಬೋರ್ವೆಲ್ಲಿನಲ್ಲಿ ನೀರು ಕುಡಿದು
ದಾಹ ಇಂಗಿಸಿದರೂ, ಚಪ್ಪಲಿ ಧರಿಸದೇ ಕಚ್ಛಾ ರಸ್ತೆಯಲ್ಲಿ ನಡೆದರೂ, ಸುಡುಬಿಸಿಲಿಗೆ ಮೈಲುಗಟ್ಟಲೆ
ನಡೆದು ಶಾಲೆಗೆ ಹೋದರೂ ಗಂಭೀರ ಇನ್ಫೆಕ್ಷನ್, ನಿತ್ರಾಣ, ತ್ವಚೆಗೆ ಹಾನಿ ಮತ್ತಿತರ ಸಮಸ್ಯೆಗಳಿಗೆ
ತುತ್ತಾಗದೆ ಬಾಲ್ಯ ಕಳೆದವರು ನಾವು.
ಇಂದು
ಬೆಳಗೆದ್ದರೆ ಸ್ಟ್ರೋಕ್, ಬ್ಲಾಕ್, ಆಟಾಕ್, ಕ್ಯಾನ್ಸರುಗಳ ಹೆಸರು ಕೇಳುವುದೇ ಆಗಿ ಬಿಟ್ಟಿದೆ.
ಕಾರಣಗಳು, ಸಮರ್ಥನೆಗಳು ನೂರು ಇರಬಹುದು. ನಿನ್ನೆ ಮೊನ್ನೆ ಆರೋಗ್ಯವಂತರಾಗಿ ಕಂಡವರು, ಮೊನ್ನೆ
ಮೊನ್ನೆ ಚೆನ್ನಾಗಿಯೇ ಇದ್ದವರು ಕಿಮೋ ಥರೆಪಿ ಪಡೆದಿದ್ದಾರೆ ಎಂಬ ಸಣ್ಣ ವದಂತಿ ಕಿವಿಗೆ ಬಿದ್ದಾಗ
ಮನಸ್ಸು ಚಡಪಡಿಸುತ್ತದೆ. ಅತ್ತ, ಇತ್ತ, ಸುತ್ತಮುತ್ತ ಅಲ್ಟ್ರಾ ಸೌಂಡ್, ಎಂಆರ್ ಐ ಸ್ಕ್ಯಾನಿಂಗ್,
ಎಂಡೋಸ್ಕೊಪಿ, ಬಯಾಪ್ಸಿ ಮಾಡಿಸ್ಕೊಂಡವರ ಪಟ್ಟಿಗೆ ನಾವೂ ಸೇರುವಾಗ, ಸೇರುವ ಹಂತದಲ್ಲಿರುವಾಗ ಇದು
ಎಲ್ಲಿಂದ ಶುರುವಾಗಿ, ಎಲ್ಲಿಗೆ ತಲುಪಿದೆ ಹಾಗೂ ಮತ್ತೆಲ್ಲಿಗೆ ತಲುಪುತ್ತದೆ ಅಂತ
ಗೊತ್ತಾವುದಿಲ್ಲ.
ವೈದ್ಯಕೀಯ
ತರ್ಕಗಳು, ಸಾಮಾಜಿಕ ಕಾರಣಗಳು, ಜೀವನ ಶೈಲಿಯ ವ್ಯಾಖ್ಯಾನಗಳು ಎಂಥದ್ದೇ ಇರಲಿ. ಆರೋಗ್ಯ ಮತ್ತು
ಆರೋಗ್ಯದ ಗ್ಯಾರಂಟಿ ಬದುಕಿನಲ್ಲಿ ಕಮ್ಮಿಯಾಗಿದೆ ಎಂಬುದಕ್ಕೆ ಪ್ರತ್ಯೇಕ “ಅಧ್ಯಯನ
ವರದಿ” ಬೇಕಾಗಿಲ್ಲ. ಜೀವಂತ ಹಾಗೂ ಮೃತರಾದವರ ಸಾಕ್ಷಿಗಳೇ ಇವೆ ಎಂಬುದು ಕಠಿಣ
ಸತ್ಯ.
ನಮ್ಮ ಬಗ್ಗೆ ನಮಗೆ ಭಯಂಕಾರ ಅಹಂಭಾವ ಇರುತ್ತದೆ... ನಾನು ಎಂಥದ್ದೂ
ಮಾಡಬಲ್ಲೆ, ಯಾರಿಗೂ ಅಂಜುವುದಿಲ್ಲ, ತಾಕತ್ತಿದ್ದರೆ ಬಾ, ನೋಡಿಕೊಳ್ತೇನೆ, ದೇಹದಲ್ಲಿ ಕೊನೆಯ ಹನಿ
ರಕ್ತ ಇರುವ ತನಕ ಹೋರಾಡುತ್ತೇವೆ ಎಂಬಿತ್ಯಾದಿ ಘೋಷ ವಾಕ್ಯಗಳು. ಯಕಶ್ಚಿತ್ ಹೊಟ್ಟೆಯೊಳಗೆ
ಗ್ಯಾಸ್ಟ್ರಿಕ್ ಉಲ್ಬಣಿಸಿ ಅಲ್ಸರ್ ಆಗಿರುವುದು ಎಂಡೋಸ್ಕೊಪಿ ಮಾಡಿಸುವ ವರೆಗೆ ನಮಗೆ
ಗೊತ್ತಿರುವುದಿಲ್ಲ. ಪುಟ್ಟದೊಂದು ಅಟಾಕ್ ಆಗಿ ಅಡ್ಮಿಟ್ ಆಗಿ ಆಂಜಿಯೋಗ್ರಾಂ ಮಾಡಿಸುವ ವರೆಗೆ
ರಕ್ತನಾಳ ಬ್ಲಾಕ್ ಆಗಿರುವುದು ತಿಳಿದಿರುವುದಿಲ್ಲ. ಎಂಥದ್ದೊ ಗಡ್ಡೆ, ಮತ್ತೆಂಥದ್ದೋ
ಇನ್ಫೆಕ್ಷನ್, ಮತ್ತೆಂಥದ್ದೋ ಎಕ್ಸ್ಟ್ರಾ ಗ್ರೋಥ್, ಮಾನಸಿಕ ವೈಪರೀತ್ಯ, ಖಿನ್ನತೆ, ಸ್ಟ್ರೇಸ್,
ಅಲ್ ಝೈಮರ್ಸ್... ಎಷ್ಟೊಂದು ಹೆಸರುಗಳು... ಒಂದು
ಪರೀಕ್ಷೆ, ಒಂದು ರಿಪೋರ್ಟು ಸಿಕ್ಕುವ ವರೆಗೆ ನಾವು ಭಯಂಕರ ಆರೋಗ್ಯವಂತರು, ಧೈರ್ಯಶಾಲಿಗಳು,
ಎಂಟೆದೆಯ ಬಂಟರು ಅಂತಲೇ ಅಂದುಕೊಂಡಿರುತ್ತೇವೆ. ದೇಹದೊಳಗಿನ ಒಂದು ಬದಲಾವಣೆ, ಒಂದು ಅಸಹಜತೆ,
ಒಂದು ನ್ಯೂನತೆಯನ್ನಿಟ್ಟುಕೊಂಡರೂ ಅರಿವಿಗೇ ಬಾರದಂಥಹ ಒಂದು ದೌರ್ಬಲ್ಯ ಆವರಿಸಿದ್ದರೂ ನ್ಯೂನತೆಗಳ
ಜೊತೆಗೇ ದಿನಗಟ್ಟಲೆ ಬದುಕು ಸಾಗಿಸಿರುತ್ತೇವೆ. ಅದು ಗೊತ್ತಾದ ಬಳಿಕ ಅದರ ವಿರುದ್ಧ ಹೋರಾಡಲು
ಪ್ರಯತ್ನ ಮಾಡುತ್ತೇವೆ.
ಸಣ್ಣ ಪ್ರಾಯದಲ್ಲಿ ಹಾರ್ಟ್ ಅಟಾಕ್ ಆಯ್ತಂತೆ, ವೇದಿಕೆಯಲ್ಲೇ
ಕುಸಿದರಂತೆ, ಸಡನ್ ಸ್ಟ್ರೋಕ್ ಅಂತೆ... ಮತ್ತೆ ಅವರಿಗೆ ಎರಡನೇ ಸ್ಟೇಜಿನಲ್ಲುಂಟಂತೆ, ಮೂರನೇ
ಸ್ಟೇಜಿನಲ್ಲುಂಟಂತೆ... ಬೆಳಗ್ಗೆದ್ದರೆ ಎಷ್ಟೊಂದು ಸುದ್ದಿಗಳು ಕಿವಿ ಸೇರುತ್ತವೆ. ಬಹಳಷ್ಟು
ಸುದ್ದಿಗಳಿಗೆ ನಾವು ಕೇವಲ ಶ್ರೋತೃಗಳು, ಒಳಗೊಳಗೆ ನೊಂದವರೂ ಆಗಬಹುದೇ ಹೊರತು ಮತ್ತೆ ನಮ್ಮ
ಕೈಯ್ಯಲ್ಲಿ ಎಂಥದ್ದೂ ಮಾಡಲು ಆಗುವುದಿಲ್ಲ...
ದೊಡ್ಡ ದೊಡ್ಡ ಕಾಯಿಲೆಗಳು ಬೇಡ... ಪುಟ್ಟದೊಂದು ಕ್ರಾಕ್, ಸಣ್ಣ
ಅವಘಡ, ಕಿಡ್ನಿ ಸ್ಟೋನ್, ಡಯಾಬಿಟಿಸ್, ಬ್ಲಡ್ ಪ್ರೆಷರ್, ವರ್ಷಾನುಗಟ್ಟಲೆ ಕಾಡುವ ಆಸಿಡಿಟಿ,
ಮರೆವಿನ ಕಾಯಿಲೆ, ಖಿನ್ನತೆಗಳು ಸಾಕು ಸರಾಗವಾಗಿ ಸಾಗುತ್ತಿದ್ದವನ ಬದುಕನ್ನು ಹೊಯ್ದಾಡಿಸಲು.
ಕಾಯಿಲೆ ಬಂದಾಕ್ಷಣ ಅಧೀರರಾಗಬೇಕು, ಆತ್ಮವಿಶ್ವಾಸ ಕಳೆದುಕೊಳ್ಳಬೇಕು... ಬದುಕಿನಲ್ಲಿ ಎಲ್ಲವೂ
ಮುಗಿದೇ ಹೋಯಿತು ಎಂಬ ಹಾಗೆ ಖಿನ್ನರಾಗಿ ರೋಧಿಸಬೇಕು ಎಂಬುದು ನನ್ನ ವಾದವಲ್ಲ. ಒಂದು ಸರಾಗ
ಬದುಕನ್ನು, ಒಂದು ಅಪರಿಮಿತ ಆತ್ಮವಿಶ್ವಾಸವನ್ನು ಅಸೌಖ್ಯಗಳು ಹೇಗೆ ಬಂಧಿಸಿಡುತ್ತವೆ ಎಂಬ
ಗಮನಿಸುವಿಕೆ ಅಷ್ಟೇ...
ಯಾಕೆ ಕಾಯಿಲೆಗಳು ಬರುತ್ತವೆ? ಈಗೀಗ
ಬರುವ ಕಾಯಿಲೆಗಳಿಗೆ ಪ್ರಚಾರ ಜಾಸ್ತಿ ಆಗ್ತಾ ಉಂಟ?
ಜೀವನಶೈಲಿ, ಒತ್ತಡದ ಬದುಕು, ಅನಾರೋಗ್ಯಕರ ಆಹಾರ ಸೇವನೆ, ತೃಪ್ತಿಯಿಲ್ಲದ ಬದುಕಿನ ನಾಗೋಲಾಟಗಳು
ಮನುಷ್ಯನನ್ನು ಕಂಗೆಡಿಸುತ್ತಾ ಇವೆಯಾ...?
ಇವೆಲ್ಲ ಅಧ್ಯಯನಯೋಗ್ಯ ವಿಚಾರಗಳು. ಫಲಿತಾಂಶ ಎಂಥಹದ್ದೇ ಇದ್ದರೂ ಮಳೆಗಾಲದಲ್ಲಿ ಪದೇ ಪದೇ ಗುಂಡಿ
ಬೀಳುವ ರಸ್ತೆಗಳ ಹಾಗೆ ಇವುಗಳಿಗೆ ಶಾಶ್ವತ ಪರಿಹಾರ ಇರುವುದಿಲ್ಲ, ಯಾರೂ ಥಿಯರಿ ಓದಿ, ಕ್ವೋಟ್ಸ್
ಬಾಯಿ ಪಾಠ ಮಾಡಿ ಬದಲಾಗುವುದೂ ಇಲ್ಲ ಎಂಬುದು ಕಹಿ ಸತ್ಯ.
ಕೆಲವೊಮ್ಮೆ ಬದುಕು ಯಾರೋ ಬರೆದಿಟ್ಟ ಚಿತ್ರಕತೆ ಥರ ಇರುತ್ತದೆ.
ಪೂರ್ವನಿಗದಿಯೋ ಎಂಬ ಹಾಗೆ ಸಂಭವಗಳು ಸ್ಕ್ರೋಲ್
ಆಗುತ್ತಲೇ ಇರುತ್ತವೆ. ನಾವು ಯಾರೋ ಕಟ್ಟಿ ಹಾಕಿದವರ ಹಾಗೆ ಅಸಹಾಯಕರಾಗಿ ನೋಡುತ್ತಲೇ ಇರುತ್ತೇವೆ.
ಆ ಸ್ಕ್ರೋಲಿಂಗ್ ಮೇಲೆ ನಮಗೆ ಯಾವುದೇ ಹಿಡಿತ ಇರುವುದಿಲ್ಲ. ಬದಲಾಯಿಸಲಂತೂ ಆಗುವುದೇ ಇಲ್ಲ. ಇದರ
ಎದುರು ಯಾವುದೇ ತತ್ವಜ್ಞಾನಿಯ ಬೋಧನೆಗಳು, ಸೂಕ್ತಿಗಳು, ಸೂತ್ರಗಳು ವರ್ಕೌಟ್ ಆಗುವುದೇ ಇಲ್ಲ... ಒಣ
ಥಿಯರಿ ಎದುರು ಪ್ರಾಕ್ಟಿಕಲ್ ವಿಜೃಂಭಿಸುವಾಗ ನಾವು ನೋಡುವುದರಲ್ಲೇ ಬಾಕಿ ಆಗಿರುತ್ತೇವೆ.
ಸಾವರಿಸಿ ಎಚ್ಚರಗೊಳ್ಳುವಾಗ ದೊಡ್ಡದೊಂದು ರೈಲು ವಿರುದ್ಧ ದಿಕ್ಕಿಗೆ ದೊಡ್ಡ ಸದ್ದು ಮಾಡಿ
ಸರಿದಾಗಿರುತ್ತದೆ. ಅದರ ಧೂಳಿನಲ್ಲಿ ಮುಖ ಕೊಡವಿದಾಗ “ಯಭ ಈ
ರೈಲಿಗೆ ಹುಚ್ಚು ಹುಚ್ಚಾಗಿ ಅಡ್ಡ ಕೈ ಹಿಡಿದರೆ ಏನಾಗ್ತಿತ್ತು?!” ಅಂತ
ಸುಮ್ಮನೆ ಸ್ವಗತ ಆಡಿಕೊಳ್ಳಬಹುದಷ್ಟೇ...!
ಈಲೇಖನ ಆರಂಭದಲ್ಲೇ ಹೇಳಿದ ಹಾಗೆ, ಅಂದಿನ ನಿನ್ನೆಗಳು ಇಂದಿಗೆ ಇತಿಹಾಸ. ಮೂರೂವರೆ ದಶಕಗಳ
ಹಿಂದೆ ಶಾಲೆಗೆ ಹೋಗುತ್ತಿದ್ದಾಗ ನಾವು ಹೀಗಿದ್ದೆವು... ನೀವೂ ಹೀಗೆಯೇ ಇದ್ದಿರಬಹುದು. ಈಗ
ಹೇಗಿದ್ದೇವೆ ಅಂತ ಪ್ರತ್ಯೇಕ ಇಷ್ಟುದ್ದ ಬರೆಯಬೇಕಾಗಿಲ್ಲ... ನಾವು-ನೀವು ಜೀವಂತ (ಬದುಕಿರುವ ವರೆಗೆ)
ಸಾಕ್ಷಿಗಳಾಗಿದ್ದೇವೆ... ಸಹನೆ ಇರುವವರು ಓದಿಕೊಳ್ಳಿ.
1) ಅಂದು ನಮ್ಮದು ತುಂಬ ಲೆಕ್ಕಾಚಾರದ ಬದುಕಾಗಿತ್ತು. ನಮ್ಮ ಹತ್ರ ದೊಡ್ಡ ದೊಡ್ಡ ನೋಟುಗಳು, ಜಿಪೇ, ಎಟಿಎಂ ಕಾರ್ಡು, ನೆಫ್ಟುಗಳು ಇರಲಿಲ್ಲ.ಕೆಲವು ಚಿಲ್ಲರೆ ಲೆಕ್ಕಾಚಾರದ ಎಷ್ಟು ಶಾಲಾ ದಿನಗಳು ಮುಗಿದು ಹೋಗಿದ್ದವು. ಆದರೆ, ಇಂದು ಹಾಗಲ್ಲ, ಹಾಗಿಲ್ಲ ಕೂಡಾ...
2) ಅಂದು ನಾವು ಬೋರ್ವೇಲ್ ನೀರನ್ನು ನಿರ್ಭೀತಿಯಿಂದ ಕುಡಿದು ಗೇರು ಮರದಡಿ ಕೊಡೆ ಹಿಡಿದು ಬುತ್ತಿ ಊಟ ತಿಂದು ಆರೋಗ್ಯವಂತರಾಗಿ ದಿನದೂಡಿದ್ದೇವೆ. ಇಂದು ಬಿಸ್ಲೇರಿ ನೀರನ್ನೇ ಕುಡಿದರೂ ಡಯಾಬಿಟಿಸ್, ಆಸಿಡಿಟಿ, ಬಿಪಿಗಳು ಕಾಡುವಾಗ ಅಂದಿನ ದಿನಗಳಲ್ಲಿ ಅಂತ ಅದ್ಭುತ ಶಕ್ತಿ ಏನಿತ್ತು ಅಂತ ಆಶ್ಚರ್ಯ ಆಗ್ತಾ ಇದೆ.
3) ಅಂದು ನಂಬಿಕೆಗಳಿಗೆ ತುಂಬ ಬೆಲೆ ಇತ್ತು. ಆಗ ಸಿಸಿ ಕ್ಯಾಮೆರಾ, ಆಧಾರ್ ಕಾರ್ಡ್, ಫೇಸ್ ರೆಕಗ್ನಿಶ್ ಮತ್ತಿತರ ಯಾವುದೇ ಆಧಾರಗಳನ್ನು ಲೆಕ್ಕ ಇಡುವ ಸಾಧನಗಳು ಇರಲಿಲ್ಲ. ಆದರೆ ನಂಬಿಕೆಗಳು ತುಂಬ ಉಚ್ಛ ಮಟ್ಟದಲ್ಲಿ ನಮ್ಮ ನಡುವಿತ್ತು. ಇಂದು ಅಡಿಗಡಿಗೂ ನಮ್ಮನ್ನು ಅನುಸರಿಸುವ ಗುಪ್ತ ಯಂತ್ರಗಳಿವೆ ಆದರೆ, ಪರಸ್ಪರ ನಂಬಿಕೆಗಳು ಅಂದಂದಿಗೇ ಮುಗಿದು ಹೋಗುತ್ತಿವೆ.
4) ಅಂದು ನಮ್ಮ ಪ್ರತಿಭೆಯನ್ನು, ಸಾಮರ್ಥ್ಯವನ್ನು ನಾವಾಗಿ ಯಾರ ಹತ್ರವೂ ಹೇಳುತ್ತಾ ಬರಬೇಕಾಗಿರಲಿಲ್ಲ. ಜನ, ನಮ್ಮ ಮೇಷ್ಟ್ರು, ಸುತ್ತಮುತ್ತಲಿನವರು ಗುರುತಿಸಿ ಪ್ರೋತ್ಸಾಹಿಸ್ತಾ ಇದ್ರು. ಇಂದು ನಾವು ಮಾಡಿದ್ದನ್ನೇ ಸ್ಟೇಟಸ್ಸು, ಫೇಸ್ಬುಕ್ಕುಗಳಲ್ಲಿ ಹಾಕಿ ಹಾಕಿ ನಮ್ಮನ್ನೇ ನಾವು ಪ್ರಮೋಟ್ ಮಾಡ್ತಾ ಇದ್ದರೂ ನಾವೇನು ಅಂತ ನಮಗೇ ತಿಳಿಯುವುದಿಲ್ಲ!.
5) ಅಂದು ನಿರೀಕ್ಷೆಗಳು ತುಂಬ ಕಮ್ಮಿ ಇತ್ತು. ಕಾಡುವ ಬಡತನ ನಮ್ಮೊಳಗೆ ಅಲ್ಪತೃಪ್ತಿಯ ಗುಣಗಳನ್ನು ಕಟ್ಟಿಕೊಟ್ಟಿತ್ತು. ಹರಿದ ಉಡುಪು, ಸವೆದ ಚಪ್ಪಲ್, ಶಾಲೆಗೆ ಕಾಲುದಾರಿಯಲ್ಲಿ ನಡಿಗೆ, ಪುಸ್ತಕಗಳಿಗೆ ಕ್ಯಾಲೆಂಡರಿನ ಬೈಂಡು, ಮನೆಯ ಹಿರಿಯರ ಬ್ಯಾಗು, ಕಂಪಾಸು, ಕೈವಾರಗಳು ಆರಾಮವಾಗಿ ನಮ್ಮ ಶಾಲಾ ದಿನಗಳನ್ನು ದಾಟಿಸಿ ಬಿಡುತ್ತಿತ್ತು. ಇಂದು ಇವೆಲ್ಲ ಹೇಗಿದೆ ಅಂತ ನಿಮಗೆ ಗೊತ್ತಿದೆ.
6) ಅಂದು ಮನೆಯಲ್ಲಿ ರೇಡಿಯೋ ಇದ್ದರೆ ಅದೇ ದೊಡ್ಡ ಸಂಗತಿ. ಟಿವಿ ಬಿಡಿ ಕರೆಂಟೇ ಇರಲಿಲ್ಲ. ಮನೆಗೆ ಸಾರಣೆ ಆಗಿರಲಿಲ್ಲ. ಪೇಪರು ಬರ್ತಾ ಇರಲಿಲ್ಲ. ವಾರಕ್ಕೊಮ್ಮೆ ಟಿ.ವಿ.ಯಲ್ಲಿ ಬರುವ ಸಿನಿಮಾವನ್ನು ಯಾರ್ಯಾರ ಮನೆಯಲ್ಲಿ ಮೂರು ಗಂಟೆ ಕುಳಿತು ನೋಡಿ ಬಂದರೆ ಅದೇ ದೊಡ್ಡ ಮನರಂಜನೆ. ಇಂದು ಕೈಯ್ಯೊಳಗಿನ ಮೊಬೈಲಿನಲ್ಲಿ ಬ್ರಹ್ಮಾಂಡವೇ ಕಂಡರೂ ಯಾವುದನ್ನೂ ನಾವು ಮನಸ್ಸಿಟ್ಟು ನೋಡುವುದಿಲ್ಲ, ಪ್ರತಿಕ್ರಿಯೆ ನೀಡುವುದಿಲ್ಲ.
7) ಅಂದಿನ ಅಲ್ಪ ನಿರೀಕ್ಷೆ, ಆಡಂಬರವಿಲ್ಲದ ಬದುಕು, ತೋರಿಕೆಯಿಲ್ಲದ ನಡವಳಿಕೆ, ಪಾಲಿಗೆ ಬಂದದ್ದೇ ಪಂಚಾಮೃತ ಅಂತ ಖುಷಿ ಪಡುತ್ತಿದ್ದ ದಿನಗಳ ನೆನಪು ವಯಸ್ಸಾಗ್ತಾ ಬಂದ ಹಾಗೆ, ನಮ್ಮ ಮಕ್ಕಳೆದುರು ನಮಗೇ ಮರೆತು ಹೋಗ್ತಾ ಇದೆ.
8) ಅಂದು ನಾವು ಸ್ಟೇಟಸ್ಸು ಹಾಕ್ತಾ ಇರಲಿಲ್ಲ. ಯಾಕಂದ್ರೆ ಆಗ ನಮಗೆ ವಾಟ್ಸಪ್ ಖಾತೆ ಇರ್ಲಿಲ್ಲ. ಕಾರಣ. ನಮಗೆ 23 ವರ್ಷ ಪ್ರಾಯ ಆಗುವ ತನಕ ಮೊಬೈಲ್ ಅಂದ್ರೆ ಏನಂತವೇ ಗೊತ್ತಿರ್ಲಿಲ್ಲ. ಹಾಗಾಗಿ ನಾವು ಸಮಾಧಾನ ಚಿತ್ತದಿಂದ ಹಬ್ಬಗಳನ್ನು ಆಚರಿಸ್ತಾ ಇದ್ದೆವು,. ಪ್ರವಾಸ ಹೋಗ್ತಾ ಇದ್ದೆವು. ಇಂದು ಸ್ಟೇಟಟಸ್ಸಿಗಾಗಿ ನಾವೋ, ನಮಗಾಗಿ ಸ್ಟೇಟಸ್ಸೋ ಅಂತ ಅರ್ಥವೇ ಆಗ್ತಾ ಇಲ್ಲ!
9) ಅಂದು ಗೂಗಲ್ ಇರ್ಲಿಲ್ಲ. ನೆನಪು ಶಕ್ತಿ ಚುರುಕಾಗಿತ್ತು. ಕೈಗೆ ಸಿಕ್ಕಿದ ಪುಸ್ತಕ, ಕಡ್ಲೆ ಕಟ್ಟಿ ತಂದ ಪೇಪರ್ ತುಂಡನ್ನು ಓದಲು ಪುಸ್ತೊತ್ತಿತ್ತು. ಇಂದು... ಎಂಥದಕ್ಕೂ ಪುರ್ಸೊತ್ತೇ ಇಲ್ಲ. ಓದು ಎಂಬುದು ನನ್ನಂಥಹಲವರ ಪಾಲಿಗೆ ಇತಿಹಾಸ ಸೇರಿದ ಪುಟವಾಗಿದೆ.
10) ಗ್ಲೋಬಲ್ ವಿಲೇಜ್ ಅಂದ್ರೆ ಎಂತ ಅಂತ ಗೊತ್ತಿರದಿದ್ದ ಆ ದಿನಗಳಲ್ಲಿ ನಮ್ಮ ಅಕ್ಕಪಕ್ಕದವರು, ಊರಿನವರು, ಗುರುತಿನವರತ್ರ ನಿಂತು ಮಾತನಾಡಲು, ಹರಟೆ ಹೊಡೆಯಲು, ಕಷ್ಟ ಸುಖ ವಿಚಾರಿಸಲು ಆಗ ನಮ್ಮತ್ರ ಸಮಯ ಹಾಗೂ ಸಹನೆ ಇತ್ತು. ಇಂದು ಇಂತಿಷ್ಟು ಹೊತ್ತಿಗೆ ಬರ್ತೇನೆ ಅಂತ ಮೊದಲೇ ತಿಳಿಸಿ ನೆಂಟರ ಮನೆಗೆ ಹೋಗಬಾಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಇದಕ್ಕೆ ಹೆಚ್ಚಿನ ವಿವರಣೆ ಬೇಕಾಗಿಲ್ಲ!!!!
-ಕೃಷ್ಣಮೋಹನ ತಲೆಂಗಳ (22.11.2023)
No comments:
Post a Comment