ಮೂರು ತಲೆಮಾರುಗಳಿಗೆ ಕಲಿಸಿದ ಅಮೋಘ 75ರ ಸಂಭ್ರಮ... ಭಾರತೀ ಶಾಲೆಯ ಸ್ಟೇಟಸ್ಸು ಈಗ ಹೆಚ್ಚಿದೆ...!

 



 

ಮನುಷ್ಯನಿಗೂ, ಸಂಸ್ಥೆಗೂ, ಸಂಘಟನೆಗೂ ಪ್ರಾಯ ಎಷ್ಟು ಆಗಿದೆ ಎಂಬುದು ಮುಖ್ಯವಲ್ಲ. ಸಂದ ಸಂವತ್ಸರಗಳಲ್ಲಿ ಏನೆಲ್ಲ ಸಾಧಿಸಲಿಕ್ಕಾಗಿದೆ ಎಂಬುದೇ ಮುಖ್ಯ. ಅರ್ಹತೆ ಕೇವಲ ವಯಸ್ಸಿನಿಂದ ಮಾತ್ರ ನಿರ್ಧಾರ ಆಗುವುದೂ ಅಲ್ಲ. ಪ್ರೌಢತೆ, ಸೂಕ್ತ ನಿರ್ಧಾರ, ಸಂಘಟನಾ ಶಕ್ತಿ, ಎಲ್ಲರನ್ನೂ ಪ್ರೀತಿಯಿಂದ ಕರೆದೊಯ್ಯುವ ತಾಕತ್ತು ಮತ್ತು ಅದರಿಂದ ಪಡೆದ ದೀರ್ಘಕಾಲ ನೆನಪಿಡುವಂತಹ ಸಾಧನೆಗಳು ವಯಸ್ಸಿಗಿಂತಲೂ ಮಿಗಿಲೆನಿಸುತ್ತದೆ ಮತ್ತು ಹಿರಿತನವನ್ನು ತನ್ನಷ್ಟಕ್ಕೇ ತಂದುಕೊಡುತ್ತದೆ.

 

ದ.ಕ. ಜಿಲ್ಲೆ ಉಳ್ಳಾಲ ತಾಲೂಕಿನ (ಹಿಂದಿನ ಬಂಟ್ವಾಳ ತಾಲೂಕಿನ) ಕುರ್ನಾಡು ಗ್ರಾಮದ ಶ್ರೀ ಭಾರತೀ ಅನುದಾನಿತ ಶಾಲೆ 75 ಸಂವತ್ಸರಗಳನ್ನು ಪೂರೈಸಿದೆ. ನಾನೂ ಮೂರು ವರ್ಷ ಈ ಶಾಲೆಯಲ್ಲಿ ಕಲಿತಿದ್ದೇನೆ ಎಂಬ ಕಾರಣಕ್ಕೆ ನನಗೆ ಈ ಸಂದರ್ಭ ತುಂಬ ಮುಖ್ಯ ಎನಿಸುತ್ತದೆ. ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರಕಿತು. ಅದರ ಮರುವರ್ಷ 1948ರಲ್ಲಿ ಶಾಲೆ ಸ್ಥಾಪನೆಯಾಯಿತು. ಅಂದಿನ ವಿದ್ಯಾಭಿಮಾನಿ ಮಹನೀಯರು ಶಾಲೆ ಸ್ಥಾಪಿಸಿದರು. ಆರಂಭದಲ್ಲಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಾಗಿದ್ದ ಸಂಸ್ಥೆಯಲ್ಲಿ ಬಳಿಕ ಆಂಗ್ಲ ಮಾಧ್ಯಮ ಶಾಲೆ ಆರಂಭವಾಯಿತು. ಬಳಿಕ ಪ್ರೌಢಶಾಲೆ ಕೂಡಾ ಕಾರ್ಯಾಚರಣೆ ಶುರು ಮಾಡಿತು.

ಭಾರತೀ ಶಾಲೆ ಸುಮಾರು ಮೂರು ತಲೆಮಾರಿನವರಿಗೆ ಪಾಠ ಕಲಿಸಿದೆ. ಅಜ್ಜ, ಮಗ ಹಾಗೂ ಮೊಮ್ಮಗನಿಗೆ. ಹಾಗಾಗಿ ಈ ಪರಿಸರದ ಎಷ್ಟೋ ಮನೆಗಳಲ್ಲಿ ಹಲವಾರು ಮಂದಿ ಇಲ್ಲಿನ ಹಳೆ ವಿದ್ಯಾರ್ಥಿಗಳು. ಶಾಲೆಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ 2022 ಆ.15ರಂದು ಹಳೆ ವಿದ್ಯಾರ್ಥಿ ಸಂಘ ಸ್ಥಾಪನೆಯಾಯಿತು. ಬಳಿಕ ವಾಟ್ಸಪ್ ಗ್ರೂಪು ರಚಿಸಿ ಹಳೆ ವಿದ್ಯಾರ್ಥಿಗಳ ಸಂಘಟನೆ ಶುರುವಾಯ್ತು. ಸುಮಾರು 600ಕ್ಕೂ ಅಧಿಕ ಮಂದಿ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಕ್ಕೆ ಸಿಕ್ಕಿದರು. 2022ರ ನವೆಂಬರಿನಲ್ಲಿ ಬಲಿಷ್ಠ ಅಮೃತ ಮಹೋತ್ಸವ ಸಮಿತಿ ರಚನೆ ಆಯಿತು. ಬಳಿಕ ವರ್ಷಪೂರ್ತಿ ಅಮೃತ ಮಹೋತ್ಸವ ಸಂಭ್ರಮ ಆಚರಿಸಲು ನಿರ್ಧಿರಿಸಲಾಯಿತು.

ಅಮೃತ ಮಹೋತ್ಸವ ಎಂದರೆ ಒಂದು ಕಟ್ಟಡ ಕಟ್ಟುವುದೋ, ಒಂದು ಅದ್ಧೂರಿಯ ಗೆಟ್ ಟುಗೆದರ್ ಮಾಡುವುದೋ, ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ, ಊಟ ಮಾಡಿ ತೆರಳುವುದಕ್ಕೋ ಸೀಮಿತ ಆಗಬಾರದು ಎಂಬ ನೆಲೆಯಲ್ಲಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಒಂದು ಅಮೃತ ಮಹೋತ್ಸವ ಕಟ್ಟಡ ನಿರ್ಮಾಣಕ್ಕೂ ಸಂಕಲ್ಪಿಸಲಾಯಿತು.

ಅದರಂತೆ ಇದೇ ವರ್ಷ ಫೆಬ್ರವರಿಯಲ್ಲಿ ಅಮೃತ ಮಹೋತ್ಸವ ಕಟ್ಟಡಕ್ಕೆ ಸರ್ವಧರ್ಮಗಳ ಗುರುಗಳ ಸಮ್ಮುಖದಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದು, ಇದೀಗ ಅಮೃತ ಮಹೋತ್ಸವ ಆಚರಣೆ ಹೊಸ್ತಿಲಿನಲ್ಲಿ ನೂತನ ಕಟ್ಟಡ, ಪ್ರವೇಶದ್ವಾರ, ನೂತನ ಪ್ಲೇ ಏರಿಯಾ, ನೂತನ ಕೈತೋಟ, ಉದ್ಯಾನವನ, ಶಾಲೆಗೆ ದ್ವಿಪಥ ರಸ್ತೆ, ಹಳೆ ಕಟ್ಟಡದ ನವೀಕರಣ, ಗ್ರಂಥಾಲಯ ಇಷ್ಟೆಲ್ಲ ಕಾಮಗಾರಿಗಳು ಹಳೆ ವಿದ್ಯಾರ್ಥಿಗಳು ಹಾಗೂ ಉದಾರ ದಾನಿಗಳ ನೆರವಿನಿಂದ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಿವೆ.

ಮಾತ್ರವಲ್ಲ... ವಿಶ್ವ ಮಹಿಳಾ ದಿನದಂದು ಶಾಲೆಯಲ್ಲಿ ಕಲಿತ ನಿವೃತ್ತ ಮಹಿಳಾ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರನ್ನು, ಗಾಂಧಿ ಜಯಂತಿಯಂದು ಪರಿಸರದ ಸ್ವಚ್ಛತಾ ಸಿಬ್ಬಂದಿನ್ನು, ಆಟಿ ಆಚರಣೆ ದಿನ ಮೆಸ್ಕಾಂ ಸಿಬ್ಬಂದಿಯನ್ನು, ಕ್ರೀಡೋತ್ಸವದ ದಿನ ಪತ್ರಕರ್ತರು, ಕೃಷಿಕರು, ಸೈನಿಕರನ್ನು ಸನ್ಮಾನಿಸಲಾಯಿತು. ಶಿಕ್ಷಕರ ದಿನಾಚರಣೆ ಅತ್ಯಂತ ವಿಶಿಷ್ಟವಾಗಿದ್ದು, ಭಾರತೀ ಶಾಲೆಯಲ್ಲಿ ಬೋಧಿಸಿದ, ಬೋಧಿಸಿ ವರ್ಗಾವಣೆ ಹೊಂದಿದ, ಬೋಧಿಸಿ ನಿವೃತ್ತರಾದ, ಇಲ್ಲಿ ಕಲಿತು ಬೋಧಕರಾದ ಸುಮಾರು 80ರಷ್ಟು ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಗತಿಸಿದ ಹಿರಿಯ ಶಿಕ್ಷಕರನ್ನು ಸ್ಮರಿಸಲಾಯಿತು. ಶಾಲೆಗೆ ನೂತನ ಕೈತೋಟ ರಚನೆಗೆ ಚಾಲನೆ ಸಿಕ್ಕಿತು. ಆಟಿಯ ದಿನ ಆಟಿಯ ವಿಶೇಷ ತಿನಿಸು ತಯಾರಿಸಿ, ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ಆಟಿದ ಅರಗಣೆ ಹೆಸರಿನಲ್ಲಿ ಆಚರಿಸಲಾಯಿತು. ಜೊತೆಗೆ ಜೀವ ರಕ್ಷಣಾ ಕೌಶಲ್ಯ ತರಬೇತಿ, ಸ್ವಚ್ಛತಾ ದಿನಾಚರಣೆ ನಡೆಯಿತು. ಇದೇ ನ.1ರಂದು ರಾಜ್ಯೋತ್ಸವ ನಿಮಿತ್ತ ಕನ್ನಡ ಧ್ವಜಗಳೊಂದಿಗೆ ಮುಡಿಪು ಪೇಟೆಯಲ್ಲಿ ವಿಶೇಷ ಜಾಥಾ ನಡೆಯಿತು. ಬಳಿಕ ನ.5ರಂದು ಶಾಲೆಯ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು, ಮೆಸ್ಕಾಂ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪತ್ರಕರ್ತ ಮಿತ್ರರಿಗೆ ಕ್ರೀಡೆಗಳನ್ನು ನಡೆಸಲಾಯಿತು.

ಅದೇ ದಿನ ಸಂಜೆ ಶಾಲೆಯ ಪರಿಸರದಲ್ಲಿ ಅಮೃತ ಮಹೋತ್ಸವ ಆಕರ್ಷಣೆಯಾಗಿ ನಡೆಯುವ ಭಾರತಿ ಪ್ಲಾಟಿನಂ ಫೆಸ್ಟ್ ಹೆಸರಿನ ಅಮ್ಯೂಸ್ಮೆಂಟ್ ಪಾರ್ಕ್ ಉದ್ಘಾಟನೆ ನಡೆದಿದೆ. ಈ ಪ್ರದರ್ಶನ ಮುಂದಿನ ಡಿ.5ರ ತನಕ ನಡೆಯಲಿದೆ.

ಇಷ್ಟು ಮಾತ್ರವಲ್ಲ. ಅಮೃತ ಭಾರತೀ ಹೆಸರಿನ ವಿಶಿಷ್ಟ ಸ್ಮರಣ ಸಂಚಿಕೆ ಸಿದ್ಧವಾಗುತ್ತಿದೆ. ಶಾಲೆಯಲ್ಲಿ ಈ ತನಕ ಕಲಿತ ವಿದ್ಯಾರ್ಥಿಗಳ ಎಲ್ಲ ಅಡ್ಮಿಶನ್ ರಿಜಿಸ್ಟರ್ ಹುಡುಕಿ ತೆಗೆದು, ಹೆಸರುಗಳನ್ನು ಕಂಪ್ಯೂಟರಿಗೆ ವರ್ಗಾಯಿಸಿದಾಗ ಸುಮಾರು ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಕಲಿತ ದಾಖಲೆ ಸಿಕ್ಕಿತು. ಈ ಹೆಸರುಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದಲ್ಲದೆ, ಅಮೃತ ಮಹೋತ್ಸವ ದಿನ ಶಾಲೆಯಲ್ಲಿ ಪ್ರದರ್ಶಿಸಲಾಗುವುದು.

ಹಾಗಾಗಿ ಭಾರತೀ ಶಾಲೆಯ ಅಮೃತ ಮಹೋತ್ಸವ ಎಂದರೆ ಅದು ದಿನದ ಕಾರ್ಯಕ್ರಮ ಅಲ್ಲ. ವರ್ಷದ ಕಾರ್ಯಕ್ರಮ. ಇಡೀ ವರ್ಷದಲ್ಲಿ ಕೈಗೊಂಡ ಸಂಕಲ್ಪಗಳ ಅಮೃತ ಫಲ ಸ್ವರೂಪ ಇದು. ಅಭಿವೃದ್ಧಿ ಕಾಮಗಾರಿ, ಬೌದ್ಧಿಕ ವಿಚಾರ, ಸನ್ಮಾನಗಳು, ಸ್ಮರಣ ಸಂಚಿಕೆ, ಹಳೆ ವಿದ್ಯಾರ್ಥಿಗಳ ಸಂಘಟನೆ, ದೇಣಿಗೆ ಸಂಗ್ರಹ, ಮನೆ ಮನೆ ಸಂಪರ್ಕ, ಜಾಲತಾಣದಲ್ಲಿ ಪ್ರಚಾರ, ಸ್ವಯಂಸೇವಕರಾಗಿ ದುಡಿಮೆ... ಹೀಗೆ ಹಲವು ವ್ಯಕ್ತಿತ್ವಗಳ ಸಂಘಟಿತ ಪ್ರಯತ್ನ, ಯೋಜನೆ, ಹಠ, ಶ್ರಮದ ಫಲ ಈ ಅಮೃತ ಭಾರತೀ ಸಂಭ್ರಮ...

ಕಳೆದ ಒಂದು ವರ್ಷದಿಂದ ನಾವು ಕಲಿತ ಶಾಲೆಯಲ್ಲಿ ನಡೆದ ಅಮೃತ ಮಹೋತ್ಸವ ಸರಣಿಗಳ ಗ್ರಾಂಡ್ ಫಿನಾಲೇ ನ.11 ಶನಿವಾರ ಹಾಗೂ ದೀಪಾವಳಿಯ ಶುಭ ದಿನ ನ.12ರ ಭಾನುವಾರ ನಡೆಯಲಿದೆ. ಏನೇನು ಕಾರ್ಯಕ್ರಮ ಇರುತ್ತದೆ ಎಂಬುದನ್ನು ಈ ಲೇಖನದ ಕೊನೆಗೆ ನಮೂದಿಸಿರುತ್ತೇನೆ.....

ನಾನು ಹಳೆ ವಿದ್ಯಾರ್ಥಿ ಸಂಘದ ಸದಸ್ಯನಾಗಿದ್ದೇನೆ, ದೇಣಿಗೆ ನೀಡಿದ್ದೇನೆ, ಇಲ್ಲಿ ಪಾಠ ಮಾಡಿದ್ದೇನೆ ಎಂಬ ಕಾರಣಕ್ಕೆ ಮಾತ್ರ ಅಮೃತ ಮಹೋತ್ಸವಕ್ಕೆ ಬರಬೇಕಾಗಿರುವುದಲ್ಲ. ನೀವಿಲ್ಲಿ ಅಮೃತ ಮಹೋತ್ಸವಕ್ಕೆ ಬಂದರೆ ನಿಮಗೆ ವರ್ಷಗಳ ಬಳಿಕ ಹಳೆಯ ಸ್ನೇಹಿತರ ಪುನರ್ ಮಿಲನ ಅವಕಾಶ, ಜಾರುಬಂಡೆಯಲ್ಲಿ ಜಾರುವ ಅವಕಾಶ, ಹಿರಿಯ ಶಿಕ್ಷಕರ ಆಶೀರ್ವಾದ ಪಡೆಯುವ ಅವಕಾಶ ಹಾಗೂ ಒಂದು ದಿನವಿಡೀ ಕಲಿತ ಶಾಲೆಯುದ್ದಕ್ಕೂ ಸುತ್ತಾಡಿ ಮತ್ತೊಮ್ಮೆ ತಾಜಾ ಮನಸ್ಸಿನಿಂದ ನಿತ್ಯ ಬದುಕಿಗೆ ಮರಳಲು ಸಾಧ್ಯವಾಗುವ ಮಹತ್ತರ ಸಂದರ್ಭ ಸೃಷ್ಟಿಯಾಗುತ್ತದೆ.... ಬದುಕಿನಲ್ಲಿ ಕೆಲವು ಘಳಿಗೆಗಳನ್ನು, ಅವಧಿಯನ್ನು, ಆಯುಷ್ಯದ ಭಾಗವನ್ನು ಪುನರ್ ಸೃಷ್ಟಿಸಲು ಸಾಧ್ಯವೇ ಇಲ್ಲ. ಅಂತಹ ನೆನಪುಗಳನ್ನು ಕಟ್ಟಿಕೊಟ್ಟ ಜಾಗಕ್ಕೆ ತೆರಳಿ ಆ ನೆನಪುಗಳನ್ನು ತಾಜಾಗೊಳಿಸಲು ಸಾಧ್ಯ ಅಷ್ಟೇ. ಅಂತಹ ಅವಕಾಶ ಸಿಕ್ಕಿದಾಗ ಅದನ್ನು ತಪ್ಪಿಸಿಕೊಳ್ಳಬಾರದು. ಶಾಲೆ ನವೀಕರಣಗೊಂಡು ನಿಮ್ಮ ಆಗಮನಕ್ಕೆ ಸಿದ್ಧವಾಗಿದೆ. ಮತ್ತೊಮ್ಮೆ ಕಲಿತ ಶಾಲೆಗೆ ಬನ್ನಿ... ಹಳೆ ವಿದ್ಯಾರ್ಥಿಗಳು ಮಾತ್ರವಲ್ಲ, ವಿದ್ಯಾಭಿಮಾನಿಗಳಾದ ತಾವೆಲ್ಲ ನಮ್ಮ ಶಾಲೆಗೆ ಬನ್ನಿ... ಶಾಲೆಯುದ್ದಕ್ಕೂ ಸುತ್ತಾಡಿ, ಖುಷಿ ಪಡಿ... ಖುಷಿಯನ್ನು ಹಂಚಿ... ಇತರರಿಗೂ ತಿಳಿಸಿ... ಖುಷಿಯಿಂದ, ಖುಷಿಗಾಗಿ, ನೆನಪುಗಳ ಅನಾವರಣಗೊಳಿಸುವ ಆಹ್ಲಾದಕರ ಕಾರ್ಯಕ್ರಮ ಇದು.... ಅಮೃತ ಮಹೋತ್ಸವ ಸಮಿತಿಯ ಆತಿಥ್ಯ ಸ್ವೀಕರಿಸಿ ತೆರಳಿ...

-ಕೃಷ್ಣ ಮೋಹನ ತಲೆಂಗಳ (ಮುಡಿಪು ಭಾರತೀ ಶಾಲೆ ಹಳೆ ವಿದ್ಯಾರ್ಥಿ).

 

..................

ಅಮೃತ ಭಾರತೀ ಸಂಭ್ರಮಕ್ಕೆ ಬರುವ ಹಳೆ ವಿದ್ಯಾರ್ಥಿಗಳೇ ನೀವು ಹೇಗೆ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು ತಿಳಿಯಲು ಈ ಕೆಳಗಿನ ಭಾಗ ಓದಿ...

 

11.11.2023 ಶನಿವಾರ ಸಂಜೆ 4.30ರಿಂದ ನಮ್ಮ ಸಮಾರಂಭ ವಿಧ್ಯುಕ್ತವಾಗಿ ಆರಂಭವಾಗುತ್ತದೆ. ಹಳೆ ವಿದ್ಯಾರ್ಥಿಗಳೆಲ್ಲರೂ ಸಂಜೆ 4.30ಕ್ಕೆ ಕಾಯರ್ ಗೋಳಿ ಶ್ರೀದೇವಿ ಕಂಪೌಂಡ್ (ಪೆಟ್ರೋಲ್ ಬಂಕ್ ಎದುರುಗಡೆ)ಗೆ ಬರಬೇಕು. ಅಲ್ಲಿ ಫಲಾಹಾರ ಸ್ವೀಕರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಶಾಲೆಗೆ ಮೆರವಣಿಗೆ ತಲುಪುತ್ತದೆ. ಅಲ್ಲಿಯೂ ಉಪಾಹಾರದ ವ್ಯವಸ್ಥೆ ಇದೆ. ಸಾಂಸ್ಕೃತಿಕ ಕಾರ್ಯಕ್ರಮ ಸಭಾ ಕಾರ್ಯಕ್ರಮಕ್ಕೆ ಮೊದಲೇ ಆರಂಭವಾಗುತ್ತದೆ. 

 

ಸಂಜೆ 7ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ (ಇದರ ವಿವರಗಳು ಆಹ್ವಾನ ಪತ್ರಿಕೆಯಲ್ಲಿ ಇದೆ).

ಸಭಾ ಕಾರ್ಯಕ್ರಮ ಮುಗಿದ ಬಳಿಕ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧುರ ಗೀತೆ, ಮಿಮಿಕ್ರಿ, ನೃತ್ಯಾಂಕುರ, ಶೈನ್ ಮ್ಯೂಸಿಕ್ ತಂಡದ ಸಂಗೀತ ಸಂಜೆ ಪ್ರಸ್ತುತಗೊಳ್ಳಲಿದೆ.

 

ರಾತ್ರಿ 8ರಿಂದ ಎಲ್ಲರಿಗೂ ಊಟದ ವ್ಯವಸ್ಥೆ ಇದೆ. ಈನಡುವೆ ಶಾಲಾ ಮೈದಾನದಲ್ಲಿ ಭಾರತೀ ಪ್ಲಾಟಿನಂ ಫೆಸ್ಟ್ ಎಕ್ಸಿಬಿಷನ್ ನಲ್ಲಿ ನೀವು ಮನೆ ಮಂದಿ, ಮಕ್ಕಳ ಸಹಿತ ಪಾಲ್ಗೊಳ್ಳಬಹುದು. ಸಾಕಷ್ಟು ಫನ್ ಗೇಮ್ಸ್್ ಗಳು ನಿಮ್ಮ ಮನ ತಣಿಸಲಿವೆ.

 

ಮರುದಿನ ನ.12ರಂದು ಆದಿತ್ಯವಾರ ದಿನಪೂರ್ತಿ ಶಾಲೆಯಲ್ಲಿ ಕಾರ್ಯಕ್ರಮ ಇದೆ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ಸಹಿತ ಉಪಚಾರ ಇರುತ್ತದೆ. ಬೆಳಗ್ಗೆ 8.30ಕ್ಕೆ ನಾದಸ್ವರ ವಾದನದೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆ. ಬಳಿಕ 9.15ರಿಂದ ಸಭಾ ಕಾರ್ಯಕ್ರಮ ನಡೆಯುತ್ತದೆ. ವಿವಿಧ ಸೇವಾ ಕಾರ್ಯಗಳ ಉದ್ಘಾಟನೆ, ಶಿಬಿರಗಳು, ಗೋಷ್ಠಿಗಳು ನಡೆಯುತ್ತವೆ. ಇದರ ನಡುವೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ಇರುತ್ತದೆ. ಸಭಾ ಕಾರ್ಯಕ್ರಮದ ನಡುವೆ ಹಿರಿಯ ನಿವೃತ್ತ ಶಿಕ್ಷಕರಿಗೆ ಗುರು ನಮನ ಇದೆ. ಗೋಷ್ಠಿಗಳ ಬಳಿಕ ನೂತನ ತೋಟ ಲೋಕಾರ್ಪಣೆ ಇದೆ. ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ಇದೆ.

 

ಸಂಜೆ 6 ಗಂಟೆ ಬಳಿಕ ನೂತನ ಕಟ್ಟಡ, ತರಗತಿ ಕೊಠಡಿಗಳ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. (ವಿವರಗಳು ಆಹ್ವಾನ ಪತ್ರಿಕೆಯಲ್ಲಿವೆ)

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ.

ಇದಲ್ಲದೆ ಶಾಲೆಯಲ್ಲಿ ಮಾದರಿ ತರಗತಿ ಕೊಠಡಿ, ವಸ್ತುಪ್ರದರ್ಶನ, ಸೆಲ್ಫೀ ಪಾಯಿಂಟುಗಳಲ್ಲಿ ಫೋಟೋ ತೆಗೆಯುವ ಅವಕಾಶ, ರಕ್ತದಾನ ಶಿಬಿರ, ನೇತ್ರದಾನ, ದೇಹದಾನ ಮಾಹಿತಿ ಮತ್ತಿತರ ಜನೋಪಯೋಗಿ ಕಾರ್ಯಕ್ರಮಗಳೂ 12ರಂದು ಪೂರ್ವಾಹ್ನ ಇರುತ್ತದೆ...

 

No comments:

Popular Posts