ಕುಳಿತಲ್ಲಿ, ನಿಂತಲ್ಲಿ ಕಾಡುವ ಮೊರೆತ... ಯಾವ ಮಳೆಯೂ ಹಳತಲ್ಲ...!

 









ಕಡು ಬಿಸಿಲಿಗೆ ಧರೆ ಸುಡುವಾಗ ಮಳೆಯೊಂದು ದೂರದ ಕನಸಿನ ಹಾಗೆ ಭಾಸವಾಗುತ್ತದೆ. ಬರಲೇಬೇಕಾಗಿದ್ದ ಮುಂಗಾರು ಚುರುಕಾದಾಗ ಕಾಣೆಯಾದ ಬಿಸಿಲೊಂದು ಮರೀಚಿಕೆಯಂತೆ ಕಾಡುತ್ತದೆ. ಈ ಕ್ಷಣ ಮಾತ್ರ ನಮ್ಮದು. ದಾಟಿ ಬಂದದ್ದು ಹಾಗೂ ದಾಟಲು ಇರುವಂಥದ್ದು ಎರಡೂ ಈ ಹೊತ್ತಿಗೆ ಭೂತ ಮತ್ತು ವರ್ತಮಾನದ ಸೊತ್ತು ಎಂಬುದನ್ನು ಆಯಾ ಋತುಮಾನಗಳು ಕಲಿಸುತ್ತವೆ. ಮಳೆಯೂ ಸಹ.

 

ಮಳೆ ಎಷ್ಟು ಬಗೆಯಲ್ಲಿ ಕಾಡುತ್ತದೆ....?!

ಹಳೆಯ ಮುಳಿ ಮಾಡಿನ ಮನೆ ಮೇಲೆ ಸುರಿದ ಮಳೆ ಇಡೀ ಛಾವಣಿಯನ್ನು ತೋಯಿಸಿ, ಇಳಿಜಾರಿನ ಹುಲ್ಲುಗಳಲ್ಲಿ ಜಾರಿ ತುದಿಯ ಕಡ್ಡಿಯಲ್ಲಿ ಕ್ಷಣ ಕಾಲ ಮುತ್ತಾಗಿ ಪವಡಿಸಿ ಮತ್ತೆ ಅಂಗಳಕ್ಕೆ ಬಿದ್ದು ಕರಗಿ ಹೋಗುವುದು...

ಭಯಂಕರ ಗಾಳಿಯ ಜೊತೆಗೆ ಓರೆ ಓರೆ ಜಾರಿ ಬರುವ ಮಳೆ... ಬೈಕಿನಲ್ಲಿ ಹೋಗುವಾಗ ಚೂಪಾಗಿ ಮುಖಕ್ಕೆ ಕಂತುವುದು. ಉಪ್ಪರಿಗೆಯ ಪುಟ್ಟ ಕಿಟಕಿಯಿಂದ ಇಣುಕಿದಾಗ ಗಾಳಿಯ ಜೊತೆ ಅಡ್ಡಡ್ಡ ಸಾಗಿದಂತೆ ಕಾಣುವುದು, ದೂರದ ಬೆಟ್ಟದ ತುದಿಯಲ್ಲಿ ಮಂಜಿನಂತೆ ದಟ್ಟ ಪದರವಾಗಿ ಹತ್ತಿರ ಹತ್ತಿರ ಬರುವುದು, ಧೋ ಅಂತ ದಾರಿ ಕಾಣದಷ್ಟು ಗಾಢವಾಗಿ ಸುರಿದು ಸುತ್ತ ಕಪ್ಪು ಕಪ್ಪು ಪರಿಸರ ಸೃಷ್ಟಿಸಿ ಮತ್ತೆ ಕಾಣೆಯಾಗುವುದು... ಅಸಲಿಗೆ ಮಳೆಗೆ ರೂಪವೇ ಇಲ್ಲ. ಗಾಳಿಯಲ್ಲಿ, ಮಾಡಿನಲ್ಲಿ, ತೋಟದಲ್ಲಿ, ಅಂಗಳದಲ್ಲಿ ರೋಡಿನಲ್ಲಿ, ಬೆಟ್ಟದಲ್ಲಿ ನಾವು ಕಂಡದ್ದು, ನಮ್ಮನ್ನು ಕಾಡಿದ್ದು, ಅದುವೇ ಮಳೆ.

..............

ಬಾನಿನಿಂದ ಪಿರಿಪಿರಿ ಸುರಿಯುವುದು, ದಪ್ಪ ದಪ್ಪ ಹನಿಗಳು ಅಂಗಳಕ್ಕೆ ಬಿದ್ದು ಕ್ಷಣಾರ್ಧ ಪುಟ್ಟ ಗುಳ್ಳೆಯಾಗಿ ಒಡೆದು ಚಿಮ್ಮಿ ಚಂದದ ರಂಗೋಲಿ ಸೃಷ್ಟಿಸುವುದು, ಭೂಮಿಗೆ ಬಿದ್ದು ಪುಟಿದ ಹನಿಗಳ ಪಸೆ ಗಾಜಿನ ಮೇಲೆ, ಗೋಡೆಯ ಮೇಲೆ, ಜಗಲಿಯ ಮೇಲೆ, ಮರಗಳ ಮೇಲೆ ಹರಡುವುದು, ಮಳೆಯ ಬೆನ್ನಿಗೇ ಕಾಡುವ ಚಳಿ, ಕವಿಯುವ ಕತ್ತಲು, ಮಂದ ಬೆಳಕು, ರಾತ್ರಿಯಲ್ಲಿ ಕಪ್ಪೆ, ಜೀರುಂಡೆಗಳ ಸದ್ದು, ಮಳೆ ನಿಂತ ಬಳಿಕವೂ ತೆಂಗಿನ ಗರಿಯಿಂದ ಪಟ್ ಪಟ್ ಸದ್ದು ಮಾಡಿ ಅಂಗಳಕ್ಕೆ ಅಪ್ಪಳಿಸುವ ಕೊನೆಯ ಹನಿಗಳು... ಹೀಗೆ ಮಳೆ ಹೇಗ್ಹೇಗೋ ಕಾಣಿಸಿಕೊಳ್ಳುತ್ತದೆ...

...................

ಮಳೆಗೆ ಸ್ವಂತ ಸದ್ದು ಅಂತ ಉಂಟ? ಇಲ್ವಲ್ಲ... ಆದರೂ ಮಳೆ ಬರುವ ಸದ್ದು ನಮಗೆ ಕೇಳಿಸುತ್ತದೆ!!! ಅದು ಹೇಗೆ... ಗಾಢ ಮಳೆಗೆ ಮುಸುಕು ಹೊದ್ದು ಮನೆಯೊಳಗೆ ಮಲಗಿದ್ದರೂ ಹೊರಗೆ ಮಳೆಯ ಸದ್ದು ಕೇಳುತ್ತದೆ. ಆಸೆ ಹುಟ್ಟಿಸುತ್ತದೆ, ಹುಚ್ಚು ಹಿಡಿಸುತ್ತದೆ, ಫೋಟೋ ತೆಗೆಸುತ್ತದೆ, ಚಂದದ ನೆನಪುಗಳು ಕೆರಳುತ್ತವೆ... ಆ ಸದ್ದಿನ ವ್ಯಾಖ್ಯಾನ ಏನು...? ಅಂಗಳಾಚೆಗಿನ ತೋಟವನ್ನು ಹಾದು ಬರುವಾಗ, ಮರಗಳ ಮೇಲೆ, ಮಾಡಿನ ಮೇಲೆ ದಿಢೀರ್ ಸುರಿಯುವ  ನೀರು ಭೂಮಿಯನ್ನು ಸ್ಪರ್ಶಿಸುವ ಕಾಲದಲ್ಲೇ ನಮಗೆ ಮಳೆ ಸದ್ದಾಗಿ ಕೇಳುವುದು. ಹೊರತು ಮಳೆಗೊಂದು ಶ್ರುತಿ, ಮಳೆಗೊಂದು ತನ್ನದೇ ಲಯ, ಗತಿ ಅಂತ ಇರ್ತದ? ಇಲ್ವಲ್ಲ? ಆದರೂ ಪಿರಿಪಿರಿ ಮಳೆ, ಹನಿ ಕಡಿಯದ ಮಳೆ, ಧೋ ಅಂತ ಬರುವ ಮಳೆ, ಗಾಳಿ ಮಳೆ, ಚಂಡಮಾರುತದ ಮಳೆ, ಬಿಸಿಲಿರುವಾಗ ಬರುವ ಕಳ್ಳ ಮಳೆ ಎಲ್ಲದಕ್ಕೂ ಒಂದೊಂದು ಸಂಜ್ಞೆ, ಸದ್ದು, ಸ್ವರೂಪ ಇರ್ತದೆ... ಅದಂತೂ ಸತ್ಯ...

.....................

 

ಪರಿಪರಿ ಆರೈಕೆ ಮಾಡಿದರೂ ಚಿಗುರದ ಗಿಡಗಳೆಲ್ಲ ಮಳೆ ಬಂದಾಕ್ಷಣ ಬೇಡ ಬೇಡ ಅಂದರೂ ಅರಳುತ್ತವೆ. ಬೋಳು ಗುಡ್ಡದಲ್ಲಿ ನಮಗರಿವಿಲ್ಲದೇ ಹಸಿರ ಸೆರಗು ಹಾಸಲ್ಪಡುತ್ತದೆ. ಭೂಮಿಯೊಳಗೆ ಅದೆಲ್ಲಿತ್ತೋ ಬೀಜಗಳೆಲ್ಲ ಮೊಳೆತು ಹುಲ್ಲುಗಳು ಚಿಗುರುತ್ತವೆ... ಮಣ್ಣು ಸಡಿಲವಾಗುತ್ತದೆ. ಹೂವು ನಗುತ್ತದೆ, ತೋಟ ನಳನಳಿಸುತ್ತದೆ, ಜಲಪಾತಗಳು ಧುಮ್ಮುಕ್ಕುತ್ತವೆ, ಮಂದಗಮನ ನದಿಗಳು ಓಡಲು ಶುರು ಮಾಡುತ್ತವೆ. ತೋಟದ ನಡುವೆ, ಗದ್ದೆಯ ಬದುವಿನ ಪಕ್ಕದ ಪುಟ್ಟ ಪುಟ್ಟ ತೊರೆಗಳಲ್ಲೂ ತಳ ಕಾಣುವಷ್ಟು ಶುದ್ಧ ನೀರು ಹರಿಯುವುದು ನೋಡುವುದೇ ಚಂದ, ಅದರಲ್ಲಿ ನಡೆಯುವುದೇ ಖುಷಿ, ಈಜಿದರೆ ಸ್ವರ್ಗ! ಮಳೆಗಾಲ ಜೊತೆಗೆ ಬರುವ ಸಮೃದ್ಧಿಗೆ ಇವೆಲ್ಲ ರೂಪಕಗಳು ಅಷ್ಟೇ...

..............

ಮಳೆಗ ಸದ್ದು ಇದೆ, ಬೆಂಗಾವಲಿಗೆ ಗಾಳಿ ಇದೆ, ಬಾನಿನಲ್ಲಿ ಕಪ್ಪಿನ ನೇಪಥ್ಯವಿದೆ, ಕೆಲವೊಮ್ಮೆ ಗುಡುಗು, ಸಿಡಿಲು, ಬೆಚ್ಚಿ ಬೀಳಿಸುವ ಮಿಂಚುಗಳ ಸಂಚಾರವಿದೆ. ಇಷ್ಟೊಂದು ಪ್ರಾಪರ್ಟಿಗಳ ಜೊತೆ ಬರುವ ಮಳೆ ಚಂದದ ಏಕಾಂತ ಕಟ್ಟಿ ಕೊಡುತ್ತದೆ, ಧೋ ಅನ್ನುವ ಸದ್ದಿನ ಮಧ್ಯದಲ್ಲೂ ಒಂದು ಸ್ಪೇಸ್ ಕಟ್ಟಿ ಕೊಡುವುದೇ ಆಶ್ಚರ್ಯ. ಸದ್ದನ್ನು ಮೀರಿ ಕಾಡುವ ನೆನಪುಗಳು, ಕೈಬೀಸುವ ಬಾಲ್ಯ, ಜಗತ್ತಿನಿಂದಲೇ ದೂರೀಕರಿಸಿ ದ್ವೀಪಸದೃಶವಾಗಿರುವಂತೆ ಕಾಣುವ ನಮ್ಮದೇ ಮನೆಯ ಅಂಗಳ ಸಹಿತ ಚಂದದ ಒಂದು ಒಂಟಿತನ ಕಟ್ಟಿಕೊಡುತ್ತದೆ ಮತ್ತು ವ್ಯಸ್ತ ಬದುಕಿನ ನಡುವೆ ಒಂದು ಅಂತಹ ಮೆಲುಕಿಗೆ ವ್ಯವಸ್ಥೆ ಕಲ್ಪಿಸುವ ಪ್ರಕೃತಿ ಬೇಕಾಗಿರುವುದೂ ಸತ್ಯ.

.............

ಸಂಪೂರ್ಣ ಕವರ್ ಮಾಡಿಕೊಂಡು, ದೊಡ್ಡ ದೊಡ್ಡ ಕೊಡೆಗಳನ್ನು ಹಿಡ್ಕೊಂಡು ಬೈಕಿನಲ್ಲಿ, ಕಾರಿನಲ್ಲಿ, ಬಸ್ಸಿನಲ್ಲಿ ಕರ್ತವ್ಯ ಎಂಬ ಹಾಗೆ ಹೋಗುವಾಗ ಮಳೆ ಉಪದ್ರವೇ ಆಗಿ ತೋರುತ್ತದೆ. ಕೃತಕ ಪ್ರವಾಹ, ಜರಿಯುವ ಗುಡ್ಡ, ಜಾರುವ ಬಂಡೆ, ಉರುಳುವ ಮರ, ವಾಲುವ ಕಂಭ, ಹಾರುವ ಛಾವಣಿ ಯಾವುದೂ ಮಳೆಯ ತಪ್ಪಲ್ಲ. ನಾವು ಕಟ್ಟಿಕೊಂಡ ಬದುಕು, ನಮ್ಮ ಸ್ವಯಂಕೃತ ಅಪರಾಧಗಳ ಪರಿಣಾಮ ಅಷ್ಟೇ. ಮಳೆಯ ಹಾದಿಗೆ ಅಡ್ಡ ಬಂದುದನ್ನು ಅದು ಸರಿಸುವುದು. ಇದನ್ನು ನಾವು ಒಪ್ಪಿಕೊಳ್ಳಲು ತಯಾರಿಲ್ಲ. ಹರಿವಿನ ದಾರಿಯನ್ನು ನಾವೇ ಬಂದ್ ಮಾಡಿದರೆ, ಕಂಡ ಕಂಡಲ್ಲಿ ಭೂಮಿಯನ್ನು ನಮ್ಮಿಷ್ಟದಂತೆ ಅಗೆದರೆ, ಸುರಿದ ನೀರು ಹೋಗಲು ದಾರಿಯನ್ನೇ ತೋರಿಸದಿದ್ದರೆ ತನ್ನ ದಾರಿಯಲ್ಲಿ ಅದು ಸಾಗುತ್ತದೆ. ನಾವದನ್ನು ವಿಧ್ವಸಂಕ ಕೃತ್ಯವೋ ಎಂಬ ಹಾಗೆ ವರ್ಣಿಸುತ್ತೇವೆ. ಇವೆಲ್ಲವನ್ನು ಬಿಟ್ಟು ಮಳೆಯ ಖುಷಿ ಅನುಭವಿಸಲು ಮೈಬಿಟ್ಟು ಹಗುರಾಗಿ ಹುಲ್ಲುಹಾಸಿನ ಮೇಲೆ ನಗ್ನ ಪಾದದಲ್ಲಿ ನಡೆದು ನೋಡಿ, ಬಾನಂಗಳದಿಂದ ಸುರಿಯುವ ಹನಿಗೆ ನೇರಾನೇರ ಬಾಯೊಡ್ಡಿ, ತಲೆ ಬಾಗಿ ಗಮನಿಸಿ... ಮಳೆಯೊಂದು ಖುಷಿ ಎಂಬುದು ಆಗ ಭಾಸವಾಗುತ್ತದೆ...

...................

ನಾಗರಿಕತೆಯ ಕುರುಹಿಲ್ಲದ ಬೆಟ್ಟ, ನೆಟ್ವರ್ಕ್ ಸಿಕ್ಕದ ಬಯಲು, ವಕ್ರವಕ್ರವಾಗಿ ಸಾಗುವ ಕಣಿವೆ ನಡುವಿನ ರಸ್ತೆ, ಬಿದಿರಿನ ಹಿಂಡು, ನದಿಯ ದಂಡೆ, ಮಳೆಗೆ ನಲುಗಿ, ಹದವಾಗಿ, ಒದ್ದೆಯಾದ ಎಲೆಗಳ ಹಾಸಿಗೆಯ ಸುತ್ತ ಆವರಿಸಿದ ದಟ್ಟ ಕಾಡಿನ ನಡುವಿನ ಒಂಟಿ ಕಾಲುದಾರಿಯಲ್ಲಿ ಮಬ್ಬು ಕವಿಯುವ ಬೆಳಕಿನಲ್ಲಿ ಒಮ್ಮೆ ನಡೆದು ನೋಡಿ... ಹೊಳೆಯ ದಡದಲ್ಲಿ ನೀರಿನಲ್ಲಿ ಪಾದ ಇಳಿಸಿ, ಗಾಳಿಯ ಮೊರೆತಕ್ಕೆ ಕಿವಿಕೊಟ್ಟು ನೋಡಿ, ಸಂಜೆ ವೇಳೆ ದೂರದ ಬೆಟ್ಟದಾಚೆ ಕ್ಷಿತಿಜದಲ್ಲಿ ಹುಟ್ಟಿ ನಮ್ಮ ಮನೆ ಕಡೆಗೆ ಬಾಣದಂತೆ ಸಾಗಿ ಬರುವ ಮಳೆ ಇಲ್ಲಿಗೆ ಮುಟ್ಟಲು ಎಷ್ಟು ಹೊತ್ತು ಬೇಕು?” ಅಂತ ಲೆಕ್ಕ ಹಾಕಿ ನೋಡಿ... ಮಳೆ ಆವರಿಸುತ್ತದೆ.... ವರ್ಷದ ಉಳಿದ ಅಷ್ಟೂ ಋತುಗಳಲ್ಲಿ ಮಳೆಯ ಪಿಸುಮಾತು ಕಿವಿಯಲ್ಲಿ ರಿಂಗಣಿಸುತ್ತಲೇ ಇರುತ್ತದೆ... ಮಳೆಯನ್ನು ಕಾಣುವ, ಕಾಪಿಡುವ, ಕಾದು ಕುಳಿತು ಕಂಡುಕೊಳ್ಳುವ, ಮಳೆಯ ಸದ್ದನ್ನು ಮನಃಪಟಲದೊಳಗೆ ಕಾಪಾಡುವ ಸಹನೆ ಬೇಕು... ಸಮಯವೂ ಬೇಕು... ಯಾವ ಮಳೆಯೂ ಕೊಳೆಯಲ್ಲ, ಹಳೆಯದಾಗುವುದೂ ಇಲ್ಲಪ್ರತಿ ಮಳೆಯೂ ಹೊಸತೇ...!

-ಕೃಷ್ಣಮೋಹನ ತಲೆಂಗಳ (08.07.2023).

 

1 comment:

Poornima kamath A said...

ಆಹ್ಲಾದಕರವಾದ,ಮನಕೆ ಮುದನೀಡುವ ಹಳೆನೆನಪುಗಳನ್ನೂ ಹಾಗೂ ಹೊಸತನದ ಕಂಪನ್ನೂ ಹೊತ್ತುತರುವ ಹೊಸಮಳೆಯ ಆಗಮನ ಮತ್ತು ಅವುಗಳ ಸೌಂದರ್ಯದ ಅನಾವರಣದ ವರ್ಣನೆಯಿಂದ ಕೂಡಿದ ತಮ್ಮ ಲೇಖನ, ಬರಹಶೈಲಿ ಅತ್ಯದ್ಭುತ.

Popular Posts