ಗಾಢಾಂಧಕಾರದ ಚಪ್ಪರ ಬೆಳಗುತ್ತಿದ್ದ ಗ್ಯಾಸುಲೈಟು ಎಂಬ ಮಸುಕುಮಸುಕಾದ ನೆನಪು....

 

INTERNET PHOTO


ಸಣ್ಣದೊಂದು ಪೇಟೆಯ ನಾಲ್ಕು ಮಾರ್ಗ ಕೂಡುವ ವೃತ್ತಕ್ಕೆ ಹೈಮಾಸ್ಟ್ ದೀಪ ಹಾಕಿದಾಗ ಎಷ್ಟು "ಜಿಗ್ಗ" ಕಾಣ್ತದೋ ಅಂಥದ್ದೇ ಕಣ್ಣು ಕೋರೈಸುವ ಫೀಲ್ ಕೊಡ್ತಾ ಇದ್ದ ಸಾಧನ ಗ್ಯಾಸ್ ಲೈಟ್ ಅರ್ಥಾತ್ ಪೆಟ್ರೋಮ್ಯಾಕ್ಸ್... ಕರೆಂಟೇ ಇಲ್ಲದ ಕಾಲದಲ್ಲಿ ಬಾಲ್ಯ ಕಳೆದ ನಮ್ಮಂಥವರಿಗೆ ಗ್ಯಾಸ್ ಲೈಟ್ ಅಂದರೆ ಒಂಥರಾ ಓಯಸಿಸ್ ಹಾಗೆ. ಚಿಮಿಣಿ, ಲಾಟೀನು ದೀಪಗಳ ಹಳದಿ ಬೆಳಕಿಗೆ ಕಣ್ಣುಗಳು ಅಡ್ಜಸ್ಟ್ ಆದವರಿಗೆ ಒಂದು ಸಮಾರಂಭದ ದಿನ, ಬಯಲಾಟ, ಜಾತ್ರೆ, ತೇರಿನ ಗೌಜಿಯಲ್ಲಿ ಪ್ರಖರವಾಗಿ ಕೋರೈಸುವ ಗ್ಯಾಸ್ ಲೈಟ್ ಅಪರೂಪಕ್ಕೆ ಕಾಣುವ ಸಾಧನ ಮಾತ್ರವಲ್ಲ, ಕಣ್ಣು ತೆರೆಯಲು ಕಷ್ಟವೇನೋ ಎಂಬಂಥೆ ಭಾಸ.

ಸ್ವಲ್ಪ ಅನುಕೂಲಸ್ಥರ ಮನೆಯ ಅಟ್ಟದಲ್ಲಿ ಗ್ಯಾಸ್ ಲೈಟ್ ವಿರಾಜಮಾನವಾಗಿದ್ದು, ಪೂಜೆ, ಮದುವೆ, ಮುಂಜಿಗಳಂದು ಅಟ್ಟದಿಂದ ಕೆಳಗಿಳಿದು ಸ್ವಚ್ಛವಾಗಿ, ಸೀಮೆಎಣ್ಣೆ ಕುಡಿದು ಹೊಸ "ಮೆಂಟಲ್ " ಬಿಗಿದು ಲಿವರಿನಲ್ಲಿ ತುಂಬಿದ ಗ್ಯಾಸ್ ಸ್ವೀಕರಿಸಿ ಉರಿಯುವುದು ಸಾಮಾನ್ಯ. ಸ್ವಲ್ಪ ಕೆಳ ಮಧ್ಯಮ ವರ್ಗದವರು, ಅನುಕೂಲಸ್ಥರ ಮನೆಯಲ್ಲಿ ಕೇಳಿ ಉದಾರವಾಗಿ ಪಡೆದು ತರುವ ಗ್ಯಾಸ್ ಲೈಟ್ ಆ ದಿನದ ಮಟ್ಟಿಗೆ ಮನೆಗೊಂದು ಕಳೆ ಕಟ್ಟುವ ಸಾಧನ. ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆಯಂದು ಪಕ್ಕದ ಮನೆಯ ತಿಮ್ಮಪ್ಪ ಮಾಸ್ಟರ್ ಮನೆಯಿಂದ ಗ್ಯಾಸ್ ಲೈಟ್ ಕೇಳಿ ತರುತ್ತಿದ್ದದ್ದು ಬಾಲ್ಯದ ಸವಿ ನೆನಪುಗಳಲ್ಲಿ ಒಂದು.

ಅಟ್ಟದಲ್ಲಿ ಗ್ಯಾಸ್ ಲೈಟ್ ನೇತಾಡಿಸಲೆಂದೇ ಎಸ್ ಆಕಾರದ ಕಬ್ಬಿಣದ ಕೊಕ್ಕೆ (ಸಲಾಕೆ) ಇರ್ತಾ ಇತ್ತು. ಒಂದು ತುದಿ ಛಾವಣಿಯ ಪಕ್ಕಾಸಿಗೂ, ಇನ್ನೊಂದು ತುದಿ ಗ್ಯಾಸ್ ಲೈಟನ್ನು ಹಿಡಿಯುವ ಹಿಡಿಯನ್ನೂ ಹೊತ್ತು ಛಾವಣಿಯಡಿ ನೇಣು ಬಿಗಿದು ಸ್ಥಿತಿಯಲ್ಲಿ ತಪಸ್ಸಾಚರಿಸ್ತಾ ಇರ್ತಿತ್ತು. ಸಮಾರಂಭದ ಹಿಂದಿನ ದಿನ ಅದನ್ನು ಅಟ್ಟದಿಂದ ಇಳಿಸಿ, ಅದರ ಗಾಜನ್ನು ನವಿರಾಗಿ ಬೇರ್ಪಡಿಸಿ, ಸೋಪು ಹಾಕಿ ತೊಳೆದು ಸ್ವಚ್ಛಗೊಳಿಸಿ, ಸುಟ್ಟು ಕರಕಲಾದ ಹಳೆ "ಮೆಂಟಲ್" ಕಳಚಿ, ಹೊಸ "ಮೆಂಟಲ್" (ನಮ್ಮೂರಲ್ಲಿ ಹಾಗೆಯೇ ಕರೆಯುವುದು) ಬಿಗಿದು, ಗಾಳಿ ತುಂಬಿಸುವ ಲಿವರ್ ಸರಿ ಇದೆಯೇ ಎಂದು ಪರೀಕ್ಷಿಸಿ, ಸವೆದ "ವಾಶರ್" ಬದಲಿಸಿ, ಅದರ ಕೆಳಹೊಟ್ಟೆ ತುಂಬಾ ಆಲಿಕೆ ಇರಿಸಿ ಸೀಮೆಎಣ್ಣೆ ತುಂಬಿದರೆ ಗ್ಯಾಸ್ ಲೈಟ್ ಯಾನೆ  ಪೆಟ್ರೋಮ್ಯಾಕ್ಸ್ ಉರಿಯಲು ಸಿದ್ಧ ಅಂತ ಅರ್ಥ.

ಸಮಾರಂಭಕ್ಕೆ ಅಂಗಳದಲ್ಲಿ ಹಾಕಿದ ಅಡಕೆ ಮರದ ಕಂಭ, ಮೇಲೆ ಹೆಣೆದ ತೆಂಗಿನ ಗರಿಗಳ ಹಾಸಿದ ಚಪ್ಪರದಡಿ ಮುಸ್ಸಂಜೆ ಗ್ಯಾಸ್ ಲೈಟ್ ಹೊತ್ತಿಸಲು "ನಿಪುಣ" ಹಿರಿಯರು ಕೂತರೆ ಸುತ್ತಲೂ ಅಚ್ಚರಿಯ ಕಂಗಳಿಂದ ಮಕ್ಕಳು ಸುತ್ತುವರಿದು ದಿಟ್ಟಿಸುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟುವ ಹಾಗಿದೆ. ಸೀಮೆಎಣ್ಣೆ ತುಂಬಿ ಗಾಳಿ ಹಾಕಿ, ಮೆಂಟಲ್ ಪಕ್ಕದ ತೂತಿನಲ್ಲಿ ಬೆಂಕಿ ಕಡ್ಡಿ ಗೀರಿ ಬೆಂಕಿ ಉರಿಸಿ, ಅದರ ನಿಯಂತ್ರಣದ ವಾಲ್ವ್ ನ್ನು ಒಂದು ನೈಪುಣ್ಯದಿಂದ ತಿರುಗಿಸಿ, ಜೊತೆಗೆ ಗಾಳಿಯನ್ನೂ ಹಾಕುತ್ತಾ ಮೆಂಟಲ್ ಪ್ರಖರವಾಗಿ ಉರಿಯುವ ಹಾಗೆ ಮಾಡುವುದು ಒಂದು ಭಯಂಕರ ಸಿದ್ಧಿ ಅಂತ ಆಗ ಅನ್ನಿಸುತ್ತಾ ಇತ್ತು. ಸೀಮೆಎಣ್ಣೆ ಪರಿಮಳ ಎಲ್ಲೆಡೆ ಹರಡ್ತಾ ಇತ್ತು. ಈಗ ಗ್ಯಾಸ್ ಲೈಟ್ ಉರಿಸುವುದು ಹೇಗೆ ಅಂತಲೇ ಮರೆತುಹೋಗಿದೆ.

ಉರಿದು ಸಿದ್ಧವಾದ ಪೆಟ್ರೋಮ್ಯಾಕ್ಸನ್ನು ಎತ್ತರದ ಕೊಕ್ಕೆಯಲ್ಲಿ ಚಪ್ಪರದಡಿ ನೇತು ಹಾಕಲಾಗುತ್ತಿತ್ತು. ಅಥವಾ ಸಮಾರಂಭಕ್ಕೆ ಅಡುಗೆ ಸಿದ್ಧವಾಗುತ್ತಿದ್ದ ಪಾಕಶಾಲೆಯಲ್ಲಿ ಹೋಳಿಗೆ ಬೇಯಿಸುವವರ ನೆರವಿಗೆ ಇಡಲಾಗುತ್ತಿತ್ತು. ನಡು ನಡುವೆ ಗ್ಯಾಸ್ ಕಮ್ಮಿ ಆದರೆ ಗಾಳಿ ತುಂಬಿಸಬೇಕಿತ್ತು. ಪೆಟ್ರೋಮ್ಯಾಕ್ಸ್ ಹೊತ್ತೊಯ್ಯುವಾಗ ಅದರ ಮೆಂಟಲ್ ತುಂಡಾಗದ ಹಾಗೆ ಜೋಪಾನ ಮಾಡಬೇಕಿತ್ತು. ಅಷ್ಟೆಲ್ಲ ಮಾಡಿ ಗಂಟೆಗಟ್ಟಲೆ ಉರಿಯುವ ಗ್ಯಾಸ್ ಲೈಟ್ ಅಷ್ಟೂ ಕತ್ತಲಿನ ಮನೆಯ ಸುತ್ತಲಿನ ಅಂಧಕಾರ ತೊಲಗಿಸಿ ಒಂದು "ಸಂಭ್ರಮದ ಕ್ಷಣಗಳನ್ನು" ಹೊತ್ತಿಸಿಕೊಡುತ್ತಿದ್ದುದು, ಮನಸ್ಸಿನಲ್ಲಿ ಸಮಾರಂಭದ ಉತ್ಸಾಹ ತುಂಬುತ್ತಿದ್ದುದ್ದು ಅಕ್ಷರಶಃ ಸತ್ಯ.

ದಿನಾಲೂ ಚಿಮಿಣಿ ದೀಪ, ಲಾಟೀನು ಬೆಳಕನ್ನೇ ಕಂಡವರ ಪಾಲಿಗೆ ಪೆಟ್ರೋಮ್ಯಾಕ್ಸು ಒಂದು ಚಮತ್ಕಾರದ ಹಾಗೆ, ಹೊಗೆ ರಹಿತ ದೀಪದ ಹಾಗೆ, ಹತ್ತಿರದಲ್ಲೇ ಕುಳಿದರೆ ಚಳಿ ಓಡಿಸುವ ಹೀಟರಿನ ಹಾಗೆಯೂ ಅನ್ನಿಸ್ತಾ ಇತ್ತು.

ವರ್ಷ ಉರುಳಿದಂತೆ ಅದರ ಗಾಜುಗಳು ಬಿರುಕು ಬಿಡುವುದು, ಅದರ ಹಿಡಿ, ಬಾಡಿಗೆ ತುಕ್ಕು ಹಿಡಿಯುವುದು, ಅಲ್ಯುಮಿನಿಯಂ ಲೇಪನ ಜಾರುವುದು, ಗಾಳಿ ಹಾಕುವಾಗ "ಲಟಪಟ" ಸದ್ದು ಬರುವುದೆಲ್ಲ ಮಾಮೂಲಿಯೇ ಬಿಡಿ.

ಸಮಾರಂಭಗಳನ್ನು ಬಿಟ್ಟರೆ ಗ್ಯಾಸ್ ಲೈಟ್ ಕಾಣ್ತಾ ಇದ್ದದ್ದು, ದೇವಸ್ಥಾನದ ಜಾತ್ರೆಗಳು ಹಾಗೂ ಯಕ್ಷಗಾನದ ರಂಗಸ್ಥಳಗಳಲ್ಲಿ. ಟ್ಯೂಪ್ ಲೈಟ್ ಪ್ರವರ್ಧಮಾನಕ್ಕೆ ಬರುವವರೆಗೂ ದೇವರ ಉತ್ಸವ ಬಲಿ, ಜಳಕದ ಸವಾರಿ, ರಥೋತ್ಸವದ ಸಂದರ್ಭ ದೇವರ ಬಲಿ ಸವಾರಿಯ ಶಿಷ್ಟಾಚಾರದಲ್ಲಿ ಅಕ್ಕ ಪಕ್ಕ ಸಾಲು ಸಾಲು ಪೆಟ್ರೋಮ್ಯಾಕ್ಸ್ ಹೊತ್ತವರು ಕಾಣಿಸುತ್ತಿದ್ದರು. ಮಂಗಳೂರಿನ ಶರವು ದೇವಸ್ಥಾನದ ದೇವರ ಪೇಟೆ ಸವಾರಿ ಹೋಗುವಾಗ ತೀರಾ ಇತ್ತೀಚಿನ ವರೆಗೂ ಒಂದು ಸಂಪ್ರದಾಯವೋ ಎಂಬ ಹಾಗೆ ತಲೆಯಲ್ಲಿ ಗ್ಯಾಸ್ ಲೈಟ್ ಹೊತ್ತ ಮಂದಿ ಕಾಣಿಸುತ್ತಿದ್ದರು.

ಕಟೀಲು ಯಕ್ಷಗಾನ ಮೇಳದಲ್ಲಿ ಕೆಲ ವರ್ಷಗಳ ಹಿಂದಿನ ವರೆಗೂ ವಿದ್ಯುದ್ದೀಪ ಇದ್ದರೂ ಒಂದು ಸಂಪ್ರದಾಯದ ಹಾಗೆ ರಂಗಸ್ಥಳದ ಪಕ್ಕ ಬೆಳಗ್ಗಿನ ವರೆಗೂ ಪೆಟ್ರೋಮ್ಯಾಕ್ಸ್ ತೂಗು ಹಾಕುತ್ತಿದ್ದದ್ದು ಸರಿಯಾಗಿ ನೆನಪಿದೆ. ಕರೆಂಟು, ಜನರೇಟರು ಸಡನ್ ಕೈಕೊಟ್ಟರೂ ಪೆಟ್ರೋಮ್ಯಾಕ್ಸ್ ಕೈಕೊಡುವುದಿಲ್ಲ ಎಂಬ ನಂಬಿಕೆ ಇದಕ್ಕೆ ಕಾರಣ ಇರಬಹುದು. ಮತ್ತೆ ವರ್ಷಕ್ಕೊಮ್ಮೆ ಮನೆಗೆ ಬರುವ ನಗರ ಭಜನೆಯವರು ಕೂಡಾ ತೋಟದ ಕಂಗಿನ ಮರಗಳೆಡೆಯಲ್ಲಿ ಪೆಟ್ರೋಮ್ಯಾಕ್ಸ್ ಹಿಡ್ಕೊಂಡು ದೂರದಿಂದಲೇ ಬರುವುದು ಕಾಣಿಸ್ತಾ ಇದ್ದದ್ದೂ ನೆನಪಿದೆ.

ಒಂದು ಲಾಟೀನು, ಒಂದು ಇನ್ ಲ್ಯಾಂಡ್ ಲೆಟರು, ಒಂದು ಟೈಪುರೈಟರ್, ಉದ್ದದ ದೋಡ್ಡ ಟಾರ್ಚು, ಬ್ಲಾಕ್ ಆಂಡ್ ವೈಟು ಟೀವಿಗಳ ಹಾಗೆ ಗ್ಯಾಸ್ ಲೈಟ್ ಇಂದು ಕಣ್ಣೆದುರಿಗೆ ಕಾಣಿಸುವ ವಸ್ತುವಲ್ಲ. ವಸ್ತು ಪ್ರದರ್ಶನದಲ್ಲಿ ಜಾಗ ಗಿಟ್ಟಿಸಿಕೊಂಡ ಇಂದಿನ ಮಕ್ಕಳಿಗೆ ಅರ್ಥವೇ ಆಗದ ಸಾಧನವಾಗಿ ಇತಿಹಾಸ ಸೇರಿದೆ. ಮೊಬೈಲಿನಲ್ಲೇ ಎಲ್ಲವೂ ಆಗುವ ಈ 5G ಯುಗದಲ್ಲಿ ಗ್ಯಾಸ್ ಲೈಟ್ ಏನು ಮಹಾ ಎಂಬ ಭಾವ ಹಾಸುಹೊಕ್ಕಾಗಿದೆ. ಅಂದು ಗ್ಯಾಸ್ ಲೈಟ್  ಹೊತ್ತಿಸಿ ಹೀರೋಗಳಾಗಿದ್ದ ಮಂದಿಗೆ ಇಂದು ಅದನ್ನು ಉರಿಸುವುದು ಮರೆತೇಹೋಗಿರಬಹುದು ಎಂಬ ಶಂಕೆಯೂ ಇದೆ!

ಕರೆಂಟು, ಸಾರಣೆ, ಟಿ.ವಿ., ಫೋನ್, ಮೊಬೈಲು, ಕಂಪ್ಯೂಟರು ಎಂಥದ್ದೂ ಇರದಿದ್ದ ಬಾಲ್ಯದ ಚಂದದ ನೆನಪಿನ ಪುಟಗಳಲ್ಲಿ ಒಂದು ಗ್ಯಾಸುಲೈಟು... ಅದರ ಪ್ರಖರ ಬೆಳಕಿನ ಹಾಗೆ ನೆನಪು ಇಂದಿಗೂ ಅಷ್ಟೇ ಗಾಢವಾಗಿ ಕಾಡುತ್ತಿದೆ... ಕಾಲದ ಅನಿವಾರ್ಯ ಬದಲಾವಣೆಯ ತಿರುಗಾಟದಲ್ಲಿ ತನ್ನ ಪ್ರದರ್ಶನ ಮುಗಿಸಿ ನೇಪಥ್ಯ ಸೇರಿದೆ. ಅಲ್ಲಲ್ಲಿ ಸರ್ಕಲ್ಲುಗಳಲ್ಲಿ ಹೊಸ ಹೊಸ ಹೈಮಾಸ್ಟ್ ದೀಪಗಳು ಉದ್ಘಾಟನೆಯಾಗಿ ಪ್ರಖರ ಬೆಳಕು ಸೂಸುವಾಗಲೆಲ್ಲ ಚಪ್ಪರದಡಿ ಕೀಟಗಳನ್ನು ಆಕರ್ಷಿಸಿ, ಸುತ್ತ ಗಾಢ ಬೆಳಕು ಹೊತ್ತು ಇರುಳು ಹಗಲಾಗಿಸುತ್ತಿದ್ದ ದಿನಗಳ ಚಂದದ ನೆನಪುಗಳು ಮತ್ತೆ ಮರುಕಳಿಸುತ್ತವೆ! ತಾನು ಉರಿದು ಭಸ್ಮವಾದರೂ ಜಗತ್ತಿಗೆ ಬೆಳಕು ಕೊಡ್ತಾ ಇದ್ದ ಸಾಧನವನ್ನು ಮೆಂಟಲ್ ಅಂತ ಕರೆಯುತ್ತಿದ್ದರು ಎಂದು ಇತ್ತೀಚೆಗೆ ಹರಿದಾಡುತ್ತಿದ್ದ ಜೋಕು ಕೂಡಾ ಕಾಡುತ್ತದೆ...!

-ಕೃಷ್ಣಮೋಹನ ತಲೆಂಗಳ. (28.11.2023)

No comments:

Popular Posts