ಶಾಪಿಂಗು ಮಾಲುಗಳಲ್ಲಿ ಚೌಕಾಸಿ ಮಾಡ್ಲಿಕುಂಟ, ಮಲ್ಟಿಪ್ಲೆಕ್ಸಿನೊಳಗೆ ಅನಾಗರಿಕರಂತೆ ಕಡ್ಲೆ ತಿನ್ಲಿಕುಂಟ? ನಾವು ಸಮಕಾಲೀನರಾಗಿದ್ದೇವೆ!
ಒಂದು ಕಾಲವಿತ್ತು, ಒಂದು ಅಂಗಡಿಯಲ್ಲಿ ಖರೀದಿ ಮಾಡಿದ
ವಸ್ತುಗಳನ್ನು ಚೀಲದಲ್ಲಿ (ತಂಗೀಸ್ ಚೀಲ, ವಯರ್ ಬ್ಯಾಗ್, ಗೋಣಿ ಇತ್ಯಾದಿ) ತುಂಬಿಸಿ, “ಅಣ್ಣ, ಈ ಚೀಲ ಇಲ್ಲಿರಲಿ,
ನಾನು ಆಚೆ ಬೀದಿಯ ಭಂಡಸಾಲೆಗೆ ಹೋಗಿ ಬರ್ತೇನೆ” ಅಂತ ಹೇಳಿ, ಗಂಟೆಗಟ್ಟಲೆ
ಜೀನಸಿ ಅಂಗಡಿಯ ಪಡಸಾಲೆಯಲ್ಲಿ ನಮ್ಮ ಚೀಲ ಇಟ್ಟು ಹೋಗಬಹುದಿತ್ತು....
.....
ಜೀನಸಿ ಎಲ್ಲ ತಕ್ಕೊಂಡು ಆದ
ಮೇಲೆ ಲೆಕ್ಕ ಹಾಕುವಾಗ ಸ್ವಲ್ಪ ಚಿಲ್ಲರೆ ಕಡಿಮೆ ಆದ ಹಾಗೆ ಕಾಣುತ್ತದೆ. ಆಗ ಹೇಳಬಹುದಿತ್ತು, “ಶೆಣೈ ಮಾಮ್, 200 ರುಪಾಯಿ
ಕಮ್ಮಿ ಆಗ್ತದೆ, ಬರ್ದಿಟ್ಕೊಳ್ಳಿ, ನಾಳೆ ಕೊಡ್ತೇನೆ” ಅಂತ. ಅಥವಾ “ಸಾಹೇಬ್ರೆ, ಆಚೆ ಅಂಗಡಿಯಲ್ಲಿ ಟೊಮೆಟೋಗೆ 20 ರುಪಾಯಿ
ಇತ್ತು, ಇಲ್ಲೇನು 22?” ಅಂತ ಕೇಳಿದ್ರೆ “ಅಯ್ಯೋ ಅದಕ್ಕೇನು ಇಪ್ಪತ್ತೇ ಕೊಡಿ, ನೀವೆಂತ ಓಡಿ ಹೋಗ್ತೀರ” ಅಂತ ಒಂದು ಚೌಕಾಸಿಯ
ವ್ಯಾಪಾರ ಸಿದ್ಧ ಆಗ್ತಿತ್ತು...
..........
ಬಸ್ಸಿಳಿದ ಬಳಿಕ ಅರಳಿ
ಮರದಡಿಯಲ್ಲಿರುವ ಭಟ್ರ ಹೋಟ್ಲಿಗೆ ಹೋಗಿ ಚಾ ಕುಡಿದ್ರೆ, ಎದುರು ನೇತು ಹಾಕಿರುವ ಬಾಳೆ ಕೊನೆಯಿಂದ
ಬಾಳೆಹಣ್ಣು ಕಿತ್ತು ತಿನ್ನಲು ಪರ್ಮಿಷನ್ ಬೇಕಿರ್ಲಿಲ್ಲ, ಕೈಗೆ ಗ್ಲೌಸೂ ಹಾಕಿ ತಲೆಗೆ
ತೊಟ್ಟೆಯನ್ನೂ ಕಟ್ಟುತ್ತಿರಲಿಲ್ಲ! ಭಟ್ರು ಬಂದು ಪದೆಂಗಿ ಅವಲಕ್ಕಿ ಜೊತೆಗೆ, ಇವತ್ತು ಬನ್ಸು ಸ್ಪೆಶಲ್
ಅಂತ ಹೇಳಿದ್ರೆ, ಪೂರ್ವಾಲೋಚನೆ ಇಲ್ಲದೆ ಬನ್ಸು ತಿನ್ನಲು ಯಾವುದೇ ಹಮ್ಮು ಬಿಮ್ಮೂ ಇರ್ತಾ
ಇರಲಿಲ್ಲ.... ಅದಕ್ಕೊಂದು ದೊಡ್ಡ ಬಜೆಟ್ಟೂ ಕೈ ಸುಡುತ್ತಿರಲಿಲ್ಲ...
................
ನಾವು ಸಣ್ಣವರಾಗಿದ್ದಾಗ, ನಮ್ಮೂರಿನ ಪುಟ್ಟ
ಕ್ಲಿನಿಕ್ಕಿನ ಫ್ಯಾಮಿಲಿ ಡಾಕ್ಟ್ರೇ ಹಲ್ಳು ಕೀಳ್ತಾ ಇದ್ರು, ಕಿವಿ ನೋವಿಗೆ ಮದ್ದು ಕೊಡ್ತಿದ್ರು,
ಕಣ್ಣು ಸಮಸ್ಯೆ ಬಂದ್ರೆ ಡ್ರಾಪ್ಸ್ ಕೊಡ್ತಾ ಇದ್ರು... ಎಂಥ ಜ್ವರ ಬಂದ್ರು ಆಂಟಿಬಯಾಟಿಕ್ ಅವರೇ
ಹಾಕ್ತಾ ಇದ್ರು... ಅಷ್ಟು ಮಾತ್ರವಲ್ಲ, ಅನಾರೋಗ್ಯದ ಬಗ್ಗೆ ನಮ್ಮ ದುಗುಡುಗಳನ್ನೆಲ್ಲ ಡಾಕ್ಟ್ರು ತಾಳ್ಮೆಯಿಂದ
ಕೇಳ್ತಾ ಇದ್ರು...!
…………………
ಈಗ ಕೇಳ್ತೇನೆ... ನಗರಗಳ
ಹವಾನಿಯಂತ್ರಿಕ ಮಾಲ್ ಗಳಿಗೆ ಹೋಗಿ ಕ್ರೆಡಿಟ್ ಕಾರ್ಡ್ ತಕ್ಕೊಂಡು ಬೇಕಾಬಿಟ್ಟಿ ಶಾಪಿಂಗ್ ಮಾಡಲು
ಹೋಗುವಾಗ ನೀವು ತಂಗೀಸ್ ಚೀಲ, ವಯರ್ ಬ್ಯಾಗ್ ತಕ್ಕೊಂಡು ಹೋಗ್ತೀರ... ಅಥವಾ ಮತ್ತೊಂದಷ್ಟು
ದುಡ್ಡು ಕೊಟ್ಟು ಅಲ್ಲಿಂದಲೇ ರೆಡಿಮೇಡ್ ಸ್ಟೈಲಿಶ್ ಚೀಲ ತಕ್ಕೊಳ್ತೀರ...?
ನಿಮ್ಮ ಶಾಪಿಂಗ್ ಮುಗಿದ
ಬಳಿಕ, ಬಹುರಾಷ್ಟ್ರೀಯ ಸಂಸ್ಥೆಯ ಸೂಪರ್ ಬಜಾರುಗಳಲ್ಲಿ 10 ರುಪಾಯಿ ಕಮ್ಮಿ ಆದರೆ, ನಾಳೆ
ಕೊಡ್ತೇನೆ ಅಂದ್ರೆ ಅವರು ಕೇಳ್ತಾರ…?
ಅಯ್ಯೋ ಇದರ ರೇಟ್ ಜಾಸ್ತಿ
ಆಯ್ತು, ಸ್ವಲ್ಪ ಕಮ್ಮಿ ಮಾಡಿ ಅಂದ್ರೆ, ಅರ್ಥವೇ ಆಗದ ಡಿಸ್ಕೌಂಟುಗಳ ಬಗ್ಗೆ ಹೇಳಿ, ಅವರು ರಪಕ್ಕ
ಅಂತ ಪ್ರಿಂಟ್ ತೆಗೆದು ಕೊಟ್ಟ ಬಿಲ್ಲು ಕಂಡು ಮರುಮಾತಾಡದೆ ದುಡ್ಡು ಕೊಟ್ಟು ಬರ್ತೇವೆ ಅಲ್ವ....?
ಇದೇ ವಸ್ತುವಿನಲ್ಲಿ ಬೇರೆ
ಬ್ರಾಂಡ್ ನದ್ದು ಉಂಟ, ಬೇಗ ಬೇಯುವ ಅಕ್ಕಿ ಉಂಟ, ನಂಗೆ ಸ್ವಲ್ಪವೇ ಸ್ಯಾಂಪಲ್ ಕೊಡ್ತೀರ...
ಅಂತೆಲ್ಲ ನಿಮ್ಮೂರಿನ ಭಟ್ರ, ಕಾಮತರ, ಸಾಹೇಬ್ರ ಅಂಗಡಿಯಲ್ಲಿ ಕೇಳಿದ ಹಾಗೆ ಬಾಯ್ತುಂಬ
ಮಾತನಾಡಿದರೆ ನಿಮ್ಮತ್ರವೇ ನಿಂತು ಮಾತನಾಡಲು ಅಲ್ಲಿ ಯೂನಿಫಾರಂ ತೊಟ್ಟು ನಿಲ್ಲುವವರಿಗೆ
ಪುರ್ಸೊತ್ತಿರ್ತದ...? ಎಲ್ಲ ಶಾಪಿಂಗು ಆದ ಮೇಲೆ
ಈ ಚೀಲ ಇಲ್ಲಿರಲಿ, ಮತ್ತೆ ಬಂದು ತಕ್ಕೊಂಡೋಗ್ತೇನೆ ಅಂತ ಹೇಳಿದ್ರೆ... ಯಾರಾದ್ರೂ ಶಾಪಿಂಗ್ ಮಾಲ್
ನವರು ಅದಕ್ಕೆ ಅವಕಾಶ ಕೊಡ್ತಾರ...?
ಮಲ್ಟಿಪ್ಲೆಕ್ಸ್
ಥಿಯೇಟರುಗಳಿಗೆ ಒಂದು ಕಾಲದಲ್ಲಿ ನಮ್ಮ ಮನೆಯ ನೀರು ಸಹಿತ ಕೊಂಡೋಗ್ಲಿಕೇ ಇರಲಿಲ್ಲ. ಅಲ್ಲಿ ಕೋಕಾ
ಕೋಲಾಕ್ಕೆ ಜಾಸ್ತಿ ರೇಟು ಅಂತ ಗೊತ್ತಿದ್ರೂ, ಅದೇ ಕೋಕಾ ಕೋಲ, ಅದೇ ಪಾಪ್ ಕಾರ್ನ್ ಅನ್ನೇ
ತಕ್ಕೊಂಡೋಗಿ ತಿನ್ಬೇಕು, ಬೇರೆ ಆಯ್ಕೆ ಇಲ್ಲ, ಚೀಲದಲ್ಲಿ ಕಡ್ಲೆ ಸಹ ತಕ್ಕೊಂಡೋಗ್ಲಿಕಿಲ್ಲ. ಆದರೂ
ನಾವು 80-90ನೇ ದಶಕದವರು ಇಂಥದ್ದೊಂದು ರೆಡಿಮೇಡ್, ಸೋ ಕಾಲ್ಡ್ ಸೊಫಿಸ್ಟಿಕೇಟೆಡ್,
ಹವಾನಿಯಂತ್ರಿತ ವ್ಯವಸ್ಥೆಯೇ ತುಂಬ ಫ್ಲೆಕ್ಸಿಬಲ್, ಕೂಲ್, ಕಂಟೆಂಪರರಿ ಅಂದ್ಕೊಂಡು ಸಮಾಧಾನ
ಪಟ್ಕೊಳ್ತೇವೆ...
........................
ನಾವೀಗ ಆಧಾರ್
ಯುಗದಲ್ಲಿದ್ದೇವೆ. ಪರಸ್ಪರ ನಂಬಿಕೆಗಳು ದೂರವಾಗ್ತಿವೆ. ಗ್ಲೋಬಲ್ ವಿಲೇಜ್ ಅನ್ನುತ್ತೇವೆ. ಮೆಟಲ್
ಡಿಟೆಕ್ಟರ್ ಇಲ್ಲದ ಬಾಗಿಲು, ಬ್ಯಾಗ್ ತಪಾಸಣೆ ಮಾಡದ ದ್ವಾರಪಾಲಕರು ಇಲ್ಲದೆ, ಸಿಸಿ ಟಿವಿ
ಕಣ್ಗಾವಲು ಇಲ್ಲದೆ ಯಾರನ್ನೂ ನಂಬುವ ಹಾಗಿಲ್ಲ. ಹತ್ತಾರು ಒಟಿಪಿಗಳು, ಫಿಂಗರ್ ಪ್ರಿಂಟುಗಳು, ಟು
ಸ್ಟೆಪ್ ವೆರಿಫಿಕೇಶನ್ ಗಳು ಇಲ್ಲದೆ ವ್ಯವಹಾರ ಸಾಗುವುದಿಲ್ಲ. ಶಾಪಿಂಗ್ ಮಾಲುಗಳಲ್ಲಿ,
ಮಲ್ಟಿಪ್ಲೆಕ್ಟ್ ಥಿಯೇಟರುಗಳಲ್ಲಿ, ಹವಾನಿಯಂತ್ರಿತ ತರಕಾರಿ ಅಂಗಡಿಗಳಲ್ಲಿ, ತ್ರೀಸ್ಟಾರ್, ಫೈವ್
ಸ್ಟಾರ್ ಹೋಟ್ಲುಗಳಲ್ಲಿ ಇರುವ ವಿಪರೀತ ಶಿಷ್ಟಾಚಾರ ವೈಯಕ್ತಿಕ ಸ್ಪರ್ಶ, ಚೌಕಾಸಿ, ಹೋಲಿಕೆ,
ಸಹನೆಗಳನ್ನು ಮೀರಿ ಭಯಂಕರ ಔಪಚಾರಿಕ ಜಾಗಗಳಾಗಿ ಬಿಟ್ಟಿವೆ... ಜಿಪೇ, ಸ್ವೈಪಿಂಗ್ ಗಳು ಬಂದ ಮೇಲೆ
ಚಿಲ್ಲರೆ ಎಣಿಸುವ ಕಷ್ಟವೂ ಇಲ್ಲದೆ. ಅಹಸನೀಯ ಮೌನ, ವಿಚಿತ್ರ ಗೌರವ ಸಲ್ಲಿಕೆ, ಹುಸಿ ನಗು,
ಬೇಕಾದ್ದು, ಬೇಡದ್ದನ್ನೆಲ್ಲ ಖರೀದಿ ಮಾಡಿ ಕ್ರೆಡಿಟ್ ಕಾರ್ಡಿನ ಸದುಪಯೋಗ ಆಗುವ ಹೆಮ್ಮೆಯಲ್ಲಿ
ಮಾಲುಗಳಿಂದ ಆಚೆ ಬರುವಾಗ ಹಳ್ಳಿಯ ಗೂಡಂಗಡಿ, ಮುರುಕು ಮೇಜಿನ ಹೊಟೇಲು, ಹೆಂಚಿನ ಮಾಡಿನ ಜಿನಸಿ
ಭಂಡಸಾಲೆಗಳೆಲ್ಲ ಹೈಜನಿಕ್ ಕೊರತೆ ಇದ್ದ ಹಾಗೆ ಭಾಸವಾದರೆ ತಪ್ಪೇನಿಲ್ಲ!!!!
…………….
ಸೌದೆಯಲ್ಲೇ ಅಡುಗೆ ಮಾಡುವ ಹೊಗೆ ಆವರಿಸಿ ಕಪ್ಪಾದ
ಪಕ್ಕಾಸುಗಳ ಮಾಡಿರುವ ಮುರುಕು ಬೆಂಚಿನ ಊರ ಹೊಟೇಲಿನಲ್ಲಿ ಭಟ್ರ ನಗುವಿನೊಂದಿಗೆ ಊರ ಸಮಾಚಾರ
ಮಾತನಾಡುವಷ್ಟು ಸ್ವಾತಂತ್ರ್ಯ ಇತ್ತು... ಖಾಯಂ ಹೋಗುವ ಊರಿನ ಕ್ಷೌರಿಕನಲ್ಲಿ ಕಷ್ಟ ಸುಖ
ಮಾತನಾಡುವ ವ್ಯವಧಾನ ಇತ್ತು, ಕಳೆದ ಸಲ ಮಾತನಾಡುವಾಗ ಬಾಕಿಯಾದ ಟಾಪಿಕ್ಕುಗಳ ಮುಂದುವರಿಸಲು ಅವಕಾಶ
ಇತ್ತು, ಜಿನಸಿ ಅಂಗಡಿಯಲ್ಲೇ ಇಷ್ಟೇ ಅಷ್ಟು ಅಕ್ಕಿಯ ಸ್ಯಾಂಪಲ್ ಕೊಂಡೋಗಿ ಮನೆಯಲ್ಲಿ ಬೇಯಿಸಿ
ಪರೀಕ್ಷಿಸಿ ಮತ್ತೊಂದಿಷ್ಟು ಅಕ್ಕಿ ಕೊಂಡ್ಹೋಗುವ ವ್ಯವಸ್ಥೆ ಇತ್ತು... ಎಸಿ ಇಲ್ಲ, ಯೂನಿಫಾರಂ
ಇಲ್ಲ, ಸಿಸಿ ಕೆಮರಾ ಇಲ್ಲ, ದ್ವಾರಪಾಲಕರು ಇಲ್ಲ, ಟೈಕಟ್ಟಿಕೊಂಡು ಸೊಂಟ ಬಗ್ಗಿಸಿ ಹುಸಿ ನಗು
ಸಹಿತ ಎದುರುಗೊಳ್ಳುವ ಸುಂದರ, ಸುಂದರಿಯರಿಲ್ಲ... ಕಾರಿನ ಬಾಗಿಲು ತೆಗೆದವನಿಗೂ ಟಿಪ್ಸ್
ಕೊಡಬೇಕಾದ ವಿಚಿತ್ರ ಅನಿವಾರ್ಯತೆಗಳಿಲ್ಲ... ಇವನ್ನೆಲ್ಲ ನೋಡಿ...ನೋಡಿ ಕ್ಯಾಶಿಯರು, ಸಪ್ಲೈಯರು,
ಕ್ಲೀನರು ಒಬ್ರೇ ಆಗಿರುವಂಥ ಹೊಟೇಲಿಗೆ ಹೋದಾಗ ಅಲ್ಲಿ ಹೈಜೀನ್, ಪ್ರೊಟೋಕಾಲ್, ಲಕ್ಸುರಿ ಕೊರತೆ
ಕಂಡರೆ ತಪ್ಪೇನಿಲ್ಲ...
ದಿನಕ್ಕೊಂದರಂತೆ ಆರೋಗ್ಯ ಜಾಗೃತಿ ಹೆಚ್ಚುತ್ತಲೇ
ಇರುವಾಗ, ಹೊಸ ಹೊಸ ವೈರಸ್ಸುಗಳು ಕಾಡುವಾಗ ಸಹಜವಾಗಿ ಫ್ಯಾಮಿಲಿ ಡಾಕ್ಟ್ರು ಸಹ ಲ್ಯಾಬ್ ರಿಪೋರ್ಟ್
ಇಲ್ಲದೆ ಮದ್ದು ಕೊಡಲಾಗದ ಪರಿಸ್ಥಿತಿ ಬಂದಿದೆ. ಇದು ಕಾಲಮಾನಕ್ಕೆ ಅನುಗುಣವಾಗಿ ಸಹಜವೇ ಇದೆ. “ಆ ಸ್ಪೆಷಲಿಸ್ಟ್ ಡಾಕ್ಟ್ರು ನನ್ನ ಸಮಸ್ಯೆ ಪೂರ್ತಿ ಕೇಳಿಸಿಕೊಳ್ಳಲಿಲ್ಲ,
ಅವರು ಬಿಝಿ ಇದ್ರು” ಅಂತ ವಿಚಿತ್ರ ತಳಮಳ ಇದ್ರೂ ಪೇಶಂಟು ವಿವಿಧ ಪರೀಕ್ಷೆಗಳಿಗೆ ಒಳಗಾಗದೇ
ರಿಪೋರ್ಟ್ ನಾರ್ಮಲ್ ಬಂದ್ರೂ ರಿಸ್ಕು ತಕ್ಕೊಳ್ಳಿಕೆ ರೇಡಿ ಇಲ್ಲ, ಈಗ ಅದು ಸಾಧ್ಯವೂ ಇಲ್ಲ.
ಆನ್ ಲೈನ್ ಶಾಪಿಂಗ್ ಬಗ್ಗೆ ಮಾತನಾಡುವುದೇ ಬೇಡ... ಮಾತೂ
ಇಲ್ಲ, ಕತೆಯೂ ಇಲ್ಲ... ಪ್ರಿಪೇಯ್ಡ್ ಆರ್ಡರ್ ಆದರೆ ಡೆಲಿವರಿ ಬಾಯ್ ಸಮೇತ ಮಾತನಾಡುವುದಿಲ್ಲ.
ಎಲ್ಲವೂ ಸದ್ದಿಲ್ಲದೆ, ಸುದ್ದಿಯೇ ಆಗದೆ ಪೂರ್ತಿಯಾಗುತ್ತದೆ.
.....
ವ್ಯವಹಾರ ಎಲ್ಲವೂ ವ್ಯವಹಾರವೇ, ಆದರೆ ಅದರೊಳಗಿನ ಮಾನವೀಯ
ಸ್ಪರ್ಶ ನಮ್ಮಿಂದ ದೂರವಾಗುತ್ತಿದೆ ಎಂಬುದು ನಮಗೆ ಅರ್ಥವೇ ಆಗುವುದಿಲ್ಲ. ಹೊಸದಾಗಿ ಈಗ
ಬಸ್ಸಿನಲ್ಲೂ ಯುಪಿಐ (ಜಿಪೇ ಮಾದರಿ) ಪಾವತಿ
ಸಾಧ್ಯವಾಗಿದೆಯಂತೆ. ಇನ್ನೂ ಕಂಡಕ್ಟರ್ ಹತ್ರವೂ ಚಿಲ್ಲರೆಗೋಸ್ಕರ ಚೊರೆ ಮಾಡಬೇಕಾಗಿಲ್ಲ...
ಎಲ್ಲೂ, ಯಾರಲ್ಲೂ ಮಾತುಕತೆಯೇ ಇಲ್ಲದೆ ಮುಗುಮ್ಮಾಗಿ ಪೇ ಮಾಡಿ, ಮನೆಗೋಗ್ತಾ ಇರಿ... ಅಂತ
ಇದ್ರಾಯ್ತು... ಮಾತೇ ಆಡದೆ ರೋಗ ಬಂದರೆ ಕೌನ್ಸಿಲಿಂಗ್ ಮಾಡಲು ಡಾಕ್ಟ್ರು ಇದ್ದೇ ಇದ್ದಾರಲ್ಲ,
ಅಲ್ಲವಾದರೆ ಲಾಫಿಂಗ್ ಕ್ಲಬ್ಬುಗಳಿವೆ... ಅಲ್ಹೋದ್ರೆ ಆರೋಗ್ಯ ಸುಧಾರಣೆ ಆಗ್ತದೆ...
ಉದ್ದದ ಬೀದಿಯಲ್ಲಿ ಮರದ ತುಂಡುಗಳನ್ನು ನಂಬರ್ ಪ್ರಕಾರ
ಜೋಡಿಸುವ ಬಾಗಿಲಿನ ಹಳೇ ಕಿರಾಣಿ ಅಂಗಡಿಗಳು, ಮರದ ಬೆಂಚಿನಂಚಿನಲ್ಲಿ ಕುಳಿತು ಕುಪ್ಪಿ
ಗ್ಲಾಸಿನಲ್ಲಿ ಚಾ ಕುಡಿಯುವಂಥ ಶತಮಾನ ಕಂಡ ಹೊಟೇಲು, ಉಪ್ಪಿನ ಮೂಟೆಯನ್ನು ಜಗಲಿಯಂಚಿನಲ್ಲಿ
ಪೇರಿಸಿಡುವ ಭಂಡಸಾಲೆ... ಇವೆಲ್ಲ ಇತಿಹಾಸ ಸೇರುತ್ತಿರುವಾಗ ಈ ರೀತಿಯ ಮಾತನಾಡುವುದು, ಬರೆಯುವುದು
ಔಟ್ ಆಫ್ ಫ್ಯಾಶನ್ ಅಂತ ಅನ್ನಿಸ್ತಾ ಇದೆಯಾ... ಇದ್ರೆ ಅದು ತಪ್ಪಲ್ಲ, ನಾವು ಸಮಕಾಲೀನರಾಗಿದ್ದೇವೆ! ಏನಂತೀರಿ....?!
-ಕೃಷ್ಣಮೋಹನ ತಲೆಂಗಳ
(30.12.24)
No comments:
Post a Comment