ಲೆಕ್ಕ ಹಾಕುವುದಕ್ಕೆ ಕುಳಿತರೆ, ಮೊಬೈಲ್ ನೆರಳಿನ ಹಿಂದೆ ಎಷ್ಟೊಂದು ಸಲಕರಣೆಗಳ ಕಣ್ಣೀರು ಅಡಗಿವೆ!!! MOBILE

 




ಮೊಬೈಲ್ ಕೈಗೆ ಬಂದ ಮೇಲೆ ಹಾಗಾಯ್ತು, ಹೀಗಾಯ್ತು, ಕಾಲ ಬದಲಾಯ್ತು, ಓದುವುದು ನಿಂತ್ಹೋಯ್ತು, ಮಾತನಾಡುವುದು ಕಡಿಮೆಯಾಯ್ತು, ಕಣ್ಣು ಹಾಳಾಯ್ತು, ಹಾರ್ಟ್ ವೀಕಾಯ್ತು, ಗುಬ್ಚಚ್ಚಿ ಸತ್ತೋಯ್ತು, ನೆನಪು ಶಕ್ತಿ ಕಮ್ಮಿ ಆಯ್ತು... ಹೀಗೆ ಸಾವಿರ ಕಂಪ್ಲೇಂಟುಗಳನ್ನು ಮಾಡುತ್ತೇವೆ. ಬದಲಾವಣೆ ಎಂಬ ನಿರಂತರ ಪ್ರಕ್ರಿಯೆಯನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಬೇಕೆಂದರೂ, ಬೇಡವೆಂದರೂ ಕಾಲದ ಓಟದೊಂದಿಗೆ ನಡೆಯುವ ಬದಲಾವಣೆ ಜೊತೆ ನಾವು ಸಾಗಬೇಕು ಎಂಬುದು ಲಾಜಿಕ್ಕು... ಆದಾಗ್ಯೂ ಮೊಬೈಲ್ ಎಂಬ ಸರಾಸರಿ ಆರಿಂಚಿನ ಸಾಧನ ಕೈಗೆ ಬಂದ ಮೇಲೆ ಎಷ್ಟೊಂದು ವಸ್ತುಗಳು ಅಪ್ರಸ್ತುತ ಆಗಿ ಬಿಟ್ಟಿತಲ್ಲ ಅಂತ ಲೆಕ್ಕ ಹಾಕುವುದಕ್ಕೆ ಹೋದ್ರೆ ಆಶ್ಚರ್ಯ ಆಗ್ತಾ ಇದೆ. ನಂಗೆ ಒಂದಿಷ್ಟು ಲೆಕ್ಕ ಸಿಕ್ಕಿತು... ಬಾಕಿ ಆಗಿದ್ದರೆ ದಯವಿಟ್ಟು ಕಮೆಂಟು ಬಾಕ್ಸಿನಲ್ಲಿ ಸೇರಿಸಿ ಬಿಡಿ ಆಯ್ತ...(ಕೃಷ್ಣಮೋಹನ ರವರ ಉವಾಚ)

1)      ಮೊಬೈಲ್ ಬರುವ ಮೊದಲು ಲ್ಯಾಂಡ್ ಲೈನು ಬಳಸುತ್ತಿದ್ದೆವು. ನಂಬರ್ ಡಯಲ್ ಮಾಡಿ ಫೋನ್ ಮಾಡುವುದಕ್ಕೆ ಆಗ್ತಾ ಇತ್ತು. ಈಗ ಮೊಬೈಲ್ ಬಂದ  ಲ್ಯಾಂಡ್ ಲೈನ್ ಪಳೆಯುಳಿಕೆ ಆಗಿ ಬಿಟ್ಟಿದೆ. ಕಾಯಿನ್ ಫೋನು ಮರೆತೇ ಹೋಗಿದೆ. ಫ್ಯಾಕ್ಸು ಮೂಲೆ ಸೇರಿದೆ.

2)      ಮೊಬೈಲ್ ಬರುವ ಮೊದಲು ಬಂಧು ಮಿತ್ರರ ಫೋನ್ ನಂಬರ್ ಬರೆದಿಡಲು ಪಾಕೆಟ್ ನೋಟು ಬುಕ್ಕು ನಮ್ಮ ಕಿಸೆ ಅಥವಾ ವ್ಯಾನಿಟಿ ಬ್ಯಾಗಿನಲ್ಲಿ ಇರ್ತಾ ಇತ್ತು. ಈಗ ಬಹುತೇಕರು ಯಾರ ನಂಬರನ್ನೂ ಪುಸ್ತಕದಲ್ಲಿ ಬರೆದಿಡುವುದಿಲ್ಲ, ಎಲ್ಲ ಮೊಬೈಲಿನಲ್ಲೇ ಸೇವ್ ಆಗಿರ್ತದೆ, ಆ ಮೊಬೈಲ್ ಕೈಕೊಟ್ಟರೆ ಯಾವ ಸೇವೆ ಮಾಡಿಸಿದರೂ ಮತ್ತೊಮ್ಮೆ ನಂಬರ್ ಪಡೆಯಲು ಸರ್ಕಸ್ಸೇ ಮಾಡಬೇಕಾಗುತ್ತದೆ!

3)      ಮೊಬೈಲ್ ಬರುವ ಮೊದಲು ಕ್ಯಾಲ್ಕ್ಯುಲೇಟರ್ ಎಂಬ ಸಾಧನವೊಂದಿತ್ತು, ಅದೂ ಈಗ ಅಪ್ರಸ್ತುತ ಆಗಿ ಬಿಡ್ತಾ ಇದೆ. ಮೊಬೈಲಿನಲ್ಲೇ ಎಂಥ ಲೆಕ್ಕ ಸಹ ಮಾಡಬಹುದು. ಹಾಗಾಗಿ ಕ್ಯಾಲ್ಕ್ಯುಲೇಟರ್ ಬದಿಗೆ ಸರಿದಿದೆ.

4)      ಮೊಬೈಲ್ ಬರುವ ಮೊದಲು ಕತ್ತಲಲ್ಲಿ ಹೋಗಲು ಟಾರ್ಚು ಬೇಕಾಗ್ತಾ ಇತ್ತು. ಗಂಟಲು ಪರೀಕ್ಷೆ ಮಾಡಲು ಡಾಕ್ಟ್ರು ಸಹ ಪೆನ್ ಟಾರ್ಚ್ ಇಟ್ಟುಕೊಳ್ತಾ ಇದ್ರು. ಈಗ ಮೊಬೈಲಿನಲ್ಲೇ ಟಾರ್ಚು ಉಂಟು. ಆಗಾಗ ಎವರೆಡಿ ಬೆಟ್ರಿ ಹಾಕ್ಬೇಕಂತ ಸಹ ಇಲ್ಲ. ಹಾಗಾಗಿ ಟಾರ್ಚು ಕೂಡಾ ಈಗ ಬೇಕಾಗಿಲ್ಲ.

5)      ಮೊಬೈಲ್ ಬರುವ ಮೊದಲು ಪರ್ವಗಳಿಗೆ, ಹಬ್ಬಗಳಿಗೆ, ಜನ್ಮದಿನಕ್ಕೆ ಗ್ರೀಟಿಂಗ್ಸ್ ಕಳಿಸ್ತಾ ಇದ್ದೆವು, ಬಂಧುಮಿತ್ರರಿಗೆ ಇನ್ ಲ್ಯಾಂಡ್ ಲೆಟರು, ಕಾರ್ಡು ಕಳಿಸ್ತಾ ಇದ್ದೆವು. ಮೊಬೈಲ್ ಬಂದ ಮೇಲೆ ಎಲ್ಲ ಮೊಬೈಲಿನಲ್ಲೇ ಕಳಿಸ್ಲಿಕೆ ಆಗ್ತದೆ. ರೆಡಿಮೇಡ್ ಗ್ರೀಟಿಂಗ್ಸ್ ಕಾರ್ಡ್ ಫ್ರೀ ಸಿಕ್ತದೆ... ಮತ್ತೆ ಪೋಸ್ಟಾಫೀಸು ಯಾಕೆ.

6)      ಮೊಬೈಲ್ ಬರುವ ಮೊದಲು ಎಂತದ್ದಾದರೂ ಭಾಷಣ, ಪ್ರಬಂಧ, ವರದಿಗಳನ್ನು ಬರೆಯಲು ಗ್ರಂಥಾಲಯಕ್ಕೆ ಹೋಗಿ ಪುಸ್ತಕಗಳನ್ನು ರೆಫರ್ ಮಾಡಬೇಕಾಗಿತ್ತು, ಮೊಬೈಲ್ ಬಂದ ಮೇಲೆ ಎಲ್ಲವೂ ಗೂಗಲ್ಲಿನಲ್ಲೇ ಸಿಗ್ತದೆ. ಹಾಗಾಗಿ ಗ್ರಂಥಾಲಯಕ್ಕೆ ಹೋಗುವುದೂ ಕಡಿಮೆ ಆಯ್ತು. ಓದುವುದು ಮರೆತ್ಹೋಯ್ತು. ಯಾವುದನ್ನೂ ನೆನಪಿಡುವ ಕಷ್ಟ ಮೆದುಳಿಗೂ ಈಗ ಇಲ್ಲ!

7)      ಮೊಬೈಲ್ ಬರುವ ಮೊದಲು ಬೆಳಗ್ಗೆದ್ದು ಪೇಪರ್ ‌ಓದಬೇಕಾಗಿತ್ತು”. ಈಗಿನ ಜನರೇಶನ್ನಿನವರು ಮೊಬೈಲಿನಲ್ಲೇ ಪೇಪರ್ ನೋಡ್ತಾರೆ

8)      ಮೊಬೈಲ್ ಬರುವ ಮೊದಲು ರೇಡಿಯೋವನ್ನು ದೊಡ್ಡ ಪೆಟ್ಟಿಗೆ ಗಾತ್ರದ ಸಾಧನದಲ್ಲಿ ಕೇಳಬೇಕಾಗಿತ್ತು. ಮೊಬೈಲ್ ಬಂದ ಮೇಲೆ ಇಯರ್ ಫೋನ್ ಇದ್ರೆ ಸಾಕು, ಎಂತಹ ರೇಡಿಯೋ ಸಹ ಮೊಬೈಲಿನಲ್ಲೇ ಕೇಳ್ತದೆ. ಮಾತ್ರವಲ್ಲ, ಆನ್  ಲೈನಿನಲ್ಲೂ ಆಕಾಶವಾಣಿ ಸೇವೆಗಳು ಲಭ್ಯ. ಹಾಗಾಗಿ ರೇಡಿಯೋ ಎಂಬ ಸಾಧನ ಮರೆಯಾಗ್ತಾ ಇದೆ. ಎಲ್ಲಿವರೆಗೆ ಅಂದ್ರೆ ಅಂಗಡಿಯಲ್ಲೂ ಸುಲಭದಲ್ಲಿ ರೇಡಿಯೋ ಸಿಗುವುದಿಲ್ಲ. ರೇಡಿಯೋ ಹಾಳಾದರೆ ರಿಪೇರಿ ಮಾಡುವವರೂ ಇಲ್ಲ....

9)      ಹಿಂದೆ ಕ್ರಿಕೆಟ್ ಮ್ಯಾಚ್, ಧಾರಾವಾಹಿಗಳನ್ನು ಟಿ.ವಿ.ಯಲ್ಲಿ ನೋಡಬೇಕಾಗಿತ್ತು. ಈಗ ಮೊಬೈಲಿನಲ್ಲೇ ಟಿವಿ ಕಾಣ್ತದೆ. ಯೂಟ್ಯೂಬಿಗೆ ಹೋದ್ರೆ ಎಂಥ ಬೇಕಾದ್ರೂ ಸಿಗ್ತದೆ. ಮತ್ತೆ ಟಿ.ವಿ. ಯಾಕೆ... ಮೊಬೈಲನ್ನೇ ಅಡ್ಡ ಹಿಡಿದು ಕುಳಿತರೆ ಟಿ.ವಿ. ಸಹಾ ನೋಡಬಹುದು.

10)   ಹಿಂದೆ ಸಿನಿಮಾವನ್ನು ಟಾಕೀಸಿಗೇ ಹೋಗಿ ನೋಡಬೇಕಿತ್ತು. ಈಗ ಓಟಿಟಿ ಬಂದಿದೆ. ಓಟಿಟಿ ಮೊಬೈಲಿನಲ್ಲೇ ಸಿಗ್ತದೆ. ಹಾಗಾಗಿ ಈಗ ಸಿನಿಮಾ ಸಹ ಸೋಫಾದಲ್ಲೇ ಬಿದ್ಕೊಂಡು ಮೊಬೈಲಿನಲ್ಲೇ ನೋಡಬಹುದು.

11)   ಹಿಂದೆ ಆಫೀಸ್ ಕೆಲಸಕ್ಕೆ, ಆನ್ ಲೈನ್ ಮೀಟಿಂಗಿಗೆಲ್ಲ ಲ್ಯಾಪ್ಟಾಪ್ ಇದ್ರೆ ಸಹಾಯ ಆಗ್ತಾ ಇತ್ತು. ಈಗ ಲ್ಯಾಪ್ಟಾಪ್ ಇಲ್ಲದೆಯೂ ದೊಡ್ಡ ಮೊಬೈಲಿನಲ್ಲೇ ಎಲ್ಲ ಸುಧಾರಿಸಬಹುದು. ಎಲ್ಲಿ ವರೆಗೆ ಬಾಯಲ್ಲಿ ಹೇಳಿದ್ದು ಟೈಪ್ ಮಾಡಿ ಕೊಡುವ ಆಪ್ ಗಳು ಇರುವಾಗ ಲ್ಯಾಪ್ಟಾಪ್ ಸಹ ಸ್ವಲ್ಪ ಮಟ್ಟಿಗೆ ಅಪ್ರಸ್ತುತ ಆಗ್ತಾ ಬಂದಿದೆ. ಶೃತಿ ಪೆಟ್ಟಿಗೆ ಸಹ ಮೊಬೈಲಿನಲ್ಲೇ ಉಂಟು. ಮೊಬೈಲ್ ಇದ್ರೆ ಪ್ರತ್ಯೇಕ ಶೃತಿ ಬೇಡ.

12)   ಹಿಂದೆ ಹಾಡುಗಾರರು, ಯಕ್ಷಗಾನ ಭಾಗವತರು, ಕವಿಗಳೆಲ್ಲ ಬರಹಗಳನ್ನು ಪುಸ್ತಕದಲ್ಲಿ ಬರೆದು ಕೊಂಡೋಗ್ತಾ ಇದ್ರು. ಈಗ ಎಂತ ಇದ್ರು ಮೊಬೈಲ್ ಮತ್ತು ಟ್ಯಾಬ್.... ಅದರಲ್ಲೇ ಟೈಪ್ ಮಾಡಿ, ಪಿಡಿಎಫ್ ಡೈನ್ಲೋಡ್ ಮಾಡಿ ಕೊಂಡ್ಹೋಗ್ಲಿಕೂ ಸುಲಭ. ಅಕ್ಷರ ಮಾಸುವ, ಪುಟ ಹರಿಯುವ ಆತಂಕವೂ ಇಲ್ಲ...

13)   ಹಿಂದೆ ಖರ್ಚು, ವೆಚ್ಚ, ಆದಾಯ ಬರೆದಿಡಲು ಪುಟ್ಟ ಡೈರಿ ಬೇಕಾಗ್ತಾ ಇತ್ತು. ಮುಖ್ಯ ಸಂಗತಿಗಳನ್ನು ನೋಟ್ ಮಾಡಿಡಲು ನೋಟ್ ಪುಸ್ತಕ ಬೇಕಾಗಿತ್ತು. ಈಗ ಮೊಬೈಲಿನಲ್ಲಿ ನೋಟ್ ಎಂಬ ಸಾವಿರ ಆಪ್ ಗಳು ಸಿಗ್ತವೆ... ಅದರಲ್ಲೇ ಟೈಪ್ ಮಾಡಿಟ್ರೆ ಆಯ್ತು... ಪುಸ್ತಕವೇ ಬೇಡ.

14)   ಹಿಂದೆ ಅಂಗಡಿ, ಹೊಟೇಲ್, ಪ್ರವಾಸ ಹೋಗುವಾಗ ಜೇಬಿನಲ್ಲಿ ಪರ್ಸು ಬೇಕಾಗಿತ್ತು. ಚಿಲ್ಲರೆ ಕೊಟ್ಟು, ಕರೆನ್ಸಿ ನೀಡಿ ವ್ಯವಹಾರ ಮಾಡಬೇಕಾಗಿತ್ತು. ಈಗ ಹಾಗಲ್ಲ ಜಿಪೇ, ಫೋನ್ ಪೇ ಗಳಿವೆ. ನಯಾಪೈಸೆ ಕ್ಯಾಶ್ ಇಲ್ಲದೆ, ಜೇಬಿನಲ್ಲಿ ಪರ್ಸೇ ಇಲ್ಲದೆಯೂ ಇಡೀ ದೇಶ ಸುತ್ತಾಡಿಬರಬಹುದು. ಮೊಬೈಲ್ ಇದ್ರೆ ಸಾಕು... ಪಿಕ್ ಪಾಕೆಟ್ ಆಗುವ ಭಯವೂ ಇಲ್ಲ. ಅಲ್ಲಿಗೆ ಪರ್ಸ್ ಸಹ ಈಗ ಬೇಡದ ವಸ್ತುವಾಗಿ ಬಿಟ್ಟಿತು.

15)   ಹಿಂದೆ ನಮ್ಮ ಅಕೌಂಟಿನಲ್ಲಿ ಎಷ್ಟು ದುಡ್ಡಿದೆ ಅಂತ ತಿಳಿಯಲು ಬ್ಯಾಂಕಿಗೆ ಹೋಗಿ, ಕ್ಯೂ ನಿಂತು, ಪಾಸ್ ಪುಸ್ತಕ ಎಂಟ್ರಿ ಮಾಡಿಸಬೇಕಾಗಿತ್ತು. ಈಗ ನಮಗೆ ಪಾಸ್ ಪುಸ್ತಕವೇ ಬೇಕಾಗುವುದಿಲ್ಲ.... ಇ ಪಾಸ್ ಪುಸ್ತಕ ಸಿಗ್ತದೆ, ಆಯಾ ಬ್ಯಾಂಕಿನ ಆಪ್ ಹಾಕಿಸಿಕೊಂಡ್ರೆ, ನಮ್ಮ ಖಾತೆಯ ಇಡೀ ಜಾತಕವೇ ಅಲ್ಲಿ ಸಿಗ್ತದೆ.. ಹಾಗಾಗಿ ಪಾಸ್ ಪುಸ್ತಕ ಕೂಡಾ ಸ್ವಲ್ಪ ಕಡೆಗಣಿಸಲ್ಪಟ್ಟಿದೆ.

16)   ಹಿಂದೆ ಆರಂಭದಲ್ಲಿ ಮೊಬೈಲ್ ರಿಚಾರ್ಜ್ ಮಾಡಲು ಅಂಗಡಿಗೆ ಹೋಗಬೇಕಿತ್ತು. ನಮ್ಮ ನಂಬರ್ ಕೊಟ್ಟು ರೀಚಾರ್ಜ್ ಮಾಡಿಸಬೇಕಿತ್ತು, ಅಥವಾ ರೀಚಾರ್ಜ್ ಕೂಪನ್ ತಗೊಂಡು ಸ್ಕ್ರಾಚ್ ಮಾಡಿಸಬೇಕಿತ್ತು. ಈಗ ಹಾಗಲ್ಲ, ಕೂತಲ್ಲಿಯೇ ನಾವು ಮೊಬೈಲ್ ರಿಚಾರ್ಜ್ ಮಾಡಬಲ್ಲೆವು. ಅಲ್ಲಿಗೆ ಸೈಬರ್ ಸೆಂಟರ್, ರಿಚಾರ್ಜ್ ಅಂಗಡಿಯವರ ಕೆಲಸವೂ ಹೋಯ್ತು.

17)   ಬೆಳಗ್ಗೆ ಏಳಲು ಟೈಂಪೀಸ್ ಬೇಕಾಗಿತ್ತು. ಅಲಾರಂ ಆಗಲು ಅದರ ಅಗತ್ಯ ಇತ್ತು. ಈಗ ಮೊಬೈಲಿನಲ್ಲೇ ಅಲಾರಂ ಆಗ್ತದೆ. ಬೇಕಾದ್ರೆ ಹತ್ತು ನಿಮಿಷಕ್ಕೊಮ್ಮೆ ರಿಪೀಟ್ ಆಗ್ತದೆ. ಮತ್ತೆಂತಕೆ ಟೈಂಪೀಸ್...

18)   ಹಿಂದೆ ಕೈಯಲ್ಲು ವಾಚ್ ಕಟ್ಟುವುದು ಶಿಷ್ಟಾಚಾರದ ಭಾಗವಾಗಿತ್ತು. ಇಂದು ಗಂಟೆ ನೋಡಲು ವಾಚು ಬೇಕಾಗಿಲ್ಲ, ಗಂಟೆ ಮೊಬೈಲಿನಲ್ಲೇ ಕಾಣ್ತದೆ... ಸ್ಮಾರ್ಟ್ ವಾಚು ಕಟ್ಟುತ್ತೇವೆ. ಅದು ಗಂಟೆ ನೋಡಲು ಅಲ್ಲ. ಎಷ್ಟು ದೂರ ನಡೆದಿದ್ದೇವೆ. ನಮ್ಮ ಹೃದಯ ಬಡಿತ ಎಷ್ಟಿದೆ, ಎಷ್ಟು ವೇಗವಾಗಿ ಹೋಗ್ತಾ ಇದ್ದೇವೆ ಎಂದೆಲ್ಲ ತಿಳಿಯಲು ಅಷ್ಟೆ!.

19)   ಹಿಂದೆ ಡಿಸೆಂಬರ್ ತಿಂಗಳು ಮುಗಿಯುತ್ತಾ ಬಂದ ಹಾಗೆ ಹೊಸ ಕ್ಯಾಲೆಂಡರ್ ಗೆ ಚಡಪಡಿಸ್ತಾ ಇದ್ದೆವು... ಒಂದು ದಿನ ಕ್ಯಾಲೆಂಡರ್ ಇಲ್ಲದಿದ್ದರೂ ದಿನ ಮುಂದೆ ಹೋಗ್ತಾ ಇರಲಿಲ್ಲ. ಇಂದು ಹಾಗಲ್ಲ, ಕ್ಯಾಲೆಂಡರ್ ಗೋಡೆಯಲ್ಲಿ ಇದ್ದರೂ ಕೆಲವೊಮ್ಮೆ ಪುಟ ಬದಲಿಸಲೂ ಮರ್ತು ಹೋಗ್ತದೆ, ಕಾರಣ ಮೊಬೈಲಿನಲ್ಲೇ ಕ್ಯಾಲೆಂಡರ್ ಕೂಡಾ ಇದೆ!

20)   ಮೊಬೈಲಿನಲ್ಲೇ ಟಿವಿಯ ರಿಮೋಟ್ ಕಂಟ್ರೋಲರ್ ಕೆಲಸವನ್ನು ಮಾಡಬಹುದು. ಇಡೀ ಮನೆಯ ನಿಯಂತ್ರಣ ಮೊಬೈಲಿನಲ್ಲ ಮಾಡಬಹುದು. ಅಲ್ಲಿಗೆ ರಿಮೋಟ್ ಕಂಟ್ರೋಲಿನ ಜವಾಬ್ದಾರಿಯೂ ಮೊಬೈಲಿಗೇ ಸಿಕ್ಕಿತು.

21)   ಹಿಂದೆ ನಮ್ಮ ಫೋಟೋ ತೆಗೆಯಲು ಸ್ಟುಡಿಯೋಗೆ ಹೋಗಬೇಕಿತ್ತು. ಅಥವಾ ಫೋಟೋಗ್ರಾಫರ್ ಮನೆಗೇ ಬರಬೇಕಿತ್ತು. ಈಗ ಎರಡೂ ಬೇಕಾಗಿಲ್ಲ. ಬೇಕು ಬೇಕಾದಂಥ ಫೋಟೋಗಳನ್ನು ಕ್ಷಣಮಾತ್ರದಲ್ಲಿ ನಾವೇ ಕ್ಲಿಕ್ಕಿಸಬಹುದು. ಮಾತ್ರವಲ್ಲ, ಕೆಲವೇ ಕ್ಷಣಗಳಲ್ಲಿ ಇಡೀ ಜಗತ್ತಿನೆದುರು ಬಿತ್ತರಿಸಬಹುದು. ಅಲ್ಲಿಗೆ ಫೋಟೋಗ್ರಾಫರ್ ಕೆಲಸಕ್ಕೂ ಕುತ್ತು ಬಂತು.

22)   ಹಿಂದೆ ಇಂಟರ್ನೆಟ್ ಬೇಕಾಗಿದ್ದರೆ ಬ್ರಾಡ್ ಬ್ಯಾಂಡ್ ಕನೆಕ್ಷನ್ ಬೇಕಿತ್ತು. ಅಥವಾ ಜಿಯೋಫೈ ಥರ ಡಾಂಗಲ್ ಬಳಕೆ ಕಡ್ಡಾಯವಾಗಿತ್ತು. ಈಗ ಹಾಗೆಯಾ... ಮೊಬೈಲ್ ಇದ್ರೆ ಸಾಕು. 5ಜಿ ಸಂಪರ್ಕದಿಂದ ಇದ್ದಲ್ಲಿಯೇ ಹಾಟ್ ಸ್ಪಾಟ್ ಸೃಷ್ಟಿ ಮಾಡಿ ಇಡೀ ಜಗತ್ತಿಗೆ ನಾವು ಇಂಟರ್ ನೆಟ್ ದಾತರಾಗಬಹುದು....

23)   ಹಿಂದೆ ನಮ್ಮ ಧ್ವನಿ ನಾವೇ ಮತ್ತೆ ಕೇಳಲು ಟೇಪ್ ರೆಕಾರ್ಡರ್ ಬೇಕಾಗಿತ್ತು. ಮತ್ತೆ ವಾಕ್ ಮ್ಯಾನ್ ಬಂತು... ಮತ್ತೆ ಪೆನ್ ಡ್ರೈವ್ ಮಾದರಿ ವಾಯ್ಸ್ ರೆಕಾರ್ಡರ್ ಡಿವೈಸ್ ಗಳು ಬಂದವು. ಈಗ ಮೊಬೈಲ್ ಇದ್ರೆ ಮತ್ತೆಂತ ಸಹ ಬೇಕಾಗಿಲ್ಲ. ಮೊಬೈಲಿನಲ್ಲೇ ವಾಯ್ಸ್ ರೆಕಾರ್ಡ್ ಕೂಡಾ ಮಾಡಬಹುದು, ತಕ್ಷಣ ಕೇಳಬಹುದು, ಎಡಿಟ್ ಸಹ ಮಾಡಬಹುದು. ಹಾಡು ಕೇಳಲು ಮೊಬೈಲ್ ಇದ್ರೆ ಸಾಕು. ಲಕ್ಷಗಟ್ಟಲೆ ಹಾಡು ಕೇಳಬಹುದು. ಟೇಪ್ ರೆಕಾರ್ಡರ್, ವಾಕ್ ಮ್ಯಾನ್ ಯಾವುದೂ ಬೇಕಾಗಿಲ್ಲ.

24)   ಹಿಂದೆ ಮನೆಗೆ ಸಿಸಿ ಟಿವಿ ಸಂಪರ್ಕ ಇದ್ದರೆ, ಅದರ ಮೆಮೊರಿಗೆ ಹೋಗಿ ದೃಶ್ಯಗಳನ್ನು ಪರೀಕ್ಷೆ ಮಾಡಬೇಕಿತ್ತು. ಈಗ ಹಾಗೆಯಾ... ಮನೆಯಲ್ಲಿ ಸಿಸಿ ಕೆಮರಾ ಇದ್ದರೆ ನೇರ ಅದರ ಸಂಪರ್ಕ ನಿಮ್ಮ ಮೊಬೈಲಿಗೆ ಲೈವ್ ಆಗಿ ಸಿಗ್ತದೆ. ಮಾತ್ರವಲ್ಲ, ಟೂವೇ ಕಮ್ಯೂನಿಕೇಶನ್ ಮೂಲಕ ನಾವು ಇದ್ದಲ್ಲಿಂದಲೇ ಸಿಸಿ ಕ್ಯಾಮೆರಾ ಮೂಲಕ ಮನೆಯವರ ಜೊತೆ ಮಾತನಾಡಬಹುದು!

25)   ಹೆಂಗಸರಿಗೆ ಆಗಾಗ ಲಿಪ್ ಸ್ಟಿಕ್ಕು ಪರಿಸ್ಥಿತಿ ನೋಡಲು, ಮೇಕಪ್ಪು ಪರೀಕ್ಷೆ ಮಾಡಲು, ಗಂಡಸರ ಕ್ರಾಪ್ ಸರಿ ಉಂಟ ಅಂತ ನೋಡಲು ಅಂಗೈ ಕನ್ನಡಿ ಬೇಕಾಗಿತ್ತು. ಈಗ ತುಂಬ ಸುಲಭ, ಸೆಲ್ಫೀ ಕೆಮರಾ ಓನ್ ಮಾಡಿದರೆ ಸಾಕು, ನಮ್ಮ ಮುಸುಡನ್ನು ಇರುವುದಕ್ಕಿಂತ ಚಂದ ಮಾಡಿ ಮೊಬೈಲೇ ತೋರಿಸುತ್ತದೆ. ಅಲ್ಲಿಗೆ ಕನ್ನಡಿಗೂ ಕೆಲಸ ಇಲ್ಲದ ಹಾಗಾಯ್ತು...

ಸ್ನೇಹಿತರೇ ಪಟ್ಟಿ ಮಾಡುತ್ತಾ ಹೋದರೆ ಇನ್ನೂ ತುಂಬ ಸಂಗತಿಗಳು ಸಿಕ್ಕಾವು. ಗೂಗಲ್ ಮ್ಯಾಪು, ಸ್ಪೀಡೋಮೀಟರ್, ವೀಡಿಯೋ ಎಡಿಟರ್, ಡಿಎಲ್, ಆರ್ ಸಿ ಸ್ಟೋರ್ ಮಾಡಿಡುವ ಡಿಜಿಲಾಕರ್, ಮೆಸೆಂಜರ್, ಫೇಸ್ಬುಕ್ಕು, ವಾಟ್ಸಪ್.... ಹೀಗೆ ಸಾವಿರ ಸಾವಿರ ವ್ಯವಸ್ಥೆಗಳಿವೆ. ಒಂದು ಮೊಬೈಲು... ಎರಡು ದಶಕಗಳಲ್ಲಿ ಎಷ್ಟೊಂದು ಸಂಗತಿಗಳನ್ನು ಬದಿಗೆ ಸರಿಸಿತು ನೋಡಿ. ಎಷ್ಟೊಂದು ಸಲಕರಣೆಗಳು ಈಗ ನಿರ್ಜೀವ ಆಗಿವೆ ನೋಡಿ. ಎಷ್ಟೊಂದು ಸಲಕರಣೆಗಳು ಕೆಲಸ ಕಳೆದುಕೊಂಡವು ನೋಡಿ. ಮೊಬೈಲಿನ ಭಾವನಾತ್ಮಕ ಪರಿಣಾಮ ಬಗ್ಗೆ ಬರೆದರೆ ಇನ್ನೊಂದು ಕಾದಂಬರಿಯನ್ನೇ ಬರೆಯಬಹುದು. ಈಗ 25 ಪಾಯಿಂಟುಗಳು ಸಾಂಕೇತಿಕ ಎಷ್ಟೇ... 26ನೇ ಪಾಯಿಂಟು ನಿಮಗೆ ಸಿಕ್ಕರೆ ದಯವಿಟ್ಟು ಕಮೆಂಟಿಸಿ... ಮೊಬೈಲಿಗೆ ಜಯವಾಗಲಿ!

-ಕೃಷ್ಣಮೋಹನ ತಲೆಂಗಳ (03.01.2025)

No comments:

Popular Posts