ಶತಮಾನ ಬದಲಾದರೂ ಸ್ಕೂಲ್ಡೇ ಮರೆಯಲಾಗದ ಬಾಲ್ಯದ ಅನುಭೂತಿ... I SCHOOLDAY

 




ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದಿರಲಿ, ಮನರಂಜನೆಗೆ ಸಾವಿರ ಹೊಸ ದಾರಿ ಹುಟ್ಟಿಕೊಂಡಿರಲಿ, ಬಾಲ್ಯದಲ್ಲಿ ಸ್ಕೂಲ್ಡೇ ಕೊಟ್ಟ, ಕೊಡುವ ಥ್ರಿಲ್ಲಿಗೆ ಎಣೆ ಮಿಗಿಲಿಲ್ಲ.

ಇವತ್ತಿಗೂ ಮಕ್ಕಳು ಸ್ಕೂಲ್ಡೇಗೆ ಕಾಯ್ತಾರೆ, ಸ್ಕೂಲ್ಡೇ ಖುಷಿಯನ್ನು ಪೂರ್ತಿಯಾಗಿ ಅನುಭವಿಸ್ತಾರೆ, ಸ್ಕೂಲ್ಡೇಯನ್ನು ಮೆಲುಕು ಹಾಕ್ತಾರೆ, ಯಾಕೆ.... ಸ್ಕೂಲ್ಡೇಗೆ ಹೋದ ಹೆತ್ತವರು ತಮ್ಮ ಸ್ಕೂಲ್ ಡೇಸ್ ಗಳ ಕುರಿತು ಮಾತನಾಡ್ತಾರೆ. ಬಾಲ್ಯದ ಮುಗ್ಧತೆ, ನಿಸ್ವಾರ್ಥ ನಿರೀಕ್ಷೆ, ಖುಷಿಯನ್ನು ಪೂರ್ತಿಯಾಗಿ ಅನುಭವಿಸಲು ಸಾಧ್ಯವಾಗುವ ನಿಷ್ಕಲ್ಮಶ ಉತ್ಸಾಹಗಳು ಸ್ಕೂಲ್ಡೇಯನ್ನು ಒಂದು ಚಂದದ ದಿನವಾಗಿ ಕಟ್ಟಿಕೊಡ್ತದೆ. ಸ್ವರೂಪ ಬದಲಾದರೂ ಇಂದಿಗೂ ಸ್ಕೂಲ್ಡೇಗೆ ತನ್ನದೇ ಆದ ಟಿಆರ್ಪಿ ಇದ್ದೇ ಇದೆ!

ನಮ್ಮ ಬಾಲ್ಯದ ಸ್ಕೂಲ್ಡೇ ಮತ್ತು ಈಗಿನ ಇಂಗ್ಲಿಷ್ ಮಾಧ್ಯಮ ಶಾಲೆಗಳ (ಕನ್ನಡ ಸಹಿತ) ಸ್ಕೂಲ್ಡೇಗೆ ತುಂಬ ವ್ಯತ್ಯಾಸಗಳಿವೆ. ಆಗ ಸ್ಕೂಲ್ಡೇ ಎಂದರೆ ತಿಂಗಳ ಮೊದಲೇ ಸಿದ್ಧತೆ ಶುರು... ಡ್ಯಾನ್ಸು, ನಾಟಕ ಎಲ್ಲ ಟೀಚರುಗಳು, ಮಾಷ್ಟ್ರುಗಳೇ ಕಲಿಸುವುದು. ಮೈದಾನ ಸರಿ ಮಾಡುವುದು, ತೋರಣ ಕಟ್ಟುವುದು, ಪರದೆ ರೆಡಿ ಮಾಡುವುದು, ಡ್ಯಾನ್ಸ್ ಪ್ರಾಕ್ಟೀಸ್, ನಾಟಕ ಪ್ರಾಕ್ಟೀಸ್, ಸ್ಚೇಜ್ ಪ್ರಾಕ್ಟೀಸ್... ಲಕ್ಕಿಡಿಪ್ ಮಾರುವುದು, ಪ್ರೈಸ್ ಪೊಟ್ಟಣ ಕಟ್ಟುವುದು, ಸ್ಪೋರ್ಟ್ಸ್ ಡೇಗೆ ರೆಡಿ ಆಗುವುದು, ಸ್ಪರ್ಧೆಗಳಿಗೆ ಹೆಸರು ಕೊಡುವುದು, ಹೊಸ ಡ್ರೆಸ್ ರೆಡಿ ಮಾಡುವುದು.... ಭಯಂಕರ ಸಿದ್ಧತೆ, ಅಷ್ಟೂ ದಿನ ಕ್ಲಾಸಿಲ್ಲ ಅನ್ನುವುದೂ ಖುಷಿ. ಆಗ ಸ್ಕೂಲ್ಡೇಗೆ ನಾಟಕ, ಯಕ್ಷಗಾನ ಎಲ್ಲ ಕಡ್ಡಾಯದ ಹಾಗೆ. ಮತ್ತೆ ಈಗಿನಂತೆ ನಿರ್ಬಂಧಗಳೂ ಇರಲಿಲ್ಲ. ಬಹುತೇಕ ಸ್ಕೂಲ್ಡೇ ರಾತ್ರಿಯಿಂದ ಬೆಳಗ್ಗಿನ ತನಕ ಆಗ್ತಾ ಇತ್ತು... ಯಾವ ಆತಂಕ ಇರಲಿಲ್ಲ. ಟಿ.ವಿ., ಮೊಬೈಲುಗಳೇ ಇಲ್ಲದ ಆ ಕಾಲದಲ್ಲಿ ಮನರಂಜನೆಗೆ ಒಂದು ವಾಹಕವೂ ಆಗಿದ್ದ ಸ್ಕೂಲ್ಡೇಗೆ ಊರಿನ ಅಷ್ಟೂ ಜನ ಬಂದು ಚಂದಗಾಣಿಸಿಕೊಡ್ತಾ ಇದ್ರು...

ಈಗಿನ ಹಾಗೆ ವೃತ್ತಿಪರ ಕೊರಿಯೋಗ್ರಾಫರ್ ಗಳು ಆಗ ಶಾಲೆಗೆ ಬಂದು ಡ್ಯಾನ್ಸ್ ಕಲಿಸ್ತಾ ಇದ್ದದ್ದಲ್ಲ. ಶಾಲೆಯ ಟೀಚರುಗಳೇ ತಮ್ಮ ಇತಿಮಿತಿಯಲ್ಲಿದ್ದ ಸ್ಟೆಪ್ಪುಗಳನ್ನು ಕಲಿಸ್ತಾ ಇದ್ದದ್ದು... ಈಗ ನೋಡಿ ಬಹುತೇಕ ಎಲ್ಲ ಶಾಲೆಗಳ ಸ್ಕೂಲ್ಡೇಗಳಲ್ಲಿ ಬಳಸುವ ಹಾಡು, ಮಾಡುವ ನೃತ್ಯಗಳಲ್ಲಿ ಸಾಮ್ಯತೆ ಇದೆ, ಯಾಕೆಂದರೆ ಒಂದು ಏರಿಯಾದ ಬಹುತೇಕ ಶಾಲೆಗಳಲ್ಲಿ ನಿರ್ದಿಷ್ಟ ಕೊರಿಯೋಗ್ರಫ ರ್ ಗಳೇ ಪ್ರಾಕ್ಟೀಸ್ ಮಾಡಿಸ್ತಾರೆ. ಆಗಿನ ಸಾಮಾನ್ಯ ಸ್ಕೂಲ್ಡೇ ಪ್ರೋಟೊಕಾಲ್ ಹೀಗೆ ಇರ್ತಾ ಇತ್ತು.

1)      ಸಭಾ ಕಾರ್ಯಕ್ರಮ

2)      ಬಹುಮಾನ ವಿತರಣೆ

3)      ಸ್ವಾಗತ ನೃತ್ಯ

4)      ಪೂಜಾ ನೃತ್ಯ

5)      ಕೊರವಂಜಿ ನೃತ್ಯ

6)      ಸಾರಿ ಡ್ಯಾನ್ಸ್

7)      ಡಂಬೆಲ್ಸ್

8)      ಕೋಲಾಟ

9)      ಪ್ರೈಮರಿ ಹುಡುಗಿಯರ ನಾಟಕ

10)   ಹುಡುಗರ ನಾಟಕ

11)   ಹಳೆ ವಿದ್ಯಾರ್ಥಿಗಳ ನಾಟಕ

12)   ಯಕ್ಷಗಾನ (ಆಪ್ಶನಲ್)

ಇಷ್ಟೆಲ್ಲ ಆಗುವಾಗ ಬೆಳಗಾಗುತ್ತಿತ್ತು. ಶ್ರದ್ಧೆಯಿಂದ, ಆಸಕ್ತಿಯಿಂದ ಮಾಷ್ಟ್ರುಗಳು, ಟೀಚರುಗಳು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರೆಲ್ಲ ದೊಡ್ಡ ಹಬ್ಬದ ಮಾದರಿಯಲ್ಲಿ ಸ್ಕೂಲ್ಡೇಗೆ ದಿನಗಟ್ಟಲೆ ತಯಾರಿ ಮಾಡುತ್ತಿದ್ದೆವು.

ಸ್ಟೇಜ್ ಕೂಡಾ ಹಾಗೆಯೇ... ಈಗಿನ ಹಾಗೆ ಪರದೆರಹಿತ ಅಲ್ಲ... ಪರದೆ ಕಟ್ಟಿಯೇ ಸ್ಕೂಲ್ಡೇ ಆಗಬೇಕು. ಸ್ಕೂಲ್ಡೇ ಆಗಬೇಕಾದರೆ 1) ಪರದೆಯವರು, 2) ಮೇಕಪ್ಪಿನವರು, 3) ಮ್ಯೂಸಿಕ್ಕಿನವರು (ಕೀಬೋರ್ಡ್, ತಬಲಾ), 4) ಮೈಕ್ ಮತ್ತು ಬೆಳಕಿನವರು... ಇಷ್ಟು ಮಂದಿ ಬೇಕೇ ಬೇಕು....

ಪರದೆ ಕಟ್ಟಲು, ಪರದೆ ಎಳೆಯಲು ಸಹ ಉದ್ದುದ್ದದ ಹುಡುಗರು ಬೇಕು. ತುಂಬ ಮಂದಿಗೆ ಅದು ಹೆಮ್ಮೆಯ ವಿಷಯವೂ ಆಗಿತ್ತು...

ಪರದೆಗೆ ಕಟ್ಟಲೂ ಒಂದು ಶಿಷ್ಟಾಚಾರ ಇರ್ತಾ ಇತ್ತು

1)      ಎದುರು ಕೆಂಪಿನ ಪರದೆ, ಎದನ್ನು ಎರಡೂ ಪಕ್ಕದಿಂದ ಇಬ್ಬರು ಎಳೆದು ತಂದು ಮಧ್ಯದಲ್ಲಿ ಜೋಡಿಸುವುದು. ಇದು ಆರಂಭದಲ್ಲಿ ತೆಗೆದರೆ ಮತ್ತು ಕೊನೆಗೆ ಮುಚ್ಚಲು ಎರಡೇ ಸಲ ಬಳಕೆ ಆಗುವುದು. ನಡುವೆ ಸಭಾ ಕಾರ್ಯಕ್ರಮ ಮುಗಿದು ಮನರಂಜನೆ ಶುರು ಆಗುವಾಗ ಒಮ್ಮೆ ಹಾಕುತ್ತಿದ್ದರು ಅಂತ ನೆನಪು

2)      ಅದರ ಹಿಂದೆ ಬೀದಿ ದೃಶ್ಯದ ಪರದೆ... ಕಾಮಿಡಿ ಸೀನುಗಳೆಲ್ಲ ಅಗುವುದು ಇದರಲ್ಲೇ. ಇದು ಸ್ಟೇಜಿನ ತುತ್ತತುದಿಯಲ್ಲಿ ಇರ್ತಾ ಇದ್ದದ್ದು... ಈ ಪರದೆಗಳು ಹಗ್ಗದಲ್ಲಿ ಎಳೆದಾಗ ಸ್ಟ್ರಕ್ ಆಗಿ, ನಂತರ ಕೈಯ್ಯಲ್ಲೇ ದರದರನೆ ಎಳೆದುಕೊಂಡು ಹೋಗುವ ದೃಶ್ಯ ವರ್ಣನಾತೀತ.

3)      ಅದರ ಹಿಂದೆ ಗಾರ್ಡನ್ (ನಾಟಕದ ಡ್ಯೂಯೆಟ್ ಸಾಂಗುಗಳು ಆಗುವುದು ಅದೇ ಪರದೆ ಎದುರು..) ನೈಜತೆ ತರಲು ಮರದ ಗೆಲ್ಲುಗಳನ್ನು ಪರದೆ ಹಿಂದೆ ನಿಂತು ಕೆಲವರು ಅಲ್ಲಾಡಿಸುವುದು, ಹೂವಿನ ಕುಂಡ ಇಡುವುದು... ನಡು ನಡುವೆ ಪಕ್ಕದಿಂದ ಹೊಗೆ ಬರುವುದು ಇವೆಲ್ಲ ಒಂದು ಭ್ರಾಮಕ ಲೋಕವನ್ನೇ ಸೃಷ್ಟಿಸ್ತಾ ಇತ್ತು

4)      ಅದರ ಹಿಂದೆ ಅರಮನೆ... ಕಮಾನು, ಕಮಾನು ದೃಶ್ಯಗಳ ಅರಮನೆ ಪರದೆ ನಡುವೆ ಸಿಂಹಾಸನ...

5)      ಕೊನೇಗೆ... ಕಾಡು ಅಥವಾ ಅರಣ್ಯ...

ಎಲ್ಲ ನಾಟಕಗಳೂ ಈ ನಾಲ್ಕು ಪರದೆಯ ಆಧಾರದಲ್ಲೇ ನಡೆಯುತ್ತಿದ್ದದ್ದು. ಆಗ ಸಿಡಿ, ಪೆನ್ ಡ್ರೈವ್ ಇರಲಿಲ್ಲ. ನಾಟಕಗಳ ಹಾಡುಗಳನ್ನು ಲೈವ್ ಹಾಡಬೇಕಿತ್ತು. ಮ್ಯೂಸಿಕ್ಕಿನವರು ಸ್ಟೇಜಿನ ಎದುರು ಕೂತಿರುತ್ತಿದ್ದರು. ಕೀಬೋರ್ಡ್, ತಬಲಾ ಪ್ಲೇ ಎಲ್ಲ ಲೈವ್, ಬೆಳಗ್ಗಿನ ವರೆಗೆ ಆ ಚಳಿಯಲ್ಲಿ ಕೂರಬೇಕು. ಹೆಚ್ಚೆಂದರೆ ಕ್ಯಾಸೆಟ್ ಇತ್ತು. ಕ್ಯಾಸೆಟ್ ಹಾಕಿ ಡ್ಯಾನ್ಸ್ ಮಾಡುವಾಗ ಕ್ಯಾಸೆಟ್ ಸೈಡ್ ಬದಲಾಗುವುದು, ರೀಲು ಸಿಕ್ಕಾಕಿಕೊಳ್ಳುವುದು... ಯಭಾ ಭಯಂಕರ ಗಮ್ಮತು ಇರ್ತಾ ಇತ್ತು.

ಮ್ಯೂಸಿಕ್ ಸೆಟ್ಟಿನಲ್ಲಿರುವ ಗಾಯಕರು ಲೈವ್ ಹಾಡುವಾಗ ನಾಟಕದ ಹೀರೋ, ಹೀರೋಯಿನ್ ಬಾಯಿ ಅಲ್ಲಾಡಿಸಿ ನಟಿಸುವುದು. ಡ್ಯಾನ್ಸ್ ಗೆ ಕೊನೆಯ ಒಂದೆರಡು ದಿನ ಮಾತ್ರ ಪ್ರಾಕ್ಟೀಸ್ ಆಗಿರುವುದರಿಂದ ಅದರಲ್ಲಿ ಲಿಪ್ ಸಿಂಕಿಂಗ್ ಪ್ರಶ್ನೆಯೇ ಇರಲಿಲ್ಲ... ಎಲ್ಲಕ್ಕಿಂತ ಹೆಚ್ಚಾಗಿ ಆಗಾಗ ಡೈಲಾಗ್ ಮರೆಯುವುದು. ಪರದೆಯ ಸೈಡ್ ವಿಂಗ್ ಹಿಂದೆ ನಿಂತಿರುವ ಮಾಷ್ಟ್ರು ಯಾನೆ ನಿರ್ದೇಶಕರು ಸ್ಕ್ರಿಪ್ಟ್ ಪ್ರಾಂಪ್ಟ್ ಮಾಡುವುದು, ಆ ಪ್ರಾಂಪ್ಟಿಂಗ್ ಸ್ಟೇಜಿನ ಮೇಲೆ ನೇತಾಡುವ ಮೈಕ್ ಸಹಾಯದಿಂದ ಇಡೀ ಸಭೆಗೆ ಕೇಳುವುದು... ಇದನ್ನೆಲ್ಲ ಜನ ಅಡ್ಜಸ್ಟ್ ಮಾಡಿಕೊಂಡು ನಾಟಕ ನೋಡ್ತಾ ಇದ್ರು... ಕಾಮಿಡಿಗೆ ನಗುವುದು, ಟ್ರಾಜೆಡಿಗೆ ಅಳುವುದು ಸಹ ಆಗಿನ ತಲ್ಲೀನತೆಯನ್ನು ತೋರಿಸ್ತಾ ಇತ್ತು.

ಬಹುತೇಕ ಅಷ್ಟುದ್ದ ಮೈದಾನ ಜನರಿಂದ ತುಂಬಿರ್ತಾ ಇತ್ತು. ಈಗಿನ ಹಾಗೆ ಮೇಲೆ ಶಾಮಿಯಾನ, ಕೂರಲು ಕುರ್ಚಿ ಸಹ ಇರಲಿಲ್ಲ. ಸಣ್ಣ ಮಕ್ಕಳೆಲ್ಲ ಎದುರು ಟಾರ್ಪಲಿನ್ ಮೇಲೆ, ಪೋಷಕರಿಗೆ ಶಾಲೆಯ ಬೆಂಚು ಅಷ್ಟೇ ಕೂರಲು. ಆ ಚಳಿಯಲ್ಲಿ, ಆ ಬೆಂಚಿನಲ್ಲಿ ಇಡೀ ರಾತ್ರಿ ಕುಳಿತು ತಾಳ್ಮೆಯಿಂದ ಸ್ಕೂಲ್ಡೇ ನೋಡ್ತಾ ಇದ್ದೆವು.

ರಾತ್ರಿ 9, 10 ಗಂಟೆಗೆ ನಮ್ಮ ಡ್ಯಾನ್ಸು, ನಮ್ಮ ನಾಟಕಕ್ಕೆ ಎಂಟ್ರಿ ಆದರೂ ಸಂಜೆ 5,6 ಗಂಟೆಗೇ ನಮಗೆ ಮೇಕಪ್ ಮಾಡ್ತಾ ಇದ್ದದ್ದು. ನಡುವೆ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ಇದ್ದರೂ     ಮೇಕಪ್ ಅರ್ಧದಲ್ಲಿದ್ದರೆ ಹೋಗುವ ಹಾಗೇ ಇಲ್ಲ. ಮಾತ್ರವಲ್ಲ, ಮೇಕಪ್ ಮುಗಿದರೆ ಅದೇ ವೇಷದಲ್ಲೇ ಹೋಗಿ ಬಹುಮಾನ ತಕ್ಕೊಳ್ಳುವುದು ಸಹ ಗಮ್ಮತ್ತೇ ಹೌದು. ಆಗ ಬಹುಮಾನ ತಕ್ಕೊಳ್ಳುವಾಗ ಎದುರು ನಿಂತು ಪೋಷಕರು ಫೋಟೋ ತೆಗೆಯಲು ಅವರಲ್ಲಿ ಮೊಬೈಲ್ ಇರಲಿಲ್ಲ. ಶಾಲೆಯ ವತಿಯಿಂದ ಫೋಟೋಗ್ರಾಫರ್ ಗಳನ್ನು ನೇಮಿಸಿದ್ದರೆ ಅವರು ಫೋಟೋ ತೆಗೆದ ಬಳಿಕ ಅವರಲ್ಲಿ ಅದೃಷ್ಟವಶಾತ್ ನಮ್ಮ ಫೋಟೋ ಇದ್ದರೆ ಅದಕ್ಕೆ 5 ರುಪಾಯಿ ಕೊಟ್ಟು ತೆಗೆದಿಟ್ಟುಕೊಳ್ಳಬೇಕು. ಎಲ್ಲರ ಹತ್ರವೂ 5 ರುಪಾಯಿ ಕೊಟ್ಟು ಫೋಟೋ ತೆಗೆದಿಟ್ಟುಕೊಳ್ಳುವಷ್ಟು ದುಡ್ಡೂ ಇರಲಿಲ್ಲ.

ಸ್ಕೂಲ್ಡೇ ಗ್ರೌಂಡ್ ಸುತ್ತ ಚರ್ಮುರಿ, ಸುಕುಣಪ್ಪ, ಸೋಜಿ, ಕಡ್ಲೆ, ಪೋಡಿ ಚಹಾ ಸಂತೆಗಳು, ಬಲೂನ್ ಗಳ ಹಾರಾಟ, ಟ್ಯೂಬ್ ಲೈಟಿನ ಪ್ರಖರ ಬೆಳಕು... ಇವೆಲ್ಲ ಚಂದದ ಆಕರ್ಷಣೆಗಳು. ಈಗಿನ ಹಾಗೆ ಹತ್ತಾರು ಐಸ್ ಕ್ರ್ರೀಂ, ಪಾಪ್ ಕಾರ್ನ್ ವ್ಯಾನುಗಳು ಬರ್ತಾ ಇರಲಿಲ್ಲ. ಹೆಚ್ಚೆಂದರೆ ಬೆಲ್ಲ ಕ್ಯಾಂಡಿ, ದೂದ್ ಕ್ಯಾಂಡಿ ಮಾರುವ ಸೈಕಲ್ ನವರು ಬಂದಾರು ಅಷ್ಟೇ...

ಸ್ಕೂಲ್ಡೇ ದಿನ ಹೊಸ ಡ್ರೆಸ್ ಹಾಕುವುದು, ಬೆಳಗ್ಗೆ ಛದ್ಮವೇಷ ನೋಡಲಿಕ್ಕೆ ಹೋಗುವುದು ಕೂಡ ಖುಷಿಯೇ... .ಯಾವಾಗ ರಾತ್ರಿ ಆಗುವುದಿಲ್ಲ ಎಂಬ ಭಯಂಕರ ಚಡಪಡಿಕೆ, ಮನೆಯವರು ಲೇಟ್ ಮಾಡ್ತಾ ಇದ್ದಾರೆ ಎಂಬ ಅಸಹನೆ ಬೇರೆ... ಬ್ಯಾಡ್ಜ್ ಸಿಕ್ಕಿಸಿ ವಾಲ್ಯಂಟೀಯರ್ (ಈಗಲೂ ಈ ಪದ ಸರಿಯಾಗಿ ಹೇಳಲು ಬರುವುದಿಲ್ಲ!) ಒಂಗು ಗ್ರೇಡ್ ಎಂಬ ಭಾವನೆಯೂ ಇತ್ತೇನೋ ಆಗ. ಬೆಂಚು ಇಡುವುದು, ಪರದೆ ಎಳೆಯುವುದು, ಪೋಷಕರಿಗೆ ಸೀಟು ಮಾಡಿ ಕೊಡುವುದು, ಬಹುಮಾನ ವಿತರಣೆ ಆಗುವಾಗ ಕೈ ಕೈ ದಾಟಿಸಿ ಬಹುಮಾನದ ಪೊಟ್ಟಣ ಸ್ಟೇಜ್ ವರೆಗೆ ತಲುಪಿಸುವುದು... ಕಸ ಹೆಕ್ಕುವುದು... ಹೀಗೆ ಭಯಂಕರ ಜವಾಬ್ದಾರಿಗಳೂ ಇದ್ದವು.

ಆಗ ಬಹುತೇಕರಲ್ಲಿ ಸ್ವಂತ ವಾಹನ ಇಲ್ಲದ ಕಾರಣ, ಈಗಿನ ಹಾಗೆ ರಾತ್ರಿ ಅರ್ಧದಲ್ಲಿ ಎದ್ದು ಮನೆಗೆ ಹೋಗಲು ಸುಲಭ ಇರಲಿಲ್ಲ. ಆದ್ದರಿಂದ ನಡುನಡುವೆ ನಿದ್ರೆ ತೂಗಿದರೂ ಸರಿ, ಬೆಳಗ್ಗಿನ ವರೆಗೆ ಇದ್ದೇ ಹೋಗುತ್ತಿದ್ದೆವು. ಹೇಗೂ ಮರುದಿನ ರಜೆ. ಅದರ ಮರುದಿನ ಬಂದು ಗ್ರೌಂಡಿನಿಂದ ಕಸ ಹೆಕ್ಕಬೇಕು ಎಂಬುದು ಬಾಕ್ಸ್ ಐಟಂ!

ಸಾಮಾನ್ಯವಾಗಿ ನಮ್ಮ ಮೇಷ್ಟ್ರುಗಳೇ ನಾಟಕ ಪ್ರಾಕ್ಟೀಸ್ ಮಾಡಿಸುತ್ತಿದ್ದರು. ನಾಟಕ ಪುಸ್ತಕ ಕೊಟ್ಟು, ಪಾತ್ರ ಹಂಚಿಕೆ ಆದ ಬಳಿಕ ಅವರವ ಡೈಲಾಗುಗಳನ್ನು ಅವರವರೇ ನೋಟ್ಸ್ ಪುಸ್ತಕದಲ್ಲಿ ಬರೆದಿಡಬೇಕು. ನಂತರ ಬಾಯಿಪಾಠ ಮಾಡಬೇಕು. ನಂತರ ದಿನಾ ಪ್ರಾಕ್ಟೀಸ್ ಮಾಡಿ ಅಭಿನಯ ಕಲಿಯಬೇಕು.... ನನಗೆ ಭಾರತೀ ಶಾಲೆಯಲ್ಲಿ 5ನೇ ಕ್ಲಾಸಿನಲ್ಲಿ ವಾಲ್ಮೀಕಿ, 6ನೇ ಕ್ಲಾಸಿನಲ್ಲಿ ಸಂಗೊಳ್ಳಿ ರಾಯಣ್ಣ ಹಾಗೂ 7ನೇ ಕ್ಲಾಸಿನಲ್ಲಿ ರಾವಣನ ಪಾತ್ರಕ್ಕೆ ಪುಟಗಟ್ಟಲೆ ಡೈಲಾಗ್ ಬಾಯಿಪಾಠ ಮಾಡಿದ್ದು ಈಗಲೂ ನೆನಪಿದೆ.

ಆ ಮೇಕಪ್ಪು, ಮೀಸೆ, ಗಮ್ ನ ವಿಚಿತ್ರ ವಾಸನೆ, ಹೊಳೆಯುವ ಕಾಸ್ಟ್ಯೂಮ್, ಲಿಪ್ ಸ್ಟಿಕ್ಕು, ಬಿಗಿಯುವ ವಿಗ್ಗು, ಸ್ಟೀಲಿನ ಖಡ್ಗ, ವೇದಿಕೆ ಎದುರಿನ ಪ್ರಖರ ಬೆಳಕು, ಅಪಾರ ಜನಸ್ತೋಮ, ವಿಚಿತ್ರ ನಿಶ್ಯಬ್ಧ ಎಲ್ಲ ಸ್ಟೇಜ್ ಹತ್ತಿದಾಗ ನಮ್ಮನ್ನು ಕಕ್ಕಾಬಿಕ್ಕಿ ಆಗಿಸುತ್ತಿತ್ತು. ಬರುವ ಡೈಲಾಗೂ ಮರೆತು ಹೋಗುತ್ತಿತ್ತು... ನಾಟಕ, ಡ್ಯಾನ್ಸ್ ಆಗುವಾಗ ನಮಗಿಂತ ಜಾಸ್ತಿ ನಮಗೆ ಕಲಿಸಿದ ಟೀಚರ್ಸ್ ಟೆನ್ಶನ್ ಮಾಡಿಕೊಂಡು ಚಡಪಡಿಸುತ್ತಿದ್ದರು. ನಾಟಕಕ್ಕಿಂತ ಮೊದಲು ನಿರೂಪಣೆಗೆಂದೇ ವಿಶೇಷವಾಗಿ ಪ್ರಸಿದ್ಧರಾಗಿದ್ದ ಮೇಷ್ಟ್ರುಗಳು ಉಚ್ಛ ಸ್ಥಾಯಿಯಲ್ಲಿ ನಮ್ಮ ಹೆಸರುಗಳನ್ನು ಉದ್ಘೋಷಿಸುವುದು ತುಂಬ ಹೆಮ್ಮೆಯ ಸಂಗತಿ ಆಗಿತ್ತು.... ಉದ್ಘೋಷಣೆಗೆ ಪೂರಕ ಕೀಬೋರ್ಡ್ ಪ್ಲೇ ಆಗುವಾಗ ಅದೊಂದು ಸಿನಿಮೀಯ ಎಫೆಕ್ಟ್ ಕೊಡ್ತಾ ಇತ್ತು!

ಈಗಿನ ಹಾಗೆ ಪೂರ್ಣ ಪ್ರಮಾಣದಲ್ಲಿ ರೆಕಾರ್ಡ್ ಡ್ಯಾನ್ಸ್ ಬಂದಿರಲಿಲ್ಲ. ಹೆಚ್ಚಾಗಿ ಲೈವ್ ಹಾಡಿಕೊಂಡೇ ಡ್ಯಾನ್ಸ್... ಲೈವ್ ಮ್ಯೂಸಿಕ್, ಲೈವ್ ಸಂಭಾಷಣೆಗಳಿದ್ದದ್ದು. ಪ್ರೀ ರೆಕಾರ್ಡೆಡ್ ಕಾನ್ಸೆಪ್ಟ್ ಆಮೇಲೆ ಬಂತು... ಬಹುಶಃ 1990ರ ದಶಕದ ಬಳಿಕ. ಒಂದು ಕಾಲದಲ್ಲಿ ಎಆರ್ ರೆಹಮಾನ್ ಅವರ ಮುಕ್ಕಾಲ….. ವಟ್ಟ ಗಟ್ಟಿ ಕಟ್ಟಿಕ್ಕೊ... ಊರ್ವಶಿ.. ಊರ್ವಶಿ... ಮತ್ತಿತರ ಹಾಡಿಗೆ ಡ್ಯಾನ್ಸ್ ಇಲ್ಲದ ಸ್ಕೂಲ್ಡೇ ನಮ್ಮೂರಲ್ಲಿ ನಡೆದೇ ಇರಲಿಕ್ಕಿಲ್ಲವೋ ಏನೋ...

ಮತ್ತೊಂದು ಹೇಳಲೇ ಬೇಕಾದ ಸಂಗತಿ ಲಕ್ಕಿಡಿಪ್ಪಿನದ್ದು. ಸ್ಕೂಲ್ಡೇ ಆಗಬೇಕಾದರೆ ಸಾವಿರಾರು ರುಪಾಯಿ ಖರ್ಚಿತ್ತು. ಶಾಲೆಯಲ್ಲಿ ಈಗಿನ ಹಾಗೆ ಸ್ಕೂಲ್ಡೇ ಫೀಸ್ ಅಂತ ವಸೂಲಿ ಮಾಡುತ್ತಿರಲಿಲ್ಲ. ಸಾವಿರಾರು ರುಪಾಯಿ ಡೊನೇಶನ್ ನೀಡುವಷ್ಟು ದುಡ್ಡೂ ಪೋಷಕರ ಹತ್ರ ಇದ್ದಿರಲಿಕ್ಕಿಲ್ಲ. ಅದಕ್ಕೆ ಮಾರ್ಗೋಪಾಯ ಲಕ್ಕಿಡಿಪ್ಪು. 10 ರಷೀದಿ ಹಾಳೆಗಳು ಇರುವ ಲಕ್ಕಿಡಿಪ್ ಪುಸ್ತಕವನ್ನು ಸಾಕಷ್ಟು ಮೊದಲೇ ಮಕ್ಕಳಿಗೆ ಕೊಟ್ಟು ಊರ, ಪರವೂರ ಮಹನೀಯರಿಗೆ, ನೆರೆಕರೆಯವರಿಗೆ ಚೊರೆ ಮಾಡಿ ಮಾರಾಟ ಮಾಡಿ ಅದರ ದುಡ್ಡು ಕ್ಲಾಸ್ ಟೀಚರಿಗೆ ಕೊಡಬೇಕು. ನಾವೆಲ್ಲ ಒಂದು ಪುಸ್ತಕದ ಹಾಳೆ ಖಾಲಿ ಮಾಡುತ್ತಿದ್ದದ್ದೇ ಕಷ್ಟದಲ್ಲಿ. ಕೆಲವರು 10-15 ಪುಸ್ತಕ ಮಾರಾಟ ಮಾಡಿ ಅತೀ ಹೆಚ್ಚು ಪುಸ್ತಕ ಖಾಲಿ ಮಾಡಿದ ಪ್ರಶಸ್ತಿಗೆ ಪಾತ್ರರಾಗುತ್ತಿದ್ದರು...! ಲಕ್ಕಿಡಿಪ್ಪಿಗೆ ಇದ್ದದ್ದು ಕೇವಲ 2 ಅಥವಾ 5 ರುಪಾಯಿ ಮುಖಬೆಲೆ.. ಇಂತಹ ವಾಣಿಜ್ಯ ವ್ಯವಹಾರವನ್ನೂ ಆಗಿನ ಸ್ಕೂಲ್ಡೇ ನಮಗೆ ಕಲಿಸ್ತಾ ಇತ್ತು...

ಸುಮಾರು ಮೂರು ದಶಕದ ಹಿಂದಿನ ನಮ್ಮ ಜೀವನ ಶೈಲಿ, ಆಗಿನ ತಂತ್ರಜ್ಞಾನ, ನಮಗಿದ್ದ ಆದಾಯ ಮೂಲಗಳು, ನಮ್ಮ ನಿರೀಕ್ಷೆಗಳು, ನಮಗಿದ್ದ ಸೀಮಿತ ಪ್ರಪಂಚಜ್ಞಾನ (ಈಗಲೂ ಹೆಚ್ಚೇನೂ ಇಲ್ಲ), ಮುಗ್ಧತೆ ಮತ್ತು ಅಲ್ಪತೃಪ್ತ ಬದುಕಿನಲ್ಲಿ ಸ್ಕೂಲ್ಡೇ ಎಂದರೆ ವರ್ಷದ ಜಾತ್ರೆ ಹಾಗೆ.... ತುಂಬ ಸಮಯ ಮೆಲುಕು ಹಾಕುವಷ್ಟು ನೆನಪುಗಳು... ಬರೆಯುತ್ತಾ ಕುಳಿತರೆ ಸ್ಕೂಲ್ಡೇ ಬಗ್ಗೆ ವಿಚಾರಗಳು ನೆನಪಾಗುತ್ತಲೇ ಇವೆ... ಲೇಖನ ಭಯಂಕರ ಉದ್ದ ಆಗ್ತದೆ... ಈಗಾಗಲೇ ಮಿತಿ ಮೀರಿದೆ... ನನಗೆ ಹೇಳಲು ಬಾಕಿ ಆದದ್ದು ಇದ್ದರೆ ನೀವು (ಕೊನೆ ತನಕ ಓದಿದ್ದರೆ) ಕಮೆಂಟ್ ಬಾಕ್ಸಿನಲ್ಲಿ ಕಮೆಂಟಿಸಿ.... ಆಗಬಹುದಲ್ವ?

-ಕೃಷ್ಣಮೋಹನ ತಲೆಂಗಳ (07.01.2025)

No comments:

Popular Posts