ಸೃಜನಶೀಲತೆ, ನಮ್ಮತನ, ಸೂಕ್ಷ್ಮತೆ ಮತ್ತಿತರ ಆದರ್ಶ... ಕುತೂಹಲವನ್ನೇ ಕಳೆದುಕೊಂಡ ನಿರ್ಜೀವ ಮನಸ್ಸು!
KRISHNA December 02, 2024ಭಾಷಣ ಮಾಡುವಾಗ ಟೇಬಲ್ಲಿಗೆ ಕುಟ್ಟಿ ಕುಟ್ಟಿ ಹೇಳುತ್ತೇವೆ “ಸೃಜನಶೀಲತೆ ಉಳಿಯಬೇಕು, ಸೂಕ್ಷ್ಮಪ್ರಜ್ಞೆ ಬೆಳೆಸಬೇಕು, ನಮ್ಮತನ ಕಾಪಾಡಿಕೊಳ್ಳಬೇಕು, ನಾವು ನಾವಾಗಿ ಯೋಚಿಸಬೇಕು...” ಅಂತೆಲ್ಲ. ಇಂತಹ ಲೇಖನಗಳಲ್ಲಿ, ಸ್ಟೇಟಸ್ಸುಗಳಲ್ಲೂ ಇಂಥದ್ದೆ ಉಪದೇಶಗಳನ್ನು ಎಷ್ಟು ಕಠೋರವಾಗಿ ಬರೆಯುತ್ತೇವೆ... “ನಾವು ನಾವೇ ಆಗಿರೋಣ, ಸರಿ ಅನ್ಸಿದ್ದನ್ನೇ ಮಾಡೋಣ ಅಂತೆಲ್ಲ...” ಕೇಳುವುದಕ್ಕೂ, ಆಲಿಸುವುದಕ್ಕೂ ಅಂತಹ ಸಾಲುಗಳು ಎಷ್ಟು ಖುಷಿ ಕೊಡ್ತವೆ ಅಲ್ವ?
ಆದರೆ, ಸುಮ್ಮನೆ ಯೋಚಿಸಿ...
ಸೃಜನಶೀಲತೆ ಬೆಳೆಸಿಕೊಳ್ಳುವ ಮಾತು ಬದಿಗಿರಲಿ... ನಾವೆಷ್ಟರ ಮಟ್ಟಿಗೆ ಕುತೂಹಲ, ಆಸಕ್ತಿ, ನಿರೀಕ್ಷೆ, ಸಂಕೋಚದ ಸ್ವಭಾವಗಳನ್ನು ಉಳಿಸಿಕೊಂಡಿದ್ದೇವೆ. 20-30 ವರ್ಷಗಳ ಹಿಂದೆ ನಮ್ಮೊಳಗಿದ್ದ ಮಾನವ ಸಹಜ ಸ್ವಭಾವಗಳೆಲ್ಲ ಕ್ರಮೇಣ... ನಿಧಾನವಾಗಿ ಕುಸಿಯುವ ಭೂಶಿಖರದ ಹಾಗೆ ಕುಸಿಯುತ್ತಾ ಇದೆ. ನಮಗೇ ತಿಳಿಯದ ಹಾಗೆ ನಮ್ಮೊಳಗಿನ ಸೂಕ್ಷ್ಮಪ್ರಜ್ಞೆಗಳೂ ಸಾಯುತ್ತಾ ಬರುತ್ತಿವೆ. ಮಾನವ ಸಹಜವಾಗಿ ನಾವು ಬಾಲ್ಯದಲ್ಲಿ ಒಡಮೂಡಿಸಿದ್ದ ಕುತೂಹಲಗಳು, ಆಸಕ್ತಿಗಳು, ನಿರೀಕ್ಷೆಗಳು, ಸಂಕೋಚಗಳು, ಅಚ್ಚರಿಗಳು ನಮ್ಮನ್ನು ಕಾಡುವುದು, ನಾವದನ್ನು ಅಭಿವ್ಯಕ್ತಿಸುವುದು ಅತ್ಯಂತ ಕಡಿಮೆಯಾಗು ಬಂದಿದೆ. ಮನೆಗೆ ಬಂದ ಅತಿಥಿಯನ್ನು ಸ್ವಾಗತಿಸುವಾಗ ಪ್ರದರ್ಶಿಸುವ ಬಾಯ್ತುಂಬ ನಗುವಿನ ಹಾಗೆ ಎಲ್ಲ ಭಾವನೆಗಳೂ “ಪ್ರದರ್ಶಿಸುವದಕ್ಕೆ” ಸೀಮಿತವಾಗುತ್ತಿದೆ.
ಇದೊಂದು ಶಿಷ್ಟಾಚಾರವೋ, ಸಭಾ ಮರ್ಯಾದೆಯೇನೋ ಎಂಬಂತೆ ನಮ್ಮ ಭಾವಾಭಿವ್ಯಕ್ತಿ ಫಿಲ್ಟರ್ ಬಳಸಿ ತೆಗದ ಸೆಲ್ಫೀಯ ಹಾಗೆ ನಾಟಕವಾಗುತ್ತಿದೆ... ಮಾಡುವವನಿಗೂ, ನೋಡುವವನಿಗೂ ಅದು ಪೂರ್ತಿ ನಿಜವೇನಲ್ಲ ಅಂತ ಗೊತ್ತಿದ್ದರೂ ಕೆಟ್ಟ ಜೋಕಿಗೆ ಗಹಗಹಿಸಿ ನಗುವ ಹಾಗೆ ಎಲ್ಲರೂ ಅಡ್ಜಸ್ಟ್ ಮಾಡಿಕೊಂಡು ಮುಂದೆ ಹೋಗುತ್ತಿದ್ದೇವೆ... ಒಂದಷ್ಟು ಉದಾಹರಣೆ ನೀಡಿದರೆ ನಾನು ಹೇಳುವುದಕ್ಕೆ ಹೊರಟಿರುವುದು ನಿಮಗೂ ಸ್ಪಷ್ಟವಾದಿತೋ ಏನೋ...
1) ಬಾಲ್ಯದಲ್ಲಿ ನಮಗೆ ಬೇಲೂರು, ಹಳೆಬೀಡು, ಶ್ರವಣಬೆಳಗೊಳ, ಮೈಸೂರು ಅರಮನೆ ಎಲ್ಲ ಪಾಠ ಪುಸ್ತಕದಲ್ಲಿ ಕಾಣುವ ಕಪ್ಪು ಬಿಳುಪಿನ ಫೋಟೋದ ರೇಂಜಿಗೆ ಕಾಲ್ಪನಿಕ ಜಾಗಗಳಾಗಿದ್ದವು. ಶಾಲೆಯಿಂದ ಪ್ರವಾಸ ಹೋದಾಗಲಷ್ಟೇ ಆ ಜಾಗಗಳ ಅನುಭೂತಿ ಸಿಗುತ್ತಿತ್ತು... ಇವತ್ತು ಹಾಗಲ್ಲ, ಸಣ್ಣ ಜಲಪಾತಕ್ಕೆ ಹೋಗುವುದಾದರೂ ಗೂಗಲ್ಲಿನಲ್ಲಿ, ಯೂಟ್ಯೂಬಿನಲ್ಲಿ ನಾವು ಹೋಗಲಿರುವ ಜಾಗದ ಜನ್ಮ ಜಾಲಾಡಿರುತ್ತೇವೆ. ಕಮೆಂಟುಗಳನ್ನು, ರೇಟಿಂಗುಗಳನ್ನು ನೋಡುತ್ತೇವೆ. ಆ ಜಾಗದ ಬಗ್ಗೆ ಸಕಲವನ್ನೂ ತಿಳಿದುಕೊಂಡು ಭಯಂಕರ ನಿರೀಕ್ಷೆ ಇಟ್ಟುಕೊಂಡು ಅಲ್ಲಿಗೆ ಹೋಗಿ ದೊಡ್ಡ ಅಚ್ಚರಿಯೇನನ್ನೂ ಹೊಂದದೆ ವಾಪಸ್ ಬರುತ್ತೇವೆ. ಸ್ಥಳದಲ್ಲೇ ಕಾಣಸಿಗುವ ದಿಢೀರ್ ಅಚ್ಚರಿಗಳನ್ನು, ಹೊಸತುಗಳನ್ನು ಮೊದಲೇ ಗೂಗಲ್ಲಿನಲ್ಲಿ ಸಂಶೋಧಿಸಿ ಸಿಗಬಹುದಾದ ಥ್ರಿಲ್ಲುಗಳನ್ನು ನಾವೇ ಕೊಂದಿರುತ್ತೆವೆ.
2) ಜಲಪಾತದ ಎದುರು, ಬೆಟ್ಟದ ತುದಿಯಲ್ಲಿ, ಕಣಿವೆಗಳ ನಡುವಿನ ತಿಳಿನೀರಿನ ಹಾದಿಯ ನಡಿಗೆಯಲ್ಲಿ ಹಿಂದೆಲ್ಲ ಏಕಾಂಗಿತನ ಹೊಂದಿ ತಲ್ಲೀನರಾಗಿರುತ್ತಿದ್ದೆವು. ದಾರಿಯಲ್ಲೇ ಸಿಕ್ಕಿದ ನೀರು ಕುಡಿಯಲು ಆತಂಕ ಇರಲಿಲ್ಲ. ಇವತ್ತು ಹಾಗಲ್ಲ ಕೈಯಲ್ಲೊಂದು ಸೆಲ್ಫೀ ಸ್ಟಿಕ್ಕು, ತುದಿಯಲ್ಲಿ ಭಾರೀ ಮೊಬೈಲು, ಬೆನ್ನಿನಲ್ಲಿ ಭಾರದ ಚೀಲ ಅದರೊಳಗೆ ನೀರಿನ ಬಾಟಲ್ಲು... ಅದೂ ಇದೂ ಎಲ್ಲ ಇರ್ತದೆ. ಹೋದಲೆಲ್ಲ ಫೋಟೋ ತೆಗೆಯುವ, ಸೆಲ್ಫೀ ಕ್ಲಿಕ್ಕಿಸುವ, ಮನೆಯವರಿಗೆ ವೀಡಿಯೋ ಕಾಲ್ ಮಾಡಿ ತೋರಿಸುವ ಭರಾಟೆಯಲ್ಲಿ ನಾವು ಪ್ರವಾಸ ಹೋದ ಜಾಗ ಗಾಳಿ, ಮಣ್ಣು, ತಂಪು, ಬಿಸಿ, ಹೊಸತನಗಳನ್ನು ತನ್ಮಯರಾಗಿ ನೋಡುವ ಗೋಜಿಗೇ ಹೋಗುವುದಿಲ್ಲ. ಮನೆಗೆ ಬಂದ ಮೇಲೆ ತೆಗೆದ ವಿಡಿಯೋಗಳ ರೀಲ್ಸ್ ಮಾಡಿ ಪೋಸ್ಟು ಮಾಡುವ, ಮತ್ತೆ ಎಷ್ಟು ಮಂದಿ ನೋಡಿದರು ಅಂತ ತಪಸ್ಸು ಮಾಡುವಲ್ಲಿಗೆ ಪ್ರವಾಸದ ಅನುಭೂತಿಗಳನ್ನು ನಾವಾಗಿ ಕಳೆದುಕೊಳ್ಳುತ್ತಿದ್ದೇವೆ.
3) ಹಿಂದೆ ಮನೆಗೆ ದಿಢೀರ್ ನೆಂಟರು ಬಂದರೆ ತುಂಬ ಖುಷಿ. ಅವತ್ತು ಗಮ್ಮತ್ತು. ಎಷ್ಟೇ ಬಡವನಾದರೂ ಮನೆಗೆ ಅತಿಥಿಗಳು ಬಂದರೆ ಖುಷಿ ಪಡುತ್ತಿದ್ದರು. ಒಂದು ಚಂದದ ಊಟ ಮಾಡಿಸುತ್ತಿದ್ದರು. ಒಂದೇ ಹಾಲಿನಲ್ಲಿ ಅಕ್ಕಪಕ್ಕ ಹೊದ್ದು ಮಲಗುತ್ತಿದ್ದರು. ಇಂದು ಇಂತಹ ದಿನಕ್ಕೆ ಬರುತ್ತೇವೆ ಅಂತ ಮೊದಲೇ ತಿಳಿಸಿ, ಕ್ಷಣ ಕ್ಷಣಕ್ಕೆ ಅಪ್ಡೇಟ್ ಮಾಡುತ್ತಾ “ಇಗೋ ಗೇಟಿನ ವರೆಗೆ ತಲುಪಿದೆವು” ಅಂತ ಹೇಳುತ್ತಾ ಬಂದರೂ ಮನೆಗೆ ನೆಂಟರು ಬಂದಾಗ ಖುಷಿ ಪಡುವವರ ಸಂಖ್ಯೆ ಕಡಿಮೆಯಾಗಿದೆ. ಪ್ರೈವೆಸಿ ಬಯಸುವವರ ಸಂಖ್ಯೆ ಹೆಚ್ಚಾಗಿದೆ. ಕುಳಿತು ಮಾತನಾಡಲು ಪುರುಸೊತ್ತಿಲ್ಲ. ಮನೆ ಮಂದಿ ಒಟ್ಟಿಗೆ ಸಿಗುವುದಿಲ್ಲ. ಮನೆಯಲ್ಲಿ ಸಾಕಷ್ಟು ಜಾಗ, ವ್ಯವಸ್ಥೆ ಇದ್ದರೂ ನೆಂಟರನ್ನು ಉಪಚರಿಸಲು ಮನಸ್ಸಿನಲ್ಲಿ ಜಾಗದ ಕೊರತೆ ಆಗುತ್ತಿದೆ.
4) ಮದುವೆ ಸಮಾರಂಭಗಳಿಗೆ ಒಪ್ಪೊತ್ತು ಮುಂಚಿತವಾಗಿ ತೆರಳುತ್ತಿದ್ದೆವು. ಕೌಟುಂಬಿಕ ಸಮಾರಂಭಗಳಲ್ಲಿ ಬಂಧುಗಳೆಲ್ಲ ಸೇರಿ ತರಕಾರಿ ಹೆಚ್ಚಿ, ತೋರಣ ಕಟ್ಟಿ, ಊಟ ಬಡಿಸಲು ಸೇರುವ ಮೂಲಕ ಒಂದು ಗೌಜಿಯ, ಸಂಭ್ರಮದ ಭಾಗಗಳಾಗಿರುತ್ತಿದ್ದೆವು. ಇಂದು, ಯಾರಿಗೂ ಸಮಯ ಇಲ್ಲ. ಮದುವೆಯ ಎಲ್ಲವನ್ನೂ ಗುತ್ತಿಗೆಗೆ ನೀಡಲಾಗುತ್ತದೆ. ತರಕಾರಿ ಹೆಚ್ಚುವುದು, ಬಡಿಸುವುದು, ತೋರಣ, ಚಪ್ಪರ ಎಲ್ಲವೂ ದುಡ್ಡು ಕೊಟ್ಟರೆ ಮಾಡುವವರಿದ್ದಾರೆ. ಎಲ್ಲಿಯ ವರೆಗೆ ಅಂದರೆ ಕೆಲವು ಮದುವೆಗಳಿಗೆ ಹೋದರೆ ಗೌಜಿ ಭಯಂಕರ ಇರ್ತದೆ, ತಿನ್ನಲು ತಿಂದು ಮುಗಿಯದಷ್ಟು ಐಟಂಗಳು ಕಾದಿರುತ್ತವೆ... ಆದರೆ “ಬಂದಿರಾ, ಉಂಡಿರಾ, ಇಂದು ಉಳಿಯುತ್ತೀರ?” ಅಂತ ಕೇಳಲು ಯಾರೂ ಇರುವುದಿಲ್ಲ!!!!
5) ಕೌಟುಂಬಿಕ ಸಮಾರಂಭಗಳಲ್ಲಿ, ನೆಂಟರಿಷ್ಟರು ಸೇರಿದಲ್ಲಿ, ಸಂಜೆಯ ಹೊತ್ತು ಊರಿನ ಗೂಡಂಗಡಿಗಳಲ್ಲಿ, ಜಾತ್ರೆಯಲ್ಲಿ, ತೇರಿನಲ್ಲಿ, ಕೋಲದಲ್ಲಿ ಜನ ಸೇರಿದಾಗಲೆಲ್ಲ ಇವತ್ತು ಜನ ಮಾತನಾಡುವುದೇ ಇಲ್ಲ ಅಂತಲ್ಲ. ಮಾತನಾಡುವ ಭಾವತೀವ್ರತೆ ಕುಂದಿದೆ. ಕಾರಣ ಕೈಯಲ್ಲಿ ಮೊಬೈಲು ಇದೆ. ತಡೆರಹಿತ, ಬಿಂದಾಸ್ ಮಾತನಾಡಲು “ಮೊಬೈಲು ಬಿಡುವುದಿಲ್ಲ”. ಊರಿನ ರಾಜಕೀಯದಿಂದ ಹಿಡಿದು ಜಾಗತಿಕ ಚಂಡ ಮಾರುತದ ವರೆಗೆ ಎಲ್ಲವನ್ನೂ ಮೊಬೈಲಿನಲ್ಲೇ ಕಾಣಲು ಸಾಧ್ಯವಾಗುವಾಗ ಇನ್ನು ಮಾತನಾಡಿ ಎಂತ ಆಗ್ಲಿಕುಂಟು ಎಂಬ ಉದಾಸೀನ. ಎಷ್ಟು ಮಂದಿ ಸ್ಟೇಟಸ್ ನೋಡಿದರು, ಫೇಸ್ಬುಕ್ಕು ಡಿಪಿಗೆ ಕಮೆಂಟ್ ಹಾಕಿದ್ರು, ಎಷ್ಟು ವ್ಯೂಸ್ ಸಿಕ್ಕಿತು ಅಂತೆಲ್ಲ ನೋಡುವದರ ನಡುವೆ ಯಾರದರೂ ಹತ್ತಿರ ಬಂದು ಮಾತನಾಡಿಸಿದರೂ ಅದು ಭಯಂಕರ ಕಿರಿಕಿರಿ ಉಂಟು ಮಾಡ್ತದೆ.
6) ಹಿಂದೆ ದೀಪಾವಳಿಗೆ, ಬರ್ತ್ ಡೇಗೆ , ರಕ್ಷಾಬಂಧನಕ್ಕೆ ಅನಿರೀಕ್ಷಿತವಾಗಿ ಅಂಚೆಯಲ್ಲಿ ಗ್ರೀಟಿಂಗ್ ಕಾರ್ಡುಗಳು ಬರ್ತಾ ಇದ್ದವು. ಅದರಲ್ಲೂ ತಾವೇ ಕೈಯಾರೆ ತಯಾರಿಸಿ ಕಳುಹಿಸಿದ ಕಾರ್ಡುಗಳ ಪರಿಮಳವೇ ಬೇರೆ. ಅದೊಂದು ದೊಡ್ಡ ಅಚ್ಚರಿ ಆಗಿರುತ್ತಿತ್ತು. ತುಳಸಿಪೂಜೆಗೆ ತುಳಸಿಕಟ್ಟೆಗೆ ಮಣ್ಣು ಮೆತ್ತಿ, ಸೆಗಣಿ ಸಾರಿಸಿ ತಯಾರಾಗುವ ಒಂದು ಆತುರ, ಖುಷಿಗೆ ಬೇರೆಯೇ ಬೆಲೆ ಇರುತ್ತಿತ್ತು, ಯಾವತ್ತೋ ಒಮ್ಮೆ ಖರೀದಿ ಮಾಡುವ ಡ್ರೆಸ್ಸುಗಳ ಬಗ್ಗೆ ಭಯಂಕರ ಕೂತೂಹಲ, ಆಸೆ, ನಿರೀಕ್ಷೆ ಇರ್ತಾ ಇತ್ತು... ಇಂದು ಕ್ಷಣ ಮಾತ್ರದಲ್ಲಿ ಆನ್ಲೈನಿನಲ್ಲೇ ಮನೆ ಬಾಗಿಲಿಗೆ ಬೇಕು ಬೇಕಾದ್ದು ಬಂದು ಬೀಳುವಾಗ ಅಂಗಡಿಗೆ ಹೋಗುವ, ಆರಿಸುವ, ಚೌಕಾಶಿ ಮಾಡುವ, ಬೇರೆಂತಾದರೂ ಆಯ್ಕೆಗಳುಂಟ ಅಂತ ವಿಚಾರಿಸುವ ಎಲ್ಲ ಸುಖದಿಂದ ನಾವು ವಂಚಿತರಾಗುತ್ತಾ ಬಂದಿದ್ದೇವೆ. ಬೆಚ್ಜಗಿನ ಭಾವ ನೀಡುತ್ತಿದ್ದ ಗ್ರೀಟಿಂಗ್ ಕಾರ್ಡು, ಇನ್ ಲ್ಯಾಂಡ್ ಲೆಟರ್, ಮಳೆ ಬರುವಾಗ ಹಪ್ಪಳ ತಿನ್ನುತ್ತಾ ಅಟ್ಟದಲ್ಲಿ ಕೂತು ಓದುತ್ತಿದ್ದ ಚಂದಮಾಮಾ, ಬೊಂಬೆಮನೆ, ಬಾಲಮಂಗಳದ ಪುಟಗಳ ಪರಿಮಳ, ಹಳೇ ಆಟೋಗ್ರಾಫ್ ಪುಸ್ತಕ ಎಲ್ಲವೂ ನೀಡುತ್ತಿದ್ದ ಸಂತಸಗಳ ವ್ಯಾಖ್ಯಾನಗಳು ಬದಲಾಗಿವೆ... ಇವುಗಳೆಲ್ಲ ಈಗೀಗ ಅಪ್ರಸ್ತುತಗಳ ಸಾಲಿಗೆ ಸೇರುತ್ತಿವೆ.
7) ಎಂತ ಸಂಗತಿ ಗೊತ್ತಾಗಬೇಕಾದರೂ ರೇಡಿಯೋದಲ್ಲಿ ಮೂರು ಸಲ ಪ್ರಸಾರವಾಗುವ ಪ್ರದೇಶ ಸಮಾಚಾರ, ವಾರ್ತೆಗಳು ಅಥವಾ ಬೆಳಗ್ಗೆ ಬರುವ ಪೇಪರು ಓದಿ ಆಗಬೇಕಿತ್ತು. ಇವತ್ತು ಹಾಗೆಯಾ... ಸುದ್ದಿಗೋಷ್ಠಿಯ ನೇರಪ್ರಸಾರ ಮೊಬೈಲಿನಲ್ಲಿ ಸಿಗ್ತದೆ. ಅಪಘಾತದ ಸಿಸಿ ದೃಶ್ಯಾವಳಿಯೇ ಸ್ಟೇಟಸ್ಸುಗಳಲ್ಲಿ ಕಾಣ್ತದೆ... ಶಾಲೆಗೆ ರಜೆ ಸಿಕ್ಕಿದರು (ಕೆಲವೊಮ್ಮೆ ಸಿಗದಿದ್ರೆ ಸುಳ್ಳು ಆದೇಶ ಪತ್ರವಾದರೂ) ಜಿಲ್ಲಾಧಿಕಾರಿ ಪತ್ರದ ರೂಪದಲ್ಲೇ ಕಂಡ ಕಂಡ ಗ್ರೂಪುಗಳಲ್ಲಿ ಬರ್ತವೆ. ಹಾಗಾಗಿ ಸುದ್ದಿಯ ಬಗ್ಗೆ ಕಾತರ, ನಿರೀಕ್ಷೆ, ಆಸಕ್ತಿ ಕಡಿಮೆಯಾಗಿದೆ... ಎಂತ ಬೇಕಾದ್ರೂ ಮೊಬೈಲಿನಲ್ಲೇ ಸಿಗ್ತದೆ ಅಂತ ಆಗಿದೆ.
8) ಒಂದು ಸರ ಕಳವು ಕೂಡಾ ಹಿಂದೆ ದೊಡ್ಡ ಸುದ್ದಿ ಆಗಿರುತ್ತಿತ್ತು. ಇಂದು ಸಾವು, ನೋವು, ಯುದ್ಧ, ಹಗರಣ, ಭ್ರಷ್ಟಾಚಾರ, ಪೆಟ್ರೋಲ್ ದರ ಏರಿಕೆ, ದೊಂಬಿ ಯಾವುದೂ ಜನರಿಗೆ ಆಚ್ಚರಿ ತರುವುದಿಲ್ಲ, ಅವರನ್ನು ವಿಚಲಿತಗೊಳಿಸುವುದಿಲ್ಲ... ಈ ಪೈಕಿ ಬಹುತೇಕ ಅಪರಾಧಗಳು ಮನರಂಜನೆಗಳಾಗಿ ಬಿಟ್ಟಿವೆ. ಸ್ಟೇಟಸ್ಸುಗಳಿಗೆ, ರೀಲ್ಸುಗಳಿಗೆ, ಯೂಟ್ಯೂಬು ಪೋಸ್ಟುಗಳಿಗೆ ಸರಕಾಗಿ ಬಿಟ್ಟಿವೆ... ಮತ್ತೆ ಹೇಗೆ ನಾವು ಸುದ್ದಿಗಳಿಂದ ಅಚ್ಚರಿಹೊಂದಲು ಸಾಧ್ಯ ಹೇಳಿ...
9) ಮೊಬೈಲ್ ಬಳಸಿದ್ರೆ ಕ್ಯಾನ್ಸರ್ ಬರ್ತದೆ, ಸಿಗರೇಟ್ ಎಳೆದ್ರೆ ಬೇಗ ಸಾಯ್ತೇವೆ, ಕುಡಿದ್ರೆ ಲಿವರ್ ಹಾಳಾಗ್ತದೆ ಅಂತೆಲ್ಲ ಯಾರೂ ಭಯ ಪಡುವುದಿಲ್ಲ. ಇಂಥದ್ದು ಕೇಳಿ ಕೇಳಿ ಸಾಕಾಗಿದೆ ಎಂಬ ಹಾಗೆ ಇದ್ದ ಹಾಗೇ ಇರ್ತೇವೆ.... ಇಧ್ದಷ್ಟು ದಿನ ಬದುಕುವುದು, ಗಮ್ಮತ್ತು ಮಾಡಬೇಕು ಎಂಬ ವೇದಾಂತ ಬೇರೆ.... “ಶಾಸನ ವಿಧಿಸುವ ಎಚ್ಚರಿಕೆಗಳು” ಅನಾಥವಾಗಿ ಕಣ್ಣೀರು ಸುರಿಸುತ್ತಾ ಇರ್ತವೆ ಅಷ್ಟೆ...
10) ಇಷ್ಟೊಂದು ತಂತ್ರಜ್ಞಾನ ಬದಲಾಗಿದೆ... ಮೊಬೈಲಿನಲ್ಲೇ ಕ್ಷಣ ಕ್ಷಣದ ಸುದ್ದಿಗಳು ಸಿಗ್ತವೆ... ಆದರೂ ಜನ ಯಾವುದನ್ನೂ ಸುಲಭದಲ್ಲಿ ನಂಬುವುದಿಲ್ಲ... “ಹೌದ, ನಿಜವ, ಖಂಡಿತಾ ಹೌದ...?” ಅಂತ ಕ್ರಾಸ್ ಚೆಕ್ ಮಾಡುತ್ತಲೇ ಇರುತ್ತವೆ. ಯಾಕೆಂದರೆ ನಿಜ ಮತ್ತು ಸುಳ್ಳುಗಳ ನಡುವಿನ ಅಂತರ ಕಡಿಮೆಯಾಗಿದೆ. ಕಮ್ಯೂನಿಕೇಶನ್ ಓವರ್ ಲೋಡ್ ಆಗ್ತಾ ಬಂದಿದೆ...
ಈಗ ಹೇಳಿ... ಸೃಜನಶೀಲತೆ ಎಂದರೇನು, ಸೂಕ್ಷ್ಮತೆ ಉಳಿಸುವುದು ಎಂದರೇನು, ನಮ್ಮತನ ಉಳಿಸಿ ಬದುಕುವುದು ಹೇಗೆ...? ಯಾವಾಗ ಮತ್ತು ಎಲ್ಲಿ? ಉತ್ತರ ಸಿಕ್ರೆ ತಿಳಿಸಿ...
-ಕೃಷ್ಣಮೋಹನ ತಲೆಂಗಳ (03.12.2024)
Related posts
No comments:
Post a Comment