ಗ್ರಹಿಸಲು ಕಲಿತರೆ ಸಿಕ್ಕ ಪ್ರತಿ ಅನುಭವವೂ ಅನುಭೂತಿಯೇ...! ಕಣ್ಣಾರೆ ಕಂಡರೂ ಜಾಲತಾಣದಲ್ಲಿ ಪರಾಂಬರಿಸು...!
ತುಂಬ ಭಾರದ ಚೀಲಗಳನ್ನು
ಹೊತ್ತು ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿರುತ್ತೀರಿ. ಬರುವ ಬಸ್ಸುಗಳೆಲ್ಲ ಫುಲ್ಲಾಗಿಯೇ
ಬಂದಿರುತ್ತವೆ. ಕಾಲಿಡಲೇ ಜಾಗವಿಲ್ಲ, ಇನ್ನು ಬ್ಯಾಗಿನ ಜೊತೆಗೆ ಒಳಗೆ ತೂರುವುದೆಂತು...
ಯೋಚಿಸುತ್ತಾ ಕುಳಿತರೆ ಕೆಳಗೆ ಬಾಕಿಯಾಗುತ್ತೀರಿ. ಇರುವ ಇಚ್ಛಾಶಕ್ತಿಯೆಲ್ಲ ಕ್ರೋಢೀಕರಿಸಿ
ಧೈರ್ಯದಿಂದ ಒಳಗೆ ನುಗ್ಗಿದರೆ ಬ್ಯಾಗ್ ಸಹಿತ ಒಳiz ಹೋಗಲು ಸಾಧ್ಯವಾಗುತ್ತದೆ. ಹೆಚ್ಚೆಂದರೆ ಬ್ಯಾಗಿನ ಕೈ
ತುಂಡಾದೀತು, ಝಿಪ್ಪು ಕಡಿದೀತು, ಅಷ್ಟೇ... ಮತ್ತಷ್ಟು ಸಾವರಿಸಿಕೊಂಡ ನಂತರ ಆ ರಶ್ಶು, ಆ
ತಳ್ಳಾಟ, ಆ ಗದ್ದಲಕ್ಕೆ ದೇಹ, ಮನಸ್ಸು ಒಗ್ಗಿಕೊಳ್ಳುತ್ತದೆ. ಒಂದರ್ಧ ಗಂಟೆ ಸಾವರಿಸಿಕೊಂಡು
ಅಲ್ಲೇ ನಿಂತರೆ ವ್ಯವಸ್ಥೆಗೆ ನಾವು ಒಗ್ಗಿಕೊಂಡಿರುತ್ತೇವೆ. ಮತ್ತಷ್ಟು ದೂರ ಸಾಗಿದ ಬಳಿಕ ಕಿಟಕಿ
ಪಕ್ಕ ಸೀಟು ಸಿಕ್ಕರೆ ಮತ್ತಷ್ಟು ನೋಡಲು, ಗ್ರಹಿಸಲು ಅಕಾಶವಾಗ್ತದೆ. ವಿ.ಸೂ.: ಮೊಬೈಲ್ ಡೇಟಾ ಆನ್
ಇರಕೂಡದು!.
............
ಹೌದು, ಪ್ರತಿ ವ್ಯಕ್ತಿತ್ವವೂ ಒಂದು ಕತೆಯೇ. ಪ್ರತಿ ಕತೆಯನ್ನೂ ಅರ್ಥ ಮಾಡಿಕೊಳ್ಳಲು
ಅಸಾಧ್ಯ. ಆದರೆ, ಸಂದರ್ಭ ಮತ್ತು ಪರಿಸ್ಥಿತಿ ಎರಡೂ ಸಾಕಷ್ಟು ವಿಚಾರಗಳನ್ನು ಮನದಟ್ಟು ಮಾಡಿಸುತ್ತವೆ.
ಗ್ರಹಿಸುವ ಮನಃಸ್ಥಿತಿ ಆ ಕ್ಷಣಕ್ಕೆ ನಮಗೆ ಬೇಕು ಅಷ್ಟೆ. ನಮ್ಮದೇ ಟೆನ್ಶನ್ನು, ಬಿಟ್ಟು ಬಿಡಲಾರದ
ಆನ್ ಲೈನ್ ಮೋಹ, ದಿನದ 24 ಗಂಟೆಯೂ ಫೇಸ್ಬುಕ್ಕನ್ನೇ ನೋಡುವ ವಿಚಿತ್ರ ತುಡಿತ... ಸಮಕಾಲೀನ
ವಿಚಾರಗಳ ಭಾಗಗಳಾಗದೇ ಹೋದರೆ ಎಲ್ಲಿ ಹಿಂದುಳಿಯುತ್ತೇವೆಯೋ ಎಂಬ ವಿಚಿತ್ರ ತಳಮಳ. ಅದಕ್ಕೆ, ರಜೆ
ಹಾಕಿ ಬಸ್ಸಿನಲ್ಲಿ ಎಲ್ಲಿಗೋ ಹೋಗುವವರು ಸಹ ದೊಡ್ಡದಾಗಿ ವಾಲ್ಯೂಂ ಇರಿಸಿ ಯೂಟ್ಯೂಬಿನಲ್ಲಿ
ವಾಹಿನಿಗಳ ಕ್ರೈಂ ಸುದ್ದಿ ನೋಡುತ್ತಲೇ ಇರುತ್ತೇವೆ.
............
ಕಿಟಕಿ ಪಕ್ಕದ ಸೀಟು, ಸುಂದರ ಸಂಜೆ ಮತ್ತು ಮನೆಗೆ ಮರಳುವ ಜಗತ್ತಿನ ಅವಸರ ಇವನ್ನೆಲ್ಲ ನೋಡುವ
ಖುಷಿಯನ್ನು ಅಂಗೈಯಲ್ಲಿರುವ ಮೊಬೈಲ್ ಕಸಿದುಕೊಂಡಿದೆ. ನಮಗೆ ಇಹದ ಪರಿವೆಯೇ ಇರುವುದಿಲ್ಲ. ಒಂದರ್ಧ
ಗಂಟೆ ಫೇಸ್ಬುಕ್ಕಿಗೆ ಇಣುಕದಿದ್ದರೆ, ವಾಟ್ಸಪ್ ನೋಡದೇ ಇದ್ದರೆ ಭಯಂಕರ ಹಿಂದುಳಿದಂಥ ಭಾವ....
ನೋಡಿದ್ದನ್ನೇ ನೋಡಿದರೂ, ನೋಡಿದ ನಾಟಕಗಳನ್ನೇ ಮತ್ತೆ ಗಮನಿಸಿದರೂ, ವ್ಯೂಸ್, ಲೈಕುಗಳೆಂಬ
ವಿಚಿತ್ರ ಲೆಕ್ಕಾಚಾರವೆಲ್ಲ “ವಾಸ್ತವ ಅಲ್ಲ” ಅಂತ ನಾಲಗೆ ಹೇಳುತ್ತಾ ಬಂದರೂ ಲೌಕಿಕ
ಚಿಂತನೆ ಅದನ್ನು ಸ್ವೀಕರಿಸುವುದೇ ಇಲ್ಲ... ಕಿಟಕಿಯಾಚೆಗಿನ ಗದ್ದೆಯಂಚಿನಲ್ಲಿ ಮುಳುಗುವ
ಸೂರ್ಯನನ್ನು ತಂಗಾಳಿಗೆ ಮುಖವೊಡ್ಡಿ ನೋಡುವ ಖುಷಿಯನ್ನು ಕಳೆದುಕೊಂಡು ಫೇಸ್ಬುಕ್ಕಿನಲ್ಲಿ
ಯಾರದ್ದೋ ವಿತಂಡವಾದವನ್ನು ಗಂಭೀರವಾಗಿ ಓದಿ ಲೈಕು ಕೊಟ್ಟು ಸಾರ್ಥಕ ಭಾವ ಹೊಂದಿರುತ್ತೇವೆ...
ಇಲ್ಲೊಂದು ಪುಟ್ಟ ಮಗು ಇತ್ತ ನೋಡಿ ನಗುತ್ತಿದೆ, ಆ ಕಡೆ ತೋಟದ ಪಕ್ಕದ ಬೇಲಿಯಂಚಿನಲ್ಲಿ ದನಗಳು
ಸಾಲು ಸಾಲಾಗಿ ಮನೆಗೆ ಮರಳುತ್ತಿವೆ, ಯಾವುದೋ ಮಗು ಮನೆ ಅಂಗಳದಲ್ಲಿ ಕುಳಿತು ಬಸ್ಸಿನತ್ತ ಕೈಬೀಸಿ
ಬೊಚ್ಚು ಬಾಯಿ ಅಗಲಿಸಿ ನಕ್ಕು ಟಾಟಾ ಮಾಡುತ್ತಿದೆ... ಅರಳಿ ಮರದಡಿಯ ಗೂಡಂಗಡಿಯಲ್ಲಿ ಚಹಾ
ಕುಡಿಯಲು ಒಂದಷ್ಟು ಮಂದಿ ಕಾತರದಿಂದ ಕಾದಿದ್ದಾರೆ... ಎಂಥದ್ದೂ ನಮಗೆ ಕಾಣುವುದಿಲ್ಲ.
ಕಾಣಿಸಿಕೊಳ್ಳುವ ಆಸಕ್ತಿಯೂ ಇರುವುದಿಲ್ಲ...
.........
ಅನುಭವ ಎಷ್ಟೇ ಕಠಿಣವಾಗಿರಲಿ, ಅನಿರೀಕ್ಷಿತವಾಗಿರಲಿ, ಸಂಧಿಗ್ಧಮಯವಾಗಿರಲಿ ನಮಗೊಂದು ಚಂದದ
ಪಾಠ ಕಲಿಸಿಯೇ ಕಲಿಸುತ್ತದೆ. ನಾವದನ್ನು ಗಮನಿಸಲು ಕಲಿತರೆ ಒಂದೊಳ್ಳೆ ಅನುಭೂತಿಯಾಗಿ ಹೃದಯದಲ್ಲಿ
ಭದ್ರವಾಗಿರುತ್ತದೆ. ಕ್ಷಣ ಮಾತ್ರದಲ್ಲಿ ಸಿಕ್ಕು, ಗಮನ ಸೆಳೆದು, ಎಂಥದ್ದೋ ಇಷ್ಟವಾಗಿ ಪರಿಚಯವಾಗುವ
ಮೊದಲೇ ತನ್ನ ಸ್ಟಾಪಿನಲ್ಲಿ ಇಳಿದು ಹೋಗುವ ಸಹ ಪ್ರಯಾಣಿಕನನ್ನು ಕಂಡು ಅಚ್ಚರಿ ಪಡುವ ಹಾಗೆ...
ಕಿಟಕಿಯಾಚೆ ಶರವೇಗದಲ್ಲಿ ಹಿಂದೋಡುವ ಚಂದ ಚಂದ ಮರಗಳ ಹಾಗೆ, ದೂರದಲ್ಲಿ ಆಕಾಳದಲ್ಲಿ ಬಿಳಿ
ಮೋಡದಂಚಿನಲ್ಲಿ ಯಾರೋ ಹಾರಿಸಿದ ಗಾಳಿ ಪಟ ನಾಲ್ಕೈದು ನಿಮಿಷ ನಿಚ್ಚಳವಾಗಿ ಕಾಣುವ ಹಾಗೆ...
ಸನ್ನಿವೇಶ ಕಾಣುತ್ತಲೇ ಇರುತ್ತವೆ, ಕಾಡುವಷ್ಟು ನಾವು ಗಮನಿಸುವುದಿಲ್ಲ ಅಷ್ಟೇ...
...............
ಬಸ್ಸಿನಲ್ಲಿ ಚರ್ಚೆ ಮಾಡುತ್ತೇವೆ, ದೊಡ್ಡದಾಗಿ ಕಿರುಚುತ್ತೇವೆ, ನೂಕು ನುಗ್ಗಲಿಗೆ
ಜಗಳವಾಗುತ್ತದೆ... ಪಿಚಕ್ಕನೆ ಹೊರಗೆ ಉಗಿಯುತ್ತೇವೆ. ಅದೇ ನಾವು ಮೆಟ್ರೋ ಸ್ಟೇಷನ್ ತಲುಪಿದರೆ
ಜನರೇ ಬೇರೆ... ಎಷ್ಟೊಂದು ಸಭ್ಯತೆ, ಎಷ್ಟೊಂದು ಶಿಸ್ತು, ಎಷ್ಟೊಂದು ಸಂಭಾವಿತರಂತೆ ಶಾಂತ ಚಿತ್ತ
ಮನಸ್ಸು... ಟ್ರೇನು ಬರುವ ಮೊದಲು ಗೆರೆ ದಾಟಬೇಡಿ ಅಂತ ಅಲ್ಲಿರುವ ಗಾರ್ಡುಗಳು ಬೈದರೆ ಸಾಕು...
ಥಟ್ಟನೆ ಹೆಜ್ಜೆ ಹಿಂದಿರುತ್ತದೆ. ಮೆಟ್ರೋ ಒಳಗೆ ಎಲ್ಲರೂ ಘನ ಗಂಭೀರರು. ನಸು ಚಳಿಯ ಎಸಿ
ಬಾಡಿಯಲ್ಲಿ ಸದ್ದಿಲ್ಲದೆ ಹೋಗುವ ರೈಲಿನೊಳಗೆ ಮುಖಕ್ಕೆ ಮಫ್ಲರು ಕಟ್ಟಿ, ಕಿವಿಗೆ ಇಯರ್ ಫೋನ್
ಸಿಕ್ಕಿಸಿ, ಯಾರಲ್ಲೂ ಮಾತನಾಡದೆ, ಅಲ್ಲಿಲ್ಲಿ ಉಗಿಯದೆ, ತಳ್ಳದೆ, ಕಿರುಚದೆ ಸಾಗುವ ನಾವು “ನಾವೆಯಾ” ಅಂತ ಅಚ್ಚರಿಯಾಗುವಷ್ಟು ವ್ಯತ್ಯಾಸ
ಎದ್ದು ಕಾಣುತ್ತದೆ...
.......................
ನಮ್ಮ ತಿಕ್ಕಲುತನ ಮುಚ್ಚಿ ಹಾಕಲು, ಅಹಂ ಉಳಿಸಿಕೊಳ್ಳಲು, ಎಲ್ಲಿಯೋ ಸ್ಥಾನ ಗಿಟ್ಟಿಸಲು,
ಮತ್ತೆಲ್ಲೋ ವೇದಿಕೆ ಏರಲು, ಮತ್ತೆ ಮತ್ತೆ ಸುದ್ದಿಯಲ್ಲಿರಲು “ನಾವು ನಾವೇ ಆಗಿರದೆ,
ನಮ್ಮಂತೆಯೇ ಇರುವ ನಮ್ಮನ್ನು ತೋರಿಸಿಕೊಳ್ಳುತ್ತಾ ಬರುತ್ತೇವೆ” . ಯಾರ್ಯಾರು ಎಷ್ಟರ ಮಟ್ಟಿಗೆ
ಅವರೇ ಆಗಿರುತ್ತಾರೆ ಎಂಬುದು ಜನರಿಗೆ ಸ್ಪಷ್ಟವೇ ಆಗದೇ ಕಾರಣ ಸುಲಭದಲ್ಲಿ ಯಾರು ಏನು ಹೇಳಿದರೂ
ನಂಬುವುದಿಲ್ಲ. ಯಾರು ಯಾರ ಸುದ್ದಿಗೂ ಹೋಗದೆ ತಮ್ಮದೆ ಜಗತ್ತಿನಲ್ಲಿ ಓಡಾಡುವಾಗ ಪರಸ್ಪರ ಸಂಧಿಸಲು
ಏಕೈಕ ಜಾಗ ಜಾಲತಾಣ ಎಂಬ ಭಯಂಕರ ನಿರ್ಧಾರಕ್ಕೆ ನಾವು ಬಂದಿದ್ದೇವೆ. ಈ ಒಂದು ನಿರ್ಧಾರ ಬಹಳಷ್ಟು
ಸಹಜ ಖುಷಿಗಳನ್ನು ಹೊಸಕಿ ಹಾಕುತ್ತಿದೆ.... ಸಂಜೆಯ ಗಡಿಬಿಡಿ, ಸಂಜೆಯ ತಂಪು ಗಾಳಿ, ಸಂಜೆಯ
ನಿರಾಳತೆ, ಸಂಜೆಯ ರಶ್ಶು, ಸಂಜೆ ರಾತ್ರಿಯಾಗುತ್ತಾ ಬಂದಂತೆ ತಗ್ಗುವ ಸದ್ದು, ಖಾಲಿಯಾಗುವ ನಿಲ್ದಾಣ,
ನೀರವವಾಗುವ ರಸ್ತೆ, ಶಟರ್ ಹಾಕಿಕೊಳ್ಳುವ ಅಂಗಡಿ, ಎಲೆ ಉದುರಿಸಿ ಹಗುರವಾಗುವ ಅರಳಿ ಮರ,
ಅಲ್ಲಲ್ಲಿ ಕತ್ತಲೆ ಸೃಷ್ಟಿಸುವ ಕಟ್ಟಡಗಳು, ಹೂವಾಗುವ ಮೊಗ್ಗು ಎಂಥದ್ದು ನಮಗೆ ಗಂಭೀರ
ಅನ್ನಿಸುವುದೇ ಇಲ್ಲ... ಅಪ್ಪಿ ತಪ್ಪಿ ಇಷ್ಟವಾದರೂ “ಲೈಕು” ಕೊಡಬೇಕು
ಅನ್ನಿಸುತ್ತದೆ.... ಅಷ್ಟರ ಮಟ್ಟಿಗೆ “ಜಾಲತಾಣಿಗ”ರಾಗಿದ್ದೇವೆ. ಇದ್ದದ್ದು ಇದ್ದ ಹಾಗೆ
ನೋಡಬೇಕು, ಹೇಳಬೇಕು, ಪ್ರತಿಕ್ರಿಯೆ ಕೊಡಬೇಕು ಅಂತ ಅನ್ನಿಸುವುದೇ ಇಲ್ಲ... ಯಾರನ್ನೋ
ಮೆಚ್ಚಿಸಲು, ಯಾವುದನ್ನೋ ಸಾಧಿಸಲು, ಇನ್ಯಾವುದರದ್ದೋ ಭಾಗವಾಗಲು ಇಲ್ಲದ ಇಷ್ಟ ಆವಾಹಿಸಿ, ಹೃದಯ
ಮಿನುಗುವುದಕ್ಕಿಂತಲೂ ಗುಂಪಿನಲ್ಲಿ ನಾವು ಮಿನುಗುವುದಕ್ಕೆ ಹವಣಿಸುತ್ತಲೇ ಇರುತ್ತೇವೆ. ಈ
ಗದ್ದಲದಲ್ಲಿ ಸ್ಪಷ್ಟೀಕರಣ, ಸಣ್ಣ ನಗು, ಸಹನೆಯ ಸಾಂತ್ವನ ಎಂಥದ್ದೂ ಯಾರನ್ನೂ ತಲುಪುವುದಿಲ್ಲ...
ರಶ್ಶಿಗೆ ಹೆದರಿ ಬಸ್ ಸ್ಟ್ಯಾಂಡಿನಲ್ಲೇ ಉಳಿಯುವ ಪ್ರಯಾಣಿಕನ ಹಾಗೆ ವಿವೇಚನೆ ಚದುರಿ...
ಚದುರಿ... ಚದುರಿ ಸಾಧ್ಯತೆಗಳನ್ನೆಲ್ಲ ಕೊಂದು ಕೆಡವಿರ್ತದೆ!
-ಕೃಷ್ಣಮೋಹನ ತಲೆಂಗಳ (25.12.2024)
No comments:
Post a Comment