ವಿಶ್ವರೂಪ ದರ್ಶನ ವರ್ಶನ್ 2.0!!!

 

(ಜಾಲತಾಣ ಕ್ಷೇತ್ರದ ವೈರಾಗಿಗೆ ಭಗವಂತನ ಹಿತೋಪದೇಶ...)

ವಿ.ಸೂ.: ಇದೊಂದು ಸುದೀರ್ಘ ಬರಹ. ಕೊನೆ ತನಕ ಓದಿದವರು ಮಾತ್ರ ಪುರುಸೊತ್ತಿದ್ದರೆ ಕಮೆಂಟು ಮಾಡಿದರೆ ಸಾಕು

         

----------

ಹೇ ಭಗವನ್... ಸಾಕು ಜಾಲತಾಣಗಳ ಸಹವಾಸ... ಎಲ್ಲವನ್ನೂ ಇಂದಿಗೇ ಬಿಟ್ಟೆ, ನನ್ನಿಂದಾಗದು, ನನ್ನಿಂದಾಗದು...

ವಿಷಣ್ಣವದನನಾಗಿ ಮೊಬೈಲ್ ಬಿಸುಟು ಆಫ್ ಲೈನ್ ಹೋಗಿ, ನಾಟ್ ರೀಚೇಬಲ್ ಆದ ಅರ್ಜುನ್ ಅವಸ್ಥೆಯನ್ನು ಕೃಶ್ ಅನುಕಂಪದಿಂದ ನೋಡಿದ...

ಕಣ್ಣೆದುರಿಗಿನ ವಿಶಾಲ ಜಾಲತಾಣದಲ್ಲಿ ಲೈಕು, ಕಮೆಂಟು, ಶೇರು, ಸ್ಟೇಟಸ್ಸಿನ ಅಸ್ತ್ರಗಳಿಂದ ಸಹಸ್ರಾರು ನೆಟ್ಟಿಗರು ಬಿಟ್ಟ ಕಣ್ಣಿನಿಂದ ಯುದ್ಧರಂಗದಲ್ಲಿ ಅರ್ಜುನ್ ಕಡೆಗೇ ನೋಡುತ್ತಿದ್ದಂತೆ ಮೊಬೈಲ್ ಸನ್ಯಾಸ ಕೈಗೊಂಡ ಅರ್ಜುನ್ ಧರಾಶಾಹಿಯಾಗಿದ್ದ...

ನಂತರ ನಡೆದ ಹಿತೋಪದೇಶದ ಸಂಕ್ಷಿಪ್ತ ರೂಪ ಇಲ್ಲಿದೆ...

ಅರ್ಜುನ್: ಹೇ ಕೃಶ್ ಬ್ರೋ, ನನಗೆ ಈ ಜಾಲತಾಣದ ವರ್ತುಲ ಅರ್ಥವಾಗುತ್ತಿಲ್ಲ. ಸಿಕ್ಕಾಪಟ್ಟೆ ಮೆಸೇಜು, ಚಿತ್ರವಿಚಿತ್ರ ಮನಃಸ್ಥಿತಿ, ಯಾವುದಕ್ಕೋ ಕಮೆಂಟು, ಇನ್ಯಾವುದರದ್ದೋ ಶೇರುಗಳು, ಸುಳ್ಳು ಸುಳ್ಳೇ ಜಗಳಗಳು, ಅಸಹನೆ, ದ್ವೇಷ... ಇಲ್ಲ ಭಗವಂತ ನನಗೆ ಇಲ್ಲಿ ಏಗಲು ಆಗುತ್ತಿಲ್ಲ.. ನನಗಿನ್ನು ಮೊಬೈಲೂ, ಇಂಟರ್ನೆಟ್ಟೂ ಬೇಡ...

ನಸುನಕ್ಕ ಕೃಶ್: ವತ್ಸಾ, ನೀನು 80ನೇ ದಶಕದ ಜೀವಿ. ಅದಕ್ಕೇ ನಿನಗೆ ಹೀಗಾಗುತ್ತಿದೆ. ನಿನ್ನ ತಳಮಳವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಿನಗೆ ಪರಂಪರೆಯನ್ನೂ ಬಿಡಲಾಗುತ್ತಿಲ್ಲ, ಜಾಲತಾಣದ ಟ್ರೆಂಡ್ ಅರ್ಥ ಮಾಡಿಕೊಳ್ಳಲೂ ಆಗುತ್ತಿಲ್ಲ. ಎಡಬಿಡಂಗಿ ಆಗಿದ್ದಿ ನೀನು ಎಡಬಿಡಂಗಿ. ಇಷ್ಟಕ್ಕೆಲ್ಲ ಶಸ್ತ್ರಸನ್ಯಾಸ ಮಾಡುವುದು ವಿಹಿತವೇ ಹೇಳು. ಅಂದೊಂದು ಕಾಲದಲ್ಲಿ ಮನುಷ್ಯನಿಗೆ ಸಂವಹನಕ್ಕೆ ದಾರಿಯೇ ಇರಲಿಲ್ಲ. ನಂತರ ಮಾತು, ಪತ್ರ, ಫೋನ್, ಇಂಟರ್ನೆಟ್ಟು, ಈಗ ಮೊಬೈಲು ಎಲ್ಲ ಬಂದಿದೆ. ಆಯಾ ಕಾಲಕ್ಕೆ ಆಯಾ ತಲೆಮಾರಿನವರಿಗೆ ಅವುಗಳ ಜೊತೆ ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು. ನಿನಗೂ ಈಗ ಅದೇ ಆಗಿದೆ. ಇದಕ್ಕೆಲ್ಲ ಚಿಂತಿಸಿ ಫಲವಿಲ್ಲ, ಚಿಂತನೆ ಬೇಕು. ಹೇಳು ನಿನ್ನ ಸಮಸ್ಯೆಗಳೇನು... ಒಂದೊಂದಾಗಿ ಬಗೆಹರಿಸೋಣ.

 

ಅರ್ಜುನ್ : ಹೇ ಚಕ್ರಪಾಣಿ, ನಾನು 15 ವಾಟ್ಸಪ್ಪು ಗ್ರೂಪುಗಳಿಗೆ ಅಡ್ಮಿನ್ ಆಗಿರುವೆ. ನನ್ನ ಗ್ರೂಪುಗಳಲ್ಲಿ ಗ್ರೂಪಿನ ಸಬ್ಜೆಕ್ಟು ಬಿಟ್ಟು ಮತ್ತೆಲ್ಲ ವಿಚಾರ ಚರ್ಚೆ ಆಗುತ್ತಿದೆ. ಏನಕ್ಕೋಸ್ಕರ ನಾನು ಗ್ರೂಪು ಕಟ್ಟಿದ್ದೇನೋ, ಅದರ ಬಗ್ಗೆ ಯಾವತ್ತಾದರೂ ನಾನು ಮಾತನಾಡಿದರೆ ಯಾರೂ ಉತ್ತರಿಸುವುದಿಲ್ಲ, ಅದರ ಬದಲು ರಾಜಕೀಯ, ಧರ್ಮ, ಟ್ರೋಲು ಇತ್ಯಾದಿಗಳ ಬಗ್ಗೆ ಬೇಕಾದಷ್ಟು ಮಾತನಾಡುತ್ತಾರೆ. ನಾನು ಹೇಳಿದ್ದನ್ನು ಯಾರೂ ಕೇಳುವುದಿಲ್ಲ. ಅವರವರಿಗೆ ಇಷ್ಟವಾದದ್ದನ್ನು ನಿರ್ದಾಕ್ಷಿಣ್ಯವಾಗಿ ತಂದು ಗ್ರೂಪಿನಲ್ಲಿ ಸುರಿಯುತ್ತಾರೆ. ನಾನು ಮಾತನಾಡಲು ಹೋದರೆ ನಾನು ಪಕ್ಷಪಾತಿ, ನಿಷ್ಠುರವಾದಿ, ಜಗಳಗಂಟ ಮತ್ತಿತರ ಆರೋಪ ಹೊರಿಸುತ್ತಾರೆ. ಒಬ್ಬನ ಮಾತಿಗೆ ಬೆಲೆ ಕೊಟ್ಟರೆ ಇನ್ನೊಬ್ಬನಿಗೆ ಆಗುವುದಿಲ್ಲ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಕೊಂಡು ಹೋಗಲು ಆಗುತ್ತಿಲ್ಲ... ಜಿಗುಪ್ಸೆ ಹೊಂದಿದ್ದೇನೆ. ನೀನೇ ಇದಕ್ಕೆ ದಾರಿ ತೋರಬೇಕು ಪ್ರಭು.

 

ಕೃಶ್: ಹೇ ಮೂರ್ಖಾ... ನೀನು ಹದಿನೈದು ಗ್ರೂಪಿಗೆ ಅಡ್ಮಿನ್ ಆಗಿರುವೆ ಹೌದು. ಆದರೆ ಅಲ್ಲಿನ ಸದಸ್ಯರು ಸಾವಿರದ ಹದಿನೈದು ಗ್ರೂಪುಗಳಲ್ಲಿ ಸೇರಿಕೊಂಡಿದ್ದಾರೆ. ದಿನದ 24 ಗಂಟೆಗಳಲ್ಲಿ ಅವರು ಎಷ್ಟು ಮೆಸೇಜು ಓದಲು ಸಾಧ್ಯ ಹೇಳು. ಅವರು ಯಂತ್ರಗಳೇನೂ ಅಲ್ಲವಲ್ಲ. ಮತ್ತೆ ಗುಂಪು ಬೆಳೆಸುವ ಬಗ್ಗೆ, ಭವಿಷ್ಯದ ಬಗ್ಗೆ, ನೈತಿಕತೆ ಬಗ್ಗೆ ಎಲ್ಲ ಗಂಭೀರವಾಗಿ ಮಾತನಾಡುವಷ್ಟು ಪುರುಸೊತ್ತು ಯಾರಿಗೂ ಇರುವುದಿಲ್ಲ. ಅವರವರ ಮನೆಗಳಲ್ಲಿ, ಕಚೇರಿಗಳಲ್ಲಿ ಸಾಕಷ್ಟು ತಾಪತ್ರಯಗಳು ಇರುವಾಗ ಮತ್ತೆ ಗ್ರೂಪಿನಲ್ಲೂ ಬಂದು ಅಂಥದ್ದೇ ಗಂಭೀರ ವಿಚಾರಗಳ ಬಗ್ಗೆ ತಲೆಕೆಡಿಸುವ ಸಹನೆಯೂ, ಸಮಯವೂ ಯಾರಿಗೂ ಇರುವುದಿಲ್ಲ. ಹಾಗಾಗಿ ಎಲ್ಲರೂ ನಿನ್ನ ಮೂಗಿನ ನೇರಕ್ಕೇ ಮಾತನಾಡಬೇಕು, ನಿನ್ನ ಮಾತಿಗೇ ಪ್ರಾಧಾನ್ಯತೆ ಕೊಡಬೇಕು ಎಂದು ನೀನು ನಿರೀಕ್ಷೆ ಮಾಡುವುದೇ ತಪ್ಪು. ತಮ್ಮಿಷ್ಟದಂತೆ ಕಮೆಂಟು ಮಾಡುವ ಹಕ್ಕನ್ನು ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದೆ. ಮತ್ತೊಂದು ವಿಚಾರ, ನಿನ್ನಲ್ಲಿ ಯಾರಾದರೂ ಬಂದು ಹೇಳಿದ್ರಾ?  ಗ್ರೂಪು ಮಾಡು, ನೀನದಕ್ಕೆ ಅಡ್ಮಿನ್ ಆಗು ಆಂತ? ನಿನ್ನದೇ ಅಧಿಕಪ್ರಸಂಗ ತಾನೆ... ಈಗ ಗ್ರೂಪು ಕಟ್ಟಿದ ನಂತರ ನನ್ನಲ್ಲಿ ಗೋಳು ಹೇಳಿ ಏನು ಪ್ರಯೋಜನ. ಅನುಭವಿಸು!!!

 

ಅರ್ಜುನ್: ಹೇ ನಾರಾಯಣ್, ನಾನು ಫೇಸುಬುಕ್ಕಿನಲ್ಲಿ ಒಂದು ಚಂದದ ಫೋಟೋ ಹಾಕಿದರೆ, ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ನಾನೇ ಅಧ್ಯಯನ ಮಾಡಿ ಲೇಖನ ಬರೆದು ಹಾಕಿದರೆ ಇಡೀ ದಿನದಲ್ಲಿ 40 ಲೈಕೂ ಸಿಕ್ಕುವುದಿಲ್ಲ, ನಾಲ್ಕು ಕಮೆಂಟೂ ಬರುವುದಿಲ್ಲ. ಅದೇ ರಂಭೆಯೋ, ಊರ್ವಶಿಯೋ ತಮ್ಮ ಡಿಪಿ ಬದಲಿಸಿದರೆ ಸಾಕು, ಗಂಟೆಯೊಳಗೆ 4000 ಲೈಕುಗಳು, 400 ಕಮೆಂಟುಗಳು ಬರುತ್ತವೆ... ಇದು ತಪ್ಪಲ್ಲವೇ ದೇವ. ಎಲ್ಲರಿಗೂ ನಿಷ್ಪಕ್ಷಪಾತದಿಂದ ನೆಟ್ಟಿಗರು ಕಮೆಂಟು ಮಾಡಬೇಡವೇ...?!

 

ಕ್ರಿಶ್: ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ. ಇದೇ ನನ್ನ ಉತ್ತರ.

ಏನೇ ಆಗಲಿ. ವ್ಯಾಪಕ ಕಮೆಂಟು ಪಡೆಯುವುದೂ ಪೂರ್ವಜನ್ಮದ ಪುಣ್ಯದ ಫಲ. ನಿನ್ನ ಕರ್ಮದ ಹಿಸ್ಟ್ರಿ ಸರಿ ಇಲ್ಲದೆ, ಅವರಿವರಿಗೆ ಹೆಚ್ಚು ಕಮೆಂಟು ಬರುತ್ತದೆಂದು ಹಲಬುವುದು ನಿನ್ನ ಮತ್ಸರದ ಬುದ್ಧಿಯನ್ನು ತೋರಿಸುತ್ತದೆ ಮಾತ್ರವಲ್ಲ, ನೀನೊಬ್ಬ ಲೋಭಿಯೆಂಬುದನ್ನು ಸಾರಿ ಹೇಳುತ್ತದೆ. ಮೈಂಡ್ ಯುವರ್ ಲ್ಯಾಂಗ್ವೇಜ್.

 

ಅರ್ಜುನ್: ಸಾರಿ ಬ್ರೋ... ಆ ವಿಚಾರ ಬಿಡು. ನಾನು ಯಾವುದಾದರೂ ವಾಟ್ಸಪ್ಪು ಗ್ರೂಪಿನಲ್ಲಿ ನಾಲ್ಕು ವಾಕ್ಯದ ಒಂದು ಲೇಖನ ಬರೆದು ಫೋಟೋ ಸಹಿತ ಪೋಸ್ಟು ಮಾಡಿದರೆ ಅಲ್ಲಿ ಯಾರೂ ಅದಕ್ಕೆ ಥಂಬ್ ರೈಸ್ ಮಾಡುವುದಿಲ್ಲ, ಕಮೆಂಟ್ ಮಾಡುವುದಿಲ್ಲ. ಆದರೆ ಅದೇ ಲೇಖನ ಸ್ವಲ್ಪ ಹೊತ್ತಿನಲ್ಲಿ ಇನ್ನೊಂದು ಗ್ರೂಪಿನಲ್ಲಿ ನನ್ನ ಹೆಸರೇ ಇಲ್ಲದೆ ಪ್ರತ್ಯಕ್ಷವಾಗುತ್ತದೆ. ಕೆಲವೊಮ್ಮೆ ನಾನೇ ಬರೆದ ಬರಹ ಎಲ್ಲೆಲ್ಲೋ ಹೋಗಿ ನನಗೇ ಬರುತ್ತದೆ, ಆಗ ಅದರಲ್ಲಿ ನನ್ನ ಹೆಸರೇ ಇರುವುದಿಲ್ಲ. ಇದು ಹೇಗೆ ಸಾಧ್ಯ ದೇವಾ....ಫಾರ್ವರ್ಡ್ ಮಾಡುವ ಮೊದಲು ನನ್ನ ಪೋಸ್ಟಿನ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನಾದರೂ ಆಡಬಾರದೆ? ಅಂತಹ ನಿರೀಕ್ಷೆ ಇಡುವುದೂ ತಪ್ಪೇ ಹೇಳು?

 

ಕ್ರಿಶ್: ನೋಡಪ್ಪ ಪಾರ್ಥ. ಇದು ಜಾಲತಾಣ ಯುಗ. ಇಲ್ಲಿ ಯಾವುದಕ್ಕೂ ಗಂಭೀರವಾಗಿ ತಲೆ ಕೆಡಿಸಿಕೊಳ್ಳುವುದು ನಿನ್ನ ಅಜ್ಞಾನದ ಪ್ರತೀಕವಷ್ಟೇ... ಜಾಲತಾಣವೆಂದರೆ ಹೇಳುವುದಕ್ಕಿರುವ ತಾಣ. ಇಲ್ಲಿ ಕೇಳುವವರು ಕಡಿಮೆ. ಎಲ್ಲರೂ ಹೇಳುವವರೇ ಆಗಿದ್ದಾರೆ. ಆದ್ದರಿಂದ ಹೇಳಿದ ಬಳಿಕ ಕೇಳುವ ನಿರೀಕ್ಷೆ ಇರಿಸಿಕೊಳ್ಳುವುದು ನಿನ್ನದೇ ತಪ್ಪು. ಇತ್ತೀಚಿಗೆ ಶಾಸ್ತ್ರಗಳಿಗೆ ತಂದಿರುವ ತಿದ್ದುಪಡಿ ಪ್ರಕಾರ, ಒಂದು ಬರಹವನ್ನು ಬರೆಯುವುದಕ್ಕಿಂತಲೂ ಆದನ್ನೂ ಫಾರ್ವರ್ಡ್ ಮಾಡುವುದು ಅಥವಾ ಹೆಸರನ್ನು ಕತ್ತರಿಸಿ, ತನ್ನ ಹೆಸರಿನಲ್ಲಿ ಕಾಪಿ ಪೇಸ್ಟ್ ಮಾಡುವುದು ಹೆಚ್ಚು ಶ್ರೇಷ್ಠ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ನನಗೆ ಬರೆಯಲು ಗೊತ್ತು, ನಾನು ಬರೆದದ್ದನ್ನು ಎಲ್ಲರೂ ನನ್ನ ಹೆಸರಿನೊಂದಿಗೇ ಓದಬೇಕು, ಫಾರ್ವರ್ಡ್ ಆದಲೆಲ್ಲ ನನ್ನದೇ ಹೆಸರು ರಾರಾಜಿಸಬೇಕು ಎಂಬಿತ್ಯಾದಿ ಮೋಹವನ್ನೂ, ಅಹಂಕಾರವನ್ನೂ ಬಿಟ್ಟು ಬಿಡು. ಒಮ್ಮೆ ಜಾಲತಾಣಕ್ಕೆ ಯಾವುದೇ ವಿಚಾರವನ್ನು ಹಾಕಿದ ಬಳಿಕ ಅದರ ಮಾರ್ಪಾಡುಗಳಿಗೆ ನೀನು ಹೊಣೆಯಲ್ಲ. ನೀನು ಕರ್ಮವನ್ನಷ್ಟೇ ಮಾಡಬೇಕು, ಅದರ ಫಲಗಳ ಬಗ್ಗೆ ಚಿಂತಿಸಬಾರದು. ನೀನೇ ಶಾಶ್ವತವಲ್ಲ. ಇನ್ನು ನಿನ್ನ ಬರಹದಲ್ಲಿರುವ ಹೆಸರು ಹೇಗೆ ತಾನೇ ಶಾಶ್ವತವಾಗಿರಲು ಸಾಧ್ಯ... ಯೋಚಿಸಿ ನೋಡು. ಅಷ್ಟು ಮಾತ್ರವಲ್ಲ. ನಿರ್ಲಿಪ್ತವಾಗಿ ಆಚೆಯಿಂದ, ಈಚೆಯಿಂದ ಬಂದದ್ದೆಲ್ಲವನ್ನೂ ನೀನೂ ಫಾರ್ವರ್ಡ್ ಮಾಡಲು ಕಲಿ ಹಾಗೂ ಅದರ ಖುಷಿಯನ್ನು ಅನುಭವಿಸು... ನನ್ನ ಬರಹ, ನನ್ನ ಫೋಟೋ, ನನ್ನ ವಿಡಿಯೋ ಎಂಬ ಮೋಹವನ್ನೂ, ಲೌಕಿಕ ಭ್ರಮೆಯನ್ನೂ ತ್ಯಜಿಸು... ನೀನೊಬ್ಬ ಮಹಾನ್ ಬರಹಗಾರ ಅಂಬ ಅಹಂಕಾರ ತ್ಯಜಿಸು. ಬರೆಯಲು ಗೊತ್ತಿದ್ದವರೆಲ್ಲ ಬುದ್ಧಿವಂತರೆಂದು ಅರ್ಥವಲ್ಲ ಎಂಬುದು ನಿನಗೆ ನೆನಪಿರಲಿ ಮೂರ್ಖ.

 

ಅರ್ಜುನ್: ಹೇ ಶ್ಯಾಮಾ, ನಾನು ಕಂಡದ್ದನ್ನು ಕೇಳಿದ್ದನ್ನು ಉಪ್ಪು ಖಾರ ಹಚ್ಚದೆ ಬರೆದು ನನ್ನ ಸ್ಟೇಟಸ್ಸಿನಲ್ಲಿ ಹಾಕಿದರೆ ಇದು ನಿಜವೇ...? ಇದು ಹೌದೇ? ಅಂತ ಜನ ಪದೇ ಪದೇ ಕೇಳುತ್ತಾರೆ. ಅದರ ಬದಲು ಯಾರೋ ಸತ್ತರಂತೆ, ಇನ್ನೆಲ್ಲೋ ಅಪಘಾತವಾಗಿ ಹತ್ತಾರು ಜನ ಗಾಯಗೊಂಡರಂತೆ ಎಂದು ಸುಳ್ಳು ಸುಳ್ಳೇ ಬರುವ ಸುದ್ದಿಗಳನ್ನು ಜನ ಮುಗ್ಧವಾಗಿ ನಂಬುತ್ತಾರೆ ಮತ್ತು ಅದನ್ನು ಪ್ರಸ್ನಿಸದೆ ಫಾರ್ವರ್ಡ್ ಮಾಡುತ್ತಲೇ ಇರುತ್ತಾರೆ. ಗ್ರೂಪುಗಳಲ್ಲೂ ಅಷ್ಟೇ... ಹೆಸರೇ ಇಲ್ಲದೆ ಬರುವ ಬರಹಗಳು, ತಮಾಷೆಯ ಸಾಲುಗಳಿಗೆ ತುಂಬ ಮಂದಿ ಕಮೆಂಟು ಮಾಡುತ್ತಾರೆ. ನಾನೇ ನನ್ನ ಹೆಸರು ಹಾಕಿ ಬರೆದರೆ ಯಾರೂ ಕ್ಯಾರ್ ಮಾಡುವುದಿಲ್ಲ... ಇದರಿಂದ ತೀವ್ರವಾಗಿ ನೊಂದಿದ್ದೇನೆ. ಹಾಗಾದರೆ ಸತ್ಯಕ್ಕೆ ಬೆಲೆಯೇ ಇಲ್ಲವೇ ಭಗವಂತ...?

 

ಕ್ರಿಶ್: ಹೇ ಅರ್ಜುನ್ ಡಿಯಾ.... ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಜನರಿಗೆ ಕಸಿವಿಸಿ ಆಗುತ್ತದೆ. ಅದು ಅನಾಕರ್ಷಕವಾಗಿ ಕಾಣಿಸುತ್ತದೆ. ಅದಕ್ಕೇ ಪೌಡರ್ ಹಚ್ಚಿ, ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಿದಾಗ ತುಂಬ ಆಪ್ತ ಎನಿಸುತ್ತದೆ. ಹಾಗಾಗಿ ಸತ್ಯವನ್ನೂ ಸತ್ಯವೆಂದು ನಿರೂಪಿಸಲು ನಾವು ಕಷ್ಟಪಡಬೇಕಾಗುತ್ತದೆ. ಮತ್ತೊಂದು ವಿಷಯ, ಹೆಸರು, ವಿಳಾಸ ಇಲ್ಲದ ಬರಹಗಳಿಗೆ ತೂಕ ಜಾಸ್ತಿ. ಯಾಕೆಂದರೆ ಗ್ರೂಪುಗಳಿಂದ ಗ್ರೂಪುಗಳಿಗೆ ಫಾರ್ವರ್ಡ್ ಮಾಡುವಾಗ ಅಲ್ಲಿ ಸಾಕಷ್ಟು ಪುಣ್ಯ ಸಂಚಯನವಾಗಿ ಪೋಸ್ಟಿನ ಮೌಲ್ಯ ಹೆಚ್ಚಿರುತ್ತದೆ. ಹಾಗಾಗಿ ಈ ಕಲಿಯುಗದಲ್ಲಿ ಫಾರ್ವರ್ಡ್ ಆಗಿ ಬರುವ ವಿಚಾರಗಳೇ ಶ್ರೇಷ್ಠ ಹಾಗೂ ಪುಣ್ಯಪ್ರದ ಎಂದು ಜಾಲಪುರಾಣದಲ್ಲಿ ಹೇಳಲಾಗಿದೆ. ಹಾಗಾಗಿ ಪೋಸ್ಟುಗಳು, ಮಾಹಿತಿಯ ಪ್ರವಾಹದಲ್ಲಿ ನಿಜ, ಸುಳ್ಳುಗಳ ಬಗ್ಗೆ ಚಿಂತಿಸುತ್ತಾ ಕೂರದೆ ಓದಿ, ಮನರಂಜನೆ ಪಡೆದು ಮರೆತುಬಿಡಬೇಕು ಹೊರತು ಹೀಗೆ ಹುಚ್ಚರ ಹಾಗೆ ಜಿಜ್ಞಾಸೆಗೊಳಗಾಗಿ ಇದ್ದ ಮನಃಶಾಂತಿಯನ್ನೂ ಕಳೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ನಿನ್ನ ಮನೆಯಲ್ಲಿರುವ ನಾಲ್ಕೈದು ಜನರಲ್ಲೇ ಒಮ್ಮತ ಮೂಡಿಸಿ, ಇಷ್ಟವಾಗುವಂತೆ ಬದುಕಲು ನಿನಗೆ ಸಾಧ್ಯವಾಗುವುದಿಲ್ಲ. ಇನ್ನು, 257 ಮಂದಿ ಇರುವ ವಾಟ್ಸಪ್ಪು ಗ್ರೂಪಿನ ಸದಸ್ಯರ ಬಗ್ಗೆ ಯಾಕೆ ತಲೆ ಬಿಸಿ ಮಾಡುತ್ತೀಯಾ...? ಇಂತಹ ಭ್ರಮೆಗಳಿಂದ ಹೊರಗೆ ಬಾ... ಬದುಕಿನಲ್ಲಿ ಅಳವಡಿಸಲು ಸಾಧ್ಯವಿಲ್ಲದ ಸಾಲುಗಳನ್ನು ಜನ ಫಾರ್ವರ್ಡ್ ಮಾಡುತ್ತಾರೆ, ಸ್ಟೇಟಸ್ಸಿನಲ್ಲಿ ಹಾಕುತ್ತಾರೆ, ಯಾರೋ ಬರೆದ ಸಾಲುಗಳಿಗೆ ಭಗವಂತನಾದ ನನ್ನ ಹೆಸರನ್ನು ಬರಿದೇ ಸೇರಿಸುತ್ತಾರೆ. ಇನ್ನು ಕೆಲವರು ನಾನೇ ಭಗವದ್ಗೀತೆಯಲ್ಲಿ ಹೇಳಿದ ಸಾಲುಗಳನ್ನು ಕದ್ದು, ಕೊನೆಗೆ ತಮ್ಮ ಹೆಸರು ಹಾಕಿ ಗ್ರೂಪುಗಳಲ್ಲಿ ಹಾಕಿ ಮೆರೆಯುತ್ತಾರೆ. ಈ ಕಲಿಯುಗದಲ್ಲಿ ಇದೆಲ್ಲ ಸಹಜ. ಜಾಸ್ತಿ ಪ್ರಶ್ನಿಸಲು ಹೊರಟರೆ ಕಗ್ಗಂಟುಗಳು ಹೆಚ್ಚುತ್ತವೆ... ನೆನಪಿರಲಿ... ಜನರಿಗೆ ಅಷ್ಟೆಲ್ಲ ಯೋಚಿಸಲು ಪುರುಸೊತ್ತಿರುವುದಿಲ್ಲ. ಲೈಕು ಮಾಡಿ ಮುಂದೆ ಹೋಗ್ತಾ ಇರಬೇಕು ಅಷ್ಟೆ.

 

ಅರ್ಜುನ್:  ದೇವರೇ ನನ್ನ ಕೆಲಸಗಳೆಲ್ಲ ಆನ್ ಲೈನ್ ಮೂಲಕವೇ ನಡೆಯುತ್ತದೆ. ಹಾಗಾಗಿ ನನ್ನ ಕೆಲಸದ ವೇಳೆ ನಾನು ಆನ್ ಲೈನ್ ಇರಲೇಬೇಕಾಗುತ್ತದೆ. ಆದರೆ ಹರಟೆ ಹೊಡೆಯುವವರೆಲ್ಲ ಅದೇ ಹೊತ್ತಿಗೆ ಆನ್ ಲೈನಿನಲ್ಲಿ ಪ್ರತ್ಯಕ್ಷರಾಗಿ ನನ್ನ ಏಕಾಗ್ರತೆಗೆ ಭಂಗ ತರುತ್ತಾರೆ. ಕರೆದು ಮಾತನಾಡಿಸುತ್ತಾರೆ... ಅವರ ಬಿಡುವಿನ ವೇಳೆಯಲ್ಲಿ ನಾನೂ ಬಿಡುವೆಂಬ ಭ್ರಮೆಯಲ್ಲಿ ಇದ್ದ ಬದ್ದದ್ದೆಲ್ಲ ಫಾರ್ವರ್ಡ್ ಮಾಡುತ್ತಾರೆ. ಗ್ರೂಪುಗಳಲ್ಲಿ ಕಾರಣ ಇಲ್ಲದೆ ಜಗಳ ಮಾಡುತ್ತಾರೆ. ನಾನು ಆಫ್ ಲೈನ್ ಹೋಗಲು ಸಾಧ್ಯವಾಗದೆ, ಅವರೊಂದಿಗೆ ವಾದ ಮಾಡಲೂ ಸಾಧ್ಯವಾಗದೆ ಚಡಪಡಿಸುತ್ತೇನೆ. ಇದರಿಂದ ನನಗೆ ಜಾಲತಾಣಗಳ ಮೇಲೆ ಜಿಗುಪ್ಸೆ ಬಂದಿದೆ. ಏನು ಮಾಡಲಿ...?

 

ಕೃಶ್: ಹೇ ಅರ್ಜುನ್, ಮೊದಲನೆಯದಾಗಿ ಬಂದ ಸಂದೇಶಗಳಿಗೆಲ್ಲ ಪ್ರತಿಕ್ರಿಯೆ ನೀಡಲೇಬೇಕೆಂಬ ಭ್ರಮೆಯನ್ನು ಬಿಡು. ಯಾರು ಕೂಡಾ ತಾವು ಬಿಜಿ ಇರುವಾಗ ಇತರರ ಸಂದೇಶಗಳ ಬಗ್ಗೆ ತಲೆ ಕೆಡಿಸುವುದಿಲ್ಲ. ತಮ್ಮ ಕೆಲಸವಾಗದೆ ಇತರರ ಬಗ್ಗೆ ಗಮನ ಹರಿಸುವುದಿಲ್ಲ. ಮತ್ತೆ ಇತರರ ಮಿತಿಗಳನ್ನು ಅರಿತೂ ಕೆಣಕುವವರ ಜೊತೆ ವಾದ ಮಾಡಲು ಹೋಗಬಾರದು. ಅವರೆಂದೂ ತಾಳ್ಮೆ ಕಳೆದುಕೊಳ್ಳುವುದಿಲ್ಲ, ಇತರರನ್ನು ಸಮಾಧಾನದಿಂದ ಇರಲೂ ಬಿಡುವುದಿಲ್ಲ. ಅಂಥವರನ್ನು ಕಡೆಗಣಿಸು ಅಷ್ಟೇ... ನಮ್ಮ ಮಿತಿಗಳು ದೌರ್ಬಲ್ಯಗಳನ್ನು ತಿಳಿದೂ ಯಾರಾದರೂ ತೊಂದರೆ ಕೊಡುವರಾದರೆ ಅದನ್ನು ಅರಗಿಸಿ ನಕ್ಕು ಸುಮ್ಮನಾಗಲು ಕಲಿಯಬೇಕು. ಬಂದ ಪ್ರಶ್ನೆಗಳಿಗೇ ಉತ್ತರಿಸಿಯೇ ಸಿದ್ಧ ಎಂಬ ನಿನ್ನ ಹಠವೇ ಇಂತಹ ಹತಾಶೆಗೆ ಕಾರಣ. ಇದು ನಿನ್ನ ಸ್ವಯಂಕೃತಾಪರಾಧ ಅಷ್ಟೇ.. ಒಮ್ಮೆ ನೋಡು. ನಿನ್ನೆದುರು ಯುದ್ಧಕ್ಕೆ ನಿಂತವರೆಲ್ಲ ನಿನ್ನ ಬಂಧುಗಳೇ... ಅಲ್ವೇ... ಅವರೂ ನಿನ್ನ ಹಾಗೆಯೇ ಅಲ್ವೇ...?

 

ಅರ್ಜುನ್: ಹೇ ಭಕ್ತವತ್ಸಲ... ಇದೇ ನನ್ನ ಸಮಸ್ಯೆ. ನನ್ನ ಎದುರಿಗಿರುವ ಇವರೆಲ್ಲ ನನ್ನ ಬಂಧು ಮಿತ್ರರೇ ಆಗಿದ್ದಾರೆ. ಒಂದು ಕಾಲದಲ್ಲಿ ಪತ್ರ ಬರೆಯುತ್ತಾ, ಫೋನ್ ಮಾಡುತ್ತಾ ಮಾತನಾಡಿಸುತ್ತಿದ್ದರು. ಇಂದು ಇದೇ ಬಂಧುಗಳು ಸದಾ ಬಿಝಿ ಇರ್ತಾರೆ. ಆನ್ ಲೈನ್ ಇದ್ದರೂ ಮಾತಿಗೆ ಸಿಗುವುದಿಲ್ಲ, ನನ್ನ ಪೋಸ್ಟುಗಳಿಗೆ ಕಮೆಂಟು ಮಾಡದೆ ತಣ್ಣನೆ ತಮ್ಮ ಸ್ಟೇಟಸ್ಸಿಗೆ ಕದ್ದು ಹಾಕುತ್ತಿರುವವರೂ ಇವರೇ ಆಗಿದ್ದಾರೆ. ಸುಳ್ಳು ಸುಳ್ಳು ವಿಚಾರಗಳನ್ನು ಹೊಸತು ಎಂಬ ಹಾಗೆ ಗ್ರೂಪುಗಳಿಗೆ ಫಾರ್ವರ್ಡ್ ಮಾಡುತ್ತಲೇ ಇರುವವರೂ ಇವರೇ ಆಗಿದ್ದಾರೆ. ಯಾವುದನ್ನೂ, ಯಾರೂ ಓದುವುದಿಲ್ಲ.. ಅರ್ಥ ಮಾಡಿಕೊಳ್ಳುವುದೂ ಇಲ್ಲ. ಆ ಗ್ರೂಪು , ಈ ಗ್ರೂಪು ಎನ್ನದೆ ಕಂಡ ಕಂಡ ಗ್ರೂಪುಗಳಿಗೆ ಕಂಡದ್ದನ್ನೆಲ್ಲ ಫಾರ್ವರ್ಡ್ ಮಾಡುತ್ತಲೇ ಇರುತ್ತಾರೆ ದೇವಾ... ಇವರೆಯ ನನ್ನ ಬಂಧುಗಳು ಅಂತ ಆಶ್ಚರ್ಯ ಆಗುತ್ತಿದೆ...

 

ಕ್ರಿಶ್ : ಹೇ ಮೂರ್ಖಾ ಆನ್ ಲೈನ್ ಜಗತ್ತು ಬಂದ ಮೇಲೆ ಪ್ರತಿಯೊಬ್ಬರೂ ವೈದ್ಯರು, ಫೋಟೋಗ್ರಾಫರುಗಳು, ಪತ್ರಕರ್ತರು, ನ್ಯಾಯಾಧೀಶರು, ವಿಜ್ಞಾನಿಗಳೂ ಆಗಿದ್ದಾರೆ. ಎಲ್ಲರೂ ಸತ್ಯವನ್ನೇ ಹೇಳುತ್ತಾರೆ. ಎಲ್ಲರೂ ಸುದ್ದಿ ಪ್ರಸಾರ ಮಾಡುತ್ತಾರೆ. ಹಾಗಾಗಿ ಈ ಕಲಿಯುಗದಲ್ಲಿ ನೀನು ಇಂತಹ ವಿಚಾರಗಳಿಗೆ ಆರೋಪಿಸುವಂತಿಲ್ಲ. ನಿನ್ನ ಸಮಸ್ಯೆ ಎಂದರೆ ನನ್ನ ಬಂಧುಗಳೇ ಹೀಗೆ ಮಾಡುತ್ತಾರಲ್ಲ ಎಂದು. ಯಾರೂ ಇಲ್ಲಿ ಬಂಧುಗಳಲ್ಲ. ಎಲ್ಲರೂ ಜಾಲತಾಣ ಬಳಸುವವರು. ಎಲ್ಲರೂ ಅದರಲ್ಲೇ ಬಿಝಿ ಇದ್ದಾರೆ ಅಂತ ಲೆಕ್ಕ. ಏನು ಬಿಝಿ ಅಂತ ಕೇಳುವ ಹಾಗಿಲ್ಲ. ಜಾಲತಾಣದಲ್ಲಿ ಬಂಧು, ಮಿತ್ರ, ಸಹಪಾಠಿ ಎಂಬ ಮೋಹ ಇರಿಸಬಾರದು. ಅವರನ್ನೂ ನೆಟ್ಟಿಗರೆಂದು ತಿಳಿದುಕೊಳ್ಳುವ ಪ್ರೌಢತೆ ಬೆಳೆಸಬೇಕು. ನೀನು ಸತ್ಯ ನಂಬಿ ಉದ್ದುದ್ದ ಬರೆದರೆ ಇಲ್ಲಿ ಯಾರೂ ಓದುವುದಿಲ್ಲ. ಈಗ ಇಲ್ಲಿ ಪೋಸ್ಟ್ ಆಗಿರುವ ಈ ಬರಹ ಬರೆದ ಪುಣ್ಯಾತ್ಮನನ್ನೇ ತೆಗೆದುಕೋ... 90 ಶೇಕಡಾ ಮಂದಿ ಮೊದಲ ಎರಡು ಪ್ಯಾರಾ ಓದಿ ಲೈಕು ಕೋಟ್ಟು ಮುಂದಿನ ಪೋಸ್ಟು ನೋಡಲು ಹೋಗಿರುತ್ತಾರೆ. ಅದು ಗೊತ್ತಿದ್ದೂ ಪುಟಗಟ್ಟಲೆ ಬರೆಯುವುದು ಬರಹಗಾರರ ತಪ್ಪು. ಯಾರು ನಿನಗೆ ಲೈಕು ಕೊಡಬೇಕು, ಯಾರು ಕಮೆಂಟು ಮಾಡಬೇಕು, ಎಷ್ಟು ಮಂದಿ ಮಾಡಬೇಕು ಎಂಬುದು ನಿನ್ನ ನಿರ್ಧಾರವಲ್ಲ. ಅದು ಜಾಲತಾಣಿಗರ ಸಮಷ್ಟಿಗರ ನಿರ್ಧಾರ. ಅದಕ್ಕೆ ಟ್ರೆಂಡ್ ಅನ್ನುತ್ತಾರೆ. ಹಳೆಯ ಕಥೆ, ಕಾದಂಬರಿ, ಮ್ಯಾಗಝೀನ್, ರೇಡಿಯೋ, ಪತ್ರ ವ್ಯವಹಾರದ ಗುಂಗಿನಲ್ಲೇ ಇರುವ ನಿನಗೆ ಇದೆಲ್ಲ ಅರ್ಥವಾಗುತ್ತಿಲ್ಲ. ಹಾಗಾಗಿ ನೀನು ಅಡ್ಮಿನ್ ಆಗಲು, ಜಾಲತಾಣದ ಯಶಸ್ವಿ ನೆಟ್ಟಿಗನಾಗಲು ಅನರ್ಹನಾಗಿದ್ದೀಯ. ಆದರೂ ಈ ವೈರಾಗ್ಯ ತರವಲ್ಲ. ಈಗ 4ಜಿ ಯುಗದಲ್ಲಿದ್ದೇವೆ. ಶೀಘ್ರದಲ್ಲಿ 5ಜಿ ಎಂಬ ಯುಗಕ್ಕೆ ನಾವು ಕಾಲಿರಿಸಲಿದ್ದೇವೆ. ಅಲ್ಲಿ ಇದಕ್ಕಿಂತ ಹೆಚ್ಚಿನ ಅಸಹಜತೆಗಳಿಗೆ ನೀನು ಸಾಕ್ಷಿಯಾಗಲಿದ್ದೀಯ. ನೀನು ಜಾಲತಾಣವನ್ನು ಧಿಕ್ಕರಿಸಿ ಬದುಕಲು ಸಾಧ್ಯವಿಲ್ಲ. ಪಂಚಭೂತಗಳ ಹಾಗೆ ಜಾಲತಾಣವೂ ಬದುಕಿನ ಅವಶ್ಯತೆಗಳಲ್ಲಿ ಒಂದು. ನಿನ್ನ ವ್ಯವಹಾರಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಬಳಸು, ತುಂಬ ಸೂಕ್ಷ್ಮಮತಿಯಾಗಿ ಇದರ ಬಗ್ಗೆ ನಿರೀಕ್ಷೆಗಳನ್ನು ಇರಿಸಬೇಡ, ಪ್ರತಿಕ್ರಿಯೆಗಳನ್ನು ನೀಡಬೇಡ... ಅಂತರ್ ದೃಷ್ಟಿಯನ್ನು ತೆರೆ. ಎರಡು ಬೆರಳು ತೋರಿಸಿ ಸೆಲ್ಫೀ ಹಾಕುವ, ಸಮಕಾಲೀನ ಕಂಗ್ಲಿಷ್ ಮಾತನಾಡುವರನ್ನು ನೋಡಿ ಕಲಿ... ಹಾಗೆ ಬದುಕಲು ಪ್ರಯತ್ನಿಸು... ನೋಡು ನಿನಗೆ ನನ್ನ ವಿಶ್ವರೂಪ ದರ್ಶನ ಮಾಡಿಸುತ್ತೇನೆ. ಆಗಲಾದರೂ ನಿನ್ನ ಅಂಧಕಾರ ತೊಲಗಿ ಸುಜ್ಞಾನದ ಬೆಳಕು ಮೂಡೀತು...

 

(ಅಷ್ಟು ಹೇಳಿ ಕ್ರಿಶ್ ಭಾರಿ ಗಾತ್ರದ ಲ್ಯಾಪ್ ಟಾಪಿನಲ್ಲಿ ತ್ರೀಡಿ ಮಾದರಿಯಲ್ಲಿ ವಿಶ್ವರೂಪ ದರ್ಶನ ನೀಡಿದ. ಅದರಲ್ಲಿ ಅರ್ಜುನ್ ಗೆ 5ಜಿ ಜಗತ್ತಿನಲ್ಲಿ ಸೆಕುಂಡುಗಳಲ್ಲಿ ಜಿಬಿ ಗಟ್ಟಲೆ ಡೇಟಾ ಡೌನ್ ಲೋಡ್ ಆಗುವುದು ಕಂಡಿತು. ಮನೆಯಿಂದಲೇ ಪಾಠ ಕಲಿಯುವ, ಬ್ಯಾಂಕಿಂಗ್ ವ್ಯವಹಾರ ಮಾಡುವುದು ಗೋಚರವಾಯಿತು. ವಾಟ್ಸಪ್ ಗ್ರೂಪಿನ ಸದಸ್ಯರ ಗರಿಷ್ಠ ಸಂಖ್ಯೆ 1000 ಆಗಿರುವುದು ಗೊತ್ತಾಯಿತು.... ಇನ್ನಷ್ಟು ನೋಡಲು ಇಷ್ಟಪಡದ ಅರ್ಜುನ್ ಗೆ ಮನಸ್ಸಿನಲ್ಲಿ ಕವಿದಿದ್ದ ಅಂಧಕಾರ ತೊಲಗಿತು. 5ಜಿ ಯುಗಕ್ಕಿಂತ ಹೆಚ್ಚಿನ ಮನಃಶಾಂತಿ ಈಗಲೇ ತನ್ನೊಳಗಿದೆ... ಸುಮ್ಮನೇ ತಾನು ಓವರ್ ರಿಯಾಕ್ಟ್ ಮಾಡುತ್ತಿದ್ದೇನೆ ಎಂಬುದು ಅರಿವಾಯಿತು.)

ಜ್ಞಾನದ ಬೆಳಕು ಅರ್ಜುನ್ ಗೆ ಆದ ತಕ್ಷಣ ಕ್ರಿಶ್ ಅದೃಶ್ಯನಾದ. ಮತ್ತೆ ಲೌಕಿಕಕ್ಕೆ ಮರಳಿದ ಅರ್ಜುನ್ ಮೊಬೈಲ್ ರಿಚಾರ್ಜ್ ಮಾಡಿ ಆನ್ ಲೈನಿಗೆ ಬಂದ. ವಿಶ್ವರೂಪ ದರ್ಶನದ ಸಂದರ್ಭ ಗುಟ್ಟಾಗಿ ತೆಗೆದ ಸೆಲ್ಫೀಯನ್ನು ಸ್ಟೇಟಸ್ಸಿಗೆ ಹಾಕಿ ಕೆಳಗೆ ಬರೆದ ಸೆಲ್ಫೀ ವಿದ್ ಕ್ರಿಶ್ ಬ್ರೋ...!!!”

(ಈ ಲೇಖವನ್ನು ಯಾರಾದರೂ ಕೊನೆ ತನಕ ಸಹನೆಯಿಂದ ಓದಿದ್ದರೆ, ಪುರುಸೊತ್ತಿದ್ದರೆ ಕಮೆಂಟ್ ಮಾಡಬಹುದು).

-ಕೃಷ್ಣಮೋಹನ ತಲೆಂಗಳ

(06.02.2021)

1 comment:

Lakshmeesha j hegade said...

4G ಕಾಲದಲ್ಲಿ ವಿರಾಟ್ ದರ್ಶನದ ಹೊಸ ವರ್ಷನ್ ಚೆನ್ನಾಗಿ ಮೂಡಿ ಬಂದಿದೆ. 257 ಜನರ ಗುಂಪನ್ನೇ ಸಂಭಾಳಿಸಲಾಗದ ಅರ್ಜುನ 5G ಯುಗದಲ್ಲಿ ವಾಟ್ಸಾಪ್ ಸದಸ್ಯರ ಸಂಖ್ಯೆ 1000 ಆದಾಗ ಏನು ಮಾಡುವನೋ? ಆಗ ಅವನ ಸಹಾಯಕ್ಕೆ ಕೃಷ್ಣನೂ ಇರಲಾರನೇನೋ ( ಕೃಷ್ಣಾವತಾರದ ಅವಸಾನ ಆದ ಮೇಲಲ್ಲವೇ ಪಾಂಡವರ ಸ್ವರ್ಗಾರೋಹಣವಾದದ್ದು)..

ಅಂದಹಾಗೆ ಮಾಡರ್ನ್ ಗೀತಾಚಾರ್ಯ ಮತ್ತು ಸವ್ಯಸಾಚಿಯ ಸಂಭಾಷಣೆಯನ್ನು ಪೂರ್ತಿ ಓದಿ ಕಮೆಂಟಿಸಿದ್ದೇನೆ.ಹಾಗಾಗಿ 5G ಯುಗದಲ್ಲಿ ನಾನು ಯಾವುದೇ ಆನ್ಲೈನ್ ಮೋಸಕ್ಕೆ ಬಲಿಯಾಗದಿರುವಷ್ಟು ಪುಣ್ಯ ಸಂಚಯ ಮಾಡಿಕೊಂಡಿದ್ದೇನೆಂದು ನಂಬಿದ್ದೇನೆ.
-ಡಾ. ಲಕ್ಷ್ಮೀಶ ಜೆ.ಹೆಗಡೆ

ಬಿಡುವಿದ್ದಾಗ ನನ್ನ ಬ್ಲಾಗ್ ಕಡೆಗೂ ಕಣ್ಣುಹಾಯಿಸಿ ಒಮ್ಮೆ.
www.mijarchitra.wordpress.com