ಫಿಲ್ಟರ್ ಬಳಸಿ ತೆಗೆದ ಫೋಟೋದ ಹಾಗೆ ಜಾಲತಾಣದ ಬದುಕು...!

 


ಕೆಲ ದಿನಗಳಿಂದ ಫೇಸ್ಬುಕ್ಕು, ವಾಟ್ಸಪ್ಪುಗಳಲ್ಲಿ ಟ್ರೆಂಡ್ ಆಗಿದೆ, ನನ್ನ ಹೆಸರು ಕೇಳಿದಾಗ ಮೊದಲು ನಿಮ್ಮ ಮನಸ್ಸಿನಲ್ಲಿ ಮೂಡುವ ಭಾವನೆ ಏನು?” ಎಂಬ ಪ್ರಶ್ನೆ ಕೇಳಿ ಉತ್ತರ ಪಡೆಯುವುದು. ಸಾಧಾರಣ ಜಾಲತಾಣದ ಬಳಕೆದಾರರ ಜೊತೆಗೆ ಇಂತಹ ಆಗಾಗ ಟ್ರೆಂಡಿಂಗ್ ಆಗುವ ವಿಚಾರಗಳಲ್ಲಿ ಪಾಲ್ಗೊಳ್ಳದವರೂ ಈ ಸಲ ಈ ಪ್ರಶ್ನೆಯನ್ನು ಕೇಳಿ ಉತ್ತರವನ್ನು ಪಡೆದುಕೊಂಡಿರುವುದು ವಿಶೇಷ...

ಒಂದು ರೀತಿಯಲ್ಲಿ ತ್ವರಿತವಾಗಿ ಮಾರುತ್ತರ ಮತ್ತು ಅಭಿಪ್ರಾಯ ಸಂಗ್ರಹ ಮಾಡುವ ವಿಧಾನವಿದು. ಈ ಪ್ರಶ್ನೆಗೆ ಯಾರೂ ಕೂಡಾ ಬೈಗುಳದ, ನಕಾರಾತ್ಮಕವಾದ ಅಥವಾ ಸುಧಾರಿಸಬೇಕಾದ ಉತ್ತರಗಳನ್ನು ನೀಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಒಂಥರಾ ಪ್ರಶಂಸೆಯ ಉತ್ತರಗಳೇ ಬಂದಿವೆ, ಬರುತ್ತಿವೆ.. (ಅದು ಮುಖಸ್ತುತಿ ಎಂಬಿತ್ಯಾದಿ ತಪ್ಪು ಹುಡುಕುತ್ತಿರುವುದಲ್ಲ). ಆಸಕ್ತಿದಾಯಕವಾಗಿದೆ ಈ ಪ್ರಯೋಗ ಹೊರತು, ಅದು ನಮ್ಮ ಕುರಿತಾದ ಪರಿಪೂರ್ಣ ಸರ್ವೇ ಏನೂ ಅಲ್ಲ ಎಂಬ ಸಮಚಿತ್ತ ಇದ್ದರೆ ಸಾಕು.

 

ಅಸಲಿಗೆ ಜಾಲತಾಣದಲ್ಲಿ, ಅದರಲ್ಲೂ ಫೇಸ್ಬುಕ್ಕಿನ ನಮ್ಮ ಸ್ನೇಹಿತರ ಪಟ್ಟಿಯಲ್ಲಿರುವವರ ಪೈಕಿ ಸುಮಾರು ಮೂರನೇ ಎರಡು ಮಂದಿಗೂ ನಮ್ಮ ವೈಯಕ್ತಿಕ ಪರಿಚಯ ಇರುವುದಿಲ್ಲ. ಜಾಲತಾಣದ ಪರಿಚಯ ಅಷ್ಟೇ. ಇದರ ಹೊರತಾಗಿ ಸಹೋದ್ಯೋದಿಗಳು, ಸಹಪಾಠಿಗಳು, ಒಂದೇ ಊರಿನವರು, ಒಂದೇ ವೃತ್ತಿಯವರು, ಒಂದೇ ಅಭಿರುಚಿಯವರು ಎಂಬಿತ್ಯಾದಿ ನೆಲೆಯಲ್ಲಿ ಹಲವರು ಸ್ನೇಹಿತರಾಗಿರುತ್ತಾರೆ. ಹಾಗಾಗಿ ಯಾರ ಪಾಲಿಗೂ ನಾವು ಎಲ್ಲ ಮಗ್ಗುಲುಗಳೂ ಕಾಣಿಸುವಂತಹ ವ್ಯಕ್ತಿಗಳಾಗಿರುವುದಿಲ್ಲ (ನಮ್ಮ ಮನೆಯವರು, ಕುಟುಂಬಿಕರು, ಆಪ್ತ ಸ್ನೇಹಿತರ ಹೊರತು). ತುಂಬ ಸಲ ಫೇಸ್ಬುಕ್ಕಿನಲ್ಲಿ ಕಾಣಿಸುವ ಮಾರುದ್ದದ ಹೆಸರು, ವಿಶಿಷ್ಟವಾದ ಪ್ರೊಫೈಲ್ ಫೋಟೋಗಳು, ನಿಯಮಿತ ಪೋಸ್ಟುಗಳು, ಕವನಗಳು, ಹಾಡುಗಳು, ಭಾಷಣಗಳು, ವಿಡಿಯೋಗಳು ಇವುಗಳು ಮಾತ್ರ ಒಬ್ಬ ವ್ಯಕ್ತಿಯ ಕುರಿತು ನಮ್ಮಲ್ಲೊಂದು ಕಲ್ಪನೆ ಅಥವಾ ದೃಷ್ಟಿಕೋನವನ್ನು ಹುಟ್ಟು ಹಾಕಿರುತ್ತದೆ, ಅದೇ ದೃಷ್ಟಿಕೋನದ ಆಧಾರದಲ್ಲಿ ಈ ಪ್ರಶ್ನೆಗೆ ಉತ್ತರ ಲಭಿಸುತ್ತದೆ. ಅದು ತಪ್ಪೆನ್ನುತ್ತಿರುವುದಲ್ಲ ನಾನು, ಅದು ಪರಿಪೂರ್ಣ ಆಗಿರಬೇಕಾಗಿಲ್ಲ ಅಂತ ಅಷ್ಟೇ...

ಇಂಥದ್ದೇ ಭ್ರಮೆಗಳು ಆನ್ ಲೈನ್, ಆಫ್ ಲೈನ್, ಲಾಸ್ಟಿ ಸೀನ್, ವಾಲ್ ಪೋಸ್ಟ್ , ವಿಚಿತ್ರ ಸ್ಟೇಟಸ್ಸುಗಳ ಕುರಿತು ಚಿತ್ರವಿಚಿತ್ರ ಕಲ್ಪನೆಗಳನ್ನು ಹುಟ್ಟು ಹಾಕುವುದು. ಆಫ್ ಲೈನ್ ಇರುವ ವ್ಯಕ್ತಿ ಸತ್ತೇ ಹೋದ್ನೇನೋ ಅನ್ನುವಂಥ ಭೀಕರ ಕಲ್ಪನೆಗಳನ್ನು ಕಟ್ಟಿಕೊಡುವಂಥದ್ದು.

ಈ ಪೋಸ್ಟಿನಿಂದ ಆದ ಲಾಭವೆಂದರೆ ಈ ರೀತಿ ನಮ್ಮನ್ನು ಭಾಗಶಃ ಕಂಡವರೆಲ್ಲ ಯಾವ ರೀತಿ ನಮ್ಮನ್ನು ಗುರುತಿಸುತ್ತಾರೆ, ಕಾಣುತ್ತಾರೆ ಎಂಬುದು ತಿಳಿಯಲು ಸಾಧ್ಯ. ಅಲ್ವ? ಬೇರೆ ಬೇರೆ ಕ್ಷೇತ್ರದಲ್ಲಿ ಬೇರೆ ಬೇರೆ ಪಾತ್ರ ನಿರ್ವಹಿಸುವ ನಾವು ಯಾರ ಪಾಲಿಗೆ ಏನಾಗಿ ಕಾಣಿಸುತ್ತೇವೆ ಎಂಬುದು ತಿಳಿಯುತ್ತದೆ... ನಾವು ಎಲ್ಲಿ ಎಷ್ಟರ ಮಟ್ಟಿಗೆ ಅಚ್ಚಾಗಿದ್ದೇವೆ ಎಂಬುದೂ ತಿಳಿಯುತ್ತದೆ ಅಂದುಕೊಳ್ಳುತ್ತೇನೆ.

 

ಜಾಲತಾಣವೆಂದರೆ ಒಂಥರಾ ಫಿಲ್ಟರ್ ಬಳಸಿದ ಕ್ಯಾಮೆರಾದ ಹಾಗೆ ಅಂತ ನನ್ನ ವೈಯಕ್ತಿಕ ಅನಿಸಿಕೆ. ಬ್ಯೂಟಿಫೈ ಮೋಡ್ ಹಾಕಿ ತೆಗೆದ ಫೋಟೊವನ್ನು ಪ್ರೊಫೈಲ್ ಪಿಕ್ಚರ್ ಮಾಡಿ ಹಾಕಿದರೆ ವ್ಯಕ್ತಿಯ ನೈಜ ಮುಖ ಬಿಡಿ, ನೈಜ ಬಣ್ಣವೂ ಗೊತ್ತಾಗುವುದಿಲ್ಲ (ಬಣ್ಣ ಮುಖ್ಯ ಅಂತ ಅಲ್ಲ, ವ್ಯಕ್ತಿಯ ನೈಜ ಚಿತ್ರಣ ಸಿಕ್ಕುವುದಿಲ್ಲ ಅಂತ). ಮತ್ತೆ ನಮ್ಮ ವಾಲ್ ನಲ್ಲಿ, ಸ್ಟೇಟಸ್ಸಿನಲ್ಲಿ ನಾವೇ ತಾನೆ ವಿಚಾರಗಳನ್ನು ಹಾಕುವವರು. ಹೀಗಾಗಿ ಅದರ ನಿಯಂತ್ರಣ ನಮ್ಮ ಕೈಯ್ಯಲ್ಲೇ ಇರುತ್ತದೆ. ನಮ್ಮ ಕುರಿತು ನಮಗೆ ಬೇಕಾದ್ದನ್ನು ಮಾತ್ರ ಜಾಲತಾಣದಲ್ಲಿ ಹರಿಯಬಿಟ್ಟು, ನಾನೆಂದರೆ ಹೀಗೆ ಎಂದು ತೋರಿಸಿಕೊಳ್ಳಬಲ್ಲ ಎಲ್ಲ ಸಾಧ್ಯತೆಯೂ ನೆಟ್ಟಿಗನ ಕೈಯ್ಯಲ್ಲಿ ಇರುತ್ತದೆ. ಮಾತ್ರವಲ್ಲ ಅಪೂರ್ಣ ಹೆಸರುಗಳು, ಅಪೂರ್ಣ ವಿವರಗಳು, ಕಾವ್ಯನಾಮಗಳು, ಯಾರದ್ದೋ ಪ್ರೊಫೈಲ್ ಪಿಕ್ಚರುಗಳು... ಇತ್ಯಾದಿಗಳೂ ಜಾಲತಾಣಗಳಲ್ಲಿ ವೈಯಕ್ತಿಕವಾಗಿ ಕಂಡಿರದ ವ್ಯಕ್ತಿ ಕುರಿತು ಯಾವುದೋ ಚಿತ್ರಣ ಕಟ್ಟಿಕೊಡುತ್ತದೆ. ಹಾಗಾಗಿ ಜಾಲತಾಣದ ವ್ಯಕ್ತಿ ಮುಖಾಮುಖಿ ಸಿಕ್ಕಿದಾಗ ಅಜಗಜಾಂತರ ಅನ್ನಿಸಿದರೆ ಆಶ್ಚರ್ಯ ಇಲ್ಲ.

 

ನಾವಾಗಿ ತೋರಿಸಿಕೊಳ್ಳುವುದಕ್ಕೂ, ನಮ್ಮನ್ನು ಜನರೆ ಕಂಡುಕೊಳ್ಳುವುದಕ್ಕೂ ತುಂಬ ವ್ಯತ್ಯಾಸವಿದೆ. ಅದೇ ಜಾಲತಾಣ ಎಂಬ ಮಾಯಾಲೋಕದ ಕಿರುಪರಿಚಯ.

ಅದೇ ರೀತಿ ವ್ಯಕ್ತಿಯೊಬ್ಬರ ಜೊತೆ ಜಾಲತಾಣದಲ್ಲಿ ಹರಟುವುದು, ಇಮೋಜಿ ಬಳಸಿ ಚಾಟ್ ಮಾಡುವುದು, ಸ್ಟೇಟಸ್ಸು, ವಾಲುಗಳಲ್ಲಿ ಹೋರಾಡುವುದಕ್ಕೂ ಫೋನಿನಲ್ಲೋ, ಮುಖಾಮುಖಿಯೋ ಮಾತನಾಡುವುದಕ್ಕೂ ತುಂಬ ವ್ಯತ್ಯಾಸವಿದೆ. ಹಾಗಾಗಿ ಇಲ್ಲಿ ಬಂದದ್ದು, ಬರುವುದೆಲ್ಲ ತೀರಾ ಸಹಜ, ನೈಜ ಅಂತ ಯಾವ ಕಾರಣಕ್ಕೂ ಭ್ರಮಿಸುವುದು ಸರಿಯಲ್ಲ. ಹಾಗಂತ ಇಲ್ಲಿ ಬಂದದ್ದೆಲ್ಲ ಕೃತಕ, ಎಲ್ಲ ಲೈಕುಗಳು, ಕಮೆಂಟುಗಳೂ ಮುಖಸ್ತುತಿಗೆ, ಸುಳ್ಳು ಅಂತವೂ ಅರ್ಥ ಅಲ್ಲ. ಜಾಲತಾಣದಲ್ಲಿ ಮಾತ್ರ ಕಾಣಿಸುವ ಚಿತ್ರಣವೇ ವ್ಯಕ್ತಿಯ ಅಂತಿಮ ಬಯೋಡೇಟಾ ಆಗಲು ಸಾಧ್ಯವೇ ಇಲ್ಲ... ಅಂತ ಅನಿಸಿಕೆ ಅಷ್ಟೇ! ಅದುವೇ ಪರಿಪೂರ್ಣ, ಅಂತಿಮ ಅನ್ನುವ ಭ್ರಮೆ ಸರಿಯಲ್ಲ.

-ಕೃಷ್ಣಮೋಹನ ತಲೆಂಗಳ (19/09/2020)

No comments: