ಕಡಿಮೆ ಅವಧಿಯ ಗಟ್ಟಿ ನಿರ್ಧಾರ, ಸೂಕ್ತ ಬೆಟ್ಟ ಸಲೀಸಾಗಿ ಹತ್ತಿದಂತೆ!



ನೀವು ಅಳೆದೂ ಸುರಿದು ಒಂದು ಹೊಸ ಮೊಬೈಲ್ ಫೋನ್ ಖರೀದಿಸುತ್ತೀರಿ ಅಂತ ಇಟ್ಕೊಳ್ಳೋಣ... ತುಂಬ ವಿಚಾರಿಸಿ, ಫೀಚರ್ಸ್ ಎಲ್ಲ ತಿಳ್ಕೊಂಡು ಬಳಿಕ someಶೋಧನೆ ಮಾಡಿ ಮೊಬೈಲ್ ಖರೀದಿ ಆಗ್ತದೆ. ನಿಮಗಿಷ್ಟದ ಸೆಟ್ ಅದು. ಹೊಸದಾಗಿ ಸಿಕ್ಕಿದ ಮೊಬೈಲ್ ಗೆ ಎಷ್ಟು ಕೊಟ್ರಿ ಅಂತ ಪಕ್ಕದ ಮನೆಯವ್ರು ಕೇಳ್ತಾರೆ. ಇಷ್ಟಿಷ್ಟು ಕೊಟ್ಟೆ ಅಂತೀರಿ. ಆಗ, ಅವರು ಛೆ, ಒಂದು ಮಾತು ನನ್ನತ್ರ ಕೇಳ್ತಿದ್ರಲ್ಲ, ಇದಕ್ಕಿಂತ 1000 ರು. ಕಮ್ಮಿಗೆ ಅಲ್ಲೊಂದು ಶಾಪಿನಲ್ಲಿ ಸಿಗ್ತದೆ, ಇದಕ್ಕಿಂತಲೂ ಚಂದದ್ದು....

ಮುಗೀತು. ಈ ಮಾತು ಕೇಳಿದ ತಕ್ಷಣ ತಲೆಯೊಳಗೆ ಹುಳ ಓಡಾಟ ಶುರುವಾಗ್ತದೆ. ಬಹಳಷ್ಟು ಮಂದಿಯ ಮನಸ್ಸು ಮುದುಡುತ್ತದೆ. ಛೆ ಸುಮ್ನೇ ದುಡ್ಡು ಕಳಕೊಂಡೆ, ಮೋಸಹೋದೆ, ಇದಕ್ಕಿಂತಲೂ ಚಂದದ ಮೊಬೈಲ್ ಸಿಕ್ತಾ ಇತ್ತು, ಅವಸರ ಮಾಡಿದೆ... ಇತ್ಯಾದಿ ಇತ್ಯಾದಿ... ಎಲ್ಲಿಯವರೆಗೆ ಅಂದರೆ ನಮಗಿಷ್ಟದ ಮೊಬೈಲ್ ಪಡೆದ ಖುಷಿಯನ್ನೂ ಮರೆತು  ಕಳೆದುಕೊಂಡೆವು ಅಂದುಕೊಂಡದ್ದರ ಬಗ್ಗೆ ಪರಿತಪಿಸುತ್ತೇವೆ. ವಾಸ್ತವವಾಗಿ, ನಿಮ್ಮ ಕಿವಿ ಚುಚ್ಚಿದ ವ್ಯಕ್ತಿ ತಿಳಿದುಕೊಂಡೇ ಆ ಮಾತು ಹೇಳಿದ್ದಾರೋ, ನಿಮ್ಮ ಸಂಭ್ರಮಕ್ಕೆ ತಣ್ಣೀರೇರಚಲು ಹೇಳಿದ್ದಾರೋ ಎಂದು ನಾವು ಶೋಧನೆ ಮಾಡುವುದೇ ಇಲ್ಲ. ಯಾವುದೇ ಮೊಬೈಲನ್ನು ಮಾರುಕಟ್ಟೆ ದರಕ್ಕಿಂತ 1000 ರು. ಕಡಿಮೆಗೆ ಮಾರುತ್ತಾರೆಯೇ? ಇಷ್ಟು ಫೀಚರ್ ಇರುವ ಮೊಬೈಲ್ ಇದಕ್ಕಿಂತ ಕಡಿಮೆ ದರಕ್ಕೆ ದೊರಕಲು ಸಾಧ್ಯವೇ...? ಇದ್ಯಾವುದನ್ನೂ ನಾವು ಯೋಚಿಸುವುದಿಲ್ಲ... ಯಾರೋ ಹೇಳಿದ್ದಾರೆಂಬ ಕಾರಣಕ್ಕೆ ನಮ್ಮದೇ ನಿರ್ಧಾರದ ಮೇಲೆ ಸಂಶಯ ಪಟ್ಟು ಬರಿದೇ ಕೊರಗುತ್ತೇವೆ.

ಕೆಲವರಿರುತ್ತಾರೆ

ನಮ್ಮ ಸುತ್ತಮುತ್ತಲೂ, ಅವರು ಏನನ್ನೂ ಕೊಳ್ಳುವುದಿಲ್ಲ, ಕೊಳ್ಳುವವರಿಗೆ ಸಲಹೆ ಕೊಡುತ್ತಲೇ ಇರುತ್ತಾರೆ. ಅವರು ಏನಾದರೂ ಖರೀದಿಸುವುದಿದ್ದರೆ ಯಾರ ಬಳಿಯೂ ಚರ್ಚಿಸುವುದಿಲ್ಲ. ಸುತ್ತಮುತ್ತಲಿನವರು ಖರೀದಿಸಿದ ಬಳಿಕ ಮೂಗು ತೂರಿಸಿ, ಅಯ್ಯೋ ನೀವು ಸೋತ್ರಿ, ಅಯ್ಯೋ ಇದಕ್ಕಿಂತ ಚೆನ್ನಾಗಿರೋದು ಸಿಕ್ತಾ ಇತ್ತು, ಅಯ್ಯೋ ನೀವು ಅವಸರ ಮಾಡಿದ್ರಿ…” ಅಂತ ಹೇಳುವುದು ಚಟ. ಆ ಮೂಲಕ ಖರೀದಿಸಿದವನ ಚಡಪಡಿಕೆ ನೋಡಿ ಖುಷಿ ಪಡುವ ಹುಚ್ಚು... ಅಷ್ಟೆಲ್ಲ ಸಲಹೆ ನೀಡುವವರು ತಾವು ಜೀವನದಲ್ಲಿ ಯಾವತ್ತೂ ಎಲ್ಲಿಯೂ ಸೋಲೇ ಇಲ್ಲ ಎಂಬಂತೆ ಮಾತನಾಡುತ್ತಾರೆ. ಆದರೆ,ಅವರ ಬದುಕೇನೂ ಅಪ್ರತಿಮವಾಗಿಯೋ, ಅದ್ಭುತವಾಗಿಯೋ ಇರುವುದಿಲ್ಲ. ಈ ಥರ ಉತ್ಸಾಹ ಭಂಗ ಮಾಡುತ್ತಲೇ ಓಡಾಡುತ್ತಿರುತ್ತಾರೆ...

 

ಇದೇ ಉದಾಹರಣೆಯನ್ನು ವಿಶ್ಲೇಷಿಸುವುದಾದರೆ. ಮೊಬೈಲ್ ಖರೀದಿ ನಮ್ಮ ಆಯ್ಕೆ. ಅದರ ದರದ ಬಗ್ಗೆ ಕೆಲವು ಕಡೆ ವಿಚಾರಿಸಿಯೇ ತೆಗೆದುಕೊಂಡಿರುತ್ತೇವೆ. ನಾವು ಕೊಟ್ಟ ದರದ ಪಾವತಿ ನಮ್ಮ ಕೈಗೆಟಕುವಂಥದ್ದು ಎಂದು ನಿರ್ಧರಿಸಿದ ಬಳಿಕವೇ ಖರೀದಿ ಮಾಡಿದ್ದೇವೆ. ಅದರ ಫೀಚರುಗಳೂ ನಮಗಿಷ್ಟವಾಗಿವೆ... ಮತ್ಯಾಕೆ ಸುಮ್ನೇ ಹೋಲಿಕೆ ಮಾಡಿ ಚಿಂತಿಸ್ತೀರಿ...? ಒಮ್ಮೆ ಖರೀದಿ ಮಾಡಿದ ಬಳಿಕ ಮುಗಿಯಿತು.. ತಲೆ ಕೆಡಿಸ್ತಾ ಕೂರುವುದರಲ್ಲಿ ಅರ್ಥ ಇಲ್ಲ. ಅಷ್ಟೂ ನಿಮಗೆ ಆ ವ್ಯಕ್ತಿಯ ಮಾತಿನಲ್ಲಿ ನಂಬಿಕೆ ಇದ್ದರೆ, ಮುಂದಿನ ಬಾರಿ ಖರೀದಿಗೆ ಹೊರಡಾವುಗ ಆತನ ಸಲಹೆ ಪಡೆದೇ ಮುಂದುವರಿಯಿರಿ, ಮುಗಿಯಿತಲ್ಲ!

 

………..

 

ಹೊಸ ವಸ್ತು ಖರೀದಿ ಮಾಡಿದ ಬಳಿಕ ಅದರ ದರ ಇಳಿಯುವುದು, ಹೊಸ ರಿಯಾಯಿತಿ ಘೋಷಣೆ ಆಗುವುದು, ಅದಕ್ಕಿಂತ ಚಂದದ ವಸ್ತುಗಳನ್ನು ನಿಮ್ಮ ಅಕ್ಕಪಕ್ಕದವರು ಖರೀದಿಸುವುದು ಇದೆಲ್ಲ ಇದ್ದದ್ದೇ... ವಿನಾ ಕಾರಣ ಹೋಲಿಸುವುದರಿಂದ, ವಿಪರೀತ ಚಿಂತಿಸುವುದರಿಂದ ಖರೀದಿ ನಂತರದ ಖುಷಿಯನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವ ಸತ್ಯವನ್ನು ಮರೆಯಬಾರದು.

 

ದೊಡ್ಡ ಬೆಟ್ಟದ ಶ್ರೇಣಿಗಳನ್ನು ಏರುವಾಗ, ಅದೋ ಅಲ್ಲಿ ಶಿಖರ ಎಂದು ತೋರುತ್ತದೆ, ಅಲ್ಲಿಗೆ ತಲುಪಿದಾಗ ಅದಕ್ಕಿಂತ ಮೇಲೆ ಮತ್ತೊಂದು ಶಿಖರ ಕೈಬೀಸಿ ಕರೆಯುತ್ತದೆ, ಮುಂದೆ ಮತ್ತೊಂದು... ಹೀಗೆ... ಹಾಗಾಗಿ ಅವಕ್ಕೆ ಅಂತ್ಯ ಇರುವುದಿಲ್ಲ. ಬೆಟ್ಟಕ್ಕೆ ತಾಗಿ ಮತ್ತೊಂದುಬೆಟ್ಟ ಇದ್ದೇ ಇರುತ್ತದೆ. ಯಾವ ಬೆಟ್ಟ ನನ್ನ ಗುರಿ ಅಂತ ನಾವು ನಿರ್ಧರಿಸಬೇಕು.

ಅನಗತ್ಯವಾಗಿ, ಅನಾವಶ್ಯಕವಾಗಿ ನಾವು ಹೋಲಿಕೆಗಳಿಗೆ ಬಲಿಯಾದರೆ ನಮ್ಮ ನಿರ್ಧಾರಗಳನ್ನು ನಾವೇ ಅವಮಾನಿಸಿದ ಹಾಗೆ ಅಲ್ವ... ?  ಯೋಚಿಸಿ. ಇಂತ ವಸ್ತು ಇಂತಹ ಬೆಲೆಗೆ ಕೊಳ್ಳುತ್ತೇವೆ ಎಂಬುದು ನಮ್ಮ ನಿರ್ಧಾರ. ಅಲ್ಲಿಗೆ ಮುಗಿಯಿತು. ನಾವು ಯಥಾಸಾಧ್ಯ ಲೆಕ್ಕಾಚಾರ ಮಾಡಿಯೇ ಖರೀದಿ ಮಾಡಿದ ನಂತರವೂ ಖರೀದಿಯಲ್ಲಿ ತುಸು ಸೋತಿರುವ ಸಾಧ್ಯತೆ ಇದೆ. ಆದರೆ ಎಲ್ಲ ಮುಗಿದ ಬಳಿಕ ಚಿಂತಿಸುತ್ತಾ ಕೂರುವುದು ಅರ್ಥಹೀನ. ಸಾಧ್ಯವಾದರೆ ಮುಂದಿನ ಬಾರಿ ಇನ್ನಷ್ಟು ಯೋಚಿಸೋಣ ಅಂದುಕೊಂಡರೆ ಸಾಕು...

 

.......

 

ನಿರ್ಧಾರ ತೆಗೆದುಕೊಳ್ಳುವುದೇ ಬದುಕಿನ ಸವಾಲುಗಳಲ್ಲಿ ಒಂದು. ಕಡಿಮೆ ಸಮಯದಲ್ಲಿ ಖಚಿತ ಹಾಗೂ ನಿಖರ ನಿರ್ಧಾರ ಕೈಗೊಳ್ಳುವವರು ಬಹುಶಃ ಬದುಕಿನಲ್ಲಿ ಲವಿಲವಿಕೆಯಿಂದ, ಯಶಸ್ಸಿನಿಂದ ಕೂಡಿರುತ್ತಾರೆ. ಬಟ್ಟೆ ಅಂಗಡಿಗೆ ಹೋದರೆ ಯಾವ ಬಟ್ಟೆ ಖರೀದಿಸಲಿ ಅಂತ ತಿಳಿಯದೇ ಹೋಗುವುದು, ಬಸ್ಸಿನಲ್ಲಿ ಈ ಸೀಟಿನಲ್ಲಿ ಕುಳಿತ ನಂತರ ಮತ್ತೊಂದು ಸೀಟಿಗೆ ಹೋಗಬೇಕಾ ಅಂತ ಗೊಂದಲ ಆಗುವುದು, 4ಜಿ ಮೊಬೈಲ್ ತಂದು ವಾರದೊಳಗೆ ಅಯ್ಯೋ ನಾನು 5ಜಿ ಮೊಬೈಲ್ ಖರೀದಿ ಮಾಡಬೇಕಿತ್ತ ಅಂತ ತಳಮಳ ಆರಂಭವಾಗುವುದು, ಯಾರಿಗೋ ಏನೋ ಮೆಸೇಜು ಕಳುಹಿಸಿದ ಬಳಿಕ, ಅಯ್ಯೋ ನಾನು ಹಾಗೆ ಹೇಳಬಾರದಿತ್ತೋ ಏನೋ ಅಂತ ನೊಂದುಕೊಳ್ಳುವುದು.... ಹೊಟೇಲಿಗೆ ಹೋಗಿ ಕುಳಿತ ಬಳಿಕ ಯಾವ ತಿಂಡಿ ಆರ್ಡರ್ ಮಾಡಬೇಕು ಅಂತ ತಿಳಿಯದೆ ಚಡಪಡಿಸುವುದು... ಒಂದು ಕೆಲಸಕ್ಕೆ ಸೇರುವ ಹಂತದಲ್ಲಿ ಬಂದ ಮತ್ತೊಂದು ಕೆಲಸದ ಆರ್ಡರ್ ಕೈಲಿ ಹಿಡಿದು ಯಾವುದು ಉತ್ತಮ ಅಂತ ಗೊತ್ತಾಗದೆ ಮಂಡೆ ಶರಬತ್ತು ಮಾಡಿಕೊಳ್ಳುವುದು, ಮದುವೆಗೆ ಬಂದ ಎರಡು ಜಾತಕಗಳ ಪೈಕಿ ಯಾವುದೂ ಉತ್ತಮ ಅಂತ ಗೊತ್ತಾಗದೆ ಕೊನೆಗೆ ಎರಡನ್ನೂ ಕೈಬಿಡುವುದು... ಉಡುಗೊರೆ ಆಯ್ಕೆಯಲ್ಲಿ ಅಂತಿಮ ನಿರ್ಧಾರಕ್ಕೆ ಬಾರದು ಅಸಾಧ್ಯವಾಗುವುದು... ಹೀಗೆ ಸಂಧಿಗ್ಧ ಸೃಷ್ಟಿಸುವ ನಿರ್ಧಾರಗಳ ಅಸಮರ್ಥತೆಗಳು ಮನಃಶಾಂತಿ ಕದಡುವುದು ಸತ್ಯ.

 

....

 

1)      ಒಂದನ್ನು ಪಡೆಯಲು ಮತ್ತೆ ಕೆಲವನ್ನು ತ್ಯಜಿಸಲೇ ಬೇಕು

2)      ಅತಿ ಆಸೆ ಗತಿ ಗೇಡು

ಎಂಬಿತ್ಯಾದಿ ನುಡಿಗಟ್ಟುಗಳನ್ನು ನಾವು ಸ್ಟೇಟಸ್ಸಿನಲ್ಲಿ ಹಾಕುತ್ತೇವೆಯಾದರೂ ಯತಾರ್ಥ ವಿಚಾರಕ್ಕೆ ಬಂದಾಗ ಆಯ್ಕೆಯ ಗೊಂದಲಗಳು ಕಾಡುವುದು ಸುಳ್ಳಲ್ಲ. ಪರಿಣಾಮ, ಹೋಲಿಕೆಗಳು, ಸೋತೇನೇನೋ ಎಂಬ ಭಾವಗಳು ಸಂಕಟ ಕೊಡುವುದೂ ಅಷ್ಟೇ ಸತ್ಯ.

......

 

ಸರಿ-ತಪ್ಪು, ಲಾಭ-ನಷ್ಟಗಳನ್ನು ಸರಿದೂಗಿಸಿ ಲೆಕ್ಕ ಹಾಕಿ ಯಾವುದು ಉತ್ತಮ ಎಂಬ ಆಯ್ಕೆಯ ನಿರ್ಧಾರ ಕೈಗೊಳ್ಳುವುದನ್ನು ರೂಢಿಸಿಕೊಂಡರೆ ಸಮಯ ಹಾಗೂ ಮನಸು ಎರಡೂ ಹಾಳಾಗುವುದನ್ನು ತಪ್ಪಿಸಬಹುದು. ಖರೀದಿ, ಸಂಗಾತಿ ಆಯ್ಕೆ, ವೃತ್ತಿ, ಜಾಗ, ಮನೆ, ಉಡುಪು, ಸಾಧನಗಳು ಯಾವುದೇ ಇರಲಿ... ಅವರಿವರ ಸಲಹೆ ಜೊತೆಗೆ ನಮಗೆ ಯಾವುದು ಇಷ್ಟ, ನಮಗೆ ಯಾವುದು ಅನೂಕಾಲ ಎಂಬ ಪ್ರಜ್ಞೆಯೂ ಬೇಕು. ಎಲ್ಲ ವಸ್ತುಗಳನ್ನೂ ದುಡ್ಡಿನಿಂದಲೇ ಅಳೆಯಲಾಗುವುದಿಲ್ಲ. ಆ ವಸ್ತು, ಸೇವೆ ಕೊಡುವ ಸಂತೃಪ್ತಿ, ನಮಗೆ ಅದರಿಂದಾಗುವ ಪ್ರಯೋಜನವೂ ಬೆಲೆಯನ್ನು ನಿರ್ಧರಿಸುತ್ತದೆ. ಹಾಗಾಗಿ ಕಳೆದುಕೊಳ್ಳುವುದು, ಸೋಲುವುದೆಲ್ಲ ಹಲವು ಸಂದರ್ಭಗಳಲ್ಲಿ ಹೋಲಿಕೆಯ ಪರಿಣಾಮಗಳು ಅಷ್ಟೇ.... ಇದರ ಹೊರತು ವೈಯಕ್ತಿಕವಾಗಿ ನಮಗೇ, ನಮಗೇನಿಷ್ಟ ಎಂಬ ಪ್ರಜ್ಞೆ ಇಲ್ಲದಿದ್ದರೆ, ಯಾವುದು ಉಪಯೋಗಿ, ನನ್ನ ಖರೀದಿ ಸಾಮರ್ಥ್ಯ ಏನು, ನನಗೆ ಅನುಕೂಲ ಯಾವುದು, ಯಾವ ಬಣ್ಣ ನನಗೆ ಹಿಡಿಸುತ್ತದೆ ಎಂಬಿತ್ಯಾದಿ ಪ್ರಾಥಮಿಕ ಜ್ಞಾನವೇ ಇಲ್ಲದೆ ಹೋದರೆ ಯಾರ್ಯಾರೋ ನಮ್ಮ ಪರವಾಗಿ ನಿರ್ಧಾರ ಕೈಗೊಳ್ಳುವ ಹಾಗಾಗುತ್ತದೆ!

 

……

 

ನಿರ್ಧಾರ ಕೈಗೊಳ್ಳುವ ಮೊದಲು ಸಾಕಷ್ಟು ಪೂರ್ವತಯಾರಿ, ಚಿಂತನೆ ಮಾಡಿ... ತುಂಬ ಕಷ್ಟವಾದರೆ ಲಾಭ-ನಷ್ಟಗಳನ್ನು ಪಾಯಿಂಟ್ ರೂಪದಲ್ಲಿ ಬರೆದಿಟ್ಟು ನಿರ್ಧಾರಕ್ಕೆ ಬನ್ನಿ, ನಂತರ ಅದನ್ನು ಕಾರ್ಯರೂಪಕ್ಕೆ ತನ್ನಿ.... ಕಾರ್ಯರೂಪಕ್ಕೆ ಬಂದ ನಂತರ ಈ ಬರಹದ ಮೊದಲ ಪ್ಯಾರಾದಲ್ಲಿ ನೀಡಲಾದ ನಿದರ್ಶನಕ್ಕೆ ನೀವು ಸಿಲುಕಿದ್ದರೆ ದಯವಿಟ್ಟು ಈ ಕೆಳಗಿನ ವಿಚಾರಗಳನ್ನು ಮನನ ಮಾಡಲು ಪ್ರಯತ್ನಿಸಿ.

-     - ಒಮ್ಮೆ ಒಂದು ನಿರ್ಧಾರವನ್ನು ಕಾರ್ಯರೂಪಕ್ಕೆ ತಂದ ಬಳಿಕ ಅದನ್ನು ಇದ್ದ ಹಾಗೆಯೇ ಸ್ವೀಕರಿಸಿ (ಅದರಲ್ಲಿ ಆಗಿರಬಹುದಾದ ಅನ್ಯಾಯ ಮತ್ತು ಲೋಪಗಳನ್ನಲ್ಲ, ವಾಸ್ತವವನ್ನು ಮಾತ್ರ). ವಿನಾ ಕಾರಣ ಹೋಲಿಕೆ ಬೇಡ. ಆ ನಿರ್ಧಾರದ ಕಾರಣಕರ್ತರು ನಾವು ಎಂದಾದ ಮೇಲೆ ನಮಗೆ ಅದು ಇಷ್ಟ ಆದರೆ ಸಾಕು. ವಿಮರ್ಶಕರಿಗೆಲ್ಲ ಇಷ್ಟವಾಗಬೇಕಾದ ಅಗತ್ಯ ಇಲ್ಲ. ಉತ್ಸಾಹ ಕುಗ್ಗಿಸಲೆಂದೇ ಕಾಲೆಳೆಯುವವರ ಪೈಕಿ ಬಹುತೇಕರು ಇತರರಿಗೆ ತಾವು ನೀಡುವ ಪುಕ್ಕಟೆ ಸಲಹೆಗಳನ್ನು ತಮ್ಮ ಬದುಕಿನಲ್ಲಿ ಅನುಸರಿಸುವುದಿಲ್ಲ ಎಂಬುದು ನೆನಪಿರಲಿ.

     - ಹೋಲಿಕೆಗಳೇ ನಮ್ಮನ್ನು ಕುಗ್ಗಿಸುವುದು ಎಂಬ ಪ್ರಜ್ಞೆ ಅಗತ್ಯ. ಜಗತ್ತಿನಲ್ಲಿ ಯಾವುದೂ ಪರಿಪೂರ್ಣ, ಅಂತಿಮವಲ್ಲ. ಒಂದಕ್ಕೆ ಮತ್ತೊಂದು ಹೋಲಿಕೆ ಇದ್ದೇ ಇರುತ್ತದೆ. ಎಲ್ಲರನ್ನೂ ಮೆಚ್ಚಿಸುವಂತೆ, ಎಲ್ಲವೂ 100 ಶೇಕಡಾ ಪರಿಪೂರ್ಣ ಎಂಬಂತೆ ಬದುಕಲು, ಖರೀದಿಸಲು, ಆರಿಸಲು ಅಸಾಧ್ಯ ಎಂಬುದು ನೆನಪಿರಲಿ. ಇದಕ್ಕಿಂತ ಚೆಂದದ್ದು ಮತ್ತೊಂದು, ಇದಕ್ಕಿಂತ ಸಮರ್ಥವಾದದ್ದು ಇನ್ನೊಂದು ನಾಳೆ ಕಂಡರೂ ನಮ್ಮ ಪಾಲಿಗೆ ಇದು ಸಾಕು, ನಾನಿದರಲ್ಲಿ ಸಮಾಧಾನಿ ಎಂಬ ಮನಃಸ್ಥಿತಿ ರೂಢಿಸದೆ ಇದ್ದರೆ ಸಮಾಧಾನ ಎಂಬುದು ಮರೀಚೀಕೆಯಾದೀತು. ನಮಗಿಂತಲೂ ದುಃಸ್ಥಿತಿಯಲ್ಲಿರುವವರನ್ನು ನೋಡಿದರೆ ಮಾತ್ರ ಗೊತ್ತಾಗುವುದು, ನಾವು ಅವರಿಗಿಂತ ಚೆನ್ನಾಗಿದ್ದೇವೆ ಅಂತ. ಹೋಲಿಕೆ ಎಂಬುದ ದ್ವಿಮುಖವಾಗಿರಬೇಕು, ಏಕಮುಖವಲ್ಲ.

     -ಬದುಕು ಚಕ್ರದ ಹಾಗೆ. ಮೇಲ್ಮುಖ, ಕೆಳಮುಖ ಇದ್ದದ್ದೇ, ಇವತ್ತು ಸೋತವನಂತೆ ಕಂಡವ ನಾಳೆ ಗೆದ್ದವನಾಗಿ ಬರಬಹುದು. ಯಾವ ಸೋಲು, ಯಾವ ಗೆಲವೂ ಶಾಶ್ವತವಲ್ಲ. ಹಾಗಾಗಿ ಸೋಲು ಮತ್ತು ಗೆಲವು ಅದನ್ನು ಸ್ವೀಕರಿಸುವದರಲ್ಲಿ ಹಾಗೂ ಇದು ಸೋಲು ಎಂದು ಗೆಲವು  ಎಂದು ನಿರ್ಧರಿಸುವುದರಲ್ಲೂ ಅಡಗಿದೆ.

      -ನಮ್ಮ ದೊಡ್ಡ ಸಮಸ್ಯೆಯೇನೆಂದರೆ ಕಂಡ ಕಂಡ ಟೀಕೆಗಳಿಗೆಲ್ಲ ಉತ್ತರಿಸಲು ಹೊರಡುವುದು. ನಾವೇನು, ನಮ್ಮ ನಿರ್ಧಾರಗಳೇನು ಎಂಬುದು ನಮಗೆ ಗೊತ್ತಾದ ಬಳಿಕ, ನಮ್ಮ ಪರವಾಗಿ ನಮ್ಮ ನಿರ್ಧಾರಗಳನ್ನು ವೃಥಾ ಛೇಡಿಸುವವರಿಗೆ ಉತ್ತರಿಸುವ ಅಗತ್ಯ ಖಂಡಿತಾ ಇಲ್ಲ. ಯಾರಿಗೂ ಉಪದ್ರ ಆಗದಂತೆ ನಮ್ಮ ನಿರ್ಧಾರಗಳು ಕಾರ್ಯರೂಪಕ್ಕೆ ಬಂದ ಬಳಿಕ ಆಡಿಕೊಳ್ಳುವವರನ್ನು ಮೆಚ್ಚಿಸಲು ಹೊರಡುವ ಹುಚ್ಚು ಸಾಹಸ ಯಾಕೆ? ನಿದ್ರಿಸುವವರನ್ನು ಎಚ್ಚರಿಸಬಹುದು, ನಿದ್ರಿಸಿದಂತೆ ನಟಿಸುವವರನ್ನು ಎಚ್ಚರಿಸಲು ಅಸಾಧ್ಯ. ಹಾಗೆಯೇ, ಕೆಣಕಲೆಂದೇ ವಾದಕ್ಕೆ ಬರುವವರು, ಟೀಕಿಸುವವರನ್ನು ಅರ್ಥ ಮಾಡಿಸಲು, ಸಮಾಧಾನಪಡಿಸಲು ಸಾಧ್ಯವೇ ಇಲ್ಲ, ನಮ್ಮ ಮನಃಶಾಂತಿ ದಂಡ ಅಷ್ಟೆ.

    - ಪ್ರತಿ ವ್ಯಕ್ತಿಯ ಅಂತರಾತ್ಮಕ್ಕೂ ತನ್ನ ಇತಿಮಿತಿಗಳು ಖಂಡಿತಾ ಗೊತ್ತಿರುತ್ತವೆ. ಅದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸಲು ಹೊರಟಾಗ, ವಿಪರೀತ ಭ್ರಮೆಗಳನ್ನು ಇರಿಸಿಕೊಂಡಾಗ ಇಂತಹ ಕೀಳರಿಮೆಗಳು ಕಾಡತೊಡಗುತ್ತವೆ. ಪ್ರತಿ ವೃಥಾರೋಪಗಳಿಗೂ ಚಿಂತಿಸುವಂತೆ, ವಾದಿಸುವಂತೆ, ದುಃಖಿಸುವಂತೆ ಮಾಡುತ್ತವೆ. ಸ್ಥಿತಪ್ರಜ್ಞತೆ ಸ್ವಭಾವತಃ ಬಾರದಿದ್ದರೆ ಕನಿಷ್ಠ ಅನುಭವಗಳಿಂದಲಾದರೂ ರೂಢಿಸಿಕೊಳ್ಳಬೇಕು. ಇಂತಹ ವಿಚಾರಗಳನ್ನು ಸ್ಟೇಟಸ್ಸಿನಲ್ಲಿ ಹಾಕುವಷ್ಟೇ ಮುಖ್ಯ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು....

 

ಕೊನೆಯ ಸಾಲು:  ಪಾಪ, ಯಾರೋ ತಾವು ಬದುಕಿನಲ್ಲಿ ಅನುಭವಿಸಿದ್ದನ್ನು ಉತ್ತಮ ಸೂಕ್ತಿಯ ರೂಪದಲ್ಲಿ ಬರೆದು ಹಂಚಿಕೊಳ್ಳುತ್ತಾರೆ, ನಾವು ಆ ಮಾತು ಇಷ್ಟವಾಯಿತೆಂದು ನಮ್ಮ ಸ್ಟೇಟಸ್ಸಿನಲ್ಲಿ ಹಾಕಿ ಖುಷಿ ಪಡುತ್ತೇವೆ... ಅದರ ಜೊತೆಗೆ ಅದನ್ನು ಅಳವಡಿಸುವತ್ತ ಮನ ಮಾಡಿದರೆ ನಮ್ಮ ಬದುಕಿನ ಸ್ಟೇಟಸ್ಸೂ ಸುಧಾರಣೆ ಕಂಡೀತು ಪುಕ್ಕಟೆ ಸಲಹೆ ಕೊಡಲು ಸುಲಭ, ಅನುಸರಿಸಲು ಕಷ್ಟ!

 

-ಕೃಷ್ಣಮೋಹನ ತಲೆಂಗಳ (05.10.2020)

 

 

No comments: