ಕಂಡಿರಾ ಕರಂಡೆ ಕಾಯಿ...? ತಿಂದಿದ್ದೀರ ಇದರ ಉಪ್ಪಿನಕಾಯಿ...!













ಗುಡ್ಡದಲ್ಲಿ ಪೊದೆಗಳ ನಡುವೆ ಬೆಳೆಯುವ ಕಾಡುತ್ಪತ್ತಿ ಕರಂಡೆ ಕಾಯಿ. ಬೋಳುಗುಡ್ಡ, ಬೇಲಿ ಬದಿಯ ಮುಳ್ಳಿನ ಬೆತ್ತದ ಮಾದರಿಯ ಗಿಡಗಳ ತುಂಬ ಬೇಸಿಗೆಯಲ್ಲಿ ಅರಳುತ್ತವೆ ಕರಂಡೆ ಕಾಯಿಗಳು. ದೊಡ್ಡದಾದರೆ ಸುಲಿದ ಅಡಕೆಗಿಂತ ತುಸು ಸಣ್ಣ ಗಾತ್ರದಲ್ಲಿ ಕಾಯಿಗಳು ಸಿಗುತ್ತವೆ. ಕರಾವಳಿಯಲ್ಲಂತೂ ವಿಫುಲವಾಗಿ ಕಂಡು ಬರುತ್ತವೆ. ಇದು ಕಾಡಿನಲ್ಲಿ, ಬೆಟ್ಟದಲ್ಲಿ ತಾನಾಗಿ ಹುಟ್ಟಿ ಬೆಳೆಯುವ ಗಿಡ.

ಬೆತ್ತದ ಹಾಗೆ ಚಾಚಿಕೊಂಡಿರುವ ಸುಮಾರು ನಾಲ್ಕರಿಂದ ಐದು ಮೀಟರ್ ಉದ್ದದ ಗಿಡಗಳ ತುಂಬ ಚೂಪಾದ ಮುಳ್ಳುಗಳಿರುತ್ತವೆ. ಆ ಗಿಡದ ತುಂಬ ಕರಂಡೆ ಕಾಯಿ ಬೆಳೆಯುತ್ತದೆ. ಮಲ್ಲಿಗೆಗಿಂತ ತುಸು ಸಣ್ಣ ಗಾತ್ರದ ಮಲ್ಲಿಗೆಯ ಗಾತ್ರದ ಹೂವು ಆರಂಭದಲ್ಲಿ ಕಾಣ ಸಿಗುತ್ತದೆ. ಅದೇ ಹೂವಿನ ಗೊಂಚಲಿನ ನಡುವೆ ಪುಟ್ಟ ಬಟಾಣಿ ಗಾತ್ರದ ಎಳೆ ಕಾಯಿಗಳು ಕಾಣಿಸುತ್ತವೆ. ಎಳೆ ಕಾಯಿ ನಸು ಕೆಂಪು ಬಣ್ಣದಲ್ಲಿರುತ್ತವೆ. ಬೆಳೆಯುತ್ತಾ ಬಂದ ಹಾಗೆ ಕಾಯಿಯು ಹಸಿರು ಬಣ್ಣಕ್ಕೆ ತಿರುತ್ತದೆ. ಮತ್ತೂ ಮಾಗಿದಾಗ ಕಾಯಿ ಹಣ್ಣಾಗಿ ಕಪ್ಪು ದ್ರಾಕ್ಷಿಯ ಹಾಗೆಯೇ ಕಂಡು ಬರುತ್ತದೆ. ಎಳೆ ಕಾಯಿಗೆ ಚೊಗರು, ಬೆಳೆಯುತ್ತಾ ಬಂದ ಹಾಗೆ ಹುಳಿ ಇದರ ರುಚಿ, ಮಾಗಿ ಹಣ್ಣಾದ ಬಳಿಕ ತುಸು ಸಿಹಿಯೂ ಸೇರಿಕೊಳ್ಳುತ್ತದೆ. ಕಾಯಿಯ ಒಳಗೆ ಕೇಪುಳ ಹಣ್ಣಿನ ಹಾಗೆ ಬೀಜವೂ ಇರುತ್ತದೆ.

ಗಿಡದಲ್ಲಿ ಕಡು ಹಸಿರಿನ ದಟ್ಟವಾದ ಎಲೆಗಳಿರುತ್ತವೆ. ಸುಮಾರು ಎರಡಿಂಚು ಉದ್ದದ ಚೂಪು ಮುಳ್ಳು ಗಿಡದ ವಿಶೇಷತೆ. ಕಾಯಿಯನ್ನು ಕೊಯ್ದಾಗ ಅದರ ತೊಟ್ಟಿನಲ್ಲಿ ಬಿಳಿಯಾದ ಅಂಟು ಮೇಣ ಜಿನುಗುತ್ತದೆ. ಅದು ಕೈಗೆ ತಾಗಿದರೆ ಅಂಟಿನ ಅನುಭವ ಆಗುತ್ತದೆ. ಬಳಿಕ ಎಣ್ಣೆ ಹಾಕಿ ಕೈತೊಳದರೆ ಮಾತ್ರ ಮೇಣ ಶುಚಿಯಾಗುವುದು. ಕರಂಡೆ ಕಾಯಿ ಮುಖ್ಯವಾಗಿ ಬಳಕೆಯಾಗುವುದು ಉಪ್ಪಿನಕಾಯಿ ತಯಾರಿಗೆ. ಮಾರುಕಟ್ಟೆಯಲ್ಲೂ ಇದನ್ನು ವನ್ಯೋತ್ಪತ್ತಿಯಾಗಿ ಮಾರುತ್ತಾರೆ. ಉಪ್ಪಿನಕಾಯಿ ತಯಾರಿಸಲೇ ಗಿರಾಕಿಗಳು ಜಾಸ್ತಿ. ಇದರ ಕಾಯಿಯ ಚಟ್ನಿಯೂ ರುಚಿಯಾಗಿರುತ್ತದೆ. ಇನ್ನಷ್ಟು ಬಳಕೆ ಬಗ್ಗೆ ಗೊತ್ತಿದ್ದವರೇ ತಿಳಿಸಬೇಕು. 



 ಜೀವಸತ್ವಗಳು, ಶರ್ಕರ ಪಿಷ್ಟಗಳು, ಸಸಾರ ಜನಕ, ಕೊಬ್ಬು, ಖನಿಜಾಂಶ ಹೀಗೆ ಮನುಕುಲಕ್ಕೆ ಅತ್ಯಾವಶ್ಯಕವಾದ ಆಹಾರಾಂಶಗಳ ಗಣಿ ಈ ಸ್ವಾದಿಷ್ಟ ಫಲಗಳು ದೊರಕಿಸಿಕೊಡುತ್ತವೆ. ಕರಂಡೆಯ ವೈಜ್ಞಾನಿಕ ಹೆಸರು Carissa Carandas (ಕ್ಯಾರಿಸ್ಸಾ ಕರಂಡಾಸ್). ಹೂ ಬಿಡುವ ಸಸ್ಯ ವರ್ಗಕ್ಕೆ ಸೇರಿದ ಕರಂಡೆ ಅಪೋಸೈನೇಸಿಯೇ ಕುಟುಂಬದ ಸದಸ್ಯ. ಈ ಹಣ್ಣಿಗೆ ಕವಳೆ ಕಾಯಿ, ಗರಜಲ ಕಾಯಿ ಎಂದೂ ಕರೆಯುತಾರೆ. ಪಶ್ಚಿಮ ಘಟ್ಟಗಳ ಹಾಗೂ ತಪ್ಪಲಿನ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಕರಂಡೆಯ ಗಿಡ ಬೆಳೆಯುತ್ತದೆ. ಹಿಮಾಲಯದ ಬೆಟ್ಟಗಳಲ್ಲೂ ಈ ಗಿಡವನ್ನು ಕಾಣಬಹುದು. ಭಾರತವಲ್ಲದೆ ನೇಪಾಳ, ಅಫ್ಘಾನಿಸ್ಥಾನ, ಶ್ರೀಲಂಕಾ ದೇಶಗಳಲ್ಲೂ ಈ ಗಿಡ ಬೆಳೆಯುತ್ತದೆ.

ಇದು ಸಾಧಾರಣವಾಗಿ ಕಾಡು, ಬೆಟ್ಟದಲ್ಲೇ ಹುಟ್ಟಿ ಬೆಳೆಯುತ್ತದೆ. ಊರಿಗೆ ತಂದು ಬೆಳೆಸುವ ಕುರಿತು ಹೆಚ್ಚಿನ ಮಾಹಿತಿ ನನಗಿಲ್ಲ. ಉಪ್ಪಿನಕಾಯಿ ರುಚಿಯಂತೂ ಸೂಪರು.


-ಕೃಷ್ಣಮೋಹನ ತಲೆಂಗಳ.
(ಫೋಟೋಗಳು-ನಾನೇ ಸೆರೆ ಹಿಡಿದವು).


----------------------------


ಕರಂಡೆ ಕಾಯಿ ಕುರಿತ ವೈಜ್ನಾನಿಕ ಮಾಹಿತಿ... ಈ ಕೆಳಗಿನ  ಮಾಹಿತಿಯನ್ನು ವಿಕಿಪೀಡಿಯಾದಿಂದ ಸಂಗ್ರಹಿಸಲಾಗಿದೆ (ಕೃಪೆ)

----------------------------

ಒಣಭೂಮಿ, ಬೆಟ್ಟಗಳಲ್ಲಿ ಹೆಚ್ಚಿನ ನೀರಿನ ಅಗತ್ಯವಿಲ್ಲದೆ ಬೆಳೆಯುವ ಹಣ್ಣಿನ ಗಿಡ ಕರಂಡೆ. ನೆಲದಿಂದ ಹೆಚ್ಚೇನೂ ಎತ್ತರವಿಲ್ಲದ, ಮುಳ್ಳನ್ನು ಹೊಂದಿರುವ ಚಿಕ್ಕ ಗಿಡಗಳಲ್ಲಿ ಬೆಳೆಯುವ ಕರಂಡೆ ಹಣ್ಣು, ಇದು ಬೆಳೆಯುವ ಪ್ರದೇಶಗಳಲ್ಲಿನ ಜನರಿಗೆ ಚಿರ ಪರಿಚಿತ ಮತ್ತು ಅತ್ಯುಪಯೋಗಿ ಹಣ್ಣು. ಜೀವಸತ್ವಗಳು, ಶರ್ಕರ ಪಿಷ್ಟಗಳು, ಸಸಾರ ಜನಕ, ಕೊಬ್ಬು, ಖನಿಜಾಂಶ ಹೀಗೆ ಮನುಕುಲಕ್ಕೆ ಅತ್ಯಾವಶ್ಯಕವಾದ ಆಹಾರಾಂಶಗಳ ಗಣಿ ಈ ಸ್ವಾದಿಷ್ಟ ಫಲಗಳು ದೊರಕಿಸಿಕೊಡುತ್ತವೆ.

ಪರಿಚಯ


ಕರಂಡೆಯ ವೈಜ್ಞಾನಿಕ ಹೆಸರು Carissa Carandas (ಕ್ಯಾರಿಸ್ಸಾ ಕರಂಡಾಸ್). ಹೂ ಬಿಡುವ ಸಸ್ಯ ವರ್ಗಕ್ಕೆ ಸೇರಿದ ಕರಂಡೆ ಅಪೋಸೈನೇಸಿಯೇ ಕುಟುಂಬದ ಸದಸ್ಯ. ಈ ಹಣ್ಣಿಗೆ ಕವಳೆ ಕಾಯಿ, ಗರಜಲ ಕಾಯಿ ಎಂದೂ ಕರೆಯುತಾರೆ. ಪಶ್ಚಿಮ ಘಟ್ಟಗಳ ಹಾಗೂ ತಪ್ಪಲಿನ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಕರಂಡೆಯ ಗಿಡ ಬೆಳೆಯುತ್ತದೆ. ಹಿಮಾಲಯದ ಬೆಟ್ಟಗಳಲ್ಲೂ ಈ ಗಿಡವನ್ನು ಕಾಣಬಹುದು. ಭಾರತವಲ್ಲದೆ ನೇಪಾಳ, ಅಫ್ಘಾನಿಸ್ಥಾನ, ಶ್ರೀಲಂಕಾ ದೇಶಗಳಲ್ಲೂ ಈ ಗಿಡ ಬೆಳೆಯುತ್ತದೆ. ಕರಂಡೆ ಹಣ್ಣು ಮಾಗಿದಾಗ ಹುಳಿಮಿಶ್ರಿತ ಸಿಹಿ ಇರುತ್ತದೆ. ಇದರ ಕಾಯಿಯನ್ನು ಉಪ್ಪಿನಕಾಯಿ ಮಾಡಲು ಬಳಸುತ್ತಾರೆ.

ಕರಂಡೆಯ ಗಿಡ


ಕರಂಡೆ ಹಣ್ಣಿನ ಗಿಡ ಚಿಕ್ಕ ಪೊದೆಯಂತಹ ಸಸ್ಯ. ನೆಲದಿಂದ ಸುಮಾರು ೫-೭ ಅಡಿಗಳಷ್ಟು ಬೆಳೆದಿರುವುದು ಸಾಮಾನ್ಯ. ಹೆಚ್ಚು ನೀರಿನ ಅಗತ್ಯವಿಲ್ಲದ ಇದು, ಬಿಸಿಲು ಪ್ರದೇಶಗಳಲ್ಲಿ ಸುಲಭವಾಗಿ ಬೆಳೆಯುತ್ತದೆ. ಗಿಡವು ನೀಳವಾದ ಕೊಂಬೆಗಳನ್ನು ಹೊಂದಿದ್ದು ಹೆಚ್ಚಾಗಿ ಎರಡು ಕವಲುಗಳಾಗಿ ಚಿಗುರೊಡೆದು ಬೆಳೆಯುತ್ತದೆ. ಗೆಲ್ಲುಗಳ ಮೇಲೆ ಅಲ್ಲಲ್ಲಿ ಸುಮಾರು ಒಂದು ಇಂಚು ಉದ್ದವಿರುವ ಮುಳ್ಳುಗಳಿರುತ್ತವೆ. ಎಲೆಗಳು ಎರಡರಿಂದ ಮೂರು ಇಂಚು ಉದ್ದವಿದ್ದು, ತಿಳಿ ಹಸಿರಿನಿಂದ ಗಾಢ ಹಸಿರು ಬಣ್ಣವಿರುತ್ತವೆ. ಗೆಲ್ಲುಗಳ ಮೇಲೆ ಮುಳ್ಳುಗಳ ಗಂಟಿನೊಡನೆಯೇ ಬೆಳೆದ ಎಲೆಗಳು ಒಂದಕ್ಕೊಂದು ಅಭಿಮುಖವಾಗಿರುತ್ತವೆ. ಯಾವುದೇ ಆರೈಕೆಯಿಲ್ಲದೆ ಗುಡ್ಡಗಳ ಮೇಲೆ ಬೆಳೆಯುವ ಈ ಗಿಡವನ್ನು ರೈತರು ಬೇಲಿಗಾಗಿಯೂ ಉಪಯೋಗಿಸುತ್ತಾರೆ. ಬೀಜದಿಂದ ಹೊಸ ಗಿಡವನ್ನು ಪಡೆಯಬಹುದು.

ಕರಂಡೆ ಹಣ್ಣಿನ ಲಕ್ಷಣಗಳು


ಬೇಸಿಗೆಯ ಕಾಲದಲ್ಲಿ ಮಾರ್ಚ್ ತಿಂಗಳಿನಿಂದ ಮೇ-ಜೂನ್ ವರೆಗೂ ಕರಂಡೆ ಹಣ್ಣು ದೊರೆಯುತ್ತದೆ. ಕರಂಡೆ ಹಣ್ಣು ನೋಡಲು ಕಪ್ಪು ದ್ರಾಕ್ಷಿಯನ್ನು ಹೋಲುತ್ತದೆ. ಗಾತ್ರದಲ್ಲಿ ದ್ರಾಕ್ಷಿಗಿಂತ ಸ್ವಲ್ಪ ಸಣ್ಣಗಿರುವ ಈ ಹಣ್ಣು ಆಕಾರದಲ್ಲಿ ಗುಂಡಗಿರುತ್ತದೆ. ಸುಮಾರು ೫-೬ ಕಾಯಿಗಳ ಗೊಂಚಲು ಅಲ್ಲಲ್ಲಿ ಬೆಳೆದಿರುತ್ತದೆ. ಗೊಂಚಲಲ್ಲದೆ ಒಂದು, ಎರಡು ಕಾಯಿಗಳೂ ಇರಬಹುದು. ಚಿಕ್ಕದಿರುವಾಗ ಎಲೆಯಂತಹುದೇ ಹಸಿರು ಬಣ್ಣವಿರುವ ಕಾಯಿಗಳು ಬೆಳೆಯುತ್ತಿದ್ದಂತೆ ಹಸಿರು ಮಿಶ್ರಿತ ಗುಲಾಬಿ-ಕೆಂಪು ಬಣ್ಣಕ್ಕೆ ತಿರುಗುತ್ತವೆ. ಪೂರ್ತಿ ಮಾಗುವ ಮೊದಲು ಕಂದು-ಕೆಂಪು ಬಣ್ಣವಿರುವ ಕಾಯಿ ಮಾಗಿದಾಗ ಪೂರ್ತಿ ಕಪ್ಪಾಗುತ್ತದೆ. ಕಾಯಿ ಇದ್ದಾಗ ಕೊಯ್ದರೆ ತೊಟ್ಟಿನಿಂದ ಬಿಳಿಯಾದ ಹಾಲು ಒಸರುತ್ತದೆ. ಹಣ್ಣಿನ ತೊಟ್ಟಿನಿಂದಲೂ ಸ್ವಲ್ಪವಾಗಿ ಈ ಹಾಲು ಒಸರುವುದು. ಹಣ್ಣಿನೊಳಗಡೆ ಅರ್ಧ ಚಂದ್ರಾಕೃತಿಯ, ಒಂದರ ಪಕ್ಕ ಒಂದು ಒತ್ತಾಗಿರುವ ಅನೇಕ ತೆಳ್ಳನೆಯ ಚಿಕ್ಕ ಬೀಜಗಳಿರುತ್ತವೆ.

ಹಣ್ಣಿನ ರುಚಿ


ಕಾಯಿಯು ಪೂರ್ತಿ ಒಗರಾಗಿದ್ದು ತಿನ್ನಲು ಅಷ್ಟೇನೂ ಹಿತಕರವಲ್ಲ. ಮಾಗುತ್ತಿದ್ದಂತೆಯೇ ಹುಳಿಯಾಗುವ ಇದು ತಿನ್ನಲು ಯೋಗ್ಯವಾಗುತ್ತದೆ. ಪೂರ್ತಿ ಮಾಗಿದ ಹಣ್ಣು ಮಧುರವಾದ ಸಿಹಿ ರುಚಿಯನ್ನು ಹೊಂದಿದ್ದು ಸ್ವಲ್ಪ ಹುಳಿಯ ಛಾಯೆಯೂ ಇದ್ದು ತಿನ್ನಲು ಹಿತವಾಗಿರುತ್ತದೆ. ಕಾಯಿ-ಹಣ್ಣು ಕೊಯ್ದಾಗ ಒಸರುವ ಅಂಟಾಗಿರುವ ಹಾಲು ತಿನ್ನಲು ಅಡ್ಡಿಯಾಗದು. ಕೈಗೆ, ಹಲ್ಲಿಗೆ ಅಂಟಿದರೂ ನೀರಿನಿಂದ ತೊಳೆದರೆ ಸುಲಭವಾಗಿ ಬಿಟ್ಟುಹೋಗುವುದು.

ಕರಂಡೆಯ ಉಪಯೋಗಗಳು


  1. ಹಣ್ಣನ್ನು ತಿನ್ನಲು ಉಪಯೋಗಿಸುತ್ತಾರೆ. ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣು ಪಿತ್ಥ ನಿವಾರಕವೂ ಹೌದು. ಆದರೆ ಉಷ್ಣ ಗುಣವಿರುವ ಈ ಹಣ್ಣನ್ನು ಜಾಸ್ತಿ ತಿಂದರೆ ಹೊಟ್ಟೆ ನೋವು, ಅಜೀರ್ಣವಾಗುವ ಸಂಭವವಿದೆ. ಕರಂಡೆಯ ಹೆಚ್ಚಿನ ಉಪಯೋಗವಾಗುವುದು ಉಪ್ಪಿನಕಾಯಿ ತಯಾರಿಸಲು. ಕಾಯಿಯು ಹುಳಿಯಾಗಿರುವುದರಿಂದ ಇದರ ಉಪ್ಪಿನಕಾಯಿಯು ರುಚಿಕರವಾಗಿರುತ್ತದೆ.
  2. ಹಣ್ಣಿನಲ್ಲಿ ಪೆಕ್ಟಿನ್ ಎಂಬ ರಾಸಾಯನಿಕವಿರುವುದರಿಂದ ಇದನ್ನು ಜಾಮ್, ಜೆಲ್ಲಿಗಳ ತಯಾರಿಯಲ್ಲಿಯೂ ಉಪಯೋಗಿಸುತ್ತಾರೆ. ಕರಂಡೆಯ ಉಪಯೋಗವನ್ನು ಮನಗಂಡ ರಾಜಸ್ಥಾನ, ಬಿಹಾರ, ಗುಜರಾತ್, ಉತ್ತರಪ್ರದೇಶ ರಾಜ್ಯಗಳ ಕೆಲವು ರೈತರು ಇದನ್ನು ವಾಣಿಜ್ಯ ಬೆಳೆಯಾಗಿಯೂ ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ.
  3. ವಾಂತಿ, ಯಕ್ರತ್ತಿನ ತೊಂದರೆ, ಹೊಟ್ಟೆನೋವು, ಹೃದಯದ ಕಾಯಿಲೆಗಳಿಗೆ ಕವಳಿಹಣ್ಣಿನ ಔಷಧಿ. ಕಾಯಿಯ ರಸದಿಂದ ಅಜೀರ್ಣ ನಿವಾರಣೆ.ಎಲೆಯ ರಸ ಮತ್ತು ತೊಗಟೆಯ ಕಷಾಯ ಜ್ವರಕ್ಕೆ ಗುಣಕಾರಿ. ಹೊಟ್ಟೆಹುಣ್ಣು,ಬಾಯಿಹುಣ್ಣು ಮತ್ತು ತುರಿಕೆಗೆ ಬೇರಿನ ಉಪಯೋಗವಾಗುತ್ತದೆ. ಚರ್ಮ ಹದಗೊಳಿಸಲು ಮತ್ತು ಬಣ್ಣ ಹಾಕಲು ಕಾಯಿ ಬಳಸುತ್ತಾರೆ.
  4. ಭಾರತದಲ್ಲಿ ಹುಟ್ಟಿ ಬೆಳೆದ ಈ ಗಿಡಗಳು ಸುಮಾರು ೩-೫ ಮೀಟರ್ ಎತ್ತರವಾಗಿವೆ. ಹೊಳೆಯುವ ಹಸಿರೆಲೆಗಳ ಮುಳ್ಳು ಪೊದೆ.ಎಲೆ,ಕಾಯಿ ಕಿತ್ತರೆ ಬಿಳಿ ಅಂಟುದ್ರವ ಸೂಸುವಿಕೆ. ಕೆಂಪು ಬಣ್ಣದ ಎಳೆ ಕಾಯಿ ಬಲಿತಾಗ ಹಸಿರು ಬಣ್ಣಕ್ಕೆ ತಿರುಗು ತ್ತದೆ. ಗೋಲಿಯಾಕಾರದ,ಕಪ್ಪು ಬಣ್ಣದ ಕಳಿತ ಹಣ್ಣು ಹುಳಿಮಿಶ್ರಿತ ಸಿಹಿ. ಸಮುದ್ರಮಟ್ಟದಿಂದ ಹಿಮಾಲಯದವರೆಗೆ ಮರುಳುಗಾಡು, ಗುಡ್ಡಬೆಟ್ಟ, ಪಾಳುಜಮೀನಿನಲ್ಲಿ ಬೆಳೆಯಬಲ್ಲ ದಾಡಸಿ ಸಸ್ಯ. ಇದು ಒಂದು ಬೀಜದಿಂದ ಸಸ್ಯಾಭಿವೃಧ್ದಿ ಯಾಗಿದೆ.

1 comment:

Unknown said...

ಕರಂಡೆ ನೆಡುವ ಸಮಯ ಮತ್ತು ವಿಧಾನ ತಿಳಿಸಬೇಕಾಗಿ ವಿನಂತಿ