ಬಿರುಗಾಳಿ ಕರಗಿದ ಮೇಲೆ ಬರುವ ಬೆಳಕು ಕೇವಲ ಕನಸಲ್ಲ....


ಗಾಡಾಂಧಕಾರದಲ್ಲಿ ರಸ್ತೆಯನ್ನು ಬೆಳಗಿಸುವ ವಾಹನದ ಹೆಡ್ ಲೈಟಿಗೆ ಒಂದು ಪರಿಧಿ ಇರುತ್ತದೆ. ರಸ್ತೆ ಪ್ರಖರವಾಗಿ ಕಂಡರೂ ಕಣ್ಣಂಚಿನ ಆಚೆಗಿನ ಭಾಗಗಳೆಲ್ಲ ಮಬ್ಬು ಮಬ್ಬಾಗಿ, ಅದರಾಚೆಗೆ ಕಪ್ಪಾಗಿಯೇ ತೋರುತ್ತದೆ. ಎಷ್ಟೇ ದೂರ ಹೋದರೂ ಹೆಡ್ ಲೈಟಿನ ವ್ಯಾಪ್ತಿ ಮೀರಿ ಬೆಳಕು ಹರಿಯುವುದಿಲ್ಲ...

 ------------------------------------

ಕತ್ತಲೆ ಕವಿದು ಸದ್ದೆಲ್ಲಾ ತನ್ನೊಳಗೇ ಆವಾಹನೆ ಆದಂತೆ ಸುರಿಯುವ ಬಿರುಗಾಳಿ, ಮಳೆಯೊಂದು ವಿಚಿತ್ರ ಏಕಾಂತವನ್ನು ಸೃಷ್ಟಿಸುತ್ತದೆ. ಆ ಆರ್ಭಟ, ಗಾಳಿಯ ರಭಸ, ಎರಚುವ ಹನಿಗಳ ಭರಾಟೆಯಲ್ಲಿ ಸೆಖೆ ಎಂದರೇನು, ಬಿಸಿಲೆಂದರೇನು, ಬರವೆಂದರೇನು ಎಂಬುದೇ ಕೆಲಕಾಲ ಮರೆತು ಹೋಗಿರುತ್ತದೆ. ಈ ಕ್ಷಣಕ್ಕೆ ಮಳೆಯ ಆರ್ಭಟ ಸ್ವಲ್ಪ ತಗ್ಗಲಿ ಎಂದೇ ಮನಸ್ಸು ಪ್ರಾರ್ಥಿಸುತ್ತದೆ.

ಮಳೆ ಜೋರಾದಂತೆ ಕಡಲ ತಡಿ ಅಬ್ಬರಿಸುತ್ತದೆ. ದಡದಂಚಿನ ಮಣ್ಣು, ಮರ, ಮನೆಗಳನ್ನು ಆಪೋಶನ ತೆಗೆದುಕೊಳ್ಳುತ್ತದೆ. ಉಗ್ರ ಅಲೆಗಳ ನರ್ತನ ಬೆಚ್ಚಿ ಬೀಳಿಸುತ್ತದೆ...
ಎಷ್ಟು ಹೊತ್ತು. ಎಷ್ಟು ಕಾಲ... ಆ ಪರಿಧಿ, ಆ ವ್ಯಾಲಿಡಿಟಿ ಮುಗಿವ ವರೆಗೆ ಮಾತ್ರ. ಇರುಳು ಕಳೆದು ಬೆಳಕು ಹರಿದ ಮೇಲೆ ಅದೇ ವಾಹನದ ಹೆಡ್ ಲೈಟು ಸೂರ್ಯನೆದುರು ಮಂಕಾಗಿ ಕಾಣುತ್ತದೆ. ಬಿರುಗಾಳಿ ನಿಂತ ಬಳಿಕ ಆ ವರೆಗಿನ ರಸ್ತೆಯಲ್ಲಿ ಮರಗಳ ಓಡಾಟ, ಚರಂಡಿಯ ಪ್ರವಾಹವೆಲ್ಲ ಪುಟ್ಟದೊಂದು ಡಾಕ್ಯುಮೆಂಟರಿಯ ನೆನಪಿನ ಹಾಗೆ ಭಾಸವಾಗುತ್ತದೆ. ಕಡಲೆಷ್ಟೇ ಮುಂದುವರಿದರೂ ಸೀಮೆ ದಾಟಿ ಬರುವುದಿಲ್ಲ. ಬೇಸಗೆ ಹೊತ್ತಿಗೆ ಮತ್ತದೇ ಬೌಂಡರಿ ಆಚೆಗೆ ಅಲೆಗಳೊಡನೆ ಆಡುತ್ತಿರುತ್ತದೆ.

 ------------------------

ಒಂದು ಆತಂಕ, ಒಂದು ಸಂಧಿಗ್ಧತೆ, ಒಂದು ಅಸಹಾಯಕತೆ ಎಲ್ಲದಕ್ಕೂ ಒಂದು ಅವಧಿ ಇದೆ. ನಾವು ಕೊರಗಿದರೂ, ಅತ್ತರೂ, ನಿರ್ಲಕ್ಷಿಸಿದರೂ, ಉಪಚರಿಸಿದರೂ ಆ ಕಷ್ಟಕಾಲವೆಂಬುದು ತನ್ನ ಹೊತ್ತಿನ ಆಟವನ್ನು ಆಡಿಯೇ ನಿರ್ಗಮಿಸುತ್ತದೆ. ಪ್ರತಿಕ್ರಿಯೆಗೂ ಇಂತಹ ಸಂಭವಗಳಿಗೆ ಎಷ್ಟೋ ಬಾರಿ ಸಂಬಂಧವೇ ಇರುವುದಿಲ್ಲ. ಸಿದ್ಧತೆ ಹಾಗೂ ರಕ್ಷಣಾತ್ಮಕ ಪ್ರತಿ ಆಟವೇ ಇಂತಹ ಕಾಲಘಟ್ಟವನ್ನು ದಾಟಿ ಹೋಗಲು ಇರುವ ಮಾರ್ಗೋಪಾಯ.

------------------------------------

ಈಗ ಕಣ್ಣೆದುರಿಗಿರುವುದೇ ಅಂತಿಮ ಸ್ಥಿತಿಯೇನೋ ಎಂದು ಕಂಗಾಲಾಗಿಸುವ ಎಷ್ಟೋ ಪರಿಸ್ಥಿತಿಗಳು ಬದುಕಿನಲ್ಲಿ ಹಾದು ಹೋಗುತ್ತವೆ. ತುಂಬ ಸಲ ಅವನ್ನು ಯಶಸ್ವಿಯಾಗಿ ದಾಟಿ ಹೋದ ಬಳಿಕ ಅದರ ಛಾಯೆ ನಮ್ಮನ್ನು ಬೆಚ್ಚಿ ಬೀಳಿಸುತ್ತದೆಯೇ ವಿನಹ ಬದುಕು ಪೂರ್ತಿ ಅದೇ ವ್ಯಥೆಯನ್ನು ಆವಾಹಿಸಿಕೊಂಡು ಕೂರಲಾಗುವುದಿಲ್ಲ. ತಾತ್ಕಾಲಿಕ ವೈರಾಗ್ಯಗಳ ಹಾಗೆ ಅಷ್ಟೇ.... ಕೊರೋನಾ, ಲಾಕ್ ಡೌನ್ ಕೂಡಾ ಒಂದು ಅನಿರೀಕ್ಷಿತ ಹಾಗೂ ಅನಿಶ್ಚಿತ ಕಾಲ ನಿರ್ಬಂಧದ ಸಂದರ್ಭ. ಆತಂಕ ಪರಿಹಾರ ಅಲ್ಲ, ವಿವೇಚನೆ, ಸಹನೆ ಹಾಗೂ ಜಾಣ್ಮೆ ಇದ್ದರೆ ದಾಟಿ ಹೋಗಬಹುದು. ಇಲ್ಲವಾದರೆ, ಗೊತ್ತಲ್ಲ 99 ರನ್ ಮಾಡಿ ಆಡಿದ ಶೂರನೂ ಮುಂದಿನ ಬಾಲಿಗೆ ಮೈಮರೆತು ಆಡಿದರೆ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಗೆ ಮರಳುತ್ತಾನೆಯೇ ಹೊರತು, ಸೆಂಚುರಿಗೆ ಒಂದು ರನ್ ಕಮ್ಮಿ ಮಾಡಿದರೂ ಅದು ಸೆಂಚುರಿ ಆಗುವುದಿಲ್ಲ....!

-ಕೃಷ್ಣಮೋಹನ ತಲೆಂಗಳ.

No comments: