ಪ್ರವಾಸಕ್ಕೆ ಹೋದಾಗಲಾದರೂ "ನಾಟ್ ರೀಚೇಬಲ್" ಆದರೆ ಭೂಕಂಪ ಆದೀತ?!!!

 



ನಿತ್ಯ ಬದುಕಿನ ಜಂಜಾಟಗಳಲ್ಲೊಂದು ಬದಲಾವಣೆ ಇರಲಿ,  ಮೈ ಮನಸ್ಸು ಪುನಶ್ಚೇತನಗೊಳ್ಳಲಿ ಅಂತ ನಾವು ಬಹಳಷ್ಟು ಸಾಲ ಸಣ್ಣ ಸಣ್ಣ (ಅಥವಾ ದೊಡ್ಡ ದೊಡ್ಡ) ಪ್ರವಾಸಗಳಿಗೆ ಏಕಾಂಗಿಯಾಗಿ ಅಥವಾ ಬಂಧು ಮಿತ್ರರ ಜೊತೆ ತೆರಳುತ್ತೇವೆ. ಆ ದಿನದ ಮಟ್ಟಿಗೆ ನಮ್ಮನ್ನು ನಾವು ಹೊಸ ಪರಿಸರ, ಹವೆ, ದೃಶ್ಯ, ಜನರೊಂದಿಗೆ ತೆರೆದುಕೊಂಡು ಹೊಸ ಚೈತನ್ಯ ರೂಢಿಸಿಕೊಳ್ಳಲು ಇಂತಹ ಪ್ರವಾಸಗಳು ಸಹಕಾರಿ. ಆದರೆ ಈ ಮೊಬೈಲ್ ಎಂಬ ಅಂಗೈ ನಿಯಂತ್ರಕ ನಮ್ಮನ್ನು ಎಷ್ಟು ಆವರಿಸಿಕೊಂಡಿದೆ ಎಂದರೆ, ಪ್ರವಾಸ ಹೋದಲ್ಲೂ ನಾವು ಮೊಬೈಲಿಗೋಸ್ಕರವೇ ಬದುಕುತ್ತಿದ್ದೇವೆಯೇನೋ ಅಂತ ನನಗೆ ಅನ್ನಿಸುತ್ತದೆ. ಇತ್ತೀಚೆಗೆ ಸಂಚಾರಕ್ಕೆ ಹೋದಾಗ ನಾನು ಕಂಡ ಕೆಲವು ವಿಚಾರಗಳಿವು:

1)      ಒಂದು ಸುಂದರ ಜಾಗಕ್ಕೆ ಪ್ರವಾಸ ಹೋಗುತ್ತಿದ್ದರೂ, ವಾಹನದ ಕಿಟಕಿ ಹೊರಗೆ ಆಹ್ಲಾದಕರ ದೃಶ್ಯಗಳು ಕಾಣಿಸುತ್ತಿದ್ದರೂ ಅತ್ತ ಗಮನ ಹರಿಸದೆ, ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಇರುವುದು. ಅಥವಾ ಮೊಬೈಲಿನಲ್ಲಿ ಸಿನಿಮಾ ನೋಡುತ್ತಾ ಮೈಮರೆಯುವುದು. ತಾವು ಯಾವ ದಾರಿಯಲ್ಲಿ ಸಾಗುತ್ತಿದ್ದೇವೆ ಎಂಬ ಪರಿವೆಯೂ ಇವರಿಗೆ ಇರುವುದಿಲ್ಲ

2)      ನೆಟ್ವರ್ಕ್ ಇಲ್ಲದ ಜಾಗ ಪ್ರವಾಸದ ನಡುವೆ ಸಿಕ್ಕರೆ ಚಡಪಡಿಸುತ್ತಾ, ನೆಟ್ವರ್ಕ್ ಸಿಕ್ಕ ತಕ್ಷಣ ಮೊಬೈಲಿನಲ್ಲಿ ನ್ಯೂಸ್ ಚಾನೆಲ್ಲುಗಳನ್ನು ನೋಡುವುದು, ಸ್ಟೇಟಸ್ ಚೆಕ್ ಮಾಡುವುದು, ಯಾವುದೋ ರೀಲ್ಸ್ ಗಳನ್ನು ದೊಡ್ಡದಾಗಿ ಪ್ಲೇ ಮಾಡಿ, ಸುತ್ತಮುತ್ತ ಇರುವವರ ಏಕಾಗ್ರತೆಗೂ ಭಂಗ ತರುವುದು.

3)      ದೇವಸ್ಥಾನಕ್ಕೋ, ಗಿರಿಧಾಮಕ್ಕೋ, ಬೀಚಿಗೋ ಹೋದಾಗ ಅಲ್ಲಿಂದ ತಮ್ಮ ಬಂಧು ಮಿತ್ರರಿಗೆ ವೀಡಿಯೋ ಕಾಲ್ ಮಾಡುತ್ತಾ, ಆ ಜಾಗದಿಂದ ತೆರಳುವ ವರೆಗೂ ಅವರ ಜೊತೆ ದೊಡ್ಡದಾಗಿ ಮಾತನಾಡುತ್ತಾ (ಇಯರ್ ಫೋನ್ ಬಳಸದೆ, ಸ್ಪೀಕರ್ ಆನ್ ಮಾಡಿ) ಸದ್ದು ಗದ್ದಲದ ವಾತಾವರಣ ಸೃಷ್ಟಿಸುವುದು.

4)      ನಿಮ್ಮ ವಾಹನದಲ್ಲಿ ತೆರಳಿ ಪ್ರವಾಸಿ ತಾಣಕ್ಕೆ ಪಾದಾರ್ಪಣೆ ಮಾಡಿದಾಕ್ಷಣದಿಂದ ಮೊದಲ್ಗೊಂಡು ಅಲ್ಲಿಂದ ಹೊರಡುವ ವರೆಗೂ ಬೆನ್ನು ಬೆನ್ನು ಸೆಲ್ಫೀ ತೆಗೆಯುತ್ತಾ ಇರುವುದು, ಆ ಸೆಲ್ಫಿಯಲ್ಲಿ ಹಿಂದಿನ ಸಹಜ ಪರಿಸರಕ್ಕಿಂತ ಹೆಚ್ಚಾಗಿ ನಮ್ಮ ಮುಸುಡು ಹೇಗೆ ಆಕರ್ಷಕವಾಗಿ ಬರಬಹುದು ಅಂತಲೇ ಯೋಚಿಸುತ್ತಾ ಪೋಸು ಕೊಡುತ್ತಾ ಇರುವುದು. ಮತ್ತು ಒಂದೇ ಸಮನೆ ವೀಡಿಯೋ ಶೂಟ್ ಮಾಡುತ್ತಲೇ ಇರುವುದು. ಅದನ್ನೆಲ್ಲ ಮತ್ತೆ ಪ್ಲೇ ಮಾಡುವುದಕ್ಕೆ ಇರಬಹುದ ಅಂತ ಬಹಳಷ್ಟು ಸಲ ಅಚ್ಚರಿ ಪಡುತ್ತೇನೆ.

5)      ಎಲ್ರೂ ಪ್ರಶಾಂತವಾಗಿ ಸುಂದರ ತಾಣಗಳ ವೀಕ್ಷಣೆ ಮಾಡುತ್ತಿರಬೇಕಾದರೆ ಯಾರೋ ಒಬ್ಬ ದೊಡ್ಡದಾಗಿ ಸ್ಪೀಕರ್ ಆನ್ ಮಾಡಿ ಬಾಲ್ಯ ಕಾಲದ ಸ್ನೇಹಿತನಲ್ಲೋ, ಸಾಲ ವಾಪಸ್ ಕೊಡದವನಲ್ಲೋ ಗಂಟೆಗಟ್ಟಲೆ ಸಂಭಾಷಿಸುವುದು. ಅಥವಾ ಫೋನಿನಲ್ಲಿ ಜಗಳ ಮಾಡುವುದು, ಅಥವಾ ಪ್ರವಾಸಕ್ಕೆ ಸಂಬಂಧಿಸದ ಯಾವುದೋ ಶೇರು, ರಾಜಕೀಯ, ಆಟೋಟಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುವುದು. ಕೆಟ್ಟ ಜೋಕು ಹೇಳಿ ಗಹಗಹಿಸಿ ನಗುವುದು.

6)      ತಾನೆಲ್ಲಿದ್ದೇನೆ, ತನ್ನ ಸುತ್ತಮುತ್ತ ಯಾರಿದ್ದಾರೆ ಎಂಬ ಪರಿವೆ ಇಲ್ಲದಾಗಿ ದೊಡ್ಡದಾಗಿ ಇಡೀ ಬಸ್ಸಿಗೇ ಕೇಳುವ ಹಾಗೆ ಮೊಬೈಲಿನಲ್ಲಿ ತನಗಿಷ್ಟವಾದ ಪದ್ಯ ಪ್ಲೇ ಮಾಡಿ, ಈ ಜಗತ್ತಿಗೂ ತನಗೂ ಸಂಬಂಧವೇ ಇಲ್ಲವೇನೋ ಎಂಬ ಹಾಗೆ ನಿರ್ಲಿಪ್ತವಾಗಿರುವುದು.

ಇಂತಹ ಉದಾರಹಣೆ ಇನ್ನಷ್ಟು ಕೊಡಬಹುದು. ಮೊಬೈಲ್ ನಿಮ್ಮದು, ಅದಕ್ಕೆ ದುಡ್ಡು ಸುರಿದವರು ನೀವೇ, ರಿಚಾರ್ಜ್ ಮಾಡುವವರೂ ನೀವೇ... ಮೊಬೈಲ್ ಹೇಗೆ ಬಳಸಬೇಕು ಎಂಬುದು ನಿಮ್ಮ ಇಷ್ಟ ಅಂತ ಗೊತ್ತು. ಆದರೆ ನೀವು ದಿನದ ಮಟ್ಟಿಗೆ ಪ್ರವಾಸಕ್ಕೆ ಹೋದಲ್ಲಿಯೂ ಆ ಮೊಬೈಲಿನಿಂದ ಆಚೆ ಬರಲಾಗುವುದಿಲ್ಲ ಅಂತಾದರೆ ನೀವು ಪ್ರವಾಸಕ್ಕೆ ಹೋಗುವ ಉದ್ದೇಶವಾದರೂ ಏನು?! ಒಂದು ದಿನದ ಮಟ್ಟಿಗಾದರೂ ಆ ಜಾಲತಾಣದ ಅತಿರೇಕದ ಚರ್ಚೆ, ಲೈಕು, ಶೇರು, ಕಮೆಂಟುಗಳ ಕೃತಕ ಲೋಕ, ತೋರಿಕೆಯ ಡೀಪಿಗಳು, ಒಣಚರ್ಚೆ, ಹರಟೆಗಳ ಗುಂಗಿನಿಂದ ಆಚೆ ಬರಲು ಆಗುವುದಿಲ್ಲ ಅಂತಾದರೆ ಪ್ರವಾಸ ಹೋಗುವುದು ಯಾಕೆ?!

ಪ್ರವಾಸಕ್ಕೆ ಹೋಗುವುದು ಒಂದು ಬದಲಾವಣೆಗೆ, ಒಂದು ಹೊಸ ಜಾಗದ ಪರಿಚಯಕ್ಕೆ. ಅಥವಾ ಯಾಂತ್ರಿಕ ಬದುಕಿನಲ್ಲೊಂದು ಉತ್ಸಾಹ ಕಂಡುಕೊಳ್ಳಲು ಬೇಕಾದ ಹುರುಪು ಪಡೆಯಲು. ಅಂತಹ ಪ್ರಕೃತಿ ಸಹಜ ವಾತಾವರಣದಲ್ಲಿ ಇದ್ದಾಗಲೂ ಮೊಬೈಲ್ ನಲ್ಲಿ ಆನ್ ಲೈನ್ ಬಂದು ಜಾಲತಾಣ ನೋಡಬೇಕು ಅಂತಲೇ ಅನ್ನಿಸಿದರೆ, ಸ್ಪೀಕರ್ ಇರಿಸಿ ಹಾಡು ಕೇಳಬೇಕು ಅಂತ ಅನ್ನಿಸಿದರೆ, ಅಲ್ಲೂ ನಿಮಗೆ ನ್ಯೂಸ್ ಚಾನೆಲ್ಲುಗಳನ್ನು ಕೆಲ ಗಂಟೆಗಳ ಕಾಲವೂ ಬಿಡಲಾಗುವುದಿಲ್ಲ ಅಂತಾದರೆ ನೀವೇನು ಬದಲಾವಣೆ ಕಾಣುತ್ತೀರೋ ಅರ್ಥ ಆಗುವುದಿಲ್ಲ.

ನೀವು ಬೀಚಿಗೆ ಕಾಲಿಟ್ಟ ತಕ್ಷಣದಿಂದ ಅಲ್ಲಿಂದ ಹೊರಡುವಲ್ಲಿ ವರೆಗೂ ಮನೆಯವರಿಗೆ ಅಲ್ಲಿನ ದೃಶ್ಯಗಳನ್ನು ವೀಡಿಯೋ ಕಾಲ್ ಮೂಲಕ ತೋರಿಸುತ್ತಲೇ ಇರುತ್ತೀರಿ ಅಂತಾದರೆ ನೀವು ನೀವಾಗಿ ಆ ಜಾಗವನ್ನು ಮನಃಪೂರ್ವಕವಾಗಿ ನೋಡುವುದು ಯಾವಾಗ?! ಅಷ್ಟಕ್ಕೂ ಆ ಜಾಗದ ಬಗ್ಗೆ ಪ್ರವಾಸಕ್ಕೆ ಬರಲಾಗದ ಮನೆಯವರಿಗೆ ತೋರಿಸೇಬೇಕಾದರೆ ಒಂದು ವೀಡಿಯೋ ಮಾಡಿ ಮನೆಗೆ ಹೋದ ಬಳಿಕ ತೋರಿಸಬಹುದು ತಾನೆ?.

ಅಲ್ಲಿರುವ ಅಷ್ಟೂ ಹೊತ್ತು ಸೆಲ್ಫೀಯಲ್ಲೂ ನಮ್ಮನ್ನೇ ಕಾಣುವ ಆಸೆ ಇದ್ದರೆ ಮತ್ತೆ ಪರಿಸರವನ್ನು ನೋಡುವ ಹಂಬಲ ಯಾಕೆ. ಸೆಲ್ಫೀ ತೆಗೆಯೋಣ, ಅದು ತಪ್ಪಲ್ಲ. ಹೊಸ ಜಾಗ ನೋಡಲು ಹೋದ ನಾವು ಜಾಗವನ್ನೇ ಮರೆತು ನಮ್ಮ ಮುಸುಡನ್ನೇ ಸೆಲ್ಫೀಯಲ್ಲಿ ನೋಡುತ್ತಾ ಮೈಮರೆತರೆ ನಾವು ಹೊಸತನಕ್ಕೆ ತೆರೆದುಕೊಳ್ತಾ ಇಲ್ಲ ಎಂದೇ ಅರ್ಥ.

ಹತ್ತಾರು ಜನ ಸೇರುವ ಸಾರ್ವಜನಿಕ ಪ್ರವಾಸಿ ತಾಣದಲ್ಲಿ, ಬಸ್ಸಿನಲ್ಲಿ, ಬೀಚಿನಲ್ಲಿ ನಮ್ಮ ಖುಷಿ ಪ್ರಕಾರ ದೊಡ್ಡದಾಗಿ ಮೊಬೈಲಿನಲ್ಲಿ ಮಾತನಾಡುವುದು, ಸ್ಪೀಕರ್ ಆನ್ ಮಾಡಿ ಕಾಲ್ ಮಾಡುವುದು, ವೀಡಿಯೋ ಕಾಲ್ ಮಾಡುವುದು, ಚರ್ಚೆ ಮಾಡುವುದು ಇವೆಲ್ಲ ಸಭ್ಯತೆ ಅಲ್ಲ. ಅಲ್ಲಿರುವ ಅಷ್ಟೂ ಮಂದಿಗೆ ಉಪದ್ರ ಆಗ್ತದೆ ಎಂಬ ಪ್ರಜ್ಞೆ ಬೇಕು.

ಮಾತ್ರವಲ್ಲ, ಫೋಟೋ, ವೀಡಿಯೋ ಸೆರೆ ಹಿಡಿಯೋಣ, ಅವನ್ನು ಜಾಲತಾಣದಲ್ಲಿ ಹಂಚಿಕೊಂಡು ಖುಷಿ ಪಡೋಣ. ಆದರೆ ಪ್ರವಾಸವಿಡೀ ವೀಡಿಯೋ ಮಾಡುವುದರಲ್ಲೇ ಕಳೆದುಹೋದರೆ ಅಲ್ಲಿನ ತಂಪು ಗಾಳಿಯ, ಚೆಂದದ ಹೂಗಳ, ಹರಿಯುವ ನೀರಿನ, ಅಪ್ಪಳಿಸುವ ತೆರೆಗಳ, ಮುಸುಕವ ಮಂಜಿನ ಖುಷಿಯನ್ನು ನೀವು ಅನುಭವಿಸುವುದು ಯಾವಾಗ?

ಏಕಾಗ್ರತೆ ಇಲ್ಲದೆ, ಗಮನ ಕೇಂದ್ರೀಕರಿಸಲು ಸಾಧ್ಯವಾಗದೆ ಯಾವ ಪ್ರವಾಸವೂ ಯಶಸ್ವಿ ಆಗುವುದಿಲ್ಲ. ದೈನಂದಿನ ಬದುಕಿನಲ್ಲಿ ಮನಶಾಂತಿ ಕೆಡಿಸುವ ಅದೇ ಮೊಬೈಲನ್ನೂ ಆಕ್ಸಿಜನ್ನೇನೋ ಎಂಬಷ್ಟು ಜತನದಿಂದ ಪ್ರವಾಸದಲ್ಲೂ ಪೋಷಿಸುತ್ತಾ ಬಂದರೆ ಅಂತಹ ಪ್ರವಾಸಕ್ಕೆ ಅರ್ಥವೇ ಇರುವುದಿಲ್ಲ. ಮೊಬೈಲ್ ಬದುಕಿಗೆ ಅಗತ್ಯ ಹೌದು. ಆದರೆ ದಿನದ 24 ಗಂಟೆಯೂ ಅನಿವಾರ್ಯ ಖಂಡಿತಾ ಅಲ್ಲ.

ಅದೊಂದು ಥರ ಗೀಳು, ಚಟ ಅಷ್ಟೆ. ನಾವೆಷ್ಟು ಗಟ್ಟಿ ಮನಸ್ಸಿನಿಂದ ಬಳಸುತ್ತೇವೆ ಎಂಬುದರ ಆಧಾರದಲ್ಲಿ ಅದು ನಮಗೆ ಅನಿವಾರ್ಯ ಎನ್ನಿಸುತ್ತದೆ.

ರಜೆಯ ದಿನದಲ್ಲಿ ಅಥವಾ ರಜೆ ಪಡೆದು ಪ್ರವಾಸಕ್ಕೆ ಬಂದ ಮೇಲೆ ನಮ್ಮ ಬಂಧುಮಿತ್ರರಿಗೂ ನಾವು ಪ್ರವಾಸಕ್ಕೆ ಹೋಗಿದ್ದು ತಿಳಿದಿರುತ್ತದೆ. ಆದ್ದರಿಂದ ಅನಿವಾರ್ಯವಲ್ಲದ ಕರೆಗಳನ್ನು, ವಿಡಿಯೋ ಕಾಲ್ ಗಳನ್ನು ನಿರ್ಲಕ್ಷಿಸಬಹುದು, ಅಥವಾ ಸಂಕ್ಷಿಪ್ತ ಸಂಭಾಷಣೆಯಲ್ಲಿ ಮಾತು ಮುಗಿಸಬಹುದು. ಬ್ರೇಕಿಂಗ್ ಸುದ್ದಿಗಳನ್ನು, ರೀಲ್ಸ್ ಗಳನ್ನು, ಅವರಿವರ ಸ್ಟೇಟಸ್ಸುಗಳನ್ನು ಮನೆಗೆ ಹೋಗಿಯೂ ನೋಡಬಹುದಲ್ಲ? ಮತ್ತೆ ಇದ್ದ ಜಾಗದಿಂದಲೇ ನಮ್ಮ ಫೋಟೋಗಳನ್ನು ಲೈವಾಗಿ ಸ್ಟೇಟಸ್ ಹಾಕಬೇಕೆಂಬ ಕೆಟ್ಟ ಹಠ ಇದೆಯಲ್ಲ. ಅದರಿಂದ ಆದಷ್ಟು ಆಚೆ ಬಂದಷ್ಟೂ ನಮ್ಮ ಪ್ರವಾಸಕ್ಕೊಂದು ಹೆಚ್ಚಿನ ಕಳೆ ಬರ್ತದೆ, ಬೇಕಿದ್ದರೆ ಪ್ರಯತ್ನಿಸಿ ನೋಡಿ. ನಮ್ಮ ಅಗತ್ಯಕ್ಕೆ ಮೊಬೈಲ್ ಇರುವುದೇ ಹೊರತು, ಮೊಬೈಲಿಗೋಸ್ಕರ ನಾವಿರುವುದಲ್ಲ.

 

ಹಿಂದೊಂದು ಕಾಲ ಇತ್ತು. ದೂರದ ಪ್ರವಾಸಿ ತಾಣಗಳಲ್ಲಿ, ಬೆಟ್ಟಗಳಲ್ಲಿ, ಕಾಡುಗಳಲ್ಲಿ ನೆಟ್ವರ್ಕ್ ಸಿಗ್ತಾ ಇರಲಿಲ್ಲ. ಪ್ರವಾಸ ಹೋಗಿ ಬರುವ ವರೆಗೂ ನಾಟ್ ರೀಚೇಬಲ್ ಆಗಿರುವ ಸುಖ ಸಿಗ್ತಾ ಇತ್ತು. ಗ್ರಹಚಾರ, ಈಗ ಅದಕ್ಕೂ ಕೊಕ್ಕೆ ಬಿದ್ದಿದೆ, ನೀರು ಸಿಗದ ಜಾಗವಾದರೂ ಇರಬಹುದು, ನೆಟ್ವರ್ಕ್ ಇಲ್ಲದ ಪ್ರದೇಶ ಹುಡುಕಲು ಕಷ್ಟ. ಏನಂತೀರಿ?!

-ಕೃಷ್ಣಮೋಹನ ತಲೆಂಗಳ (23.06.2024)

No comments: