ಆಗ ಒಂದೊಂದು ರುಪಾಯಿಗೂ ಬೆಲೆ ಇತ್ತು! ನಿಮಗೆ STD ಬೂತು ನೆನಪುಂಟ?




ಆಗಿನ್ನೂ ಮೊಬೈಲ್ ಫೋನ್ ಕೈಗೆ ಸಿಕ್ಕಿರ್ಲಿಲ್ಲ. ಮೊಬೈಲ್ ಫೋನ್ ಅಂದ್ರೆ ಎಂತ ಅಂತವೇ ಗೊತ್ತಿರ್ಲಿಲ್ಲ. ಏರ್ಟೆಲ್ಲು, ಹಚ್ಚು, ಡೊಕೋಮೋ, ಐಡಿಯಾ ಯಾವುದೂ ಮಾರುಕಟ್ಟೆಗೆ ಬಂದಿರಲಿಲ್ಲ. ಮೊಬೈಲ್ ಫೋನ್ ಬರುವುದಕ್ಕೂ ಮುನ್ನ ಸುಮಾರು 10-15 ವರ್ಷ ಹೃದಯಗಳನ್ನು ಬೆಸೆಯುವ ಕೆಲಸ ಮಾಡ್ತಾ ಇದ್ದದ್ದು ಇದೇ ಮಾದರಿಯ ಎಸ್ಟಿಡಿ ಬೂತುಗಳು. 1990ರ ದಶಕದಲ್ಲಿ ಗಲ್ಲಿಗಲ್ಲಿಗಳಲ್ಲಿ, ಬೀದಿ ಬೀದಿಗಳಲ್ಲಿ STD/ISD/XEROX/FAX ಎಂಬ ಫಲಕ ಹೊಂದಿದ ಹಳದಿ, ಕೆಂಪು ಪಟ್ಟೆ ಪಟ್ಟೆ ಬಣ್ಣ ಬಳಿದ ಬೂತುಗಳು ತುಂಬ ಜನಪ್ರಿಯವಾಗಿದ್ದವು.

21ನೇ ಶತಮಾನದ ಜೊತೆಗೇ ಕಾಲಿಟ್ಟ ಮೊಬೈಲು ಫೋನುಗಳು ಲ್ಯಾಂಡ್ ಲೈನು, ಎಸ್ಟಿಡಿ, ಐಎಸ್ಡಿ, ಫ್ಯಾಕ್ಸ್ ಎಲ್ಲವನ್ನು ಆಪೋಶನ ತೆಗೆದುಕೊಂಡಿದೆ. ಮಾತ್ರವಲ್ಲ, ದಶಕಗಳ ಕಾಲ ಭಾರತೀಯರ ಮನೆ-ಮನ ಬೆಸೆಯುತ್ತಿದ್ದ ಬಿಎಸ್ಸೆಎನ್ನೆಲ್ ನ್ನು ಸಹ ಹಿಂದಕ್ಕೆ ತಳ್ಳಿದಂತೆ ಭಾಸವಾಗುತ್ತಿದೆ.

ಇಂತಹ ಎಸ್ಟಿಡಿ ಬೂತು ಬರುವುದಕ್ಕೂ ಮೊದಲು ಹಳೇ ಸಿನಿಮಾಗಳಲ್ಲಿ ಕಾಣುವಂತ ಒಂದೊಂದೇ ಅಂಕಿಯ ಮೇಲಿನ ವೃತ್ತದ ತೂತಿನ ಮೇಲೆ ಬೆರಳಿಟ್ಟು ಒಂದು ರೌಂಡ್ ತಿರುಗಿಸಿ ಡಯಲ್ ಮಾಡುವ ಸಲಕರಣೆ ಇತ್ತು (ಲ್ಯಾಂಡ್ ಲೈನ್ ಮಾದರಿ). ಅದರಲ್ಲಿ ಕಾಲ್ ಕನೆಕ್ಟ್ ಆದ ತಕ್ಷಣ ಒಂದು ರುಪಾಯಿ ಕಾಯಿನ್ ನ್ನು ಕಾಣಿಕೆ ಡಬ್ಬಿಗೆ  ಇಳಿಸಬೇಕು. ಆಗ ಕಾಲ್ ಕನೆಕ್ಟ್ ಆಗ್ತಾ ಇತ್ತು. ನಂತರ ಅಂದಾಜು 3 ನಿಮಿಷ ಕಾಲ್ ಮಾಡಲು ಅವಕಾಶ (ಲೋಕಲ್ ಕಾಲ್ ಮಾತ್ರ). ಮೂರು ನಿಮಿಷ ಆಗ್ತಾ ಬಂದಾ ಹಾಗೇ ಪುನಃ ಇನ್ನೊಂದು ಕಾಯಿನ್ ಹಾಕಿದರೆ ಮತ್ತೆ ಮೂರು ನಿಮಿಷ ಮಾತನಾಡಬಹುದಿತ್ತು. ಅದು ಕಪ್ಪು ಬಣ್ಣದ ಪೆಟ್ಟಿಗೆ.

ಇದರ ನಂತರದ ಅವಧಿಯಲ್ಲಿ ಇದೇ ಕಾಯಿನ್ ಬೂತು ಸ್ವಲ್ಪ ಸುಧಾರಿಸಿದ ಮಾದರಿಯಲ್ಲಿ ಬಟನ್ ಒತ್ತುವ ಫೋನ್ ರೂಪದಲ್ಲಿ ಬಂತು. ಅದಕ್ಕೂ ಕೆಂಪು, ಹಳದಿ ಬಣ್ಣದ ಪೈಂಟ್ ಬಳಿಯಲಾಗುತ್ತಿತ್ತು. ಇಂಥದ್ದೇ ಎಸ್ಟಿಡಿ ಬೂತುಗಳ ಹೊರಗೆ ಅಂತಯ ಕಾಯಿನ್ ಡಬ್ಬಗಳು ಇರ್ತಾ ಇದ್ದವು. ಆ ಡಬ್ಬದಲ್ಲೂ ಶುರುವಿಗೇ 1 ರುಪಾಯಿ ಹಾಕಿ ಕಾಲ್ ಮಾಡಲು ಅವಕಾಶ ಇತ್ತು. ಕಾಲ್ ಕನೆಕ್ಟ್ ಆಗದೇ ಇದ್ದರೆ ಅದರ ಕೊಂಬು ಎಳೆದರೆ ನಾಣ್ಯ ಕೆಳಗೆ ಉದುರುತ್ತಿತ್ತು ಅಂತ ನೆನಪು. ಕೆಲವೊಮ್ಮೆ ಗ್ರಹಚಾರ ತಪ್ಪಿದರೆ ಕಾಯಿನ್ ಒಳಗೆ ಹೋಗಿ ಕಾಲ್ ಕನೆಕ್ಟ್ ಆಗದೇ ಇದ್ದದ್ದೂ ಇತ್ತು. ಅಥವಾ ಕುಲಗೆಟ್ಟ ಡಬ್ಬಾ ಆದರೆ ಡಬ್ಬಕ್ಕೆ ಬಾರಿಸಿದರೆ ಕಾಯಿನ್ ಕೆಳಗೆ ಉದುರುವ ಸಾಧ್ಯತೆಯೂ ಇತ್ತು. ಲೋಕಲ್ ಕಾಲ್ ಆದರೆ, ಈ ಡಬ್ಬದಲ್ಲಿ, ಎಸ್ಟಿಡಿ ಆದರೆ ಗಾಜಿನ ಬಾಗಿಲಿರುವ ಬೂತ್ ಒಳಗೆ ಮಾಡುವ ವ್ಯವಸ್ಥೆ ಇತ್ತು.

1990ರ ದಶಕದ ಕೊನೆ ಹಾಗೂ 2000ನೇ ದಶಕದ ಪ್ರಥಮಾರ್ಧದಲ್ಲಿ ಇಂಥದ್ದೇ ಎಸ್ಟಿಡಿ ಬೂತುಗಳು ಅಂಗಡಿಗಳ ಅಕ್ಕಪಕ್ಕ, ಸ್ಟೇರ್ ಕೇಸ್ ಅಡಿಯಲ್ಲಿ, ಶಾಲಾ, ಕಾಲೇಜುಗಳ ಎದುರು ಹೀಗೆ ಎಲ್ಲೆಂದರಲ್ಲಿ ಕಂಡು ಬರುತ್ತಿದ್ದವು. ಕರೆ ಮಾಡಿದ ಬಳಿಕ ಆಟೋ ಮ್ಯಾಟಿಕ್ ಬಿಲ್ ಜನರೇಟ್ ಆಗ್ತಾ ಇತ್ತು. ಅಂದಾಜು 2000ನೇ ಇಸವಿ ವೇಳೆಗೆ ಸರ್ಕಾರದ ದೂರ ಸಂಪರ್ಕ ನೀತಿಯಲ್ಲಿ ಸುಧಾರಣೆಯಾಗಿ 9ರಿಂದ ಶುರುವಾಗುವ ಯಾವುದೋ ಮೂರಕ್ಷರದ ಕೋಡ್ ಬಳಸಿ ನಿಮ್ಮ ಸಮೀಪದ ಜಿಲ್ಲೆಗಳಿಗೆ (ಹೊರ ರಾಜ್ಯವಾದರೂ ಸಹ) ಲೋಕಲ್ ಕಾಲ್ ಮಾಡಲು ಅವಕಾಶ ಇತ್ತು.

ಅದಾದ ನಂತರ ಮೊಬೈಲ್ ಫೋನ್ ಚಾಲ್ತಿಗೆ ಬಂದ ಮೇಲೆ ಲ್ಯಾಂಡ್ ಲೈನ್ ನಲ್ಲಿ ಅನೇಕ ರಿಯಾಯಿತಿಗಳ ಬರಲು ಶುರು ಆದವು. ಬಿಎಸ್ಸೆನ್ನೆಲ್ಲಿನಲ್ಲಿ ರಾತ್ರಿ ಇಡೀ ಉಚಿತ ಕರೆ ಅವಕಾಶ, ಅಥವಾ ರಾತ್ರಿ ಇಂತಿಷ್ಟು ಹೊತ್ತಿನಿಂದ ಇಂತಿಷ್ಟು ಹೊತ್ತಿನ ತನಕ ಫ್ರೀ... ಇಂಥದ್ದೆಲ್ಲ ಪ್ಲಾನುಗಳು ಬರಲು ಶುರುವಾದವು. ಲ್ಯಾಂಡ್ ಲ್ಯಾನ್ ಗಳೂ ಹೆಚ್ಚಿನ ಪ್ರಮಾಣದಲ್ಲಿ ಮನೆಗಳಿಗೆ ಬರತೊಡಗಿದವು. 2002-03ರ ಬಳಿಕ ಜನರ ಕೈಗೆ ಮೊಬೈಲ್ ಫೋನುಗಳು ಬಂದವು. ದೇಶ, ವಿದೇಶಳಿಗೂ ಮೊಬೈಲಿನಿಂದಲೂ ಕಾಲ್ ಮಾಡಲು ಅವಕಾಶ ಸಿಕ್ಕಿತು. ಹೀಗಾಗಿ ಕ್ರಮೇ.........ಣ ಎಸ್ಟಿಡಿ ಬೂತ್ ಉದ್ಯಮ ತೆರೆಮರೆಗೆ ಸರಿಯತೊಡಗಿತು. ಇಂದು ಬಹುಶಃ ಪಬ್ಲಿಕ್ ಟೆಲಿಫೋನ್ ಬೂತ್ ಎಲ್ಲಾದರೂ ಉಳಿದಿದೆಯೇ ಗೊತ್ತಿಲ್ಲ.

ಇಂಟರ್ ನೆಟ್ ಪ್ರವರ್ಧಮಾನಕ್ಕೆ ಬಂದ ಮೇಲೆ ಜನಸಾಮಾನ್ಯರ ಬಳಕೆಗೆ ಫ್ಯಾಕ್ಸ್ ಬೇಕಾಗಿಲ್ಲ. ಸರ್ಕಾರಿ ಅಥವಾ ಔಪಚಾರಿಕ ಪ್ರಕ್ರಿಯೆಗಳಿಗೆ ಮಾತ್ರ ಇಂದು ಫ್ಯಾಕ್ಸ್ ಬಳಸುತ್ತಿರಬಹುದು ಅಷ್ಟೇ. ವಾಟ್ಸಪ್ ಕಾಲ್ ಮತ್ತಿತರ ಜಾಲತಾಣದ ಕರೆ ಆರಂಭವಾದ ಬಳಿಕ, ಜಿಯೋದಂತಹ ದೈತ್ಯ ಸಂಸ್ಥೆಗಳು ಮೊಬೈಲ್ ಸಾಮ್ರಾಜ್ಯಕ್ಕೆ ಕಾಲಿಟ್ಟಮೇಲೆ ಜನರಿಗೆ ಎಸ್ಟಿಡಿ ಎಂಬ ಕಲ್ಪನೆಯೇ ಮರೆತುಹೋಗಿದೆ. ಗ್ಲೋಬಲ್ ವಿಲೇಜ್ ಈ ಮೂಲಕ ಅಕ್ಷರಶಃ ಸಾಕಾರಗೊಂಡಿದೆ. ಅದರೊಂದಿಗೆ ಪ್ಲಾನ್ ದರಗಳು ಹೆಚ್ಚಾಗುವುದು ಅದರ ಅಮಲಿಗೆ ಸಿಲುಕಿದ ನಮಗೆ ಅರ್ಥವೇ ಆಗುವುದಿಲ್ಲ ಎಂಬುದು ಗುಂಪಿಗೇ ಸೇರದ ವಿಚಾರ!

ಆಗೆಲ್ಲ ಮನೆಯಲ್ಲಿ ಲ್ಯಾಂಡ್ ಲೈನ್ ಸಂಪರ್ಕ ಇಲ್ಲದಿದ್ದಾಗ, ಮೊಬೈಲ್ ಎಂತದ್ದು ಅಂತಲೇ ಗೊತ್ತಿಲ್ಲದಿದ್ದಾಗ ಬಂಧುಗಳಿಗೆ ಕರೆ ಮಾಡ್ತಾ ಇದ್ದದ್ದು ಇದೇ ಎಸ್ಟಿಡಿ ಬೂತುಗಳಿಂದ. ಕೆಲವೊಮ್ಮೆ ಕರೆ ಮಾಡಲೂ ರಶ್. ಅದೇ ಗಾಜಿನ ಇಕ್ಕಟ್ಟಾದ ಚೇಂಬರ್ ಹೊರಗೆ ಕರೆ ಮಾಡಲು ಕ್ಯೂ. ಒಳಗಿರುವವರು ಗಂಟೆಗಟ್ಟಲೆ ಮಾತನಾಡುತ್ತಾ ಕೂತರೆ ಹೊರಗಿನವರ ಕೆಕ್ಕರಿಸುವ ನೋಟ ಎದುರಿಸಬೇಕಾಗಿತ್ತು. ಜೊತೆಗೆ ಪ್ರೈವೆಸಿಯೂ ಇಲ್ಲ. ಆದರೂ ಜನ ಈ ವ್ಯವಸ್ಥೆಗೆ ಒಗ್ಗಿ ಹೋಗಿದ್ದರು.

ನಮ್ಮ ಕೊಣಾಜೆಯ ಯೂನಿವರ್ಸಿಟಿ ಹಾಸ್ಟೆಲ್ಲಿನಲ್ಲಿ ಒಂದು ಕಾಯಿನ್ ಬೂತ್ ಇದ್ದದ್ದು. ಯಾರ ಮನೆಯವರು ಕಾಲ್ ಮಾಡಬೇಕಾದರೂ ಅದೇ ನಂಬರಿಗೆ ಕಾಲ್ ಮಾಡಬೇಕು. ಆಗ ಆ ಡಬ್ಬದ ಪಕ್ಕ ನಡೆದುಕೊಂಡು ಹೋಗುವವ ಕಾಲ್ ರಿಸೀವ್ ಮಾಡಿ, ಇಡೀ ಹಾಸ್ಟೆಲಿಗೆ ಕೇಳುವ ಹಾಗೆ ಇಂಥವನಿಗೆ ಕಾಲ್ ಬಂದಿದೆ ಅಂತ ಕಿರುಚಿ ಹೇಳುತ್ತಾನೆ. ಮೂರು ನಿಮಿಷದ ಒಳಗೆ ಆತ ಬಂದು ಕಾಲ್ ರಿಸೀವ್ ಮಾಡಿದರೆ ಸರಿ, ಇಲ್ಲವಾದರೆ ಆಚೆ ಕಡೆಯಿಂದ ಕಾಲ್ ಮಾಡಿದವರ ಒಂದೊಂದು ರುಪಾಯಿ ಕಾಣಿಕೆ ಹಾಕುತ್ತಲೇ ಇರಬೇಕು... ಅಂತಹ ಫೋನುಗಳಲ್ಲಿ ಹಾಸ್ಟೆಲುಗಳಲ್ಲಿ ವಾಪಸ್ ಕರೆ ಮಾಡಲು ಆಗ ಅವಕಾಶ ಇರಲಿಲ್ಲ ಅಂತ ನೆನಪು. ಈಗ ಮೊಬೈಲ್ ಹಿಡಿದೇ ಓಡಾಡುವರು ಇದನ್ನು ಓದಿದರೆ ನಗಬಹುದು. ಆದರೆ 25 ವರ್ಷಗಳ ಹಿಂದೆ ನಾವು ಕಂಡು ಕೇಳಿದ ಸಂಗತಿಗಳು ಇವು.

ತಮ್ಮ ಪ್ರೀತಿ ಪಾತ್ರರ ಜೊತೆ ಗಂಟೆಗಟ್ಟಲೆ ಮಾತನಾಡುವ ಹವ್ಯಾಸ ರೂಢಿಸಿಕೊಂಡವರು, ಕಾಯಿನ್ ಬೂತಿನಿಂದ ಕಾಲ್ ಮಾಡಲೆಂದೇ ಒಂದೊಂದು ರುಪಾಯಿಗಳ ಗಂಟು ಕಟ್ಟಿ ಇಡುತ್ತಿದ್ದರು....!!!

ಈಗಿನ ಹಾಗೆ ಬೇಕೆಂದಾಗ, ಬೇಕಾದಷ್ಟು ಹೊತ್ತು ಮಾತನಾಡಲು ಆಗ ಸಾಧ್ಯ ಇರಲಿಲ್ಲ. ಕಾಲ್ ರೇಟ್ ದುಬಾರಿ ಇತ್ತು. ಹಗಲು, ರಾತ್ರಿ ಲೆಕ್ಕ ಹಾಕಿ ನಿಮಿಷಗಳ ಲೆಕ್ಕದಲ್ಲಿ ಮಾತನಾಡುತ್ತಾ ಇದ್ದ ಕಾಲ ಅದು. ಸಂವಹನ ಅತಿರೇಕ ಆಗುತ್ತಿರಲಿಲ್ಲ. STD, ISD ಕರೆಗಳಿಗೆ ರಿಯಾಯಿತಿ ಇದ್ದ ಹೊತ್ತಿಗೇ ಕಾದು ಕುಳಿತು ಜನ ಕಾಲ್ ಮಾಡ್ತಾ ಇದ್ರು. ಇಂದು ಹೊತ್ತು ಗೊತ್ತಿಲ್ಲ, ಮಾತನಾಡಲು ವಿಷಯ ಬೇಕಿಲ್ಲ, ಮಾತನಾಡ್ತಲೇ, ಚಾಟ್ ಮಾಡ್ತಲೇ ಇರ್ತೇವೆ. ಅದೇ ಕಾರಣಕ್ಕೆ ನಮಗೀಗ ಕುತೂಹಲ ಮತ್ತು ಅಚ್ಚರಿ ಎಂಬುದು ಏನು ಎಂದೇ ಮರೆತು ಹೋಗಿದೆ.

ಅಂದು ಎಸ್ಟಿಡಿ ಬೂತ್ ನಡೆಸುತ್ತಾ ಇದ್ದವರ ಪೈಕಿ ಕೆಲವರು ಸೈಬರ್ ಸೆಂಟರ್ ಉದ್ಯಮಕ್ಕೆ ನಂತರ ವರ್ಗಾವಣೆ ಹೊಂದಿದರು. ಇಂದು ಆ ಉದ್ದಿಮೆಗೂ ಗ್ರಹಣ ಬಡಿದಿದ್ದು, ಅವರು ಬದುಕಿಗೆ ಪರ್ಯಾಯ ದಾರಿ ಕಂಡುಕೊಳ್ಳುವ ಹಾಗಾಗಿದೆ. ಒಂದು ಕಾಲದಲ್ಲಿ ಮೊಬೈಲ್ ಫೋನ್ ರಿಚಾರ್ಜ್ ಮಾಡಲು ಅಂಗಡಿಗಳಿಗೆ ಹೋಗಿ ನಮ್ಮ ನಂಬರ್ ಕೊಟ್ಟು, ಅಲ್ಲಿಗೆ ಸ್ಕ್ರಾಚ್ ಕಾರ್ಡ್ ಪಡೆದು ಕಾರ್ಡನ್ನು ಸ್ಕ್ರಾಚ್ ಮಾಡಿ ಅಲ್ಲಿರುವ ನಂಬರ್ ಬಳಸಿ ರಿಚಾರ್ಜ್ ಮಾಡಬೇಕಾದ ದಿನ ಇತ್ತು. ಅಥವಾ ಅವರು ನಮ್ಮ ನಂಬರಿಗೆ ಅವರ ಮೊಬೈಲಿನಿಂದ ರಿಚಾರ್ಜ್ ಮಾಡಬೇಕಾಗಿತ್ತು. ಇಂಟರ್ ನೆಟ್ ಬೇಕಿದ್ದರೆ ಸೈಬರ್ ಸೆಂಟರುಗಳಿಗೆ ಹೋಗಿ ಗಂಟೆಗೆ ಇಂತಿಷ್ಟು ಅಂತ ದುಡ್ಡು ಕೊಟ್ಟು ಈ ಮೇಲ್ ಚೆಕ್ ಮಾಡಬೇಕಿತ್ತು. ಇಂದು ಎಲ್ಲವೂ ಮೊಬೈಲಿನಲ್ಲೇ ಸಾಧ್ಯವಾಗಿದೆ.

ಸಣ್ಣ ಪ್ರಿಂಟರ್ ಇದ್ದರೆ ಮೊಬೈಲಿನಿಂದಲೇ ಪ್ರಿಂಟ್ ತೆಗೆಯಲೂ ಇಂದು ಸಾಧ್ಯವಿದೆ. ಹಾಗಾಗಿ. ಎಸ್ಟಿಡಿ ಬೂತ್ ಮಾತ್ರವಲ್ಲ, ಸೈಬರ್ ಸೆಂಟರ್ ಸಹ ತೆರೆಮರೆಗೆ ಸರಿಯುತ್ತಿರುವ ಉದ್ಯಮವೇ ಸರಿ.

ಒಂದು ಕಾಲದಲ್ಲಿ ಲಕ್ಷಾಂತರ ಹೃದಯಗಳನ್ನು ಬೆಸೆದ, ಅವೆಷ್ಟೋ ಪಿಸು ಮಾತುಗಳಿಗೆ ಸಾಕ್ಷಿಗಳಾದ, ಅವೆಷ್ಟು ಖುಷಿಯ, ದುಃಖದ ವಿಚಾರಗಳನ್ನು ಹಂಚಿಕೊಳ್ಳಲು ವಾಹಕವಾದ ಎಸ್ಟಿಡಿ ಬೂತ್ ಎಂಬ ಸಾರ್ವಜನಿಕ ಪ್ರೈವಸಿಯತಾಣ ಎಂದು ಮೌನವಾಗಿ ಬಿಟ್ಟಿದೆ. ಆಗಿನವರಿಗೆ ಅದು ನೆನಪು, ಈಗಿನವರಿಗೆ ಅಚ್ಚರಿ, ಮುಂದಿನವರಿಗೆ ಇತಿಹಾಸವೇ ಸರಿ.

ತಂತ್ರಜ್ಞಾನದ ನಾಗಾಲೋಟಕ್ಕೆ ಕಡಿವಾಣ ಹಾಕಲು ಆಗುವುದಿಲ್ಲ. ಅದು ಬದಲಾಗ್ತಲೇ ಇರುತ್ತದೆ. ಒಳಿತೋ, ಕೆಡುಕೋ ಬದಲಾವಣೆಗಳಿಗೆ ನಾವು ಒಗ್ಗಿಕೊಳ್ಳಲೇ ಬೇಕು. ಜನಸಾಮಾನ್ಯರಿಗೆ ಆಗುವ ಲಾಭ, ನಷ್ಟಕ್ಕಿಂತಲೂ ಉದ್ಯಮ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದರ ಮೇಲೆ ಬದುಕು ಹಾಗೂ ತಾಂತ್ರಿಕ ಅಳವಡಿಕೆಗಳು ಬದಲಾಗ್ತಲೇ ಹೋಗ್ತವೆ. ನಾವದಕ್ಕೆ ಮೂಕ ಪ್ರೇಕ್ಷಕರು ಮತ್ತು ಕೆಲವೊಮ್ಮೆ ಸಂತ್ರಸ್ತರು ಮತ್ತು ಕೆಲವೊಮ್ಮೆ ಸಂತೃಪ್ತರು. ಎಂತ ಮಾಡುವುದು, ಮಾಡುವುದು, ಬದಲಾವಣೆ ಜಗದ ನಿಯಮ, ಅಲ್ವ?!

-ಕೃಷ್ಣಮೋಹನ ತಲೆಂಗಳ (13.06.2024)

No comments: