ಅಯ್ಯೋ ಯಕಶ್ಚಿತ್ ಪೆನ್ನಲ್ವ... ಯಾಕಷ್ಟು ಟೆನ್ಶನ್ ಮಾಡ್ಕೊಳ್ತೀರಿ?!!!!




ಸ್ವಲ್ಪ ನಿಮ್ಮ ಪೆನ್ ಕೊಡ್ತೀರ ಪ್ಲೀಸ್... ಅಂತ ಕೇಳ್ತಾರೆ. ಕಚೇರಿಯಲ್ಲೋ, ಸಮಾರಂಭದಲ್ಲೋ, ಬ್ಯಾಂಕಿನಲ್ಲೋ, ಪೋಸ್ಟಾಫೀಸಿನಲ್ಲೋ... ಅಥವಾ ಮದುವೆಯಲ್ಲಿ ಉಡುಗೊರೆಯ ಕವರ್‌ ಬರೆಯುವಲ್ಲೋ... ಹೀಗೆ ಎಲ್ಲೋ ಒಂದು ಕಡೆ. ‘ಹೋಯ್ ಪೆನ್ನಲ್ವ’ ಅಂತ ನೀವು ಉದಾರಿಗಳಾಗಿ ತೆಗ್ದು ಕೊಡ್ತೀರಿ... ಪೆನ್ನು ತಕೊಂಡವ ಸರಸರನೆ ಆಚೆ ಹೋಗಿ ಬರೀತಾನೋ, ಇನ್ಯಾರಿಗೋ ಕೊಡ್ತಾನೋ... ಗೊತ್ತಿಲ್ಲ, ನಿಮಿಷಗಳು ಕಳೆದರೂ ವಾಪಸ್ ಬರುವುದಿಲ್ಲ. ನಿಮಗೂ ಅಲ್ಲಿ ಕಾಯುವಷ್ಟು ವ್ಯವಧಾನ ಇರುವುದಿಲ್ಲ. ಪೆನ್ನು ಕೊಂಡು ಹೋದವನ ಮುಖವೂ ಸರಿಯಾಗಿ ಜ್ಞಾಪಕಕ್ಕೆ ಬರುವುದಿಲ್ಲ. ‘ಹೋಯ್‌ ಪೆನ್ನಲ್ವ’ ಅಂತ ಸಮಾಧಾನ ಮಾಡ್ಕೊಂಡು ಬರಿಗೈಯ್ಯಲ್ಲಿ ಹೊರಡ್ತೀರಿ. ನಿಮಗೆ ಅಗತ್ಯಕ್ಕೆ ಪೆನ್ನು ಬೇಕೇ ಬೇಕು. ಅದಕ್ಕಾಗಿ ನಿಮ್ಮ ಇಷ್ಟದ ಪೆನ್ನನ್ನು ಮತ್ತೆ ದುಡ್ಡು ಕೊಟ್ಟು ಅಂಗಡಿಯಲ್ಲಿ ತಕೊಳ್ತೀರಿ...
ಮತ್ತೊಂದು ಕಚೇರಿಗೋ, ಮದುವೆಗೋ ಹೋಗ್ತೀರಿ... ಅದೇ ರಿಕ್ವೆಸ್ಟು ‘ಹೋಯ್‌ ಸ್ವಲ್ಪ ಪೆನ್ನು ಕೊಡ್ತೀರ’ ಅಂತ ಟಿಪ್‌ಟಾಪ್‌ ಡ್ರೆಸ್‌ ಮಾಡಿದವರು ನಯವಾಗಿ ನಗುತ್ತಾ ಕೇಳುವಾಗ ಕೊಡದೇ ಇರಲಿಕ್ಕಾಗುವುದಿಲ್ಲ. ಹೆಚ್ಚು ಯೋಚಿಸುವಷ್ಟು ಟೈಮಿರುವುದಿಲ್ಲ, ‘ಪೆನ್ನಿನ ಮುಚ್ಚಳ (ಟಾಪ್‌) ಕೈಯಲ್ಲಿ ಹಿಡಿದು ಪೆನ್ನು ಕೊಟ್ರೆ, ಪೆನ್ನು ತಕ್ಕೊಂಡವರಿಗೆ ಟಾಪ್‌ ಹಾಕುವ ಹೊತ್ತಿಗೆ ಯಾರತ್ರವೋ ತಕ್ಕೊಂಡ ಪೆನ್ನು ಅಂತ ನೆನಪಾಗಿ ವಾಪಸ್‌ ಕೊಡ್ತಾರೆ’ ಅಂತ ಯಾರೋ ಹೇಳಿಕೊಟ್ಟ ಟಿಪ್ಸ್‌ ಇದೆ. ಅದನ್ನು ಸ್ಮರಿಸಿಕೊಂಡು ಟಾಪ್‌ ಬಿಚ್ಚಿ ಪೆನ್ನು ಕೊಟ್ಟರೆ, ಅದನ್ನು ಪಡೆದವರ ನಮ್ಮನ್ನೊಂದು ಪ್ರಾಣಿಯ ಹಾಗೆ ನೋಡ್ತಾರೆ, ಮುಖದಲ್ಲಿ ವ್ಯಂಗ್ಯವಾಗಿ ನಗುತ್ತಾ ಪೆನ್ನನ್ನು ಎಳೆದು ತಕ್ಕೊಳ್ತಾರೆ... ಅವರ ಮನಸ್ಸಿನಲ್ಲಿ ಈ ಕ್ಷಣಕ್ಕೆ ಮೂಡುವ ಪ್ರಶ್ನೆ ಇಷ್ಟೇ.. ‘ಈ ಪ್ರಾಣಿ ಒಂದು ಯಕಶ್ಚಿತ್ ಪೆನ್ನು ಕೊಡ್ಲಿಕೆ ಇಷ್ಟು ಕುರೆ (ಪಿಟ್ಟಾಸಿ) ಮಾಡುವುದಾ’ ಅಂತ... ಅಲ್ಲಿಯೂ ಅಷ್ಟೇ, ಕೊಟ್ಟ ಪೆನ್ನು ವಾಪಸ್‌ ಸಿಗ್ತದೆ ಅಂತ ಗ್ಯಾರಂಟಿ ಇಲ್ಲ...

ನಾಚಿಕೆ ಬಿಟ್ಟು ಅವಸರ ಮಾಡಿ ವಾಪಸ್ ಕೇಳಿದ್ರೆ "ಅಯ್ಯೋ ಯಕಶ್ಚಿತ್ ಪೆನ್ನಲ್ವ... ಯಾಕ್ರೀ ಅಷ್ಟು ಟೆನ್ಶನ್ ಮಾಡ್ಕೊಳ್ತೀರಿ?" ಅಂತ ಮುಖಕ್ಕೆ ಹೊಡ್ದಾಗೆ ಹೇಳಿ ಅಕ್ಷರಶಃ ಪೆನ್ನನ್ನು ಕುಕ್ಕಿ ಹೋಗುವವರೂ ಇದ್ದಾರೆ ಬಿಡಿ.

ನನಗೆ ಭಯಂಕರವಾಗಿ ಕಾಡುವ ಪ್ರಶ್ನೆ... ಪೆನ್ನು ಕೊಡುವ ಮುನ್ನ ಸ್ವಲ್ಪ ಹಿಂದೆ ಮುಂದೆ ನೋಡಿದಾಗ ನಮ್ಮನ್ನು ಅನುಕಂಪದಿಂದ ಕಾಣುವ ಮಂದಿ ತಾವು ಯಾಕೆ ಒಂದು ‘ಯಕಶ್ಚಿತ್ ಪೆನ್ನನ್ನು’ ಜೇಬಿನಲ್ಲಿ ಇಟ್ಟುಕೊಳ್ಳುವುದಿಲ್ಲ, ತನ್ನ ಬರಹದ ಕೆಲಸ ಆದ ಬಳಿಕ ಪೆನ್ನು ವಾಪಸ್ ಕೊಡದೆ ಕ್ಯಾರ್ಲೆಸ್ ಮಾಡುವಾಗ ಯಾಕೆ ಅದು ತನ್ನ ಘನಸ್ತಿಕೆಗೆ ಕುಂದು ಅಂತ ಅವರು ಭಾವಿಸುವುದಿಲ್ಲ, ಪೆನ್ನು ಯಕಶ್ಚಿತ್ ಅಂತಾದ ಮೇಲೆ, ಅದನ್ನು ಮರಳಿಸದೆ ಕಿಸೆಗೆ ಹಾಕುವುದೋ ಅಥವಾ ಪಕ್ಕಕ್ಕೆ ಬಿಸಾಡಿ ತೆರಳುವುದೋ ಮಾಡುತ್ತಾರೆ!
ಇನ್ನು ನಿಮ್ಮಲ್ಲೂ ಹಲವರ ಅನುಭವ ಆಗಿರಬಹುದು. ಪೆನ್ನನ್ನು ಬೇಡಿ ಪಡೆದವರು ಎಲ್ಲರೂ ಅದನ್ನು ಕೊಡುವುದಿಲ್ಲ ಅಂತ ಖಂಡಿತಾ ನನ್ನ ವಾದವಲ್ಲ, ಪೆನ್ನನ್ನು ಮರಳಿಸಲಾಗದೇ ಇರುವುದು ಉದ್ದೇಶಪೂರ್ವಕ ಅಂತವೂ ನನ್ನ ವಾದವಲ್ಲ. ನಮ್ಮಲ್ಲಿ ಇಲ್ಲದ ವಸ್ತುವನ್ನು ನಾವು ಬೇಡಿ ಇನ್ನೊಬ್ಬರ ಹತ್ರ (ಅದೂ ಹೆಚ್ಚಾಗಿ ಅಪರಿಚಿತರು) ಪಡೆದಾಗ ಅದನ್ನು ನೆನಪಿಟ್ಟು ಮರಳಿಸಬೇಕಾದ್ದು ನಮ್ಮ ಕರ್ತವ್ಯ, ಅದೊಂದು ಸಭ್ಯತೆ ಎಂಬ ಪ್ರಜ್ಞೆ ನಮ್ಮೊಳಗಿರಬೇಕಲ್ವ. ಎಲ್ಲದಕ್ಕಿಂತ ಹೆಚ್ಚಾಗಿ ಪೆನ್ನು ಕೊಡಲು ಯೋಚಿಸುವ ಹೊತ್ತಿಗೆ ಅವರ ಮುಜುಗರ ಕಡಿಮೆ ಮಾಡಲು, ‘ಇಲ್ಲೇ ನಿಂತಿರಿ, ನಿಮ್ಮ ಪೆನ್ನು ಈಗ ವಾಪಸ್ ಕೊಡ್ತೇನೆ’ ಅಂತ ಹೇಳಬಹುದಲ್ವ?
ನಾನು ಗಮನಿಸಿದ ಹಾಗೆ ಬಹಳಷ್ಟು ಮಂದಿಗೆ ಬೇಜವಾಬ್ದಾರಿಯಿಂದ ಈ ರೀತಿ ನಡೆದುಕೊಳ್ಳುತ್ತಾರೆ. ಮೊದಲನೆಯದಾಗಿ ಬರೆಯುವ ಅಗತ್ಯ ಇರುವ ಜಾಗಕ್ಕೆ ಅಷ್ಟೆಲ್ಲಾ ಟಿಪ್ ಟಾಪ್ ಡ್ರೆಸ್ ಮಾಡಿ ಬರುವವರು ‘ಯಕಶ್ಚಿತ್’ ಪೆನ್ನು ತಾರದೇ ಇರುವುದು ಅವರ ತಪ್ಪು, ಎರಡನೆಯದಾಗಿ ಪೆನ್ನು ಬೇಡಿ ಪಡೆಯುವಾಗ ಪಡೆದವರಿಗೆ ಮರಳಿಸುವ ಖಾತರಿ ನೀಡದೇ ಇರುವುದು, ಅವರ ಹೆಸರು ಕೇಳದೇ ಇರುವುದು ಮತ್ತೊಂದು ತಪ್ಪು, ಬರೆಯುವ ಕೆಲಸ ಮುಗಿದ ತಕ್ಷಣ ಹುಡುಕಿ ಹೋಗಿ ಕೃತಜ್ಞತಾಪೂರ್ವಕವಾಗಿ ಮರಳಿಸದೇ ಇರುವುದು ಮಗದೊಂದು ತಪ್ಪು, ತಾವು ಸ್ವತಃ ಪೆನ್ನು ಮರೆತು, ಪೆನ್ನು ನೀಡಲು ಯೋಚಿಸುವವರನ್ನು, ಪೆನ್ನು ಮರಳಲಿ ಎಂಬ ಕಾರಣಕ್ಕೆ ಟಾಪ್ ಕಳಚಿ ನೀಡುವವರನ್ನು ಅಪಹಾಸ್ಯ ಮಾಡುವುದು ಅಕ್ಷಮ್ಯ ತಪ್ಪು!!!


ಯಾಕೆಂದರೆ....


ಪೆನ್ನು ಎಂದರೆ ಎಲ್ಲರ ಪಾಲಿಗೆ ಯಕಶ್ಚಿತ್ ಅಲ್ಲ! ಪೆನ್ನಿನ ಜೊತೆ ಹಲವರಿಗೆ ಭಾವನಾತ್ಮಕ ನಂಟು ಇರುತ್ತದೆ. ತುಂಬ ಮಂದಿಗೆ ಈಗಲೂ ‘ಪೆಟ್ ಪೆನ್ನು’ ಎಂಬ ಮೋಹ ಇರ್ತದೆ. ತಾವಾಗಿ ಇಷ್ಟ ಪಟ್ಟು, ಆರಿಸಿ ತರುವ ಬಣ್ಣದ್ದು, ಶಾಯಿಯದ್ದು, ಗಾತ್ರದ್ದು ಪೆನ್ನುಗಳನ್ನು ಬಳಸಲು ಅವರು ಇಷ್ಟ ಪಡ್ತಾರೆ, ಪೆನ್ನಿನ ಜೊತೆ ಗಾಢವಾದ ಅನುಬಂಧ ಇರ್ತದೆ. ಕೆಲವರು ಎಷ್ಟೋ ವರ್ಷಗಳಿಂದ ಒಂದೇ ಪೆನ್ನು ಬಳಸ್ತಾ ಇರ್ತಾರೆ. ಈ ಪೈಕಿ ದುಬಾರಿ ಪೆನ್ನುಗಳೂ ಇರಬಹುದು. ತುಂಬ ಮಂದಿಯ ಪಾಲಿಗೆ ಪೆನ್ನು ಕರ್ಚೀಫ್, ಮೊಬೈಲ್ ಇದ್ದ ಹಾಗೆ, ಖಾಸಗಿ ವಸ್ತು. ಕೆಲವರು ಅದನ್ನು ಇನ್ನೊಬ್ಬರ ಜೊತೆ ಶೇರ್ ಮಾಡಲು ಇಷ್ಟಪಡುವುದಿಲ್ಲ. ಇಂತಹ ಸಂದರ್ಭ ಪೆನ್ನು ಕೇಳುವವರು ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಪೆನ್ನು ಕೇಳಲೇಬೇಕಾದರೂ ಅದನ್ನು ಜಾಗರೂಕತೆಯಿಂದ ಬಳಸಿ, ಕೃತಜ್ಞತಾಪೂರ್ವಕವಾಗಿ ಮರಳಿಸಬೇಕು. ಇದರಿಂದ ಅವರು ಕೂಡಾ ಮನುಷ್ಯರ ಮೇಲೆ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.


ಮರೆವಿನಿಂದ ಪೆನ್ನು ತರಲು ಬಾಕಿ ಆಗಬಹುದು, ಬೇಜವಾಬ್ದಾರಿ, ಉಡಾಫೆಯಿಂದಲೂ ಬಾಕಿ ಆಗಬಹುದು. ತುಂಬ ಸಲ ನಾನು ಪ್ರವಾಸಗಳ ಸಂದರ್ಭ ಗಮನಿಸಿದ್ದೇನೆ. ಕೆಲವರಿಗೆ ಪ್ರವಾಸ, ಪ್ರಯಾಣದ ವೇಳೆ ಅನುಕೂಲ ಇದ್ದರೂ ಮನೆಯಿಂದ ಕುಡಿಯುವ ನೀರು ತರಲು ಉದಾಸೀನ, ಕೆಲವರಿಗೆ ಬೆಡ್ ಶೀಟ್ ತರಲು ಉದಾಸೀನ! ಇಂಥವರು ಆರಾಮವಾಗಿ ಕೈಬೀಸಿಕೊಂಡು ಮನೆಯಿಂದ ಬರುತ್ತಾರೆ. ಪಾಪ ಯಾರದರೂ ಕಷ್ಟಪಟ್ಟು ಬಾಟಲಿಯಲ್ಲಿ ನೀರು ತುಂಬಿಸಿ ಆ ಭಾರವನ್ನು ಹೊತ್ತುಕೊಂಡು ಬಂದಿದ್ದರೆ, ಅವರ ದಾಕ್ಷಿಣ್ಯದ ದುರುಪಯೋಗ ಮಾಡಿ ಇತರರ ಬಾಟಲಿಯ ನೀರು ಕುಡಿದು ದಾಹ ತೀರಿಸಿಕೊಳ್ಳುತ್ತಾರೆ. ತಾವೂ ಕೈಬೀಸಿಕೊಂಡು ಓಡಾಡ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ, ಕಷ್ಟಕಾಲದಲ್ಲಿ ಹೀಗೆಲ್ಲ ನೀರು ಕುಡಿದರೆ ಅದೇನು ದಂಡನಾರ್ಹವೇನಲ್ಲ. ಆದರೆ, ಬೇಕಂತಲೇ, ಬೇಜವಾಬ್ದಾರಿ ಮೆರೆದು, ಇತರರ ಔದಾರ್ಯವನ್ನು ದುರುಪಯೋಗ ಮಾಡುವುದು ಇದೆಯಲ್ಲ, ಅದು ಖಂಡಿತಾ ಸಭ್ಯತೆ ಎನಿಸುವುದಿಲ್ಲ. ಬಸ್ಸಿನಲ್ಲಿ ಉದಾರವಾಗಿ ನೀಡಿದ ಸೀಟುಗಳನ್ನು ತಾವು ಇಳಿಯುವ ವೇಳೆ ಮರಳಿಸದೆ ಬೇಜವಾಬ್ದಾರಿಯಿಂದ ಇಳಿದು ನಡೆಯುವುದು ಸಹ ಇಂಥದ್ದೇ ಬೇಜವಾಬ್ದಾರಿ ನಡವಳಿಕೆಗೊಂದು ಉದಾಹರಣೆ.


ಬಸ್ಸಿನಲ್ಲಿ ಕಂಡಕ್ಟರ್‌ಗಳ ವರ್ತನೆ ಗಮನಿಸಬಹುದು. ಪಾಪ ಯಾರಾದರೂ ತಮಗೆ ಬರಬೇಕಾದ 1 ರುಪಾಯಿಯೋ, 5 ರುಪಾಯಿಯೋ ಚಿಲ್ಲರೆಯನ್ನು ಟೆನ್ಶನ್ ಮಾಡಿಕೊಂಡು, ವಾಪಸ್‌ ಕೇಳಿದಾಗ, ‘ಸ್ವಾಮಿ ಯಕಶ್ಚಿತ್ 1 ರುಪಾಯಿ ತಾನೆ, ನಾನೇನು ಅರ್ಧದಲ್ಲಿ ಇಳ್ಕೊಂಡು ಹೋಗ್ತೇನ’ ಅಂತ ದಬಾಯಿಸಿ ಬಾಚಿ ಮುಚ್ಚಿಸುವುದು, ಪ್ರಯಾಣಿಕ ಇಳಿಯುವ ಹೊತ್ತಿಗೇ ಇನ್ನೊಂದು ಬಾಗಿಲಿನ ಬಳಿ ನಿಂತು ಚಿಲ್ಲರೆ ಕೊಡದೆ ತಪ್ಪಿಸಿಕೊಳ್ಳುವುದು ಕಣ್ಣಾರೆ ನೋಡಿದ್ದೇನೆ. ಇದೇ 1 ರುಪಾಯಿ ಕಡಿಮೆ ನೀಡಿದರೆ ಅದೇ ಕಂಡಕ್ಟರ್ ಟಿಕೆಟ್‌ ನೀಡಲು ಸಿದ್ಧನಿದ್ದಾನ? ಇಲ್ವಲ್ಲ...?
ಜಗತ್ತಿನಲ್ಲಿ ಇತರರ ಔದಾರ್ಯವನ್ನು, ದಾಕ್ಷಿಣ್ಯವನ್ನು, ಅಸಹಾಯಕತೆಯನ್ನು ದುರುಪಯೋಗ ಮಾಡಿಯೇ ಬದುಕುವವರ ಸಂಖ್ಯೆ ದೊಡ್ಡದಿದೆ. ದೊಡ್ಡ ದನಿಯಲ್ಲಿ ಮಾತನಾಡಿ ಅಥವಾ ಸುಭಗರಂತೆ ಸೋಗು ಹಾತಿ ಕೆಲಸ ಮಾಡಿಸಿಕೊಳ್ಳುವ ವರ್ಗ. ಅವರು ಹೊರ ಜಗತ್ತಿಗೆ ಭಯಂಕರ ಸಭ್ಯಸ್ಥರಾಗಿರುತ್ತಾರೆ. ಆದರೆ, ಅಂತರಂಗದ ಅಹಂಕಾರ, ಬೇಜವಾಬ್ದಾರಿ ಮತ್ತು ಜಗತ್ತು ಇರುವುದೇ ತನ್ನ ಸೇವೆಗೆ ಎಂಬ ನಿರ್ಲಕ್ಷ್ಯದ ವರ್ತನೆಗಳು ಹೊರಗಡೆ ಕಾಣಿಸುವುದೇ ಇಲ್ಲ.
ಯಕಶ್ಚಿತ್ ಪೆನ್ನಲ್ವ, ಯಕಶ್ಚಿತ್ ನೀರಲ್ವ, ಯಕಶ್ಚಿತ್ 5 ರುಪಾಯಿ ಅಲ್ವ, ಯಕಶ್ಚಿತ್ ಅವನ ಬೈಕಲ್ವ... ಅಂತ ದಯವಿಟ್ಟು ಯಾವುದನ್ನೂ ಯಕಶ್ಚಿತ್ ಅಂತ ಹಣೆಪಟ್ಟಿಗೆ ಸೇರಿಸಬೇಡಿ. ನಿಮ್ಮ ಪಾಲಿಗೆ ಅದು ಯಕಶ್ಚಿತ್ ಇರಬಹುದು. ಆದರೆ ಜಗತ್ತಿನ ಪ್ರತಿಯೊಬ್ಬರೂ ಹುಟ್ಟುವಾಗಲೇ ಚಿನ್ನದ ಚಮಚ ಬಾಯಲ್ಲಿ ಇರಿಸಿ ಹುಟ್ಟಿರುವುದಿಲ್ಲ. ಕಷ್ಟಪಟ್ಟು ಅವರು ಸಂಪಾದಿಸಿರ್ತಾರೆ. ಮಾತ್ರವಲ್ಲ, ಕೆಲವರಿಗೆ ಬದುಕಿನ ಪುಟ್ಟ ಪುಟ್ಟ ವಸ್ತುಗಳೂ ಅಮೂಲ್ಯವಾಗಿರ್ತವೆ. ಅದನ್ನು ಕಳೆದುಕೊಳ್ಳಲು ಅವರು ಇಷ್ಟಪಟ್ಟಿರುವುದಿಲ್ಲ. ಹಾಗಾಗಿ ನೀವು ಬೇಜವಾಬ್ದಾರಿಯಿಂದ ಮರಳಿಸದೇ ಇದ್ದ ಪೆನ್ನು ಒಬ್ಬರ ಮನಃಶಾಂತಿಯನ್ನೇ ಕದಡಬಹುದು, ಮತ್ತೊಬ್ಬರ ನಂಬಿಕೆಯನ್ನು ಹಾಳು ಮಾಡಬಹುದು, ಮತ್ತು ನಿಮ್ಮ ಕುರಿತಾದ ಅವರ ಅಭಿಪ್ರಾಯವೂ ಬದಲಾಗಬಹುದು.


ಜಗತ್ತಿನಲ್ಲಿ ಯಾವುದೂ ಸಣ್ಣ ಸಂಗತಿಯಲ್ಲ. ನಾವದನ್ನು ಸಣ್ಣದು ಅಂತ ನಮ್ಮ ಅನುಕೂಲಕ್ಕೆ ತಕ್ಕ ಹಾಗೆ ‘ಕುಗ್ಗಿಸುತ್ತೇವೆ’ ಅಷ್ಟೇ... ಕೋಟ್ಯಾಂತರ ರುಪಾಯಿ ಬೆಲೆಬಾಳುವ ಕಾರಿನ ಟಯರ್‌ ಸಹ ಸಣ್ಣದೊಂದು ಮೊಳೆ ಚುಚ್ಚಿದರೆ ಪಂಕ್ಚರ್ ಆಗ್ತದೆ, ದೊಡ್ಡ ಹಡಗಿಗೂ ಸಣ್ಣ ತೂತಾದರೂ ಸಾಕು ಒಳಗೆ ನೀರು ನುಗ್ಗಿ ಮುಳುಗ್ತದೆ... ಹಾಗಾಗಿ ಸಣ್ಣದೆಂದು ಯಾವುದನ್ನೂ ಬೇಜವಾಬ್ದಾರಿಯಿಂದ ಕಾಣಬೇಡಿ. ಆದಷ್ಟು ಮಟ್ಟಿಗೆ ಇತರರ ನಂಬಿಕೆ, ಭಾವನೆ ಹಾಗೂ ಸಕಾಲಿಕ ನೆರವನ್ನು ಮರೆಯದೆ ಮನ್ನಿಸಿ ಪ್ರತಿಯೊಂದು ಪುಟ್ಟ ಪುಟ್ಟ ನೆರವನ್ನೂ ಗೌರವದಿಂದ ಕಾಣಲು ಕಲಿತರೆ ‘ನಂಬಿಕೆ’ ಎಂಬುದು ಹಾಳಾಗದೇ ಉಳಿಯಲು ಸಾಧ್ಯ, ಏನಂತೀರಿ?

-ಕೃಷ್ಣಮೋಹನ ತಲೆಂಗಳ (06.05.2024)

No comments: