ನಿಮಗಿದು ಗೊತ್ತೇ... (ಗೊತ್ತಿದ್ದೂ ಗೊತ್ತಿಲ್ಲದಂತಿರುವ ಸತ್ಯ ಸಂಗತಿಗಳು...)

 


ನಿಮಗಿದು ಗೊತ್ತಿಲ್ಲ ಅಂತಲ್ಲ, ನನಗಿದು ಗೊತ್ತೂಂತ ನಿಮಗೂ ಗೊತ್ತಾಗಲಿ ಅಂತ ಗೊತ್ತಾಗುವ ಹಾಗೆ ಬರೆದದ್ದು. ಅನುಭವ ಎಂಬ ಪಾಠ ಶಾಲೆ ಬದುಕಿಗೆ ಪಾಠ ಕಲಿಸುತ್ತಿದಂತೆ. ಆದರೆ, ಬಹುತೇಕ ಸಂದರ್ಭ ಪಾಠ ಪುಸ್ತಕ ಸಿಗುವಾಗ ಪರೀಕ್ಷೆ ಮುಗಿದು ಹೋಗಿರುತ್ತದೆ!!! ಅಂತಹ ಕೆಲವು ಪಾಯಿಂಟುಗಳು ಇಲ್ಲಿವೆ. ನಿಮ್ಮಲ್ಲೂ ಇಂತಹ ವಿಚಾರ ಇದ್ರೆ ನೀವು ಕಮೆಂಟ್ ಬಾಕ್ಸಿನಲ್ಲಿ ಹಾಕಬಹುದು.

1)      ನೀವೆಷ್ಟು ಸಲ ಕಾಲ್ ಮಾಡಿದರೂ ತೆಗೆಯದೇ, ವಾಪಸ್ ಕಾಲ್ ಮಾಡದೇ ಇದ್ದರೆ ಅವರು ಬಿಝಿ ಅಂತ ಅರ್ಥ ಆಗಬೇಕಾಗಿಲ್ಲ. ಅವರಿಗೆ ಈಗ ನಿಮ್ಮ ಅವಶ್ಯಕತೆ ಇಲ್ಲ ಅಥವಾ, ನೀವು ತುಂಬ ಹೊತ್ತು ಮಾತನಾಡಿ ಅವರ ತಲೆ ತಿಂತೀರಿ ಎಂದೂ ಅರ್ಥ ಮಾಡಿಕೊಳ್ಳಬಹುದು. ಅವರಿನ್ನು ನಿಮ್ಮ ಕೈಗೆ ಸಿಗುವುದಿಲ್ಲ, ನೀವು ಕೊಟ್ಟ ಸಾಲ ಹೋದದ್ದೆ ಗ್ಯಾರಂಟಿ ಅಂತ ಅರ್ಥ ಮಾಡಿಕೊಳ್ಳಬಹುದು.

2)      ನೀವು ವಾಟ್ಸಪ್ಪಿನಲ್ಲಿ ಕಳಿಸಿದ ಮೆಸೇಜಿಗೆ ಡಬಲ್ ಬ್ಲೂಟಿಕ್ ಬಂದ ಬಳಿಕವೂ ಯಾರಾದರೂ ಉತ್ತರ ಕೊಡದೇ ಸುಮ್ಮನಿದ್ರೆ, ಅವರು ಮೆಸೇಜ್ ನೋಡಿಲ್ಲ ಅಂತ ಅರ್ಥ ಅಲ್ಲ. ಅದಕ್ಕೆಲ್ಲ ಉತ್ತರಿಸಿ ಆಗ್ಲಿಕೇನೂ ಇಲ್ಲ ಎಂಬ ಮನಃಸ್ಥಿತಿಯಲ್ಲಿದ್ದಾರೆ ಅಂತ ಅರ್ಥ. ಅದೇ ವ್ಯಕ್ತಿ ಆತನಿಗೆ ನಿಮ್ಮಿಂದೇನಾದರೂ ತಿಳಿಯಬೇಕಾದರೆ ಎಷ್ಟು ಸಲ ಬೇಕಾರೂ ಬ್ಯಾಕ್ ಟೂ ಬ್ಯಾಕ್ ಕಾಲ್ ಮಾಡ್ತಾರೆ, ನಿಮ್ಮ ಸಮಯ ಸಂದರ್ಭ ನೋಡದೆ ತಲೆ ತಿನ್ತಾರೆ.

3)      ಒಬ್ಬ ವ್ಯಕ್ತಿ ಮಿತಭಾಷಿಯಾಗಿ, ಭಯಂಕರ ಅಚ್ಚುಕಟ್ಟಾಗಿ ಡ್ರೆಸ್ ಮಾಡಿ, ಮುಖವನ್ನು ಗಂಭೀರವಾಗಿಟ್ಟುಕೊಂಡು ತಿರುಗಾಡ್ತಾ ಇದ್ರೆ, ಆತ ಪ್ರಖಂಡ ಪಂಡಿತನೆಂದೂ, ಆತ ಮಹಾ ಮೇಧಾವಿಯೆಂದೂ ನೀವು ಭಾವಿಸಬೇಕಾಗಿಲ್ಲ. ಆತನಿಗೆ ಪ್ರತಿ ವಿಚಾರದಲ್ಲೂ ಗೊಂದಲವೂ, ಅಲ್ಪ ತಿಳಿವಳಿಕೆಯೂ ಇರಬಹುದು. ಅದು ಕಾಣದೇ ಇರಲು ಗಂಭೀರ ಮುಖಭಾವ ಹೊಂದಿಸಿಕೊಂಡಿರುವವರು ಇರ್ತಾರೆ. ಅವರ ಜೊತೆ 10 ನಿಮಿಷ ಮಾತನಾಡಿದರೆ, ಅವರ ತಿಳಿವಳಿಕೆ ನಿಮಗೆ ಅರ್ಥವಾದೀತು! ನಾವು ಬಹಳಷ್ಟು ಸಲ ನಮ್ಮ ದೌರ್ಬಲ್ಯಗಳನ್ನು ಮುಚ್ಚಿಡಲು ಗಂಭೀರರಂತೆ ಇದ್ದು ಬಿಡ್ತೇವೆ.

4)      ಒಬ್ಬ ವ್ಯಕ್ತಿ ಒಂದು ಗಡುವು ಹೇಳಿ ತಕ್ಕೊಂಡ ಸಾಲದ ಪೈಕಿ ಆ ಗಡುವು ಮುಗಿದ ಬಳಿಕ ನಯಾಪೈಸೆಯನ್ನೂ ಕೊಡದೆ, ಯಾವುದೇ ಸ್ಪಷ್ಟೀಕರಣವನ್ನೂ ಕೊಡದೆ ಕೂತಿದ್ದಾನೆ ಎಂದರೆ, ಆತ ಇನ್ನು ನಯಾಪೈಸೆ ಸಾಲ ವಾಪಸ್ ಕೊಡುವುದಿಲ್ಲ ಎಂಬುದರ ಸೂಚನೆ ಅದು. ಪ್ರಾಮಾಣಿಕ ವ್ಯಕ್ತಿಗಳು ನೂರು ನೂರು ರುಪಾಯಿ ಕಂತಿನಲ್ಲಿ ಕೊಟ್ಟಾದರೂ ಸಾಲ ತೀರಿಸಿಯಾರು. ಪಡೆಯುವಾಗಲೇ ನಾನಿದನ್ನು ವಾಪಸ್ ಕೊಡುವುದಿಲ್ಲ ಎಂದು ಮನಸ್ಸಿನಲ್ಲೇ ಸಂಕಲ್ಪ ಮಾಡಿರುವ ಅತೀ ಬುದ್ಧಿವಂತರು ನಯಾಪೈಸ್ ಮರಳಿಸುವುದಿಲ್ಲ, ನೆನಪಿರಲಿ

5)      ಅಸಹಜ ವರ್ತನೆಗಳೊಂದಿಗೆ (ಸಂಶಯಾಸ್ಪದ ನಡವಳಿಕೆ) ಬದುಕುವವರು, ಅಮಾಯಕರಂತೆ ಇದ್ದುಕೊಂಡು ಬೇರೆಯವರನ್ನು ತಮ್ಮ ವರ್ತನೆಯಿಂದ ಸಿಟ್ಟಿಗೆಬ್ಬಿಸುವವರು ಯಾವತ್ತೂ ಕಿಂಚಿತ್ತೂ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಇತರರನ್ನು ಸಿಟ್ಟಿಗೆಬ್ಬಿಸಿ ಚಂದ ನೋಡ್ತಾರೆ. ಅತ್ಯಂತ ಸ್ಥಿತಪ್ರಜ್ಞತೆ, ತಾಳ್ಮೆ ಹಾಗೂ ವಿಚಲಿತರಾಗದೇ ಇರುವುದು ನಯವಂಚಕರ ಲಕ್ಷಣ. ಇತರರನ್ನು ಕೆಣಕಿ ಸಿಟ್ಟಿಗೆಬ್ಬಿಸುವವರು ಸ್ವತಃ ಸಿಟ್ಟುಗೊಳ್ಳುವುದು ಭಯಂಕರ ಅಪರೂಪ.

6)      ವಂಚಿಸುವುದು ಮೊದಲ ಬಾರಿಗೆ ಆದಾಗ ವ್ಯಕ್ತಿಗೆ ಅಪರಾಧ ಪ್ರಜ್ಞೆ ಕಾಡಬಹುದೇನೋ. ವಂಚನೆಯೇ ಹವ್ಯಾಸವಾದಾಗ, ನಂತರ ವಂಚನೆಯೇ ವೃತ್ತಿಯಾದಾಗ ಅವನಿಗೆ ಅದು ಏನೂ ಫೀಲಾಗುವುದಿಲ್ಲ. ಆತನಿಗೆ ದೇವರ ಮೇಲೆ, ಕಾನೂನಿನ ಮೇಲೆ, ಪಾಪ ಪುಣ್ಯಗಳ ಮೇಲೆ ನಂಬಿಕೆಯೇ ಇರುವುದಿಲ್ಲ. ಯಾವುದರ ಬಗೆಗೂ ಭಯ ಇಲ್ಲದ ವ್ಯಕ್ತಿ ಯಾರಿಗೂ ಹೆದರಬೇಕಾಗಿಲ್ಲ. ಆತನ ಅದೃಷ್ಟವೇ ಆತನನ್ನು ಕಾಪಾಡುತ್ತದೆ.

7)      ಬೇರೆಯವರ ಬರಹ, ಬೇರೆಯವರು ತೆಗೆದ ಫೋಟೋ, ಬೇರೆಯವರ ಕತೆ, ಕವನಗಳನ್ನು ಮೂಲ ಲೇಖಕರ ಹೆಸರು ಕ್ರಾಪ್ (ಕಟ್ ಮಾಡಿ) ಮಾಡಿ ಅಥವಾ ಅಳಿಸಿ ತಮ್ಮದೇ ಎಂಬಂತೆ ಶೇರ್ ಮಾಡುವವರಿಗೆ ಭಯಂಕರ ಸ್ವಾಭಿಮಾನ ಇರ್ತದೆ. ಅದನ್ನು ನೀವು ಪ್ರಶ್ನಿಸಹೊರಟರೆ ಅವರಿಗೆ ಭಯಂಕರ ಇನ್ಸಲ್ಟ್ ಆಗ್ತದೆ, ನೀನೇನು ಮಹಾ ಎಂಬಂತೆ ಉಲ್ಟಾ ಮಾತನಾಡುತ್ತಾರೆ. ಈ ಪೈಕಿ ತುಂಬ ಮಂದಿಗೆ ಇತರರ ಹೆಸರುನ್ನು ಕ್ರಾಪ್ ಮಾಡಿ ವಿಚಾರಗಳನ್ನು ಶೇರ್ ಮಾಡುವುದು ಅಸಹಜ ಅಂತ ಅನ್ನಿಸುವುದೇ ಇಲ್ಲ!

8)      ಎಲ್ಲ ಸಣ್ಣ ಸಣ್ಣ ವಿಚಾರಗಳನ್ನೂ ಗಂಭೀರವಾಗಿ ತೆಗೆದುಕೊಳ್ಳುವವರು, ಆದಷ್ಟು ಪ್ರಾಮಾಣಿಕವಾಗಿ ಬದುಕುವವರು, ಜಾಸ್ತಿ ಟೆನ್ಶನ್ ಮಾಡುವವರು ಪ್ರತಿಯೊಂದಕ್ಕೂ ಸ್ಪಷ್ಟನೆ ಕೊಡ್ತಾ, ಆತಂಕಗೊಳ್ತಾ ತಾನು ಸರಿ ಇದ್ದೇನೆ ಎಂಬುದನ್ನು ನಿರೂಪಿಸುತ್ತಾ ಬದುಕುತ್ತಿರುತ್ತಾನೆ. ಅದೇ ಈ ಯಾವ ರೀತಿಯೂ ಇಲ್ಲದೆ, ಯಾವುದಕ್ಕೂ ತಲೆ ಕೆಡಿಸದೆ ಎಲ್ಲರನ್ನೂ ನಂಬಿಸುವಂತೆ ಬದುಕುವನನ್ನು ಸಮಾಜವೇ ಸುಲಭವಾಗಿ ನಂಬ್ತದೆ. ಮುಗಿಯಿತಲ್ಲ?!

9)      ವೈದ್ಯರು, ವಿಜ್ಞಾನಿಗಳು, ಪ್ರಾಜ್ಞರು ಸಮಾಜದ ಒಳಿತಿಗೆ ಹೇಳುವುದನ್ನು ಜನ ಅಷ್ಟು ಸುಲಭದಲ್ಲಿ ನಂಬುವುದಿಲ್ಲ. ಡೋಂಗಿ ಬಾಬಾಗಳು, ಯಾವುದೇ ಪೂರ್ವಾಪರ ಇಲ್ಲದ ದಿಢೀರ್ ಸನ್ಯಾಸಿಗಳು ಪಾದಧೂಳಿಯನ್ನು ಹೋಗಿ ನೆಕ್ಕುತ್ತಾರೆ. ವಾಟ್ಸಪ್ಪಿನಲ್ಲಿ ಬರುವ ಸುಳ್ಳು ಸುದ್ದಿಗಳನ್ನು ಫಾರ್ವರ್ಡ್ ಮಾಡ್ತಾರೆ. ವಂಚನೆಯ ಎಸ್ಸೆಮ್ಮೆಸ್ ಲಿಂಕ್ ಒತ್ತಿ ಮೋಸ ಹೋಗುತ್ತಾರೆ. ಮತ್ತೆ ಯಾರ್ಯಾರಿಗೋ ಬೈತಾರೆ. ಸತ್ಯವನ್ನು ಯಾರು ಹೇಳ್ತಾರೆ ಎಂಬುದು ಮುಖ್ಯ ಆಗ್ತದೆ, ಸತ್ಯ ಸಂಗತಿ ಅಲ್ಲ!!!

10)   ಯಾವುದೇ ಹೊಸ ವಸ್ತು, ವಾಹನ, ಮೊಬೈಲ್ ಖರೀದಿಸಿದಾಗ, (ಮುಖವನ್ನು ಕಿವುಚಿಕೊಂಡು, ಅನುಕಂಪ ಭಾವದಿಂದ...) ಓಹ್ ನೀನು ಇದು ತಕ್ಕೊಂಡದ್ದ, ನಿನಗೆ ಇದರ ಅರ್ಧಕ್ಕೆ ಸಿಕ್ತಿತ್ತಲ್ಲ, ನೀನು ಪೂರ್ತಿ ಸೋತು ಹೋದೆ... ಅಂತೆಲ್ಲ ನಿಮ್ಮನ್ನು ಗೊಂದಲಕ್ಕೆ ದೂಡುವ ಒಂದು ವರ್ಗವೇ ಇರ್ತದೆ. ಎಲ್ಲಿಯ ವರೆಗೆ ಅಂದ್ರೆ, ಕೊನೆಗೆ ಮದುವೆ ಆದ ಬಳಿಕವೂ, ನಿನಗೆ ಇದಕ್ಕಿಂತ ಉತ್ತಮ ಆಯ್ಕೆ ಸಿಗ್ತಾ ಇತ್ತು ಅಂತ ತಲೆ ಕೆಡಿಸುವವರು ಇರ್ತಾರೆ. ಒಂದು ನೆನಪಿಟ್ಕೊಳ್ಳಿ, ಇತರರು ಹೊಸತೊಂದು ಖರೀದಿಸಿದ ಬಳಿಕ ಅವರನ್ನು ಬೇಕೆಂದೇ ಸಣ್ಣದು ಮಾಡಿ ಮಾತನಾಡುವವರ ಪೈಕಿ ಶೇ.90 ಮಂದಿ ತಮ್ಮ ಜನ್ಮದಲ್ಲಿ ಒಂದು ಉತ್ತಮ ಖರೀದಿ ಮಾಡಿರುವುದಿಲ್ಲ, ಇತರರ ಬಟ್ಟಲಿನಲ್ಲಿ ಕಲ್ಲು ಹುಡುಕುವುದೇ ಅವರ ಸ್ವಭಾವ ಆಗಿರ್ತದೆ!

 

11)   ನಾವು ಬೆಳಗ್ಗೆದ್ದು ವಾಟ್ಸಪ್ ಸ್ಟೇಟಸ್ಸುಗಳಲ್ಲಿ ದೊಡ್ಡ ದೊಡ್ಡ ಗುರುಗಳ, ಮಹಾನುಭಾವರ ಹಿತೋಕ್ತಿಗಳನ್ನು ಶೇರ್ ಮಾಡುವುದು ನಾವು ಹಾಗಿದ್ದೇವೆ, ನಾವದನ್ನು ಅನುಸರಿಸುತ್ತೇವೆ ಅಂತಲ್ಲ. ಅದನ್ನು ಓದಿ ಜಗತ್ತು ಬದಲಾಗಲಿ ಅಂತ!! ಸ್ಟೇಟಲ್ಲಿನಲ್ಲಿದ್ದಾಗೆ ನಾವು ಬದುಕುವುದಕ್ಕಾಗುವುದಿದ್ದರೆ, ಇವತ್ತು ನಮ್ಮ ಸ್ಟೇಟಸ್ಸು ಎಲ್ಲಿಗೋ ಹೋಗಿ ತಲುಪುತ್ತಿತ್ತು...


 

12)   ಇಷ್ಟೆಲ್ಲ ಬರೆಯುವ ಇವ ಎಂತ ದೊಡ್ಡ ಜನವ, ಬರೆಯುವುದಕ್ಕೆ ಸುಲಭ, ಅದನ್ನು ಪಾಲಿಸುವುದಕ್ಕೆ ಕಷ್ಟ ಅಂತ ನಿಮ್ಮಲ್ಲಿ ತುಂಬ ಮಂದಿ ಮನಸ್ಸಿನಲ್ಲಿ ಅಂದುಕೊಂಡಿರ್ತೀರಿ... ತಪ್ಪಿಯೂ ಅದನ್ನು ಕಮೆಂಟಿನಲ್ಲಿ ಹಾಕುವುದಿಲ್ಲ.!!!


(ನೀವು ಈ ಪಾಯಿಂಟುಗಳನ್ನು ಮುಂದುವರಿಸಬಹುದು)

-ಕೃಷ್ಣಮೋಹನ ತಲೆಂಗಳ (04.07.2024)

No comments: