ಡಿಎಲ್ ನವೀಕರಣ ಕುರಿತು ಒಂದು ಕಿವಿಮಾತು...

 

ನಿಮ್ಮಲ್ಲಿ ತುಂಬ ಮಂದಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್ DL) ಹೊಂದಿರಬಹುದು. ಸಾಮಾ
ನ್ಯವಾಗಿ 15 ಅಥವಾ 20 ವರ್ಷಗಳಿಗೆ ಪರವಾನಗಿ ಅವಧಿ ಇರುತ್ತದೆ. ಡ್ರೈವಿಂಗ್ ಲೈಸೆನ್ಸಿಗೆ ಅವಧಿ (ವ್ಯಾವಿಡಿಟಿ) ಅಂತ ಇರುತ್ತದೆ. ಆ ಅವಧಿಗೆ ನಾವದನ್ನು ಆರ್ ಟಿ ಒ ಕಚೇರಿಗೆ ಹೋಗಿ ನವೀಕರಣ ಮಾಡಬೇಕು. ನಮ್ಮ ಡಿಎಲ್ ವ್ಯಾಲಿಡಿಟಿ ಅವಧಿ ಮುಗಿದ ಬಳಿಕ ನಾವು ನವೀಕರಿಸದೆ ವಾಹನ ಚಲಾಯಿಸಿದರೆ ಎರಡು ತಪ್ಪಾಗುತ್ತದೆ.

1)      ಡಿಎಲ್ ಇಲ್ಲದೆ ವಾಹನ ಚಾಲನೆ ಅಪರಾಧ

2)      ಡಿಎಲ್ ಇಲ್ಲದೆ ವಾಹನ ಚಲಾಯಿಸುವ ಸಂದರ್ಭ ದುರಾದೃಷ್ಟವಶಾತ್ ಅಪಘಾತ ಸಂಭವಿಸಿದರೆ ಇನ್ಶೂರೆನ್ಸ್ ವಿಚಾರದಲ್ಲಿ ಸಹ ಕಾನೂನು ತೊಡಕು ಉಂಟಾಗುತ್ತದೆ.

ಕಳೆದ ಕೆಲ ವರ್ಷಗಳಿಂದ ಹೊಸದಾಗಿ ಚಿಪ್ ಕಾರ್ಡ್ ಸಹಿತ ಡಿಎಲ್ ಹೊಂದಿದವರಿಗೆ ಅದರ ನವೀಕರಣವನ್ನು ಆನ್ ಲೈನ್ ಮೂಲಕ ನೀವು ಇರುವಲ್ಲಿಂದಲೇ ಮಾಡಲು ಸಾಧ್ಯವಿದೆ. ಆದರೆ 15-20 ವರ್ಷಗಳ ಹಿಂದೆ ಡಿಎಲ್ ಮಾಡಿಸಿಕೊಂಡವರು ದಯವಿಟ್ಟು ನಿಮ್ಮ ಡಿಎಲ್ ಅವಧಿ ಮುಗಿಯುವ ದಿನಾಂಕ ಪರಿಶೀಲಿಸಿ. ನನಗೆ ತಿಳಿದ ಮಟ್ಟಿದೆ ಮೂರು ರೀತಿಯ ಡಿಎಲ್ ನಾವು ಬಳಸುತ್ತೇವೆ.

1)      ಹಳೆ ಮಾದರಿ ಪುಸ್ತಕ

2)      ಚಿಪ್ ರಹಿತ ಪ್ಲಾಸ್ಟಿಕ್ ಕಾರ್ಡ್

3)      ತೀರಾ ಇತ್ತೀಚಿನ ಚಿಪ್ ಸಹಿತ ಸ್ಮಾರ್ಟ್ ಕಾರ್ಡ್
ಮೊದಲಿನ ಎರಡು ರೀತಿಯ ಡಿಎಲ್ ನೀವು ಹೊಂದಿದ್ದರೆ ಅದರ ನವೀಕರಣಕ್ಕೆ ಕೊನೆಯ ದಿನದ ವರೆಗೆ ದಯವಿಟ್ಟು ಕಾಯಬೇಡಿ. ಮೊದಲ ಎರಡು ರೀತಿಯ ಡಿಎಲ್ ನವೀಕರಣಕ್ಕೆ ಸಾಕಷ್ಟು ಪೇಪರ್ ವರ್ಕ್ ಇದ್ದು ನಿಮ್ಮ ದಾಖಲೆಗಳನ್ನು ಆನ್ ಲೈನ್ ಗೆ ಹೊಂದಿಸಲು ಸ್ವಲ್ಪ ದಿನ ತಗಲುತ್ತದೆ. ಆಯಾ ಕಚೇರಿಯ ಸಿಬ್ಬಂದಿ ಲಭ್ಯತೆ, ಸರ್ವರ್ ಸಮಸ್ಯೆ ಇತ್ಯಾದಿಗಳನ್ನು ಹೊಂದಿಕೊಂಡು ಕೆಲವೊಮ್ಮೆ ಇದು ವಾರಗಟ್ಟಲೆ ಆಗುವುದೂ ಇದೆ. ಹೀಗಾಗಿ ದಯವಿಟ್ಟು ಹಳೆ ಮಾದರಿಯ ಡಿಎಲ್ ಇರುವವರು ದಯವಿಟ್ಟು ತಕ್ಷಣ ಅದನ್ನು ನೂತನ ಮಾದರಿಯ ಚಿಪ್ ಕಾರ್ಡ್ ಗೆ ಬದಲಾಯಿಸಲು ಅರ್ಜಿ ಸಲ್ಲಿಸಿ. (ಪ್ರೊಸೀಜರ್ ನಿಮಗೆ
RTO ಕಚೇರಿಯಲ್ಲಿ ತಿಳಿಸುತ್ತಾರೆ). ನಿಮ್ಮ ಹಳೆ ಡಿಎಲ್ ಸ್ಮಾರ್ಟ್ ಕಾರ್ಡ್ ಆಗಿ ಸಿಕ್ಕಿದರೆ, ನಂತರ ನೀವು ಸುಲಭವಾಗಿ ಆನ್ ಲೈನ್ ಮೂಲಕವೇ ಅದರ ನವೀಕರಣ ಮಾಡಿಸಲು ಸುಲಭ ಇದೆ.


ಹಳೆ ಮಾದರಿಯ ಕಾರ್ಡನ್ನೇ ನವೀಕರಿಸುವುದಾದರೆ ಸಾಕಷ್ಟು (ಒಂದೆರಡು ತಿಂಗಳ ಹಿಂದೆಯೇ) ಮೊದಲೇ ನವೀಕರಣಕ್ಕೆ ಅರ್ಜಿ ಸಲ್ಲಿಸಿ ನವೀಕರಿಸಿಕೊಳ್ಳಿ. ಡಿಎಲ್ ಇಲ್ಲದ ಚಾಲನೆ ಸುರಕ್ಷಿತವಲ್ಲ. ನನ್ನಲ್ಲಿ ಇದ್ದ ಹಳೆ ಮಾದರಿ ಡಿಎಲ್ ನವೀಕರಣಕ್ಕೆ ಸುಮಾರು 3 ತಿಂಗಳು ಕಳೆದಿದ್ದು, ನಾನು ಸಾಕಷ್ಟು ಕಾಯುವಂತಾಯಿತು. ಹಾಗಾಗಿ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಈ ಸಲಹೆ ನೀಡಿದ್ದೇನೆ. (ವಿ.ಸೂ. ಸ್ಮಾರ್ಟ್ ಕಾರ್ಡ್ ಅಲಭ್ಯತೆ, ಸಿಬ್ಬಂದಿ ಕೊರತೆ, ಆಯಾ ಕಚೇರಿಗಳ ವಿಳಂಬ ಧೋರಣೆ ಇತ್ಯಾದಿ ಕಾರಣಗಳಿಗೆ ಕಾರ್ಡ್ ವಿತರಣೆ ವಿಳಂಬ ಆಗುವ ವಿಚಾರ ಈ ಬರಹಕ್ಕೆ ಹೊರತಾಗಿದೆ. ಕಾಗದ ರೂಪದ ಡಿಎಲ್ ಆನ್ನೈನ್ ಗೆ ಸೇರಿಕೊಳ್ಳಲು ಸ್ವಲ್ಪ ದಿನ ತಗಲುತ್ತದೆ ಎಂಬುದಷ್ಟೇ ಇಲ್ಲಿ ಉಲ್ಲೇಖಿಸಿರುವ ವಿಚಾರ)

-ಕೃಷ್ಣಮೋಹನ ತಲೆಂಗಳ (09.07.2024)

No comments: