ನನ್ನ ಬಾಲ್ಯದಲ್ಲಿ ಆಧಾರ್, ಸಿಸಿ ಕೆಮರಾ ಗೊತ್ತಿರ್ಲಿಲ್ಲ, ಆದರೆ “ನಂಬಿಕೆ” ಇತ್ತು... ಈಗ ಎಲ್ಲವೂ ಇದೆ, ಆದರೆ..!

 




ನಾನು ಸಣ್ಣವನಾಗಿದ್ದಾಗ ಇದ್ದ ಜಗತ್ತೂ, ಸುಮಾರು 35-40 ವರ್ಷಗಳ ನಂತರದ ಈಗಿನ ಜಗತ್ತೂ ಸಹಜವಾಗಿಯೇ ತುಂಬ ಬದಲಾಗಿದೆ. ಬದುಕು ಪಾರದರ್ಶಕ ಮತ್ತು ನಿಷ್ಪಕ್ಷಪಾತ ಆಗಿರಬೇಕು ಎಂಬ ಕಾರಣದಿಂದ ಭಯಂಕರವಾಗಿ ತಂತ್ರಜ್ಞಾನ, ಬೇಹುಗಾರಿಕೆಗೆ ಅಸ್ತ್ರಗಳು ಅಭಿವೃದ್ಧಿ ಆಗಿವೆ. ಆದರೆ ಇದರಿಂದ ನಂಬಿಕೆ, ವಂಚನೆ, ದ್ರೋಹ, ಭ್ರಷ್ಟಾಚಾರ ಕಡಿಮೆ ಆಗಿವೆಯಾ..?. ಯೋಚಿಸಿದಾಗ ನನಗೆ ಹೊಳೆದಿದ್ದು ಇಷ್ಟು... ಈ ಕೆಳಗಿನ 10 ಪಾಯಿಂಟುಗಳು ಪ್ರಾತಿನಿಧಿಕವಾಗಿ ನಾಲ್ಕು ದಶಕಗಳ ಹಿಂದಿನ ದಿನಗಳಿಗೆ ಹೋಲಿಕೆ ಅಷ್ಟೇ.. ಮತ್ತೆಂತ ಇಲ್ಲ

1)      ಆಗ ಮೊಬೈಲು, ಸಿಸಿ ಕೆಮರಾ, ಫಿಂಗರ್ ಪ್ರಿಂಟ್ ಅನ್ಲಾಕ್, ಫೇಸ್ ರೆಕಗ್ನಿಶನ್, ಎಐ ಕೆಮರಾ, ಹೋದಲ್ಲಿ, ಬಂದಲ್ಲಿ ಬಾಂಬ್ ಡಿಡೆಕ್ಟರುಗಳು ಎಂಥದ್ದೂ ಇರಲಿಲ್ಲ. ಆದರೆ ಜನರಿಗೆ ಪರಸ್ಪರ ತುಂಬ ನಂಬಿಕೆ ಇತ್ತು. ಈಗ ಇವೆಲ್ಲ ಇವೆ. ಆದರೆ ಎಲ್ಲಿಯಾದರೂ ಇವೆಲ್ಲ ಬಂದ ಮೇಲೆ ಅಪರಾಧಿಗಳ, ಅಪರಾಧಗಳ ಸಂಖ್ಯೆ ಕಡಿಮೆ ಆಗಿದೆಯಾ...? ಇವುಗಳ ಸಹಾಯದಿಂದ ಅಪರಾಧಿಗಳನ್ನು ಸುಲಭವಾಗಿ ಪತ್ತೆ ಮಾಡಬಹುದು ನಿಜ. ಅಪರಾಧಿಗಳ ಸಂಖ್ಯೆ ಕಡಿಮೆ ಆಗಿದೆಯಾ?

2)      ಆಗ ಪುಸ್ತಕದ (ಕಾಗದದ) ರೇಷನ್ ಕಾರ್ಡು ಇತ್ತು, ಬ್ಯಾಂಕ್ ಪುಸ್ತಕ ಇತ್ತು. ಅದಕ್ಕೆ ಆಧಾರ್ ಲಿಂಕ್ ಇರಲಿಲ್ಲ. ಆಧಾರೇ ಇರಲಿಲ್ಲ. ಕೇವಲ ಸಹಿ, ಹೆಬ್ಬಟ್ಟಿನಲ್ಲಿ ಎಲ್ಲ ನಡೆಯುತ್ತಿತ್ತೂ. ಆದರೂ ಬ್ಯಾಂಕ್ ವ್ಯವಹಾರ, ಸರ್ಕಾರಿ ಕಚೇರಿಗಳ ವ್ಯವಹಾರ ಸರಿಯಾಗಿಯೇ ನಡೆಯುತ್ತಾ ಇತ್ತು. ನಂತರ ಕಂಪ್ಯೂಟರ್ ಬಂತು. ಕಂಪ್ಯೂಟರ್ ಬಂದರೂ ಫೈಲುಗಳು ಖಾಲಿ ಆಗಲಿಲ್ಲ. ಅದೂ, ಇದೂ ಸಜ್ಜಿಗೆ ಬಜಿಲ್ ಆಗಿವೆ. ಇಷ್ಟಾಗಿಯೂ ಪ್ರತಿದಿನ ಕೆವೈಸಿ ಗೋಳು.  ಇಂದು ಮನೆಯಲ್ಲಿ ಒಬ್ಬ ವ್ಯಕ್ತಿ ರೇಷನ್ನು, ಪಾಸ್ಬುಕ್ಕು, ಎಲ್ಪಿಜಿ, ಆರ್ ಟಿಸಿ, ಪಾನ್, ಆರ್, ಡಿಎಲ್ ಎಲ್ಲದಕ್ಕೂ ಆಧಾರ್ ಲಿಂಕ್ ಮಾಡಲೇ ಓಡಾಡಬೇಕಾಗುತ್ತದೆ. ಒಂದು ವೇಳೆ ಆಧಾರ್ ಬಯೋಮೆಟ್ರಿಕ್ ಮ್ಯಾಚ್ ಆಗದಿದ್ದರೆ ಮತ್ತೆ ಆಧಾರನ್ನೇ ಅಪ್ಡೇಟ್ ಮಾಡಬೇಕಾಗುತ್ತದೆ. ಅಲ್ಲಿ ಸರ್ವರ್ ಸರಿ ಇರುವುದಿಲ್ಲ, ಸ್ಟಾಫ್ ಇರುವುದಿಲ್ಲ, ಎಲ್ಲ ಇದ್ರೆ ಕರೆಂಟೋ ಹೋಗಿರ್ತದೆ...! ಇದು ಮುಗಿಯುವುದೇ ಇಲ್ಲ. ಹೊಸ ಹೊಸ ಕಾರ್ಡುಗಳು, ಹೊಸ ಹೊಸ ಲಿಂಕುಗಳು ಬದುಕನ್ನು ಸಂಕೀರ್ಣ ಆಗಿಸಿವೆ ವಿನಃ ಸುಲಭ ಖಂಡಿತಾ ಆಗಿಸಿಲ್ಲ

3)      ಇಷ್ಟೊಂದು ಬಯೋಮೆಟ್ರಿಕ್, ಆಧಾರ್ ಲಿಂಕ್, ಒಟಿಪಿ ಎಲ್ಲ ಆಗಿದೆಯಲ್ಲ. ಇನ್ನೂ ಹೇಗೆ ಲಕ್ಷಾಂತರ ನಕಲಿ ರೇಷನ್ ಕಾರ್ಡು, ನಕಲಿ ಎಲ್ಪಿಜಿ ಸಂಪರ್ಕ, ನಕಲಿ ಬ್ಯಾಂಕ್ ಖಾತೆ ಎಲ್ಲದಕ್ಕೂ ಮಿಗಿಲಾಗಿ ನಕಲಿ ಆಧಾರ್ ಕಾರ್ಡುಗಳೇ ಚಾಲ್ತಿಯಲ್ಲಿವೆ? ಆಗಾಗ ಕೆವೈಸಿ, ಕೆವೈಸಿ ಅಂತ ಕೇಳ್ತೀರಲ್ಲ, ಸರಿಯಾದ ಕೆವೈಸಿ ಇಲ್ಲದೆ ಇಂತಹ ದಾಖಲೆಗಳು ಹೇಗೆ ಇಶ್ಯೂ ಆಗ್ತವೆ. ಇಷ್ಟು ತಂತ್ರಜ್ಞಾನ ಇದ್ದರೂ ನಕಲಿ ಖಾತೆಗಳು ಸೃಷ್ಟಿಯಾಗ್ತಾ ಇರುವುದು ಹೇಗೆ? ಸರ್ಕಾರದ ಮಟ್ಟದಲ್ಲೇ ಕೋಟ್ಯಾಂತರ ರುಪಾಯಿ ಬ್ಯಾಂಕಿನಿಂದ ಬ್ಯಾಂಕಿಗೆ ವರ್ಗಾವಣೆ ಆಗುವುದು ಹೇಗೆ? ಪ್ರಧಾನಿ ಹೇಳ್ತಾರೆ 2 ಲಕ್ಷ ರುಪಾಯಿಗಿಂತ ಜಾಸ್ತಿ ನಗದಿನಲ್ಲಿ ವ್ಯವಹಾರ ಮಾಡಬಾರದು ಅಂತ. ಹಾಗಾದರೆ ವಂಚಕರು ಕೋಟ್ಯಾಂತರ ರುಪಾಯಿ ಡೀಲ್ ಮಾಡುತ್ತಿರುವುದು ಹೇಗೆ?

4)      ಜಿಪೇ, ಫೋನ್ ಪೇ, ಪೇಟಿಎಂ, ಭೀಂ ಸಹಿತ ಹತ್ತಾರು ಆನ್ ಲೈನ್ ಪೇಮೆಂಟ್ ವ್ಯವಸ್ಥೆ ಇದೆ. ಮೊಬೈಲಿನಲ್ಲೇ ದುಡ್ಡು ಪಾವತಿ ಸಾಧ್ಯ. ಆದರೂ ಪ್ರತಿ ದಿನ ಒಟಿಪಿ ಹೆಸರಲ್ಲಿ, ಲಿಂಕ್ ಒತ್ತಲು ಹೇಳಿ ಲಕ್ಷಾಂತರ ರುಪಾಯಿ ವಂಚನೆಯ ಸೈಬರ್ ಕ್ರೈಂಗಳು ಆಗುತ್ತಲೇ ಇವೆ. ಇದು ಹೇಗೆ...? ಬಹುತೇಕ ಸುಶಿಕ್ಷಿತರೇ ಆನ್ ಲೈನ್ ವಂಚನೆಗೆ ಬಲಿ ಆಗ್ತಾ ಇದ್ದಾರೆ. ಹಾಗದರೆ ವಿದ್ಯೆ ಪಡೆದವರ ಪಾಡೇ ಹೀಗಾದರೆ, ಅವರೇಜ್ ಶಿಕ್ಷಣ ಪಡೆದವರ ಅಥವಾ ಶಾಲೆಗೇ ಹೋಗದವರ ಕತೆ ಏನು?

5)      ತಂತ್ರಜ್ಞಾನ ಇಷ್ಟು ಬದಲಾಗಿದೆ ಅನ್ನುತ್ತೇವೆ. ಇವತ್ತಿಗೂ ಶೇ.60-70ಕ್ಕಿಂತ ಮೇಲೆ ಮತದಾನ ಮಾಡಿಸಲು ಆಗುತ್ತಿಲ್ಲ. ಒಂದು ಸುಭದ್ರವಾದ ಆನ್ ಲೈನ್ ವ್ಯವಸ್ಥೆ ಮೂಲಕ ಜನ ತಾವು ಇದ್ದಲ್ಲಿಂದಲೇ ಮತದಾನ ಮಾಡುವ ತಂತ್ರಜ್ಞಾನ ಮಾಡಿಲ್ಲ. ಕೋಟ್ಯಂತರ ರು. ಖರ್ಚು ಮಾಡಿ ಶೇ.60 ಮಂದಿ ಮಾತ್ರ ಓಟು ಹಾಕುವ ಭಯಂಕರ ವ್ಯವಸ್ಥೆಯಲ್ಲಿದ್ದೇವೆ. ಹಾಗಾದರೆ ಈ ವಿಭಾಗದಲ್ಲಿ ಯಾಕೆ ಆನ್ ಲೈನ್ ಕೆಲಸ ಮಾಡುತ್ತಿಲ್ಲ?

6)      ಹೋದಲ್ಲಿ ಬಂದಲ್ಲಿ ಸಿಸಿ ಕೆಮರಾಗಳಿವೆ, ಹೊಸದಾಗಿ ಎಐ ಕೆಮರಾಗಳು ಅಳವಡಿಕೆಯಾಗಿವೆ. ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಬಾಡಿ ಸ್ಕಾನಿಂಗ್, ಬ್ಯಾಗ್ ಪರಿಶೀಲನೆ ವ್ಯವಸ್ಥೆ ಇದೆ. ಎಲ್ಲದಕ್ಕೂ ಮಿಕ್ಕಿ ಆಧಾರ್ ಕಾರ್ಡುಗಳಲ್ಲಿ ನಮ್ಮ ಫಿಂಗರ್ ಪ್ರಿಂಟುಗಳಿವೆ. ಜಾಲತಾಣಗಳಿಗೆ ಫಿಂಗರ್ ಪ್ರಿಂಟ್ ಲಾಕ್, ಟು ಸ್ಟೆಪ್ ವೆರಿಫಿಕೇಶನ್ ಇದೆ. ಇಷ್ಟೆಲ್ಲ ಇದ್ದೂ ದರೋಡೆ, ಹತ್ಯೆ, ಬಾಂಬ್ ಸ್ಫೋಟಗಳಂತಹ ಪ್ರಕರಣ ಕಡಿಮೆ ಆಗಿಲ್ಲ. ಅದು ಹೋಗಲಿ, ಪ್ರತಿದಿನ ಸಾವಿರಾರು ಫೇಸ್ಬುಕ್ ಖಾತೆಗಳ ನಕಲಿ ಖಾತೆಗಳು ಸೃಷ್ಟಿಯಾಗಿ ನಗದು ವಂಚನೆ ಆಗ್ತಲೇ ಇದೆ...! ಅದು ಯಾಕೆ, ಪೆನ್ ಡ್ರೈವಿನಂತಹ ಹಗರಣದ ಆರೋಪಿ ವಿದೇಶಕ್ಕೆ ಓಡಿ ಹೋದರೆ, ಆತ ತಾನಾಗಿ ಬರುವ ವರೆಗೂ ಆತನನ್ನು ಕರೆಸುವಂತಹ ತಂತ್ರಜ್ಞಾನವೇ ನಮ್ಮಲ್ಲಿ ಇಲ್ಲ!!!

7)      ಎಂಥದ್ದೇ ಜಾಹೀರಾತು ಬರ್ಲಿ, ಎಂಥದ್ದೆ ಟೆಲಿಮಾರ್ಕೆಟಿಂಗ್ ಕರೆ ಬರಲಿ, ಮೊಬೈಲಿಗೇ ಮೆಸೇಜುಗಳು ಬರಲಿ, ಯಾವುದೇ ಉತ್ಪನ್ನವನ್ನು ನಾವು ಅಕ್ಕಪಕ್ಕದವರಲ್ಲಿ, ಸ್ನೇಹಿತರಲ್ಲಿ ಕೇಳದೆ ಖರೀದಿ ಮಾಡಲು ಧೈರ್ಯ ವಹಿಸುವುದಿಲ್ಲ.

8)      ಕ್ಷಣಕ್ಷಣದ ಸುದ್ದಿಗಳನ್ನು ವಾಟ್ಸಪ್ಪಿನಲ್ಲಿ, ಫೇಸ್ಬುಕ್ಕಿನಲ್ಲಿ, ಇನ್ ಸ್ಟಾಗ್ರಾಂನಲ್ಲಿ ಕಾಣುತ್ತಲೇ ಇದ್ದರೂ, ಇಂದಿಗೂ ನಮಗೆ ಸುಳ್ಳು ಸುದ್ದಿ ಯಾವುದು, ಸತ್ಯ ಸುದ್ದಿ ಯಾವುದು ಅಂತ ವರ್ಗೀಕರಿಸಲು ತುಂಬ ಕಷ್ಟ ಆಗುತ್ತಿದೆ. ಸುಳ್ಳು ಸುದ್ದಿಗಳು ಕ್ಷಣಮಾತ್ರದಲ್ಲಿ ಫಾರ್ವರ್ಡ್ ಆಗಿ ವಿಶಾಲ ಜಗತ್ತನ್ನು ತಲುಪುತ್ತದೆ. ಅದರ ಬೆನ್ನಲ್ಲೇ ಬರುವ ಸ್ಪಷ್ಟೀಕರಣ ಎಲ್ಲಿಗೂ ಹೋಗದೆ, ಅನಾಥವಾಗಿ ಯಾರದ್ದೋ ಮೊಬೈಲಿನಲ್ಲಿ ಬಿದ್ದಿರುತ್ತದೆ!

9)      ತಂತ್ರಜ್ಞಾನ ಇಷ್ಟು ಬೆಳೆದಿದೆ. ಯಾರು ಯಾರಿಗೂ ದೂರ ಅಲ್ಲ, ಅಪರಿಚಿತರಲ್ಲ, ಗ್ಲೋಬಲ್ ವಿಲೇಜ್ ಅಂತ ಕರೀತೇವೆ. ಇಷ್ಟಲ್ಲ ತಿಳ್ಕೊಂಡ ಬಳಿಕವೂ ಈಗ ಹಿಂದೆಂದಿಗಿಂತಲೂ ಹೆಚ್ಚು ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿವೆ. ಪರಸ್ಪರ ಪ್ರೀತಿಸಿ ಮದುವೆ ಆದವರೇ ಬೇರ್ಪಡುವ ಪ್ರಕರಣ ತುಂಬ ಕೇಳಿ ಬರ್ತಾ ಇದೆ. ಪರಿಚಯದವರೇ ಸಾಲ ಮರಳಿಸದೆ ವಂಚನೆ, ನಕಲಿ ಪೊಲೀಸರ ಹೆಸರಲ್ಲಿ ವಂಚನೆ, ಡೆಬಿಟ್ ಕಾರ್ಡ್ ಹೆಸರಿನಲ್ಲಿ ಮೋಸ... ಇವೆಲ್ಲ ಅವ್ಯಾಹತವಾಗಿ ನಡೆಯುತ್ತಲೇ ಇವೆ. ಹಾಗಾದರೆ ಇಷ್ಟು ತಂತ್ರಜ್ಞಾನ ಇದ್ದೂ ಸಂವಹನ, ಅರ್ಥೈಸಿಕೊಳ್ಳುವಿಕೆ, ಜ್ಞಾನದ ಹರಿವು ಯಾಕೆ ಸೊರಗುತ್ತಿದೆ? ತಂತ್ರಜ್ಞಾನದಿಂದ ಸಂವಹನ ಯಾಕೆ ಸುಲಲಿತ, ಹಗುರ ಆಗ್ತಾ ಇಲ್ಲ?

10)   ದ.ಕ. ಜಿಲ್ಲೆಯ ಗಡಿ ಭಾಗದ ಊರಿನ ಮಹಾನ್ ಪತ್ರಕರ್ತನೊಬ್ಬ ಕೆಲ ವರ್ಷಗಳ ಹಿಂದೆ (ಇಸವಿ ಮರೆತು ಹೋಗಿದೆ) ತುರ್ತು ಅಗತ್ಯಕ್ಕೆ ಅಂತ ನನ್ನಿಂದ 10 ಸಾವಿರ ರು. ಸಾಲ ಪಡೆದು ವಂಚಿಸಿದ್ದಾನೆ. ನಾನು ನೆಫ್ಟ್ ಮೂಲಕ ಸಾಲ ನೀಡುವ ಮೊದಲು ಯಾವುದೇ ಅಗ್ರೀಮೆಂಟ್ ಮಾಡಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಆತನ ಹೆಸರು ಇಲ್ಲಿ ಉಲೇಖಿಸ್ತಾ ಇಲ್ಲ. ಕಷ್ಟಕಾಲಕ್ಕೆ ಕೇಳಿದ್ದು ಅಂತ ಆತನ ಮೇಲಿನ ವಿಶ್ವಾಸದಿಂದ ದುಡ್ಡು ಕೊಟ್ಟಿದ್ದೆ (ನನ್ನತ್ರ ದುಡ್ಡು ಹೆಚ್ಚಾಗಿ ಕೊಟ್ಟದ್ದಲ್ಲ, ಮಾನವೀಯತೆ ಬೇಕು ಅಂತ ನಾನು ಬಲವಾಗಿ ನಂಬಿದ ಕಾರಣ ಕೊಟ್ಟದ್ದು). ಆತ ಸಾಲ ಪಡೆದು ವರ್ಷಗಳೇ ಕಳೆದಿವೆ. ಅದರಲ್ಲಿ ನಯಾಪೈಸೆ ಕೂಡ ವಾಪಸ್ ಕೊಟ್ಟಿಲ್ಲ. ಆತ ಸಹಜವಾಗಿ ಬದುಕ್ತಾ ಇದ್ದಾನೆ. ಸಾರ್ವಜನಿಕವಾಗಿ ಆತನಿಗೆ ತುಂಬ ಗೌರವ ಇದೆ. ಒಂದರೆಡು ಸಲ ನನ್ನ ಇಂತಹ ಕಿರಿಕಿರಿ ಆಗುವ ಬರಹ ಗಮನಿಸಿ ಕಣ್ಣುಕಟ್ಟಿಗೆ ಗಡುವು ಕೇಳಿದ್ದು ಬಿಟ್ರೆ ಈಗ ಸಾಲ ಮರಳಿಸುವ ಸುದ್ದಿಯೇ ಇಲ್ಲ. ಇತ್ತೀಚೆಗೆ ಆತನ ಬಗ್ಗೆ ವಿಚಾರಿಸಿದಾಗ ಆತ ಇತರ ಕೆಲವರಿಗೂ ಹೀಗೆ ದುಡ್ಡು ಹಿಡಿಸಿದ್ದು ಗೊತ್ತಾಗಿದೆ. ಆಯ್ತಪ್ಪ ಆತನ ಬದುಕಿನಲ್ಲಿ ಇನ್ನೂ ಕಷ್ಟಗಳಿವೆ ಅಂತಲೇ ಇಟ್ಟುಕೊಳ್ಳೋಣ. ಆತ ತಿಂಗಳಿಗೆ ಕನಿಷ್ಠ 10 ರುಪಾಯಿಯ ಹಾಗೆ ನನ್ನ ಸಾಲ ವಾಪಸ್ ಕೊಡ್ತಾ ಬಂದಿದ್ರೂ ಇಷ್ಟು ಹೊತ್ತಿಗೆ ನನ್ನ 500 ರುಪಾಯಿ ಸಾಲ ವಾಪಸ್ ಬರ್ತಾ ಇತ್ತು! ಆದರೆ ವಾಪಸ್ ಕೊಡುವುದೇ ಇಲ್ಲ ಅಂತ ನಿರ್ಧಾರ ಮಾಡಿದ ಕಾರಣ ನಯಾಪೈಸೆ ಕೊಡದೆ ವಂಚಿಸ್ತಾ ಇದ್ದಾನೆ. ತಮಾಷೆ ಅಂದ್ರೆ ಆತ ಆರಾಮವಾಗಿದ್ದಾನೆ. ಇವತ್ತೂ ಆದರ್ಶ ಪತ್ರಕರ್ತರು, ಆದರ್ಶ ಪತ್ರಿಕೋದ್ಯಮ ಇತ್ಯಾದಿ ವಿಚಾರಗಳ ಬಗ್ಗೆ ಉಪನ್ಯಾಸಗಳನ್ನು ನೀಡಲು ಹೋಗುತ್ತಾನೆ!!! That’s it (ಇಂತಹ ಬರಹ ಬರೆದಾಗಲೆಲ್ಲ ಕೆಲವರು ತಮಗೂ ಇಂತಹ ವಂಚನೆ ಆದ ಆನುಭವ ಹಂಚಿಕೊಳ್ತಾರೆ. ಆದರೆ ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರ ಹಾಗೂ ದಾಕ್ಷಿಣ್ಯ ಮತ್ತು ಕೊಟ್ಟ ಸಾಲಕ್ಕೆ ದಾಖಲೆ ಇಲ್ಲದಿರುವುದು ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಸಾಲ ಪಡೆದ ಅತೀ ಬುದ್ಧಿವಂತರು ಎನನ್ ಏರ್ಲ ದಾಲ ಮಲ್ಪೆರೆ ಆಪುಜಿ ಎಂಬ ಭಂಡ ಧೈರ್ಯ ಹೊಂದಿರುವುದರಿಂದ ಇಂತಹ ಪ್ರಕರಣಗಳು ಅಲ್ಲಲ್ಲೇ ಸತ್ತು ಹೋಗುತ್ತವೆ)

ಇಷ್ಟೆಲ್ಲ ಬರೆದ ಉದ್ದೇಶ ಇಷ್ಟೇ... ಮನುಷ್ಯ ತಾನು ಬದಲಾಗದ ಹೊರತು ಎಷ್ಟು ತಂತ್ರಜ್ಞಾನ ಅಭಿವೃದ್ಧಿಪಡಿಸಿದರೂ ಇಂತಹ ವಂಚನೆ, ಮೋಸ ನಿಲ್ಲಲು ಸಾಧ್ಯವೇ ಇಲ್ಲ. ತಂತ್ರಜ್ಞಾನಕ್ಕೆ ಪ್ರತಿಯಾಗಿ ಪ್ರತಿ ವಂಚನಾ ತಂತ್ರಗಳು ಬರುತ್ತಲೇ ಇರುತ್ತವೆ. ಶುರುವಿಗೇ ಹೇಳಿದ ಹಾಗೆ ಮೇಲೆ ಹೇಳಿದ ಯಾವುದೇ ತಂತ್ರಜ್ಞಾನಗಳು ಇಲ್ಲದ ನನ್ನ ಬಾಲ್ಯದಲ್ಲಿ ಪರಸ್ಪರ ನಂಬಿಕೆ ಈಗಕ್ಕಿಂತ ಜಾಸ್ತಿ ಇತ್ತು. ಈಗ ಅದು ಹೊರಟು ಹೋಗ್ತಾ ಇದೆ. ಇನ್ನು 10ನೇ ಪಾಯಿಂಟಿನ ವಿಚಾರಕ್ಕೆ ಬಂದರೆ ಕೆಲವರು ಅಂದುಕೊಂಡಾರು, ಈತ ಬರೆದದ್ದು ನೋಡಿ ಆತ ಸಾಲ ವಾಪಸ್ ಕೊಡ್ತಾನೆ ಅಂತ. ಖಂಡಿತಾ ಆತ ಕೊಡುವುದಿಲ್ಲ. ಅಷ್ಟು ಸ್ವಾಭಿಮಾನ, ಸೂಕ್ಷ್ಮತೆ ಸುಭಗರಂತೆ ಓಡಾಡುವ ನಯವಂಚಕರಿಗೆ ಇರುವುದಿಲ್ಲ. ಸಾಲ ಪಡೆದವನಿಗೆ ಎಷ್ಟೆ ಕಷ್ಟ ಇರಬಹುದು. ಆದರೆ ಸ್ವಾಭಿಮಾನ ಅಂತ ಇದ್ರೆ 10 ರುಪಾಯಿಯ ಹಾಗಾದರೂ ಮರಳಿಸುವ ಮೂಲಕ ತನ್ನ ಕೈಲಾದಷ್ಟು ವಾಪಸ್ ಮಾಡಿಯೇ ಮಾಡ್ತಾರೆ. ಏನೂ ಕೊಡದೇ ಕೂತವ ಡೋಂಗಿ ಅಂತಲೇ ಅರ್ಥ. ಲೋಕದ ದೃಷ್ಟಿಯಲ್ಲಿ ಅವರು ಸುಭಗರಾಗಿರ್ತಾರೆ ಅಷ್ಟೇ... ಇಂತಹ ವಂಚಕರನ್ನು ಎಂತಹ ಸಿಸಿ ಟಿವಿ, ಎಂತರ ಆಧಾರ್ ಲಿಂಕ್ ಸಹ ಹಿಡಿದುಕೊಡಲು ಸಾಧ್ಯವಿಲ್ಲ. ತಂತ್ರಜ್ಞಾನಕ್ಕೂ ಮೀರಿದ್ದು ನಯವಂಚನೆ!!!!!

-ಕೃಷ್ಣಮೋಹನ ತಲೆಂಗಳ (13.07.2024)

No comments: