ಸಾವು ನಿರಾಕರಿಸಲಾಗದ ಸತ್ಯ, ಒಪ್ಪಿದರೂ, ಒಪ್ಪದೇ ಹೋದರೂ...!

 





ನಟ ಪುನೀತ್ ರಾಜ್ ಕುಮಾರ್ ಬಳಿಕ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ವಿಚಲಿತರಾಗಿ ಜಾಲತಾಣಗಳಲ್ಲಿ ಆಘಾತ ವ್ಯಕ್ತಪಡಿಸಿದ್ದು ಹಿರಿಯ ನಿರೂಪಕಿ ಅಪರ್ಣಾ ಅವರ ನಿಧನಕ್ಕೆ ಅಂತ ಅನ್ನಿಸ್ತದೆ.

ಇವರ್ಯಾರೂ ನಮ್ಮ ಬಂಧುಗಳಲ್ಲ, ಸ್ನೇಹಿತರಲ್ಲ, ಅಸಲಿಗೆ ಅವರಿಗೆ ನಾವು ಯಾರು ಅಂತವೇ ಗೊತ್ತಿರುವುದಿಲ್ಲ. ಆದರೂ ಸಾಮಾಜಿಕವಾಗಿ ಅವರು ಮೂಡಿಸಿದ ವರ್ಚಸ್ಸು, ಪ್ರತಿದಿನ ಅಲ್ಲಿಲ್ಲಿ ಅವರನ್ನು ನಾವು ಮುಖ್ಯ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ್ದು, ಕೇಳಿದ್ದು, ಓದಿದ್ದು, ಕಂಡಿದ್ದು... ಇದರ ಆಧಾರದಲ್ಲಿ ಇಲ್ಲೇ ಎಲ್ಲೋ ಅಕ್ಕಪಕ್ಕದವರು ಅನ್ನುವ ಭಾವ ಮೂಡಿಸಿರುತ್ತದೆ. ಟಿ.ವಿ.ಯಲ್ಲಿ ಅವರ ನಿರೂಪಣೆಯೋ, ರೇಡಿಯೋದಲ್ಲಿ ಕೇಳಲ್ಪಟ್ಟ ಅವರ ಧ್ವನಿಯೋ, ಕಾದಂಬರಿಗಳಲ್ಲಿ ಮೂಡಿದ್ದ ಅಕ್ಷರಗಳೋ, ಅವರು ಮಾಡುತ್ತಿದ್ದ ರೀಲ್ಸುಗಳೋ, ಹಾಡುತ್ತಿದ್ದ ಗೀತೆಗಳೋ... ಎಲ್ಲವೂ ನಮಗೊಂದು ಪುಟ್ಟ ಸ್ಫೂರ್ತಿ,     ಒಂದು ಉತ್ಸಾಹ, ಒಂದು ಧೈರ್ಯವನ್ನು, ಆಪ್ತತೆಯನ್ನು ಕಟ್ಟಿಕೊಟ್ಟಿರುತ್ತದೆ. ಅದೇ ಬೆಚ್ಚಗಿನ ಎದುರುಬದುರಾಗಿರದ ಸ್ನೇಹ ಅವರ ಹಠಾತ್ ಅಗಲುವಿಕೆಯನ್ನು ಅರಗಿಸಲಾರದಂತೆ ಮಾಡಿ ಬಿಡುತ್ತದೆ.

ಸಂಸ್ಕಾರದ ಬಗ್ಗೆ, ಅಡುಗೆಯ ಬಗ್ಗೆ, ತುಳುನಾಡಿನ ಆಚಾರ ವಿಚಾರಗಳ ಬಗ್ಗೆ ತಮ್ಮದೇ ಧಾಟಿಯಲ್ಲಿ ಜಾಲತಾಣಗಳಲ್ಲಿ ರೀಲ್ಸ್ ಗಳ ಮೂಲಕ ತಮ್ಮದೇ ಅಭಿಮಾನಿಗಳನ್ನು ಹೊಂದಿದ್ದವರು ಉಡುಪಿಯ ಅಶ್ವಿನಿ ಶೆಟ್ಟಿ. ಅವರು ಬಿಜೆಪಿ ನಾಯಕಿ, ಅವರ ಪತಿ ಉದ್ಯಮಿ, ಮನೆ ಉಡುಪಿ ಇತ್ಯಾದಿ ಯಾವುದೇ ಸೂಕ್ಷ್ಮ ವಿಚಾರಗಳೂ ಅವರ ಸಾವಿನ ತನಕ ಬಹುತೇಕರಿಗೆ ಗೊತ್ತೇ ಇರಲಿಲ್ಲ. ಆದರೂ ಇಲ್ಲೇ ನಮ್ಮ ಸುತ್ತಮುತ್ತ ಓಡಾಡಿಕೊಂಡು ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ತಾ ಇದ್ದರು ಎಂಬ ಭಾವ ಹಲವರಿಗೆ. ಮೊನ್ನೆ (ಸೋಮವಾರ) ಬೆಳಗ್ಗೆ ಅವರ ಬಂಗಲೆಯೊಳಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಎಸಿ ಉಪಕರಣಗಳಲ್ಲಿ ವೈವರೀತ್ಯ ಸಂಭವಿಸಿ ಅವರ ಪತಿ ಆದಾಗಲೇ ತೀರಿಕೊಂಡರು, ಅಶ್ವಿನಿಯವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರ ಇಬ್ಬರು ಮಕ್ಕಳನ್ನು ಅಗ್ನಿಶಾಮಕ ದಳದವರು ಸಕಾಲಿಕವಾಗಿ ಬದುಕಿಸಿದರು. ಈ ಸುದ್ದಿ ಹಲವರನ್ನು ಅವರನ್ನು ಕೇವಲ ಜಾಲತಾಣದಲ್ಲಿ ನೋಡಿದವರನ್ನೂ ಅಧೀರರನ್ನಾಗಿಸಿದೆ.

ನಾವು ನೋಡು ನೋಡುತ್ತಾ ಇದ್ದವರು ಹೀಗೂ ಇಲ್ಲವಾಗಲು ಸಾಧ್ಯವ ಅಂತ ಪ್ರಶ್ನಿಸುವಂತೆ ಮಾಡಿದೆ.

ಅಂದು ಪುನೀತ್ ರಾಜ್ ಕುಮಾರ್, ಚಿರಂಜೀವಿ ಸರ್ಜಾ, ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ... ಹೀಗೆ ಸಾಲು ಸಾಲು ಮಂದಿ ಅಕಾಲಿಕರಾಗಿ ನಿರ್ಗಮಿಸಿದಾಗ ಕರುನಾಡು ಹೀಗೆಯೇ ಆಘಾತಕ್ಕೊಳಗಾಗಿತ್ತು. ಮೊನ್ನೆ ಮೊನ್ನೆ ರಾತ್ರಿ 10 ಗಂಟೆ ವೇಳೆಗೆ ನಿರೂಪಕಿ, ನಟಿ, ಅಪರ್ಣಾ ಇನ್ನಿಲ್ಲ ಅನ್ನುವ ಸುದ್ದಿ ಬಂದಾಗ ಜನ ಅದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ.

ಶುರುವಿನಲ್ಲೇ ಹೇಳಿದ ಹಾಗೆ ಅವರ್ಯಾರೋ, ನಾವ್ಯಾರೋ... ಆದರೂ ಸಾವು ಹೀಗೂ ಬರ್ತದ ಅನ್ನುವ ವೈರಾಗ್ಯ ಮತ್ತು ಜಿಜ್ಞಾಸೆ.

ಸಾಧಕರ, ಪ್ರಸಿದ್ಧರ, ನಾವು ಆರಾಧಿಸುವವರ ಬದುಕಿನ ಸಾಧನೆ, ವರ್ಣರಂಜಿತ ಭಾಗ ಮಾತ್ರ ನಮಗೆ ಸಾರ್ವಜನಿಕವಾಗಿ ಕಾಣಿಸುತ್ತದೆ. ಅಪರ್ಣಾ ಥರ ಅವರನ್ನು ಕಾಡುತ್ತಿರುವ ವೈಯಕ್ತಿಕ ನೋವು, ಅನಾರೋಗ್ಯ, ಹತಾಶೆ, ಅಸಹಾಯಕತೆ ಯಾವುದೂ ಅವರಾಗಿ ತೋರಿಸದ ಹೊರತು ನಮಗೆ ಅರ್ಥ ಆಗುವುದಿಲ್ಲ. ಬದುಕಿನ ಇನ್ನೊಂದು ಮಗ್ಗುಲು ನಮಗೆ ಕಾಣಿಸುವುದೇ ಇಲ್ಲ. ಅದೇ ಕಾರಣಕ್ಕೆ ಅವರು ಸಡನ್ ಎದ್ದು ಹೋದರು ಅಂತ ನಮಗೆ ಭಾಸವಾಗುತ್ತದೆ... ಅಷ್ಟಕ್ಕೂ ಅವರು ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದರೂ ಅದು ಮತ್ತಷ್ಟು ರೀಲ್ಸ್ ಗಳಿಗೆ ಕಾರಣವಾಗುತ್ತಿತ್ತೇ ಹೊರತು, ಅನುಕಂಪಗಳಿಗೆ ದಾರಿಯಾಗುತ್ತಿತ್ತೇ ಹೊರತು ಅವರಿಗೊಂದು ಸಾಂತ್ವನ, ಪರಿಹಾರ ಸಿಕುತ್ತಿರಲಿಲ್ಲ.

ಮನುಷ್ಯ ಇತರ ಜೀವಿಗಳಿಗಿಂತ ಬುದ್ಧಿವಂತ ಅಂತ ಲೆಕ್ಕ. ಹುಟ್ಟುವಾಗಲೇ ಸಾವು ನಿಶ್ಚಿತ ಅಂತ ತಿಳಿದವರು ನಾವು. ಸಾವಿನ ಬಗ್ಗೆ ಬರೆಯುತ್ತೇವೆ, ಓದುತ್ತೇವೆ, ಚರ್ಚಿಸುತ್ತೇವೆ, ಗರುಡ ಪುರಾಣದ ಬಗ್ಗೆ ಮಾತನಾಡುತ್ತೇವೆ, ಭಗವದ್ಗೀತೆಯ ಶ್ಲೋಕಗಳನ್ನು ಉದ್ಧರಿಸುತ್ತೇವೆ, ಕರ್ಮ ಫಲದ ಬಗ್ಗೆ ಉಪನ್ಯಾಸ ನೀಡುತ್ತೇವೆ... ಸಾವು ನಿರಾಕರಿಸಲಾಗದ ಸತ್ಯ, ಮತ್ತು ಅನ್ ಡು ಮಾಡಲಾಗದ ಸಂಭವ ಅಂತವೂ ನಮಗೆ ಗೊತ್ತಿರ್ತದೆ. ಸಾವನ್ನು ನಿಶ್ಚಯಿಸುವ, ಮುಂದೂಡುವ, ತಡೆಯುವ, ನಿರಾಕರಿಸುವ ಶಕ್ತಿಯೂ ನಮಗಿಲ್ಲ.

ಆದರೂ ಸುಳಿವು ಕೊಟ್ಟು ಬರುವ, ಹೇಳದೇ ಕೆಳದೇ ಎತ್ತಿಕೊಂಡೇ ಹೋಗುವ ಸಾವನ್ನು ಸುಲಭವಾಗಿ ಒಪ್ಪಲು, ಅಂಗೀಕರಿಸಲು, ಅರಗಿಸಿಕೊಳ್ಳಲು ಆಗುವುದಿಲ್ಲ. ಅದು ಅಳಿಸಿಹಾಕುವ ವ್ಯಕ್ತಿತ್ವ, ನಿರ್ಮಿಸುವ ಶೂನ್ಯ, ತೋರಿಸಿ ಕೊಡುವ ನಶ್ವರತೆ ಎಲ್ಲವೂ ಒಂದು ವೈರಾಗ್ಯ ಮೂಡಿಸುತ್ತದೆ... ಸ್ಮಶಾನ ವೈರಾಗ್ಯ...

ಆದರೂ...

ಅದು ನಮ್ಮಲ್ಲಿ ವರೆಗೆ ಬರಲಿಕ್ಕಿಲ್ಲ ಎಂಬ ಹುಚ್ಚು ಕಲ್ಪನೆಯೋ, ಅಥವಾ ಮನುಷ್ಯ ಸಹಜವಾದ ಮನಃಸ್ಥಿತಿಯೋ ದೇವರು ನಮಗೆ ಬದುಕುವುದಕ್ಕೆ ತಕ್ಕ ಕೊಟ್ಟರೂ ಇನ್ನೊಬ್ಬರಿಗೆ ವಂಚಿಸುವುದು, ಇನ್ನೊಬ್ಬರ ಅನ್ನಕ್ಕೆ ಕಲ್ಲು ಹಾಕುವುದು, ಇನ್ನೊಬ್ಬರ ಬಗ್ಗೆ ಗಾಸಿಪ್ ಮಾಡುವುದು, ವೈಯಕ್ತಿಕ ಪ್ರತಿಷ್ಠೆಗೆ ರಾಜಕೀಯ ಮಾಡುವುದು, ಅನಾರೋಗ್ಯಕರ ಪೈಪೋಟಿ ನೋಡಿ ಇನ್ನೊಬ್ಬರ ಭವಿಷ್ಯ ಲಗಾಡಿ ತೆಗೆಯುವುದು, ಪ್ರಾಮಾಣಿಕ ಉತ್ಸಾಹಗಳಿಗೆ ಕುತ್ಸಿತ ಮಾತುಗಳ ಮೂಲಕ ತಣ್ಣೀರು ಎರಚುವುದು... ಯಾವುದನ್ನೂ ನಾವು ಬಿಡುವುದಿಲ್ಲ... ನಶ್ವರದ ವೈರಾಗ್ಯ ಸ್ವಾರ್ಥ ಬಂದಾಗ, ಲೋಭ ಕಾಡಿದಾಗ ಈ ಸಾವಿನ ಸತ್ಯ ಮರೆತೇ ಹೋಗುತ್ತದೆ...

ಮತ್ತೆ ಮತ್ತೆ ಕಾಡುವ ಸಾಲುಗಳು ನಿನ್ನೆ ಮೃತಪಟ್ಟ ವ್ಲಾಗರ್ ಅಶ್ವಿನಿ ಶೆಟ್ಟಿ ಅವರು ರೀಲ್ಸೊಂದರಲ್ಲಿ ಹೇಳಿದ ಸಾಲುಗಳು... ನಮ್ಮ ಬದುಕು ಹೇಗಿರಬೇಕೆಂದರೆ ನಾವು ಸತ್ತಾಗ ನಮ್ಮ ವೈರಿಗಳೂ ಅದನ್ನು ನೆನೆಸಿ ಕಣ್ಣೀರು ಹಾಕುವಂತಿರಬೇಕುಅಂತ. ಅವರಿದನ್ನು ತಾವು ಶೀಘ್ರ ಸಾಯುತ್ತೇವೆ ಅಂತ ಖಂಡಿತಾ ಹೇಳಿರಲಿಕ್ಕಿಲ್ಲ, ಆದರೆ ಸಾವು ಅವರನ್ನು ಕರೆದೊಯ್ದ ಬಳಿಕ ಈ ಮಾತಿನ ತೂಕ ಒಂದು ದೊಡ್ಡ ಶೂನ್ಯದ ನಡುವೆಯೂ ತೂಕ ಹೆಚ್ಚಿಸಿಕೊಂಡಿದೆ.

ಹೌದು ಸಾವು ನಿರಾಕರಿಸಲಾಗದ ಸತ್ಯ... ಒಪ್ಪಿದರೂ, ಒಪ್ಪದೇ ಇದ್ದರೂ ಸಹ!!!

-ಕೃಷ್ಣಮೋಹನ ತಲೆಂಗಳ (17.07.2024)

No comments: