ಅಂದು ಇದ್ದ ಹಾಗೆ ಇಂದು ಯಾವುದರಲ್ಲಿ ಅಂದಿನ ಹಾಗೆ ಇದ್ದೇವೆ?!

 



ಸಾಧಾರಣ ಎರಡು ವಾರಗಳ ಹಿಂದೆ ಧಾರಾಕಾರ ಮಳೆಗೆ ಕರಾವಳಿಯಲ್ಲಿ ಸುಮಾರು 10-15 ದಿನ ನಿರಂತರವಾಗಿ ಆಯಾ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ದಿನಾ ರಜೆ ಘೋಷಿಸುತ್ತಿದ್ದಾಗ ಕೇಳಿ ಬರುತ್ತಿದ್ದ ಆರೋಪ ಒಂದು ನಾವು ಸಣ್ಣವರಾಗಿದ್ದಾಗಲೂ ಇಂಥದ್ದೆ ಮಳೆ ಬರ್ತಾ ಇತ್ತು, ಆಗ ನಮಗೆ ಯಾರೂ ರಜೆ ಕೊಡುತ್ತಿರಲಿಲ್ಲ, ಈಗ ಸಣ್ಣ ಮಳೆ ಬಂದರೂ ಸಾಕು ರಜೆ ಕೊಡ್ತಾರೆಅಂತ.

ಈ ಹೇಳಿಕೆ ನಿಜ. ಆದರೆ ನಾವು ಸಣ್ಣವರಾಗಿದ್ದಾಗ (ಅಂದಾಜು ಮೂರು ದಶಕ ಹಾಗೂ ಅದಕ್ಕೂ ಮೊದಲು), ಇದ್ದ ಯಾವ ನಡೆ-ನುಡಿ ಈಗ ಉಳಿದಿದೆ ಅಂತ ದಯವಿಟ್ಟು ಹೇಳಿ. ನನಗೆ ಏನೇನು ನೆನಪಾಗಿದೆಯೋ ಅವನ್ನು ಪಟ್ಟಿ ಮಾಡಿ ಇಲ್ಲಿ ದಾಖಲಿಸಿದ್ದೇನೆ. ನಿಮಗೆ ಇನ್ನೂ ಏನಾದರೂ ಹೇಳುವುದಕ್ಕೆ ನೆನಪಾದರೆ ದಯವಿಟ್ಟು ಸೇರಿಸಿ...

1)      ಮೊದಲನೆಯದಾಗಿ ನಮ್ಮಲ್ಲಿ ಎಷ್ಟು ಮಂದಿ ಸ್ಕೂಲ್ ಬಸ್ಸಿನಲ್ಲಿ (1970-80 ದಶಕದವರು) ಶಾಲೆಗೆ ಹೋಗಿದ್ದೇವೆ? ಸ್ಕೂಲ್ ಬಸ್ ಬಿಡಿ ಸರ್ವೀಸ್ ಬಸ್ಸಿನಲ್ಲಿ ಶಾಲೆಗೆ ಹೋಗಿದ್ದೇವೆ?ಈಗ ಎಷ್ಟು ಮಂದಿ ನಡೆದುಕೊಂಡೇ ಶಾಲೆಗೆ ಹೋಗ್ತಾರೆ? ಎಷ್ಟು ಮಂದಿ ಹೆತ್ತವರು ನಿಮ್ಮ ಮಕ್ಕಳನ್ನು ನಡೆದುಕೊಂಡೇ ಶಾಲೆಗೆ ಹೋಗಲು ಬಿಡ್ತೀರಿ.

2)      ಆಗ ಎಷ್ಟೋ ಮಂದಿ ಶಾಲೆಗೆ ಚಪ್ಪಲಿಯನ್ನೇ ಹಾಗ್ತಾ ಇರಲಿಲ್ಲ. ಚಪ್ಪಲಿ ಹಾಕದೇ ಇರುವುದು ದೊಡ್ಡ ಸಂಗತಿ ಆಗಿರಲಿಲ್ಲ. ಈಗ ಹಾಗೆ ಆಗ್ತದ? ಇಂಥದ್ದೇ ಮಾದರಿಯ ಶೂ ಧರಿಸಬೇಕು ಅಂತ ನಿಯಮ ಇದೆ, ಸಮವಸ್ತ್ರ ಕಡ್ಡಾಯವಿದೆ.

3)      ಆಗ ನಾವು ಕಲಿಯುವುದರಲ್ಲಿ ಚುರುಕು ಇಲ್ಲದಿದ್ದರೆ ನಮ್ಮನ್ನು ಫೇಲ್ ಮಾಡುತ್ತಿದ್ದರು, ಒಂದು ವರ್ಷ ಅದೇ ತರಗತಿಯಲ್ಲಿ ಕುಳಿತು ಪುನಃ ಕಲಿತು ಕಲಿಯುವಿಕೆ ಸುಧಾರಿಸಿಕೊಂಡು ತನ್ನ ತಪ್ಪು ಅರಿತುಕೊಂಡು ಮುಂದೆ ಹೋಗಲು ಅವಕಾಶ ಇತ್ತು. ತಪ್ಪು ಮಾಡಿದಾಗ ಶಿಕ್ಷಕರಿಗೆ ದಂಡಿಸುವ ಹಕ್ಕಿತ್ತು (ಅದು ದುರುಪಯೋಗವೂ ಆಗುತ್ತಿತ್ತು, ಈ ಅವಕಾಶವನ್ನು ಸದ್ಬಳಕೆ ಮಾಡದವರೂ ಇದ್ದಾರೆ ಎಂಬ ಕುರಿತು ವಾದವೇ ಇಲ್ಲ). ಇದರಿಂದ ನಮಗೆ ಶಿಕ್ಷಕರ ಕುರಿತು ಭಕ್ತಿಯ ಜೊತೆ ಭಯವೂ ಇತ್ತು. ಈಗ ಏನಾಗ್ತಿದೆ ಅಂತ ಎಲ್ರಿಗೂ ಗೊತ್ತಿದೆ.

4)      ಪಾಸು-ಫೇಲ್ ಇದ್ದ ಕಾರಣ ಏಪ್ರಿಲ್ 10 ಎಂಬ ತಾರೀಕಿಗೆ ಭಯಂಕರ ಗಂಭೀರ ಮಹತ್ವ ಇತ್ತು. ಇವತ್ತು ಅದೊಂದು ದೊಡ್ಡ ವಿಷಯವೇ ಅಲ್ಲ. ಶಿಕ್ಷಕರು ವಿದ್ಯಾರ್ಥಿಗಳನ್ನು ಏನೂ ಹೇಳುವ ಹಾಗಿಲ್ಲ, ಕೇಳುವ ಹಾಗಿಲ್ಲ. ಹಕ್ಕುಗಳು ವಿದ್ಯಾರ್ಥಿಗಳ ಪರವಾಗಿ ತುಂಬ ಸ್ಟ್ರಾಂಗ್ ಇದೆ. ಆದರೆ ಹೈಸ್ಕೂಲಿಗೆ ಬಂದ ವಿದ್ಯಾರ್ಥಿಗಳ ಪೈಕಿ ತುಂಬ ಮಂದಿಗೆ ತಮ್ಮ ಹೆಸರನ್ನು ತಪ್ಪಿಲ್ಲದೆ ಬರೆಯಲು ಆಗುವುದಿಲ್ಲ, ವ್ಯಾಕರಣ ದೋಷಗಳು ಬರೆದವನಿಗೆ ಬಿಡಿ, ಓದಿದವನಿಗೂ ಗೊತ್ತಾಗುವುದಿಲ್ಲ ಅಂತ ನಾನು ಅರೋಪಿಸಿದರೆ ಅದಕ್ಕೆ ನಿಮ್ಮ ಆಕ್ಷೇಪ ಇದೆಯೇ?

5)      ಆಗ ಸರಳ ಜೀವನ, ಕಡಿಮೆ ಆದಾಯ ಮತ್ತು ಅಲ್ಪತೃಪ್ತಿಯ ಬದುಕು. ಹಿರಿಯ ಸಂಬಂಧಿಗಳ ಹಳೆ ಉಡುಪು ತೊಟ್ಟು ಶಾಲೆಗೆ ಹೋದದ್ದು ಇತ್ತು, ಪ್ಯಾಂಟ್ ಗಿಡ್ಡವಾದರೆ ಅದರ ಕೆಳಗಿನ ಪಟ್ಟಿ ಬಿಡಿಸಿ ಸುಮಾರು ಒಂದಿಂಚು ಉದ್ದ ಮಾಡಿ ಅದೇ ಪ್ಯಾಂಟ್ ಧರಿಸಿ ಶಾಲೆಗೆ ಹೋದದ್ದೂ ಇತ್ತು. ಗ್ರೂಪ್ ಫೋಟೋ ತಕ್ಕೊಂಡ್ರೆ ಐದು ರುಪಾಯಿ ಕೊಡಬೇಕಾಗುತ್ತದೆ ಅಂತ ಗ್ರೂಪ್ ಫೋಟೋವನ್ನು ತಕ್ಕೊಳದೇ ಇದ್ದದ್ದೂ ಇತ್ತು, ಬಳಪ ಗಿಡ್ಡವಾದರೆ ಅದರ ಹಿಂದೆ ಓಟೆ ಸಿಕ್ಕಿಸಿ ಬರೆಯುತ್ತಿದ್ದದ್ದೂ ಉಂಟು.

6)      ಆಗ ಚಪ್ಪಲಿ ಹರಿದರೆ ಹೊಲಿಸುತ್ತಿದ್ದೆವು, ಕೊಡೆಯ ಕಡ್ಡಿ ಮುರಿದರೆ ರಿಪೇರಿ ಮಾಡಿ ಬಳಸುತ್ತಿದ್ದೆವು, ತಲೆ ಮೇಲೆ ನೇತಾಡಿಸುವ ತಂಗೀಸು ಚೀಲ, ಪುಸ್ತಕ ಚಂಡಿ ಆಗುವುದಕ್ಕೆ ತೊಟ್ಟೆ ಇದ್ದರೆ ಅದೇ ದೊಡ್ಡ ಸ್ಕೂಲ್ ಬ್ಯಾಗ್... ಆಗ ಪುಸ್ತಕಗಳಿಗೆ ಬೈಂಡ್ ಪೇಪರೇ ಬೈಂಡ್ ಆಗ್ತಾ ಇದ್ದದ್ದಲ್ಲ, ಪೇಪರುಗಳ ಭಾನುವಾರದ ಪುರವಣಿ, ಶಾರದಾ ಕ್ಯಾಲೆಂಡರಿನ ಪುಟಗಳೇ ಪುಸ್ತಕಗಳಿಗೆ ಬೈಂಡ್ ಆಗ್ತಾ ಇದ್ದವು, ಲೇಬಲ್ ಹಚ್ಚುವುದು ಕಡ್ಡಾಯವೇನೂ ಆಗಿರಲಿಲ್ಲ. ಪ್ರತಿ ವರ್ಷ ಹೊಸ ಹೊಸ ಕಂಪಾಸು ಪೆಟ್ಟಿಗೆ ಕೂಡಾ ತೆಗೆಯುವ ಪ್ರಮೇಯ ಇರ್ತಾ ಇರಲಿಲ್ಲ.

7)      ಕಳೆದ ವರ್ಷದ ನೋಟ್ಸ್ ಪುಸ್ತಕಗಳ ಉಳಿದ ಖಾಲಿ ಪುಟಗಳನ್ನು ಹರಿದು, ಊರಿನ ಪ್ರಿಂಟಿಂಗ್ ಪ್ರೆಸ್ಸಿಗೆ ಕೊಟ್ರೆ ಅದನ್ನು ಅಂಟಿಸಿ, ಬೈಂಡ್ ಹಾಕಿ ರಫ್ ವರ್ಕ್ ಬುಕ್ ಮಾಡಿ ಕೊಡ್ತಾ ಇದ್ರು. ಈಗ ದುಡ್ಡು ಕೊಟ್ರೆ ರಫ್ ವರ್ಕ್ ಪುಸ್ತಕ ಸಿಗ್ತದೆ, ಈಗಿನ ಮಕ್ಕಳಿಗೆ ಆ ರೀತಿ ರಫ್ ವರ್ಕ್ ಪುಸ್ತಕ ಮಾಡ್ಲಿಕೆ ಆಗ್ತದೆ ಅಂತವೇ ಗೊತ್ತಿರ್ಲಿಕಿಲ್ಲ

8)      ಆಗ ಶಾಲೆಯಲ್ಲಿ ಕಸ ಹೆಕ್ಕುವುದು, ಟೀಚರುಗಳ ಬುತ್ತಿ ತೊಳೆಯಲು ನೀರು ತಂದು ಕೊಡುವುದು, ಶೌಚಾಲಯ ಕ್ಲೀನ್ ಮಾಡುವುದು (ತುಂಬ ಶಾಲೆಗಳಲ್ಲಿ ವ್ಯವಸ್ಥಿತ ಶೌಚಾಲಯಗಳೇ ಈಗಿನ ಹಾಗೆ ಇರಲಿಲ್ಲ), ಪೆಟ್ಟು ತಿನ್ನುವುದು, ಬಸ್ಕಿ ತೆಗೆಯುವುದು, ಕ್ಲಾಸಿನ ಹೊರಗೆ ನಿಲ್ಲುವುದೆಲ್ಲ ಭಯಂಕರ ಮಾನವ ಹಕ್ಕುಗಳ ಉಲ್ಲಂಘನೆ ಆಗಿರಲಿಲ್ಲ, ಈಗ...?!

9)      ಆಗ ನಮಗೆ ಶಾಲೆಯ ಬಣ್ಣ, ಶಾಲೆಯ ಕಟ್ಟಡ, ಸಿಬಿಎಸ್ ಇ, ಇಂಟರ್ ನ್ಯಾಶನಲ್ ಸಿಲಬಸ್ ಎಂಥದ್ದೂ ಗೊತ್ತಿರಲಿಲ್ಲ. ಮುಂದೆ ಎಂತ ಕಲಿಯುವುದು ಅಂತ ಕಲ್ಪನೆಯೂ ಇರಲಿಲ್ಲ. ಶಾಲೆಯ ಆಚೆ ಬಂದು ಕುಂಟಲ ಮರದಡಿ ಕುಳಿತು ಪಾಠ ಕೇಳುವುದರಲ್ಲೂ ಖುಷಿಯಿತ್ತು... ಈಗ ಮಂತ್ರಕ್ಕಿಂತ ಉಗುಳಿಗೇ ಮಹತ್ವ ಜಾಸ್ತಿ!

10)   ಇಷ್ಟೆಲ್ಲ ಸರಳವಾಗಿ ಕಲಿತವರೇನೂ ಬದುಕಿನಲ್ಲಿ ನಪಾಸಾಗಲಿಲ್ಲ, ಶೋಚನೀಯ ಪರಿಸ್ಥಿತಿ ತಲುಪಲಿಲ್ಲ. ಹೀಗೆ ಕಲಿತೂ ಬದುಕಿನಲ್ಲಿ ದೊಡ್ಡ ದೊಡ್ಡ ಸ್ಥಾನಗಳಿಗೆ ಹೋದವರಿದ್ದಾರೆ, ಆಗ ಎಸ್ಸೆಸ್ಸೆಲ್ಸಿ ಮಾತ್ರ ಮಾಡಿದರೂ ಈಗಿನ ಪೋಸ್ಟ್ ಗ್ರಾಜ್ಯುವೇಶನ್ ಕಲಿತವರಿಗಿಂತ ಹೆಚ್ಚು ತಿಳಿವಳಿಕೆ ಇರುವವರು ನಮ್ಮ ಕಣ್ಣೆದುರಿಗೇ ಆದ್ದಾರೆ. ಆಗಿನವರ ನಿರೀಕ್ಷೆ, ನೀಡುತ್ತಿದ್ದ ಗೌರವ, ಇರಿಸುತ್ತಿದ್ದ ನಂಬಿಕೆ ಈಗಕ್ಕಿಂತ ಸುಮಾರು 10 ಪಟ್ಟು ಜಾಸ್ತಿ ಅಂದರೆ ಉತ್ಪ್ರೇಕ್ಷೆ ಆಗಲಾರದೇನೋ....

ಆಗ ಇಷ್ಟೆಲ್ಲ ಇಲ್ಲಗಳ ನಡುವೆ ಕಲಿತು ಬಂದ ನಾವು ಇವತ್ತು ಡಿಸಿ ರಜೆ ಕೊಟ್ಟ ಕೂಡಲೇ... ನಮ್ಮ ಕಾಲದಲ್ಲಿ... ಅಂತ ರಾಗ ಎಳೆಯುವುದು ಯಾಕೆ? ಅಗತ್ಯ ಉಂಟ? ಏನಂತೀರಿ?!

-ಕೃಷ್ಣಮೋಹನ ತಲೆಂಗಳ (10.08.2024)

No comments: